Tuesday, December 28, 2010

ರಾಗರಸಧಾರ


ಗಾನವಾರಿಧಿ ವಿದ್ವಾನ್ ಎಸ್.ಶಂಕರ್ ಅವರು ಅರವತ್ತು ವಸಂತಗಳು ಪೂರೈಸಿದ ಸಂದರ್ಭ, ಅರವತ್ತು ರಾಗಗಳನ್ನು ಒಳಗೊಂಡ ದೇವಿ ಕೃತಿಗಳ ರಾಗಮಾಲಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಪರಿಕಲ್ಪನೆ, ಸಂಗೀತ, ನಿರ್ದೇಶನ ಮತ್ತು ಗಾಯನ ವಿದ್ವಾನ್.ಎಸ್.ಶಂಕರ್ ಅವರದಾದರೆ, ವಾಗ್ಗೇಯಕಾರರಾಗಿ ಅಷ್ಟಾವಧಾನಿ ಆರ್. ಶಂಕರ್ ಉತ್ತಮ ಕೃತರತ್ನವನ್ನು ಸಹೃದಯರಿಗೆ ದಯಪಾಲಿಸಿದ್ದಾರೆ.

Monday, November 29, 2010

ರಾಮಾಯಣದಲ್ಲಿ ರಾಜನೀತಿ

ಶ್ರೀ ರಾಮಚಂದ್ರನು ರಾಮಾಯಣದ ಅಯೋಧ್ಯಾಕಾಂಡದಲ್ಲಿ ಭರತನಿಗೆ ಉಪದೇಶಿಸುತ್ತಾ ಹದಿನಾಲ್ಕು ರಾಜದೋಶಗಳ ಬಗ್ಗೆ ಹೀಗೆಂದಿದ್ದಾನೆ:

ನಾಸ್ತಿಕ್ಯಮನೃತಂ ಕ್ರೋಧಂ ಪ್ರಮಾದಂ ದೀರ್ಘಸೂತ್ರತಾಂ|
ಅದರ್ಶನಂ ಙ್ನಾನವತಾಮಾಲಸ್ಯಂ ಪಂಚವೃತ್ತಿತಾಂ||
ಏಕಚಿತನಮಥಾರ್ನಾಮನರ್ಥಙ್ನೈಶ್ಚ ಮಂತ್ರಣಂ|
ನಿಸ್ಚಿತಾನಾಮನಾರಂಭಂ ಮಂತ್ರಸ್ಯಾಪರಿರಕ್ಷಣಂ||
ಮಂಗಲಸ್ಯಾಪ್ರಯೋಗಂ ಚ ಪ್ರತ್ಯುತ್ಥಾನಂ ಚ ಸರ್ವತ:|
ಕಚ್ಚಿತ್ತ್ವಂ ವರ್ಜಯಸ್ಯೇತಾನ್ ರಾಜದೋಷಾಂಶ್ಚತುರ್ದಶ ||
ರಾಮಾಯಣ, ಅಯೋಧ್ಯಾ ೧೦೦ - ೬೫,೬೬,೬೭

ನಾಸ್ತಿಕತೆ, ಸುಳ್ಳು, ಸಿಟ್ಟು, ಅನವಧಾನ, ನಿಧಾನವಾಗಿ ತಡೆದು ಕೆಲಸ ಮಾಡುವುದು, ಪ್ರಾಙ್ನರಾದ ಸಜ್ಜನರೊಡನೆ ಸೇರದಿರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯಚಾಪಲ್ಯದಲ್ಲಿ ಮುಳುಗುವುದು, ಯಾರೊಡನೆಯೂ ಸಮಾಲೋಚನೆ ನಡೆಸದೆ ಏಕಪಕ್ಷೀಯವಾದ ನಿರ್ಧಾರ, ಅನುಭವವಿಲ್ಲದವರೊಡನೆ ಮಂತ್ರಾಲೋಚನೆ, ನಿಶ್ಚಯಿಸಿದ ಕಾರ್ಯವನ್ನು ಆರಂಭಿಸದಿರುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿ ಉಳಿಸಿಕೊಳ್ಳದಿರುವುದು, ಮಂಗಳಕರ ಶುಭಕಾರ್ಯವನ್ನು ಮಾಡದಿರುವುದು, ಎಲ್ಲ ಶತೃಗಳ ಮೇಲೂ ಏಕಕಾಲಕ್ಕೆ ಯುದ್ಧಾರಂಭ -- ಈ ಹದಿನಾಲ್ಕು ದೋಷಗಳಿಗೆ ಅವಕಾಶ ಕೊಡಬೇಡವೆಂದು ಭರತನಿಗೆ ಉಪದೇಶಿಸಿದನು.

ಶ್ರೀರಾಮನ ಹೆಸರು ಹೇಳಿಕೊಂಡು ಅಧಿಕಾರಗಿಟ್ಟಿಸಿದ ಇಂದಿನ ಕಿಶ್ಕಿಂದಾ ಪ್ರದೇಶದ ಸರ್ಕಾರ, ರಾಮ ಭರತನಿಗೆ ಮಾಡಬೇಡ ಎಂದು ಆದೇಶಿದ ಎಲ್ಲ ೧೪ ರಾಜದೋಷಗಳನ್ನೂ ಚಾಚೂ ತಪ್ಪದೆ ಮಾಡಿತೋರಿಸಿದೆ. ರಾಮನೇ ನಾಚುವ ರೀತಿ ಸೃಜನಾತ್ಮಕವಾಗಿ, ರಾಮನೂ ಯೋಚಿಸಿರದ ಹತ್ತು ಹಲವು ಹೊಸ ದೋಷಗಳನ್ನು ಹೊದ್ದು ಮೆರೆದಿದೆ. ಸ್ವಯಂ ಸೇವಕ ಸಂಘ ಅಂದರೆ ನಮ್ಮ "ಸೇವೆ" ಸ್ವಯಂ ನಾವೇ ಮಾಡಿಕೊಳ್ಳುವುದು ಎಂಬಷ್ಟು ಹೀನಾಯ ಸ್ಥಿತಿ ತಲುಪಿರುವುದು ನಿಜಕ್ಕೂ ವಿಶಾದನೀಯ. ಇನ್ನು ಮಂತ್ರಿಮಂಡಲದಲ್ಲಂತೂ ಅರಿಷ್ಡ್ವರ್ಗಂಗಳನು ಗೆದ್ದ ಅತಿರಥ ಮಹಾರಥರೆ ಇದ್ದಾರೆ. ನಾವು ಆರಿಸಿ ಕಳುಹಿಸಿದ ಈ ಜನಪ್ರತಿನಿಧಿಗಳಿಗೆ ಕಾಮ, ಕ್ರೋಧ, ಮದ, ಲೋಭ, ಮೋಹ, ಮತ್ಸರಗಳು ಯಾವವೂ ತಿಳಿಯದು. ಕಾಮವನ್ನು ಗೆದ್ದ ರೇಣುಕಾಚಾರ್ಯ - ಹಾಲಪ್ಪನಂತವರು, ಕ್ರೋಧವನ್ನು ಗೆದ್ದ ಬಚ್ಚೆಗೌಡರು, ಮದವನ್ನು ಗೆದ್ದು - ರಾಜ್ಯಪಾಲರು, ಲೋಕಾಯುಕ್ತರನ್ನು ಒಮ್ಮೆಲೆ ಅತಿಯಾಗಿ ಗೌರವಿಸುವ ಮುಖ್ಯಮಂತ್ರಿಗಳು, ಲೋಭ ಗೆದ್ದ ಶೋಭ, ಮೋಹವೇ ಅರಿಯದ, ಪುತ್ರ ವ್ಯಾಮೋಹ ಅರಿಯದ ಕಟ್ಟಾ ಮತ್ತು ಮುಖ್ಯಮಂತ್ರಿಗಳು, ಮತ್ಸರದ ಕಿಡಿಯೂ ಸುಳಿಯದ ರೆಡ್ಡಿ ಸೋದರರು -- ಇನ್ನೂ ಹೀಗೆ ಹತ್ತು ಹಲವು ತೋಜೋ ಮಣಿಗಳಿಂದ ಕಂಗೊಳಿಸುವ ಕಮಲ ಸಾಂರಾಜ್ಯವನ್ನು ಚುನಾಯಿಸಿ ಕಳುಹಿಸಿದ ನಾವು ಗಳು ಎಷ್ಟು ಧನ್ಯರು ಎಂದು ನೆನೆದರೆ ಹೇಳಿಕೊಳ್ಳಲಾರದ ಹೆಮ್ಮೆ ಎನಿಸುತ್ತದೆ. ಒಂದು ವ್ಯವಸ್ಥೆಯಲ್ಲೇ ವಿಶ್ವಾಸ ಕಳೆದುಕೊಳ್ಳುವಷ್ಟು ಪ್ರಮಾಣದಲ್ಲಿ ಹಗರಣಗಳು ನಡೆದಿವೆ. ರಾಮನ ಪಕ್ಷಕ್ಕೆ ಮತ ಹಾಕಿದ ಮತದಾರನ ಮುಖಭಂಗವಾಗಿದೆ.ಸುತ್ತಲೂ ನಡೆಯುತ್ತಿರುವ ಭ್ರಷ್ಟಾಚಾರದ ಚಕ್ರವ್ಯೂಹದಲ್ಲಿ ಸಿಲುಕಿ ದನಿಗಾಣದೆ ಏಳು ಸುತ್ತಿನ ಕೋಟೆಯಲ್ಲಿ ಅಸಹಾಯಕನಾಗಿ ಶ್ರೀಸಾಮಾನ್ಯ ಅವಿತು ಕುಳಿತಿದ್ದಾನೆ. ಎಂದು ಈ ಸುಪ್ತ ಜ್ವಾಲಾಮುಖಿ ಸಿಡಿದು ನಿಲ್ಲುವುದೂ ಆ ದಿನ ನಾನು - ತಾನು , ರಾಮ - ರಹೀಮ ಯಾರೊಬ್ಬರನೂ ನೋಡದೆ ಎಲ್ಲರನ್ನೂ ಆಹುತಿ ತೆಗೆದು ಕೊಳ್ಳುತ್ತದೆ.

ಸೂ: ನಾನು ಈ ಬ್ಲಾಗ್ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆದಿರುವುದು ಅತ್ಯಂತ ಕಡಿಮೆ. ಆದರೆ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯ"ಮಾನ"ಗಳ ಬಗ್ಗೆ ಬಹುವಾಗಿ ನೊಂದು ರಾಮನ ಹೆಸರು ಹೇಳಿ ಇನ್ನಾದರೂ ಧರ್ಮವನ್ನು ರಕ್ಷಿಸು ಎಂದು ಪ್ರಾಥಿಸಿ ಈ ಸಾಲುಗಳನ್ನು ಇಲ್ಲಿ ಪೋಸ್ಟಿಸಿದೆ.

Sunday, October 31, 2010

ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ

ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ ||

Sunday, September 26, 2010

ರಾಶೊಮಾನ್ ಮತ್ತಿತರ ಕಥೆಗಳು
ನ್ಯಾಯಾಧೀಶರು ಮರಕಡಿಯುವವನನ್ನು ಪ್ರಶ್ನಿಸಿದಾಗ ಕೊಟ್ಟ ಹೇಳಿಕೆ:

ಹೌದು ಮಹಾಸ್ವಾಮಿ. ಖಂಡಿತವಾಗಿಯೂ ನಾನೆ ಮೃತದೇಹವನ್ನು ನೋಡಿದ್ದು. ಬೆಳಗಿನ ಸಮಯ ಎಂದಿನಂತೆ ಮರಕಡಿಯಲು ಹೋದಾಗ ಮೃತದೇಹವನ್ನು ಆ ಗಿರಿ ಕಂದರದ ತೊಪ್ಪಲ್ಲಲ್ಲಿ, ಒಂದು ಪೊದೆಯಲ್ಲಿ ನೋಡಿದೆ. ಸ್ಥಳ ಅಂತೀರಾ? ಯಾಮಶಿನ ರಸ್ತೆಯಿಂದ ಸುಮಾರು ೧೫೦ ಅಂಗುಲ ದೂರವಿದ್ದಿರಬಹುದು. ದಾರಿಗೆ ತುಸು ಪಕ್ಕದಲ್ಲಿನ ಬಿದಿರು ಪೊದೆ ಅದು.

ಹೆಣವು ನೀಲಿ ನಿಲುವಂಗಿ ಕಿಮೋನೊ ಮತ್ತು ಕ್ಯೋಟೊ ಶೈಲಿಯ ಮುದುರಿದ ತೋಪಿಯನ್ನುಟ್ಟು ಅಂಗಾತ ಮಲಗಿತ್ತು. ಒಂದೇ ಕತ್ತಿಯ ಸೀಳು ಎದೆಯನ್ನು ಸೀಳಿ ಘಾತಿಸಿತ್ತು. ಅತ್ತಿತ್ತ ಬಿದ್ದಿದ್ದ ಬಿದುರಿನ ತರುಗೆಲೆಗಳು ರಕ್ತಸಿಕ್ತವಾಗಿ ಕೆಂಪನೆ ಹುವಾಡಿಸಿತ್ತು. ಇಲ್ಲ, ರಕ್ತ ಇನ್ನು ಸುರಿಯುತ್ತಿರಲಿಲ್ಲ. ಗಾಯ ಆರಿದ್ದಿರಬೇಕು. ನಾನು ಬಂದದ್ದನು ಗಮನಿಸದೆ ನೊಣ ಒಂದು ಅಲ್ಲೆ ಅಂಟಿ ಕುಳಿತಿತ್ತು. ಅಲ್ಲಿ ಖಡ್ಗ ಇತ್ಯಾದಿ ಎನಾದ್ರು ಇತ್ತು ಅಂತೀರ? ಎಲ್ಲಿ ಆ ರೀತಿ ಯಾವುದೂ ಇರಲಿಲ್ಲ. ಇಲ್ಲ ಮತ್ತಿನ್ನೇನು ಇರಲಿಲ್ಲ ಮಹಾಸ್ವಾಮಿ. ಅಲ್ಲಿ ಮರದ ಬುಡದಲ್ಲಿ ಒಂದು ಹಗ್ಗವನ್ನು ಮಾತ್ರ ಗಮನಿಸಿದೆ. ಮತ್ತೆ.... ಹಗ್ಗದವನ್ನು ಬಿಟ್ಟರೆ ಅಲ್ಲಿ ಒಂದು ಬಾಚಣಿಗೆ ನೋಡಿದೆ. ಅಷ್ಟೆ ಅಲ್ಲಿದ್ದದ್ದು. ಬಹುಶಃ ಕೊಲೆಯಾಗುವಿದಕ್ಕೆ ಮುಂಚೆ ಹೊರಾಡಿ ಒದ್ದಾಡಿರ ಬೇಕು, ಯಾಕೆಂದ್ರೆ ಅಲ್ಲಿದ್ದ ಗರಿಕೆ-ಹುಲ್ಲುಗಳು, ಕೆಳಗೆ ಬಿದ್ದ ಬಿದುರಿನ ಎಲೆಗಳು ಎಲ್ಲವೂ ಚದುರಿದ್ದವು.

"ಹತ್ತಿರದಲ್ಲಿ ಕುದುರೇ ಏನಾದ್ರು?"
ಇಲ್ಲ ಸ್ವಾಮಿ. ಮನುಷ್ಯನು ಹೋಗುವುದೇ ಕಷ್ಟ ಅಲ್ಲಿ. ಇನ್ನು ಕುದುರೆ ಎಲ್ಲಿಂದ ಬರಬೇಕು.

ನ್ಯಾಯಾಧೀಶರಿಗೆ ಬೌದ್ಧ ಪರಿವ್ರಾಜಕನು ಕೊಟ್ಟ ಹೇಳಿಕೆ:

ಹೊತ್ತು? ನೆನ್ನೆ ಮಧ್ಯಾಹ್ನದ ವೇಳೆ ಸ್ವಾಮಿ. ಆ ನತದೃಶ್ಟ ಸೇಕಿಯಾಮದಿಂದ ಯಾಮಶಿನ ಹಾದಿ ಹಿಡಿದ್ದಿದ್ದ. ಸೇಕಿಯಾಮ ಕಡೆಗೆ ಕುದುರೆ ಮೇಲೆ ಸವಾರಿಮಾಡುತ್ತ, ಒಬ್ಬಳು ಹೆಂಗಸಿನ ಜೊತೆ ಸಾಗಿದ್ದ. ಈಗ ಅವಳು ಅವನ ಪತ್ನಿ ಎಂಬುದು ತಿಳಿದಿದೆ. ಸೆರಗು ಅಡ್ಡ ಹಾಯ್ದದ್ದರಿಂದ ಮುಖ ಕಾಣಿಸುತ್ತಿರಲ್ಲಿಲ್ಲ. ನನಗೆ ಅವಳ ಬಟ್ಟೆಯ ರಂಗೊಂದೆ ಕಂಡದ್ದು -- ಕಂದು ಬಣ್ಣದ ನಿಲುವಂಗಿ. ನೀಳವಾದ ಕೇಸರ ಗಳುಳ್ಳ ಅಶ್ವಾರೂಢಳಗಿದ್ದಳು. ಆ ಮಹಿಳೆಯ ಎತ್ತರ? ಒಹ್! ಸುಮಾರು ನಾಲ್ಕು ಅಡಿ ಐದು ಅಂಗುಲ. ನಾನು ಬೌದ್ಧ ಭಿಕ್ಷುವಾಗಿರುವುದರಿಂದ ಅವಳ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಆ ಮನುಷ್ಯ ಖಡ್ಗಧರಿಸಿ ಸಶಸ್ತ್ರನಾಗಿರದೆ ಬಿಲ್ಲು ಬಾಣಗಳನ್ನು ಸಹ ಹೊತ್ತಿದ್ದ. ಮತ್ತೆ ಹೇಳುವುದಾದರೆ ಸರಿಸುಮಾರು ಇಪ್ಪತ್ತು ಬಿಲ್ಲಿಗಳನ್ನು ತನ್ನ ಬತ್ತಳಿಕೆಯಲ್ಲಿ ತುಂಬಿದ್ದ.
ಆತನು ಇಂತಹ ದುರ್ವಿಧಿಯನ್ನು ಸಂಧಿಸುತ್ತಾನೆಂದು ನಾನು ಎಣಿಸಿರಲಿಲ್ಲ. ನಿಜಕ್ಕು ಮಾನವ ಜೀವನ ಬೆಳಗಿನ ಮಂಜಿನಷ್ಟೆ ಸಾಶ್ವತ, ಮಿಂಚಿನ ಬಳ್ಳಿಯಷ್ಟೆ ಚಿರಾಯು. ಅವನ ಮೇಲಿನ ನನ್ನ ಸಹಾನುಭೂತಿಗೆ ಪದಗಳು ಸಾಕಾಗುವುದಿಲ್ಲ.

Sunday, August 15, 2010

ಕಲಿಕೆ

ನಾನಾ ಭಾವೋಪ ಸಂಪನ್ನಂ ನಾನಾ ಅವಸ್ಥಾಂತರಾತ್ಮಕಂ
ಲೋಕ ವೃತ್ತಾನು ಕರಣಂ ನಾಟ್ಯಮೇತನ್ಮಯಾಕೃತಂ

ಕುತೋವಾ ನೂತನಂ ವಸ್ತು ಅಯಂ ಉತ್ಪ್ರೇಕ್ಷಿತಾಂಕ್ಷಮಾಃ
ವಸ್ತ ವೈನ್ಯಾಸ ವೈಚಿತ್ರ್ಯಂ ಮಾತ್ರ ಮತ್ರ ವೈಚಾರ್ಯತಾಂ -- ಜಯಂತ ಭಟ್ಟ

ಸರ್ವೇ ನವ ಇವಾ ಭಾಂತಿ ಮಧುಮಾಸ ಇವ ಧೃಮಾಃ - ಆನಂದವರ್ಧನ

Saturday, August 07, 2010

ಯಾತ್ರೆ ಮುಗಿಸಿದ ’ನಡೆದಾಡುವ ಕಾವ್ಯಕೋಶ’ದ.ರಾ.ಬೇಂದ್ರೆ ಕಾವ್ಯ ಕುರಿತ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಇಹಲೋಕ ತ್ಯಜಿಸುವ ಕೆಲ ಘಂಟೆಗಳ ಮುನ್ನ ’ನಡೆದಾಡುವ ಕಾವ್ಯ ಕೋಶ’ ಎಂದು ಖ್ಯಾತರಾಗಿರುವ - ಕಿ.ರಂ. ನಾಗರಾಜ.

ಕಿತ್ತಾನೆ ರಂಗಪ್ಪ ನಾಗರಾಜ (ಕಿ.ರಂ.ನಾಗರಾಜ) ಇನ್ನಿಲ್ಲ. ನೆನ್ನೆಯಷ್ಟೆ ಸಂಚಯ ಮತ್ತು ಸುಚಿತ್ರ ಕಲಾ ಕೇಂದ್ರ ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಸಹೃದಯರನ್ನು ಬೇಂದ್ರೆ ಕಾವ್ಯದಲ್ಲಿ ತಲ್ಲೀನರಾಗಿಸಿದ್ದ ಗಾರುಡಿಗ ಇಲ್ಲವೆಂದರೆ ನಜಕ್ಕೂ ನಂಬಲಾಗತ್ತಿಲ್ಲ. ’ಜೋಗಿ’ ಪದ್ಯವನ್ನು ಓದಬೇಕೆಂದು ಅವರು ಗುರುತು ಹಾಕಿಕೊಂಡು ಬಂದಿದ್ದರೂ, ಅವರ ನೆನ್ನೆಯ ಮನೋಧರ್ಮಕ್ಕೆ ಕಾಕತಾಲೀಯವೆಂಬಂತೆ ಒಲಿದು ಬಂದದ್ದು ಬೇಂದ್ರೆಯವರ ’ಸೃಷ್ಟಿ - ಪ್ರಳಯ’ ಕವನ. ಪ್ರತಿಯೊಂದು ಕ್ಷಣದಲ್ಲಿಯೂ ಸೃಷ್ಟಿ ಮತ್ತು ಪ್ರಳಯಗಳು ಬದಿ ಬದಿಯಲ್ಲಿಯೇ ಹೇಗೆ ಸುಳಿದಾಡುವವು ಎಂದು ತಮ್ಮ ಜೀವನದ ಅಂತಿಮ ಉಪನ್ಯಾಸದಲ್ಲಿ ಕಿ.ರಂ. ಮಾರ್ಮಿಕವಾಗಿ ನುಡಿದಿದ್ದರು. ಆ ಕ್ಷಣದಲ್ಲಿ ಶ್ರುಷ್ಟಿಯಾದ ಕಾವ್ಯ ವೃಷ್ಟಿ, ಇನ್ನು ಕೆಲವ ಘಂಟೆಗಳಲ್ಲಿ ಲಯವಾಗಿ, ಪ್ರಳಯವಾಗುತ್ತದೆಂದು ಕನಸು ಮನಸುನಲ್ಲೂ ನೆನೆಸಿರಲಿಲ್ಲ. ಕಾವ್ಯವನ್ನು ಅನುಭವಿಸಬೇಕೆಂದಿದ್ದರಷ್ಟೆ. ಸೃಷ್ಟಿ ಪ್ರಳಯಗಳ ಅನುಭವ ಮಾಡಿಸಿ ತೀರಿಕೊಂಡರು. ಉಪನ್ಯಾಸದ ಕೊನೆಯಲ್ಲಿ, -- " ನಾನು ನಿಮಗೆ ಹೇಳಬೇಕಾದುದು ಏನೂ ಇಲ್ಲ. ಈ ಕೆಲ ಘಂಟೆಗಳಲ್ಲಿ ನನ್ನ ಭಾವಮಂಡಲದಲ್ಲಿ ಸುಳಿದಾಡಿದ ಹಲವು ಲಹರಿಗಳ ಕುರಿತಾಗಿ ನನಗೆ ನಾನೆ ಮಾತನಾಡಿಕೊಂಡಿದ್ದೇನೆ. you people have just overheard " ಎಂದು ನುಡಿದಿದ್ದರು.

.

Saturday, July 31, 2010

ಅಪರಿಗ್ರಹ


ನಾಡು ಕಂಡಂಥ ಅತ್ಯಂತ ಉನ್ನತ ಶ್ರೇಣಿಯ ಚಿತ್ರಕಾರ, ಶಿಲ್ಪಿ, ಕಲಾ ತಪಸ್ವಿ ಶ್ರೀಯುತ ಕೆ.ವೆಂಕಟ್ಟಪ್ಪನವರು. ಇಲ್ಲಿ ’ಕಲಾ ತಪಸ್ವಿ’ ಎಂಬ ಪದಪ್ರಯೋಗ ಅತಿಶಯೋಕ್ತಿಯಾಗಲಿ, cliche ಯಾಗಲಿ ಅಲ್ಲದೆ ಸಂಧಬೋಚಿತವಾಗಿದೆ. ತಮ್ಮ ಜೀವನವನ್ನು ಕಲೆಗಾಗಿಯೇ ಮುಣುಪಾಗಿಟ್ಟು ಭೀಶ್ಮ ಪ್ರತಿಙ್ಜ್ನೆಯಂತೆ ಜೀವನ್ದುದ್ದಕ್ಕೂ ಅಖಂಡ ಬ್ರಹ್ಮಚರ್ಯೆ ಮತ್ತು ಅಪರಿಗ್ರಹದ ವ್ರತವನ್ನು ಸಾಧಿಸಿದ ಧೀಮಂತರು. ೧೯೧೩ ರಲ್ಲಿ ಅವರು ಹಿಮಾಲಯದ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಅಪರಿಗ್ರಹದ ದೀಕ್ಷೆ ಸ್ವೀಕರಿಸಿದರು. ಯಾರಿಂದಲು ಯಾವುದೇ ರೀತಿಯ ಸಹಾಯವಾಗಲಿ, ಉಡುಗೊರೆಯಾಗಲಿ ಏನನ್ನೂ ಸ್ವೀಕರಿಸದ ವ್ರತವದಾಗಿತ್ತು.

೧೯೪೨ ರಲ್ಲಿ ದಿವಾನ್ ಬಹಾದ್ದೂರ್ ಪಿ. ರಾಘವೇಂದ್ರ ರಾಯರ ಮನೆಗೆ ಹೋಗಿದ್ದರು. ದಿವಾನರು ವೆಂಕಟ್ಟಪ್ಪನವರಿಗೆ ಬೀಳ್ಕೊಡುವಾಗ ತಾಂಬೂಲಾದಿಗಳನ್ನು ಸ್ವೀಕರಿಸಲು ಹೇಳಿದರು. ಆದರೆ ವೆಂಕಟಪ್ಪನವರು ಅಪರಿಗ್ರಹ ವ್ರತದಿಂದ ತಾಂಬೂಲವನ್ನೂ ಸ್ವೀಕರಿಸಲಿಲ್ಲ. ಕೊನೆಗೆ ದಿವಾನರ ಒತ್ತಾಯದ ಮೇರೆಗೆ, ಬೇರೆ ಇನ್ನಾರಿಗಾದರೂ ವೆಂಕಟಪ್ಪನವರು ತಾಂಬೂಲವನ್ನು ದಾನಮಾಡಲು ಅನುವು ಮಾಡಿಕೊಟ್ಟರೆ ತೆಗೆದುಕೊಳ್ಳುವುದಾಗಿ ಹೇಳಿದರು. ( ಶ್ರೀಯುತರ ದಿನಚರಿಯ ೧೭ ಸೆಪ್ಟೆಂಬರ್ ೧೯೪೨ ದಾಖಲಿಸಲಾಗಿದೆ.)

ಅಂತೆಯೆ ೧೯೫೦ ವಿನಾಯಕ ಚತುರ್ಥಿಗೆ ವೆಂಕಟ್ಟಪ್ಪನವರ ತಂಗಿ ಮೋದಕಗಳನ್ನು ತಂದುಕೊಡಲು ಅವರು ರೂಪಾಯಿ ದಕ್ಷಿಣೆ ಕೊಟ್ಟೆ ಅದನ್ನು ಸ್ವೀಕರಿಸಿದರು. ಮೋದಕವು ಹಾಗಿರಲಿ, ಒಮ್ಮೆ ವೆಂಕಟಪ್ಪವನರಿಗೆ ರುಚಿಸುವ ಹೇರಳೇಕಾಯಿ ಉಪ್ಪಿನಕಾಯನ್ನು ಅವರ ತಂಗಿ ತಂದುಕೊಟ್ಟರೆ, ಒಂದು ಶೀಶೆ ಉಪ್ಪಿನಕಾಯಿಗೆ ಮುಕ್ಕಾಲು ಸೇರು ಗೋಧಿಯನ್ನು ಕೊಟ್ಟು ತೆಗೆದುಕೊಂಡರು. ( ದಿನಚರಿ ದಾಖಲು: ೨೩ ಅಕ್ಟೋಬರ್ ೧೯೫೦)

ಈ ತಲೆಮಾರಿನ ಕಲಾವಿದರಿಗೆ (ಯಾರಿಗೆ ಆಗಲಿ) ಈ ಮಟ್ಟದ ನಿಸ್ಪೃಹತೆ ಇರಲು ಸಾಧ್ಯವೇ?

Monday, June 21, 2010

ಮಸಾಲಾಪುರಿ ಮತ್ತು ಅಷ್ಟಾವಧಾನ

೧೫ ಡಿಸೆಂಬರ್ ೧೯೯೧ರ ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಸಂಪೂರ್ಣ ಶತಾವಧಾನದಲ್ಲಿ ಶತಾವಧಾನಿ. ಡಾ | ರಾ. ಗಣೇಶ್ ಅವರು ಕನ್ನಡ ದತ್ತಪದಿಯಲ್ಲಿ , ’ಮಸಾಲ ಪೂರಿ’ ಮತ್ತು ’ಪಾನಿ ಪುರಿ’ ಪದಗಳನ್ನು ಬಳಸಿ ರಚಿಸಿದ ಊರ್ಮಿಳೆ ಬಗೆಗಿನ ಪದ್ಯ

ವಿದೇಹನರಪಾಟವೀಕುಸುಮಮಸಾಲವಲ್ಲೀಸಮಳ್
ಸದಾ ನಿಯಮನಿಷ್ಠುರಳ್ ಸುಶಮೆ ಪೂರಿತಳ್ ಪ್ರೇಮದಿಂ |
ಚಿದಂಶೆ ರಘುಜಾನುಜಪ್ರಿಯೆ ಮನಃಕೃಪಾನೀರದಳ್
ಮದಾಪಹರೆ ಮೈಥಿಲೀತಪನಪೂರಿತಳ್ ಪ್ರೇರಿತಳ್ ||

ಸಾಲ = ಮರ ; ನೀರದ = ಮೋಡ
-----------
ಇನ್ನೊಂದು ಉದಾಹರಣೆಯಲ್ಲಿ ಖಾನಾ, ಪೀನಾ , ಸೋನಾ, ಗಾನಾ ಉಪಯೋಗಿಸಿ ಜೀವನ್ಮುಕ್ತ ವರ್ಣನೆ

ವಿಷಯ ವಿಮುಖಾ ನಾನಾತ್ವೋದ್ಭಾಸಕೇಪಿ ಜಗತ್ತ್ರಯೇ
ಸದಮಲಚಿದಾನಂದಾಪೀನಾತ್ಮತತ್ವಪರಾಯಣಾಃ |
ಸರಸಮನಸೋ ನಾಟ್ಯಾಲೋಕಿಕ್ರಮೇಣ ನಿರಂತರಂ
ಪ್ರಣಯನಪರಾ ಯೋಗಾನಾಗಾ ಜಯಂತಿ ಮುನೀಶ್ವರಾಃ ||

Thursday, May 20, 2010

ವಿದ್ಯಾರಣ್ಯ ಜಯಂತಿಇಂದು ವಿದ್ಯಾರಣ್ಯ ಜಯಂತಿ. ವಿಭೂತಿ ಪುರುಷರಾದ ವಿದ್ಯಾರಣ್ಯರು, ದೇಶ ಮತ್ತು ಧರ್ಮ ಸಂಕಷ್ಟದಲ್ಲಿದ್ದಾಗ ಅವತರಿಸಿ, ಜಗತ್ತಿನ ಉದ್ದಗಲಕ್ಕೂ ತನ್ನ ಹಿರಿಮೆಯನ್ನು ಮೆರೆವ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರಾದರು

Tuesday, March 16, 2010

ಪ್ರೊ. ಎಂ. ಹಿರಿಯಣ್ಣಪ್ರಾತಃ ಸ್ಮರಣೀಯರಾದಂತಹ ಆಚಾರ್ಯ ಮೈಸೂರು ಹಿರಿಯಣ್ಣನವರ ಭಾವಚಿತ್ರವು ಅಂತರ್ಜಾಲದಲ್ಲೆಲ್ಲೂ ಸಿಗಲಿಲ್ಲ. ಅವರ ಪಟವು ಅಂತರ್ಜಾಲದಲ್ಲಿದ್ದರೆ, ಅಂತರ್ಜಾಲಕ್ಕೇ ಶೋಭೆ ಅಂದು, ಗೋಖಲೆ ಸಾರ್ವಗನಿಕ ಸಂಸ್ಥೆಯವರು ಹೊರತಂದಿರುವ ಸಿ.ಡಿ. ಯೊಂದರ ಮುಖಪುಟದಲ್ಲಿದ್ದ ಹಿರಿಯಣ್ಣನವರ ಚಿತ್ರವನ್ನು ಅಂತರ್ಜಾಲಕ್ಕೆ ಏರಿಸಿದ್ದೇನೆ.

ಚಿತ್ರ ಕೃಪೆ: ಗೋಖಲೆ ಸಾರ್ವಜನಿಕ ಸಂಸ್ಥೆ

Sunday, March 14, 2010

ವಿದ್ಯಾಲಂಕಾರ ಪ್ರೋ. ಸಾ.ಕೃ.ರಾಮಚಂದ್ರ ರಾಯರುProf.S.K.Ramachandra Raoವಿದ್ಯಾಲಂಕಾರ ಪ್ರೋ. ಸಾ.ಕೃ.ರಾಮಚಂದ್ರ ರಾಯರು
ವಿದ್ಯಾಲಂಕಾರ, ಶಾಸ್ತ್ರಚೂಡಾಮಣಿ, ಸಂಗೀತಕಲಾರತ್ನ, ವಾಚಸ್ಪತಿ ಮುಂತಾದ ಸಾರ್ಥಕ ಅಭಿಧಾನಗಳಿಂದ ಅಲಂಕೃತರಾಗಿರುವ ಪ್ರೋ. ಸಾ. ಕೃ . ರಾಮಚಂದ್ರ ರಾಯರು ನಮ್ಮ ನಾಡಿನ ಬಹುಶೃತ ವಿದ್ವಾಂಸರಲ್ಲಿ ಪ್ರಮುಖರು.ವೇದ,ದರ್ಶನ,ತಂತ್ರ,ಜೈನ,ಬೌದ್ಧ,ಸಂಗೀತ,ಸಾಹಿತ್ಯ, ಚಿತ್ರ,ಶಿಲ್ಪ,ಆಯುರ್ವೇದ ಮುಂತಾದ ಹತ್ತು ಹಲವು ಶಾಖೆಗಳಲ್ಲಿ ಪರಿಣಿತರು. ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಕೃತಿಗಳು ಇವರಿಂದ ಹೊರಮೊಮ್ಮಿದವು.

Sunday, February 28, 2010

ಗೋಖಲೆ ಸಾರ್ವಜನಿಕ ಸಂಸ್ಥೆ

ಗೋಖಲೆ ಸಾರ್ವಜನಿಕ ಸಂಸ್ಥೆ ಹೊರತಂದಿರುವ ಧ್ವನಿ ಸುರಳಿಗಳಲ್ಲಿ ಈ ಕೆಳಕಂಡ ಎಂ.ಪಿ. ಗಳು ನನ್ನ ಬಳಿ ಇವೆ. ಆಸಕ್ತರೆಲ್ಲರು ಸೇರಿ ಒಂದು ಶ್ರಾವ್ಯ ಸಂಗ್ರಹಾಲಯ (ಆಡಿಯೋ ಲೈಬ್ರರಿ) ಮಾಡಬಹುದು. ಇದಕ್ಕೆ ಕೈ ಜೋಡಿಸಬೇಕೆಂದಿರುವವರು ನನ್ನನ್ನು ಸಂಪರ್ಕಿಸಿ.

ಪಾಶುಪತಾಸ್ತ್ರ ಪ್ರದಾನ - ಕಾವ್ಯವಾಚನ ಮತ್ತು ವ್ಯಾಖ್ಯಾನ - ಭಾಗ ೧,೨. ಮೂರ್ತಿದ್ವಯರು.
ಅನಂದವರ್ಧನನ ಧ್ವನ್ಯಾಲೋಕ.
ಆನಂದಮಯ ಜೀವನ
ಶಾಕುಂತಲಂ
ಕಾಳಿದಾಸನ ಮೇಘದೂತಂ
ಕುಮಾರಸಂಭವ.
ಮೃತ್ ಶಕಟಿಕ
ರಾಮಾಯಣದ ಕೆಲವು ಸ್ವಾರಸ್ಯಗಳು.
ವಿಭೂತಿಪುರುಷ ವಿದ್ಯಾರಣ್ಯ.
ವೇದಮಂತ್ರ ಪರಿಚಯ.
ವಿವೇಕ ಚೂಡಾಮಣಿ - ಭಾಗ - ೧
ಭಾರತೀಯ ಸಂಸ್ಕೃತಿಗೆ ಯಾಙ್ನ್ಯವಲ್ಕ್ಯರ ಕೊಡುಗೆ.
೨೧. ಭೈರಪ್ಪನವರ ಕಾದಂಬರಿಗಳು
೨೨. ಬುದ್ಧನ ಜೀವನ ದರ್ಶನ.
೨೩.ಶ್ರೀಮದ್ಭಾಗವತ - ಶ್ರೀ ನಾರಾಯಣಾಚಾರ್ಯ.
೨೪. ಸಂಸ್ಕೃತ ಕವಿಗಳ ಕೃಷ್ಣಕಾವ್ಯ.
೨೫.ಮಹಾಭಾರತ - ಉದ್ಯೋಗಪರ್ವ
ಜೈಮಿನಿ ಭಾರತ - ವಾಚನ ವ್ಯಾಖ್ಯಾನ - ಡಾ|| ನಾಗವಲ್ಲಿ ನಾಗರಾಜ್ ಪ್ರೊ. ಅ.ರಾ. ಮಿತ್ರ.
ವಿವೇಕ ಚೂಡಾಮಣಿ - ಭಾಗ - ೨
ಭಾರತೀಯ ಸಂಸ್ಕೃತಿಯಲ್ಲಿ ಶಾಸ್ತ್ರ - ಪುರಾಣ-ಕಲೆ-ದರ್ಶನ.
೫.ರಾಗಾನುರಾಗ - ಭಾಗ - ೧,೨,೩,೪.
೬. ಕೆಲವು ಸಂಸ್ಕೃತ ನಾಟಕಗಳು.
೭. ಡಿ.ವಿ.ಜಿ. ಯವರ ಗೇಯ ಕೃತಿಗಳ ಗಾಯನ.
೮.ಶಿವಾಪರಾಧ ಕ್ಷಮಾಪಣ ಸ್ತೋತ್ರ - ವಿದ್ವಾನ್. ಗಣೇಶ ಭಟ್ಟ ಹೋಬಳಿ
೯. ಅಕ್ಷಯವಸ್ತ್ರ ಪ್ರದಾನ - ಕಾವ್ಯವಾಚನ ಮತ್ತು ವ್ಯಾಖ್ಯಾನ
ತ್ಯಾಗರಾಜರ ಕೃತಿಗಳಲ್ಲಿ ಆಧ್ಯಾತ್ಮ.
ಬುದ್ಧನ ಜೀವನ ದರ್ಶನ.
ಮಹಾಭಾರತ - ಉದ್ಯೋಗಪರ್ವ
ಸಂಸ್ಕೃತ ಕವಿಗಳ ಕೃಷ್ಣಕಾವ್ಯ.
ಪ್ರೋ. ಎಂ. ಹಿರಿಯಣ್ಣ : ಒಂದು ಕಿರುಪರಿಚಯ

Saturday, January 30, 2010

ಓ ಸೂರ್ಯಕಾಂತಿ!

ವಿಲ್ಯಂ ಬ್ಲೇಕ್ ಕವಿಯ Ah! Sunflower ಕವಿತೆಯನ್ನು ನಾನು ಕನ್ನಡದಲ್ಲಿ ಕೊಲೆ ಮಾಡಿರುವ ಬಗೆ.

ಓ ಸೂರ್ಯಕಾಂತಿ! ಕಾಲನ ಅಧೀನನೆ.
ಸೂರ್ಯ ಸೋಪಾನದ ಜಾಡು ಹಿಡಿದು:
ಆ ಸುಮಧುರ ಸುವರ್ಣ ಸಗ್ಗಕೆ
ಲಗ್ಗೆ ಇಟ್ಟು ಪಯಣಿಗರು ಯಾತ್ರೆ ಮುಗಿಸುವಲ್ಲಿಗೆ

ಆಸೆಗಳ ಸಂಕೋಲೆಯಿಂದ ಬಸವಳಿದ ಜವ್ವನನು
ತುಹಿನದಿಂದಾವರಿಸಿ ಬಾಡಿದ ನವಸುಮವು
ಸುಪ್ತಾವಸ್ಥೆಯಿಂದ ಸಿಡಿದೆದ್ದು ಹಾತೊರೆದು ಹೊರಡುತಿವೆ
ಎನ್ನ ಸೂರ್ಯಕಾಂತಿ ಚಲಿಸುವಲ್ಲಿಗೆ!


Ah ! Sun-flower weary of time.
Who countest the steps of the Sun:
Seeking after that sweet golden clime
Where the travellers journey is done

Where the Youth pined away with desire,
And the pale Virgin shrouded in snow:
Arise from their graves and aspire,
Where my Sun-flower wishes to go!


- William Blake : Songs of Experience in 1794.