Sunday, October 07, 2007

ಸ್ವಾತಿ ತಿರುನಾಳ್ ಮಹಾರಾಜರ ನವರಾತ್ರಿ ಕೃತಿಗಳು




ಇನ್ನು ಕೆಲವೇ ದಿನಗಳಲ್ಲಿ ದಸರ. ನವರಾತ್ರಿ ಸಂಭ್ರಮವೆಂದರೆ ನಮ್ಮೆಲ್ಲರಿಗೂ ನೆನಪಿಗೆ ಬರುವುದು ಮೈಸೂರು ದಸರೆಯ ವಿಜೃಂಬಣೆ. ಅದೇ ರೀತಿ ನೆರೆಯ ಕೇರಳದಲ್ಲಿ ತಿರುವನಂತಪುರದ ರಜಾಶ್ರಯದಲ್ಲಿ ಸಂಭ್ರಮದಿಂದ ನವರಾತ್ರಿ ಆಚರಿಸುವ ಐತಿಹ್ಯ, ಪ್ರತೀತಿ ಇದೆ. ಮಹಾರಾಜ ಸ್ವಾತಿ ತಿರುನಾಳರು ತ್ರಿಮೂರ್ತಿಗಳ ಸಮಕಾಲೀನರು.ಶ್ರೀಯುತರು ಬಹುಭಾಷಾ ಪರಿಣಿತರು ಮತ್ತು ಸಂಗೀತ ವಿದ್ವಾಂಸರು. ನವರಾತ್ರಿಯ ಪ್ರತಿ ಸಂಜೆಯೂ ಅರಮನೆಯ ಉತ್ಸವದಲ್ಲಿ ಒಂದು ಕೃತಿ ಹಾಡಲು ಅನುವಾಗುವಂತೆ ವಿಶಿಷ್ಟ ಕೃತಿಗಳನ್ನು ರಚಿಸಿ ಒಂದು ಪರಂಪರೆಗೆ ಬುನಾದಿ ಹಾಡಿದರು.ಈ ನವರಾತ್ರಿ ಕೃತಿಗಳ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ.

ಕಂಬ ರಾಮಾಯಣ ಬರೆದ ತಮಿಳು ಕವಿ ಕಂಬರು, ಪದ್ಮನಾಭಪುರದಲ್ಲಿನ ಸರಸ್ವತಿ ದೇವಿಯನ್ನು ಅರಾಧಿಸುತ್ತಿದ್ದರಂತೆ. ಅವರು ಅನಾರೋಗ್ಯದಿಂದ ಬಳಲುತ್ತಿದಾಗ, ಚೇರ ದೊರೆಯ ಬಳಿ ಬಂದು, ಪದ್ಮನಾಭಪುರದ ದೇವಳದಲ್ಲಿ ಪ್ರತಿ ಸಂವತ್ಸರವೂ ನವರಾತ್ರಿ ವಿಷೇಶ ಪೂಜೆ ನಡೆಸಿಕೊಡಬೇಕಾಗಿ ಮೊರೆ ಹೊಕ್ಕರಂತೆ. ಅಂದಿನಿಂದ ಪ್ರತಿ ವರ್ಷವೂ ನವರಾತ್ರಿ ಉತ್ಸವ ನಡೆಯುತ್ತಿದೆ. ಮಹಾರಾಜಾ ಸ್ವಾತಿ ತಿರುನಾಳರ ಕಾಲದಲ್ಲಿ ರಾಜಧಾನಿಯು ಪದ್ಮನಾಭಪುರದಿಂದ ತಿರುವನಂತಪುರಕ್ಕೆ ವರ್ಗವಾಯಿತು. ಕವಿ ಕಂಬರಿಗೆ ಕೊಟ್ಟಮಾತು ತಪ್ಪದಂತೆ ನವರಾತ್ರಿ ಉತ್ಸವ ಸಮಯದಲ್ಲಿ ಪದ್ಮನಾಭಪುರದ ಮೂಲವಿಗ್ರಹವನ್ನು ತಿರುವನಂತಪುರಕ್ಕೆ ಸಂಭ್ರಮದ ಮೆರವಣಿಗೆಯಲ್ಲಿ ಕರೆತಂದು ನವರಾತ್ರಿ ಉತ್ಸವ ನಡೆಸಲಾಗುತ್ತದೆ. ಮೂಲಮುರ್ತಿಯನ್ನು ಪದ್ಮನಾಭಪುರದಿಂದ ತರುವುದರಿಂದ ಅಲ್ಲಿ ಪ್ರಾತಿನಿಧಿಕ ದೀಪವನ್ನು ಇರಿಸಲಾಗುತ್ತದೆ.

೧. ದೇವಿ ಜಗತ್ ಜನನಿ - ಶಂಕರಾಭರಣಂ - ಆದಿತಾಳ
೨. ಪಾಹಿಮಾಂ ಶ್ರೀ ವಾಗೀಶ್ವರಿ - ಕಲ್ಯಾಣಿ - ಆದಿತಾಳ
೩. ದೇವಿ ಪಾವನೆ - ಸಾವೇರಿ - ಆದಿತಾಳ
೪. ಭಾರತಿ ಮಾಮವ - ತೋಡಿ - ಆದಿತಾಳ
೫. ಜನನಿ ಮಮವಮೇಯೆ - ಭೈರವಿ - ಮಿಶ್ರ ಛಾಪು ತಾಳ
೬. ಸರೋರುಹಾಸನ ಜಾಯೆ - ಪಂತುವಾರಳಿ - ಆದಿತಾಳ
೭. ಜನನಿ ಪಾಹಿ - ಶುದ್ಧಸಾವೇರಿ - ಮಿಶ್ರ ಛಾಪು ತಾಳ
೮. ಪಾಹಿ ಜನನಿ ಸಂತಾರಂ - ನಟ್ಟಕುರಂಜಿ - ಮಿಶ್ರ ಛಾಪು ತಾಳ
೯. ಪಾಹಿ ಪರ್ವತ ನಂದಿನಿ - ಆರಭಿ - ಆದಿತಾಳ

ದೀಕ್ಷಿತರು ತಮ್ಮ ನವಾವರಣ ಕೃತಿಗಳಲ್ಲಿ ಎಂಟು ವಿಭಕ್ತಿ ಪ್ರತ್ಯಯಗಳನ್ನು ಉಪಯೋಗಿಸಿದರೆ,ತಿರುನಾಳರು ನವರಾತ್ರಿ ಕೃತಿಗಳಲ್ಲಿ ಸಂಭೋದನಾ ವಿಭಕ್ತಿ ಮತ್ತು ಪ್ರಥಮಾ ವಿಭಕ್ತಿಯನ್ನು ಮಾತ್ರ ಬಳಸಿರುತ್ತಾರೆ.ಮೊದಲ ಆರು ಕೃತಿಗಳು ಚೌಕ ಕಾಲದವುಗಳಾಗಿದ್ದು, ಉಳಿದ ಮೂರು ಮಧ್ಯಮ ಗತಿಯನ್ನು ಅನುಸರಿಸುತ್ತವೆ.ಒಂಬತ್ತು ದಿನಗಳು ನಡೆಯುವ ದೇವಿ ಪೂಜೆಯಲ್ಲಿ ಮೊದಲ ಮೂರು ದಿನ ದೇವಿ ಸರಸ್ವತಿ ಸ್ವರೂಪಿಣಿಯಾದರೆ, ತದನಂತರ ಮೂರು ದಿನಗಳು ಲಕ್ಷ್ಮಿ ಆರಾಧನೆ. ಕೊನೆಯ ಮೂರು ದಿನ ದುರ್ಗಾವಂದನೆ. ಈ ಕೃತಿಗಳನ್ನು ದೇವಿಗೆ ಅರ್ಪಿಸಲಾಗುತ್ತದೆ. ಪೂರ್ವದಲ್ಲಿ ಮುಲ್ಲಾಮುಡು ಭಾಗವತರ ವಂಶಸ್ತರು ಮಾತ್ರ ಈ ಹಾಡುಗಳನ್ನು ಮೂಲ ಉತ್ಸವದಲ್ಲಿ ಹಾಡುತಿದ್ದರು. ಮುಖ್ಯ ಸಂಗೀತ ವಿದ್ವಾಂಸರು ಮುಂದಾಳತ್ವ ವಹಿಸಿದರೂ, ಹಲವಾರು ವಿದ್ವಾಂಸರು ರಾಗಾಲಾಪನೆ, ನೆರವಲ್, ಕಲ್ಪನಾಸ್ವರಗಳು ಹೇಗೆ ಮುಂದುವರಿಸುವ ವಾಡಿಕೆ ಇದೆ. ತಿರುನಾಳರ ಕೃತಿಗಳು ಈ ದಿನ ಜನ ಮನದಲ್ಲಿ ನೆಲೆಸಬೇಕಾದರೆ ಮುಲ್ಲಮುಡು ಭಾಗವತರ ಕೊಡುಗೆ ಅತ್ಯಮೂಲ್ಯ. ಕಾಲಕ್ರಮೇಣ ಇತರ ಘನವಿದ್ವಾಂಸರನ್ನು ಆಹ್ವಾನಿಸಿ ನವರಾತ್ರಿ ಕೃತಿಗಳನ್ನು ಹಾಡುವ ಪ್ರತೀತಿ ಪ್ರಾರಂಭವಾಯಿತು. ಸಂಗೀತ ಕಚೇರಿಯು ಸಂಜೆ ೬.೦೦ ರಿಂದ ೮.೩೦ ಕಾಲದಲ್ಲಿ ನಡೆದು, ವಿಷೇಶವೇನೆಂದರೆ ಅಂತ್ಯದಲ್ಲಿ ಕರತಾಡನವಿರುವಿದಿಲ್ಲ.ದೇವಿಗೆ ಅರ್ಪಣೆಯೆಂಬ ಭಾವದಲ್ಲಿ ಹಾಡುವುದರಿಂದ ಇತರೆ ಗೋಷ್ಠಿಗಳ ಹಾಗೆ ಕರತಾಡನ ಕೂಡದು.



---
http://www.sangeethapriya.org/~gvr/navarathri-swathithirunal/
---

No comments: