Tuesday, January 30, 2007

ಕಾಳಿದಾಸನ ಕಗ್ಗೊಲೆ !

ಚುಟುಕದ ಹೆಸರು ಕಾಳಿದಾಸನ ಕಗ್ಗೊಲೆ ! - Glimpse of nonsense verse in kannaDa !

ಓ ನನ್ನ ಪ್ರಿಯೆ,
ನೀನೆ ನನ್ನ ಜೀವಾಳ,
ಅಂತರಾಳ
ದಾಸವಾಳ,
ಮಡಿವಾಳ,
ಎಲ್ಲವೂ ನೀನೆ ಪ್ರಿಯೆ!

ನೀನೆ ನನ್ನ ಸಾಧನೆಯ ಸೆಲೆ,
ಬಾಳಿನ ನೆಲೆ
ಕಟ್ಟಿಗೆ ಒಲೆ
ಕಾಳಿದಾಸನ ಕಗ್ಗೊಲೆ!
ಎಲ್ಲವೂ ನೀನೆ ಪ್ರಿಯೆ!


^^ ಟೈಂ ಪಾಸ್ ಗೆ ಬರ್ದಿದ್ದು! ..no meaning! no nothing ! ..hey , wait! actually last line has meaning..., - lots , infact.
'ಎಲ್ಲವೂ ನೀನೆ ಪ್ರಿಯೆ!' - I mean it.

.

Wednesday, January 24, 2007

ದಿಗ್ದಿಗಂತದ ಕಡೆಗೆ !!!

ಶಕ್ತನಿಗೆ ಶಾಶ್ವತಿಯು ಒಮ್ಮೆ ಶ್ಯಾಮಲೆಯಾಗಿ ತೋರಿದರೆ ಮಗದೊಮ್ಮೆ ಸಾಧನೆಯಾಗಿ ಅವತರಿಸುತ್ತಾಳೆ. ಸಾದನಾಕಾಂಕ್ಷಿಯಾದ ಶಕ್ತನು ತನ್ನ ಶಾಶ್ವತಿ ಜೊತೆಗಿದ್ದರೆ, ಸಾಧನೆಯ ದಿಗ್ದಿಗಂತದ ತನಕ ಪಯಣ ಬೆಳೆಸುವೆನು ಎಂದು ಘೊಷಿಸುತಾನೆ. ಬದಿಗೆ ಶ್ಯಾಮಲೆಯ ನಗು ಮೊಗವು ಒಂದಿದ್ದರೆ ಸಾಕು , ಶಕ್ತನು ದಣಿವೆನದೆ ದುಡಿದು ಬಾಳಹಾದಿಯನ್ನು ಹದವಾದ ಪುಷ್ಪಪಥವಾಗಿಸುತ್ತಾನಂತೆ.
ಇದೇ ಭಾವವನ್ನು ಶಕ್ತನು ಇಂತೆಂದು ಶಾಶ್ವತಿಯಲ್ಲಿ ತೋಡಿಕೊಳ್ಳುತಾನೆ

ಶಕ್ತ :

ನಡೆವ ಬಾ , ಕೈ ಹಿಡಿದು
ದಿಗ್ದಿಗಂತದ ಕಡೆಗೆ..
ಎಡೆಬಿಡದೆ ನಾ ನಡೆವೆ
ದಣಿವಿರದೆ, ಒಲವೇ!

ಮುದದ ನಗುಮೊಗವಿರಲು,
ಬದಿಗೆ ಸಖಿ ನೀನಿರಲು,
ಹಾದಿಯದು ಹದದ
ಸುಮಪಥವೆಂಬೆ , ಚೆಲುವೆ!

Saturday, January 20, 2007

ಕಾಯಾರೋಹಣೇಶಂ

ಭಕ್ತನ ತಪಸ್ಸಿಗೆ ಒಲಿದ ಮುಕ್ಕಣನು, ಆಲಿಂಗಿಸಿ ಅಭಯ ತೊರಿದ ಕಾರಣ ನಾಗಪಟ್ಟಣದ ಮಹೇಶ್ವರಸ್ವಾಮಿಗೆ ಕಾಯಾರೋಹಣೇಶ್ವರ ಎಂದು ಕರೆಯುವ ವಾಡಿಕೆ , ಐತಿಹ್ಯ.ಮುತ್ತುಸ್ವಾಮಿ ದೀಕ್ಷಿತರು ನಾಗಪಟ್ಟಣದ ಕ್ಷೇತ್ರಪುರಾಣ ವಿವರಿಸುತ್ತ ಕರ್ನಾಟಕ ದೇವಗಾಂಧಾರ ರಾಗದಲ್ಲಿ ಕಾಯಾರೋಹಣೇಶ್ವರನನ್ನು ಕೊಂಡಾಡಿದ್ದಾರೆ.

ಸತ್ಯೋಜಾತ,ಅಘೋರ,ತತ್ಪುರುಷ,ಈಶಾನಂ,ವಾಮದೇವಸಂಯುಕ್ತ ಪಂಚಾನನ ಸ್ವಾಮಿಯ ವರ್ಣನೆ ಭಕ್ತಿಪೂರ್ವಕವಾಗಿಯೂ,ಕಲಿ ಕಲ್ಮಷನಾಶೋಪಕಾರಿಯೂ ಆಗಿದೆ.ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'.

ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'

ರಚನೆ: ಗುರುವರ್ಯ ಶ್ರೀಮುತ್ತುಸ್ವಾಮಿ ದೀಕ್ಷಿತರು.
ರಾಗ: ಕರ್ನಾಟಕ ದೇವಗಾಂಧಾರ - ೨೨ ನೇ ಮೇಳಕರ್ತ ಖರಹರಪ್ರಿಯ ಜನ್ಯ.
ತಾಳ : ರೂಪಕ.

ಕಾಯಾರೋಹಣೇಶಂ ಭಜರೇ ಮಾನಸ
ಕಲಿಕಲ್ಮಷಾಪಹಂ ಶಿವರಾಜಧಾನಿ ಕ್ಷೇತ್ರಸ್ಥಿತಂ |ಪ |

ಭಯಾಪಹಂ ದಿಕ್ಪಾಲಾಕಾಧಿ ವಿನುತ ಮಹೇಶ್ವರಂ
ಮಾಯಾಮಯ ಜಗದಾಧಾರಂ ಗುರುಗುಹೋಪಚಾರಂ |ಅನು|

ನೀಲಾಯತಾಕ್ಷಿ ಮನೊಲ್ಲಾಸ ಕಾರಣಂ
ನಿತ್ಯ ಶುದ್ಧ ಸತ್ವಗುಣಂ ಭುಕ್ತಿ ಮುಕ್ತಿ ಪ್ರಧ ನಿಪುಣಂ
ಪಾಲಿತ ಭಕ್ತಂ ಪಂಚಾನನಂ ಪ್ರಣತ ಗಜಾನನಂ
ಬಾಲಚಂದ್ರ ಶೇಖರ ಭಾವಪಾಷಮೊಚನಂ ತ್ರಿನಯನಂ |ಚ|

ಶ್ರೀ ಗುರುಗುಹಾರ್ಪಣಮಸ್ತು ||

.

Tuesday, January 16, 2007

ಸ್ತಭ್ದ

ಶಕ್ತ :

ನೀಲಿ ಭಾನು ನಿಂತ ಮೇಘ
ಜೀವ ಯಾನ ಸ್ತಭ್ದ ವೇಗ

ತುಂಬು ಪ್ರೀತಿ ನಿಂತ ರೀತಿ
ತಡೆಯಲಿಂತು ನನ್ನ ಗೆಳತಿ

ಮೋಡ ಬಿರಿದು ಮಳೆಯು ಸುರಿದು
ಜೀವ ಬಿಂದು ಧರಣಿ ಮಿಂದು

ನದಿಯು ಕಡಲ ಬೆರೆವುದೇ ?
ನಮ್ಮ ಪ್ರಣಯ ಫಲಿಪುದೇ?

--

ಶಾಶ್ವತಿಯು ಶಕ್ತನ ಪ್ರೇಮವನ್ನು ಅಲ್ಲಗೆಳದಿರಲಿಲ್ಲ ... ಆದರೆ , ಶಕ್ತನಿಗೆ ಒಪ್ಪಿಗೆಯ ಸ್ಪಷ್ಟನುಡಿಯೂ ದೊರೆತಿರಲಿಲ್ಲ.ಒಪ್ಪಿಗೆಯ ಅಪ್ಪುಗೆ ಇನ್ನೂ ದೊರೆಯದ್ದಿದ್ದ ಪ್ರಿಯತಮನಿಗೆ ತನ್ನ ಪ್ರೇಮದ ಪಾವಿತ್ರ್ಯತೆಯ ಬಗ್ಗೆ ಸಂಪೂರ್ಣ ನಂಬಿಕೆ. ಪ್ರೇಮಾಭಿಸಾರಿಕೆಯ ಪ್ರಸಂಗದ ಮುಂಚಿತ ಕಳೆಯಬೇಕಿರುವ ನೀರವ ಸಮಯವನ್ನು ಶಕ್ತನು -- 'ಸ್ಥಭ್ದ' -- ಎಂದು ಬಣ್ಣಿಸುತ್ತಾನೆ. ತನ್ನ ಜೀವನವೆಂಬ ನೀಲಾಕಾಶದಲ್ಲಿ , ಸ್ಥಭ್ದವಾಗಿ ನಿಂತ ಮೇಘದ ರೀತಿ ತೋರುತ್ತಿತ್ತು ಆ ಸಮಯ. ಆದರೆ ತುಂಬು ಪ್ರೀತಿಯನ್ನು ಶಾಶ್ವತಿಯು ತಡೆಯಲಾರಳು. ಮೋಡ ಬಿರಿದು , ಪ್ರೇಮಾಮೃತವರ್ಶಿಣಿ ಭೋರ್ಗರೆದು , ವಸುಂಧರೆಯನ್ನು ತಣಿಸಿ, ಪ್ರಿಯತಮೆಯ ಹೃದಯದಿಂದ ಪ್ರೇಮದ ಹೊನಲು ಹರಿದು , ಸಾಗರ ಸಮಾನವಾದ ತನ್ನ ಪ್ರಣಯಾಂಬುಧಿಯನ್ನು ಸೇರುವುದು ಎಂದು ಶಕ್ತನು ಈ ಸ್ವಗತದಲ್ಲಿ ಹೇಳ ಬಯಸಿದ್ದಾನೆ.


^^ ಕಾಲ್ಪನಿಕ ಅಷ್ಟೆ :)

Sunday, January 14, 2007

ಜಗದಾನಂದಕಾರಕ

ಸದ್ಗುಗುರು ಶ್ರೀ ತ್ಯಾಗರಾಜಸ್ವಾಮಿ ವಿರಚಿತ ನಾಟ ರಾಗದ ಘನಪಂಚರತ್ನಕೃತಿ 'ಜಗದಾನಂದಕಾರಕ' ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೇರುಕೃತಿ. ನಾದೋಪಾಸನೆಯಿಂದ ಬ್ರಹ್ಮಸ್ವರೂಪದ ಸಾಕ್ಷಾತ್ಕಾರಕ್ಕೆ ಅಣುವಾಗುವಂತೆ ತ್ಯಾಗಬ್ರಹ್ಮರು ಕೃತಿರಚನೆ ಮಾಡಿ ಪಾಮರರಿಗೆ ಮೋಕ್ಷಪ್ರಧ ಸುಲಭಮಾರ್ಗ ತೋರಿಸಿಕೊಟ್ಟಿದ್ದಾರೆ. ಜಗದಾನಂದಕಾರಕದ ಬ್ರಹ್ಮಾನಂದದ ಸಾತ್ವಿಕಾಲೆಗಳಲ್ಲಿ ಸಾಕಷ್ಟು ಬಾರಿ ಮಿಂದರೂ ನನಗೆ ಇದರ ಸಗುಣಭಕ್ತಿ ಸ್ವರೂಪದ ಅರಿವಾಗಿರಲಿಲ್ಲ. ರಾಮ ಸೇವಾ ಕೈಂಕರ್ಯದಲ್ಲಿ ತೊಡಗಿರುವ ಸಜ್ಜನರೊಬ್ಬರು ನನಗೆ ಇದರ ಅರಿವು ಮಾಡಿಕೊಟ್ಟರು. ಮೇಲ್ನೋಟಕ್ಕೆ ಕಾಣದ ಸ್ವಾರಸ್ಯಕರವಾದ ವಿಷಯ ಇಂತಿದೆ.

ಹತ್ತು ಚರಣಗಳುಳ್ಳ ಈ ಕೃತಿಯ ಪ್ರತಿ ಸಾಲನ್ನು ಬಿಡಿಸಿ , ಪದಪುಂಜಗಳನ್ನು ಜೋಡಿಸಿದರೆ ಆಷ್ಟ್ಟೋತ್ತರ ಶತನಾಮಾವಳಿಯು ಅಡಕವಾಗಿರುವುದು ಗೋಚರವಾಗುವುದು !!!

ಓಂ ಜಗದಾನಂದಕಾರಕಾಯ ನಮಃ
ಓಂ ಜಯ ಜಾನಕಿ ಪ್ರಾಣನಾಥಯ ನಮಃ
ಓಂ ಗಗನಾಧಿಪಸತ್ಕುಲಜಾಯ ನಮಃ .... ಇತ್ಯಾದಿ.

ಹೀಗೆ , ನಾದೋಪಾಸನ ಸಂಪ್ರದಾಯದ ನಿರ್ಗುಣಬ್ರಹ್ಮಾರಾಧನೆ ಒಂದು ಆಯಾಮವಾದರೆ , ಆಷ್ಟ್ಟೋತ್ತರ ನಾಮಸಂಕೀರ್ತನ ಒಳಗೊಂಡ ಸಗುಣಬ್ರಹ್ಮ ಸ್ವರೂಪದ ಬಣ್ಣನೆ ಇನ್ನೊಂದೆಡೆ. ಮಾಹತ್ಮರಾದ ತ್ಯಾಗಬ್ರಹ್ಮರ ಕ್ರಿತಿಗಳು ಹೀಗೆಯೆ; ಎಷ್ಟು ಬಾರಿ ಕೇಳಿದರೂ ಒಂದು ಹೊಸ ಆಯಾಮ ತಿಳಿದುಬರುತ್ತದೆ.

.

Get this widget | Track details | eSnips Social DNA

Friday, January 12, 2007

ಕನಸು .. ಕಾರ್ಮುಗಿಲು ...

ಬಾಂದಳದ ಆಯದಲಿ ಕಾರಿರುಳ ಗವಸು
ಪರಿವೆ ಪರಧಿಯ ಮೀರಿ ಮರುಗಿಹುದು ಮನಸು

ತರಣಿಗೊದಗಿದ ಗ್ರಹಣ ಪಟಲವಂಬರದಿ
ಪದುಳ ಕ್ಷೀಣಿಸುತಿಹುದು ವರವಿಲ್ಲ ಮನದಿ

ಬಾಳಿನೊಗಟೆಯ ಘಾತಿಸಲಾಗದಾ ಧುರೆಯೋ
ಕ್ಷಿತಿಕಂಪದೆಲರಲ್ಲಿ ಸಿಲುಕಿರುವ ಧರೆಯೋ

ಮನದ ಎಳಸಿಕೆ ವಿಲಯ ವಿಧಿಯ ನಿರ್ಘಾತ
ಮಿಸುಕು ಜೀವಿತಕಿನ್ನು ಹೊಂಗನಸು ಶೋಣಿತ

ಭವರೋಗ ಭೇಷಜವೆ ಗರಲವಾರಿಧಿಯಾಗೆ
ಮುಕುರ ಮೂರ್ಚೂರಾಯ್ತು ಬರಡಾಯ್ತು ಒಳಿತೆಸಗೆ
--

ಟಿಪ್ಪಣಿ :

ಸನ್ಮಾರ್ಗದರ್ಶಿಗಳು ,ಹಿರಿಯರು ಆದ ತ.ವಿ.ಶ್ರೀ ಅವರು 'ಕನಸು.. ಕಾರ್ಮುಗಿಲು..' ಪ್ರಯತ್ನಕ್ಕೆ ನನ್ನ ಟಿಪ್ಪಣಿ ಜೋಡಿಸಿ , ಬ್ಲಾಗಿಸಬೇಕೆಂದು ಆಗ್ನಾಪಿಸಿದರು. ಇಂತಿದೆ ನನ್ನ ಮಾತು - ಕಥೆ , ಈ ನನ್ನ ಕಿರು ಪ್ರಯತ್ನದ ಬಗ್ಗೆ :

'ಕನಸು..ಕಾರ್ಮುಗಿಲು..' - - ಈ ಪದ್ಯದಲ್ಲಿ ನೊಂದ ಮನವನ್ನು ಪ್ರಳಯಕಾಲದ ಆಗಸಕ್ಕೆ ಹೋಲಿಸಲಾಗಿದೆ. ಆಕಾಶದ ಉದ್ದಗಲಕ್ಕೂ ಕಾರುತ್ತಿರುವ ಇರುಳು ಪ್ರಳಯ ಕಾಲದಲ್ಲಿ ವ್ಯಾಪಿಸಿದ ಹಾಗೆ , ನೊಂದ ಮನವನ್ನು ನೊವು ವ್ಯಾಪಿಸಿದೆ. ಗವಸು ಎಂದರೆ ಹೋದಿಕೆ. ಮುಖ ಮತ್ತು ಶಿರೋಭಾಗವನ್ನು ಹೊದ್ದು ಮಲಗಿದ ರೀತಿ , ಮನವನ್ನು ನೊವು ಮುಚ್ಚಿದೆ.ಗ್ರಹಣಗ್ರಸ್ತ ಸೂರ್ಯನನ್ನು ರಾಹು-ಕೇತುಗಳು ಕ್ರಮೇಣ ಆವರಿಸುವಂತೆ,ಮನದಲ್ಲಿನ್ನ ನೆಮ್ಮದಿಯನ್ನು ವಿಧಿಯು ಕಬಳಿಸುತ್ತಿದೆ ಎಂಬ ಅರ್ಥ.ಭೂಕಂಪದ ಸಮದಲ್ಲಿ ಧರಣಿದೇವಿಯು ನಡುಗುವಂತೆ , ಬಾಳಿನ ಒಗಟನ್ನು ಬಿಡಿಸಲಾಗದ ಮಾನವನ ಮನವು ಕಂಪಿಸುತ್ತಿದೆ.ಭೂಕಂಪನಕ್ಕೆ ಮುಂಚಿತವಾಗಿ ಬೀಸುವ ಕೆಟ್ಟ ಗಾಳಿಯನ್ನು ಮನದಲ್ಲಿ ಸುಳಿಯುತ್ತಿರುವ ಕೆಟ್ಟ ಲಹರಿಗಳಿಗೆ ಹೋಲಿಸಲಾಗಿದೆ.ಮುಂದಿನ ಸಾಲುಗಳಲ್ಲಿ,ಮನದಾಸೆಗಳು ವಿಲಯವಾಗಿ ಹೊಂಗನಸು ರಕ್ತ ಸ್ನಿಘ್ದವಾಗಿರುವುದನು ಸೂಚಿಸುತ್ತದೆ. ಭವರೋಗಕ್ಕೆ ಯಾವುದು ಮದ್ದು ಎಂಬ ಗಣನೆ ಇದ್ದಿತೊ , ಆ ದ್ರವ್ಯವೇ ವಿಷ ಸಮಾನವಾಗಿದೆ. ನಾವು ಏನನ್ನು ಒಲಿತೆಸಗೆ ಎಂದು ಭಾವಿಸಿದೆವೋ ಅದುವೇ ನಮ್ಮನ್ನು ಕಾಡಿತಿನ್ನುತ್ತಿದೆ. ಹೀಗಿರಲು ಕನಸಿನ ಕನ್ನಡಿ ಮುರಿದು ಮೂರುಚೂರಾಗಿದೆ ಎಂಬ ಅರ್ಥ.

ಇಲ್ಲಿ ಕೆಲವು poetic devices ಅಳವಡಿಸಲು ಸಣ್ಣ ಪ್ರಯತ್ನ ಮಾಡಿರುತ್ತೇನೆ:

೧. ಪದ್ಯದಲ್ಲಿ ಘೋರವಾದ ಭಾವ-ಭಾವನೆಗಳು ಮೂಡಿ ಬರಲಿ ಎಂದು - ಮಹಾಪ್ರ್ರಾಣ ಮತ್ತು ಕರ್ಕಶ ವರ್ಣಗಳ ಪ್ರಯೋಗವಾಗಿದೆ. - to create a phonetic background

೨. ಇಲ್ಲಿ ಗ್ರಹಣ,ಭೂಕಂಪನ,ವಿಷಸಮುದ್ರ,ರಕ್ತಸ್ನಿಗ್ಧ ಕನಸು ಇತ್ಯಾದಿಗಳನ್ನು ಸೂಚಿಸಲು ಅಳವಡಿಸಲಾಗಿದೆ. - Visual imagery

೩. ಮನವನ್ನು ಇರುಳು ಕವಿದ ಆಗಸ, ಕಂಪಿಸುತ್ತಿರುವ ಭೂಮಿ, ಗ್ರಹಣಗಗ್ರಸ್ತ ಸೂರ್ಯ - ಹೀಗೆ ಕರಾಳ ಉಪಮೆಗಳ ಸಾಂಗತ್ಯ ನೀಡಲಾಗಿದೆ. - Simile , Metaphor , Symbolism


ಕಠಿಣ ಪದಗಳ ಅರ್ಥ :)

ಬಾಂದಳ - ಬಾನಿನ ಅಂಗಳ.
ಆಯ - ವಿಸ್ತಾರ.
ಗವಸು - ಹೊದಿಕೆ.
ಪರಿಧಿ - ಎಲ್ಲೆ. ; limit.
ತರಣಿ - ಸೂರ್ಯ.
ಪದುಳ - ನೆಮ್ಮದಿ.
ಕ್ಷಿತಿಕಂಪ- ಭೂಕಂಪ.
ಎಲರು - ಗಾಳಿ
ಕ್ಷಿತಿಕಂಪದೆಲರಲ್ಲಿ : in the baleful winds preceeding the catastrophic earthquake.
ಭೀಷಜ - ಔಷದಿ
ಗರಲ - ವಿಷ.
ವಾರಿಧಿ - ಸಮುದ್ರ.
ಮುಕುರ - ಕನ್ನಡಿ. vision

.

ಮೌನದ ಮಡಿಲಲ್ಲಿ

ಇನಿಯರಾಡೊ ಮಧುರ ಮಾತು ತಳಿರುತೋರಣ
ದನಿಗೂಡದೆ ಎದೆಯಲುಂಟು ದಟ್ಟ ಕಾನನ
ಎರಡು ಮಾತು ನೂರು ಭಾವ ಇದುವೆ ಜೀವನ
ಮಾತು ಸೋತು ಮೌನಹಾಡಿತಿಂತು ತನನನ

to be continued..

Thursday, January 11, 2007

ಸಂತಸ - ಸಹಜಸ್ಥಿತಿ

ಕಾರ್ಯಲಯದಲ್ಲಿ ವಿಶೇಷವಾಗಿ ಸಂತುಷ್ಟನಾಗಿಲ್ಲದಿದ್ದ ನನ್ನ ಸ್ನೇಹಿತನೊಬ್ಬ ಪ್ರಫುಲ್ಲಮನಸ್ಕನಾಗಿದ್ದುದನ್ನು ಬೆಳಗಿನಿಂದಲೂ ನಾನು ಗಮನಿಸಿದೆ.ಮಧ್ಯಾಹ್ನದ ವೇಳೆ , ಊಟದ ಸಮಯ. ಮಾತು ಮಾತಿನಲ್ಲಿ ಅವನು ಇಂತೆಂದನು : 'अरे यार् - खुश् रेहने की कोयी वजेह् नही , बस् आदत् पड् गया है !' ಈ ಮಾತುಗಳಲ್ಲಿ ಜೀವನ ಸತ್ಯವೇ ಅಡಕವಾಗಿದೆ ಎಂದು ನನಗೆ ಅನಿಸಿತು. ಕಲಿತು ನಡೆಯಲು , ತಿಳಿಸಿ ಬೆಳೆಸಲು ದೊಡ್ಡ ವೇದಾಂತಿಯಾಗಲಿ , ಮಹೋನ್ನತ ಕೃತಿಯೋ ಆಗಬೇಕಿಲ್ಲ. ದಿನನಿತ್ಯದ ವ್ಯವಹಾರದಲ್ಲಿ , ನಮ್ಮ - ನಿಮ್ಮಂತಹ ಸಾಧರಣ ಮರ್ತ್ಯರು ಜೀವನ ಸತ್ಯವನ್ನು ಗೋಚರಿಸ ಬಹುದು.
ಸಾಂದರ್ಭಿಕವಾಗಿ , ಸಂತಸವನ್ನು ಸಹಜ ಸ್ಥಿತಿಯನಾಗಿಸುವ ಕುರಿತು ನನ್ನ ಅಂತರಂಗದಲ್ಲಿ ಮೂಡಿಬಂದ ಚುಟುಕ:


ಸಂತಸವೆಂಬುದು ಅರಿಕೆಯಲಿಲ್ಲ ಬಾಳಿದನರಿತು ಮಂದಮತಿ
ಅರಿಕೆಗೆ ಸಿಲುಕದ ವರವಿದು ಇದನು ಆಗಿಸು ನಿನ್ನೆಯ ಸಹಜಸ್ಥಿತಿ
.

Wednesday, January 10, 2007

ಅಂತರ್ಜಾಲದ ಅಲೆಮಾರಿಗಳು

ಸಂಬಂಧಗಳು ಮತ್ತು ಸಹಸ್ಪಂದನ.

ಕಳೆದ ಸಂವತ್ಸರ ನಾನು ಅಂತರ್ಜಾಲದಲ್ಲಿ ಅಲೆದಾಡುತ್ತ ಹಲವು ಮಂದಿ ಹೊಸ ಸ್ನೇಹಿತರನ್ನು ಸಂಪಾದಿಸಿದೆ. ಈ ಸಂಬಂಧಗಳ ಸಂಕೋಲೆ ಬಹಳ ಸೋಜಿಗವೂ ಮತ್ತು ಸ್ವಾರಸ್ಯಕರವೂ ಆಗಿದೆ. ನನ್ನ ಒಡನಾಟಕ್ಕೆ ಸಿಕ್ಕ ಹಲವು ಮಂದಿಯ ಮುಖ ಪರಿಚಯ ಸಹ ನನಗೆ ಇಲ್ಲ. ಇಂತಿದ್ದರು, ಇವರುಗಳು ನನ್ನ ಜೀವನದಲ್ಲಿ ಈ ದಿನ ಹಾಸು ಹೊಕ್ಕು. ಇವರಲ್ಲಿ ಉಭಯಕುಶಲೋಪರಿ ವಿಚಾರಿಸದ ದಿನವೇ ಇಲ್ಲ. ಏತ್ತಣ ಮಾಮರ ; ಏತ್ತಣ ಕೋಗಿಲೆ -- ಆದರೂ ಅನುಬಂಧವಿರುವಂತೆ , ನಮ್ಮ ಮೈತ್ರಿ ಅಂಕುರಿಸಿ ಸಂಬಂಧಗಳು ಬೆಳೆಯುತ್ತಲೇ ಇವೆ. ಕಾರ್ಯ ನಿಮಿತ್ತ ನಾ ಹಿಂದೆಂದೂ ಕಾಣದ ಊರುಗಳಿಲ್ಲಿ ಸಂಚರಿಸುವ ಸಂದರ್ಭದಲ್ಲಿ ಇವರುಗಳ ಮನ - ಮನೆ - ಮಂದಿರದಲ್ಲೇ ಸಹ ಮೈತ್ರಿ ಭೋಜ್ಯ - ಸಹ ಮಿತ್ರ ವಾಸ. ಮಿತ್ರರು ಒಂದೆಡೆಯಾದರೆ , ಅಂತರ್ಜಾಲದಲ್ಲಿ ನಾ ಕಂಡ ಸಜ್ಜನರು ಈಗ ನನ್ನ ಒಲವಿನ ಭಾವನವರಾಗಿ ಮನೆಯ ಸದಸ್ಯರೇ ಆಗಿದ್ದಾರೆ.ಜೀವನವೀಡಿ ಪರಿಚಯವಿದ್ದರೂ ನಮ್ಮವರಲ್ಲದಂತೆ ವರ್ತಿಸುವ ಹಲವಾರು ಜನಗಳ ನಡುವೆ , ಕೆಲವೇ ದಿನಗಳ ಒಡನಾಟದಲ್ಲಿ ವಿಶ್ವಾಸದ ಮಾತುಗಳನ್ನು ಆಡಿ ನನ್ನ ದಿನಚರಿಯನ್ನು ಸುಗಮವೆನ್ನಿಸುವ ಇವರುಗಳಿಗೆ ನಾನು ಚಿರಋಣಿ.

ಈ ಸ್ನೇಹಸೇತುವನ್ನು ನಾನು ನೆನೆದಾಗ ಅಂತರಾಳದಲ್ಲಿ ಮೂಡಿಬಂದ ಸ್ವಗತ :

ಅಲೆಮಾರಿಗಳು , ನಾವು ಅಂತರ್ಜಾಲದ ಅಲೆಮಾರಿಗಳು
ಪುಟದಿಂದ ಪುಟಕ್ಕೆ ,ತಾಣದಿಂದ ತಾಣಕ್ಕೆ
ಜಿಗಿದು ,ನೆಗೆದು ,ಕುಣಿದು ,ಹೊಸ ಬೆಸುಗೆ ಬೆಸೆದು,
ಕಾಣದವರ ನಮ್ಮವರನಾಗಿಸುವ ಕಲೆಯ ನೆಲೆಯ
ಅರಿತು ನಡೆವ..ಅಲೆಮಾರಿಗಳು,
ನಾವು ಅಂತರ್ಜಾಲದ ಅಲೆಮಾರಿಗಳು

ಅಪರಿಚಿತರಾದರೂ ಚಿರಪರಿಚಿತರು
ಮುಖಪರಿಚಯವಿಲ್ಲದ ಅಶರೀರಭ್ರಾತೃಗಳು
ಸ್ನೇಹ ಸಂಬಂಧಗಳ ಸಹಸ್ಪಂದನವನು
ಅರಿತು ನಡೆವ..ಅಲೆಮಾರಿಗಳು,
ನಾವು ಅಂತರ್ಜಾಲದ ಅಲೆಮಾರಿಗಳು

As always - ಇದು ಪದ್ಯ, ಲಹರಿ ,ಕವನ , ಕಾವ್ಯ -- ಇದ್ಯಾವ್ದು ಅಲ್ಲ . ಇದು ಸುಮ್ನೆ ಹಾಗೆ , ಸ್ವಗತ!
.

Thursday, January 04, 2007

ಹಂಗು

ಹಂಗಿಲ್ಲದಾ ಬಾಳು ಹ್ಯಾಂಗ , ತಂಗ್ಯವ್ವ
ಹಂಗಿಲ್ಲದಾ ಬಾಳು ಹ್ಯಾಂಗ

ಭುವಿಗೆ ಭವಕಾರಕನ ಹಂಗು
ತೃಷೆಗೆ ಪಾವಕನ ಹಂಗು
ಸುಧೆಗೆ ಭೃಂಗದ ಹಂಗು
ಬೆದೆಗೆ ಕಾಮನ ಹಂಗು
ಋತುವಿಗೆ ಕಾಲನ ಹಂಗು
ಜೀವಿತಕೆ ಇರುವಿಕೆಯ ಹಂಗು

ಹಂಗಿಲ್ಲದಾ ಬಾಳು ಹ್ಯಾಂಗ , ತಂಗ್ಯವ್ವ
ಹಂಗಿಲ್ಲದಾ ಬಾಳು ಹ್ಯಾಂಗ


- ಶ್ರೀ ಸಾಮಾನ್ಯ

Monday, January 01, 2007

ಒಲವೇ ಚೆಲುವು !!!

ಎಲ್ಲರಂತಿಲ್ಲ ನನ್ನ ನಲ್ಲೆ
ಮೇಘವರ್ಣ , ನಿಜ ಶ್ಯಾಮಲೆ

ಹೇಳಿಕೊಳ್ಳುವಂತಹ
ಸ್ಪುರದೄಪಿಯೇನಲ್ಲ ಬಿಡಿ.
ಸಾಮಾನ್ಯೆ ... ಈ ಕನ್ಯೆ

ಗುಂಪಿನಲ್ಲಿ ನಿಂತರೆ
ಎದ್ದು ಕಾಣದಂತ ನೀರೆ
ಕಮಲದಳ ಸಮಾನ ಕಂಗಳು..
ನೈದಿಲೆಯ ಹೋಲುವ ಮುಗುಳು ನಗು ..
ಇವಾವವು ಇಲ್ಲ...

ಲೋಕವು ಬಯಸುವ ರೂಪವತಿಯಲ್ಲ ..
ನನ್ನ ಹೃದಯೇಶ್ವರಿ...ಶಾಶ್ವತಿ.. ಶ್ಯಾಮಲೆ

ಎಂತಿದ್ದರೇನಂತೆ - ಇವಳಿದ್ದಂತೆಯೇ ನನಗೆ ಓಲವು...
ಏಕೆಂದರೆ.. 'ಒಲವೇ ಚೆಲುವಲ್ಲವೇ' ?

. ಶ್ರೀ ಸಾಮನ್ಯ

ಇದು ಪದ್ಯ ಅಲ್ಲ .. ಸುಮ್ನೆ ಹಾಗೆ .. ಅಂತರಂಗದ ಮಾತು ಅವತರಿಸಿದೆ.