Monday, January 28, 2008

ಗಹನ ಗಾಂಧಾರ
ಗುನುಗು - ೧
---
ಪ್ರಿಯೆ ನನ್ನ ಪ್ರೇಮದ ರಂಗು ಸ್ವರ್ಣ ಸಿಂಧೂರ
ಎದೆಯೊಳಗೆ ಗುನುಗಿದ ಗುಂಗು ಗಹನ ಗಾಂಧಾರ
ಮಿನುಗುತಿಹ ಕಂಗಳ ಮಿಂಚು ಮೇಘ ಮಂದಾರ
ಮೌನದಲೆ ಸೆಳೆಯುವ ಸಂಚು ಮದನ ಶೃಂಗಾರ
---

ಚುಟುಕ - ೧

ದೂರವಿರಿಸಲು ನಮ್ಮನು ಸೆಣೆಸುತಿವೆ ಕೇತು ಮತ್ತು ರಾಹು
ಚಿಂತಿಸದಿರು ನಲ್ಲೆ, ನಮ್ಮಲ್ಲಿದೆ ಜೀಟಾಕು ಜೋತೆಗೆ ಯಾಹೂ
---

ಚುಟುಕ - ೨
ಮಿಡಿವ ಹೃದಯಗಳಿಗೆಲ್ಲಿದೆ ಮುಖಾಮುಖಿ ಸಂಧಿಸುವ ಹಂಗು
ನಾ ಮುಗುಳು ನಗಲು ಸಾಲದೆ ಪ್ರಿಯೇ, ನಿನ ಚ್ಯಾಟಿನಾ ಪಿಂಗು
---

Thursday, January 24, 2008

ಪರಕಾಯಪ್ರವೇಷ(ಶ)
ನೆನೆಸಿದೆಲ್ಲ ನನಸಾಗುತ್ತಿದ್ದರೆ ಏನೋ ಒಂದು ರೀತಿ ಮುಜುಗರ. ಅಸಹನೆ. ಆತಂಕ.ಇದು ನನ್ನ ಜೀವಿತವಲ್ಲವೇನೋ ಎಂಬ ಶಂಖೆ. ದುಃಖಕ್ಕೆ ಒಗ್ಗಿದ ಜೀವ, ಒಮ್ಮೆಲೆ ಹಿಗ್ಗಿದರೆ ಕುಗ್ಗುವುದಿಲ್ಲವೆ? ಎಂದಿನಂತೆ ಹತಾಷೆಯೇ ಲೇಸು.ಕನೀಸ ಸಹಜವೆನಿಸುತ್ತದೆ.ಹೌದು, ಇದು ನನ್ನದೇ ಬದುಕು ಅನಿಸುತ್ತದೆ.ಎಲ್ಲವೂ ಸುಗಮವಾಗಿ ಸಾಗಿದರೆ ನನ್ನ ದೇಹತ್ಯಜಿಸಿ ಯಾರದೋ ಪರಕಾಯಪ್ರವೇಶ ಮಾಡಿದಂತೆ ಭಾಸ.ಅಬ್ಬಾ .... !!! ಎಂಥಾ ಪರಕೀಯ ಭಾವ - ಈ ಸಂತಸ!

Miami Lakes,FL - Night of Jan 23 2008.

Sunday, January 20, 2008

ಭೃಹದಾರಣ್ಯಕ

* ====================================
ಙ್ಞಾನ ಕಾನನದ ಒಳಹೊಕ್ಕು ಕಂಡದ್ದಿಷ್ಟೆ:
ಬಹುಶಾಖಾ 'ಭೃಹದಾರಣ್ಯಕ' !
ದಿನಕರನ ನಿಜಕಿರಣದ
ಎಳೆ - ಎಸಳೂ ನುಸುಳದಂತೆ
ಮುಗಿಲ್ಕವಿದು ಹಬ್ಬಿದ
ಅಹಂಮ್ಮಿನ ದಟ್ಟ ಹಂದರದಡಿ,
ಛಂದೊಬದ್ಧ ವಾಕ್ಪಟಿತ್ವದ
ಪುಶ್ಪಸಮಾನ ಪದಪುಂಜಗಳಲ್ಲಿ
ಸುಸದ್ದಿದ್ದುದು
ಒಂದೇ ಏನೋ - ಸತ್ಯ ವನಸುಮ !

ವಾದ ಪ್ರತಿವಾದಗಳ
ಚಕ್ರತೀರ್ಥದೆ ಒಳಸಿಲುಕಿ
ಅನಿರ್ಣಯದೆ ವಕ್ರವೆನಿಸಿದ್ದು,
ತಿರುವಿ ನಿಂದ ಪ್ರಶ್ನಾರ್ಥಕ.

ತನ್ನಿಲುವ ನಿರೂಪಿಸಲು ಪರನ್ಯೂನ ಸಾರುವ
ವಿದ್ವನ್ಮಿಣಿಗಳ ಬಾಹ್ಯ ಭಾಷ್ಯಗಳ
ಪರಿಮಿತಿಗೆ ನಿಲುಕದಿದ್ದಲ್ಲವೆ
ಆ ನಿಶ್ಚಲ ಬ್ರಹ್ಮ?
ಷುಷ್ಕ ಪಾರಿಭಾಶಿಕಗಳ
ಬಂಧಿಯಾಗ ಬಲ್ಲನೇ ಆ ಪರಮಾತ್ಮ?

ಅರಿವಿನ ಅಡಿಸೇರಿಗೆ
ಆ ಅಗೋಚರನ ಅಡಕವಾಗಿರಿಸದೆ,
ತಿಳಿವ ಹಂಬಲಕೆ ತಿಳತರ್ಪಣವನೆಸಗಿ,
ಅರ್ಪಿಸಿ ಅಡಿಗಡಿಗೆ ಮನವ ತಿಳಿಯಾಗಿಸಿ
ಮುದದೆ ಮೋಕ್ಷ ಸಾಧಿಸಲು
ಮಿಂದರಾಗದೆ ಭಕ್ತಿಬಿಂದುವಿನಲಿ?

=====================================

Miami Lakes,FL night of Jan 18 2008 thru Jan 19 2008.
* ಚಿತ್ರ ಕೃಪೆ : ಶ್ರೀಕಾಂತ್ ಬೇಡತೂರು

Tuesday, January 15, 2008

ಕ್ಷಣಗಣನೆ===========
ಇಡೀ ದಿನ,
'ಈ ದಿನ ಕಳೆಯಲಿ ; ಈ ದಿನ ಕಳೆಯಲಿ',
ಎಂಬ ತೊಳಲಾಟದಲ್ಲೆ
ದಿನ ಕಳೆದು ಬಿಟ್ಟೆ.
ದಿನ ಕಳೆಯಿತು.
ಮತ್ತೆಂದೂ ಈ ದಿನ ಬಾರದೇನೋ?
ಮತ್ತೆಂದೂ ಈ ದಿನ ಬಾರದು!
ನಾ ನಾಳೆಯ ಮುಟ್ಟಿದರೂ,
ನಾಳೆ ನನ್ನನ್ನು ಮುಟ್ಟೀತೆ?
ನೆನ್ನೆಯ ದಿನ ಇಂದು ಬಂದ ಹಾಗೆ
ಇಂದಿನ ದಿನ ನಾಳೆ ಬರದಿರಲಿ.
ನಾನು ನಾಳೆಯನ್ನು ಮುಟ್ಟಿದ್ದೇನೆ,
ನನ್ನ ನಾಳೆ ನನದಾಗಲಿ!
==========
Miami Lakes, FL 8:24 PM Jan 15 2008 (Edited)
- Footnotes

೧. ಇಂದು - Today
೨. ನಾಳೆ - Tommorrow
೩. ಕಳೆಯಿತು - itz gone!

Saturday, January 12, 2008

ವ್ಯಾಪ್ತಿ


===

ಚಂದಿರನು ಬೆಳೆಯುತ್ತಿದ್ದಾನೆ.
ಹುಣ್ಣಿಮೆ ಕಳೆದು ಕಡೆ ಪಕ್ಷ ಮೂರ್ಪಕ್ಷ ಮುಗಿದರೂ,
ಶುಕ್ಲ-ಕೃಷ್ಣಗಳ ಲೆಕ್ಕಿಸದೆ
ಕ್ಷಯಿಸುವ ಗೊಜಿಗೇ ಹೋಗಿಲ್ಲ:
'ಪಕ್ಷ'-ಪಾತಿ!

ಪಾಲ್ಗಡಲ ಅಂತರ್ಪ್ರವಾಹದಂತೆ
ಆಗಸವನಾವರಿಸಿ ಬೆಳೆದಿ-ದ್ದಾನೆ
ಆನೆಯಂತೆ ಗಜಗಾತ್ರ.
ದಶರಾತ್ರ ಮಾತ್ರದಲಿ
ಆದಿತ್ಯನಿಗಿಲ್ಲದ ಆಧಿಪತ್ಯ ಸಾಧಿಸುವನೆನೋ!
ಸಾಧು ಸಾಧು!

ಶುಕ್ರನಾಗ್ರಹವ ಗ್ರಹಿಸಿ,
ಗ್ರಹಗಳೆಲ್ಲ ಸಭೆ ಸೇರಿವೆಯಂತೆ.
ಆಯ(ತ)ನದಲ್ಲೇ ಕಾಣದ ತುರ್ತು ಪಂಚಾಯತಿ.
ಋತವ ರಕ್ಷಿಸಲು ಅಷ್ಟಗ್ರಹಗಳೆಸಗಿದ
ಮಹಾರ್ಗಳ ಬಂಧ!

ಮಣಿದು ಮರುಕಳಿಸಿ ಪುನರವತರಿಸಿ
ಶಶಿಯಾಗಿ ವ್ಯಾಸಕ್ಷೀಣ ಗಾತ್ರಾಪಸವ್ಯ
ರುಚವ ಸಾರುತಿಹನು: ಪ್ರಾಪ್ತವಿದ್ದರೂ
ನಾವಾಗಬಾರದೆಂದು
-ವ್ಯಾಪ್ತ ಗಮ್ಯ!

===================================================

* Footnotes:

ಆಯನ : ಉತ್ತರಾಯಣ - ದಕ್ಷಿಣಾಯನ ಎಂಬ ಆರು ಮಾಸಗಳ ಕಾಲ ಪರಿಮಿತಿ.

ಋತಂ : order or course of things. [http://en.wikipedia.org/wiki/Rta]

ಅರ್ಗಳ : a latch, a bar, or a bolt used for fastening a door or the cover of a vessel. Figuratively, it refers to some-thing intervening as an obstruction. In Jaimini astrology, it is used to describe the obstructing effect of an intervening planet. It assumes that planets and signs of the zodiac affect other planets and signs by their aspects. These influences can be nullified by the presence of certain planets at certain places relative to these planets and signs. Such obstructing planets are known as Argalas.

ಮಹಾರ್ಗಳ: A Grand Trap/ Obstruction set up by other 8 planets.

ವ್ಯಾಸಕ್ಷೀಣ : receeding in diameter.

ಅಪಸವ್ಯ : Orderly; right [ಸವ್ಯ - left ]; ಗಾತ್ರಾಪಸವ್ಯ : Got back to original dimensions.

ರುಚಂ (ರಿಚ) : ವೇದದಲ್ಲಿ ಕಂಡು ಬರುವ ೨ ಅಥವ ೪ ಸಾಲುಗಳ ಶ್ಲೋಕ,ಮಂತ್ರ. [http://en.wikipedia.org/wiki/Richa]

ವ್ಯಾಪ್ತ ಗಮ್ಯ : ವ್ಯಾಪ್ತಿಯನ್ನು ಮೀರಿ ಗಮಿಸುವ.

Miami Lakes,FL Jan 12 2008 1:25PM to 8:27PM.

Tuesday, January 08, 2008

ಕಾಮನೆಗಳು - ಸ್ವಗತ=======
ನಾ ಬಯಸಿದ,ಬಯಸದಿದ್ದ, ನನ್ನ ಬಯಕೆಗೆ ಮೀರಿದ,
ಭಯದಿಂದ ಬಯಸದೆ ಬದಿಗಿಟ್ಟಿದ್ದ
ಕಾ -
ಮನೆಗಳು, ಮನೆ
ಮುಂದೆ ಮೆರವಣಿಗೆ ಬಂದು ನಿಂದು
ಜಗುಲಿಯಮೇಲೆ ಜಾವದ ಸಮಯದಿಂದಲೆ
ಜಾತಕ ಪಕ್ಷಿಗಳಂತೆ ಡೇರೆಬಿಟ್ಟು ಕುಳಿತಿವೆ.
ಆರುಣಿಯಸುತನು ಜವರಾಯನ ಕದ ಕಾಯ್ದಂತೆ.
(ಇನ್ನಾವ ನಚಿಕೇತಾಗ್ನಿಯ ನನ್ನಲ್ಲಿ ಕೇಳಲೀಕ್ಕೋ?)
ನಚಿಕೇತನಿರಲಿ; ಓತಿಕೇತಗಳಂತೆ ಬಣ್ಣ ಬದಲಿಸುತ್ತಿವೆ.
ಮುಂಡೇವು.
ಸಹಸ್ರವರ್ಣ ಕಾಮನ ಬಿಲ್ಲಿನಂತೆ ಕಾಮನೆಗಳು
ಹತ್ತು ಚಿತ್ತರವ ಬಿತ್ತಲು ಮನದ ಕದವ ದಬ ದಬ ಬಡಿಯುತಿವೆ.
ಆಸನಾರ್ಘ್ಯಗಳನ್ನಿತ್ತು ಹಸ್ತಲಾಘವಕ್ಕೆ ಅನುವು ಮಾಡಿಕೊಳ್ಳೋಣವೆಂದ್ದಿದ್ದೆ.
ತೆರೆದ ಮನೆ ಮನದೊಳಗೆ, 'ಓ, ಬಾ ಅತಿಥಿ' ಎಂದು
ಕರೆದು ತೂಗುಯ್ಯಾಲೆಯಮ ೇಲೆ ಕುಳ್ಳರಿಸಿ ವಿಹರಿಸ ಬಹುದಿತ್ತು.
ಕುಣಿಯ ಬಹುದಿತ್ತು. ತಣಿಯ ಬಹುದಿತ್ತು. ಬಹುದಿತ್ತು. ...ಬಹುದಿತ್ತು.....
ಆದರೆ ಸಣ್ಣಗೆ ಆಕಳಿಸಿ, ತಣ್ಣಗೆ ಈ ಪಕ್ಕೆಗೆ ತಿರುಗಿ ನಿದ್ರಿಸಿದೆ.
ಎಂದಿನಂತೆ ಜೀವಿತವ ಮುಂದೂಡುತ.
ಕಾ
ಮನೆಗಳು, ಮನದ ಮನೆಯ ಕದವ ಕಾಯ್ದು ಕಾಲ್ಚಾಚಿ ಕುಳಿತಿವೆ.
ಓತಿಕೇತಗಳಂತೆ ಬಣ್ಣ ಬದಲಿಸುತ.
ಮುಂಡೇವು.

Miami Lakes,FL. Jan 08 2008. 5:00 AM thru first half of the day.

===
---

Get this widget | Track details | eSnips Social DNA

Image/Picture Courtesy:

Top:
Self made jpeg using MSPaint.

Below:
Inka Essenhigh: Her works shows every day life in surrealistic ways, most are an amalgam of 19th century caricatures, oriental art and contemprory comics. There is a tangebility of form in porcelain delicacy, it has a fabric flow of pattern thats textured rather than calligraphied.
---

Monday, January 07, 2008

ಸಮಾಜ ಗರ ದಹನ===

ನೋಡಬೇಕೆಂದಿದೆ ನನಗೆ "ಸಮಾಜ" ವನ್ನು.
ತೋರುವಿರಾ?
ಪ್ರತ್ಯೇಕವಾಗಿ ಕಂಡು,ಕುಳ್ಳರಿಸಿ,
ಕೆಲ ವಿಷಯಗಳ ಕೂಲಂಕಶವಾಗಿ ಕೇಳಬೇಕಿದೆ!
ಮೂಗಿನ ನೇರಕ್ಕೂ ಮತಿಗೊಡದೆ
ಮುಖವ ತೋರದೆಲೆ , ಮೂಗು ತೂರಿಸುವ
ಹರಕು ಮೊರೆಯ ಅಶರೀರವಾಣಿಗಳ
ಲಕ್ಷ್ಯಗೆಡದ ಲಕ್ಷ್ಮಣನು
ಲಂಕೇಶನನುಜೆಯ ನಾಸಿಕವ ಸಿಗಿದಂತೆ
ಲೆಕ್ಕಿಸದೆ ರಕ್ಕಸ ರಂದ್ರಗಳ ಛೇದಿಸಿ
ನೆಮ್ಮದಿಯ ನಿಟ್ಟುಸಿರು ಬಿಡಬೇಕೆಂದಿದೆ!
ಗರಬಡಿದ ಸಮಾಜವ ದಹಿಸಿ,
ಸಮಾಜ ಗರ ದಹನ ಮಾಡಬೇಕಿದೆ!
ತೋರುವಿರಾ ನನಗೆ,ಸಮಾಜವನ್ನು?

Miami Lakes,FL. Jan 07 2008. 03:45 AM.


Get this widget | Track details | ಸಮಾಜ ಗರ ದಹನ

Sunday, January 06, 2008

ಹೊಸ ವರುಷದ ಹೂಮಳೆ

---
ಚಿಮ್ಮುತ ಹೊಮ್ಮಿದೆ ಗೆಳೆಯರೆ ನೊಡಿ ಎರಡು ಸಾವಿರದ ಎಂಟು
ಹೂಮಳೆಯಂದದಿ ಸಂತಸ ಸುರಿಸುತ ತೆರೆದಿದೆ ನಲಿವಿನ ನಂಟು
---

ನಾನು ಹೊಸವರುಷದ ಸಲುವಾಗಿ ಬರೆದ ಚುಟುಕವನ್ನು ಶುಭಾಶಯ ಡಾಟ್ ಕಾಂ ನಲ್ಲಿ ಹೊರಡಿಸಿದ ಗೆಳೆಯ ಶಕ್ರಿ ಗೆ ನಲ್ಮೆಯ ವಂದನೆಗಳು.

ಈ ತಾಣಕ್ಕೆ ಭೇಟಿ ಕೊಡಿ : http://www.shubhashaya.com