Sunday, September 26, 2010

ರಾಶೊಮಾನ್ ಮತ್ತಿತರ ಕಥೆಗಳು
ನ್ಯಾಯಾಧೀಶರು ಮರಕಡಿಯುವವನನ್ನು ಪ್ರಶ್ನಿಸಿದಾಗ ಕೊಟ್ಟ ಹೇಳಿಕೆ:

ಹೌದು ಮಹಾಸ್ವಾಮಿ. ಖಂಡಿತವಾಗಿಯೂ ನಾನೆ ಮೃತದೇಹವನ್ನು ನೋಡಿದ್ದು. ಬೆಳಗಿನ ಸಮಯ ಎಂದಿನಂತೆ ಮರಕಡಿಯಲು ಹೋದಾಗ ಮೃತದೇಹವನ್ನು ಆ ಗಿರಿ ಕಂದರದ ತೊಪ್ಪಲ್ಲಲ್ಲಿ, ಒಂದು ಪೊದೆಯಲ್ಲಿ ನೋಡಿದೆ. ಸ್ಥಳ ಅಂತೀರಾ? ಯಾಮಶಿನ ರಸ್ತೆಯಿಂದ ಸುಮಾರು ೧೫೦ ಅಂಗುಲ ದೂರವಿದ್ದಿರಬಹುದು. ದಾರಿಗೆ ತುಸು ಪಕ್ಕದಲ್ಲಿನ ಬಿದಿರು ಪೊದೆ ಅದು.

ಹೆಣವು ನೀಲಿ ನಿಲುವಂಗಿ ಕಿಮೋನೊ ಮತ್ತು ಕ್ಯೋಟೊ ಶೈಲಿಯ ಮುದುರಿದ ತೋಪಿಯನ್ನುಟ್ಟು ಅಂಗಾತ ಮಲಗಿತ್ತು. ಒಂದೇ ಕತ್ತಿಯ ಸೀಳು ಎದೆಯನ್ನು ಸೀಳಿ ಘಾತಿಸಿತ್ತು. ಅತ್ತಿತ್ತ ಬಿದ್ದಿದ್ದ ಬಿದುರಿನ ತರುಗೆಲೆಗಳು ರಕ್ತಸಿಕ್ತವಾಗಿ ಕೆಂಪನೆ ಹುವಾಡಿಸಿತ್ತು. ಇಲ್ಲ, ರಕ್ತ ಇನ್ನು ಸುರಿಯುತ್ತಿರಲಿಲ್ಲ. ಗಾಯ ಆರಿದ್ದಿರಬೇಕು. ನಾನು ಬಂದದ್ದನು ಗಮನಿಸದೆ ನೊಣ ಒಂದು ಅಲ್ಲೆ ಅಂಟಿ ಕುಳಿತಿತ್ತು. ಅಲ್ಲಿ ಖಡ್ಗ ಇತ್ಯಾದಿ ಎನಾದ್ರು ಇತ್ತು ಅಂತೀರ? ಎಲ್ಲಿ ಆ ರೀತಿ ಯಾವುದೂ ಇರಲಿಲ್ಲ. ಇಲ್ಲ ಮತ್ತಿನ್ನೇನು ಇರಲಿಲ್ಲ ಮಹಾಸ್ವಾಮಿ. ಅಲ್ಲಿ ಮರದ ಬುಡದಲ್ಲಿ ಒಂದು ಹಗ್ಗವನ್ನು ಮಾತ್ರ ಗಮನಿಸಿದೆ. ಮತ್ತೆ.... ಹಗ್ಗದವನ್ನು ಬಿಟ್ಟರೆ ಅಲ್ಲಿ ಒಂದು ಬಾಚಣಿಗೆ ನೋಡಿದೆ. ಅಷ್ಟೆ ಅಲ್ಲಿದ್ದದ್ದು. ಬಹುಶಃ ಕೊಲೆಯಾಗುವಿದಕ್ಕೆ ಮುಂಚೆ ಹೊರಾಡಿ ಒದ್ದಾಡಿರ ಬೇಕು, ಯಾಕೆಂದ್ರೆ ಅಲ್ಲಿದ್ದ ಗರಿಕೆ-ಹುಲ್ಲುಗಳು, ಕೆಳಗೆ ಬಿದ್ದ ಬಿದುರಿನ ಎಲೆಗಳು ಎಲ್ಲವೂ ಚದುರಿದ್ದವು.

"ಹತ್ತಿರದಲ್ಲಿ ಕುದುರೇ ಏನಾದ್ರು?"
ಇಲ್ಲ ಸ್ವಾಮಿ. ಮನುಷ್ಯನು ಹೋಗುವುದೇ ಕಷ್ಟ ಅಲ್ಲಿ. ಇನ್ನು ಕುದುರೆ ಎಲ್ಲಿಂದ ಬರಬೇಕು.

ನ್ಯಾಯಾಧೀಶರಿಗೆ ಬೌದ್ಧ ಪರಿವ್ರಾಜಕನು ಕೊಟ್ಟ ಹೇಳಿಕೆ:

ಹೊತ್ತು? ನೆನ್ನೆ ಮಧ್ಯಾಹ್ನದ ವೇಳೆ ಸ್ವಾಮಿ. ಆ ನತದೃಶ್ಟ ಸೇಕಿಯಾಮದಿಂದ ಯಾಮಶಿನ ಹಾದಿ ಹಿಡಿದ್ದಿದ್ದ. ಸೇಕಿಯಾಮ ಕಡೆಗೆ ಕುದುರೆ ಮೇಲೆ ಸವಾರಿಮಾಡುತ್ತ, ಒಬ್ಬಳು ಹೆಂಗಸಿನ ಜೊತೆ ಸಾಗಿದ್ದ. ಈಗ ಅವಳು ಅವನ ಪತ್ನಿ ಎಂಬುದು ತಿಳಿದಿದೆ. ಸೆರಗು ಅಡ್ಡ ಹಾಯ್ದದ್ದರಿಂದ ಮುಖ ಕಾಣಿಸುತ್ತಿರಲ್ಲಿಲ್ಲ. ನನಗೆ ಅವಳ ಬಟ್ಟೆಯ ರಂಗೊಂದೆ ಕಂಡದ್ದು -- ಕಂದು ಬಣ್ಣದ ನಿಲುವಂಗಿ. ನೀಳವಾದ ಕೇಸರ ಗಳುಳ್ಳ ಅಶ್ವಾರೂಢಳಗಿದ್ದಳು. ಆ ಮಹಿಳೆಯ ಎತ್ತರ? ಒಹ್! ಸುಮಾರು ನಾಲ್ಕು ಅಡಿ ಐದು ಅಂಗುಲ. ನಾನು ಬೌದ್ಧ ಭಿಕ್ಷುವಾಗಿರುವುದರಿಂದ ಅವಳ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಆ ಮನುಷ್ಯ ಖಡ್ಗಧರಿಸಿ ಸಶಸ್ತ್ರನಾಗಿರದೆ ಬಿಲ್ಲು ಬಾಣಗಳನ್ನು ಸಹ ಹೊತ್ತಿದ್ದ. ಮತ್ತೆ ಹೇಳುವುದಾದರೆ ಸರಿಸುಮಾರು ಇಪ್ಪತ್ತು ಬಿಲ್ಲಿಗಳನ್ನು ತನ್ನ ಬತ್ತಳಿಕೆಯಲ್ಲಿ ತುಂಬಿದ್ದ.
ಆತನು ಇಂತಹ ದುರ್ವಿಧಿಯನ್ನು ಸಂಧಿಸುತ್ತಾನೆಂದು ನಾನು ಎಣಿಸಿರಲಿಲ್ಲ. ನಿಜಕ್ಕು ಮಾನವ ಜೀವನ ಬೆಳಗಿನ ಮಂಜಿನಷ್ಟೆ ಸಾಶ್ವತ, ಮಿಂಚಿನ ಬಳ್ಳಿಯಷ್ಟೆ ಚಿರಾಯು. ಅವನ ಮೇಲಿನ ನನ್ನ ಸಹಾನುಭೂತಿಗೆ ಪದಗಳು ಸಾಕಾಗುವುದಿಲ್ಲ.