Tuesday, February 26, 2008

ಹಿಂದೋಳ ವಸಂತ, ಶೃಂಗಾರ ಸಂಕೀರ್ತನೆ ಮತ್ತು ಪುರುಷಾರ್ಥ ಕುರಿತು


ಸಂಜೆ ಕಳೆದು ಮೂರ್ತಾಸಾಗಿತ್ತು. ಬಾಂದಳದಲ್ಲಿ ನಿಶಾದೇವಿ ಆವರಿಸಿದ್ದರೂ, ’ಆಧಾ ಹೈ ಚಂದ್ರಮಾ, ರಾತ್ ಆಧಿ...’ ಅನ್ನುವಷ್ಟು ಹೊತ್ತು ಕಳೆದಿರಲಿಲ್ಲ. ಇನ್ನೂ ಎಳಸೆನಿಸುವ ರಾತ್ರಿ ವೇಳೆಯಲ್ಲಿ ವಸಂತಮಾಸದ ಸುವಾಸನೆಯುತ ಅಲರೆಲರ ರೀತಿ ಅಲೆ ಅಲೆಯಾಗಿ ಕೇಳಿಸಿದುದು ಹಿಂದೋಳವಸಂತ ರಾಗದ ಅನ್ನಮಾಚಾರ್ಯರ ’ಜಗಡಪು ಚನವುಲ ಜಾಜರ’ ಸಂಕೀರ್ತನೆ. ಶೃಂಗಾರ ರಸದಲ್ಲಿ ಮಿಂದಿರುವ ಈ ಸಂಕೀರ್ತನೆ ಹಿಂದೋಳವಸಂತ ರಾಗದಲ್ಲಿದೆ. ಹಿಂದೋಳವೆಂದರೆ ಉಯ್ಯಾಲೆ. ಹಿಂದೋಳವಸಂತಕ್ಕೆ ಎಂಥ ಅರ್ಥವತ್ತಾದ ಹೆಸರು ನೋಡಿ. ರಾಗ ಬೆಳೆಯುವ ಪರಿ ಅನುಭವಿಸಲು, ಕೇಳುಗನು ತೂಗುಯ್ಯಾಲೆಯ ಮೇಲೆಯೇ ಕುಳಿತು ಡೋಲಾಯಮಾನವಾಗಿ ಹಿಂದು ಮುಂದು ತೂಗುವ ಭಾಸವಾಗುವಂತಿದೆ ಇದರ ಸ್ವರ ಸಂಚಾರ. ಗಮಕಗಳ ಮೆರುಗು ಸೇರಿ, ಸ್ವರಪುಂಜಗಳು ಮತ್ತು ಪದಪುಂಜಗಳು ಉಯ್ಯಾಲೆಯಾಡುವ ಸದೃಶ ಸೌಕ್ಯ ಮೂಡುತ್ತದೆ. ವಸಂತ ಮಾಸ ಮತ್ತು ತೂಗುಯಾಲೆ, ಶೃಂಗಾರಕಾಗಿಯೇ ಹೇಳಿಮಾಡಿಸಿದಂತಿದೆ. ಅದರ ಜೊತೆಗೆ ’ಪದಕವಿತ ಪಿತಾಮಹ’ ಅನ್ನಮಾಚಾರ್ಯರ ಪದಲಾಲಿತ್ಯದ ಸರಸ ಸಲ್ಲಾಪ. ’ಭಾವಯಾಮಿ ಗೋಪಾಲಬಾಲಂ’ಯೆಂದು ಭಕ್ತಿ ಸಂಕೀರ್ತನೆ ಸಾರಿದ ಅನ್ನಮಯ್ಯ; ’ಅದಿವೋ ಅಲ್ಲದಿವೋ ಶ್ರೀಹರಿವಾಸಮು’ ಎಂಬ ಕೃತಿಯಲ್ಲಿ ಏಳುಬೆಟ್ಟಗಳನ್ನು ಸಹಸ್ರಾರ, ಮಣಿಪೂರ ಮುಂತಾದ ಏಳುಚಕ್ರಗಳಿಗೆ ಹೋಲಿಸಿ, ಕುಂಡಲೀನಿಯೋಗದ ಮರ್ಮ ತಿಳಿ ಹೇಳಿದ ಆಚಾರ್ಯರು ಕೂಡ. ಹೀಗೆ ಭಕ್ತಿ, ಯೋಗ, ವೈರಾಗ್ಯ ತಿಳಿ ಹೇಳಿದ ಸಂತನು ’ಹೂವು- ಹಾಸಿಗೆ, ಚಂದ್ರ - ಚಂದನ, ಬಾಹುಬಂಧನ-ಚುಂಬನ’ ಗಳ ಬಗ್ಗೆ ವ್ಯಾಖ್ಯಾನ ಮಾಡುವುದೆಂದರೆ ಮೊದಲಿಗೆ ತುಸು ವಿರೋದಾಭಾಸವೆನಿಸುತ್ತದೆ. ’ಜಗಡಪು ಚನವುಲ ಜಾಜರ’ ಸಂಕೀರ್ತನೆಯಲ್ಲಿ ಸಖಿ ಸಖರು ಸರಸದಿಂದ ಸೆಣಸಾಡುವ ಹಬ್ಬದ ವರ್ಣನೆ ನೀಡಿದ್ದಾರೆ. ’ಜಾಜರ’ ಅಂದರೆ ಹೋಲಿಯ ರೀತಿ ಒಂದು ಹಬ್ಬ, ಪರ್ವ. ಸರಸ ಸಲ್ಲಾಪ, ವಿರಹ ವೇದನೆಯ ಭಾವನೆ ಇನ್ನಿತರ ಶೃಂಗಾರ ಪ್ರಧಾನ ಕೃತಿಗಳನ್ನು ರಚಿಸಿ, ಭಕ್ತಿಪ್ರದಾನವಾದ ಕರ್ನಾಟಕ ಸಂಗೀತದ ಚೌಕಟ್ಟಿನಲ್ಲಿ ಶೃಂಗಾರ ಸಂಕೀರ್ತನಗಳನ್ನು ಅನ್ನಮಯ್ಯನವರು ಸುಲಲಿತವಾಗಿ ಅಳವಡಿಸಿಕೊಂಡಿದ್ದಾರೆ.ತಾಳ್ಳಪಾಕಂ ಅಣ್ಣಮಾಚಾರ್ಯವಿರಚಿತ ನಾಲ್ಕು ಸಂಕಲನಗಳು ಲಭ್ಯವಿದೆ: ೧.ಅಧ್ಯಾತ್ಮ ಸಂಕೀರ್ತನಲು ೨. ಶೃಂಗಾರ ಸಂಕೀರ್ತನಲು, ೩ ಶೃಂಗಾರಮಂಜರಿ, ೪.ವೆಂಕಟಾಚಲ ಮಹಾತ್ಮೆ.ಈ ಸಂಕೀರ್ತನೆಯನ್ನು ಅವರ ಶೃಂಗಾರಮಂಜರಿ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.ವೆಂಕಟೇಶಸ್ವಾಮಿಯಲ್ಲಿ ಒಬ್ಬ ತರುಣಿಯ ಅಪರಿಮಿತ ಸತ್ವಪ್ರೇಮ ಮತ್ತು ಆಕೆಯ ಸಖಿಯರ ಮಧ್ಯಸ್ಥಿಕೆ ಇಂದ ಪ್ರೇಮ ಸಫಲವಾಗುವ ಕಥಾವಸ್ಥುವಿನ ಸುತ್ತಾ ಹೊಮ್ಮಿರುವ ಈ ಕೃತಿಯಲ್ಲಿ ವಿಪುಲವಾಗಿ ಶೃಂಗಾರ ಭರಿತ ಕೃತಿಗಳಿವೆ. ಹದಿನಾಲ್ಕನೆ ಶತಮಾನದ ತೆಲುಗಿನ ಅನ್ನಮಯ್ಯನವರು ಇಂತಾದರೆ, ತಮಿಳಿನ ಮಹಾಸಂತರೆನಿಸಿದ ತಿರುವಳ್ಳುವರ್‍ ಅವರೂ ಸಹ ತಮ್ಮ ಮೇರುಕೃತಿಯಾದ ತಿರುಕ್ಕುರಳ್ ನಲ್ಲಿ ಸಖೀ-ಸಖರ ಮಧುರ ಪ್ರೇಮಕ್ಕೆ ಉನ್ನತ ಸ್ಥಾನ ಕೊಟ್ಟಿದ್ದಾರೆ. ೧೩೦೦ ಪಂಕ್ತಿಗಳಿರುವ ಕುರಳ್ ನಲ್ಲಿ ಮೂರುವಿಭಾಗಗಳು: ನೀತಿಬೋದೆಯನ್ನು ಹೇಳುವ ’ಅರಂ’ , ಜೀವನ ಸತ್ಯಗಳನ್ನು ತಿಳಿಸುವ ’ಪೊರುಳ್’, ಸಾಮರಸ್ಯ ಮತ್ತು ಶೃಂಗಾರ ಪ್ರಧಾನ ಭಾಗ - ’ ಇನ್ಬಂ’. ಇತ್ತ ನಮ್ಮ ಕರುನಾಡಿನ ಹಿತ್ತಲಲ್ಲಿನ ಸೂಫಿ ಸಂತ ಶರೀಫರು , ’ಕೋಡಗಾನ ಕೋಳಿ ನುಂಗಿತ್ತಾ?’ ಎಂದು ಮೊದಲುಗೊಂಡು, ’ಗೋವಿಂದಾ ಗುರುವಿನ ಪಾದ ನನ್ನನೆ ನುಂಗಿತ್ತಾ! ಎಂಬ ವೈರಾಗ್ಯದ ನುಡಿಯನ್ನು ಒಂದು ಕಡೆ ಹಾಡಿದರೆ, ಅಷ್ಟೆ ಸಹಜವಾಗಿ, ’ಮೋಹದ ಹೆಂಡತಿ’ ಬಗ್ಗೆಯೂ ಪ್ರೀತಿ-ಅಕ್ಕರೆಯಿಂದ ಸುರತ ಸಂಗೀತ ಪಾಡಿದ್ದಾರೆ. ಇನ್ನು ಸಂಸ್ಕ್ರುತದಲ್ಲಿ ಭರ್ತೃಹರಿಯ ಸುಭಾಶಿತತ್ರಿಶತಿಯಲ್ಲಿಯೂ ನೀತಿ ಶತಕ, ಶೃಂಗಾರ ಶತಕ, ಮತ್ತು ವೈರಾಗ್ಯ ಶತಕಗಳೆಂಬ ಮೂರು ವಿಭಾಗಗಳೇ. ಇಲ್ಲಿ ನಾವು ಗಮನಿಸಬಹುದಾದ ವಿಷಯವೆನೆಂದರೆ -- ಸಂಸ್ಕೃತದಲ್ಲಿ ರಚಿಸಿದ ಭರ್ತೃಹರಿ ಮುನಿಯಾಗಲೀ, ತಮಿಳಿನ ವಳ್ಳುವರ್ ಆಗಲಿ, ತೆಲುಗಿನ ಅನ್ನಮಾಚಾರ್ಯರಾಗಲಿ, ಕನ್ನಡದ ಶಿಶುನಾಳರಾಗಲಿ ಬೇರೆ ಬೇರೆ ದೇಶ-ಕಾಲ-ಭಾಷೆಗಳಲ್ಲಿ ಇದ್ದರಾದರೂ ಎಲ್ಲ ಸಂತರೂ ನೀತಿ, ಶೃಂಗಾರ ಮತ್ತು ವೈರಾಗ್ಯಗಳ್ಳನ್ನೇ ಆಯ್ದುಕೊಂಡು ಬದುಕಿನ ಸಂಪೂರ್ಣತೆಯನ್ನು ಮೆರೆದಿದ್ದಾರೆ. ಚತುರ್ವಿಧ ಪುರುಷಾರ್ಥಗಳಲ್ಲಿ ಧರ್ಮವೇ ಆಗಲಿ, ಅರ್ಥವೇ ಆಗಿಲಿ, ಕಾಮವೇ ಆಗಲಿ, ಯಾವುದೇ ಒಂದು ಸಂಪೂರ್ಣ ಪುರುಷಾರ್ಥವಲ್ಲ. ಹಂತ ಹಂತವಾಗಿ ನೀತಿಯಿಂದ ಧರ್ಮಾರ್ಥಗಳು, ಶೃಂಗಾರದಿಂದ ಧರ್ಮಾವರೋಧವೆನಿಸದ ಕಾಮವು, ಕಾಲಾಂತರದಲ್ಲಿ ವೈರಾಗ್ಯದಿಂದ ಮೋಕ್ಷವೂ ಪ್ರಾಪ್ತಿಯಾಗುವುದಲ್ಲಿಯೇ ಜೀವಿತದ ಸಾರ್ಥಕತೆ!జగడపు చనువుల జాజర, సగినల మంచపు జాజర

మొల్లలు తురుముల ముడిచిన బరువున, మొల్లపు సరసపు మురిపెమున
జల్లన పుప్పొడి జారగ పతిపై చల్లే పతిపై, చల్లే రతివలు జాజర

భారపు కుచముల పైపై కడు సింగారము నెరపేటి గంధవొడి
చేరువ పతిపై చిందగ పడతులు, సారెకు చల్లేరు జాజర

బింకపు కూటమి పెనగేటి చెమటల, పంకపు పూతల పరిమళము
వేంకటపతిపై వెలదులు నించేరు, సంకుమ దంబుల జాజరಬಾಲಕೃಷ್ಣಪ್ರಸಾದ್ ಮತ್ತು ಸಂಗಡಿಗರು | Track details |


*** ಬಾಲಕೃಷ್ಣಪ್ರಸಾದ್ ಮತ್ತು ಸಂಗಡಿಗರು

Sunday, February 24, 2008

ಲೇಸು, ಕೊಳ್ಳದಿರುವುದೇ ಲೇಸು!

ಅಮೆರಿಕೆಯಲ್ಲಿ ಗ್ರಾಹಕರು ವಸ್ತುಗಳನ್ನು ಕೊಳ್ಳುವಾಗ ಅತ್ಯಂತ ಒತ್ತಡಕ್ಕೆ ಒಳಗಾಗಿ ಮನೋವೈದ್ಯರ ಮೊರೆ ಹೊಕ್ಕಿದ್ದಾರಂತೆ!

ಬಹಳ ಹಿಂದೆ ನಾನು ಭಾರತದ ಒಂದು ಪತ್ರಿಕೆಯಲ್ಲಿ ಈ ವಿಷಯ ಓದಿದ ನೆನಪು.ಆಗ ನಾನು,ಇದು ಅತಿಶಯೋಕ್ತಿಯ ಮಾತು ಎಂದು ತಿಳಿದು ಮನದಲ್ಲೆ ನಕ್ಕಿದ್ದುಂಟು.’ಶಾಪಿಂಗ್ ಸ್ಟ್ರೆಸ್ಸ್’ ಕಳೆದು ಕೊಳ್ಳಲು ವೈದ್ಯರ ಬಳಿ ಹೋಗುವುದೆಂದರೇನು? ’ಇಲ್ಲ,ಇಲ್ಲ,ಸಾಧ್ಯವೇ ಇಲ್ಲ!ಇರಲಿಕ್ಕಿಲ್ಲ!’ ಎಂದು ನನ್ನ ಅಂಬೋಣ.ಈ ವಿಷಯ ನನಗೆ ಮನವರಿಕೆಯಾಗಲು,ನಾನು ಸ್ವತಃ ಅಮೆರಿಕೆಗೆ ಬಂದು --ಅಬ್ಬಾ! ಬೇಡವೆನಿಸುವಷ್ಟು ಆಯ್ಕೆಗಳ ಪ್ರವಾಹದಲ್ಲಿ ಸಿಲುಕಿಯೇ ಅರಿಯಬೇಕಾಯಿತು.ಇಲ್ಲಿ ಏನು ಕೊಳ್ಳಬೇಕಾದರೂ ಗ್ರಾಹಕನಿಗೆ ಸಾವಿರಾರು ನಮೂನೆಗಳು ದೊರೆಯುತ್ತವೆ.ಒಂದೇ ಬಗೆಯ ಯಾವುದೇ ಸಾಮಗ್ರಿಯ ಇನ್ನೂರಕ್ಕೂ ಹೆಚ್ಚು ಬಗೆಗಳು ದೊರೆಯುವ ಸ್ಥಳವಿದು.ಒಂದು ವಸ್ತುವಿಗೆ ಐದು ಡಾಲರ್ ಇಂದ ಹಿಡಿದು ಐದು ಸಾವಿರ ಡಾಲರ್ ವರೆಗೂ, ಮನಸ್ಸಿಗೆ ಬಂದ ಯಾವುದಾದರು ಬೆಲೆ ಹಚ್ಚಿ, ದಾಸ್ತಾನು ಮಾಡುವ ಸಾಮರ್ಥ್ಯವಿರುವ ಮಹಾದೇಶವಿದು.ಊಟ-ತಿಂಡಿ,ಬಟ್ಟೆ- ಬರೆ,ಕಾರು-ವಾಹನ ಹೀಗೆ ಎಲ್ಲಾದ್ರಲ್ಲೂ ಗ್ರಾಹಕನ ಗ್ರಹಿಕೆಗೂ ಮೀರಿದಷ್ಟು ವೆರೈಟಿ. ನಾವು ಕೊಂಡದ್ದು ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ -- ’ವ್ಯಾಲ್ಯೂ ಫಾರ್ ಮನಿ’ ಯೇ ಎಂಬ ಗೊಂದಲ ಗ್ರಾಹಕನಿಗೆ ಇದ್ದೇ ಇರತ್ತೆ. ಇಷ್ಟೇ ದುಡ್ಡಿಗೆ ಇನ್ನೂ ಹೆಚ್ಚು ಕೊಳ್ಳಬಹುದಿತ್ತೇನೊ, ಇನ್ನೂ ಒಳ್ಳೆಯದು ಖರೀದಿಸ ಬಹುದಿತ್ತೇನೋ ಎಂಬ ಉತ್ತರವಿಲ್ಲದ ಅನಂತ ಆತಂಕ. ನಾವು ಕೊಂಡದ್ದೆಲ್ಲಾ ಅತ್ಯುನ್ನತ ಮಟ್ಟದ್ದೇ ಆಗಿ ತೀರಬೇಕು ಎಂಬ ಮಾನವನ ಹಂಬಲದ ಜೊತೆಗೆ ಆಯ್ದುಕೊಳ್ಳಲು ಬೇಡವೆನಿಸುವಷ್ಟು ವೈವಿಧ್ಯತೆ ಇದ್ದ ಪಕ್ಷದಲ್ಲಿ ಇಂತ ’ಶಾಪಿಂಗ್ ಸ್ತ್ರೆಸ್ಸ್’ ತಲೆದೋರುವುದು ಸಹಜ.

ಅನಂತ ಸಾಧ್ಯತೆಗಳ ಅಮೆರಿಕೆಯಲ್ಲಿ
ಎಲ್ಲವೂ ಗ್ರಾಹಕ ಶಾಹಿ;
ಆಯ್ದುಕೊಳ್ಳಲು ಅರಿಯದೇ ಅಮಾಯಕನಾದರೆ,
ನೆಟ್ಟಕಣ್ಣು-ಬಿಟ್ಟಬಾಯಿ!


ಹಿರಣ್ಯಖಂಡದಲ್ಲಿ ನಾನು ಕಾಲಿಟ್ಟು,ಕಚೇರಿಗೆ ಬಂದಿಳಿದ ಮೊದಲ ದಿನಗಳು. ಬೆಳಗಿನ ನನ್ನ ಕಾಫಿ ಡೋಸ್ ಗಾಗಿ ಕ್ಯಾಫೆಟೀರಿಯಾ ಬಳಿ ಬಂದು ನಿಂತೆ. ಎರಡು ಡಜೆನ್ ಬಗೆಯ ಕಾಫಿ ಆಯ್ಕೆಗಳು: ಐರಿಶ್ ಕಾಫಿ, ಬ್ರೇಕ್ ಫಾಸ್ಟ್ ಸ್ಪೆಷಲ್, ಕೊಲಂಬಿಯಾ ಬ್ಲೆಂಡ್ -- ಹೀಗೆ ಬಗೆ ಬಗೆಯ ಸುಮಾರು ಎರಡು ಡಜನ್ ವೆರೈಟಿಗಳು. ಮೊದಲೇ ಅವಳಿ-ಜವಳಿ ಖ್ಯಾತಿಯ ಮಿಥುನ ರಾಶಿಯಲ್ಲಿ ಹುಟ್ಟಿದ ನನಗೆ, ಎರಡಕ್ಕಿಂತ ಹೆಚ್ಚು ಏನ್ನನ್ನೇ ತೋರಿಸಿ - ’ಆಯ್ದುಕೋ’ ಆಂದರೂ, ಅಲ್ಲೆ ಮಾನಸಿಕ ದ್ವಂದ್ವಗಳು ನಿರ್ಮಿತವಾಗಿ, ಗೊಂದಲ ಮೂಡಿ, ಯಾವುದನ್ನೂ ಆಯ್ದುಕೊಳ್ಳಲಾರದೆ ಬೇಸತ್ತು ಸುಸ್ತಾಗಿಬಿಡುವೆ. ಅಂತಹುದರಲ್ಲಿ ಹೀರಲು ಇಪ್ಪತ್ನಾಲ್ಕು ಬಗೆಯ ಕಾಫಿ ತಳಿಗಳನ್ನು ನನ್ನ ಮೇಲೆ ಹೇರುವುದೇ? ಯಾವುದನ್ನೂ ಕುಡಿಯದೆ,ಸೀದಾ ಡೆಸ್ಕ್ ಬಳಿ ಬಂದು ಕೀಲಿಮಣೆ ಕುಟ್ಟಲು ಆರಂಭಿಸಿದೆ.

ಮಾಸಗಳು ಕಳೆದಂತೆ ತಾಯ್ನಾಡಿನ ನೆನಪುಗಳ ಜೊತೆಗೆ, ನನ್ನ ಲೇಸು ಸಹಾ ತುಸು ಮಾಸ ತೊಡಗಿತು. ಜಯನಗರದ ಬಾಟಾನಲ್ಲಿ ರೂ.೯೯.೯೯ ಬೆಲೆಯ ಸಾದಾ ಚಪ್ಪಲಿಯ ಜೊತೆ ಕೊಂಡ ಕಪ್ಪು ಬಣ್ಣದ ಆಫೀಸ್ ಷೂ ನಂದು.ಪಾದುಕೆ ಸರಿಯಾಗಿ ಬಾಳಿಕೆ ಬಂದರೂ,ಆರು ತಿಂಗಳಲ್ಲಿ ಪಾಪ ಲೇಸು ’ಡಂ’ ಅಂದಿತು.ಲೇಸಿಗೆ ಕನ್ನಡದ ಪಾರಿಭಾಷಿಕ ಶಬ್ದ ತಿಳಿದಿಲ್ಲ.ಸರಿ,’ಪಾದುಕಾ ಬಂಧಕ’ಅನ್ನೋಣ.ಚಿಕ್ಕದಾಗಿ ಮತ್ತು ಚೊಕ್ಕವಾಗಿ ’ಪಾ.ಬ’ -- ಶಾರ್ಟ್ ಅಂಡ್ ಸ್ವೀಟ್! ಕಥೆ ಮುಂದುವರಿಸುತ್ತಾ...ಪಾಪ ನನ್ನ ಪಾ.ಬ. ಕೈ ಕೊಡ್ತಾ....ಆಮೇಲೆ, ಹತ್ತಿರದ ವಾಲ್ ಮಾರ್ಟ್ ಗೆ ಲೇಸಿಲ್ಲದ ದಾಪುಗಾಲಿಟ್ಟು ಕೊಂಡು ನಡೆದೆ. ಕಣ್ಣಿಗೆ ಬಿದ್ದ ಕಪ್ಪು ಪಾ.ಬ. ಕೊಂಡು ಮನೆಗೆ ಹಿಂದಿರುಗಿದೆ.ಮರುದಿನ ಕಚೇರಿಗೆ ತೆರಳುವ ಮುನ್ನ ಪ್ಯಾಕೆಟ್ಟನ್ನು ಬಿಚ್ಚಿ ನೋಡಿದರೆ: ಹನುಮಂತನ ಬಾಲದಂತೆ, ದ್ರೌಪದಿಯ ಸೀರೆಯಂತೆ, ಗೋಲ್ಡನ್ ಸ್ಟಾರ್ ಗಾಳಿಪಟದ ಬಾಲಂಗೋಚಿಯಂತೆ, ಪಾ.ಬ ಮುಗಿಯುತ್ತಲೇ ಇಲ್ಲ. ಸುಮಾರು ಆರೇಳು ಗಜದ ಬೃಹತ್ ಪಾದುಕಾ ಬಂಧಕ ಅದು. ಅಮೆರಿಕೆಯಲ್ಲಿ ಓಡುವುದಕ್ಕೆ ಬೇರೆ ಷೂ; ನಡೆಯುದುದಕ್ಕೆ ಬೇರೆ ಷೂ; ಜಾಗಿಂಗ್ ಗೆ ಬೇರೆ ರೀತಿ ಷೂ, ಬುಟ್ಟಿ ಚಂಡು ( ಬಾಸ್ಕೆಟ್ ಬಾಲ್) ಆಡುವುದಕ್ಕೆ ಬೇರೆ ಷೂ;ಮಾತಾಡಿದವರಿಗೆ ಬೂಟ್ನಲ್ಲಿ ಹೊಡಯಕ್ಕೆ ಬೇರೆ ಷೂ -- ಹೀಗೆ ವಿಧ ವಿಧ ವಾದ ಷೂಗಳ ಮಹಾಪೂರವೇ ಇದೆ. ಷೂಗಳಿಗೆ ತಕ್ಕಂತೆ ಪಾ.ಬ. ಗಳು ಸಹ. ನಾನು ಯಾವುದೊ ಪರ್ವತಾರೋಹಿಗಳಿಗೆ ಮಾಡಿಟ್ಟ ಪಾ.ಬ ತಂದಿದ್ದೆ. ಹೇಳಿ ಕೇಳಿ, ಸುಮಾರು ಐದು ಡಾಲರ್ ಕೊಟ್ಟು ಆ ಲೇಸ್ ಕೊಂಡಿದ್ದೆ. ಲಾಡಿ - ಲೇಸ್ ಗೆಲ್ಲಾ ಇನ್ನೂರು ರೂಪಾಯಿಗಿಂತ ಹೆಚ್ಚು ಕೊಟ್ರೆ ಆ ಭಗವಂತ ಮೆಚ್ತಾನಾ? ಭಗವಂತ ಮೆಚ್ಚಿದರೂ ದುಂದು ವೆಚ್ಚ ಮಾಡಿದೆ ಅಂತ ನಮ್ಮ ಭಾರತದ ಸಮಾಜ ಮೆಚ್ಚುತಾ ಅಂತ,ಇದ್ದ ಲೇಸಲ್ಲಿ ಒಂದನ್ನು ಎರಡು ತುಂಡು ಮಾಡಿ, ಬೇಗ ಬೇಗ ಷೂಗಳಿಗೆ ತೂರಿಸಕ್ಕೆ ಹೋದೆ. ನೈಲಾನ್ ಲೇಸು, ತುದಿಯಲ್ಲಿ ಹರ್ಕೊಂಡು ಎರಡು ತಲೆ ನಾಗರ ಹಾವಿನ ಹಾಗೆ ಬಾಯಿ ಬಿಟ್ಕೊಳ್ತು. ಅಂಗಡೀಗೆ ವಾಪಸ್ ಕೊಡೋಣ ಅಂತ ನೋಡಿದ್ರೆ, ಆಗ್ಲೇ ಸೆನ್ಸಾರ್ ಬೋರ್ಡ್ ಅವರ ಹಾಗೆ ಕತ್ತರಿ ಪ್ರಯೋಗ ನಡೆದಿತ್ತು. ಅಂಗಡಿ ಅವರು ವಾಪಸ್ ತೊಗೊಳೊ ಅವಕಾಶ ಕೊಟ್ರೂ ಸಹಾ, ನನ್ನ ತಪ್ಪಿಗಾಗಿ ಹಿಂದಿರುಗಿಸಿ ಹಣ ಮರಳಿ ಪಡೆಯುವ ಮನಸ್ಸು ಬರಲಿಲ್ಲ.ವಿನಾ ಕಾರಣ ಐದು ಡಾಲರ್ ಕಳೆದು ಕೊಂಡ ಗ್ರಾಹಕನ "ಶಾಪಿಂಗ್ ಸ್ತ್ರೆಸ್ಸ್' ತಲೆದೋರಿತು.ಸಂಜೆ ಮತ್ತೆ ಹೋದೆ ವಾಲ್ ಮಾರ್ಟ್ ಗೆ. ಈ ಬಾರಿ ನಾನು ಪಾಠ ಕಲಿತ ನೊಂದ ಅನುಭವಸ್ತ. ಲೇಸ್ ಕೊಳ್ಳುವ ಮೊದಲು ನಮ್ಮ ಪಾದುಕೆಯಲ್ಲಿ ಎಷ್ಟು ತೂತುಗಳು ಇವೆ ಎಂದು ನೋಡಿ, ಕೂಲಂಕಶವಾಗಿ ವಿಚಾರಿಸಿ ವಿಷ್ಲೇಶಿಸಿ, ಅದಕ್ಕೆ ಅನುಗುಣವಾಗಿ ಪಾ.ಬ. ಕೊಳ್ಳಬೇಕಂತೆ. "ಅಯ್ಯೋ ರಾಮ! ಏನಪ್ಪ ಇದು? ಲೇಸ್ ಕೊಳ್ಳದಕ್ಕೆ ಇಷ್ಟು ಸಾಮಾನ್ಯ ಙ್ನಾನ ಇರಬೇಕೆ?" ಅಂದು ದೇವರನ್ನು ಕೇಳಿದರೆ; ರಾಮನಿಗೇನು ಗೊತ್ತು ಪಾದುಕಾ ಬಂಧಕದ ವಿಚಾರ? ಭರತ ಅದನ್ನೂ ಹೊಡ್ಕೊಂಡು ಹೋಗಿಬಿಟ್ಟಿದ್ನಂತೆ ಆಶ್ರಮಕ್ಕೆ ಬಂದಾಗ!

ರಾಮಾಯಣದ ವಿಷಯ ಹಾಗಿರ್ಲಿ, ಲೇಸು ಕೊಳ್ಳುವ ಬಗ್ಗೆ ನಮ್ಮ ಸಮಗ್ರ ಅರಿವು ಹೆಚ್ಚಿಸಿ ಕೊಳ್ಳೋಣ ಈಗ:

ಷೂವಿನಲ್ಲಿ ಮೂರರಿಂದ ನಾಲ್ಕು ಕಣ್ಣುಗಳಿದ್ದರೆ (ಐಲೆಟ್ಸ್) ೬೯ ಸೆ.ಮೀ. ಲೇಸು ಕೊಳ್ಳಬೇಕು; ಐದರಿಂದ ಆರು ಕಣ್ಣುಗಳ್ಳಿದರೆ ೯೧ ಸೆ.ಮೀ. ಲೇಸು, ಏಳರಿಂದ ಎಂಟು ಕಣ್ಣುಗಳಿದ್ದರೆ ೧೧೪ ಸೆ.ಮೀ. ಲೇಸು. ಲೇಸು ಕೊಳ್ಳುವ ಮೊದಲು ಕನಿಷ್ಠ ಇಷ್ಟು ಮಾಹಿತಿ ನಮಲ್ಲಿರಬೇಕು. ಪಾ.ಬ. ಕೊಳ್ಳುವಲ್ಲಿಯೂ ಪಾದುಕೆಯ ಮೇಲಿರುವ ಕಣ್ಣುಗಳ ಮೇಲೆ ಕಣ್ಣಿಟ್ಟು, ಗಮನಕೊಟ್ಟು ಕೊಳ್ಳಬೇಕೆಂಬ ದೃಷ್ಟಾಂತ ಕಂಡುಕೊಂಡ ಕರಾಳ ದಿನ ಅದು. ನಿರಾಳವಾಗಿ ಯಃಕಶ್ಚಿತ್ ಒಂದು ಲೇಸ್ ಕೊಳ್ಳೋದಕ್ಕೂ ಇಷ್ಟು ತಿಳ್ಕೋ ಬೇಕಾದ್ರೆ;ಅಪ್ಪಾ ದೇವ್ರೇ,’ಲೇಸು, ಕೊಳ್ಳದಿರುವುದೇ ಲೇಸು!’

Thursday, February 14, 2008

ಹೃದಯ ಹೃದಯ ಮಿಲನ ದೊಳು


* ಮಧುರ ನಯನ ಮಧುರ ವಚನ ಮಧುರ ಹಸನ - ಮಧುರಾಧಿಪತಿ
===
ಇಂದು ವ್ಯಾಲೆಂಟೈನ್ಸ್ ಡೇ. ಈ ದಿನ ನಾನು ಪದೆ ಪದೆ ಗುನುಗುತಿರುವುದು ಪು.ತಿ.ನ. ಅವರ ಈ ದೈವೀಕವಾದ ರಚನೆ : "ಹೃದಯ ಹೃದಯ ಮಿಲನ ದೊಳು".ನಮ್ಮೆಲ್ಲರ ಇರುವಿನ ನಡುವೆ ಇರುವ ಇರುಳ ಛಾಯೆಯನ್ನು ನೀಗುವ ತಮೋಘ್ನಕಾರಕ - ಈ ಪ್ರೀತಿ ಎಂದಿದ್ದಾರೆ . ಆಹಾ! ಎಂಥಾ ಅಮೋಘ ಭಾವನೆ! ಮಧುರ ಅನುಭಾವಗಳ,ಅನುಭವಗಳ ಮೂಡಿಸುವ ಪ್ರೇಮ, ಜೀವನ್ಮುಖಿಗಳಾಗಲು ಚಿಲುಮೆಯಾಗಿ, ನವೋತ್ಸಾಹವಾಗಿ, ಸತ್ವ ಪ್ರೇರಕವಾಗಿ,"ಮನದರ್ತಿಯ ಪ್ರೇರಣೆ" ಎಂದೆನಿಸುತ್ತದೆ.ಪ್ರೇಮವು ಚೇತನವನ್ನು ಹಸನು ಮಾಡುವ ಕ್ರಿಯೆಯೆಂಬ ಅಧ್ಯಾತ್ಮದ ಮೆರುಗು ಈ ರಚನೆಯಲ್ಲಿದೆ. ನಿಜಕ್ಕೂ ಇದನ್ನು ಬರೆದ ನರಸಿಂಹಾಚಾರ್ಯರೇ ಧನ್ಯರು,ಆಲಿಸಿದ ನಾವೇ ಧನ್ಯರು! ಇಡೀ ಹಾಡು ವಿಜೃಂಭಣೆಯಿಂದ ರಾರಾಜಿಸುತ್ತದೆ. ಸಾಹಿತ್ಯದಷ್ಟೆ ಸೊಗಸಾಗಿ ಸಂಗೀತವನ್ನು ಸ್ವರಬದ್ಧ ಗೊಳಿಸಿದ್ದಾರೆ ಸಿ.ಅಶ್ವಥ್ ಅವರು.

===
ಸಂಕಲನ: ಭಾವ ಬಿಂದು
ಸಾಹಿತ್ಯ: ಪು.ತಿ.ನ.
ಸಂಗೀತ: ಸಿ. ಅಶ್ವಥ್
ಗಾಯನ: ಹೆಚ್. ಕೆ. ನಾರಾಯಣ್ ಮತ್ತು ಎಂ.ಎಸ್.ಶೀಲ
===
ಹೃದಯ ಹೃದಯ ಮಿಲನ ದೊಳಗೆ ಮಧುರವಹುದು ಧಾತ್ರಿ
ಮಧುರ ನಯನ ಮಧುರ ವಚನ ಮಧುರ ಹಸನ ಮೈತ್ರಿ

ಇರವಿರವಿನ ನಡುವಣಿರುಳ ಪರಿಹಸುವ ಸರ್ವಳಿ
ಅರಿವರ್ಥವ ದಮಿಸುವೂರ್ಜೆ ನರಗೊಲುಮೆಯ ಬಳುವಳಿ

ಇನಿಯರೊಸಗೆ ಮೊಗದೊಳೆಸೆವ ತನಿಯಕಾಂತಿ ಏನೆಳೆ
ಅನುಕರಿಸುವ ಪರ್ವೋತ್ಸವ ಮನದರ್ತಿಯ ಪ್ರೇರಣೆ

ಹೃದಯ ಹೃದಯ ಮಿಡಿಳಿವಾಗೆ ಮಧುರವಹುದು ಚೇತನ
ಮಧುರೇಕ್ಷಣ ಮಧುರವಾಣಿ ಮಧುರಸ್ಮಿತ ನೂತನ.
===

ಇಲ್ಲಿ ಕೇಳಿ ಆನಂದಿಸಿ :

http://www.kannadaaudio.com/Songs/Bhaavageethe//BhaavaLahari/HrudayaHrudayaMilanadolu.ram

===

Tuesday, February 12, 2008

ಗಾಳಿಯಲ್ಲಿ ಧಾಳಿಹರಿತವಾದ ಖಡ್ಗ.
ಚೂಪಾದ ತುದಿ.
ಕುಶಾಗ್ರ ಲೋಹ.
ವೀರಾವೇಶದಿಂದ ಹಾಗೊಮ್ಮೆ ಹೀಗೊಮ್ಮೆ ಸರಕ್ಕನೆ ತೂರಾಡಿಸಿ ಬೀಸುತ್ತಿರುವೆ.
ಇದೋ ವೀರಾವೇಷ ತ್ವರಿತವಾಗುತ್ತಿದೆ.
ಅಬ್ಬಬ್ಬಾ ! ಎಂಥಾ ರಭಸ!

ಸುತ್ತ ಹಬ್ಬಿದ ಸ್ತಬ್ಧಗಾಳಿಯ ಸೀಳಿ,
ಇಬ್ಬಾಗಗಳ ಮಾಡುತ
ಅನಂತ ದ್ವಂದ್ವಗಳ ರೇಖೆಗಳ
ಕ್ಷಣಕ್ಕೆರಡಂತೆ ರಚಿಸಿ ಅಳಿಸುತ್ತಿದೆ.
ಗಾಳಿಯಲ್ಲಿಯೇ.

ದಿನವಿಡೀ ನಡೆದ ಎದುರಾಳಿಯೇ ಇಲ್ಲದ ಪ್ರಚಂಡ ಕಾಳಗ.
ಸುಸ್ತಾಯಿತು. ಸೂರ್ಯಾಸ್ತವಾಯಿತು.
ಇನ್ನು ಗುಡಾರ ಸೇರಿ ದಿನದ ಪೆಟ್ಟು ಗಾಯಗಳಿಗೆ ಮುಲಾಮು ಹಚ್ಚುವ ಸಮಯ.
ಸರಸರನೆ ನಡೆಯ ಬೇಕು.
ನಾಳೆ ರಣಕಹಳೆ ಅರ್ಧತಾಸು ಮುಂಚೆಯೇ ಮೊಳಗಲಿದೆಯಂತೆ.
==

miami lakes, FL. 12-Feb-2008 11:30 PM

Friday, February 08, 2008

ನಕ್ಷೆ - ನಿಲುವುಬಹಳ ದೂರ ಬಂದಿದ್ದೇವೆ ಗೆಳೆಯ.....ಬಹಳ ದೂರ.
ಹುಡುಕಿ ಹೊರಟ ತಾಣಕ್ಕೂ
ನಮ್ಮ ಈಗಿನ ಸ್ಥಾನಕ್ಕೂ
ಒಂದೇ ರೇಖೆ ಅಂತರ:
ಎಂಭತ್ತು ಮತ್ತು ನೂರರ ವ್ಯತ್ಯಯ!

ಮೂಲೆಗೆ ಸರಿದ ಮುಂಜಾವಿನ ಮೂಲಗುರಿ
ಮಾಯಾಜಿಂಕೆಯ ಮಾರಿ-
ಚ ಲನಶೀಲ ನಕ್ಷೆ-ನಿಲುವು;

ಅಳಿವ ಸ್ಥಾವರದ ಇಳಿ
-ಜಾರಿನ ಹಳಿಯ ಬಳಿ
ದಿಕ್ಕು - ದೆಸೆ ಬದಲಿಸಿ,
ಜಂಗಮದ ಜಾರೆಬಂಡೆಯ ಮೇಲೆ
ಜುರ್ !!! ...ರ್ !!!...ರ್ !!!.... ಎಂದು ಜಾರಿ ಬಂದ
ಬಿರಾಗಿ,
ಸಿಕ್ಕ ತಾಣವೇ ಸ್ವರ್ಗದಂತಿರಲು
ಸಿಗದ ಸೋಜಿಗದ ಪರಿವೆ ಇನ್ನೇಕೆ ?

ನಡೆಯುತಲೆ ನಾವು ಸಿಗಿದ ದಾರಿಯಲ್ಲಿನ ಸೀಳು,
ಹಿಡಿದ ಹಾದಿ, ಇಟ್ಟ ಹೆಜ್ಜೆ
ದೂರ ಸರಿದೂ ಸರಿದೂ
ಈಗ ಇಲ್ಲೆಲ್ಲೋ ತಂದಿರಿಸಿದೆ.

ಈಗ, ’ಇದು’ "ಇಲ್ಲೆಲ್ಲೋ" ಎಂದೆನಿಸಿದರೂ - ಆಪ್ತ,
ಮಾರ್ಗ ಮಧ್ಯೆ (ನಾವು) ಗೆದ್ದ ಅಧ್ಯಾಸದ ದಾಸ್ಯ
ಪಡೆದ ಸತ್ಯ ಸಾಕ್ಷಾತ್ಕಾರ, ನೂತನ ದೃಷ್ಟಿ
ಕೋನ
ಜೀವಿತದಷ್ಟೆ ಸಹಜ,
ಭಾವದಷ್ಟೆ ನೈಜ,
ಸಾಕ್ಷಿಯಷ್ಟೆ ಸತ್ಯ !

ಇಂತಿರಲು ನಾವು ನಿಜಕ್ಕೂ
ಬಹಳ ದೂರ ಬಂದೆವಾ ಗೆಳೆಯ.....ಬಹಳ ದೂರ?

==

Miami Lakes, FL 01Feb2008 2:49 PM