Saturday, October 20, 2007

ಪದಬಂಧ

ಹೊರಗಡೆ ರಣ ಬಿಸಿಲು. ಫ್ಯಾನ್ ಹಾಕೋಣ ಅಂದ್ರೆ ಕರೆಂಟು ಬೇರೆ ಇಲ್ಲ. ಏನು ಸುಡುಗಾಡೋ ಏನೋ? ಜೊತೆಗೆ ಇವಳು ಬೇರೆ. ನನ್ನ ಅರ್ಧಾಂಗಿ. ಕೋಡಂಗಿ. ಎಡಬಿಡಂಗಿ. ಇವಳ್ನ ಕಂಡ್ರೆ ನಂಗೆ ಮೈ ಎಲ್ಲ ಉರಿ.ಆದ್ರೆ ಏನು ಮಾಡೋದು, ಕರ್ಮ. ಇವಳ ಜೊತೆನೇ ಬದುಕು. ಇವಳ ಜೊತೆನೇ ಸಾವು.

ಜೀನಾ ಯಹಾಂ, ಮರ್ನಾ ಯಹಾಂ; ಇಸ್ ಕೆ ಶಿವ ಶಿವಾ ಜಾನಾ ಕಹಾಂ.

ಇಬ್ಬರೂ ಕೂತುಕೊಂಡು ಪದಬಂಧ ಆಡ್ತಾ ಇದೀವಿ. ಐವತ್ತೆರಡು ವಯಸ್ಸು. ಲಾಸ್ಟ್ ಇಯರ್ರೇ ವಾಲಂಟರಿ ತೊಗೊಂಡೆ. ಅದೇ ರಿಟೈರ್ಮೆಂಟು. ಈಗ ಮಾಡೋಕ್ಕೆ ಏನು ಘನಂಧಾರಿ ಕೆಲಸ ಇಲ್ಲ. ಹಾಂ... ಇವಳ ಜೊತೆ ಪದಬಂಧ ಆಡೋದು ಬಿಟ್ಟು. ಕಳೆದ ಗುರುವಾರದಿಂದ ಆ ಹಾಲಪ್ಪ ಕರಿಯ -- ಅವನನ್ನು ಬಿಟ್ಟು, ಇವಳನ್ನು ಬಿಟ್ಟು, ಬೇರೆ ಯಾರ್ನೂ ನಾನು ಮಾತಾಡ್ಸೇ ಇಲ್ಲ ಅಂತೀನಿ. ಒಂದು ಕಾಲ್ದಲ್ಲಿ ಗುಬ್ಬಿ ವೀರಣ್ಣನವರ ಕಂಪ್ನಿನಲ್ಲಿ ಜೋರ್ , ಜೋರ್ ನಾಟ್ಕಾ ಆಡ್ತಾ ಇದ್ದೆ. ವರ್ಷಕ್ಕೆ ಏರಡು ಸಾರ್ತಿ ಜೋಗದ ಗುಂಡಿಗೆ ಟ್ರಿಪ್ಪು. ಹೇಗೆಲ್ಲ ಮಜ ಮಾಡ್ತಾ ಇದ್ದೆ. ಅದು ಒಂದು ಕಾಲ. ಈಗೇನಿದೆ? ಈ ಮೂದೇವಿನ ಬಿಟ್ಟು. ಥೂ! ಥೂ!

ತರಂಗ ಯುಗಾದಿ ವಿಶೇಷಾಂಕ ಈ ಬಾರಿ. ಸಾಕಷ್ಟು ದೊಡ್ಡ ಪದಬಂದ ಬಂದಿದೆ. ನಾನು, ಇವಳು ಮಧುಚಂದ್ರಕ್ಕೆ ಮೈಲಾರ ಬೆಟ್ಟಕ್ಕೆ ಹೋಗಿದ್ವಲ್ಲ , ಆವಗ್ಲಿಂದ್ಲೂ ಹೀಗೆ ಜೋಡಿಯಾಗಿ ಪದಬಂಧ ಬಿಡಿಸೋ ಆಟ ಆಡ್ತೀವಿ. ಬೇರೆ ಏನೇ ಹೇಳಿ, ಮುಂಡೇದು ಭಾಷಾ ನಾ ಮಾತ್ರ ಸಕ್ಕತ್ತಾಗಿ ಇದೆ ಇವಳಿಗೆ. ಪದಬಂಧನ ಪಾದರಸ ಬಿಡಿಸಿ ಹಾಕಿದ ಹಾಗೆ ಬಿಡಿಸಿ ಬಿಸಾಕ್ತಾಳೆ. ಅವಳು ಪಾದರಸ, ನಾನು ಹರಳೆಣ್ಣೆ. ಹೂಂ...

ಮೊದಲನೇ ಪದ. ಏಡದಿಂದ ಬಲಕ್ಕೆ. ಕ್ಲೂ ಬಂದು : 'ಹಬ್ಬ' ೩ ಪದಗಳಿರೋದು. ಥಟ್ ಅಂತ ಬರೆದೆ, 'ಯುಗಾದಿ' ಅಂತ. ಭೇಷ! ಭೇಷ!!! ನನ್ನ ಬೆನ್ನು ನಾನೇ ತಟ್ಕೋ ಬೇಕು. ಅಲ್ಲಾ, ಯುಗಾದಿ ಹಬ್ಬದ ವಿಷೇಶಾಂಕ. ಇನೇನು ಪದ ಇರುತ್ತೆ ಹೇಳಿ? ಇದೇ ಪದ ಸರಿ. ಯುಗಾದಿ.

ಹಾಂ.. ಈಗ ಅವಳ ಸರದಿ. ಏನು ಆಡ್ಥಾಳೋ ನೋಡೋಣ.
ಮೇಲಿನಿಂದ ಕೆಳಕ್ಕೆ. ೪ ಪದ. ಜೋಡಿ ಪದ ಅಂತ ಇದೆ. 'ಮಾಟಮಂತ್ರ' ಅಂತ ಬರೆದಿದಾಳೆ. ಏನು ಪಾಡೋ ಏನೋ . ಸರಿ ಇರ್ಬೇಕು ಬಿಡಿ. ಪದ, ಲೆಕ್ಕ ಏನೊ ತುಂಬುತ್ತೆ, ಸರಿಹೋಗುತ್ತೆ . ಮತ್ತೆ ನನ್ನ ಸರದಿ. ಏನಪ್ಪ ತುಂಬೋದು?? ೨ ಪದ. ಏಡದಿಂದ ಬಲಕ್ಕೆ. ಕೀಟ ಅಂತ ಸೂಚಿಸ್ತಾ ಇದೆ. 'ದುಂಬಿ' ಅಂತ ಬರ್ದೆ ನಾನು. ಅರೇ ! ನಾನು ದುಂಬಿ ಅಂತ ಬರ್ಯೋ ಹಾಗಿಲ್ಲ.ಅಷ್ಟು ಬೇಗ ಇಷ್ಟು ದೊಡ್ಡ ದುಂಬಿ ಮನೆ ಒಳಗೆ ಬರೋದಾ?. ದುಶ್ಯಂತ ಶಾಕುಂತಲೆನ ದುಂಬಿಯಿಂದ ಪಾರು ಮಾಡೋ ಹಾಗೆ, ನಾನು ವೀರಾವೇಷದಿಂದ ದುಂಬಿಯನ್ನು ಹುರಿದುಂಬಿಸಿದೆ. ಅಯ್ಯೋ. ಹೊರಗಟ್ಟಿದೆ.(ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಣ್ಣಾವ್ರು ಹಾಗೆ ಅಲ್ವಾ, ಜಯಪ್ರಧಾ ನ ಸೇವ್ ಮಾಡಿದ್ದು..ಹೆ ಹೆ)

ಮತ್ತೆ ಆಟ ಮುಂದುವರಿಸುತ್ತ. ಮೇಲಿನಿಂದ ಕೆಳಕ್ಕೆ. 'ಯುಗಾದಿಯ' 'ಗಾ' ಜೊತೆಗೆ 'ಯ' ಜೋಡಿಸಿ, 'ಗಾಯ' ಅಂತ ಬರೆದಳು. ಅಯ್ಯೋ !! ಕುರ್ಚಿಗೆ ನನ್ನ ಕಿರುಬೆರಳು ಸಿಕ್ಕಿಕೊಂಡು....ಅಯ್ಯೋ ಅಯ್ಯೋ...ರಕ್ತ,ಗಾಯ,ನೋವು! ನಿಜವಾಗಿಯೂ 'ಗಾಯ' ಆಯಿತು. ಬಾಯ್ನಲ್ಲಿ ಸುಮ್ನೆ ಕಚ್ಚುತ್ತ ಇದ್ದ ಪೆನ್ಸಿಲ್ ತೆಗೆದು, ಬೆರಳು ಇಟ್ಟುಕೊಂಡೆ. ನನಗೆ ಇದೊಂದು ದುರಭ್ಯಾಸ.. ಕೈನಲ್ಲಿ ಪೆನ್ಸಿಲ್ ಇದ್ರೆ, ಆಟೊಮ್ಯಾಟಿಕಾಗಿ ಬಾಯಲ್ಲಿ ಹೋಗುತ್ತೆ. ಇವಳು ಒಂದು ಬ್ಯಾಂಡೇಜ್ ಏನಾದ್ರು ಮಾಡ್ಥಾಳೇನೋ ಅಂತ ನೋಡ್ಥೀನಿ. ಇಲ್ಲ.. ಇಲ್ಲವೇ ಇಲ್ಲ. ಅವಳ ಪಾಡಿಗೆ ಅವಳು 'ಪದಬಂಧ' ಆಡ್ತಾ ಇದಾಳೆ.

'ಮಾಟಮಂತ್ರ' ಪದದಿಂದ 'ಮಾ' ಜೊತೆಗೆ 'ವುಬೇವು' ಜೋಡಿಸಿ - 'ಮಾವುಬೇವು' ಅಂತ ಮುಂದಿನ ಪದಜೋಡಿಸಿದೆ. 'ವು' ಬರೆದು ಇನ್ನು ಕೈ ಪುಸ್ತಕದ ಮೇಲೆ ಇದ್ದೇ ಇದೆ, ಅಷ್ಟು ಬೇಗ ಬಾಗಿಲಿಗೆ ಸಡಿಲವಾಗಿ ಕಟ್ಟಿದ್ದ ಮಾವುಬೇವಿನ ಗೊಂಚಲು ಕೆಳಗೆಬೀಳೋದೆ??? ಇರಿ ಇರಿ. ಇಲ್ಲಿ ಏನೊ ಕರಾಮತ್ತು ನಡೆದಿದೆ. ಪುಟುಗೋಸಿ ಪದಗಳಿಗೆ ಹೇಗೆ ಇಂಥ ಶಕ್ತಿ? ಇವತ್ತು 'ಯುಗಾದಿ', ಮನೆ ಒಳಗೆ 'ದುಂಬಿ' ಬಂದಿತ್ತು.ನನಗೆ 'ಗಾಯ' ಆಯಿತು.' ತೋರಣ ಕಟ್ಟಿದ್ದ 'ಮಾವು-ಬೇವು' ಕಳಚಿ ಬಿದ್ದವು. ಪದಬಂದದಲ್ಲಿ ಏನು ಬರೆದರೂ ಅದು ವಾಸ್ತವದಲ್ಲಿ ನಡೆಯುತ್ತಿದೆಯೆ? ಏನಾದ್ರು 'ಮಾಟಮಂತ್ರ' ನಾ?

'ಬೇವು' ನಲ್ಲಿನ, 'ವು' ಗೆ 'ಸಾ', ಸೇರಿಸಿ ಈಕೆ ನಕ್ಕಳು. ಒಳ್ಳೆ ಆಪ್ತಮಿತ್ರ ಚಿತ್ರದ ನಾಗಮಣಿ ಹಾಗೆ, ಕೆಟ್ - ಕೆಟ್ ದಾಗಿ ದೊಡ್ಡ ಕಣ್ಣು ಬಿಟ್ಟು ದೆವ್ವ ನಕ್ಕಹಾಗೆ ನಗ್ತಾ ಇದಾಳೆ. ಅಯ್ಯೋ , ಬಾಯಿ ನಲ್ಲಿ ಇದ್ದ ಪೆನ್ಸಿಲ್ ಗಂಟಲಿಗೆ ಚುಚ್ಚಿಕೊಂಡಿದೆ. ಉಸಿರು ಕಟ್ಟುತಾ ಇದೆ. ನೀರು, ನೀರು.. ನೀ..

---
Credits and Courtesy:

Based on a short story, 'Death by Scrabble' by Charlie Fish. The characters and certain scenarios have been indianised to induce contextual humour. The Plot and theme, however are based on the original work.

1 comment:

Roopa said...

Hi Srikanth,

I find it a bit difficult to read the kannada in this way, is there a workaround for this?

Regards,
Roopa