Showing posts with label ಭಾವಾನುವಾದ. Show all posts
Showing posts with label ಭಾವಾನುವಾದ. Show all posts

Saturday, January 30, 2010

ಓ ಸೂರ್ಯಕಾಂತಿ!

ವಿಲ್ಯಂ ಬ್ಲೇಕ್ ಕವಿಯ Ah! Sunflower ಕವಿತೆಯನ್ನು ನಾನು ಕನ್ನಡದಲ್ಲಿ ಕೊಲೆ ಮಾಡಿರುವ ಬಗೆ.

ಓ ಸೂರ್ಯಕಾಂತಿ! ಕಾಲನ ಅಧೀನನೆ.
ಸೂರ್ಯ ಸೋಪಾನದ ಜಾಡು ಹಿಡಿದು:
ಆ ಸುಮಧುರ ಸುವರ್ಣ ಸಗ್ಗಕೆ
ಲಗ್ಗೆ ಇಟ್ಟು ಪಯಣಿಗರು ಯಾತ್ರೆ ಮುಗಿಸುವಲ್ಲಿಗೆ

ಆಸೆಗಳ ಸಂಕೋಲೆಯಿಂದ ಬಸವಳಿದ ಜವ್ವನನು
ತುಹಿನದಿಂದಾವರಿಸಿ ಬಾಡಿದ ನವಸುಮವು
ಸುಪ್ತಾವಸ್ಥೆಯಿಂದ ಸಿಡಿದೆದ್ದು ಹಾತೊರೆದು ಹೊರಡುತಿವೆ
ಎನ್ನ ಸೂರ್ಯಕಾಂತಿ ಚಲಿಸುವಲ್ಲಿಗೆ!


Ah ! Sun-flower weary of time.
Who countest the steps of the Sun:
Seeking after that sweet golden clime
Where the travellers journey is done

Where the Youth pined away with desire,
And the pale Virgin shrouded in snow:
Arise from their graves and aspire,
Where my Sun-flower wishes to go!


- William Blake : Songs of Experience in 1794.

Friday, April 10, 2009

ರಸಪ್ರವಾಹ

ಬಿರ್ಕಾಶಾ ದೇಶದ ರಾಜ ಸಭೆಗೆ ಲಾವಣ್ಯವತಿಯೂ ಬಹುಶೃತಳೂ ಆದ ಸ್ವರ್ಣಮಾಲಿನಿ ಎಂಬ ನರ್ತಕಿಯು ತನ್ನ ಚಾರಣ ವೃಂದದೊಂದಿಗೆ ಆಗಮಿಸಿದಳು. ರಾಜಕುಮಾರನ ಸಮಕ್ಷಮದಲ್ಲಿ ವೀಣಾಭೇರಿ ಮೃದಂಗಾದಿಗಳ ಗೋಷ್ಠಿಗಂಗೆಯಲ್ಲಿ ಲೀನವಾಗಿ, ಲಾಸ್ಯವೇ ತಾನೆಂಬಂತೆ ನರ್ತಿಸಿದಳು. ಸ್ವರ್ಣಮಾಲಿನಿ ಜ್ವಾಲಮಾಲೆಯಾಗಿ ಜ್ವಾಲೆಯ ನರ್ತನ, ನಕ್ಷತ್ರಾಕಾಶಗಳ ನರ್ತನ -- ಹೀಗೆ ಎಲ್ಲವನ್ನೂ ಚಿತ್ರಬಿಡಿಸಿದಂತೆ ಕಣ್ಣುಕಟ್ಟುವ ಹಾಗೆ ಚಿತ್ರಿಸಿದಳು.ತದನಂತರ ರಾಜಕುಮಾರನ ಬಳಿ ಬಂದು ತಲೆಬಾಗಿ ನಮಸ್ಕರಿಸಿದಳು. ರಾಜಕುಮಾರನು ಇಂತೆಂದನು " ನರ್ತನನಿಧಿಯೇ -- ಲಾಸ್ಯ ಲಾವಣ್ಯಗಳ ಪುತ್ರಿಯಂತಿರುವ ನಿನಗೆ ಈ ಕಲೆಯು ಹೇಗೆ ಒಲಿಯಿತು. ಎಲ್ಲಿಂದ ಅವತರಿಸಿತು? ಪಂಚಭೂತಗಳನ್ನೂ ನಿನ್ನ ಹಾವಭಾವಗಳಲ್ಲಿಯೇ ಹೇಗೆ ಅಡಕವಾಗಿಟ್ಟಿರುವೆ?" ಇದರ ಗುಟ್ಟೇನೆಂದು ಕೆಳಲಾಗಿ, ಸ್ವರ್ಣಮಾಲಿನಿಯು ಇಂತೆಂದಳು -- "ಮಹಾಸ್ವಾಮಿ, ನಿಮ್ಮ ಸವಾಲುಗಳಿಗೆ ನನ್ನ ಬಳಿ ಸಮಂಜಸ ಉತ್ತರಗಳು ಇಲ್ಲ. ಆದರೆ ನನಗೆ ತಿಳಿದಿರುವುದು ಇಷ್ಟೆ: ಒಬ್ಬ ದಾರ್ಶನಿಕನ ಆತ್ಮ ಹೇಗೆ ಶಿರೋಭಾಗದಲ್ಲಿ ಸ್ಥಿತವಾಗಿರುತ್ತದೆಯೋ, ಕಾವ್ಯಾತ್ಮನಾದ ಕವಿಯ ಆತ್ಮವು ಹ್ರುದ್ಭಾಗದಲ್ಲಿ ನೆಲೆಸಿರುತ್ತದೆಯೋ, ಗಾಯಕಮಾನ್ಯರ ಸರ್ವಸ್ವವೂ ಕಂಠದಲ್ಲಿ ಸ್ಥಾಪಿತವಾಗಿದೆಯೋ,ಹಾಗೆ ನರ್ತಕನ ಆತ್ಮವು ಅಣು ಅಣುವಿನಲ್ಲೂ ರಸಪ್ರವಾಹವಾಗಿ ಸಂಚರಿಸುತ್ತದೆ."

---
** ಭಾವಾನುವಾದ Adapted from Kahlil Gibran.

Sunday, March 22, 2009

ನನ್ನ ಉಡುಪು ನಿನ್ನದು...ನಿನ್ನ ಉಡುಪು ನನ್ನದು....

****
ಪ್ರಥಮ ಪರಾರ್ಧದ ಕಡೆಯ ಕಲ್ಪದಲ್ಲಿನ ಮಧ್ಯದ ಮನ್ವಂತರದ ಒಂದು ದಿನ. ಸೌಂದರ್ಯದ ಅಭಿಮಾನಿ ದೇವತೆ ಮತ್ತು ಕುರೂಪದ ಅಭಿಮಾನಿದೇವತೆಗಳು ನೈಮಿಶಾರಣ್ಯದ ಸುವಿಶಾಲವಾದ ಸರೋವರದ ಬಳಿ ಕೂಟ ಏರ್ಪಡಿಸಿದರು. ಪುಶ್ಕಳವಾಗಿ ತಿಂದು-ಕುಡಿದು ಮೀಯಲೆಂದು ನಿರ್ವಸ್ತ್ರರಾಗಿ ಪುಶ್ಪ ಸರೋವರಕ್ಕೆ ಧುಮುಕಿದರು. ಮೂರು ಯಾಮಗಳ ಕಾಲ ಜಲಕ್ರೇಡೆಯನಾಡಿದರು. ಹೀಗಿರಲು, ಕುರೂಪದ ಅಭಿಮಾನಿದೇವತೆ ಕಪಟದಿಂದ ಹೊರಬಂದು ಅಲ್ಲೆ ಪೊದೆಯ ಬಳಿ ಕಳಚಿಬಿದ್ದಿದ್ದ ಸೌಂದರ್ಯ ದೇವತೆಯ ಪೋಶಾಕುಗಳನ್ನು ಧರಿಸಿ ನಿಂತಲ್ಲೆ ಮಾಯವಾಯಿತು. ಸೌಂದರ್ಯದೇವತೆಯು ಪುಷ್ಪಸರೋವರ ದಿಂದ ಹೊರಬಂದು ನೋಡಿದಾಗ ಸ್ವವಸ್ತ್ರಗಳು ಕಾಣೆಯಾಗಿದ್ದವು. ನಿರ್ವಸ್ತ್ರಳಾಗಿ ನಾಚಿಕೆಯಿಂದ ಅಲ್ಲೆ ಬಿದ್ದದ್ದ ಕುರೂಪಿಯ ಬಟ್ಟೆಗಳನ್ನೆ ಉಟ್ಟು ತೆರಳಿದಳು. ತದನಂತರ ಈ ದಿನದ ವರೆಗೂ ಲೋಕದಲ್ಲಿ ಎಷ್ಟೋ ಮೂಢಯೋನಿಜರು ತೋರಿಕೆಯ ಸೌಂದರ್ಯನ್ನೆ ನಿಜವೆಂದೂ -- ಹೊರನೋಟಕ್ಕೆ ಸುಂದರವಲ್ಲದ್ದರ ಆಂತರಿಕ ಸೌಂದರ್ಯವನ್ನು ಅರಿಯದೆ ವರ್ತಿಸುತ್ತಿರುವರು.
****

An Adaptation from Kahlil Gibran's "The Wanderer" - His Parables and His Sayings