Thursday, April 28, 2011

ಪ್ರಧಾನಿಗೊಂದು ಕಿವಿಮಾತು.


ಮಹಾಭಾರತದಲ್ಲಿ ಗುರು ಶುಕ್ರಾಚಾರ್ಯರು ವೃಷಪರ್ವನಿಗೆ ಉಪದೇಶಿಸುವ ಸಂದರ್ಭ. ಗುರುಗಳು ಹೀಗೆನ್ನುತ್ತಾರೆ -- " ರಾಜನ್! ಅಧರ್ಮವನಾಚರಿಸಿದರೆ ಅದು ಹಸುವಿನಂತೆ ಕೂಡಲೆ ಫಲವನ್ನೆಯುವುದಿಲ್ಲ. ಅದು ಮೆಲ್ಲನೆ ತಿರುಗಿ, ಅಧರ್ಮಿಯ ಬುಡವನ್ನೇ ಕದಿದುಹಾಕುತ್ತದೆ.

ನಾಧರ್ಮಶ್ಚರಿತೋ ರಾಜನ್ ಸದ್ಯಃ ಫಲತಿ ಗೌರಿವ |
ಶನೈರಾವರ್ತ್ಯಮಾನೋ ಹಿ ಕರ್ತುರ್ಮೂಲಾನಿ ಕೃತಂತಿ ||
-- ಮಹಾಭಾರತ, ಆದಿ, ೮೦-೨

ಪ್ರಸ್ತುತ ರಾಷ್ಟ್ರೀಯ ರಾಜಕಾರಣದಲ್ಲಿ ಹಗರಣಗಳದ್ದೆ ಕಾರುಬಾರು. ಲಕ್ಷಕೋಟಿ ಹಗರಣಗಳು ಸರ್ವೇಸಾಮಾನ್ಯವಾಗಿವೆ. ೨ಜಿ ಹಗರಣ, ಕಾಮನ್ ವೆಲ್ಥ್ ಹಗರಣ (ಸಮೂಹ ಐಶ್ವರ್ಯ!), "ಆದರ್ಶ" ಹಗರಣ, ಹೀಗೆ ಒಂದೇ, ಎರಡೇ... ರಾಜನಾದವನು ಸ್ವತಃ ಸದ್ಚಾರಿತ್ರನು, ಆದರೆ ಮಂತ್ರಿ ವರ್ಗದಲ್ಲಿ ಭ್ರಷ್ಟರು ಎಂದು ಸಮಜಾಯಿಶಿ ಹೇಳಿ , ಭ್ರಷ್ಟ್ರಾಚಾರದ ವಿರುದ್ದ ಭುಗಿಲೆದ್ದ ಬೆಂಕಿಯನ್ನು ತಣ್ಣಗಾಗಿಸಳು ಸಾಧ್ಯವಿಲ್ಲ. ಅದು ನಾಯಕ ಲಕ್ಷಣವಲ್ಲ. ರಾಜನೀತಿಯ ಬಗ್ಗೆ ರಾಮಾಯಣ ಹೀಗೆನ್ನುತ್ತದೆ --

ರಾಜಾ ಧರ್ಮಶ್ಚ ಕಾಮಶ್ಚ ದ್ರವ್ಯಾಣಾಂ ಚೋತ್ತಮೋ ನಿಧಿಃ|
ಧರ್ಮ ಶುಭಂ ವಾ ಪಾಪಂ ವಾ ರಾಜಮೂಲಂ ಪ್ರವರ್ತತೇ ||
- ರಾಮಾಯಣ, ಅರಣ್ಯ, ೫೦-೧೦

ರಾಜನೇ ಧರ್ಮಕಾಮಗಳಿಗೆ ಪ್ರವರ್ತಕ, ಅವನೇ ಅರ್ಥಕ್ಕೆ ನಿಧಿ. ಧರ್ಮವಾಗಲಿ, ಒಳ್ಳೆಯದಾಗಲಿ, ಕೆಟ್ಟದಾಗಲಿ - ರಾಜನ ಪ್ರೇರಣೆಯಿಂದ ನಡೆಯುತ್ತದೆ.

ರಾಜಮೂಲವು ಇಂತಿರುವಾಗ ಸುತ್ತ ಹರಡಿರುವ ಭ್ರಷ್ಟ ಸಂತತಿಯನ್ನು ತಮ್ಮದೆಂದು ಸ್ವೀಕರಿಸಿ, ಅದನ್ನು ಬುಡಸಮೇತ ಕಿತ್ತೊಗೆಯುವ ನಿಟ್ಟಿನಲ್ಲಿ ರಾಜಸಂಕಲ್ಪವಾಗಲಿ.