Friday, October 26, 2007

ಪ್ರಿಯಂವದೆ

ಹುಡುಕಿ ಹೊರಟ್ಟದ್ದು ಶಾಕುಂ
ತಲೆಯನ್ನು.
ಶಾಕಿಂಗ್ ಅಂದ್ರೆ
ಸಿಕ್ಕಿಬಿದ್ದವಳು ಸೈಡ್ ಯಾಕ್ಟ್ರೆಸ್ಸ್
ಪ್ರಿಯಂವದೆ!

ಶ್!!!!
ಗಟ್ಟಿಯಾಗಿ ಗೊಣಗಲಾರೆ,
ಗುಟ್ಟಾಗಿಯೇ ಇರಲಿ.
ಅವಳಿಗೆ ತಿಳಿದರೆ,
ಪ್ರಿಯೆಯಿಂದಲೇ
(ನನಗೆ)ವದೆ.
rather, ವಧೆ.
ಪ್ರಿಯಂವಧೆ!
--

Wednesday, October 24, 2007

ಹರಟೆ - ಹೂರಣ
--
ನಮ್ಮಿರ್ವರ ನಡುವೆ ಹೀಗೆ.
ಟಾಪಿಕ್ಕೆ ಇಲ್ಲದೆ
ಘಂಟೆ ಘಟ್ಟಲೆ ಹರಟೆ.
ಅನ್ಯರಿಗಿದು
ಕಾಲಹರಣ.
ಅರಿತು ಅನುಭವಿಸಿದವರಿಗೆ,
ರಸ ಹೂರಣ !
--
Oct 24 2007; 04:11 PM ; Milpitas,CA.

ಹೈಕು

ಕನ್ನಡದಲ್ಲಿ ಹೈಕು ಪ್ರಯತ್ನ (ಮಾಡಕ್ಕೆ ಹೋಗಿ, ಆದ ಕಲಸುಮೇಲೋಗರ.):

--
ಹಾಲ್ಚಿಮ್ಮಿತು ಉಕ್ಕಿ,
ಭುಗಿಲೆಬ್ಬಿಸಿ.
ಹಸಿಕಳಚಿ;
ಕಾವೀಯ್ದ ಒಳ ಬಿಸಿ
ಇನ್ನು..
ನಿಗ್ರಹಃ ಕಿಂ ಕರಿಷ್ಯಸಿ?
--
Oct 24 2007; 01:40 AM ; Milpitas,CA.

Saturday, October 20, 2007

ಪದಬಂಧ

ಹೊರಗಡೆ ರಣ ಬಿಸಿಲು. ಫ್ಯಾನ್ ಹಾಕೋಣ ಅಂದ್ರೆ ಕರೆಂಟು ಬೇರೆ ಇಲ್ಲ. ಏನು ಸುಡುಗಾಡೋ ಏನೋ? ಜೊತೆಗೆ ಇವಳು ಬೇರೆ. ನನ್ನ ಅರ್ಧಾಂಗಿ. ಕೋಡಂಗಿ. ಎಡಬಿಡಂಗಿ. ಇವಳ್ನ ಕಂಡ್ರೆ ನಂಗೆ ಮೈ ಎಲ್ಲ ಉರಿ.ಆದ್ರೆ ಏನು ಮಾಡೋದು, ಕರ್ಮ. ಇವಳ ಜೊತೆನೇ ಬದುಕು. ಇವಳ ಜೊತೆನೇ ಸಾವು.

ಜೀನಾ ಯಹಾಂ, ಮರ್ನಾ ಯಹಾಂ; ಇಸ್ ಕೆ ಶಿವ ಶಿವಾ ಜಾನಾ ಕಹಾಂ.

ಇಬ್ಬರೂ ಕೂತುಕೊಂಡು ಪದಬಂಧ ಆಡ್ತಾ ಇದೀವಿ. ಐವತ್ತೆರಡು ವಯಸ್ಸು. ಲಾಸ್ಟ್ ಇಯರ್ರೇ ವಾಲಂಟರಿ ತೊಗೊಂಡೆ. ಅದೇ ರಿಟೈರ್ಮೆಂಟು. ಈಗ ಮಾಡೋಕ್ಕೆ ಏನು ಘನಂಧಾರಿ ಕೆಲಸ ಇಲ್ಲ. ಹಾಂ... ಇವಳ ಜೊತೆ ಪದಬಂಧ ಆಡೋದು ಬಿಟ್ಟು. ಕಳೆದ ಗುರುವಾರದಿಂದ ಆ ಹಾಲಪ್ಪ ಕರಿಯ -- ಅವನನ್ನು ಬಿಟ್ಟು, ಇವಳನ್ನು ಬಿಟ್ಟು, ಬೇರೆ ಯಾರ್ನೂ ನಾನು ಮಾತಾಡ್ಸೇ ಇಲ್ಲ ಅಂತೀನಿ. ಒಂದು ಕಾಲ್ದಲ್ಲಿ ಗುಬ್ಬಿ ವೀರಣ್ಣನವರ ಕಂಪ್ನಿನಲ್ಲಿ ಜೋರ್ , ಜೋರ್ ನಾಟ್ಕಾ ಆಡ್ತಾ ಇದ್ದೆ. ವರ್ಷಕ್ಕೆ ಏರಡು ಸಾರ್ತಿ ಜೋಗದ ಗುಂಡಿಗೆ ಟ್ರಿಪ್ಪು. ಹೇಗೆಲ್ಲ ಮಜ ಮಾಡ್ತಾ ಇದ್ದೆ. ಅದು ಒಂದು ಕಾಲ. ಈಗೇನಿದೆ? ಈ ಮೂದೇವಿನ ಬಿಟ್ಟು. ಥೂ! ಥೂ!

ತರಂಗ ಯುಗಾದಿ ವಿಶೇಷಾಂಕ ಈ ಬಾರಿ. ಸಾಕಷ್ಟು ದೊಡ್ಡ ಪದಬಂದ ಬಂದಿದೆ. ನಾನು, ಇವಳು ಮಧುಚಂದ್ರಕ್ಕೆ ಮೈಲಾರ ಬೆಟ್ಟಕ್ಕೆ ಹೋಗಿದ್ವಲ್ಲ , ಆವಗ್ಲಿಂದ್ಲೂ ಹೀಗೆ ಜೋಡಿಯಾಗಿ ಪದಬಂಧ ಬಿಡಿಸೋ ಆಟ ಆಡ್ತೀವಿ. ಬೇರೆ ಏನೇ ಹೇಳಿ, ಮುಂಡೇದು ಭಾಷಾ ನಾ ಮಾತ್ರ ಸಕ್ಕತ್ತಾಗಿ ಇದೆ ಇವಳಿಗೆ. ಪದಬಂಧನ ಪಾದರಸ ಬಿಡಿಸಿ ಹಾಕಿದ ಹಾಗೆ ಬಿಡಿಸಿ ಬಿಸಾಕ್ತಾಳೆ. ಅವಳು ಪಾದರಸ, ನಾನು ಹರಳೆಣ್ಣೆ. ಹೂಂ...

ಮೊದಲನೇ ಪದ. ಏಡದಿಂದ ಬಲಕ್ಕೆ. ಕ್ಲೂ ಬಂದು : 'ಹಬ್ಬ' ೩ ಪದಗಳಿರೋದು. ಥಟ್ ಅಂತ ಬರೆದೆ, 'ಯುಗಾದಿ' ಅಂತ. ಭೇಷ! ಭೇಷ!!! ನನ್ನ ಬೆನ್ನು ನಾನೇ ತಟ್ಕೋ ಬೇಕು. ಅಲ್ಲಾ, ಯುಗಾದಿ ಹಬ್ಬದ ವಿಷೇಶಾಂಕ. ಇನೇನು ಪದ ಇರುತ್ತೆ ಹೇಳಿ? ಇದೇ ಪದ ಸರಿ. ಯುಗಾದಿ.

ಹಾಂ.. ಈಗ ಅವಳ ಸರದಿ. ಏನು ಆಡ್ಥಾಳೋ ನೋಡೋಣ.
ಮೇಲಿನಿಂದ ಕೆಳಕ್ಕೆ. ೪ ಪದ. ಜೋಡಿ ಪದ ಅಂತ ಇದೆ. 'ಮಾಟಮಂತ್ರ' ಅಂತ ಬರೆದಿದಾಳೆ. ಏನು ಪಾಡೋ ಏನೋ . ಸರಿ ಇರ್ಬೇಕು ಬಿಡಿ. ಪದ, ಲೆಕ್ಕ ಏನೊ ತುಂಬುತ್ತೆ, ಸರಿಹೋಗುತ್ತೆ . ಮತ್ತೆ ನನ್ನ ಸರದಿ. ಏನಪ್ಪ ತುಂಬೋದು?? ೨ ಪದ. ಏಡದಿಂದ ಬಲಕ್ಕೆ. ಕೀಟ ಅಂತ ಸೂಚಿಸ್ತಾ ಇದೆ. 'ದುಂಬಿ' ಅಂತ ಬರ್ದೆ ನಾನು. ಅರೇ ! ನಾನು ದುಂಬಿ ಅಂತ ಬರ್ಯೋ ಹಾಗಿಲ್ಲ.ಅಷ್ಟು ಬೇಗ ಇಷ್ಟು ದೊಡ್ಡ ದುಂಬಿ ಮನೆ ಒಳಗೆ ಬರೋದಾ?. ದುಶ್ಯಂತ ಶಾಕುಂತಲೆನ ದುಂಬಿಯಿಂದ ಪಾರು ಮಾಡೋ ಹಾಗೆ, ನಾನು ವೀರಾವೇಷದಿಂದ ದುಂಬಿಯನ್ನು ಹುರಿದುಂಬಿಸಿದೆ. ಅಯ್ಯೋ. ಹೊರಗಟ್ಟಿದೆ.(ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಣ್ಣಾವ್ರು ಹಾಗೆ ಅಲ್ವಾ, ಜಯಪ್ರಧಾ ನ ಸೇವ್ ಮಾಡಿದ್ದು..ಹೆ ಹೆ)

ಮತ್ತೆ ಆಟ ಮುಂದುವರಿಸುತ್ತ. ಮೇಲಿನಿಂದ ಕೆಳಕ್ಕೆ. 'ಯುಗಾದಿಯ' 'ಗಾ' ಜೊತೆಗೆ 'ಯ' ಜೋಡಿಸಿ, 'ಗಾಯ' ಅಂತ ಬರೆದಳು. ಅಯ್ಯೋ !! ಕುರ್ಚಿಗೆ ನನ್ನ ಕಿರುಬೆರಳು ಸಿಕ್ಕಿಕೊಂಡು....ಅಯ್ಯೋ ಅಯ್ಯೋ...ರಕ್ತ,ಗಾಯ,ನೋವು! ನಿಜವಾಗಿಯೂ 'ಗಾಯ' ಆಯಿತು. ಬಾಯ್ನಲ್ಲಿ ಸುಮ್ನೆ ಕಚ್ಚುತ್ತ ಇದ್ದ ಪೆನ್ಸಿಲ್ ತೆಗೆದು, ಬೆರಳು ಇಟ್ಟುಕೊಂಡೆ. ನನಗೆ ಇದೊಂದು ದುರಭ್ಯಾಸ.. ಕೈನಲ್ಲಿ ಪೆನ್ಸಿಲ್ ಇದ್ರೆ, ಆಟೊಮ್ಯಾಟಿಕಾಗಿ ಬಾಯಲ್ಲಿ ಹೋಗುತ್ತೆ. ಇವಳು ಒಂದು ಬ್ಯಾಂಡೇಜ್ ಏನಾದ್ರು ಮಾಡ್ಥಾಳೇನೋ ಅಂತ ನೋಡ್ಥೀನಿ. ಇಲ್ಲ.. ಇಲ್ಲವೇ ಇಲ್ಲ. ಅವಳ ಪಾಡಿಗೆ ಅವಳು 'ಪದಬಂಧ' ಆಡ್ತಾ ಇದಾಳೆ.

'ಮಾಟಮಂತ್ರ' ಪದದಿಂದ 'ಮಾ' ಜೊತೆಗೆ 'ವುಬೇವು' ಜೋಡಿಸಿ - 'ಮಾವುಬೇವು' ಅಂತ ಮುಂದಿನ ಪದಜೋಡಿಸಿದೆ. 'ವು' ಬರೆದು ಇನ್ನು ಕೈ ಪುಸ್ತಕದ ಮೇಲೆ ಇದ್ದೇ ಇದೆ, ಅಷ್ಟು ಬೇಗ ಬಾಗಿಲಿಗೆ ಸಡಿಲವಾಗಿ ಕಟ್ಟಿದ್ದ ಮಾವುಬೇವಿನ ಗೊಂಚಲು ಕೆಳಗೆಬೀಳೋದೆ??? ಇರಿ ಇರಿ. ಇಲ್ಲಿ ಏನೊ ಕರಾಮತ್ತು ನಡೆದಿದೆ. ಪುಟುಗೋಸಿ ಪದಗಳಿಗೆ ಹೇಗೆ ಇಂಥ ಶಕ್ತಿ? ಇವತ್ತು 'ಯುಗಾದಿ', ಮನೆ ಒಳಗೆ 'ದುಂಬಿ' ಬಂದಿತ್ತು.ನನಗೆ 'ಗಾಯ' ಆಯಿತು.' ತೋರಣ ಕಟ್ಟಿದ್ದ 'ಮಾವು-ಬೇವು' ಕಳಚಿ ಬಿದ್ದವು. ಪದಬಂದದಲ್ಲಿ ಏನು ಬರೆದರೂ ಅದು ವಾಸ್ತವದಲ್ಲಿ ನಡೆಯುತ್ತಿದೆಯೆ? ಏನಾದ್ರು 'ಮಾಟಮಂತ್ರ' ನಾ?

'ಬೇವು' ನಲ್ಲಿನ, 'ವು' ಗೆ 'ಸಾ', ಸೇರಿಸಿ ಈಕೆ ನಕ್ಕಳು. ಒಳ್ಳೆ ಆಪ್ತಮಿತ್ರ ಚಿತ್ರದ ನಾಗಮಣಿ ಹಾಗೆ, ಕೆಟ್ - ಕೆಟ್ ದಾಗಿ ದೊಡ್ಡ ಕಣ್ಣು ಬಿಟ್ಟು ದೆವ್ವ ನಕ್ಕಹಾಗೆ ನಗ್ತಾ ಇದಾಳೆ. ಅಯ್ಯೋ , ಬಾಯಿ ನಲ್ಲಿ ಇದ್ದ ಪೆನ್ಸಿಲ್ ಗಂಟಲಿಗೆ ಚುಚ್ಚಿಕೊಂಡಿದೆ. ಉಸಿರು ಕಟ್ಟುತಾ ಇದೆ. ನೀರು, ನೀರು.. ನೀ..

---
Credits and Courtesy:

Based on a short story, 'Death by Scrabble' by Charlie Fish. The characters and certain scenarios have been indianised to induce contextual humour. The Plot and theme, however are based on the original work.

ಕೊಡೆಸೇವೆ

ಇಲ್ಲಿ ಒಬ್ಬ ಐನಾತಿಗೆ ನನ್ನ ತಲೆ ಮೇಲೆ ಕೊಡೆನಲ್ಲಿ 'ಟುಪುಕ್! ಟುಪುಕ್!' ಅಂತ ಮೊಟುಕೊ ವಿಚಿತ್ರ ಹವ್ಯಾಸ ಇದೆ. ಇಂದಿಗೆ ಸರಿಯಾಗಿ ಐದು ವರ್ಷ ಆಯಿತು ಅವನು ನನಗೆ ಕೊಡೆಸೇವೆ ಮಾಡೊಕ್ಕೆ ಶುರುಮಾಡಿ. ಮೊದಮೊದಲು ನನಗೆ ಇದನ್ನು ಸಹಿಸೋ ಸಹನೆ ಇರ್ಲಿಲ್ಲ, ಈಗ ಒಗ್ಗಿ ಹೋಗಿದ್ದೇನೆ.ಇವನ ಹೆಸರು ಗೊತ್ತಿಲ್ಲ ನನಗೆ. ಸಾಧಾರಣ ಮೈ ಕಟ್ಟು. ಗೋಧಿ ಮೈ ಬಣ್ಣ. ಬೂದು ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟು ಧರಿಸಿರುತ್ತಾನೆ ('ಮಾನಸಿಕವಾಗಿ ಅಸ್ವಸ್ತರು', ಎಂತ ಸೇರ್ಸಿದ್ದಿದ್ರೆ, ಆಕಾಶವಾಣಿ 'ಕಾಣೆಯಾದವರ ಬಗ್ಗೆ ಪ್ರಕಟಣೆ' ಪೂರ್ಣವಾಗುತಿತ್ತು). ಆ ದಿನ ನಾನು ಕಬ್ಬನ್ ಪಾರ್ಕ್ನಲ್ಲಿ, ಕಲ್ಲು ಬೆಂಚ್ ಮೇಲೆ ಕೂತು ಪೇಪರ್ ಓದುತಾ ಇದ್ದೆ. ಏನೋ ಮೆಲ್ಲಗೆ ನೆತ್ತಿಯನ್ನು ತಾಕಿದ ಹಾಗೆ ಆಯಿತು. ಕಣ್ಣನ್ನು ಮೇಲಕ್ಕೆತ್ತಿ ನೋಡಿದರೆ, ಈ ಮನುಷ್ಯ ಯಾಂತ್ರಿಕವಾಗಿ, ಅಸಂಗತವಾಗಿ ನನ್ನ ತಲೆಗೆ ತನ್ನ ಕಪ್ಪು ಕೊಡೆಯನ್ನು ತಾಕಿಸುತ್ತಿದ್ದಾನೆ.ನನಗೆ ಹೇಗೆ ವರ್ತಿಸಬೇಕು ಅನ್ನೋದು ತಿಳಿಯಲಿಲ್ಲ. ನೊಡಿದವರು ಏನೆಂದು ಕೊಂಡಾರು ಅನ್ನುವ ಅವಮಾನದಲ್ಲಿ ಹಿಂದೆ ತಿರುಗಿ ಒಮ್ಮೆ ನೆಟ್ಟ ನೋಟದಲ್ಲಿ ಅವನನ್ನು ನೋಡಿದೆ. 'ಏನಯ್ಯ, ನಿನಗೆ ಹುಚ್ಚೆ?' ಎಂದು ದಬಾಯಿಸಿದೆ. ಆತ ನನ್ನ ಮಾತಿಗೆ ಕಿವಿಗೊಡಲೇ ಇಲ್ಲ. ತನ್ನಪಾಡಿಗೆ ತಾನು ಕೆಲಸವನ್ನು ಮಾಡ್ತಾ ಇದ್ದ. ಶಾಂತಚಿತ್ತನಾಗಿ, ಮೌನವಾಗಿ ನನ್ನ ತಲೆ ಮೇಲೆ ಅವನ ಶ್ರೀರಕ್ಷೆ ಕೊಡುತ್ತಲೇ ಹೋದ. ರೇಗಿದವನೇ ನಾನು ದಪೇದಾರನ್ನನ್ನು ಕರೆಯುತ್ತೇನೆ ಎಂದು ಧಮಕಾಯಿಸಿದೆ. ಊಂ .. ಹೂಂ.... ಪ್ರಜೆ ಜಗ್ಗಲಿಲ್ಲ. ಎರಡು ನಿಮಿಷ ಅವ್ಯವಸ್ತೆ ತಾಳಲಾರದೆ ಸಹಿಸಿಕೊಂಡು, ಬಲವೆಲ್ಲ ಹಾಕಿ ಅವನ ಕಪ್ಪಾಳಮೋಕ್ಷ ಮಾಡಿದೆ. ಪಾಪ, ಅಲ್ಲೆ ನೆಲಕ್ಕೆ ಉರುಳಿ, ಮೂಗಿನಲ್ಲಿ ರಕ್ತ ಸೋರಿಸಿಕೊಂಡು ನರಳಾಡುತ್ತಿದ್ದ. ಅಯ್ಯೊ ಪಾಪ ಅನಿಸಿತು ನನಗೆ. ಸ್ವಲ್ಪ ಚೇತರಿಸಿಕೊಂಡು - ತಡವರಿಸಿಕೊಂಡು, ಮೇಲೆ ಎದ್ದು ಒಂದು ಮಾತೂ ಆಡದೆ, ಮತ್ತೆ ತನ್ನ ಕೈಂಕರ್ಯ ಆರಂಭಿಸಿದ. ಅವನು ನನಗೆ ಪೆಟ್ಟು ಆಗುವ ರೀತಿ ಹಲ್ಲೆ ನಡೆಸುತ್ತಿರಲಿಲ್ಲ, ಆದರೆ ಅತೀವ ಅಸಹನೀಯವಾಗಿ, ಏಕತಾನದಲ್ಲಿ ಮತ್ತೆ ಮತ್ತೆ ಮೆಲ್ಲ ಮೆಲ್ಲಗೆ ಸೋಕಿಸುತ್ತಿದ್ದ. ನೋಣ ಒಂದೇ ಜಾಗದಲ್ಲಿ ಬಂದು ಬಂದು ಕೂತು ಚೇಡಿಸೊ ಹಾಗೆ.ಯಾಕೋ ಬೆಳಗ್ಗೆ ಏಡಮಗ್ಗಲಲ್ಲಿ ಏದ್ದಿರ್ಬೇಕು, ಅದಕ್ಕೆ ಹುಚ್ಚನ ಸಹವಾಸ ಆಯಿತು ಅಂತ ತಿಳಿದು, ಅಲ್ಲಿಂದ ಪರಾರಿ ಆಗಲು ಕಾಲಿಗೆ ಬುದ್ಧಿ ಹೇಳಿದೆ. ಕಷ್ಟಪಟ್ಟು ಒಡೋದಕ್ಕೆ ಪ್ರಯತ್ನಿಸಿ, ಮೇಲುಸಿರು ಬಿಡುತ್ತಿದ್ದ.ಅವನ ಮುಖದಲ್ಲಿ ಯಾವುದೂ ಭಾವನಯೇ ಇಲ್ಲದೆ, ನನ್ನನ್ನು ಹಿಂಬಾಲಿಸಿ ಮತ್ತೆ ಕಾರ್ಯನಿರತನಾದ.

ಪೋಲಿಸ್ ಠಾಣೆಗೆ ಕರೆದೊಯ್ಯೊಣ ಅಂದರೆ, ಅಲ್ಲಿ ಇಂತಹ ಹಾಸ್ಯಾಸ್ಪದ ದೂರು ಸಲ್ಲಿಸಿದರೆ ನಕ್ಕುಬಿಟ್ಟಾರು ಎಂದು ಮನೆಯ ಕಡೆ ಹೋಗಲು ಧಾವಿಸಿದೆ. ಕಣ್ಣಿಗೆ ಕಂಡ ಪುಷ್ಪಕ್ ಬಸ್ ಹಿಡಿದು ಸುಭಾಷನಗರ ಕಡೆ ದಾರಿಹಿಡಿದೆ.ನಕ್ಷತ್ರಿಕನ ಹಾಗೆ ಈ ಆಸಾಮಿ ಅದೆ ಬಸ್ಸು ಹಿಡಿದು, ನಾನು ಕುಳಿತ ಸೀಟಿನ ಪಕ್ಕದಲ್ಲೆ ನಿಂತು ತನ್ನ ಕೆಲಸ ಮುಂದುವರಿಸಿದ. 'ಟುಪುಕ್! ಟುಪುಕ್!' ಪ್ರಯಾಣಿಕರು ಮುಖ ಮುಖ ನೊಡಿಕೊಂಡು ನಕ್ಕರು. ಸ್ವಲ್ಪ ಸಮಯದಲ್ಲಿ ನಗುವಿನ ಅಲೆಗಲು ಭುಗಿಲೆದ್ದವು.ನಾನು ನಾಚಿಕೆ, ಹೇಳಿಕೊಳ್ಳಲಾರದ ಅವಮಾನದಲ್ಲಿ ಬೆಂದುಹೋದೆ.ನಾನು ಬಸ್ಸಿನಿಂದ ಇಳಿದೆ (ಅರ್ಥಾತ್.. ನಾವು ಇಳಿದೆವು). ರಸ್ತೆನಲ್ಲಿ ಜನ ನಮ್ಮನ್ನು ನೊಡಿ ಕೇಕೆ ಹಾಕತೊಡಗಿದರು. ನಾನು ಅವರನ್ನು ಕಂಡು 'ಯಾಕ್ರಯ್ಯ, ಇಲ್ಲಿ ಕೋತಿ ಕುಣಿತಾ ಇದ್ಯಾ? ನೀವುಗಳು ಯಾರೂ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಕೊಡೆ ಸೇವೆ ಮಾಡೊದನ್ನ ನೋಡಿಲ್ವ?' ಅಂತ ಅರಚಿದೆ.ಹಾಳು ನಕ್ಷತ್ರಿಕ ನಮ್ಮ ಮನೆಗೆ ಸಹ ಬಂದು ನಿಂತ. ನಾನು ಎಲ್ಲಿ ಹೋದ್ರೆ ಅಲ್ಲಿಗೆ ಬರ್ತಾನೆ ಈ ಛತ್ರಿಪತಿ.ನನ್ನ ನೆರಳಿನ ಹಾಗೆ ಹಿಂಬಾಲಿಸೊ ಛಾಯಾಪತಿ. ನಾನು ಎಲ್ಲಿ ಬಂದ್ರೆ ಅಲ್ಲಿ ಬರ್ತಾನೆ. ಕಡೇ ಪಕ್ಷ ಕನಕದಾಸರ ಸಹಪಾಠಿ ಕದಳೀಫಲ ತಿಂದ ಕಡೆಗೆ ನಾನು ಹೋದ್ರೆ ಅಲ್ಲಿ ಆದ್ರೂ ನಿರಾಳ್ವಾಗಿ ಕೆಲಸ ಮಾಡೋಕ್ಕೆ ಬಿಡ್ತಾನ ಈತ? ಊಂ ಹೂಂ..ಇಲ್ಲವೇ ಇಲ್ಲ... ಅ'ಲ್ಲೂ' ಬಂದು ವಕ್ರಸ್ತಾನೆ, ಕುಕ್ರಸ್ತಾನೆ. ಮೊದಲಿಗೆ ಸ್ವಲ್ಪ ದಿನ ನಿದ್ದೆ ಕೆಡ್ತ ಇದ್ದೆ, ಈ ಟಚ್-ಟಚ್ ಸೇವೆ ಇಂದ. ಈ ನಡುವೆ, ಇದು ಒಳ್ಳೆ ತಟ್ಟಿ-ತಟ್ಟಿ ಆಗ್ಬಿಟ್ಟಿದೆ. ನನ್ನ ತಾಯಿ ಜೊಗುಳ ಹಾಡಿ ನನ್ನನ್ನು ಮಲಗಿಸುವ ಹಾಗೆ ಅನ್ನಿ. ಅವನನ್ನ ರೇಗಿಸಿ, ಮುದ್ದು ಮಾಡಿ, ಅಂಗಲಾಚಿ ಬೇಡಿ ಕೊಂಡು, ಅಯ್ಯೋ - ದಮ್ಮಯ್ಯ ಅಂದು, ಸಾಮ - ದಾನ - ದಂಡ - ಬೇಧ -- ಹೀಗೆ ಎಲ್ಲ ಉಪಾಯ ಹಾಕಿಕೊಂಡು ಕೇಳಿದ್ರು ಸುತರಾಂ ಹೀಗೆ ಯಾಕೆ ಮಾಡ್ಥಾನೆ ಅಂತ ಹೇಳೊಲ್ಲ. ಬೊಧಿವೃಕ್ಷದ ಕೆಳಗೆ ಕೂತ ಬುದ್ಧನ ಹಾಗೆ ಮುಖ ಮಾಡ್ತಾನೆ ಮೂರ್ಖ. ಸ್ಥಿತಪ್ರಗ್ನನ ಹಾಗೆ. ಎಷ್ಟೋ ಸಾರಿ ಪಿತ್ತ ನೆತ್ತಿಗೇರಿ ಕೈಗೆ ಸಿಕ್ಕಿದ್ರಲ್ಲಿ -- ಬೇಳ್ಟು , ಚೈನು, ಚಾವ್ಟಿ , ಕೊಡೆ (ಅವನ ಕೊಡೆ ಅಲ್ಲ, ನನ್ನ ಹೆಂಡತಿದು; ಫ್ಲೋರಲ್ ಪ್ಯಾಟ್ರನ್ನು ಇರೋದು) ಏಟು ಹಾಕಿದೀನಿ. ಆದ್ರು ಇವೆಲ್ಲ ಆಕ್ಯುಪೇಶನಲ್ ಹಾಜರ್ಡ್ ಅನ್ನೊ ಹಾಗೆ ಲೇಬರ್ ಮಾಡ್ತಾನೆ ಪುನ್ಯಾತ್ಮ ! ಒಂದು ದಿನ ತುಪಾಕಿ ತೆಗೆದು ಹರಹರ ಅನ್ಸೋಣ ಅನ್ಕೊಂಡೆ.ಆದ್ರೆ ಇವನು ಬೇತಾಳವಾಗಿ ಬಂದು ನನ್ನ ಕಾಡೋದ್ರಲ್ಲಿ ಸಂಶಯ ಇಲ್ಲ.

ಆದ್ರೆ ಇತ್ತೀಚೆಗೆ ನನ್ನ ಯೋಚನಾ ಲಹರಿ ಹೀಗೆ ಹರಿಯುತ್ತಿದೆ -- ನಾನು ಕೊಡೆ ಕೈಂಕರ್ಯಕ್ಕೆ ಒಗ್ಗಿ ಹೋಗಿದೀನಿ. ಬಹುಶಃ ಇವನು ಹೀಗೆ ಕೊಡೆ ಸೇವೆ ಮಾಡದೆ ಹೋದ್ರೆ, ನನಗೆ ಹುಚ್ಚೆ ಹಿಡಿಯುವುದೇನೋ. ಏಕತಾನದಲ್ಲಿ ನನ್ನ ತಲೆ ಮೇಲೆ ಏನೂ ಸ್ಪರ್ಶಿಸದಿದ್ದರೆ ನನ್ನ ತಲೆ ಒಳಗಿನಿಂದ ಸೀಳುವುದೋ ಏನೂ? ಒಂದು ವೇಳೆ ಈತ ಸತ್ತು ಹೋದರೆ ಏನು ಗತಿ? ಸುಮ್ಸುಮ್ನೆ ಆರಂಭಗೊಂಡಿದ್ದು ಈಗ ನನಗೆ ಅನಿವಾರ್ಯತೆ ಆಗಿದೆ.ಇವನು 'ಗೊಟಕ್' ಅಂದ ಮೇಲೆ ನನಗೆ 'ಟುಪುಕ್' ಆನೋವ್ರು ಯಾರದ್ರು ಬೇಕೆ ಬೇಕು. ಶಿಫ್ಟ್ ಸಿಸ್ಟಂನಲ್ಲಿ ಯಾರದ್ರು ಪಾರ್ಟ್ ಟೈಂ ಕೊಡೆಸೇವೆ ಮಾಡೋವ್ರು ಸಿಕ್ಕಿದ್ರೆ ನನಗೆ ತಿಳಿಸಿ, ಪ್ಲೀಸ್.

'''''

ಮತ್ತೊಂದು ರೂಪಾಂತರದ ಪ್ರಯತ್ನ.

Credits and Courtesy:

Based on a short story,

'There's a Man in the Habit of Hitting Me on the Head with an Umbrella'

by Argentine author, Fernando Sorrentino.

Translated to English by: Clark M. Zlotchew.
Translated and adapted to Kannada by : yours truly, Srikanth Venkatesh.

The characters and certain scenarios have been Indianised to induce contextual humour. The Plot and theme, however are based on the original work.

'''''''''''''''''''''''''''''''''''''''''

ನಾನೇ ನನ್ನ ಗಂಡ

ಯಾಕಾಗಬಾರದು? ಗುಂಡಾ ಜೋಯಿಸರು ಮೀನಾ-ಮೇಷ ಎಣಿಸಿ, ಒಂಟಿಕೊಪ್ಪಲ್ ಪಂಚಾಂಗ ಮುದುರಿಟ್ಟು, ಹಸಿರು ನಿಷಾನೆ ಕೊಟ್ಟೇಬಿಟ್ಟರು. ಈ ಮೊದಲೇ ವರವರಮೂರ್ತಿ ತನ್ನ ಜಾತಕವನ್ನು ಕಂಕುಳಲ್ಲಿ ಇಟ್ಟುಕೊಂಡು, ತನ್ನ ಮದುವೆ ತಾನೆ ಮಾಡ್ಕೊಳ್ಳೋದಕ್ಕೆ ಶಾಸ್ತ್ರಿಗಳ ಹತ್ತಿರ ಬಂದಿದ್ದ. ವಿಪರ್ಯಾಸ ಏನಪ್ಪ ಅಂದ್ರೆ, ಅವನು ಅವನನ್ನೇ ಮದುವೆ ಆಗಬೇಕಂತೆ. ಜೋಯಿಸರು ಪಾಪ ಕಕ್ಕಾಬಿಕ್ಕಿಯಾಗಿ, ತಾಮ್ರದ ಬಿಂದಿಗೆಯ ತಣ್ಣನೆ ನೀರು ಕುಡಿದು, ಸ್ವಲ್ಪ ಸುಧಾರಿಸಿಕೊಂಡ್ರು. ತಮ್ಮ ಜಾಯಮಾನದಲ್ಲೇ ಇಂಥ ವರ'ಸಾಮ್ಯ' ನೋಡೋ ಕ್ಯಾಮೆ, ಇದೇ ಮೊದಲ ಬಾರಿ ಅವರಿಗೆ ಬಂದದ್ದು. ಚೇತರಿಸಿಕೊಂಡಿದ್ದೆ, ಗುಂಡಾ ಜೋಯಿಸರು ತಮ್ಮ ಬಕ್ಕ ತಲೆ ಸವರಿಕೊಂಡು, 'ಮನುಸ್ಮ್ರುತಿ' ತಿರುವಿ ಹಾಕಿದರು. ದೇವ, ಅರ್ಶ, ಪ್ರಾಜಾಪತ್ಯ, ಗಂಧರ್ವ, ಪೈಶಾಚ್ಯ... ಊಂ ಹೂ .. ತನ್ನನ್ನು ತಾನೆ ಮದುವೆ ಆಗೋದು ಎಲ್ಲೂ ಇರ್ಲಿಲ್ಲ. ಆದರೆ, ಕೂಡದು ಅಂತ್ಲೂ ಎಲ್ಲೂ ಇರ್ಲಿಲ್ಲ ಬಿಡಿ. ಇನ್ನು ಅವನದ್ದೆ ಜಾತಕ ಆಗಿರೋದ್ರಿಂದ ಗುಣ-ಗಣ ಸರಿಹೋಗೋದ್ರಲ್ಲಿ ಸಂಶಯವೇ ಇಲ್ಲ. ಸ್ವಗೋತ್ರ ಅಂತು ನಿಜ. ಅದ್ರೆ ಅದಕ್ಕೆ ಏನೋ ಉಪಾಯ,ವ್ಯವಸ್ಥೆ, ಅವಸ್ಥೆ ಮಾಡ್ತಾರೆ ಜೋಯಿಸ್ರು. ಪೆಟ್ಟಿ ಕೆಳಗೆ ಚೆನ್ನಾಗಿಯೇ ತಿನ್ಸಿದಾನೆ ಮೂರ್ತಿ. ಎರ್ಡೂ ಕಡೆ ಅವನೇ ಅಂದ್ರೆ ಸುಮ್ನೇನಾ, ಹೇಳಿ ಮತ್ತೆ.

ಅಂತೂ ವರವರಮೂರ್ತಿ ಲಗ್ನಪತ್ರಿಕೆ ಮುದ್ರಿಸಿಯೇ ಬಿಟ್ಟ. ಅದರ ಮೇಲೆ 'ಮದುವೆಯ ಮಮತೆಯ ಕರೆಯೋಲೆ' ಅಂತ ಬೇರೆ ಉತ್ಸಾಹದಲ್ಲಿ ಬರ್ಸಿದ್ದ. ಮೊದಲ ಸಾಲಿನಲ್ಲಿ 'ಶ್ರೀ ವೇಂಕಟೇಶ್ವರಸ್ವಾಮಿ ಪ್ರಸನ್ನ' ಅಂತ ಇತ್ತು. ಪ್ರಸನ್ನತೆ ವಿಷಯ ನನಗೆ ಗೊತ್ತಿಲ್ಲ, ಆದರೆ ದೇವರ ಮುಖ ಸ್ವಲ್ಪ ಸಣ್ಣ ಆಗಿದ್ದಂತೂ ನಿಜ. ಏಡುಕೊಂಡಲಪ್ಪನ ಫೇಸ್ಕಟ್, ಫಸ್ಟ್ ಟೈಂ ಗಾಬರಿ ಆಗಿರೊ ಹಾಗೆ ಫೀಲಿಂಗು. ಈ ರೀತಿ ಸ್ವವಿವಾಹ ಲಗ್ನಪತ್ರಿಕೆ ಮೇಲೆ ವೆಂಕಪ್ಪನ ಪಟ ಅವತರಿಸಿರೋದು ಇದೇ ಮೊದಲು. ಮೊದಲ ಬಾರಿ ಅಲ್ವಾ; ಹಾಗೆ, ಬೇಸ್ತು ಬಿದ್ದದ್ದ ಬಾಲಾಜಿ. ಮುದ್ರಣ ಮಾಡೋವ್ನು ಒಂದು ಸಣ್ಣ ತಪ್ಪು ಮಾಡಿದ್ದ ಪ್ರಿಂಟಿಂಗ್ನಲ್ಲಿ. 'ಚಿ.ಸೌ.ಹಾ.ಕುಂ.ಶೋ.' ಅಂತ ಒನ್ ಆಫ್ ದ (ಓನ್ಲಿ) ನೇಮ್ ಮುಂದೆ ಹಾಗೆಯೇ ಮರೆತು ಮುದ್ರಿಸಿದ .ಚಾಲಾಕಿ ವರವರ. ಗಮನಿಸಿದವನೇ, ಎರಡು ಹೆಸರು ಮುಂದೆಯೂ 'ಚಿ.ರಾ.' ಎಂದು ಹಾಕಿಸಿದ. ಮುದ್ರಕ ಎರಡು ಬಾರಿ 'ಚಿ.ರಾ' ಕಂಡು, ಕಿಟಾಆಆಆಆಆಆರ್! ಅಂತ ಚೀರುವುದೊಂದು ಬಾಕಿ.

ಆಶಾಡ ಅಮಾವಾಸ್ಯೆಯ ದಿನ ಸರಿಯಾಗಿ ರಾಹುಕಾಲಕ್ಕೆ ಸಲ್ಲುವ ಶುಭ ಕರ್ಕಾಟಕ ಲಗ್ನದಲ್ಲಿ ಮದುವೆ. ಮುಹೂರ್ತಕ್ಕೆ ಮುಂಚೆ ಅಲ್ಲಿ ಕೊಂಚ ಕೋಲಾಹಲ ಏರ್ಪಟ್ಟಿತ್ತು. 'ಕೋಲಾಹಲ' ಅಂದ್ರೆ, ಜನ ಕುಡಿಯುತ್ತಿದ್ದ, ಕೋಲಾ ಮತ್ತು ಹಾಲು ಅಲ್ಲ. ನಿಜವಾದ ಕೋಲಾಹಲ. ಇತ್ತ ವರವರಮೂರ್ತಿ ಗೌರಿ ಪೂಜೆಗೂ ಕೂರಬೇಕು. ಅತ್ತ ಕಾಶಿಯಾತ್ರೆಗೂ ಹೊಗಬೇಕು. ವೇಳೆ ಮೀರ್ತ ಇದೆ ಅಂತ ಶಾಸ್ತ್ರಿಗಳು ಒಂದೇ ಸಮ ಗಲಾಟೆ. ರಾಹುಕಾಲದಲ್ಲಿ ಹುಡುಕಿ ಹುಡುಕಿ ಇಟ್ಟಿರೋ ಸ್ವವಿವಾಹ ವಿಚಿತ್ರ ಲಗ್ನ ಅಂದ್ರೇ ಏನು ಸಾಮಾನ್ಯಾನೇ? ಹೇಗೊ ಮದುವೆ ಆಗೋ ಗೀಳಿನಲ್ಲಿ ವರವರ,ಅಟ್ -ಏ-ಟೈಂ ಗೌರಿ ಪೂಜೆ - ಕಾಶಿಯಾತ್ರೆ ಒಟ್ಟೊಟ್ಟಿಗೆ ಮ್ಯಾನೇಜ್ ಮಾಡಿ, ಹಸೆಮಣೆ ಮೇಲೆ ಬಂದು, ಹಲ್ಲುಗಿಂಜುತ್ತ ಕೂತೇ ಬಿಟ್ಟ. ಕೊಂಡಂಭಟ್ಟ ಶಾಸ್ತ್ರಿಗಳು 'ಮಾಂಗಲ್ಯಂ ತಂತುನಾನೇನಾ' ಅನ್ನೋ ಮಂತ್ರಾನ ತುಸು ತೀಡಿ -- 'ಮಾಂಗಲ್ಯಂ ತನಗೆ ತಾನೇನಾ??' ,ಅಂತ ಪ್ರಶ್ನಾರ್ಥಕ ಚಿನ್ಹೆ ಹಾಕಿ, ವಾಲಗ ಊದಿಸಿಯೇ ಬಿಟ್ಟರು. ಹದಿನಾಲ್ಕು ಸುತ್ತು ಹಾಕಿ ವರವರ 'ಸಪ್ತಪದಿ' ಮುಗಿಸಿದ. ತನ್ನ ತಲೆ ಮೇಲೆ ತಾನೆ ಜೀರಿಗೆ ಬೆಲ್ಲ ಕೂಡಾ ಎರಚಿಕೊಂಡ. ಅವನು ಎರಚಿಕೊಂಡ್ಡಿದ್ದೇ, ಜನ ಮೈ ಪರಚಿ ಕೊಂಡ್ರು. ಅಂತರಪಟದ ಶಾಸ್ತ್ರಕ್ಕೆ ಏನು ಮಾಡೊದು ಅಂತ ತೋಚದೆ 'ಕೊಕ್ಕ್' ಕೊಟ್ರು ಶಾಸ್ತ್ರಿಗಳು.ಮದುವೆಯ ಸುದಿನದಂದು ಅವನ ಸ್ನೇಹಿತರು ಹೊಟ್ಟೆ ಬಿರಿದು ತಿನ್ನುವುದಿರಲಿ, ಹೊಟ್ಟೆ ಬಿರಿಯುವ ಹಾಗೆ ನಕ್ಕರು.

ಮದುವೆ ನಮೂದಿಸಲು ಲಾಯರ್ ಅಯ್ಯಂಗಾರಿ ಬಳಿ ಬಂದರು. ಅಣ್ಣನಾದ ಯಮನನ್ನು ಸೋದರಿ ಯಮಿ ಪರಿಣಯವಾಗುವಂತೆ ಕೇಳಿದ್ದುಂಟು. ಪುರಾಣದಲ್ಲಿ ಪುರಾವೆ ಇದೆ.ಸಾರಂಗ ತನ್ನ ಮಾತ್ರುಸ್ವರೂಪಿಣಿಯನ್ನು ವಿವಾಹವಾಗಲು ಇಚ್ಚಿಸಿದ್ದುಂಟು.ಇತಿಹಾಸದಲ್ಲಿ ದಾಖಲೆ ಇದ್ದಿರಬಹುದು. ಆದರೆ, ಲಾಯರ್ ಅಯ್ಯಂಗಾರಿಗೆ ಒಬ್ಬ ಮನುಷ್ಯ ಪ್ರಾಣಿ, ತನ್ನನ್ನು ತಾನೆ ಮದುವೆ ಆಗಬಹುದು ಅನ್ನೋ ಸಂಗತಿ, ವಿಷಯ, ಆಪ್ಷನ್ನು ಈಗ್ಲೇ ಗೋಚರವಾಗಿದ್ದು. ವೃಥಾ 'ಲಾ ಪಾಯಿಂಟ್' ಹಾಕದೆ ವಿವಾಹ ನಮೂದಿಸಿದರು. ಅಂತು ಮದುವೆ ಮುಗೀತು. ಮಧುಚಂದ್ರಕ್ಕೆ ಅಂತ ಮುನ್ನಾರ್ ಕಡೆ ಪಾದ ಬೆಳೆಸಿದ್ದಾಯ್ತು. ಒಳ್ಳೆ ದೊಡ್ಡ ಹೋಟೆಲ್ ನಲ್ಲಿ, ಡಬ್ಬಲ್ ಬೆಡ್ರೂಂ ಬುಕ್ ಕೂಡಾ ಮಾಡಿದ್ದಾಯ್ತು. ( ಶ್!!! ಯಾವ ಸೌಭಾಗ್ಯಕ್ಕೆ ಅಂತ ಮಾತ್ರ ಕೇಳ ಬೇಡಿ ಪ್ಲೀಸ್.)

ಮದುವೆ ಆಗಿದ್ದೇ ತಡ, ಮರುದಿನದಿಂದ ಪ್ರಜಾವಾಣಿ,ಕನ್ನಡಪ್ರಭ,ವಿಜಯ ಕರ್ನಾಟಕ ಎಲ್ಲ ಪತ್ರಿಕೆಗಳವರು ವರವರನನ್ನು ಸಂದರ್ಶಿಸಿದರು.ಹಾಯ್ ಬೆಂಗಳೂರ್ನಲ್ಲಿ ಸಹಾ 'ನಾನೇ ನನ್ನ ಗಂಡ' ಅಣಕ(ಣ);ಅಲ್ಲ ಅಂಕಣ, ಭುಗಿಲೆಬ್ಬಿಸಿತು. ಒಮ್ಮೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ವರವರ ಇಂತೆಂದನಂತೆ. ಅವನಿಗೆ ತನ್ನ ಅಭಿರುಚಿಗೆ ತಕ್ಕ ಸಂಗಾತಿಯೇ ಬೇಕಿತ್ತು. ಇಚ್ಚೆಯನರಿತು, ವಿಶ್ವಾಸವ ಸಂಪಾದಿಸಿ, ಸಹಸ್ಪಂದಿಸುವ ಒಡನಾಟಕ್ಕೆ ಹಾತೊರೆಯುತ್ತಿದ್ದ. ತನ್ನಲ್ಲಿರುವ ತನ್ನತನ, ತನ್ನನು ಬಿಟ್ಟು ಬೇರೆಲ್ಲೂ ದೊರೆಯದು ಎಂದು ತನ್ನನ್ನು ತಾನೆ ಮದುವೆಯಾದನಂತೆ. ಆದರೆ ಮದುವೆ ಯಾಕೆ ಆಗಬೇಕು? ಹಾಗೆ ತನ್ನ ಒಡನಾಟದಲ್ಲಿ ತಾನೆ ಇದ್ದುಬಿಡಬಹುದಲ್ಲ? ಎಂದು ಪ್ರಶ್ನಿಸಿದರೆ; ವರ್ಣಾಶ್ರಮ ಧರ್ಮ - ಗೃಹಸ್ಥಾ, ವಾನಪ್ರಸ್ಥ ಇನ್ನೂ ಏನೇನೋ ಹೇಳಿ ಸಮಜಾಯಿಷಿ ನೀಡುತ್ತಿದ್ದ. ವಿವಾಹದ ತರುವಾಯ,ಅಂತು ಇಂತು ಆರು ತಿಂಗಳು ಕಳೆಯಿತು. ಕಾಲಕ್ರಮೇಣ ವರವರನಿಗೆ ಪ್ರಕೃತಿದತ್ತವಾಗಿ ಸಂತತಿ ಬೆಳೆಸೋಣವೆನಿಸಿತು.ತನ್ನ ಸಮವಯಸ್ಕರ ಜೀವನ ನೋಡಿದಾಗ ಈ ಹಾತುರಿತ ಇಮ್ಮಡಿಯಾಯಿತು. ಆದರೆ ಸ್ವವಿವಾಹ ಪದ್ದತಿಯಲ್ಲಿ ಹೆರುವುದು ದುಸ್ಸಾಧ್ಯವಾದ ಸಂಗತಿ ಅಲ್ಲವೆ? ಇರಬಹುದೆನೋ. ಅದು ನಮಗೆ ನಿಮಗೆ ಹೇಗೆ ತಿಳಿಯಬೇಕು ಹೇಳಿ. ಈಗ ಉಳಿದದ್ದು ವಿಚ್ಚೀದನ ಮಾತ್ರವೇ. ಅದೊಂದೇ ಉಪಾಯ.

ಮತ್ತೆ ಲಾಯರ್ ಅಯ್ಯಂಗಾರಿ ಮೊರೆ ಹೊಕ್ಕ ವರವರ. 'ಲಾ ಪಾಯಿಂಟ್' ನರಸಿಂಹ ಅಯ್ಯಂಗಾರಿ ವಿಚ್ಛೇದನಕ್ಕೆ ೩ ವಿಧಾನ ಸೂಚಿಸಿದರು. ಒಂದು: ಗಂಡ - ಹೆಂಡಿರು ವರ್ಷ ಪರ್ಯಂತ ದೂರವಿರಬೇಕು. ಇಲ್ಲ, ಇಬ್ಬರ ನಡುವೆ ಹಿಂಸೆ ದೌರ್ಜನ್ಯ ನಡೆಯಬೇಕು. ಮೂರನೆಯದು ವ್ಯಭಿಚಾರ. ತನ್ನಿಂದ ತಾನೆ ದೂರವಿರಲಾರದು. ವಿಚ್ಚೀದನದ ಸಲುವಾಗಿ ಅವನಿಗೆ ಅವನೇ ಹಿಂಸಿಸಿ ಕೊಳ್ಳಲು ಮನಸ್ಸು ಒಪ್ಪಲಿಲ್ಲ. ಉಳಿದಿದ್ದು ವ್ಯಭಿಚಾರ ಒಂದೇ. ಆದ್ರೆ ಸಭ್ಯಸ್ಥ ಮೂರ್ತಿ, ಬಡಪಾಯಿಗೆ ಇವೆಲ್ಲ ತಿಳಿಯೋಲ್ಲ. ಅನುಭವ ಅಂತು ಕೇಳಲೇ ಬೇಡಿ, ಮೊದಲೇ ಇಲ್ಲ. ಈಗೇನು ಮಾಡೋದು? ಹುಣ್ಣಿಮೆ ದಿನ, ಪೋಲಿ ಪಾಪಣ್ಣನ ಜೊತೆ, ವರವರ ಪೇಟೆ ಆಚೆ ಮಂದಾರವತಿ ಮನೆ ಸೇರೊ ಸಂದರ್ಭಾನೂ ಬಂತು. ಅಲ್ಲಿ ನಡೆದ ಘಟನಾವಳಿಗಳ ಆಧಾರದ ಮೇಲೆ, ವಿಚ್ಚೀದನ ಕೂಡ ಭರ್ಜರಿಯಾಗಿ ಸಿಕ್ತು. ಈ ಸ್ವ-ವಿಚ್ಚೇದನದಿಂದ ಹಾಲು ಕುಡಿದಷ್ಟು ತೃಪ್ತಿ ಆಗಿದ್ದು ವರವರನ ತಾಯಿಗೆ ಮತ್ತು ಮಂದಾರವತಿಗೆ. ವರವರನನ್ನು ಗೌರವದಿಂದ ಕಂಡು, ಸಹಸ್ಪಂದಿಸಿ ವೇಶ್ಯೆಯಾದರೂ ವಿಶ್ವಾಸ ಗಳಿಸಿದ ಮಂದಾರವತಿ ಅವನನ್ನು (ಮರು)ವಿವಾಹವಾದಳು.

ಹರಕೆ ತೀರಿಸಲು, ಮುದ್ದಾದ ಅವಳಿ-ಜವಳಿ ಮೊಮ್ಮಕ್ಕಳನ್ನು ಹೊತ್ತು, ಮಂದಾರವತಿಯ ಅತ್ತೆ ತಿರುಪತಿಗೆ ಹೊರಟು ನಿಂತಿದ್ದರು. ಅಂದು, ಲಗ್ನಪತ್ರಿಕೆಯ ಮೇಲೆ ಗಂಟು ಮುಖ ಹಾಕಿಕೊಂಡಿದ್ದ ವೆಂಕಣ್ಣನ ಚಹರೆ ಈಗ ಸ್ವಲ್ಪ ಚೇತರಿಸಿದೆ. ತಿರುಮಲೆಯೆಡೆಗೆ ಮುಖಮಾಡಿ ನಿಂತಿದ್ದ ಬಸ್ಸಿನ ಮುಂಭಾಗದಲ್ಲಿದ್ದ ಪಟದಲ್ಲಿ, ಮಂದಸ್ಮಿತನಾಗಿ ಮಂದಾರವತಿಯ ಮಕ್ಕಳನ್ನು ಶ್ರೀನಿವಾಸ ಸ್ವಾಮಿ ಹರಸುತ್ತಿದ್ದರು. ಏಡುಕೊಂಡಲವಾಡ ವೆಂಕಟರಮಣ ಗೋವಿಂದ, ಗೋವಿಂದ!!!

Credits and Courtesy:

Based on a short story, 'The Man Who Married Himself' by Charlie Fish. The characters and certain scenarios have been indianised to induce contextual humour. The Plot and theme, however are based on the original work.

Translated on June 14 2007.

Friday, October 19, 2007

ಹೊಸ ಇತಿಹಾಸ

ದಂಪತಿಗಳಿಬ್ಬರು ಮಾರ್ಗಮಧ್ಯದಲ್ಲಿ ದಣಿವಾರಿಸಿಕೊಳ್ಳಲು ನಿಂತರು. ಊರಿಂದ ಊರಿಗೆ ಅಲೆಮಾರಿಗಳಾಗಿ ಅಲೆದು ಅಲೆದು ಬೇಸತ್ತು ಬಸವಳಿದ್ದಿದ್ದರು. ಬೊಳು ರಸ್ತೆಯ ಬದಿಯಲ್ಲಿದ್ದ ಗೋಶಾಲೆಯಲ್ಲಿಯೇ ಈ ರಾತ್ರಿ ಕಳೆಯ ಬೇಕು.ಆಕೆಗೆ ನೋವು ಕಾಣಿಸಿಕೊಳ್ಳವ ಸೂಚನೆಗಳು ಕಂಡವು. ಎಲ್ಲವೂ ಪೂರ್ವನಿರ್ಧಾರಿತವೆಂಬಂತೆ. ಪ್ರಸವಕ್ಕೆ ಇದುವೇ ಸೂಕ್ತ ದೇಶ ಕಾಲ ಸಂಯೋಗವೆನೋ. ನಭಃಮಂಡಲದಲ್ಲಿ ಕಾಂತಿಯುತವಾಗಿ ಹೊಳೆಯುತ್ತಿರುವ ತಾರಾದೀಪದ ಬೆಳಕಿನ ತೇಜದಲ್ಲಿ ಆಕೆ ಚೀರುತ್ತಿದ ಹೆದ್ದೆರೆಯ ಗದ್ದಲದಲ್ಲಿ, ಸಣ್ಣ ಕಂದಮ್ಮನ ಪ್ರಥಮ ಜೀವಾತ್ಮಾಭಿವ್ಯಕ್ತಿ! ತಂದೆ ಗಾಬರಿಯಿಂದ ನವಜಾತ ಶಿಶುವಿನತ್ತ ನೋಡಿದ. ಈ ಬಾರಿ ಮತ್ತೆ ಅದೇ ತಪ್ಪು ನಡೆಯಲು ಅನುವು ಮಾಡಿಕೊಡುವುದಿಲ್ಲ. ಬಿಸಿ ಕಾಯಿಸಲೆಂದು ಹೊಸೆದ್ದಿದ್ದ ಸಮಿತ್ತುಗಳಲ್ಲಿ ಎರಡನ್ನು ತೆಗೆದು, ಮಂಡಲಾಕಾರದಲ್ಲಿ ಪೋಣಿಸಿ, ಮಗುವನ್ನು ಶಿಲುಬೆಗೆ ಏರಿಸಿಯೇ ತೀರಿದ. ಬಾಂಧವರೆಲ್ಲ ಒಂದೆಡೆ ಸೇರಿ, ಗೋ-ಕರುಗಳೊಡನೆ ಮುಂದಿನ ಊರಿನತ್ತ ಪಾದಬೆಳೆಸಿದರು.


Based on a (very?) Short Story by João Anzanello Carrascoza
Title: Sign of These Times.
Translated from the Portuguese by Renato Rezende
Adapted to Kannada: Your's truly ಶ್ರೀ ಸಾಮಾನ್ಯ.
.

Sunday, October 14, 2007

ಮರಳು ಮತ್ತು ನೊರೆ
Sand and Foam by Kahlil Gibran

I am forever walking upon these shores,
Betwixt the sand and the foam,
The high tide will erase my foot-prints,
And the wind will blow away the foam.
But the sea and the shore will remain Forever


ಶ್ರೀ ಸಾಮಾನ್ಯನ ಭಾವಾನುವಾದ:

ಕಡಲ ತೀರದನವರತದ ನಿತ್ಯಚಾರಣ
ಮರಳಮಾರಿಗೆ ನೊರೆಯ ಮಂದಸಿಂಚನ
ಹೆದ್ದೆರೆಯು ಹೀರಿರಲು ಹೆಜ್ಜೆಯಾ ಗುರುತು
ತಂಪೆಲರು ತಾಗುತಲೆ ತೆರೆಯು ಹಿಂಜರಿತು

ಕಡಲಿನೊಡಲಿಗೆ ತೀರದೊಲುಮೆಯ ಸ್ಪಂದನ
ಇದುವೆ ನಿತ್ಯ ನೂತನ. ಚಿರಂತನ! ಜೀವನ!

ಮೂಲ: ಜಿಬ್ರಾನ್
- Translated by Srikanth V on April 05 2007.
Photos clicked on the morning of Jan 26 2008,Palm Beach,Florida

ಒಪ್ಪಿಗೆ

ಒಮ್ಮೆಮ್ಮೆ ಹೀಗೆ.
ಒಪ್ಪಲು ಬಲವಾದ
ಕಾರಣವಿಲ್ಲದಿದ್ದರೂ,
ಒಪ್ಪದಿರಲು
ಸಹಾ
ಕಾರಣಗಳಿಲ್ಲದೆ,
ಕಡೆಗೆ ಒಪ್ಪಿಯೇ ಬಿಡುತ್ತೇವೆ.
--

ಸುಮ್ನೆ ಹಾಗೆ, ತಲೆ ಕೆಟ್ಟಾಗ ಗೀಚಿದ್ದು.

Friday, October 12, 2007

ನನ್ನರಸಿ ನರಸಿ

ನನ್ನರಸಿ,
ನರಸಿಯನರಸಿ
ಅರಿತವಳ ಪರಿಯ
ನಾ ವರಿಸಿ,
ಅವಳಾಂತರ್ಯವನಾವರಿಸಿ
ಅರಿಸಿನದೆ ಸಿಂಗರಿಸಿ
ಸಿಂಧೂರವ ಹಣೆಗಿರಿಸಿ
ನನ್ನರಗಿಣಿಯನರೆಘಳಿಗೆ
ಅಗಲದೆಲೆ ನೆನೆನೆನೆದು
ಅಂದದಲಿ ಮುದದ
ಮಕರಂದ ಹಂದರದೆ
ನಿಂದು ನಲಿಯುವ
ಸುಖ ಸ್ವಾರ್ಥ ನನದೈ.
----

Scribbled and dribbled on 12-October-2007 14:10 to (around) 15:50. San Jose, CA.

ನಾಡಹಬ್ಬ

ಎಲ್ಲರಿಗೂ ನವರಾತ್ರಿ ಶುಭಾಶಯಗಳು.

--------------------------------
ಕವನ : ನಾಡಹಬ್ಬ
ಬರ್ದಿದ್ದು : ಶ್ರೀಕಾಂತ್
--------------------------------

ಚೆಲುವ ನಾಡ,ನಾಡ ಹಬ್ಬ ಬಂದಿತಿದೊ ಗೆಳೆಯ
ಸಿಂಗರಿಸಿಹ ಸಾಲುಗೊಂಬೆ ಸ್ವರ್ಗವೆನಿಸೆ ಇಳೆಯ

ಸಂಗೀತದ ಸಿರಿಯ ತವರು,ಕಾಣು ಕಲೆಯ ನೆಲೆಯ
ಮುಸ್ಸಂಜೆಯ ಮಧುರ ಸ್ವರದ ಮಂದ್ರಶೃತಿಯ ಅಲೆಯ

ಮಲ್ಲರಾಳೊ ಮಣ್ಣಮಹಿಮೆ ಮೆರೆಯೊ ವೀರ ವಲಯ
ಅಂಬಾರಿಯ ಅಂದದಕರಿ ಆನಂದದ ನಿಲಯ

ಅರಮನೆಯದು ಅಮಿತ ಪ್ರಭೆಯ ಚೆಲ್ಲೊ ಅರಸರಾಲಯ
ತಾಯ ಕೃಪೆಯ ಕೊರು ತೊಡಿಸಿ, ಹೊನ್ನುಡಿಗಳ ಮಾಲೆಯ
----------------------------------

Sometime during Dasara 2006 ಬರ್ದಿದ್ದು.'ತಾಯೇ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ', ರೀತಿ ಈ ಮೇಲಿನ ಕವನವನ್ನು ಹಾಡಿದರೆ,ಗೇಯ ಗುಣ ಗೋಚರ ಆಗತ್ತೆ.

Sunday, October 07, 2007

ಸ್ವಾತಿ ತಿರುನಾಳ್ ಮಹಾರಾಜರ ನವರಾತ್ರಿ ಕೃತಿಗಳು
ಇನ್ನು ಕೆಲವೇ ದಿನಗಳಲ್ಲಿ ದಸರ. ನವರಾತ್ರಿ ಸಂಭ್ರಮವೆಂದರೆ ನಮ್ಮೆಲ್ಲರಿಗೂ ನೆನಪಿಗೆ ಬರುವುದು ಮೈಸೂರು ದಸರೆಯ ವಿಜೃಂಬಣೆ. ಅದೇ ರೀತಿ ನೆರೆಯ ಕೇರಳದಲ್ಲಿ ತಿರುವನಂತಪುರದ ರಜಾಶ್ರಯದಲ್ಲಿ ಸಂಭ್ರಮದಿಂದ ನವರಾತ್ರಿ ಆಚರಿಸುವ ಐತಿಹ್ಯ, ಪ್ರತೀತಿ ಇದೆ. ಮಹಾರಾಜ ಸ್ವಾತಿ ತಿರುನಾಳರು ತ್ರಿಮೂರ್ತಿಗಳ ಸಮಕಾಲೀನರು.ಶ್ರೀಯುತರು ಬಹುಭಾಷಾ ಪರಿಣಿತರು ಮತ್ತು ಸಂಗೀತ ವಿದ್ವಾಂಸರು. ನವರಾತ್ರಿಯ ಪ್ರತಿ ಸಂಜೆಯೂ ಅರಮನೆಯ ಉತ್ಸವದಲ್ಲಿ ಒಂದು ಕೃತಿ ಹಾಡಲು ಅನುವಾಗುವಂತೆ ವಿಶಿಷ್ಟ ಕೃತಿಗಳನ್ನು ರಚಿಸಿ ಒಂದು ಪರಂಪರೆಗೆ ಬುನಾದಿ ಹಾಡಿದರು.ಈ ನವರಾತ್ರಿ ಕೃತಿಗಳ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ.

ಕಂಬ ರಾಮಾಯಣ ಬರೆದ ತಮಿಳು ಕವಿ ಕಂಬರು, ಪದ್ಮನಾಭಪುರದಲ್ಲಿನ ಸರಸ್ವತಿ ದೇವಿಯನ್ನು ಅರಾಧಿಸುತ್ತಿದ್ದರಂತೆ. ಅವರು ಅನಾರೋಗ್ಯದಿಂದ ಬಳಲುತ್ತಿದಾಗ, ಚೇರ ದೊರೆಯ ಬಳಿ ಬಂದು, ಪದ್ಮನಾಭಪುರದ ದೇವಳದಲ್ಲಿ ಪ್ರತಿ ಸಂವತ್ಸರವೂ ನವರಾತ್ರಿ ವಿಷೇಶ ಪೂಜೆ ನಡೆಸಿಕೊಡಬೇಕಾಗಿ ಮೊರೆ ಹೊಕ್ಕರಂತೆ. ಅಂದಿನಿಂದ ಪ್ರತಿ ವರ್ಷವೂ ನವರಾತ್ರಿ ಉತ್ಸವ ನಡೆಯುತ್ತಿದೆ. ಮಹಾರಾಜಾ ಸ್ವಾತಿ ತಿರುನಾಳರ ಕಾಲದಲ್ಲಿ ರಾಜಧಾನಿಯು ಪದ್ಮನಾಭಪುರದಿಂದ ತಿರುವನಂತಪುರಕ್ಕೆ ವರ್ಗವಾಯಿತು. ಕವಿ ಕಂಬರಿಗೆ ಕೊಟ್ಟಮಾತು ತಪ್ಪದಂತೆ ನವರಾತ್ರಿ ಉತ್ಸವ ಸಮಯದಲ್ಲಿ ಪದ್ಮನಾಭಪುರದ ಮೂಲವಿಗ್ರಹವನ್ನು ತಿರುವನಂತಪುರಕ್ಕೆ ಸಂಭ್ರಮದ ಮೆರವಣಿಗೆಯಲ್ಲಿ ಕರೆತಂದು ನವರಾತ್ರಿ ಉತ್ಸವ ನಡೆಸಲಾಗುತ್ತದೆ. ಮೂಲಮುರ್ತಿಯನ್ನು ಪದ್ಮನಾಭಪುರದಿಂದ ತರುವುದರಿಂದ ಅಲ್ಲಿ ಪ್ರಾತಿನಿಧಿಕ ದೀಪವನ್ನು ಇರಿಸಲಾಗುತ್ತದೆ.

೧. ದೇವಿ ಜಗತ್ ಜನನಿ - ಶಂಕರಾಭರಣಂ - ಆದಿತಾಳ
೨. ಪಾಹಿಮಾಂ ಶ್ರೀ ವಾಗೀಶ್ವರಿ - ಕಲ್ಯಾಣಿ - ಆದಿತಾಳ
೩. ದೇವಿ ಪಾವನೆ - ಸಾವೇರಿ - ಆದಿತಾಳ
೪. ಭಾರತಿ ಮಾಮವ - ತೋಡಿ - ಆದಿತಾಳ
೫. ಜನನಿ ಮಮವಮೇಯೆ - ಭೈರವಿ - ಮಿಶ್ರ ಛಾಪು ತಾಳ
೬. ಸರೋರುಹಾಸನ ಜಾಯೆ - ಪಂತುವಾರಳಿ - ಆದಿತಾಳ
೭. ಜನನಿ ಪಾಹಿ - ಶುದ್ಧಸಾವೇರಿ - ಮಿಶ್ರ ಛಾಪು ತಾಳ
೮. ಪಾಹಿ ಜನನಿ ಸಂತಾರಂ - ನಟ್ಟಕುರಂಜಿ - ಮಿಶ್ರ ಛಾಪು ತಾಳ
೯. ಪಾಹಿ ಪರ್ವತ ನಂದಿನಿ - ಆರಭಿ - ಆದಿತಾಳ

ದೀಕ್ಷಿತರು ತಮ್ಮ ನವಾವರಣ ಕೃತಿಗಳಲ್ಲಿ ಎಂಟು ವಿಭಕ್ತಿ ಪ್ರತ್ಯಯಗಳನ್ನು ಉಪಯೋಗಿಸಿದರೆ,ತಿರುನಾಳರು ನವರಾತ್ರಿ ಕೃತಿಗಳಲ್ಲಿ ಸಂಭೋದನಾ ವಿಭಕ್ತಿ ಮತ್ತು ಪ್ರಥಮಾ ವಿಭಕ್ತಿಯನ್ನು ಮಾತ್ರ ಬಳಸಿರುತ್ತಾರೆ.ಮೊದಲ ಆರು ಕೃತಿಗಳು ಚೌಕ ಕಾಲದವುಗಳಾಗಿದ್ದು, ಉಳಿದ ಮೂರು ಮಧ್ಯಮ ಗತಿಯನ್ನು ಅನುಸರಿಸುತ್ತವೆ.ಒಂಬತ್ತು ದಿನಗಳು ನಡೆಯುವ ದೇವಿ ಪೂಜೆಯಲ್ಲಿ ಮೊದಲ ಮೂರು ದಿನ ದೇವಿ ಸರಸ್ವತಿ ಸ್ವರೂಪಿಣಿಯಾದರೆ, ತದನಂತರ ಮೂರು ದಿನಗಳು ಲಕ್ಷ್ಮಿ ಆರಾಧನೆ. ಕೊನೆಯ ಮೂರು ದಿನ ದುರ್ಗಾವಂದನೆ. ಈ ಕೃತಿಗಳನ್ನು ದೇವಿಗೆ ಅರ್ಪಿಸಲಾಗುತ್ತದೆ. ಪೂರ್ವದಲ್ಲಿ ಮುಲ್ಲಾಮುಡು ಭಾಗವತರ ವಂಶಸ್ತರು ಮಾತ್ರ ಈ ಹಾಡುಗಳನ್ನು ಮೂಲ ಉತ್ಸವದಲ್ಲಿ ಹಾಡುತಿದ್ದರು. ಮುಖ್ಯ ಸಂಗೀತ ವಿದ್ವಾಂಸರು ಮುಂದಾಳತ್ವ ವಹಿಸಿದರೂ, ಹಲವಾರು ವಿದ್ವಾಂಸರು ರಾಗಾಲಾಪನೆ, ನೆರವಲ್, ಕಲ್ಪನಾಸ್ವರಗಳು ಹೇಗೆ ಮುಂದುವರಿಸುವ ವಾಡಿಕೆ ಇದೆ. ತಿರುನಾಳರ ಕೃತಿಗಳು ಈ ದಿನ ಜನ ಮನದಲ್ಲಿ ನೆಲೆಸಬೇಕಾದರೆ ಮುಲ್ಲಮುಡು ಭಾಗವತರ ಕೊಡುಗೆ ಅತ್ಯಮೂಲ್ಯ. ಕಾಲಕ್ರಮೇಣ ಇತರ ಘನವಿದ್ವಾಂಸರನ್ನು ಆಹ್ವಾನಿಸಿ ನವರಾತ್ರಿ ಕೃತಿಗಳನ್ನು ಹಾಡುವ ಪ್ರತೀತಿ ಪ್ರಾರಂಭವಾಯಿತು. ಸಂಗೀತ ಕಚೇರಿಯು ಸಂಜೆ ೬.೦೦ ರಿಂದ ೮.೩೦ ಕಾಲದಲ್ಲಿ ನಡೆದು, ವಿಷೇಶವೇನೆಂದರೆ ಅಂತ್ಯದಲ್ಲಿ ಕರತಾಡನವಿರುವಿದಿಲ್ಲ.ದೇವಿಗೆ ಅರ್ಪಣೆಯೆಂಬ ಭಾವದಲ್ಲಿ ಹಾಡುವುದರಿಂದ ಇತರೆ ಗೋಷ್ಠಿಗಳ ಹಾಗೆ ಕರತಾಡನ ಕೂಡದು.---
http://www.sangeethapriya.org/~gvr/navarathri-swathithirunal/
---

Saturday, October 06, 2007

ಶ್ರೀಕೃಷ್ಣಾಯನು ನಾಮಮಂತ್ರ

ರಚನೆ: ಕೈವಾರ ಅಮರ ನಾರೇಯಣ ಅವರ ತೆಲುಗು ಕೃತಿ.
ಹಾಡುಗಾರಿಕೆ: ಮಂಗಳಂಪಲ್ಲಿ ಡಾ.ಬಾಲಮುರಳೀಕೃಷ್ಣ.
ರಾಗ: ? ( ಭಕ್ತಿರಂಜನಿ)

---
ಶ್ರೀಕೃಷ್ಣಾಯನು ನಾಮಮಂತ್ರ

ಶ್ರೀಕೃಷ್ಣಾಯನು ನಾಮಮಂತ್ರ ರುಚಿ ಸಿದ್ಧಿಂಚುಟನಾಕೇನ್ನಟಿಕೋ |
ಶ್ರೀಗುರುಪಾದಾಬ್ಜಂಬುಲು ಮತಿಲೋ ಸ್ಥಿರಮುಗ ನೆಲಿಚೇದೆನ್ನಟಿಕೋ ||

ಮರವಕ ಮಾಧವು ಮಹಿಮಲು ಪೊಗಡೆ ಮರ್ಮಮುದೆಲೆಸೇದೆನ್ನಟಿಕೋ
ಹರಿಹರಿಹರಿ ಹರಿನಾಮಾಮ್ರುತ ಪಾನಮುಚೆಸೆದೆನ್ನಟಿಕೋ ||

ಕಮಲಾಕ್ಷುನಿ ನಾ ಕನ್ನುಲು ಚಲ್ಲಗ ಕನಿ ಸೇವಿಂಚೇದೆನ್ನಟಿಕೋ
ಲಕ್ಷಣಮುಗ ಶ್ರೀಲಕ್ಷ್ಮೀರಮಣುನಿ ದಾಸುಡನೈಯ್ಯೇದೆನ್ನಟಿಕೋ ||

ಪಂಚಾಕ್ಷರಿ ಮಂತ್ರಮು ಮತಿಲೋ ಪಡಿಯಿಂಚುಟನಾಕೆನ್ನಟಿಕೋ
ಆದಿಮೂರ್ತಿ ಶ್ರೀ ಅಮರ ನಾರೇಯಣ ಭಕ್ತುಡನ್ನಯ್ಯೇದೆನ್ನಟಿಕೋ ||

------

ಮಮ ಹೃದಯೇ ವಿಹರ ದಯಾಳೋ
ಮಮ ಹೃದಯೇ ವಿಹರ ದಯಾಳೋ

ರಾಗ: ರೀತಿಗೌಳ
ತಾಳ: ಖಂಡ ತ್ರಿಪುಟತಾಳ
ರಚನೆ: ಮೈಸೂರು ವಾಸುದೇವಾಚಾರ್ಯರು.
ಹಾಡುಗಾರಿಕೆ: ಸಂಗೀತ ಕಲಾನಿಧಿ ವಿದ್ವಾನ್ ಶ್ರೀ ಆರ್.ಕೆ. ಶ್ರೀಕಂಠನ್
ರಾಗಭಾವ: ಕರುಣಾರಸ ಜನಕ ರಾಗ.

ಮಮ ಹೃದಯೇ ವಿಹರ ದಯಾಳೋ, ಕೃಷ್ಣ
ಮಂಧರಧರ ಗೋವಿಂದ ಮುಕುಂದ || ಪ ||

ಮಂಥದಾಮ ಸುವಿರಾಜಿತ ಶ್ರೀಕೃಷ್ಣ
ಮಂಧಹಾಸ ವದನಾರವಿಂದ ನಯನಾ ||

ಯದುಕುಲ ವಾರಿಧಿ ಪೂರ್ಣಚಂದ್ರ
ವಿಧುರವಂದಿತ ಪಾದ ಗುಣಸಾಂದ್ರ ||

ಮದನಜನಕ ಶ್ರೀಕರ ಮಹಾನುಭಾವ
ಸದಯ ಹೃದಯ ಶ್ರೀವಾಸುದೇವ ಸದಾ ||

---
URL : http://www.esnips.com/doc/6335b378-3b48-4e9a-aeea-dbcada4eb22e/mamahRudayE.mp3
---

Get this widget | Track details | eSnips Social DNA