Tuesday, December 29, 2009

ರಸಋಷಿಗೆ ಶ್ರೀಸಾಮಾನ್ಯನ ನಮನ


ಶ್ರೀಸಾಮಾನ್ಯ, ನೇಗಿಲಯೋಗಿ , ಬೆಳ್ಳಿಹಬ್ಬ, ಸುತ್ತೋಲೆ - ದಿನನಿತ್ಯದ ಬಳಕೆಯ ಈ ಪದಗಳಲ್ಲಿ ಒಂದು ಸೋಜಿಗದ ಸ್ವಾರಸ್ಯವಿದೆ. ಅದೇನೆಂದು ನಿಮಗೆ ಗೊತ್ತೇ? ಈ ಪದಗಳನ್ನು ಕನ್ನಡಕ್ಕೆ ನೀಡಿದವರು ಕುವೆಂಪು.ಇವೆಲ್ಲ ಪದಸೃಷ್ಟಿಗಳ ಜನಕನಿಗಿಂದು ಜನುಮದಿನ. ಈ ಬ್ಲಾಗಿನಲ್ಲಿ ಶ್ರೀಸಾಮನ್ಯನೆಂದು ನಾಮಕರಣ ಮಾಡಿಕೊಂಡಿರುವ ನಾನು ಪದಜನಕನಿಗೆ ಶ್ರದ್ಧಾಂಜಲಿ ಕೊರಲೇ ಬೇಕಲ್ಲವೇ.

ಕುವೆಂಪು ಅವರ ವಿಶ್ವಮಾನವ ಸಂದೇಶ

ಮನುಜ ಮತ , ವಿಶ್ವ ಪಥ, ಸರ್ವೋದಯ, ಸಮನ್ವಯ ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಸಂಕುಚಿತ ಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ

Monday, October 26, 2009

ಎರವಲು

ನನ್ನದಲ್ಲದ ಜೀವಿತವ
ನನದೆಂದು ನಾ ತಿಳಿದು
ದಿನ ದಿನವು ನನ್ನಿಯನೆ
ನನ್ನೆದೆಗೆ ಉಣಿಸಿ

ಒಲ್ಲದಾತ್ಮನ ತಣಿಸೆ
ಬಗೆಬಗೆಯ ಅಮಿಷವ
ಒಡ್ಡುತಲಿ ದಡ್ಡತನದಿ
ಬದುಕಲೆಂತಾಗುವುದು ತಿಳಿಸಿ

Tuesday, September 29, 2009

ಮುಗ್ಧತೆಯ ಮಾರಣಹೋಮ

--- Still in Draft Phase ---

ನನ್ನ ಜೀವನದಲ್ಲಿ ಒಂದು ಕಾಲ ಇತ್ತು -- ಸೌಂದರ್ಯ ಅನ್ನೊದಕ್ಕೆ ತನ್ನದೆ ಆದ ವಿಶಿಷ್ಟ ಸ್ಥಾನ ಇದ್ದ ಕಾಲ ಅದು.ಬಹುಶಃ ನನಗಾಗ ಆರೇಳು ವರ್ಷ ಇದ್ದಿರಬಹುದು.ಆ ಅನಾಥಾಶ್ರಮ ನನ್ನನ ಶಾಶ್ವತವಾಗಿ ಮುಪ್ಪಿಗೇರ್ಸಕ್ಕಿಂತ ಕೆಲ ವಾರ ಅಥವಾ ತಿಂಗಳಿಗೆ ಹಿಂದಿನ ಮಾತು ಇದು.ಪ್ರತಿ ಮುಂಜಾನೆ ಬಲಮಗ್ಗಲಲ್ಲಿ ಎದ್ದು,ಒಬ್ಬ ಸಿಪಾಯಿಯ ಹಾಗೆ ಹಾಸಿಗೆಯನ್ನು ಮಡಿಮಾಡಿ,ನೇರ ಮೈದಾನದಲ್ಲಿ ಸಾಲು ಸಾಲಾಗಿ ಗಂಜಿಗೆ ನಿಲ್ಲುತ್ತಿದೆ. ಆ ಶನಿವಾರದ ದಿನ ಟಿಫನ್ ಮಾಡಿ ಮತ್ತೆ ನನ್ನ ಕೊಠಡಿಗೆ ಬಂದು ಇನ್ನೇನು ಕೂರಬೇಕು, ಅಷ್ಟ್ರಲ್ಲಿ ನಮ್ಮ ವಾರ್ಡನ್ ಒಂದು ಹಿಂಡು ರಾಜಾಚಿಟ್ಟೆಗಳನ್ನ ಅಟ್ಟಿಸಿಕೊಂಡು ಹೋಗಿ ಮೈದಾನದ ಹೊರಗೆ ಅಟ್ಟತಾ ಇದ್ದ. ಅಲ್ಲೆ ಅವಿತುಕಂಡು ನೋಡ್ತಾ ಇದ್ದೆ ನಾನು -- ಈ ಪ್ರಾಣಿ ಏನ್ ಮಾಡ್ಥಾನೆ ಅಂತ.ಒಂದೊಂದಾಗಿ ಆ ಸುಂದರ ಚಿಟ್ಟೆಗಳನ್ನ ನೆಟ್ ಇಂದ ತೆಗೆದು ಅವುಗಳ ತಲೆ, ರೆಕ್ಕೆಗಳಿಗೆ ಪಿನ್ನ್ ಗಳನ್ನು ಚುಚ್ಚಿ ಶಿಲುಬೇಗೆ ಏರಿಸ್ತಾ ಇದ್ದ ಆ ಪಾಪಿ. ಒಂದು ಕಾರ್ಡ್ಬೋರ್ಡ್ ತುಂಬ ಅರೆಬರೆ ಸತ್ತ ಚಿಟ್ಟೆಗಳನ್ನ ಸಿಕ್ಕಿಸಿಟ್ಟಿದ್ದ.ಅಷ್ಟು ಸುಂದರವಾಗಿರೋದನ್ನ ಹೇಗಾದರು ಕೊಲ್ಲೋಕ್ಕೆ ಮನಸ್ಸುಬಂತೋ ಆ ದೂರ್ತಂಗೆ! ಆ ಮುರಿದ ರೆಕ್ಕೆಗೆ ನನ್ನ ಉಗುಳು ಹಚ್ಚಿ ಅಂಟು ಹಾಕಕ್ಕೆ ನೋಡಿದೆ.ಮತ್ತೆ ಅದು ಹಾರಿ ಹೋಗಿ ನೀಲಾಕಾಶ ಸೇರಲಿ ಅಂತ.ಆದರೆ ರೆಕ್ಕೆ ಮತ್ತೆ ಅಂಟಲೇ ಇಲ್ಲ. ಅಷ್ಟರಲ್ಲಿ ನನ್ನ ತಲೆಯ ಮೇಲೆ ಏನೋ ಬಡಿದಹಾಗೆ ಆಯ್ತು.ತಲೆ ಎತ್ತಿ ನೋಡಿದರೆ ಆ ರಾಕ್ಷಸ ಬಂದು ನಿಂತಿದ್ದ.ಅದೆ ಕಾರ್ಡಬೋರ್ಡನ್ನ ತಗೆದು ನನ್ನ ತಲೆಗೆ ಎರೆಡು ಏಟು ಹಾಕಿ ಅರಚಾಡಿದ.ನಾನು ಏನೂ ಮಾಡಿಲ್ಲ ಅಂತ ಎಷ್ಟು ಹೇಳಿದರೂ ನನ್ನನ ನಂಬಲಿಲ್ಲ. ತಲೆಗೆ ಹೊಡೆದ ರಭಸದಲ್ಲಿ ಚಿಟ್ಟೆ ತುಂಡುಗಳೆಲ್ಲ ಚಲ್ಲಾಪಿಲ್ಲಿಯಾದ್ವು.ಅಲ್ಲಿ ಬಿದ್ದಿದ್ದ ಕಸವನ್ನ ಎತ್ತಿ ಕಸದತೊಟ್ಟಿಗೆ ಹಾಕಿ ಬರಲು ಹೇಳಿ ಅವನು ಹೋರಟು ಹೋದ.ಅಲ್ಲಿದ್ದ ರಾಶಿಯಲ್ಲಿ ಬಹಳ ಹೊತ್ತು ಕೂತು ಎಲ್ಲ ಚಿಟ್ಟೆಗಳನ್ನು ಮತ್ತೆ ಒಟ್ಟಿಗೆ ಜೋಡಿಸಿ ಒಮ್ಮೆಲೆ ಮಣ್ಣು ಮಾಡುವ ಎಂದು ಯೋಚ್ಸಿದೆ.ಆದರೆ ಆಗಲಿಲ್ಲ.ಅವುಗಳ ಸಲುವಾಗಿ ಪ್ರಾರ್ಥನೆ ಮಾಡಿ ನನ್ನ ಹಳೆ ಚೀಲದಲ್ಲಿ ಹಾಕಿ ಮಣ್ಣು ಮಾಡಿದೆ.ಪ್ರತಿವರುಷವೂ ಚಿಟ್ಟೆಗಳು ನಮ್ಮ ಅನಾಥಾಲಕ್ಕೆ ಬಂದಾಗ ನಾನೇ ಅವುಗಳನ್ನು ಹೊರದೂಡುವೆ.ಈ ಸ್ಥಳ ಬದುಕುವುದಕ್ಕೆ ಒಳ್ಳೆಯದಲ್ಲ -- ಸಾಯುವುದಕ್ಕಂತು ಅಲ್ಲವೇ ಅಲ್ಲ ಅನ್ನುವುದು ಆ ಬಡಪಾಯಿಗಳಿಗೆ ಇನ್ನು ತಿಳಿದಿಲ್ಲ.

Monday, August 31, 2009

Thursday, July 30, 2009

ಉಲ್ಬಣ

ಚಿವುಟಿ ಸ್ರವಿಸಬೇಕೆನಿಲ್ಲ
ಹೆಪ್ಪುಗಟ್ಟಿದ ನೋವನ್ನು.
ಒಳಕಾವೇರಿ ಉಕ್ಕುಕ್ಕಿ
ಕೀವು ಕಟ್ಟಿ ತನ್ತಾನೆ
ತೊಟ್ಟಿಕ್ಕುತಿರಲು,
ಚಿವುಟಬೇಕೆನಿಲ್ಲ.

Saturday, June 27, 2009

ಮುದ್ದಣ್ಣ ಕಂಡ ಕವಿ

ಬಕನ ಗುಣವೊಂದು ಮರ್ಕತನದೊಂದಜನ ಮೂ
ಶಕನ ಲಕ್ಷಣಗಲೋಳಗೊಂದೊಂದು ಮೆನ್ ಪಿಪೀ
ಲಿಕನ ಶುನಕನ ಮಾನ ಸುಕಸನ ಚಿತ್ರಕಾಯನ ಗುನಗಲೋಳಗದೊಂದು
ಪಿಕನ ಚಿತ್ರಿಕನ ಮರುಲನ ವಿದೂಷಕನ ವ
ರ್ತಕನ ಸಲ್ಲಕ್ಷನಗಲೊಂದೆರದನ್ದೆಸೆಯ
ಲಕಲಂಕ ಕೀರ್ತಿಯಿಮ್ದೊಪ್ಪಿರ್ಪನಾ ಕವಿಯೇ ಲೋಕಮಿರ್ಪನ್ನೆವರೆಗಂ
- ನಂದಳಿಕೆ ಲಕ್ಷ್ಮೀ ನಾರಣಪ್ಪ


'ರವಿ ಕಾಣದ್ದನ್ನು ಕವಿ ಕಂಡ' ; 'ಬ್ರಹ್ಮನದ್ದು ಸೃಷ್ಟಿ ಕವಿಯದ್ದು ಮರು ಸೃಷ್ಟಿ' -- ಇಂತೆಲ್ಲ ಕವಿವರ್ಯರನ್ನು ಹಾಡಿ ಹೊಗಳಿ ಬ್ರಹ್ಮಾದಿತ್ಯಾದಿಗಳಿಗಿಂತ ಉನ್ನತ ಹೇಮಪೇಠದಲ್ಲಿಟ್ಟು ಕೊಂಡಾಡಿದ್ದಾರೆ. ಆದರೆ ಮುದ್ದಣ್ಣನವರು ಕವಿಯನ್ನು ಕಪಿ,ಬಕ ಮುಂತಾದ ಪ್ರಾಣಿ ಪಕ್ಷಿಗಳಿಗೆ ಹೋಲಿಸಿರುವುದು ಈ ಮೇಲಿನ ಪದ್ಯದ ಸ್ವಾರಸ್ಯ.

Wednesday, May 27, 2009

ಪುರುಷಪ್ರಗತಿಯಂತು ಮಂಕುತಿಮ್ಮ

ಅಸುರರು ಅಮ್ರುತತ್ವವನ್ನು ಅರಸಿ ಬ್ರಹ್ಮಾದಿ ದೇವತೆಗಳಿಂದ ನಾನಾ ವಿಧವಾದ ವರಗಳನ್ನು ಪಡೆದು ಸಾವನ್ನೇ ಗೆಲ್ಲುವ ವ್ಯರ್ಥ ಪ್ರಯತ್ನಕ್ಕಿಳಿದ ಪ್ರಸಂಗಗಳನ್ನು ನಾವು ಭಸ್ಮಾಸುರ,ತಾರಕಾಸುರ, ಹಿರಣ್ಯರ ವೃತ್ತಾಂತದಲ್ಲಿ ಕಂಡಿದ್ದೇವೆ. ಪ್ರಾಚೀನ ಗ್ರೀಕರಲ್ಲಿ ಸಿಸಿಫಸನೆಂಬುವವನು ಛಲ ಕಪಟ ಗಳಿಗೆ ಹೆಸರುವಾಸಿಯಾಗಿದ್ದನು. ನಮ್ಮಲ್ಲಿ ಯಮನಿರುವಂತೆ ಗ್ರೀಕರ ಮೃತ್ಯು ದೇವತೆಯನ್ನೇ ಸೆರೆಹಿಡಿದ್ದಿದ್ದ ಭೂಪ ಇವನು. ಇವನ ಕಪಟದ ಕುಚೇಷ್ಟೆಗಳನ್ನು ತಾಳಲಾರದ ದೇವತೆಗಳು ಇತನಿಗೊಂದು ಶಾಪವನ್ನಿತ್ತರು. ಗಿರಿಯೊಂದರ ಮೇಲೆ ಸಿಸಿಫಸನು ಗೋಲಾಕಾರದ ಬಂಡೆಯೊಂದನು ತಳ್ಳುತ್ತ ಸಾಗಿಸುವುದು. ಬಂಡೆ ಇನ್ನೇನು ಶಿಖರ ಮುಟ್ಟಿತು ಎನ್ನುವಷ್ಟರಲ್ಲಿ ಸರಕ್ಕನೆ ಜಾರಿ ಮತ್ತೆ ಪಾತಾಳ ಸೇರುವುದು. ಸರಿ ಮತ್ತೆ ಪ್ರಾರಂಭವಾಗುವುದು ಸಿಸಿಫಸನು ಬಂಡೆ ಹೊರುವ ಕಾಯಕ. ಹೀಗೆ ಆಚಂದ್ರಾರ್ಕವಾಗಿ ಬಂಡೆ ಹೊರುವ ಕಸ ಅವನ ಪಾಲಾಯಿತು. ಅಂತ್ಯವಿಲ್ಲದೆ,ನಿರರ್ತಕ ಮತ್ತು ವ್ಯರ್ಥವೆನಿಸುವ ಕಾಯಕಕ್ಕೆ ಸಿಸಿಫಸನ ಕಥೆಯು ರೂಪಕ ವಾಯಿತು.

ಕಗ್ಗದಲ್ಲಿ ಗುಂಡಪ್ಪನವರು ಇಂತೆಂದಿದ್ದಾರೆ.

ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು ।
ಉರುಳಿಸಿರಲೊಂದೆರಡು ಮಾರು ಘಾಸಿಯಲಿ ।।
ಸರಿದು ಕೆಳಕದದೆಂತೊ ಜಾರುವುದು ಮರಮರಳಿ ।
ಪುರುಷಪ್ರಗತಿಯಂತು ಮಂಕುತಿಮ್ಮ ।।

ಪ್ರಸ್ತುತ ಬಿಜಾಪುರದ ರವೀಂದ್ರ ಡಿ ನಂದೀಪನ್ನನವರ್ ಎಂಬುವವರು ದಿನಾಲು ಡಿ.ಸಿ. ಕಛೇರಿಯ ಮುಂದೆ ಎಂಟರಿಂದ ಒಂದು ಘಂಟೆ ಮಧ್ಯಾನ್ಹದ ವರೆಗೂ ಹದಿನೈದು ಕೆ.ಜಿ. ತೂಕದ ಕಲ್ಲು ಹೊತ್ತು ನಿಂತಿರುವರಂತೆ. ಇವರ ಅಳಲು ಏನೆಂದರೆ ಭಾರತದಲ್ಲಿ ರಾಷ್ಟ್ರಪತಿ ಮಾದರಿಯ ಪ್ರಜಾಪ್ರಭುತ್ವ ಜಾರಿಗೆ ಬರಬೇಕು. ಅದಕ್ಕಾಗಿ ಸಂವಿಧಾನಕ್ಕೆ ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಈ ಕ್ರಮವಂತೆ. ಅಯ್ಯಾ ! ಆರ್ಥಿಕ ಹಿಂಜರಿತ ಮತ್ತು ಭಯೋತ್ಪಾದನೆಯ ಅಟ್ಟಹಾಸದಲ್ಲಿ ಸರ್ಕಾರವನ್ನು ಮರುಚುನಾವಣೆ ಮಾಡಿ ಗದ್ದುಗೆಗೆ ಏರಿಸಿದ ದೇಶ ಇದು. ಇಂತಹುದರಲ್ಲಿ ನಿಮಗೆ ಯಾಕ ಸಿಸಿಫಸನ ಶೋಕಿ.

Friday, April 17, 2009

ಪ್ರಜಾಪ್ರಭುತ್ವ


ತೋರು ಬೆರಳ ಮೇಲೆ ಸಣ್ಣ ಕಪ್ಪದೊಂದು ಗುರುತು
ಪ್ರಜೆಯು ತಾನು ಪ್ರಭುವೆಂಬುದ ಸಾರುತಿಹುದು ಕುಳಿತು.
ಕರ್ತವ್ಯದ ಕರೆಯಿದುವೆ ಹಕ್ಕಿನ ಘನ ಗೆರೆಯಿದುವೆ
ಎದ್ದು ನಿಂತು ಮತವ ನೀಡು ತಾಮಸವನು ಮರೆತು

ಚುನಾವಣೆಯ ಸಮಯ - ನಿಮ್ಮ ಮತ ಚಲಾಯಿಸಲು ಮರೆಯದಿರಿ!

“At the bottom of all the tributes paid to democracy is the little man, walking into the little booth, with a little pencil, making a little cross on a little bit of paper – no amount of rhetoric or voluminous discussion can possibly diminish the overwhelming importance of that point.”
- Sir.Winston Churchill

Friday, April 10, 2009

ರಸಪ್ರವಾಹ

ಬಿರ್ಕಾಶಾ ದೇಶದ ರಾಜ ಸಭೆಗೆ ಲಾವಣ್ಯವತಿಯೂ ಬಹುಶೃತಳೂ ಆದ ಸ್ವರ್ಣಮಾಲಿನಿ ಎಂಬ ನರ್ತಕಿಯು ತನ್ನ ಚಾರಣ ವೃಂದದೊಂದಿಗೆ ಆಗಮಿಸಿದಳು. ರಾಜಕುಮಾರನ ಸಮಕ್ಷಮದಲ್ಲಿ ವೀಣಾಭೇರಿ ಮೃದಂಗಾದಿಗಳ ಗೋಷ್ಠಿಗಂಗೆಯಲ್ಲಿ ಲೀನವಾಗಿ, ಲಾಸ್ಯವೇ ತಾನೆಂಬಂತೆ ನರ್ತಿಸಿದಳು. ಸ್ವರ್ಣಮಾಲಿನಿ ಜ್ವಾಲಮಾಲೆಯಾಗಿ ಜ್ವಾಲೆಯ ನರ್ತನ, ನಕ್ಷತ್ರಾಕಾಶಗಳ ನರ್ತನ -- ಹೀಗೆ ಎಲ್ಲವನ್ನೂ ಚಿತ್ರಬಿಡಿಸಿದಂತೆ ಕಣ್ಣುಕಟ್ಟುವ ಹಾಗೆ ಚಿತ್ರಿಸಿದಳು.ತದನಂತರ ರಾಜಕುಮಾರನ ಬಳಿ ಬಂದು ತಲೆಬಾಗಿ ನಮಸ್ಕರಿಸಿದಳು. ರಾಜಕುಮಾರನು ಇಂತೆಂದನು " ನರ್ತನನಿಧಿಯೇ -- ಲಾಸ್ಯ ಲಾವಣ್ಯಗಳ ಪುತ್ರಿಯಂತಿರುವ ನಿನಗೆ ಈ ಕಲೆಯು ಹೇಗೆ ಒಲಿಯಿತು. ಎಲ್ಲಿಂದ ಅವತರಿಸಿತು? ಪಂಚಭೂತಗಳನ್ನೂ ನಿನ್ನ ಹಾವಭಾವಗಳಲ್ಲಿಯೇ ಹೇಗೆ ಅಡಕವಾಗಿಟ್ಟಿರುವೆ?" ಇದರ ಗುಟ್ಟೇನೆಂದು ಕೆಳಲಾಗಿ, ಸ್ವರ್ಣಮಾಲಿನಿಯು ಇಂತೆಂದಳು -- "ಮಹಾಸ್ವಾಮಿ, ನಿಮ್ಮ ಸವಾಲುಗಳಿಗೆ ನನ್ನ ಬಳಿ ಸಮಂಜಸ ಉತ್ತರಗಳು ಇಲ್ಲ. ಆದರೆ ನನಗೆ ತಿಳಿದಿರುವುದು ಇಷ್ಟೆ: ಒಬ್ಬ ದಾರ್ಶನಿಕನ ಆತ್ಮ ಹೇಗೆ ಶಿರೋಭಾಗದಲ್ಲಿ ಸ್ಥಿತವಾಗಿರುತ್ತದೆಯೋ, ಕಾವ್ಯಾತ್ಮನಾದ ಕವಿಯ ಆತ್ಮವು ಹ್ರುದ್ಭಾಗದಲ್ಲಿ ನೆಲೆಸಿರುತ್ತದೆಯೋ, ಗಾಯಕಮಾನ್ಯರ ಸರ್ವಸ್ವವೂ ಕಂಠದಲ್ಲಿ ಸ್ಥಾಪಿತವಾಗಿದೆಯೋ,ಹಾಗೆ ನರ್ತಕನ ಆತ್ಮವು ಅಣು ಅಣುವಿನಲ್ಲೂ ರಸಪ್ರವಾಹವಾಗಿ ಸಂಚರಿಸುತ್ತದೆ."

---
** ಭಾವಾನುವಾದ Adapted from Kahlil Gibran.

Sunday, March 22, 2009

ನನ್ನ ಉಡುಪು ನಿನ್ನದು...ನಿನ್ನ ಉಡುಪು ನನ್ನದು....

****
ಪ್ರಥಮ ಪರಾರ್ಧದ ಕಡೆಯ ಕಲ್ಪದಲ್ಲಿನ ಮಧ್ಯದ ಮನ್ವಂತರದ ಒಂದು ದಿನ. ಸೌಂದರ್ಯದ ಅಭಿಮಾನಿ ದೇವತೆ ಮತ್ತು ಕುರೂಪದ ಅಭಿಮಾನಿದೇವತೆಗಳು ನೈಮಿಶಾರಣ್ಯದ ಸುವಿಶಾಲವಾದ ಸರೋವರದ ಬಳಿ ಕೂಟ ಏರ್ಪಡಿಸಿದರು. ಪುಶ್ಕಳವಾಗಿ ತಿಂದು-ಕುಡಿದು ಮೀಯಲೆಂದು ನಿರ್ವಸ್ತ್ರರಾಗಿ ಪುಶ್ಪ ಸರೋವರಕ್ಕೆ ಧುಮುಕಿದರು. ಮೂರು ಯಾಮಗಳ ಕಾಲ ಜಲಕ್ರೇಡೆಯನಾಡಿದರು. ಹೀಗಿರಲು, ಕುರೂಪದ ಅಭಿಮಾನಿದೇವತೆ ಕಪಟದಿಂದ ಹೊರಬಂದು ಅಲ್ಲೆ ಪೊದೆಯ ಬಳಿ ಕಳಚಿಬಿದ್ದಿದ್ದ ಸೌಂದರ್ಯ ದೇವತೆಯ ಪೋಶಾಕುಗಳನ್ನು ಧರಿಸಿ ನಿಂತಲ್ಲೆ ಮಾಯವಾಯಿತು. ಸೌಂದರ್ಯದೇವತೆಯು ಪುಷ್ಪಸರೋವರ ದಿಂದ ಹೊರಬಂದು ನೋಡಿದಾಗ ಸ್ವವಸ್ತ್ರಗಳು ಕಾಣೆಯಾಗಿದ್ದವು. ನಿರ್ವಸ್ತ್ರಳಾಗಿ ನಾಚಿಕೆಯಿಂದ ಅಲ್ಲೆ ಬಿದ್ದದ್ದ ಕುರೂಪಿಯ ಬಟ್ಟೆಗಳನ್ನೆ ಉಟ್ಟು ತೆರಳಿದಳು. ತದನಂತರ ಈ ದಿನದ ವರೆಗೂ ಲೋಕದಲ್ಲಿ ಎಷ್ಟೋ ಮೂಢಯೋನಿಜರು ತೋರಿಕೆಯ ಸೌಂದರ್ಯನ್ನೆ ನಿಜವೆಂದೂ -- ಹೊರನೋಟಕ್ಕೆ ಸುಂದರವಲ್ಲದ್ದರ ಆಂತರಿಕ ಸೌಂದರ್ಯವನ್ನು ಅರಿಯದೆ ವರ್ತಿಸುತ್ತಿರುವರು.
****

An Adaptation from Kahlil Gibran's "The Wanderer" - His Parables and His Sayings

Monday, February 16, 2009

ಹೀಗೊಂದು ವೀರಗಲ್ಲು


ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು.ಗಂಡನೊಂದಿಗೆ ಚಿತೆಯೇರಿದ ಹೆಣ್ಣಿನ ಸ್ಮರಣೆಗೆ ನಿಲ್ಲಿಸಿದ ಮಾಸ್ತಿ (ಮಹಾಸತಿ) ಕಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ೩ ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯದಲ್ಲಿ ವಿರಾಜಮಾನನಾದ ದೃಶ್ಯ ಕಂಡುಬರುತ್ತದೆ. ಈ ಸಂಗತಿ ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆಲ ವೀರಗಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಮತ್ತೂ ಕೆಲವದರಲ್ಲಿ ಯಾವ ಕೆತ್ತನೆಯೂ ಇರದೆ ಬರಿದೇ ಕಲ್ಲೊಂದನ್ನು ಸ್ಮಾರಕವಾಗಿ ನೆಟ್ಟು ಅದರ ಮೇಲೊಂದು ಶಿವಲಿಂಗವಿಟ್ಟು ಹೋದ ಪ್ರಸಂಗಗಳು ಇವೆ. ವೀರನ ಸ್ಮರಣೆಯಲ್ಲಿ ಲಿಂಗಕ್ಕೆ ನಿತ್ಯುಪೂಜೆ ಮಾಡಿ ವರುಷಕ್ಕೊಮ್ಮೆ ಸಂತರ್ಪಣೆ ಮಾಡಿ ಕಾಲಕ್ರಮೇಣ ಕಲ್ಲು ಮರೆತುಹೋಗಿ ಲಿಂಗವೊಂದೇ ಉಳಿದು ಅದೇ ಪ್ರಧಾನವಾಗಿ ಅದಕ್ಕೊಂದು ಮಂದಿರವಾಗಿ ಮುನ್ನಡೆದ ಪ್ರಸಂಗಗಳೂ ಇವೆ.


೨೬/೧೧ ಮುಂಬೈ ಯುದ್ಧದಲ್ಲಿ ಹೋರಾಡಿ ವೀರಮರಣ ಹೊಂದಿದ ವೀರ ಸೇನಾನಿ ಮೇಜರ್.ಸಂದೀಪ ಉನ್ನಿಕೃಷ್ಣನ್ ಸ್ಮರಣಾರ್ತವಾಗಿ ನಮ್ಮ ಮನೆಯ(ಇಸ್ರೋ ಬಡಾವಣೆಯಲ್ಲಿ)ಬಳಿ ಕರ್ನಾಟಕ ರಕ್ಷಣಾ ವೇದಿಕೆಯವರ ಸಹಕಾರದಲ್ಲಿ ಕೇವಲ ಒಂದೇ ತಿಂಗಳಿನಲ್ಲಿ ಸ್ಥಾಪಿಸಿರುವ ವೀರಗಲ್ಲು. ವೀರ ಸೇನಾನಿ ಸಂದೀಪನಿಗೆ ಸಂದಂತಹ ಸನ್ಮಾನ, ಅವರ ಪರ್ವ್ರಿವಾರ ವರ್ಗದವರಿಗೆ ಜನಸಮೂಹ ನೀಡಿದಂತ ಭರವಸೆ -- ಸಂದೀಪನ ಹಾಗೆ ಹೋರಾಡಿ ಮಡಿದ ಅದೇಷ್ಟೋ ದಪೇದಾರರು, ಹೆಸರುಳಿಯದೆ ಅಳಿದ ಗಣ್ಯವಾಗಬೇಕಿದ್ದ ನಗಣ್ಯರೀಗೂ ದೊರಕಲಿ.

****

Monday, January 26, 2009

ರುದ್ರಪಟ್ನದಲ್ಲಿ ನಾದ ತಾಂಡವಹಾಸನ ಜಿಲ್ಲೆಯ ರುದ್ರಪಟ್ನ ಕರ್ನಾಟಕ ಸಂಗೀತದ ವಲಯದಲ್ಲಿ ಮನೆಮಾತು. ನಾಡಿನ ಶ್ರೇಷ್ಟಶ್ರೇಣಿಯ ಹಲವಾರು ಕಲಾವಿದರು ರುದ್ರಪಟ್ಟಣದ ಮೂಲದವರೆ. ಈ ಕ್ಷೇತ್ರದಲ್ಲಿ ನಾದಬ್ರಹ್ಮ ಮತ್ತು ವೇದಬ್ರಹ್ಮ ಒಂದೆಡೆ ನೆಲೆಸಿದ್ದಾರೆ.ಸಂಗೀತಗ್ರಾಮ ರುದ್ರಪಟ್ಟಣದಲ್ಲಿ ಗಾನಕಲಾಭೂಷಣ ವಿದ್ವಾನ್. ಶ್ರೀ ಆರ್.ಕೆ.ಪದ್ಮನಾಭ ಅವರ ನೇತೃತ್ವದಲ್ಲಿ ವಿಶಿಷ್ಟವಾದ ತಂಬೂರಿ ಆಕಾರದ ಸಪ್ತಸ್ವರಮಂದಿರ ನಿರ್ಮಿಸಿದ್ದಾರೆ. ಕನಕ, ಪುರಂದರ, ವಾದಿರಾಜರಲ್ಲದೆ -- ತ್ಯಾಗಯ್ಯ,ದೀಕ್ಷಿತರು,ಶ್ಯಾಮಶಾಸ್ತ್ರಿಗಳು ಮತ್ತು ವಾಗ್ದೇವಿಗೆ ನಿತ್ಯ ಗಾನಪೂಜೆ ನಡೆಯುತ್ತದೆ.ಇದಲ್ಲದೆ ಪ್ರತಿಯೊಂದು ಮೇಳಕರ್ತ ರಾಗಕ್ಕೆ ಒಂದು ಎಂಬಂತೆ ನಿವೇಶನವನ್ನು ರಚಿಸಿ ’ನಾದಲೋಕ’ ಎಂಬ ಗ್ರಾಮವನ್ನೆ ಸೃಶ್ಟಿಸಿದ್ದಾರೆ. ಇಲ್ಲಿನ ಎಲ್ಲವೂ ಒಂದು ರೀತಿ ವಿಶಿಷ್ಟವೆ. ತಂಬೂರಿ ರೂಪದ ಸಪ್ತ ಸ್ವರಮಂದಿರವಾಗಲಿ, ಗಾನ ಪೂಜೆಯಾಗಲಿ, ವಿನೂತನ ವಸತಿ ಸಮುಚ್ಚಯವಾಗಲಿ - ಎಲ್ಲವೂ ವಿಶೇಷವೇ.