Showing posts with label ಸ್ವಗತ - ಕವಿತೆ. Show all posts
Showing posts with label ಸ್ವಗತ - ಕವಿತೆ. Show all posts

Monday, June 27, 2011

ಭಾಷೆ ಮತ್ತು ಕ್ರಾಂತಿ




ಈಗೊಮ್ಮೆ ತತ್ತಕ್ಷಣ ಈ ಭಾಷೆಯನು
ಅರ್ಥೈಸಿಕೊಳ್ಳವ ಪ್ರಯತ್ನ ಬಿಟ್ಟು --
ಸುತ್ತ ಆವರಿಸಿದ ರಕ್ತ ಸ್ನಿಗ್ದ
ಗಾಳಿಗೆ ಮಾತನಾಡಲು ಅನುವು ಮಾಡಿಕೊಟ್ಟು,
ಮತ್ತಷ್ಟೂ ಕಿವಿಗಳು ದಂಗೆದ್ದು
ನಮ್ಮ ನಿನ್ನೆಯ ಬುಡ-ಬೇರುಗಳನ್ನು
ಗಟ್ಟಿಯಾಗಿಸುವ ತನಕ.

ಮೂಕ ಜಡ ವಾಸ್ತವಕ್ಕೆ
ಜಂಗಮ ವಾಗ್ಝರಿಯನೇಕೆ ಆರೋಪಿಸಲಿ?
ಬಳಸದ ಬಾಯ್ಗಳ ತುಕ್ಕುಗಟ್ಟಿದ ತುಟಿಗಳಿಗೇಕೆ
ಸಂಧಾನದ ಪಾರುಪತ್ಯವನ್ನೀಯಲಿ?
ಒಳಿತನೆಲ್ಲವ ಹೊರದೂಡಿ ನಡೆವ
ಕಿವುಡು ಕಿವಿಗಳಿಗಾವ ಮಹತ್ವವನೀಯಲಿ?

ಸಾಕು.
ಇನ್ನರ್ಥೈಸುವ ಗೀಳಿಗಿತ್ತಾಯ್ತು ತರ್ಪಣ.
ಗಂಟುಹಾಕಿದ ಹುಬ್ಬು ಮೋರೆಯ
ದಂಗೆದ್ದ ಕಿವಿಳಿಂತಿರಲಿ.
ಬರಡು ಬರಡಾದ ಹೃದಯಗಳಿಗೆನೆನ್ನುವಿರಿ?

Friday, February 11, 2011

ಒಂದು ಹಂತದ ನಂತರ

ತೃಪ್ತಿ ತರಿಸದ
ಸಾವಿರಾರು ಸಾಧನೆಗಳನು
ಹೇರಿ, ಗುಡ್ಡೆ ಹಾಕಿಕೊಂಡ ನಂತರ...

ತಿದ್ದಿಕೊಳಲು ಸಾಲ್ಗಟ್ಟಿ ನಿಂದ ಹಿಂದಿನ
ಸೋಲುಗಳ ಸರಪಳಿಯ ನಡುವಿರುವ ಅಂತರ ....

ಮುಂಬರುವ ಸೋಲುಗಳನು
ಮುತುವರ್ಜಿಯಿಂದ ಆಯ್ದು, ಹೆಕ್ಕಿ
ಸೋಲನಪ್ಪಿಕೊಳಲು ಸಜ್ಜಾಗುತಿರುವೆವೆ ನಿರಂತರ ? ..
ಒಂದು ಹಂತದ ನಂತರ... ಒಂದು ಹಂತದ ನಂತರ

Saturday, January 30, 2010

ಓ ಸೂರ್ಯಕಾಂತಿ!

ವಿಲ್ಯಂ ಬ್ಲೇಕ್ ಕವಿಯ Ah! Sunflower ಕವಿತೆಯನ್ನು ನಾನು ಕನ್ನಡದಲ್ಲಿ ಕೊಲೆ ಮಾಡಿರುವ ಬಗೆ.

ಓ ಸೂರ್ಯಕಾಂತಿ! ಕಾಲನ ಅಧೀನನೆ.
ಸೂರ್ಯ ಸೋಪಾನದ ಜಾಡು ಹಿಡಿದು:
ಆ ಸುಮಧುರ ಸುವರ್ಣ ಸಗ್ಗಕೆ
ಲಗ್ಗೆ ಇಟ್ಟು ಪಯಣಿಗರು ಯಾತ್ರೆ ಮುಗಿಸುವಲ್ಲಿಗೆ

ಆಸೆಗಳ ಸಂಕೋಲೆಯಿಂದ ಬಸವಳಿದ ಜವ್ವನನು
ತುಹಿನದಿಂದಾವರಿಸಿ ಬಾಡಿದ ನವಸುಮವು
ಸುಪ್ತಾವಸ್ಥೆಯಿಂದ ಸಿಡಿದೆದ್ದು ಹಾತೊರೆದು ಹೊರಡುತಿವೆ
ಎನ್ನ ಸೂರ್ಯಕಾಂತಿ ಚಲಿಸುವಲ್ಲಿಗೆ!


Ah ! Sun-flower weary of time.
Who countest the steps of the Sun:
Seeking after that sweet golden clime
Where the travellers journey is done

Where the Youth pined away with desire,
And the pale Virgin shrouded in snow:
Arise from their graves and aspire,
Where my Sun-flower wishes to go!


- William Blake : Songs of Experience in 1794.

Monday, October 26, 2009

ಎರವಲು

ನನ್ನದಲ್ಲದ ಜೀವಿತವ
ನನದೆಂದು ನಾ ತಿಳಿದು
ದಿನ ದಿನವು ನನ್ನಿಯನೆ
ನನ್ನೆದೆಗೆ ಉಣಿಸಿ

ಒಲ್ಲದಾತ್ಮನ ತಣಿಸೆ
ಬಗೆಬಗೆಯ ಅಮಿಷವ
ಒಡ್ಡುತಲಿ ದಡ್ಡತನದಿ
ಬದುಕಲೆಂತಾಗುವುದು ತಿಳಿಸಿ

Friday, April 17, 2009

ಪ್ರಜಾಪ್ರಭುತ್ವ


ತೋರು ಬೆರಳ ಮೇಲೆ ಸಣ್ಣ ಕಪ್ಪದೊಂದು ಗುರುತು
ಪ್ರಜೆಯು ತಾನು ಪ್ರಭುವೆಂಬುದ ಸಾರುತಿಹುದು ಕುಳಿತು.
ಕರ್ತವ್ಯದ ಕರೆಯಿದುವೆ ಹಕ್ಕಿನ ಘನ ಗೆರೆಯಿದುವೆ
ಎದ್ದು ನಿಂತು ಮತವ ನೀಡು ತಾಮಸವನು ಮರೆತು

ಚುನಾವಣೆಯ ಸಮಯ - ನಿಮ್ಮ ಮತ ಚಲಾಯಿಸಲು ಮರೆಯದಿರಿ!

“At the bottom of all the tributes paid to democracy is the little man, walking into the little booth, with a little pencil, making a little cross on a little bit of paper – no amount of rhetoric or voluminous discussion can possibly diminish the overwhelming importance of that point.”
- Sir.Winston Churchill

Thursday, May 29, 2008

ಮುಕ್ತಿ


ವಿರಕ್ತಿಯಲ್ಲಿಲ್ಲ ಎನಗೆ ವಿಮುಕ್ತಿ ಭಾವನ.
ನನ್ನನ್ನಪ್ಪಿದ
ಸಹಸ್ರ ಮಧುರ ಬಂಧಗಳಲಿ
ನಾ ಕಾಣುತಿರಲು
ಬಿಡುಗಡೆಯ ಆಲಿಂಗನ.

***

ರಬೀಂದ್ರನಾಥರ ಈ ಕೆಳಗಿನ ಉಕ್ತಿಯ ಭಾವಾನುವಾದ:

Deliverance is not for me in renunciation.I feel the embrace of freedom in a thousand bonds of delight.

- Rabindranath Tagore, Geetanjali 73.

Saturday, April 19, 2008

ಚಕಮಕಿ

ನೀ ಕೇಳಿದ್ದು ಪ್ರಶ್ನೆಗಳೆಂದು ತಿಳಿಯಲೇ ಇಲ್ಲವಯ್ಯ ನನ್ನೋಡೆಯ,
ಈಗ ಪರೀಕ್ಷೆಯು ಮುಗಿಯಿತೆಂದು ಹೇಳುವುದು ನಿನಗೆ ತರವೇ?
ಪರಕಿಸುವ ತೇದಿ ತಿಳಿದರೂ ನಾ
ತೇರ್ಗಡೆಯಾಗುವುದು ಅಷ್ಟಕ್ಕಷ್ಟೆ!
ಹೀಗಿರಲು ಹಟ್ಠಾತ್ತನೆ ಹೀಗೆ,
ತಿಳಿಯದೆಲೆ ನಾನು ತೂಕಡಿಸುತಿರುವಾಗ
ನನ್ನ ಬಲಾಬಲಗಳನು ತೂಗಿ,
ಮುಂದಿನ ತರಗತಿಗೆ ನನ್ನ ತಳ್ಳಿಯೂ ಹಾಕಿರಲು,
ಉತ್ತೀರ್ಣನಾದರೂ ನಾ ಹೇಗಾದರೂ ತಡೆದು ಕೊಳ್ಳಲಿ
ಈ ಚಕಮಕಿ.
ಇನ್ನು ಮುಂದೆ ಸಜ್ಜಾಗುವ ಗೋಜಿಗೆ ಹೋಗುವುದೇ ಇಲ್ಲ ಬಿಡು.
ಎಷ್ಟೆ ಆದರೂ ಇದ್ದೆ ಇದೆಯಲ್ಲ,
’ ಆದದ್ದೆಲ್ಲ ಒಳ್ಳೆಯದಕ್ಕೆ!’
- ಅನ್ನುವ ದಾಸರ ಸಮಜಾಯಿಷಿ, ಕುಂಟು
ನೆಪ, ಸಾಂತ್ವನ ಇತ್ಯಾದಿ ಇತ್ಯಾದಿ.
ಮತ್ತೆ,
ಇನ್ನೆಂದು ಹೂಡಿರುವೆ ತುರ್ತು ತಬ್ಬಿದ
ನಿನ್ನಯ ಧಿಡೀರ್ ಪರೀಕ್ಷೆ.......?


Tuesday, February 12, 2008

ಗಾಳಿಯಲ್ಲಿ ಧಾಳಿ



ಹರಿತವಾದ ಖಡ್ಗ.
ಚೂಪಾದ ತುದಿ.
ಕುಶಾಗ್ರ ಲೋಹ.
ವೀರಾವೇಶದಿಂದ ಹಾಗೊಮ್ಮೆ ಹೀಗೊಮ್ಮೆ ಸರಕ್ಕನೆ ತೂರಾಡಿಸಿ ಬೀಸುತ್ತಿರುವೆ.
ಇದೋ ವೀರಾವೇಷ ತ್ವರಿತವಾಗುತ್ತಿದೆ.
ಅಬ್ಬಬ್ಬಾ ! ಎಂಥಾ ರಭಸ!

ಸುತ್ತ ಹಬ್ಬಿದ ಸ್ತಬ್ಧಗಾಳಿಯ ಸೀಳಿ,
ಇಬ್ಬಾಗಗಳ ಮಾಡುತ
ಅನಂತ ದ್ವಂದ್ವಗಳ ರೇಖೆಗಳ
ಕ್ಷಣಕ್ಕೆರಡಂತೆ ರಚಿಸಿ ಅಳಿಸುತ್ತಿದೆ.
ಗಾಳಿಯಲ್ಲಿಯೇ.

ದಿನವಿಡೀ ನಡೆದ ಎದುರಾಳಿಯೇ ಇಲ್ಲದ ಪ್ರಚಂಡ ಕಾಳಗ.
ಸುಸ್ತಾಯಿತು. ಸೂರ್ಯಾಸ್ತವಾಯಿತು.
ಇನ್ನು ಗುಡಾರ ಸೇರಿ ದಿನದ ಪೆಟ್ಟು ಗಾಯಗಳಿಗೆ ಮುಲಾಮು ಹಚ್ಚುವ ಸಮಯ.
ಸರಸರನೆ ನಡೆಯ ಬೇಕು.
ನಾಳೆ ರಣಕಹಳೆ ಅರ್ಧತಾಸು ಮುಂಚೆಯೇ ಮೊಳಗಲಿದೆಯಂತೆ.
==

miami lakes, FL. 12-Feb-2008 11:30 PM

Friday, February 08, 2008

ನಕ್ಷೆ - ನಿಲುವು



ಬಹಳ ದೂರ ಬಂದಿದ್ದೇವೆ ಗೆಳೆಯ.....ಬಹಳ ದೂರ.
ಹುಡುಕಿ ಹೊರಟ ತಾಣಕ್ಕೂ
ನಮ್ಮ ಈಗಿನ ಸ್ಥಾನಕ್ಕೂ
ಒಂದೇ ರೇಖೆ ಅಂತರ:
ಎಂಭತ್ತು ಮತ್ತು ನೂರರ ವ್ಯತ್ಯಯ!

ಮೂಲೆಗೆ ಸರಿದ ಮುಂಜಾವಿನ ಮೂಲಗುರಿ
ಮಾಯಾಜಿಂಕೆಯ ಮಾರಿ-
ಚ ಲನಶೀಲ ನಕ್ಷೆ-ನಿಲುವು;

ಅಳಿವ ಸ್ಥಾವರದ ಇಳಿ
-ಜಾರಿನ ಹಳಿಯ ಬಳಿ
ದಿಕ್ಕು - ದೆಸೆ ಬದಲಿಸಿ,
ಜಂಗಮದ ಜಾರೆಬಂಡೆಯ ಮೇಲೆ
ಜುರ್ !!! ...ರ್ !!!...ರ್ !!!.... ಎಂದು ಜಾರಿ ಬಂದ
ಬಿರಾಗಿ,
ಸಿಕ್ಕ ತಾಣವೇ ಸ್ವರ್ಗದಂತಿರಲು
ಸಿಗದ ಸೋಜಿಗದ ಪರಿವೆ ಇನ್ನೇಕೆ ?

ನಡೆಯುತಲೆ ನಾವು ಸಿಗಿದ ದಾರಿಯಲ್ಲಿನ ಸೀಳು,
ಹಿಡಿದ ಹಾದಿ, ಇಟ್ಟ ಹೆಜ್ಜೆ
ದೂರ ಸರಿದೂ ಸರಿದೂ
ಈಗ ಇಲ್ಲೆಲ್ಲೋ ತಂದಿರಿಸಿದೆ.

ಈಗ, ’ಇದು’ "ಇಲ್ಲೆಲ್ಲೋ" ಎಂದೆನಿಸಿದರೂ - ಆಪ್ತ,
ಮಾರ್ಗ ಮಧ್ಯೆ (ನಾವು) ಗೆದ್ದ ಅಧ್ಯಾಸದ ದಾಸ್ಯ
ಪಡೆದ ಸತ್ಯ ಸಾಕ್ಷಾತ್ಕಾರ, ನೂತನ ದೃಷ್ಟಿ
ಕೋನ
ಜೀವಿತದಷ್ಟೆ ಸಹಜ,
ಭಾವದಷ್ಟೆ ನೈಜ,
ಸಾಕ್ಷಿಯಷ್ಟೆ ಸತ್ಯ !

ಇಂತಿರಲು ನಾವು ನಿಜಕ್ಕೂ
ಬಹಳ ದೂರ ಬಂದೆವಾ ಗೆಳೆಯ.....ಬಹಳ ದೂರ?

==

Miami Lakes, FL 01Feb2008 2:49 PM

Monday, January 28, 2008

ಗಹನ ಗಾಂಧಾರ




ಗುನುಗು - ೧
---
ಪ್ರಿಯೆ ನನ್ನ ಪ್ರೇಮದ ರಂಗು ಸ್ವರ್ಣ ಸಿಂಧೂರ
ಎದೆಯೊಳಗೆ ಗುನುಗಿದ ಗುಂಗು ಗಹನ ಗಾಂಧಾರ
ಮಿನುಗುತಿಹ ಕಂಗಳ ಮಿಂಚು ಮೇಘ ಮಂದಾರ
ಮೌನದಲೆ ಸೆಳೆಯುವ ಸಂಚು ಮದನ ಶೃಂಗಾರ
---

ಚುಟುಕ - ೧

ದೂರವಿರಿಸಲು ನಮ್ಮನು ಸೆಣೆಸುತಿವೆ ಕೇತು ಮತ್ತು ರಾಹು
ಚಿಂತಿಸದಿರು ನಲ್ಲೆ, ನಮ್ಮಲ್ಲಿದೆ ಜೀಟಾಕು ಜೋತೆಗೆ ಯಾಹೂ
---

ಚುಟುಕ - ೨
ಮಿಡಿವ ಹೃದಯಗಳಿಗೆಲ್ಲಿದೆ ಮುಖಾಮುಖಿ ಸಂಧಿಸುವ ಹಂಗು
ನಾ ಮುಗುಳು ನಗಲು ಸಾಲದೆ ಪ್ರಿಯೇ, ನಿನ ಚ್ಯಾಟಿನಾ ಪಿಂಗು
---

Sunday, January 20, 2008

ಭೃಹದಾರಣ್ಯಕ

* ====================================
ಙ್ಞಾನ ಕಾನನದ ಒಳಹೊಕ್ಕು ಕಂಡದ್ದಿಷ್ಟೆ:
ಬಹುಶಾಖಾ 'ಭೃಹದಾರಣ್ಯಕ' !
ದಿನಕರನ ನಿಜಕಿರಣದ
ಎಳೆ - ಎಸಳೂ ನುಸುಳದಂತೆ
ಮುಗಿಲ್ಕವಿದು ಹಬ್ಬಿದ
ಅಹಂಮ್ಮಿನ ದಟ್ಟ ಹಂದರದಡಿ,
ಛಂದೊಬದ್ಧ ವಾಕ್ಪಟಿತ್ವದ
ಪುಶ್ಪಸಮಾನ ಪದಪುಂಜಗಳಲ್ಲಿ
ಸುಸದ್ದಿದ್ದುದು
ಒಂದೇ ಏನೋ - ಸತ್ಯ ವನಸುಮ !

ವಾದ ಪ್ರತಿವಾದಗಳ
ಚಕ್ರತೀರ್ಥದೆ ಒಳಸಿಲುಕಿ
ಅನಿರ್ಣಯದೆ ವಕ್ರವೆನಿಸಿದ್ದು,
ತಿರುವಿ ನಿಂದ ಪ್ರಶ್ನಾರ್ಥಕ.

ತನ್ನಿಲುವ ನಿರೂಪಿಸಲು ಪರನ್ಯೂನ ಸಾರುವ
ವಿದ್ವನ್ಮಿಣಿಗಳ ಬಾಹ್ಯ ಭಾಷ್ಯಗಳ
ಪರಿಮಿತಿಗೆ ನಿಲುಕದಿದ್ದಲ್ಲವೆ
ಆ ನಿಶ್ಚಲ ಬ್ರಹ್ಮ?
ಷುಷ್ಕ ಪಾರಿಭಾಶಿಕಗಳ
ಬಂಧಿಯಾಗ ಬಲ್ಲನೇ ಆ ಪರಮಾತ್ಮ?

ಅರಿವಿನ ಅಡಿಸೇರಿಗೆ
ಆ ಅಗೋಚರನ ಅಡಕವಾಗಿರಿಸದೆ,
ತಿಳಿವ ಹಂಬಲಕೆ ತಿಳತರ್ಪಣವನೆಸಗಿ,
ಅರ್ಪಿಸಿ ಅಡಿಗಡಿಗೆ ಮನವ ತಿಳಿಯಾಗಿಸಿ
ಮುದದೆ ಮೋಕ್ಷ ಸಾಧಿಸಲು
ಮಿಂದರಾಗದೆ ಭಕ್ತಿಬಿಂದುವಿನಲಿ?

=====================================

Miami Lakes,FL night of Jan 18 2008 thru Jan 19 2008.
* ಚಿತ್ರ ಕೃಪೆ : ಶ್ರೀಕಾಂತ್ ಬೇಡತೂರು

Tuesday, January 15, 2008

ಕ್ಷಣಗಣನೆ



===========
ಇಡೀ ದಿನ,
'ಈ ದಿನ ಕಳೆಯಲಿ ; ಈ ದಿನ ಕಳೆಯಲಿ',
ಎಂಬ ತೊಳಲಾಟದಲ್ಲೆ
ದಿನ ಕಳೆದು ಬಿಟ್ಟೆ.
ದಿನ ಕಳೆಯಿತು.
ಮತ್ತೆಂದೂ ಈ ದಿನ ಬಾರದೇನೋ?
ಮತ್ತೆಂದೂ ಈ ದಿನ ಬಾರದು!
ನಾ ನಾಳೆಯ ಮುಟ್ಟಿದರೂ,
ನಾಳೆ ನನ್ನನ್ನು ಮುಟ್ಟೀತೆ?
ನೆನ್ನೆಯ ದಿನ ಇಂದು ಬಂದ ಹಾಗೆ
ಇಂದಿನ ದಿನ ನಾಳೆ ಬರದಿರಲಿ.
ನಾನು ನಾಳೆಯನ್ನು ಮುಟ್ಟಿದ್ದೇನೆ,
ನನ್ನ ನಾಳೆ ನನದಾಗಲಿ!
==========
Miami Lakes, FL 8:24 PM Jan 15 2008 (Edited)
- Footnotes

೧. ಇಂದು - Today
೨. ನಾಳೆ - Tommorrow
೩. ಕಳೆಯಿತು - itz gone!

Saturday, January 12, 2008

ವ್ಯಾಪ್ತಿ


===

ಚಂದಿರನು ಬೆಳೆಯುತ್ತಿದ್ದಾನೆ.
ಹುಣ್ಣಿಮೆ ಕಳೆದು ಕಡೆ ಪಕ್ಷ ಮೂರ್ಪಕ್ಷ ಮುಗಿದರೂ,
ಶುಕ್ಲ-ಕೃಷ್ಣಗಳ ಲೆಕ್ಕಿಸದೆ
ಕ್ಷಯಿಸುವ ಗೊಜಿಗೇ ಹೋಗಿಲ್ಲ:
'ಪಕ್ಷ'-ಪಾತಿ!

ಪಾಲ್ಗಡಲ ಅಂತರ್ಪ್ರವಾಹದಂತೆ
ಆಗಸವನಾವರಿಸಿ ಬೆಳೆದಿ-ದ್ದಾನೆ
ಆನೆಯಂತೆ ಗಜಗಾತ್ರ.
ದಶರಾತ್ರ ಮಾತ್ರದಲಿ
ಆದಿತ್ಯನಿಗಿಲ್ಲದ ಆಧಿಪತ್ಯ ಸಾಧಿಸುವನೆನೋ!
ಸಾಧು ಸಾಧು!

ಶುಕ್ರನಾಗ್ರಹವ ಗ್ರಹಿಸಿ,
ಗ್ರಹಗಳೆಲ್ಲ ಸಭೆ ಸೇರಿವೆಯಂತೆ.
ಆಯ(ತ)ನದಲ್ಲೇ ಕಾಣದ ತುರ್ತು ಪಂಚಾಯತಿ.
ಋತವ ರಕ್ಷಿಸಲು ಅಷ್ಟಗ್ರಹಗಳೆಸಗಿದ
ಮಹಾರ್ಗಳ ಬಂಧ!

ಮಣಿದು ಮರುಕಳಿಸಿ ಪುನರವತರಿಸಿ
ಶಶಿಯಾಗಿ ವ್ಯಾಸಕ್ಷೀಣ ಗಾತ್ರಾಪಸವ್ಯ
ರುಚವ ಸಾರುತಿಹನು: ಪ್ರಾಪ್ತವಿದ್ದರೂ
ನಾವಾಗಬಾರದೆಂದು
-ವ್ಯಾಪ್ತ ಗಮ್ಯ!

===================================================

* Footnotes:

ಆಯನ : ಉತ್ತರಾಯಣ - ದಕ್ಷಿಣಾಯನ ಎಂಬ ಆರು ಮಾಸಗಳ ಕಾಲ ಪರಿಮಿತಿ.

ಋತಂ : order or course of things. [http://en.wikipedia.org/wiki/Rta]

ಅರ್ಗಳ : a latch, a bar, or a bolt used for fastening a door or the cover of a vessel. Figuratively, it refers to some-thing intervening as an obstruction. In Jaimini astrology, it is used to describe the obstructing effect of an intervening planet. It assumes that planets and signs of the zodiac affect other planets and signs by their aspects. These influences can be nullified by the presence of certain planets at certain places relative to these planets and signs. Such obstructing planets are known as Argalas.

ಮಹಾರ್ಗಳ: A Grand Trap/ Obstruction set up by other 8 planets.

ವ್ಯಾಸಕ್ಷೀಣ : receeding in diameter.

ಅಪಸವ್ಯ : Orderly; right [ಸವ್ಯ - left ]; ಗಾತ್ರಾಪಸವ್ಯ : Got back to original dimensions.

ರುಚಂ (ರಿಚ) : ವೇದದಲ್ಲಿ ಕಂಡು ಬರುವ ೨ ಅಥವ ೪ ಸಾಲುಗಳ ಶ್ಲೋಕ,ಮಂತ್ರ. [http://en.wikipedia.org/wiki/Richa]

ವ್ಯಾಪ್ತ ಗಮ್ಯ : ವ್ಯಾಪ್ತಿಯನ್ನು ಮೀರಿ ಗಮಿಸುವ.

Miami Lakes,FL Jan 12 2008 1:25PM to 8:27PM.

Tuesday, January 08, 2008

ಕಾಮನೆಗಳು - ಸ್ವಗತ



=======
ನಾ ಬಯಸಿದ,ಬಯಸದಿದ್ದ, ನನ್ನ ಬಯಕೆಗೆ ಮೀರಿದ,
ಭಯದಿಂದ ಬಯಸದೆ ಬದಿಗಿಟ್ಟಿದ್ದ
ಕಾ -
ಮನೆಗಳು, ಮನೆ
ಮುಂದೆ ಮೆರವಣಿಗೆ ಬಂದು ನಿಂದು
ಜಗುಲಿಯಮೇಲೆ ಜಾವದ ಸಮಯದಿಂದಲೆ
ಜಾತಕ ಪಕ್ಷಿಗಳಂತೆ ಡೇರೆಬಿಟ್ಟು ಕುಳಿತಿವೆ.
ಆರುಣಿಯಸುತನು ಜವರಾಯನ ಕದ ಕಾಯ್ದಂತೆ.
(ಇನ್ನಾವ ನಚಿಕೇತಾಗ್ನಿಯ ನನ್ನಲ್ಲಿ ಕೇಳಲೀಕ್ಕೋ?)
ನಚಿಕೇತನಿರಲಿ; ಓತಿಕೇತಗಳಂತೆ ಬಣ್ಣ ಬದಲಿಸುತ್ತಿವೆ.
ಮುಂಡೇವು.
ಸಹಸ್ರವರ್ಣ ಕಾಮನ ಬಿಲ್ಲಿನಂತೆ ಕಾಮನೆಗಳು
ಹತ್ತು ಚಿತ್ತರವ ಬಿತ್ತಲು ಮನದ ಕದವ ದಬ ದಬ ಬಡಿಯುತಿವೆ.
ಆಸನಾರ್ಘ್ಯಗಳನ್ನಿತ್ತು ಹಸ್ತಲಾಘವಕ್ಕೆ ಅನುವು ಮಾಡಿಕೊಳ್ಳೋಣವೆಂದ್ದಿದ್ದೆ.
ತೆರೆದ ಮನೆ ಮನದೊಳಗೆ, 'ಓ, ಬಾ ಅತಿಥಿ' ಎಂದು
ಕರೆದು ತೂಗುಯ್ಯಾಲೆಯಮ ೇಲೆ ಕುಳ್ಳರಿಸಿ ವಿಹರಿಸ ಬಹುದಿತ್ತು.
ಕುಣಿಯ ಬಹುದಿತ್ತು. ತಣಿಯ ಬಹುದಿತ್ತು. ಬಹುದಿತ್ತು. ...ಬಹುದಿತ್ತು.....
ಆದರೆ ಸಣ್ಣಗೆ ಆಕಳಿಸಿ, ತಣ್ಣಗೆ ಈ ಪಕ್ಕೆಗೆ ತಿರುಗಿ ನಿದ್ರಿಸಿದೆ.
ಎಂದಿನಂತೆ ಜೀವಿತವ ಮುಂದೂಡುತ.
ಕಾ
ಮನೆಗಳು, ಮನದ ಮನೆಯ ಕದವ ಕಾಯ್ದು ಕಾಲ್ಚಾಚಿ ಕುಳಿತಿವೆ.
ಓತಿಕೇತಗಳಂತೆ ಬಣ್ಣ ಬದಲಿಸುತ.
ಮುಂಡೇವು.

Miami Lakes,FL. Jan 08 2008. 5:00 AM thru first half of the day.

===
---

Get this widget | Track details | eSnips Social DNA





Image/Picture Courtesy:

Top:
Self made jpeg using MSPaint.

Below:
Inka Essenhigh: Her works shows every day life in surrealistic ways, most are an amalgam of 19th century caricatures, oriental art and contemprory comics. There is a tangebility of form in porcelain delicacy, it has a fabric flow of pattern thats textured rather than calligraphied.
---

Monday, January 07, 2008

ಸಮಾಜ ಗರ ದಹನ



===

ನೋಡಬೇಕೆಂದಿದೆ ನನಗೆ "ಸಮಾಜ" ವನ್ನು.
ತೋರುವಿರಾ?
ಪ್ರತ್ಯೇಕವಾಗಿ ಕಂಡು,ಕುಳ್ಳರಿಸಿ,
ಕೆಲ ವಿಷಯಗಳ ಕೂಲಂಕಶವಾಗಿ ಕೇಳಬೇಕಿದೆ!
ಮೂಗಿನ ನೇರಕ್ಕೂ ಮತಿಗೊಡದೆ
ಮುಖವ ತೋರದೆಲೆ , ಮೂಗು ತೂರಿಸುವ
ಹರಕು ಮೊರೆಯ ಅಶರೀರವಾಣಿಗಳ
ಲಕ್ಷ್ಯಗೆಡದ ಲಕ್ಷ್ಮಣನು
ಲಂಕೇಶನನುಜೆಯ ನಾಸಿಕವ ಸಿಗಿದಂತೆ
ಲೆಕ್ಕಿಸದೆ ರಕ್ಕಸ ರಂದ್ರಗಳ ಛೇದಿಸಿ
ನೆಮ್ಮದಿಯ ನಿಟ್ಟುಸಿರು ಬಿಡಬೇಕೆಂದಿದೆ!
ಗರಬಡಿದ ಸಮಾಜವ ದಹಿಸಿ,
ಸಮಾಜ ಗರ ದಹನ ಮಾಡಬೇಕಿದೆ!
ತೋರುವಿರಾ ನನಗೆ,ಸಮಾಜವನ್ನು?

Miami Lakes,FL. Jan 07 2008. 03:45 AM.


Get this widget | Track details | ಸಮಾಜ ಗರ ದಹನ

Friday, December 21, 2007

ಬಣ್ಣಿಸಲಾರದ ಭವ




====
ಮತ್ತೆ ಆವರಿಸಿದೆ.
ಬಣ್ಣಿಸಲಾರದ ಭವ.
ಅಭಾವ!
ಸುತ್ತ ಸಮ್ವೃದ್ಧಿಯ ನಡುವೆಯೂ
ಮನ ಹೆತ್ತ ಅಗೋಚರ
ಕೊರತೆ.. ನೋವು .. ಬೇಗೆ...
ದಿನವೆಲ್ಲ ಹಾಡಿ-ಪಾಡಿ, ಕುಣಿದು ದಣಿದು
ಮೂರ್ತಾಸು ನಕ್ಕು ನಲಿದು
ಉಲ್ಲಾಸದೆ, ಅಬ್ಬಾ! ಉಸ್ಸೇಂದು
ಕೂರುವಷ್ಟರಲ್ಲಿ........
ದುಪಟಿ ಹೊದೆದು, ಅವಿತು ಕುಳಿತ
ಗೊಗ್ಗಯ್ಯನಂತೆ ಜಿಗಿದು,
"ಬ್ಯಾಆಆಆ!!!!" ಎಂದು ನನ್ನ ಬೆನ್ತಬ್ಬಿ,
ತಬ್ಬಿಬ್ಬಾಗಿಸಿ, ಬಾಗಿಸಿ ಮತ್ತೆ ಆವರಿಸಿದೆ.
ಬಣ್ಣಿಸಲಾರದ ಭವ.
ಅಭಾವ!
---------------------
Miami Lakes. 08:28PM December 21 2007. Friday Evening. "Happy" Holidays Begin!


Get this widget | Track details | ಬಣ್ಣಿಸಲಾರದ ಭವ

Sunday, December 09, 2007

ಹಯವದನರಾಯರ ಕುದುರೆ


ಹಯವದನರಾಯರ ಕುದುರೆ
ಕತ್ತೆಯಾಯಿಯಂತೆ.
ಯಾರಿಗೂ ತಿಳಿಯಲೇ ಇಲ್ಲ.
ಕಣ್ಗೆಕಟ್ಟಿದ ಪಟ್ಟಿ ಏಕಾಗ್ರ ಮೂಡಿಸದೆ
ನಿಲುವನಾಗಿಸಿದೆ ಸಂಕುಚಿತ.
ಮೂಗಿನ ನೇರದ ಅಶ್ವಯಾನ
ಗಾರ್ಧಭ ಗಮನವಲ್ಲದೆ,
ಅಶ್ವಾಂದೋಳಿಕವಾಗಬಲ್ಲದೆ?
ಹ್ಮ್ಮ್ಮ್ ...ಹಯವದನ
ರಾಯರ ಕುದುರೆ ಕತ್ತೆಯಾಯಿಯಂತೆ!

Miami Lakes, Florida - 2:30 AM

Saturday, November 17, 2007

ಮುಕುತಿ

ಙ್ನಾನ ಭಕುತಿ ಕರ್ಮ ಮಾರ್ಗ
ನಡೆದು ಪಡೆವೆ ಮುಕುತಿ
ನನ್ನ ದಾರಿ ನನಗೆ ಎನಲು
ಕಡೆಗೆ ಮಣ್ಣು ಮುಕುತಿ !

4:15 AM Saturday 17 November 2007. Milpitas CA.

ರಂಗೋಲಿ

ನನ್ನೆದೆಯ ಅಂಗಳದೆ
ನೀ ಬರೆದ ರಂಗೋಲಿ
ವಿಧಿ ಕದಡಿ ಬಿರುಗಾಳಿ
ಮುಗಿಲಿಗೇರಿದೆ ಧೂಳಿ
ಭುಗಿಲೆದ್ದ ಬಣ್ಣದೋಕುಳಿ
ಕಂಗಳಾ ಒಳನುಸುಳಿ
ಅವಿತ ಹಳೆಯಾಸೆಯ ಹುಳಿ
ನಿಂದು ಕಾಯುತಿದೆ ಕಣ್ಣಂಚಿನ ಬಳಿ


ನನ್ನ ಪ್ರಿಯೆ ಇಟ್ಟ heartshape ರಂಗೋಲಿ, ವಿಧಿಯ ಬಿರುಗಾಳಿಯಿಂದ washout ಆಗಿ, ಕಣ್ಣೊಳಗೆ ಹೋಗಿ ಕುಚ್ಚ್ ಕೊಂಡು, ಕಣ್ಣೀರು generate ಆಗಿ, ಕಣ್ಣು caorner ನಲ್ಲಿ parking ಮಾಡ್ಕೊಂಡಿದೆ ಅನ್ನೋ ಅರ್ಥ.

Between 12:00 midnight to 12:45 AM Saturday 17 November 2007. Milpitas CA.

Friday, November 16, 2007

ಪೂರ್ವಾಗ್ರಹ




--
ಶಾಂತಿ ಮಾಡಿಸಲು
ತಣ್ಣಗಾಗುವವು,
ರಾಹು ಕೇತು ಮಿಕ್ಕೆಲ್ಲಾ ನವಗ್ರಹ.

ಬ್ರಾಂತಿ ಮೂಡಿಸಿ
ಬಿಡದೆ ಕಾಡುವುದೊಂದೆ,
ಪೂರ್ವಾಗ್ರಹ!

ಹಿನ್ನೆಲೆ: ಅತೀ ಬುದ್ಧಿವಂತರು, ಪ್ರಙ್ನಾವಂತರು, ವಿದ್ವದ್ಪೂರ್ಣರು ಎಂದು ನಾನು ಪರಿಗಣಿಸಿದ್ದ (ಈಗಲೂ ಗೌವರವಿಸುವ) ಕೆಲವು ಮಿತ್ರರು ಪೂರ್ವಾಗ್ರಹ ಪೀಡಿತರಾಗಿ, ವಸ್ತುನಿಷ್ಟವಲ್ಲದ ವಾದದಲ್ಲಿ ತೊಡಗಿದ ಸಂದರ್ಭದಲ್ಲಿ ಮನಸ್ಸಿಗೆ ಬಂದ ಸಾಲುಗಳು.

Pre-concieved notion bagge. Nov 16 12:20AM Milpitas,CA
--