Saturday, July 31, 2010

ಅಪರಿಗ್ರಹ


ನಾಡು ಕಂಡಂಥ ಅತ್ಯಂತ ಉನ್ನತ ಶ್ರೇಣಿಯ ಚಿತ್ರಕಾರ, ಶಿಲ್ಪಿ, ಕಲಾ ತಪಸ್ವಿ ಶ್ರೀಯುತ ಕೆ.ವೆಂಕಟ್ಟಪ್ಪನವರು. ಇಲ್ಲಿ ’ಕಲಾ ತಪಸ್ವಿ’ ಎಂಬ ಪದಪ್ರಯೋಗ ಅತಿಶಯೋಕ್ತಿಯಾಗಲಿ, cliche ಯಾಗಲಿ ಅಲ್ಲದೆ ಸಂಧಬೋಚಿತವಾಗಿದೆ. ತಮ್ಮ ಜೀವನವನ್ನು ಕಲೆಗಾಗಿಯೇ ಮುಣುಪಾಗಿಟ್ಟು ಭೀಶ್ಮ ಪ್ರತಿಙ್ಜ್ನೆಯಂತೆ ಜೀವನ್ದುದ್ದಕ್ಕೂ ಅಖಂಡ ಬ್ರಹ್ಮಚರ್ಯೆ ಮತ್ತು ಅಪರಿಗ್ರಹದ ವ್ರತವನ್ನು ಸಾಧಿಸಿದ ಧೀಮಂತರು. ೧೯೧೩ ರಲ್ಲಿ ಅವರು ಹಿಮಾಲಯದ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಅಪರಿಗ್ರಹದ ದೀಕ್ಷೆ ಸ್ವೀಕರಿಸಿದರು. ಯಾರಿಂದಲು ಯಾವುದೇ ರೀತಿಯ ಸಹಾಯವಾಗಲಿ, ಉಡುಗೊರೆಯಾಗಲಿ ಏನನ್ನೂ ಸ್ವೀಕರಿಸದ ವ್ರತವದಾಗಿತ್ತು.

೧೯೪೨ ರಲ್ಲಿ ದಿವಾನ್ ಬಹಾದ್ದೂರ್ ಪಿ. ರಾಘವೇಂದ್ರ ರಾಯರ ಮನೆಗೆ ಹೋಗಿದ್ದರು. ದಿವಾನರು ವೆಂಕಟ್ಟಪ್ಪನವರಿಗೆ ಬೀಳ್ಕೊಡುವಾಗ ತಾಂಬೂಲಾದಿಗಳನ್ನು ಸ್ವೀಕರಿಸಲು ಹೇಳಿದರು. ಆದರೆ ವೆಂಕಟಪ್ಪನವರು ಅಪರಿಗ್ರಹ ವ್ರತದಿಂದ ತಾಂಬೂಲವನ್ನೂ ಸ್ವೀಕರಿಸಲಿಲ್ಲ. ಕೊನೆಗೆ ದಿವಾನರ ಒತ್ತಾಯದ ಮೇರೆಗೆ, ಬೇರೆ ಇನ್ನಾರಿಗಾದರೂ ವೆಂಕಟಪ್ಪನವರು ತಾಂಬೂಲವನ್ನು ದಾನಮಾಡಲು ಅನುವು ಮಾಡಿಕೊಟ್ಟರೆ ತೆಗೆದುಕೊಳ್ಳುವುದಾಗಿ ಹೇಳಿದರು. ( ಶ್ರೀಯುತರ ದಿನಚರಿಯ ೧೭ ಸೆಪ್ಟೆಂಬರ್ ೧೯೪೨ ದಾಖಲಿಸಲಾಗಿದೆ.)

ಅಂತೆಯೆ ೧೯೫೦ ವಿನಾಯಕ ಚತುರ್ಥಿಗೆ ವೆಂಕಟ್ಟಪ್ಪನವರ ತಂಗಿ ಮೋದಕಗಳನ್ನು ತಂದುಕೊಡಲು ಅವರು ರೂಪಾಯಿ ದಕ್ಷಿಣೆ ಕೊಟ್ಟೆ ಅದನ್ನು ಸ್ವೀಕರಿಸಿದರು. ಮೋದಕವು ಹಾಗಿರಲಿ, ಒಮ್ಮೆ ವೆಂಕಟಪ್ಪವನರಿಗೆ ರುಚಿಸುವ ಹೇರಳೇಕಾಯಿ ಉಪ್ಪಿನಕಾಯನ್ನು ಅವರ ತಂಗಿ ತಂದುಕೊಟ್ಟರೆ, ಒಂದು ಶೀಶೆ ಉಪ್ಪಿನಕಾಯಿಗೆ ಮುಕ್ಕಾಲು ಸೇರು ಗೋಧಿಯನ್ನು ಕೊಟ್ಟು ತೆಗೆದುಕೊಂಡರು. ( ದಿನಚರಿ ದಾಖಲು: ೨೩ ಅಕ್ಟೋಬರ್ ೧೯೫೦)

ಈ ತಲೆಮಾರಿನ ಕಲಾವಿದರಿಗೆ (ಯಾರಿಗೆ ಆಗಲಿ) ಈ ಮಟ್ಟದ ನಿಸ್ಪೃಹತೆ ಇರಲು ಸಾಧ್ಯವೇ?