Saturday, January 30, 2010

ಓ ಸೂರ್ಯಕಾಂತಿ!

ವಿಲ್ಯಂ ಬ್ಲೇಕ್ ಕವಿಯ Ah! Sunflower ಕವಿತೆಯನ್ನು ನಾನು ಕನ್ನಡದಲ್ಲಿ ಕೊಲೆ ಮಾಡಿರುವ ಬಗೆ.

ಓ ಸೂರ್ಯಕಾಂತಿ! ಕಾಲನ ಅಧೀನನೆ.
ಸೂರ್ಯ ಸೋಪಾನದ ಜಾಡು ಹಿಡಿದು:
ಆ ಸುಮಧುರ ಸುವರ್ಣ ಸಗ್ಗಕೆ
ಲಗ್ಗೆ ಇಟ್ಟು ಪಯಣಿಗರು ಯಾತ್ರೆ ಮುಗಿಸುವಲ್ಲಿಗೆ

ಆಸೆಗಳ ಸಂಕೋಲೆಯಿಂದ ಬಸವಳಿದ ಜವ್ವನನು
ತುಹಿನದಿಂದಾವರಿಸಿ ಬಾಡಿದ ನವಸುಮವು
ಸುಪ್ತಾವಸ್ಥೆಯಿಂದ ಸಿಡಿದೆದ್ದು ಹಾತೊರೆದು ಹೊರಡುತಿವೆ
ಎನ್ನ ಸೂರ್ಯಕಾಂತಿ ಚಲಿಸುವಲ್ಲಿಗೆ!


Ah ! Sun-flower weary of time.
Who countest the steps of the Sun:
Seeking after that sweet golden clime
Where the travellers journey is done

Where the Youth pined away with desire,
And the pale Virgin shrouded in snow:
Arise from their graves and aspire,
Where my Sun-flower wishes to go!


- William Blake : Songs of Experience in 1794.

Tuesday, December 29, 2009

ರಸಋಷಿಗೆ ಶ್ರೀಸಾಮಾನ್ಯನ ನಮನ


ಶ್ರೀಸಾಮಾನ್ಯ, ನೇಗಿಲಯೋಗಿ , ಬೆಳ್ಳಿಹಬ್ಬ, ಸುತ್ತೋಲೆ - ದಿನನಿತ್ಯದ ಬಳಕೆಯ ಈ ಪದಗಳಲ್ಲಿ ಒಂದು ಸೋಜಿಗದ ಸ್ವಾರಸ್ಯವಿದೆ. ಅದೇನೆಂದು ನಿಮಗೆ ಗೊತ್ತೇ? ಈ ಪದಗಳನ್ನು ಕನ್ನಡಕ್ಕೆ ನೀಡಿದವರು ಕುವೆಂಪು.ಇವೆಲ್ಲ ಪದಸೃಷ್ಟಿಗಳ ಜನಕನಿಗಿಂದು ಜನುಮದಿನ. ಈ ಬ್ಲಾಗಿನಲ್ಲಿ ಶ್ರೀಸಾಮನ್ಯನೆಂದು ನಾಮಕರಣ ಮಾಡಿಕೊಂಡಿರುವ ನಾನು ಪದಜನಕನಿಗೆ ಶ್ರದ್ಧಾಂಜಲಿ ಕೊರಲೇ ಬೇಕಲ್ಲವೇ.

ಕುವೆಂಪು ಅವರ ವಿಶ್ವಮಾನವ ಸಂದೇಶ

ಮನುಜ ಮತ , ವಿಶ್ವ ಪಥ, ಸರ್ವೋದಯ, ಸಮನ್ವಯ ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಸಂಕುಚಿತ ಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ

Monday, October 26, 2009

ಎರವಲು

ನನ್ನದಲ್ಲದ ಜೀವಿತವ
ನನದೆಂದು ನಾ ತಿಳಿದು
ದಿನ ದಿನವು ನನ್ನಿಯನೆ
ನನ್ನೆದೆಗೆ ಉಣಿಸಿ

ಒಲ್ಲದಾತ್ಮನ ತಣಿಸೆ
ಬಗೆಬಗೆಯ ಅಮಿಷವ
ಒಡ್ಡುತಲಿ ದಡ್ಡತನದಿ
ಬದುಕಲೆಂತಾಗುವುದು ತಿಳಿಸಿ

Tuesday, September 29, 2009

ಮುಗ್ಧತೆಯ ಮಾರಣಹೋಮ

--- Still in Draft Phase ---

ನನ್ನ ಜೀವನದಲ್ಲಿ ಒಂದು ಕಾಲ ಇತ್ತು -- ಸೌಂದರ್ಯ ಅನ್ನೊದಕ್ಕೆ ತನ್ನದೆ ಆದ ವಿಶಿಷ್ಟ ಸ್ಥಾನ ಇದ್ದ ಕಾಲ ಅದು.ಬಹುಶಃ ನನಗಾಗ ಆರೇಳು ವರ್ಷ ಇದ್ದಿರಬಹುದು.ಆ ಅನಾಥಾಶ್ರಮ ನನ್ನನ ಶಾಶ್ವತವಾಗಿ ಮುಪ್ಪಿಗೇರ್ಸಕ್ಕಿಂತ ಕೆಲ ವಾರ ಅಥವಾ ತಿಂಗಳಿಗೆ ಹಿಂದಿನ ಮಾತು ಇದು.ಪ್ರತಿ ಮುಂಜಾನೆ ಬಲಮಗ್ಗಲಲ್ಲಿ ಎದ್ದು,ಒಬ್ಬ ಸಿಪಾಯಿಯ ಹಾಗೆ ಹಾಸಿಗೆಯನ್ನು ಮಡಿಮಾಡಿ,ನೇರ ಮೈದಾನದಲ್ಲಿ ಸಾಲು ಸಾಲಾಗಿ ಗಂಜಿಗೆ ನಿಲ್ಲುತ್ತಿದೆ. ಆ ಶನಿವಾರದ ದಿನ ಟಿಫನ್ ಮಾಡಿ ಮತ್ತೆ ನನ್ನ ಕೊಠಡಿಗೆ ಬಂದು ಇನ್ನೇನು ಕೂರಬೇಕು, ಅಷ್ಟ್ರಲ್ಲಿ ನಮ್ಮ ವಾರ್ಡನ್ ಒಂದು ಹಿಂಡು ರಾಜಾಚಿಟ್ಟೆಗಳನ್ನ ಅಟ್ಟಿಸಿಕೊಂಡು ಹೋಗಿ ಮೈದಾನದ ಹೊರಗೆ ಅಟ್ಟತಾ ಇದ್ದ. ಅಲ್ಲೆ ಅವಿತುಕಂಡು ನೋಡ್ತಾ ಇದ್ದೆ ನಾನು -- ಈ ಪ್ರಾಣಿ ಏನ್ ಮಾಡ್ಥಾನೆ ಅಂತ.ಒಂದೊಂದಾಗಿ ಆ ಸುಂದರ ಚಿಟ್ಟೆಗಳನ್ನ ನೆಟ್ ಇಂದ ತೆಗೆದು ಅವುಗಳ ತಲೆ, ರೆಕ್ಕೆಗಳಿಗೆ ಪಿನ್ನ್ ಗಳನ್ನು ಚುಚ್ಚಿ ಶಿಲುಬೇಗೆ ಏರಿಸ್ತಾ ಇದ್ದ ಆ ಪಾಪಿ. ಒಂದು ಕಾರ್ಡ್ಬೋರ್ಡ್ ತುಂಬ ಅರೆಬರೆ ಸತ್ತ ಚಿಟ್ಟೆಗಳನ್ನ ಸಿಕ್ಕಿಸಿಟ್ಟಿದ್ದ.ಅಷ್ಟು ಸುಂದರವಾಗಿರೋದನ್ನ ಹೇಗಾದರು ಕೊಲ್ಲೋಕ್ಕೆ ಮನಸ್ಸುಬಂತೋ ಆ ದೂರ್ತಂಗೆ! ಆ ಮುರಿದ ರೆಕ್ಕೆಗೆ ನನ್ನ ಉಗುಳು ಹಚ್ಚಿ ಅಂಟು ಹಾಕಕ್ಕೆ ನೋಡಿದೆ.ಮತ್ತೆ ಅದು ಹಾರಿ ಹೋಗಿ ನೀಲಾಕಾಶ ಸೇರಲಿ ಅಂತ.ಆದರೆ ರೆಕ್ಕೆ ಮತ್ತೆ ಅಂಟಲೇ ಇಲ್ಲ. ಅಷ್ಟರಲ್ಲಿ ನನ್ನ ತಲೆಯ ಮೇಲೆ ಏನೋ ಬಡಿದಹಾಗೆ ಆಯ್ತು.ತಲೆ ಎತ್ತಿ ನೋಡಿದರೆ ಆ ರಾಕ್ಷಸ ಬಂದು ನಿಂತಿದ್ದ.ಅದೆ ಕಾರ್ಡಬೋರ್ಡನ್ನ ತಗೆದು ನನ್ನ ತಲೆಗೆ ಎರೆಡು ಏಟು ಹಾಕಿ ಅರಚಾಡಿದ.ನಾನು ಏನೂ ಮಾಡಿಲ್ಲ ಅಂತ ಎಷ್ಟು ಹೇಳಿದರೂ ನನ್ನನ ನಂಬಲಿಲ್ಲ. ತಲೆಗೆ ಹೊಡೆದ ರಭಸದಲ್ಲಿ ಚಿಟ್ಟೆ ತುಂಡುಗಳೆಲ್ಲ ಚಲ್ಲಾಪಿಲ್ಲಿಯಾದ್ವು.ಅಲ್ಲಿ ಬಿದ್ದಿದ್ದ ಕಸವನ್ನ ಎತ್ತಿ ಕಸದತೊಟ್ಟಿಗೆ ಹಾಕಿ ಬರಲು ಹೇಳಿ ಅವನು ಹೋರಟು ಹೋದ.ಅಲ್ಲಿದ್ದ ರಾಶಿಯಲ್ಲಿ ಬಹಳ ಹೊತ್ತು ಕೂತು ಎಲ್ಲ ಚಿಟ್ಟೆಗಳನ್ನು ಮತ್ತೆ ಒಟ್ಟಿಗೆ ಜೋಡಿಸಿ ಒಮ್ಮೆಲೆ ಮಣ್ಣು ಮಾಡುವ ಎಂದು ಯೋಚ್ಸಿದೆ.ಆದರೆ ಆಗಲಿಲ್ಲ.ಅವುಗಳ ಸಲುವಾಗಿ ಪ್ರಾರ್ಥನೆ ಮಾಡಿ ನನ್ನ ಹಳೆ ಚೀಲದಲ್ಲಿ ಹಾಕಿ ಮಣ್ಣು ಮಾಡಿದೆ.ಪ್ರತಿವರುಷವೂ ಚಿಟ್ಟೆಗಳು ನಮ್ಮ ಅನಾಥಾಲಕ್ಕೆ ಬಂದಾಗ ನಾನೇ ಅವುಗಳನ್ನು ಹೊರದೂಡುವೆ.ಈ ಸ್ಥಳ ಬದುಕುವುದಕ್ಕೆ ಒಳ್ಳೆಯದಲ್ಲ -- ಸಾಯುವುದಕ್ಕಂತು ಅಲ್ಲವೇ ಅಲ್ಲ ಅನ್ನುವುದು ಆ ಬಡಪಾಯಿಗಳಿಗೆ ಇನ್ನು ತಿಳಿದಿಲ್ಲ.

Thursday, July 30, 2009

ಉಲ್ಬಣ

ಚಿವುಟಿ ಸ್ರವಿಸಬೇಕೆನಿಲ್ಲ
ಹೆಪ್ಪುಗಟ್ಟಿದ ನೋವನ್ನು.
ಒಳಕಾವೇರಿ ಉಕ್ಕುಕ್ಕಿ
ಕೀವು ಕಟ್ಟಿ ತನ್ತಾನೆ
ತೊಟ್ಟಿಕ್ಕುತಿರಲು,
ಚಿವುಟಬೇಕೆನಿಲ್ಲ.

Saturday, June 27, 2009

ಮುದ್ದಣ್ಣ ಕಂಡ ಕವಿ

ಬಕನ ಗುಣವೊಂದು ಮರ್ಕತನದೊಂದಜನ ಮೂ
ಶಕನ ಲಕ್ಷಣಗಲೋಳಗೊಂದೊಂದು ಮೆನ್ ಪಿಪೀ
ಲಿಕನ ಶುನಕನ ಮಾನ ಸುಕಸನ ಚಿತ್ರಕಾಯನ ಗುನಗಲೋಳಗದೊಂದು
ಪಿಕನ ಚಿತ್ರಿಕನ ಮರುಲನ ವಿದೂಷಕನ ವ
ರ್ತಕನ ಸಲ್ಲಕ್ಷನಗಲೊಂದೆರದನ್ದೆಸೆಯ
ಲಕಲಂಕ ಕೀರ್ತಿಯಿಮ್ದೊಪ್ಪಿರ್ಪನಾ ಕವಿಯೇ ಲೋಕಮಿರ್ಪನ್ನೆವರೆಗಂ
- ನಂದಳಿಕೆ ಲಕ್ಷ್ಮೀ ನಾರಣಪ್ಪ


'ರವಿ ಕಾಣದ್ದನ್ನು ಕವಿ ಕಂಡ' ; 'ಬ್ರಹ್ಮನದ್ದು ಸೃಷ್ಟಿ ಕವಿಯದ್ದು ಮರು ಸೃಷ್ಟಿ' -- ಇಂತೆಲ್ಲ ಕವಿವರ್ಯರನ್ನು ಹಾಡಿ ಹೊಗಳಿ ಬ್ರಹ್ಮಾದಿತ್ಯಾದಿಗಳಿಗಿಂತ ಉನ್ನತ ಹೇಮಪೇಠದಲ್ಲಿಟ್ಟು ಕೊಂಡಾಡಿದ್ದಾರೆ. ಆದರೆ ಮುದ್ದಣ್ಣನವರು ಕವಿಯನ್ನು ಕಪಿ,ಬಕ ಮುಂತಾದ ಪ್ರಾಣಿ ಪಕ್ಷಿಗಳಿಗೆ ಹೋಲಿಸಿರುವುದು ಈ ಮೇಲಿನ ಪದ್ಯದ ಸ್ವಾರಸ್ಯ.

Wednesday, May 27, 2009

ಪುರುಷಪ್ರಗತಿಯಂತು ಮಂಕುತಿಮ್ಮ

ಅಸುರರು ಅಮ್ರುತತ್ವವನ್ನು ಅರಸಿ ಬ್ರಹ್ಮಾದಿ ದೇವತೆಗಳಿಂದ ನಾನಾ ವಿಧವಾದ ವರಗಳನ್ನು ಪಡೆದು ಸಾವನ್ನೇ ಗೆಲ್ಲುವ ವ್ಯರ್ಥ ಪ್ರಯತ್ನಕ್ಕಿಳಿದ ಪ್ರಸಂಗಗಳನ್ನು ನಾವು ಭಸ್ಮಾಸುರ,ತಾರಕಾಸುರ, ಹಿರಣ್ಯರ ವೃತ್ತಾಂತದಲ್ಲಿ ಕಂಡಿದ್ದೇವೆ. ಪ್ರಾಚೀನ ಗ್ರೀಕರಲ್ಲಿ ಸಿಸಿಫಸನೆಂಬುವವನು ಛಲ ಕಪಟ ಗಳಿಗೆ ಹೆಸರುವಾಸಿಯಾಗಿದ್ದನು. ನಮ್ಮಲ್ಲಿ ಯಮನಿರುವಂತೆ ಗ್ರೀಕರ ಮೃತ್ಯು ದೇವತೆಯನ್ನೇ ಸೆರೆಹಿಡಿದ್ದಿದ್ದ ಭೂಪ ಇವನು. ಇವನ ಕಪಟದ ಕುಚೇಷ್ಟೆಗಳನ್ನು ತಾಳಲಾರದ ದೇವತೆಗಳು ಇತನಿಗೊಂದು ಶಾಪವನ್ನಿತ್ತರು. ಗಿರಿಯೊಂದರ ಮೇಲೆ ಸಿಸಿಫಸನು ಗೋಲಾಕಾರದ ಬಂಡೆಯೊಂದನು ತಳ್ಳುತ್ತ ಸಾಗಿಸುವುದು. ಬಂಡೆ ಇನ್ನೇನು ಶಿಖರ ಮುಟ್ಟಿತು ಎನ್ನುವಷ್ಟರಲ್ಲಿ ಸರಕ್ಕನೆ ಜಾರಿ ಮತ್ತೆ ಪಾತಾಳ ಸೇರುವುದು. ಸರಿ ಮತ್ತೆ ಪ್ರಾರಂಭವಾಗುವುದು ಸಿಸಿಫಸನು ಬಂಡೆ ಹೊರುವ ಕಾಯಕ. ಹೀಗೆ ಆಚಂದ್ರಾರ್ಕವಾಗಿ ಬಂಡೆ ಹೊರುವ ಕಸ ಅವನ ಪಾಲಾಯಿತು. ಅಂತ್ಯವಿಲ್ಲದೆ,ನಿರರ್ತಕ ಮತ್ತು ವ್ಯರ್ಥವೆನಿಸುವ ಕಾಯಕಕ್ಕೆ ಸಿಸಿಫಸನ ಕಥೆಯು ರೂಪಕ ವಾಯಿತು.

ಕಗ್ಗದಲ್ಲಿ ಗುಂಡಪ್ಪನವರು ಇಂತೆಂದಿದ್ದಾರೆ.

ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು ।
ಉರುಳಿಸಿರಲೊಂದೆರಡು ಮಾರು ಘಾಸಿಯಲಿ ।।
ಸರಿದು ಕೆಳಕದದೆಂತೊ ಜಾರುವುದು ಮರಮರಳಿ ।
ಪುರುಷಪ್ರಗತಿಯಂತು ಮಂಕುತಿಮ್ಮ ।।

ಪ್ರಸ್ತುತ ಬಿಜಾಪುರದ ರವೀಂದ್ರ ಡಿ ನಂದೀಪನ್ನನವರ್ ಎಂಬುವವರು ದಿನಾಲು ಡಿ.ಸಿ. ಕಛೇರಿಯ ಮುಂದೆ ಎಂಟರಿಂದ ಒಂದು ಘಂಟೆ ಮಧ್ಯಾನ್ಹದ ವರೆಗೂ ಹದಿನೈದು ಕೆ.ಜಿ. ತೂಕದ ಕಲ್ಲು ಹೊತ್ತು ನಿಂತಿರುವರಂತೆ. ಇವರ ಅಳಲು ಏನೆಂದರೆ ಭಾರತದಲ್ಲಿ ರಾಷ್ಟ್ರಪತಿ ಮಾದರಿಯ ಪ್ರಜಾಪ್ರಭುತ್ವ ಜಾರಿಗೆ ಬರಬೇಕು. ಅದಕ್ಕಾಗಿ ಸಂವಿಧಾನಕ್ಕೆ ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಈ ಕ್ರಮವಂತೆ. ಅಯ್ಯಾ ! ಆರ್ಥಿಕ ಹಿಂಜರಿತ ಮತ್ತು ಭಯೋತ್ಪಾದನೆಯ ಅಟ್ಟಹಾಸದಲ್ಲಿ ಸರ್ಕಾರವನ್ನು ಮರುಚುನಾವಣೆ ಮಾಡಿ ಗದ್ದುಗೆಗೆ ಏರಿಸಿದ ದೇಶ ಇದು. ಇಂತಹುದರಲ್ಲಿ ನಿಮಗೆ ಯಾಕ ಸಿಸಿಫಸನ ಶೋಕಿ.

Friday, April 17, 2009

ಪ್ರಜಾಪ್ರಭುತ್ವ


ತೋರು ಬೆರಳ ಮೇಲೆ ಸಣ್ಣ ಕಪ್ಪದೊಂದು ಗುರುತು
ಪ್ರಜೆಯು ತಾನು ಪ್ರಭುವೆಂಬುದ ಸಾರುತಿಹುದು ಕುಳಿತು.
ಕರ್ತವ್ಯದ ಕರೆಯಿದುವೆ ಹಕ್ಕಿನ ಘನ ಗೆರೆಯಿದುವೆ
ಎದ್ದು ನಿಂತು ಮತವ ನೀಡು ತಾಮಸವನು ಮರೆತು

ಚುನಾವಣೆಯ ಸಮಯ - ನಿಮ್ಮ ಮತ ಚಲಾಯಿಸಲು ಮರೆಯದಿರಿ!

“At the bottom of all the tributes paid to democracy is the little man, walking into the little booth, with a little pencil, making a little cross on a little bit of paper – no amount of rhetoric or voluminous discussion can possibly diminish the overwhelming importance of that point.”
- Sir.Winston Churchill

Friday, April 10, 2009

ರಸಪ್ರವಾಹ

ಬಿರ್ಕಾಶಾ ದೇಶದ ರಾಜ ಸಭೆಗೆ ಲಾವಣ್ಯವತಿಯೂ ಬಹುಶೃತಳೂ ಆದ ಸ್ವರ್ಣಮಾಲಿನಿ ಎಂಬ ನರ್ತಕಿಯು ತನ್ನ ಚಾರಣ ವೃಂದದೊಂದಿಗೆ ಆಗಮಿಸಿದಳು. ರಾಜಕುಮಾರನ ಸಮಕ್ಷಮದಲ್ಲಿ ವೀಣಾಭೇರಿ ಮೃದಂಗಾದಿಗಳ ಗೋಷ್ಠಿಗಂಗೆಯಲ್ಲಿ ಲೀನವಾಗಿ, ಲಾಸ್ಯವೇ ತಾನೆಂಬಂತೆ ನರ್ತಿಸಿದಳು. ಸ್ವರ್ಣಮಾಲಿನಿ ಜ್ವಾಲಮಾಲೆಯಾಗಿ ಜ್ವಾಲೆಯ ನರ್ತನ, ನಕ್ಷತ್ರಾಕಾಶಗಳ ನರ್ತನ -- ಹೀಗೆ ಎಲ್ಲವನ್ನೂ ಚಿತ್ರಬಿಡಿಸಿದಂತೆ ಕಣ್ಣುಕಟ್ಟುವ ಹಾಗೆ ಚಿತ್ರಿಸಿದಳು.ತದನಂತರ ರಾಜಕುಮಾರನ ಬಳಿ ಬಂದು ತಲೆಬಾಗಿ ನಮಸ್ಕರಿಸಿದಳು. ರಾಜಕುಮಾರನು ಇಂತೆಂದನು " ನರ್ತನನಿಧಿಯೇ -- ಲಾಸ್ಯ ಲಾವಣ್ಯಗಳ ಪುತ್ರಿಯಂತಿರುವ ನಿನಗೆ ಈ ಕಲೆಯು ಹೇಗೆ ಒಲಿಯಿತು. ಎಲ್ಲಿಂದ ಅವತರಿಸಿತು? ಪಂಚಭೂತಗಳನ್ನೂ ನಿನ್ನ ಹಾವಭಾವಗಳಲ್ಲಿಯೇ ಹೇಗೆ ಅಡಕವಾಗಿಟ್ಟಿರುವೆ?" ಇದರ ಗುಟ್ಟೇನೆಂದು ಕೆಳಲಾಗಿ, ಸ್ವರ್ಣಮಾಲಿನಿಯು ಇಂತೆಂದಳು -- "ಮಹಾಸ್ವಾಮಿ, ನಿಮ್ಮ ಸವಾಲುಗಳಿಗೆ ನನ್ನ ಬಳಿ ಸಮಂಜಸ ಉತ್ತರಗಳು ಇಲ್ಲ. ಆದರೆ ನನಗೆ ತಿಳಿದಿರುವುದು ಇಷ್ಟೆ: ಒಬ್ಬ ದಾರ್ಶನಿಕನ ಆತ್ಮ ಹೇಗೆ ಶಿರೋಭಾಗದಲ್ಲಿ ಸ್ಥಿತವಾಗಿರುತ್ತದೆಯೋ, ಕಾವ್ಯಾತ್ಮನಾದ ಕವಿಯ ಆತ್ಮವು ಹ್ರುದ್ಭಾಗದಲ್ಲಿ ನೆಲೆಸಿರುತ್ತದೆಯೋ, ಗಾಯಕಮಾನ್ಯರ ಸರ್ವಸ್ವವೂ ಕಂಠದಲ್ಲಿ ಸ್ಥಾಪಿತವಾಗಿದೆಯೋ,ಹಾಗೆ ನರ್ತಕನ ಆತ್ಮವು ಅಣು ಅಣುವಿನಲ್ಲೂ ರಸಪ್ರವಾಹವಾಗಿ ಸಂಚರಿಸುತ್ತದೆ."

---
** ಭಾವಾನುವಾದ Adapted from Kahlil Gibran.

Sunday, March 22, 2009

ನನ್ನ ಉಡುಪು ನಿನ್ನದು...ನಿನ್ನ ಉಡುಪು ನನ್ನದು....

****
ಪ್ರಥಮ ಪರಾರ್ಧದ ಕಡೆಯ ಕಲ್ಪದಲ್ಲಿನ ಮಧ್ಯದ ಮನ್ವಂತರದ ಒಂದು ದಿನ. ಸೌಂದರ್ಯದ ಅಭಿಮಾನಿ ದೇವತೆ ಮತ್ತು ಕುರೂಪದ ಅಭಿಮಾನಿದೇವತೆಗಳು ನೈಮಿಶಾರಣ್ಯದ ಸುವಿಶಾಲವಾದ ಸರೋವರದ ಬಳಿ ಕೂಟ ಏರ್ಪಡಿಸಿದರು. ಪುಶ್ಕಳವಾಗಿ ತಿಂದು-ಕುಡಿದು ಮೀಯಲೆಂದು ನಿರ್ವಸ್ತ್ರರಾಗಿ ಪುಶ್ಪ ಸರೋವರಕ್ಕೆ ಧುಮುಕಿದರು. ಮೂರು ಯಾಮಗಳ ಕಾಲ ಜಲಕ್ರೇಡೆಯನಾಡಿದರು. ಹೀಗಿರಲು, ಕುರೂಪದ ಅಭಿಮಾನಿದೇವತೆ ಕಪಟದಿಂದ ಹೊರಬಂದು ಅಲ್ಲೆ ಪೊದೆಯ ಬಳಿ ಕಳಚಿಬಿದ್ದಿದ್ದ ಸೌಂದರ್ಯ ದೇವತೆಯ ಪೋಶಾಕುಗಳನ್ನು ಧರಿಸಿ ನಿಂತಲ್ಲೆ ಮಾಯವಾಯಿತು. ಸೌಂದರ್ಯದೇವತೆಯು ಪುಷ್ಪಸರೋವರ ದಿಂದ ಹೊರಬಂದು ನೋಡಿದಾಗ ಸ್ವವಸ್ತ್ರಗಳು ಕಾಣೆಯಾಗಿದ್ದವು. ನಿರ್ವಸ್ತ್ರಳಾಗಿ ನಾಚಿಕೆಯಿಂದ ಅಲ್ಲೆ ಬಿದ್ದದ್ದ ಕುರೂಪಿಯ ಬಟ್ಟೆಗಳನ್ನೆ ಉಟ್ಟು ತೆರಳಿದಳು. ತದನಂತರ ಈ ದಿನದ ವರೆಗೂ ಲೋಕದಲ್ಲಿ ಎಷ್ಟೋ ಮೂಢಯೋನಿಜರು ತೋರಿಕೆಯ ಸೌಂದರ್ಯನ್ನೆ ನಿಜವೆಂದೂ -- ಹೊರನೋಟಕ್ಕೆ ಸುಂದರವಲ್ಲದ್ದರ ಆಂತರಿಕ ಸೌಂದರ್ಯವನ್ನು ಅರಿಯದೆ ವರ್ತಿಸುತ್ತಿರುವರು.
****

An Adaptation from Kahlil Gibran's "The Wanderer" - His Parables and His Sayings

Monday, February 16, 2009

ಹೀಗೊಂದು ವೀರಗಲ್ಲು


ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು.ಗಂಡನೊಂದಿಗೆ ಚಿತೆಯೇರಿದ ಹೆಣ್ಣಿನ ಸ್ಮರಣೆಗೆ ನಿಲ್ಲಿಸಿದ ಮಾಸ್ತಿ (ಮಹಾಸತಿ) ಕಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ೩ ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯದಲ್ಲಿ ವಿರಾಜಮಾನನಾದ ದೃಶ್ಯ ಕಂಡುಬರುತ್ತದೆ. ಈ ಸಂಗತಿ ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆಲ ವೀರಗಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಮತ್ತೂ ಕೆಲವದರಲ್ಲಿ ಯಾವ ಕೆತ್ತನೆಯೂ ಇರದೆ ಬರಿದೇ ಕಲ್ಲೊಂದನ್ನು ಸ್ಮಾರಕವಾಗಿ ನೆಟ್ಟು ಅದರ ಮೇಲೊಂದು ಶಿವಲಿಂಗವಿಟ್ಟು ಹೋದ ಪ್ರಸಂಗಗಳು ಇವೆ. ವೀರನ ಸ್ಮರಣೆಯಲ್ಲಿ ಲಿಂಗಕ್ಕೆ ನಿತ್ಯುಪೂಜೆ ಮಾಡಿ ವರುಷಕ್ಕೊಮ್ಮೆ ಸಂತರ್ಪಣೆ ಮಾಡಿ ಕಾಲಕ್ರಮೇಣ ಕಲ್ಲು ಮರೆತುಹೋಗಿ ಲಿಂಗವೊಂದೇ ಉಳಿದು ಅದೇ ಪ್ರಧಾನವಾಗಿ ಅದಕ್ಕೊಂದು ಮಂದಿರವಾಗಿ ಮುನ್ನಡೆದ ಪ್ರಸಂಗಗಳೂ ಇವೆ.


೨೬/೧೧ ಮುಂಬೈ ಯುದ್ಧದಲ್ಲಿ ಹೋರಾಡಿ ವೀರಮರಣ ಹೊಂದಿದ ವೀರ ಸೇನಾನಿ ಮೇಜರ್.ಸಂದೀಪ ಉನ್ನಿಕೃಷ್ಣನ್ ಸ್ಮರಣಾರ್ತವಾಗಿ ನಮ್ಮ ಮನೆಯ(ಇಸ್ರೋ ಬಡಾವಣೆಯಲ್ಲಿ)ಬಳಿ ಕರ್ನಾಟಕ ರಕ್ಷಣಾ ವೇದಿಕೆಯವರ ಸಹಕಾರದಲ್ಲಿ ಕೇವಲ ಒಂದೇ ತಿಂಗಳಿನಲ್ಲಿ ಸ್ಥಾಪಿಸಿರುವ ವೀರಗಲ್ಲು. ವೀರ ಸೇನಾನಿ ಸಂದೀಪನಿಗೆ ಸಂದಂತಹ ಸನ್ಮಾನ, ಅವರ ಪರ್ವ್ರಿವಾರ ವರ್ಗದವರಿಗೆ ಜನಸಮೂಹ ನೀಡಿದಂತ ಭರವಸೆ -- ಸಂದೀಪನ ಹಾಗೆ ಹೋರಾಡಿ ಮಡಿದ ಅದೇಷ್ಟೋ ದಪೇದಾರರು, ಹೆಸರುಳಿಯದೆ ಅಳಿದ ಗಣ್ಯವಾಗಬೇಕಿದ್ದ ನಗಣ್ಯರೀಗೂ ದೊರಕಲಿ.

****

Monday, January 26, 2009

ರುದ್ರಪಟ್ನದಲ್ಲಿ ನಾದ ತಾಂಡವ



ಹಾಸನ ಜಿಲ್ಲೆಯ ರುದ್ರಪಟ್ನ ಕರ್ನಾಟಕ ಸಂಗೀತದ ವಲಯದಲ್ಲಿ ಮನೆಮಾತು. ನಾಡಿನ ಶ್ರೇಷ್ಟಶ್ರೇಣಿಯ ಹಲವಾರು ಕಲಾವಿದರು ರುದ್ರಪಟ್ಟಣದ ಮೂಲದವರೆ. ಈ ಕ್ಷೇತ್ರದಲ್ಲಿ ನಾದಬ್ರಹ್ಮ ಮತ್ತು ವೇದಬ್ರಹ್ಮ ಒಂದೆಡೆ ನೆಲೆಸಿದ್ದಾರೆ.ಸಂಗೀತಗ್ರಾಮ ರುದ್ರಪಟ್ಟಣದಲ್ಲಿ ಗಾನಕಲಾಭೂಷಣ ವಿದ್ವಾನ್. ಶ್ರೀ ಆರ್.ಕೆ.ಪದ್ಮನಾಭ ಅವರ ನೇತೃತ್ವದಲ್ಲಿ ವಿಶಿಷ್ಟವಾದ ತಂಬೂರಿ ಆಕಾರದ ಸಪ್ತಸ್ವರಮಂದಿರ ನಿರ್ಮಿಸಿದ್ದಾರೆ. ಕನಕ, ಪುರಂದರ, ವಾದಿರಾಜರಲ್ಲದೆ -- ತ್ಯಾಗಯ್ಯ,ದೀಕ್ಷಿತರು,ಶ್ಯಾಮಶಾಸ್ತ್ರಿಗಳು ಮತ್ತು ವಾಗ್ದೇವಿಗೆ ನಿತ್ಯ ಗಾನಪೂಜೆ ನಡೆಯುತ್ತದೆ.ಇದಲ್ಲದೆ ಪ್ರತಿಯೊಂದು ಮೇಳಕರ್ತ ರಾಗಕ್ಕೆ ಒಂದು ಎಂಬಂತೆ ನಿವೇಶನವನ್ನು ರಚಿಸಿ ’ನಾದಲೋಕ’ ಎಂಬ ಗ್ರಾಮವನ್ನೆ ಸೃಶ್ಟಿಸಿದ್ದಾರೆ. ಇಲ್ಲಿನ ಎಲ್ಲವೂ ಒಂದು ರೀತಿ ವಿಶಿಷ್ಟವೆ. ತಂಬೂರಿ ರೂಪದ ಸಪ್ತ ಸ್ವರಮಂದಿರವಾಗಲಿ, ಗಾನ ಪೂಜೆಯಾಗಲಿ, ವಿನೂತನ ವಸತಿ ಸಮುಚ್ಚಯವಾಗಲಿ - ಎಲ್ಲವೂ ವಿಶೇಷವೇ.

Thursday, December 25, 2008

ಶ್ರೀ ಗುರೋರಷ್ಟಕಂ



ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ಇರುವ ಮಹತ್ವವು ಎಲ್ಲರಿಗೂ ತಿಳಿದಿರುವ ವಿಷಯವೆ. ಗುರುವಿನ ಗುಲಾಮನಾಗುವ ತನಕ ಮುಕುತಿ ಸಿಗದು ಎಂದು ದಾಸರು ಪಾಡಿದರೆ, ತ್ಯಾಗರಾಜರು ’ಗುರು ಲೇಕ ಏಟುವಂಟಿ?’ ಎಂದು ಹಾಡಿದ್ದಾರೆ. ಶ್ರೀ ಆದಿ ಶಂಕರಾಚಾರ್ಯರ ಕೃತ ಗುರು ಅಷ್ಟಕದಲ್ಲಿ ಪೂಜ್ಯರು ಗುರು ಪ್ರಸಾದ ಸಿದ್ಧಿಯಾಗದೆ -- ಯಾವ ಐಶ್ವರ್ಯ,ಅಂತಸ್ತು,ಬುದ್ಧಿ,ಕಳತ್ರ,ಪುತ್ರ ಪೌತ್ರಾದಿ ಲಬ್ಧಿಗಳಿದ್ದರೂ ಏನು ಪ್ರಯೋಜನ ಎಂದು ಮತ್ತೆ ಮತ್ತೆ ಪೃಚ್ಚಿಸಿ ಗುರುದೇವನ ಮಾಹಾತ್ಮ್ಯವನ್ನು ಸಾರಿ ಹೇಳಿದ್ದಾರೆ. ಇದೇ ಡಿಸೆಂಬರ್ ೯ ರಂದು ಗುರುಗ್ರಹವು ಮಕರ ರಾಶಿಯನ್ನು ಪ್ರವೇಶಿಸಿದ್ದು, ತತ್ಸಂಬಂಧ ಈ ಗುರು ಅಷ್ಟಕದ ಪಠನೆಯಿಂದ ಗುರು ಕೃಪಾ ಕಟಾಕ್ಷ ದೊರೆಯುವುದು.

******
ಶರೀರಂ ಸುರೂಪಂ ತಥಾ ವ ಕಳತ್ರಂ
ಯಶಃ ಚಾರು ಚಿತ್ರಂ ಧನಂ ಮೇರು ತುಲ್ಯಂ
ಮನಃ ಚೆನ ಲಗ್ನಂ ಗುರೋರಂಘ್ರಿ ಪದ್ಮೆ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ |೧|

ಕಳತ್ರಂ ಧನಂ ಪುತ್ರ ಪೌತ್ರಾದಿ ಸರ್ವಂ
ಗೃಹಂ ಬಾಂಧವಂ ಸರ್ವಮೆತಾದಿ ಜಾತಂ |೨|

ಶಡಂಗಾನಿ ವೇದೊ ಮುಖೇಶಾಸ್ತ್ರ ವಿದ್ಯ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |೩|

ವಿದೇಶೇಶು ಮಾನ್ಯ ಸ್ವದೇಶೇಶು ಧನ್ಯ
ಸದಾಚಾರ ವೃತ್ತೇಶು ಮಥೋ ನ ಚ ಅನ್ಯ |೪|

ಕ್ಷಂಮಂಡಲೆ ಭೂಪ ಭೂಪಾಲ ವೃಂದೈ
ಸದಾ ಸೇವಿತಂ ಯಸ್ಯ ಪಾದಾರವಿಂದಂ |೫|

ಯಶೋ ಮೆ ಗಥಂ ಭಿಕ್ಷು ದಾನ ಪ್ರತಾಪ
ಜಗದ್ವಾಥುಸರ್ವಂ ಕರೆ ಯಃ ಪ್ರಸಾದಾತ್ |೬|

ನ ಭೋಗೆ ನ ಯೋಗೆ ನ ವಾ ವಾಜಿರಾಜೌ
ನ ಕಾಂತಾ ಸುಖೆ ನೈವ ವಿತ್ತೇಶು ಚಿತ್ತಂ |೭|

ಅರಣ್ಯೇ ನ ವಾ ಸ್ವಸ್ಯಾ ಗೇಹೆ ನ ಕಾರ್ಯೆ
ನ ದೇಹೆ ಮನೊ ವರ್ಥತೆಮತ್ ವನಾರ್ಘ್ಯೆ |೮|

ಗುರೋರಷ್ಟಕಂ ಯ ಪಠೇತ್ ಪುಣ್ಯ ದೇಹಿ
ಯತಿರ್ಭೂಪಥಿರ್ಬ್ರಹ್ಮಚಾರಿ ಚ ಗೇಹಿ
ಲಭೇತ್ ವಾಂಚಿತಂ ಪದಂ ಬ್ರಹ್ಮ ಸಂಗ್ನಾಂ
ಗುರೊರುಕ್ತ ವಾಕ್ಯೆ ಮನೊ ಯಸ್ಯ ಲಗ್ನಂ

Saturday, December 20, 2008

ದಶರಥ ಕೃತ ಶನೇಶ್ವರ ಸ್ತೋತ್ರಂ

’ಚಾಪಲಾಯ ಪ್ರಚೋದಿತಃ’ ಎಂಬಂತೆ ನನ್ನ ಹುಚ್ಚು ಮನಸ್ಸಿನ ಹತ್ತಾರು ಮುಖಗಳಲ್ಲಿ ಒಂದು ಮುಖ ಇತ್ತೀಚೆಗೆ ವೇದಾಂಗಗಳಲ್ಲಿ ಒಂದಾದ ಜೋತಿಷ್ಯದ ಕಡೆಗೆ ತಿರುಗಿದೆ. ಈ ವಿಶಾಲವಾದ ಭೂಮಂಡಲದಲ್ಲಿ ಇರುವ ವೈಪರೀತ್ಯಗಳನ್ನು ಕಂಡು - ಅರಿತು ನನ್ನ ಮನಸ್ಸಿಗೆ ಸರಿ ಹೊಂದುವ, ಸಮಂಜಸವೆನಿಸುವ, reconcile ಮಾಡಿಕೊಳ್ಳ ಬಹುದಾದಂತಹ worldview ರೂಪಿಸಿಕೊಳ್ಳಲು ನ್ಯಾಯ, ತರ್ಕ ಹೀಗೆ ಹತ್ತು ಹಲವು ಮಾರ್ಗೋಪಾಯಗಳು ಇದ್ದಿರ ಬಹುದು. ಸತ್ಯಾನ್ವೇಷಣೆಗೆ ಜೋತಿಷ್ಯವೂ ಒಂದು ಹೊಸ ದೃಶ್ಟಿಕೋಣವಾಗಲಿ ಎಂಬ ಇಂಗಿತದಿಂದ ಓಂ ಪ್ರಥಮವಾದ ಜೋತಿಷ್ಯಾಧ್ಯಯನ ಸಮಯದಲ್ಲಿ ನಾನು ಎದುರುಗೊಂಡ ಕೆಲ ಸ್ವಾರಸ್ಯ ಗಳನ್ನು ಹಂಚಿಕೊಳ್ಳುತಿದ್ದೇನೆ. ಓದುಗರಿಗೆ ಇದು ಕಾಗೆ - ಗೂಬೆ ಕಥೆ ಅನಿಸಿದರೆ ನನ್ನ ಕ್ಷಮೆ ಇರಲಿ. .

ಶನೇಶ್ವರನೆಂದರೆ ಸಾಮಾನ್ಯ ಜನರಿಗೇನು, ಅಸಮಾನ್ಯರಿಗೂ ಧಿಗಿಲೆಬ್ಬಿಸುವನು. ಶನೇಶ್ವರನ ಪಾಶದಿಂದ ಪಾರಾದವರು ಬೆರಳೆಣಿಕೆಯಷ್ಟೆ.ಶನೇಶ್ವರನು ೩೦ ವರುಶಗಳಿಗೊಮ್ಮೆ ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವನಂತೆ. ಈ ಸಮಯದಲ್ಲಿ ರಾಜ ಮಹರಾಜರಿಗೆ ವಿಶೇಷ ಸಂಕಷ್ಟಗಳು ಮಾತ್ರವೇ ಅಲ್ಲ, ಗಂಡಾಂತರಗಳು ಎದುರಾಗುತ್ತವೆಯಂತೆ.ದಶರಥ ಮಹಾರಾಜರ ಆಳ್ವಿಕೆಯ ಸಮಯದಲ್ಲೂ ಸಹ ಛಾಯಪುತ್ರನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವವನಿದ್ದ. ಆಗ ಶ್ರೀರಾಮಪಿತೃವು ಶನೇಶ್ವರನನ್ನು ಉದ್ದೇಶಿಸಿ ಸ್ತೋತ್ರವನ್ನು ರಚಿಸಿ ವಿಪತ್ತಿನಿಂದ ಪಾರಾದರಂತೆ. ಆದ್ದರಿಂದ ಈ ದಶರಥ ಮಹಾರಾಜ ಕೃತ ಶನೇಶ್ವರ ಸ್ತೋತ್ರವು ಶನಿಬಾಧೆಯಲ್ಲಿ ಇರುವವರಿಗೆ ಸಂಕಷ್ಟವನ್ನು ಉಪಶಮನ ಮಾಡುವಲ್ಲಿ ಅಪ್ರತಿಮ ಸಾಧನ.


ಧ್ಯಾತ್ವಾ ಸರಸ್ವತೀಂ ದೇವೀಂ ಗಣನಾಥಂ ವಿನಾಯಕಂ|
ರಾಜಾ ದಶರಥಃ ಸ್ತೋತ್ರಂ ಸೌರೆರಿದಮಥಾಕರೋತ್ ||

ನಮೋ ನೀಲಮಯೂಖಾಯ ನೀಲೊತ್ಫಲನಿಭಾಯ ಚ|
ನಮೋ ನಿರ್ಮಾಂಸದೇಹಾಯ ದೀರ್ಘಶ್ಮಷೃಜಟಾಯ ಚ||
ನಮೋ ವಿಶಾಲನೇತ್ರಾಯ ಶುಷ್ಕೋದರಾಯ ಭಯಾನಕ|
ನಮಃ ಪುರುಷಗಾತ್ರಾಯ ಸ್ಥೂಲರೋಮಾಯ ವೈ ನಮಃ||

ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತಪ್ತಾಯ ವೈ ನಮಃ|
ನಮಃ ಕಾಲಾಗ್ನಿರೂಪಾಯ ಕೃತಾಂತಕ ನಮೋಸ್ತುತೆ||
ನಮಸ್ತೆ ಕೋಟರಾಕ್ಷಾಯ ದುರ್ನಿರೀಕ್ಷ್ಯಾಯ ವೈ ನಮಃ|
ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಲಿನೆ||

ನಮಸ್ತೆ ಸರ್ವಭಕ್ಷಾಯ ವಲೀಮುಖ ನಮೋಸ್ತುತೆ|
ಸೂರ್ಯಪುತ್ರ ನಮಸ್ತೇಸ್ತು ಭಾಸ್ಕರೆ ಭಯದಾಯಕ||
ಅಧೋದೃಶ್ಟೆ ನಮಸ್ತುಭ್ಯಂ ವಪುಃಷ್ಯಾಮ ನಮೋಸ್ತುತೆ|
ನಮೋ ಮಂದಗತೆ ತುಭ್ಯಂ ನಿಸ್ತ್ರಿಂಶಾಯ ನಮೋ ನಮಃ||

ತಪಸಾ ದಗ್ದದೇಹಾಯ ನಿತ್ಯಂ ಯೋಗರತಾಯ ಚ|
ನಮಸ್ತೆ ಙ್ನಾನನೇತ್ರಾಯ ಕಶ್ಯಪಾತ್ಮಜಸೂನವೆ||
ತುಷ್ಟೋ ದದಾಸಿ ವೈ ರಾಜ್ಯಂ ರುಷ್ಟೋ ಹರಸಿ ತತ್ಕ್ಷಣಾತ್|
ದೇವಾಸುರಮನುಷ್ಯಾಸ್ಚ ಪಶುಪಕ್ಷಿಸರೀಸೃಪಾಃ||

ತ್ವಯಾ ವಿಲೋಕಿತಾಃ ಸೌರೆ ದೈನ್ಯಮಾಶು ವ್ರಜಂತಿ ಚ|
ಬ್ರಹ್ಮಾ ಶಕ್ರೋ ಯಮಶ್ಚೈವ ಋಷಯಃ ಸಪ್ತತಾರಕಾಃ||
ರಾಜ್ಯಭ್ರಷ್ಠಾಷ್ಚ ತೆ ಸರ್ವೆ ತವ ದೃಶ್ಟ್ಯಾ ವಿಲೋಕಿತಾಃ|
ದೇಶಾ ನಗರಗ್ರಾಮಾ ದ್ವೀಪಾಶ್ಚೈವಾದ್ರಯಸ್ತಥಾ||

ರೌದ್ರದೃಷ್ಟ್ಯಾ ತು ಯೆ ದೃಷ್ಟಾಃ ಕ್ಷಯಂ ಗಚ್ಚಂತಿ ತತ್ಕ್ಷಕ್ಷಣಂ|
ಪ್ರಸಾದಂ ಕುರು ಮೆ ಸೌರೇ ವರಾರ್ಥೇಹಂ ತವಾಶ್ರಿತಃ
ಸೌರೆ ಕ್ಷಮಸ್ವಾಪರಾಧಂ ಸರ್ವಭೂತಹಿತಾಯ ಚ|

ಕತ್ತಲೆ ಬೆಳಕು



ಮೇಲಿನ ಚಿತ್ರ ಬೆಳಕು ಕತ್ತಲೆಯ ಆಟವನ್ನು ಸೋಗಸಾಗಿ ಚಿತ್ರಿಸಿದೆ ಅಲ್ಲವೆ ಮಿತ್ರರೆ? ಆಳವಾಗಿ ಗಮನಿಸಿದರೆ ಈ ಚಿತ್ರವು ಇನ್ನೂ ಬಹಳಷ್ಟು ಹೇಳುತ್ತಿದೆ. ಕಾಲಸರ್ಪದ ಶೀರ್ಷೋತಳಾದಿಯಾಗಿ ರಾಹು-ಕೇತುಗಳನ್ನು ಚಿತ್ರಿಸಲಾಗಿದೆ. ರುಂಡ-ಮುಂಡಗಳಿಲ್ಲದ ಛಾಯಾಗ್ರಹಗಳಾದ ರಾಹು-ಕೇತುಗಳು ಜಾತಕನ ಭಾವಗಳ ಮೇಲೆ ಬೀರುಬಹುದಾದ ಪರಿಣಾಮವನ್ನು ಸಾರಿ ಹೇಳುತ್ತಿದೆ ಈ ಚಿತ್ರ. ನೈಸರ್ಗಿಕವಾಗಿ ಕೄರಗ್ರಹವಾದ ರಾಹುವು ಅನುಗ್ರಹವನ್ನೀಯ್ದರೆ ಆಗುವ ಅಧ್ಯಾತ್ಮಿಕ ಏಳಿಗೆ ಮತ್ತು ಕೇತುವಿನ ಧೂಮಸಮಾನ ಚೇಷ್ಟೆಯನ್ನು ವ್ಯಾಗ್ರದ ಮುಖಭಾಗದಲ್ಲಿನ ಬೆಳಕು ಕತ್ತಲೆಗಳು ಸೂಚಿಸುತ್ತವೆ.

ಸಮುದ್ರ ಮಥನದ ಸಮಯದಲ್ಲಿ ಅಸುರನಾದ ರಾಹುವು ಅಮೃತವನ್ನು ಸೇವಿಸಿದನಂತೆ.ಆದರೆ ಅಮೃತವು ಇನ್ನೂ ಕಂಠದಿಂದ ಕೆಳಗಿಳಿಯುವ ಮೊದಲೇ ಮೋಹಿನೀ ರೂಪತಳೆದ್ದಿದ್ದ ಮಹಾವಿಷ್ಣುವು ರಕ್ಕಸನ ಶಿರಶ್ಛೇದನ ಮಾಡುತ್ತಾನೆ. ಆದರೆ ಅಮೃತದ ಪ್ರಭಾವದಿಂದ ಅಸುರನ ಶಿರೋಭಾಗ ಅಮೃತತ್ತ್ವವನ್ನು ಪಡೆಯಿತು. ಜ್ಯೋತಿಷ್ಯದಲ್ಲಿ ರಾಹುವು ಯಾವ ಭಾವವನ್ನು ನಿಯಂತ್ರಿಸುತ್ತಾನೆಯೋ ಅಲ್ಲಿ ಹಾನಿ,ಖೇದ ಇತ್ಯಾದಿಗಳನ್ನು ಉಂಟುಮಾಡಬಲ್ಲವನಾಗಿರುತ್ತಾನೆ. ವಿಶಯಾಸಕ್ತಿ, ಲೋಭ ಪ್ರವೃತ್ತಿ, ಅನಿಷ್ಚಿತ ವಾತವಾರಣ ಇವೆಲ್ಲವನ್ನೂ ದಯ ಪಾಲಿಸುತ್ತಾನೆ.ರಾಹುವಿನ ಕುದೃಷ್ಟಿಗೆ ಸಮಾಧಾನವೆಂದರೆ ಶ್ರೀಆದಿಶಂಕರ ಕೃತ ಕಾಲಭೈರವ ಅಷ್ಟಕ.


ದೇವರಾಜ ಸೇವ್ಯಮಾನ ಪವನನ್ಘ್ರಿಪಂಕಜಂ
ವ್ಯಾಲಯಗ್ಯಸೂತ್ರಮಿಂದು ಶೇಖರಂ ಕೃಪಾಕರಂ
ನಾರದಾದಿಯೋಗಿ ವೃಂದ ವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೧||

ಭಾನುಕೋಟಿ ಭಾಸ್ವರಂ ಭವಾಬ್ಧಿತಾರಕಂಪರಂ
ನೀಳಕಂಠ ಮೀಪ್ಸಿತಾರ್ಥದಾಯಕಂ ತ್ರಿಲೋಚನಂ
ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೨||

ಶೂಲತನ್ಕಪಾಶದನ್ದಪಾನಿಮಾದಿಕಾರನಮ
ಶ್ಯಾಮಕಾಯಮಾದಿದೆವಮಕ್ಷರಂ ನಿರಾಮಯಂ
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೩||

ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ
ಭಕ್ತವತ್ಸಲಂಸ್ಥಿರಂ ಸಮಸ್ತಲೋಕವಿಗ್ರಹಂ
ನಿಕ್ವಣನ್ಮನೊಗ್ಯಹೆಮಕಿನ್ಕಿನೀಲಸತ್ಕಠಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೪||

ಧರ್ಮಸೆತುಪಾಲಕಂ ಸ್ವಧರ್ಮಮಾರ್ಗನಾಶನಂ
ಕರ್ಮಪಾಶಮೊಚಕಂ ಸುಶರ್ಮಧಾಯಕಂ ವಿಭುಂ
ಸ್ವರ್ಣವರ್ಣಕೇಶಪಾಶಶೊಭಿತಾಂಗನಿರ್ಮಲಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೫||

ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ
ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಂ
ಮ್ರುತ್ಯುದರ್ಪನಾಶನಂ ಕರಾಳದಂಷ್ಟ್ರಭೂಶಣಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೬||

ಅಟ್ಟಹಾಸಭಿನ್ನಪದ್ಮಜಾಂಡಕೊಶಸಂತತಿಂ
ದ್ರುಷ್ತಿಪಾತ್ತನಷ್ತಪಾಪಜಾಲಮುಗ್ರಶಾಸನಮ್
ಅಷ್ಟಸಿದ್ಧಿದಾಯಕಂ ಕಪಾಳಮಾಲಿಕಾಧರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೭||

ಭೂತಸಂಘನಾಯಕಂ ವಿಶಾಳಕೀರ್ತಿದಾಯಕಂ
ಕಾಶಿವಾಸಲೋಕಪುಣ್ಯಪಾಪಶೋಧಕಂ ವಿಭುಂ
ನೀತಿಮಾರ್ಗಕೊವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೮||

|| ಫಲಶೃತಿ ||
ಕಾಲಭೈರವಾಷ್ಟಕಂ ಪಠಂತಿ ಏ ಮನೋಹರಂ
ಗ್ಯಾನಮುಕ್ತಿಸಾಧನಂ ವಿಚಿತ್ರಪುನ್ಯವರ್ಧನಂ
ಶೋಕಮೊಹದೈನ್ಯಲೋಭಕೊಪತಾಪನಾಶನಂ
ತೇ ಪ್ರಯಾಂತಿ ಕಾಲಭೈರವಾಮ್ಘ್ರಿಸಂನಿಧಿಂ ಧ್ರುವಂ

Wednesday, November 12, 2008

|| ಶ್ರೀ ಹನುಮಾನ ಚಾಲೀಸಾ ||


ದೋಹಾ

--
ಶ್ರೀ ಗುರುಚರಣ ಸರೋಜ ರಜ ನಿಜ ಮನು ಮುಕುರು ಸುಧಾರಿ|
ಬರನವು ರಘುಬರ ಬಿಮಲ ಜಸು ಜೋ ದಾಯಕು ಫಲ ಚಾರಿ ||
ಬುದ್ಧಿ ಹೀನ ತನು ಜಾನಿಕೆ ಸುಮಿರೌ ಪವನಕುಮಾರ|
ಬಲ ಬುದ್ಧಿ ಬಿದ್ಯಾ ದೇಹು ಮೋಹಿ ಹರಹು ಕಲೇಸ ಬಿಕಾರ ||

ಚೌಪಾಯಿ

--
ಜಯ ಹನುಮಾನ ಙ್ನಾನಗುನ ಸಾಗರ|
ಜಯ ಕಪೀಸ ತಿಹು ಲೋಕ ಉಜಾಗರ||೧||
ರಾಮ ದೂತ ಅತುಲಿತ ಬಲಧಾಮ|
ಅಂಜನಿಪುತ್ರ ಪವನಸುತ ನಾಮಾ||೨||
ಮಹಾಬೀರ ಬಿಕ್ರಮ ಬಜರಂಗೀ|
ಕುಮತಿ ನಿವಾರ ಸುಮತಿಕೆ ಸಂಗೀ||೩||
ಕಂಚನ ಬರನ ಬಿರಾಜ ಸುಬೆಸಾ|
ಕಾನನ ಕುಂಡಲ ಕುಂಚಿತ ಕೇಸಾ||೪||
ಹಾತ ಬಜ್ರ ಔರ ಧ್ವಜಾ ಬಿರಾಜೈ|
ಕಾಂಧೆ ಮೂಂಜ ಜನೇಊ ಸಾಜೈ||೫||
ಸಂಕರ ಸುವನ ಕೇಸರೀ ನಂದನ|
ತೇಜ ಪ್ರತಾಪ ಮಹಾ ಜಗಬಂದನ||೬||
ಬಿದ್ಯಾವಾನ ಗುನೀ ಅತಿ ಚಾತುರ|
ರಾಮಕಾಜ ಕರಿಬೇಕೋ ಆತುರ||೭||
ಪ್ರಭು ಚರಿತ್ರ ಸುನಿಬೇಕೋ ರಸಿಯಾ|
ರಾಮಲಖನ ಸೀತಾ ಮನ ಬಸಿಯಾ||೮||
ಸೂಕ್ಷ್ಮರೂಪ ಧರಿ ಸಿಯಹಿಂ ದಿಖಾವಾ|
ಬಿಕಟ ರೂಪ ಧರಿ ಲಂಕ ಜರಾವಾ||೯||
ಭೀಮ ರೂಪಧರಿ ಅಸುರ ಸಂಹಾರೆ|
ರಾಮಚಂದ್ರ ಕೆ ಕಾಜ ಸವಾರೆ||೧೦||
ಲಾಯ ಸಜೀವನ ಲಖನ ಜಿಯಾಯೆ|
ಶ್ರೀ ರಘುಬೀರ ಹರಷಿ ಉರ ಲಾಯೆ||೧೧||
ರಘುಪತಿ ಕೀನ್ಹೀ ಬಹುತ ಬಾಢಾಈ|
ತುಮ ಮಮ ಪ್ರಿಯ ಭರತಹಿ ಸಮ ಭಾಯಿ||೧೨||
ಸಹಸ ಬದನ ತುಮ್ಹರೋ ಜಸ ಗಾವೈ|
ಅಸ ಕಹಿ ಶ್ರೀಪತಿ ಕಂಠ ಲಗಾವಯ್||೧೩||
ಸನಕಾದಿಕ ಬ್ರಹ್ಮಾದಿ ಮುನೀಸಾ|
ನಾರದ ಸಾರದ ಸಹಿತ ಅಹೀಸಾ||೧೪||
ಜಮ ಕುಬೇರ ದಿಗಪಾಲ ಜಹಾಂ ತೆ|
ಕಬಿ ಕೋಬಿದ ಕಹಿ ಸಕೆ ಕಹಾ ತೆ||೧೫||
ತುಮಉಪಕಾರ ಸುಗ್ರೀವಹಿಂ ಕೀನ್ಹಾ|
ರಾಮ ಮಿಲಾಯ ರಾಜ ಪದ ದೀನ್ಹಾ||೧೬||
ತುಮ್ಹರೋ ಮಂತ್ರ ಬಿಭೀಶನ ಮಾನಾ|
ಲಂಕೇಸ್ವರ ಭಎ ಸಬ ಜಗ ಜಾನಾ||೧೭||
ಜುಗ ಸಹಸ್ರ ಜೋಜನ ಪರ ಭಾನೂ|
ಲೀಲ್ಯೋ ತಾಹಿ ಮಧುರ ಫಲ ಜಾನೂ||೧೮||
ಪ್ರಭು ಮುದ್ರಿಕಾ ಮೆಲಿ ಮುಖ ಮಾಹೀಂ|
ಜಲಧಿ ಲಾಂಘಿ ಗಯೆ ಅಚರಜ ನಾಹೀಂ||೧೯||
ದುರ್ಗಮ ಕಾಜ ಜಗತ ಕೆ ಜೆತೆ|
ಸುಗಮ ಅನುಗ್ರಹ ತುಮ್ಹಾರೆ ತೇತೆ||೨೦||
ರಾಮ ದುವಾರೆ ತುಮ ರಖವಾರೆ|
ಹೋತ ನ ಅಙ್ನಾ ಬಿನು ಪೈಸಾರೆ||೨೧||
ಸಬಸುಖ ಲಹೈ ತುಮ್ಹಾರೀ ಸರನಾ|
ತುಮ ರಚ್ಛಕ ಕಾಹೂಂ ಕೋ ಡರನ||೨೨||
ಆಪನ ತೇಜ ಸಮ್ಹಾರೋ ಆಪೈ|
ತೀನೊಂ ಲೋಕ ಹಾಂಕ ತೆಂ ಕಾಪೈಂ||೨೩||
ಭೂತ ಪಿಸಾಚ ನಿಕಟ ನಹಿಂ ಆವೈ|
ಮಹಾಬೀರ ಜಬ ನಾಮ ಸುನಾವೈ||೨೪||
ನಾಸೈ ರೋಗ ಹರೈ ಸಬ ಪೀರಾ|
ಜಪತ ನಿರಂತರ ಹನುಮತ ಬೀರಾ||೨೫||
ಸಂಕಟ ತೆಂ ಹನುಮಾನ ಛುಡಾವೈ|
ಮನ ಕ್ರಮ ಬಚನ ಧ್ಯಾನ ಜೊ ಲಾವೈ||೨೬||
ಸಬಪರ ರಾಮ ತಪಸ್ವೀ ರಾಜ|
ತಿನಕೆ ಕಾಜ ಸಕಲ ತುಮ ಸಾಜಾ||೨೭||
ಔರ ಮುನೋರಥ ಜೋ ಕೋಯಿ ಲಾವೈ|
ಸೋಈ ಅಮಿತ ಜೀವನ ಫಲ ಪಾವೈ||೨೮||
ಚಾರೊ ಜುಗ ಪರತಾಪ ತುಮ್ಹಾರ|
ಹೈ ಪರಸಿದ್ಧ ಜಗತ ಉಜಿಯಾರಾ||೨೯||
ಸಾಧು ಸಂತಕೆ ತುಮ ರಖವಾರೆ|
ಅಸುರ ನಿಕಂದನ ರಾಮ ದುಲಾರೆ||೩೦||
ಅಷ್ಟ ಸಿದ್ಧಿ ನೌ ನಿಧಿಕೆ ದಾತ|
ಅಸ ಬರ ದೀನ ಜಾನಕೀ ಮಾತಾ||೩೧||
ರಾಮ ರಸಾಯನ ತುಮ್ಹರೆ ಪಾಸಾ|
ಸದಾ ರಹೊ ರಘುಪತಿ ಕೆ ದಾಸಾ||೩೨||
ತುಮ್ಹರೆ ಭಜನ ರಾಮ ಕೊ ಪಾವೈ|
ಜನಮ ಜನಮ ಕೆ ದುಖ ಬಿಸರಾವೈ||೩೩||
ಅಂತಕಾಲ ರಘುಬರ ಪುರ ಜಾಯಿ|
ಜಹಾ ಜನಮ ಹರಿಭಕ್ತ ಕಹಾಈ||೩೪||
ಔರ ದೇವತಾ ಚಿತ್ತ ನ ಧರಈ|
ಹನುಮತ ಸೆಈ ಸರ್ಬ ಸುಖ ಕರಈ||೩೫||
ಸಂಕಟ ಕಟೈ ಮಿಟೈ ಸಬ ಪೀರಾ|
ಜೋ ಸುಮಿರೈ ಹನುಮತ ಬಲಬೀರ||೩೬||
ಜೈ ಜೈ ಜೈ ಹನುಮಾನ ಗೋಸಾಯೀ|
ಕೃಪಾ ಕರಹು ಗುರು ದೇವ ಕೀ ನಾಈಂ||೩೭||
ಜೋ ಸತ ಬಾರ ಪಾಠ ಕರ ಕೋಯಿ|
ಛೂಟಹಿ ಬಂದಿ ಮಹಾ ಸುಖ ಹೋಈ||೩೮||
ಜೋ ಯಹ ಪಡೆ ಹನುಮಾನ ಚಾಲೀಸಾ|
ಹೋಯ ಸಿದ್ಧಿ ಸಾಖೀ ಗೌರೀಸಾ||೩೯||
ತುಲಸೀದಾಸ ಸದಾ ಹರಿ ಚೆರಾ|
ಕೀಜೈ ನಾಥ ಹೃದಯ ಮಹ ಡೆರಾ||೪೦||

ದೋಹಾ

--
ಪವನತನಯ ಸಂಕಟ ಹರನ ಮಂಗಲ ಮೂರತಿ ರೂಪ|
ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ ||

****

ದೂರ್ವಾಸ ಸ್ಥಾಪಿತಂ ದೇವಂ ಜನಮೇಜಯ ಸುಪೂಜಿತಂ |
ಭಕ್ತಾಭೀಷ್ಟಪ್ರದಂ ದೇವಂ ಬಾಲ ಹನುಮ ನಮೋಸ್ತುತೇ ||

****

Thursday, October 30, 2008

ಒಂದು ಹಬ್ಬದ ಸುತ್ತ



ಅಕ್ಟೋಬರ್ ತಿಂಗಳ ಕಡೆಯ ದಿನದಂದು ಹ್ಯಾಲೋವೀನ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಆಚರಿಸಿತ್ತಾರೆ. ಕೆಲ್ಟಿಕ್ ಜನಾಂಗದ ಸಂಹೇನ್ ಎಂಬ ಸುಗ್ಗಿಯ ಪರ್ವದಿಂದ ರೂಪುಗೊಂಡ ಹ್ಯಾಲೋವೀನ್,ಗ್ರಾಮ್ಯರಿಂದ ಮೊದಲು ಗೊಂಡು ನವನಾಗರೀಕರಿಗೂ ಹರಡಿದೆ. ಶೀತವಲಯದ ದೇಶಗಳಲ್ಲಿ ಚಳಿಗಾಲ ಪ್ರಾರಂಭವಾಗುವ ಮುನ್ನ ಕೃಷಿಕರು ಕೋಯ್ಲು ಮುಗಿಸಿ ಆಚರಿಸುವ ಧಾರ್ಮಿಕ ಪರ್ವವಿದಾಗಿತ್ತು. ಉತ್ತರ ಐರೋಪ್ಯ ಪ್ರಾಂತ್ಯಗಳಲ್ಲಿ ಇದನ್ನು ಹೊಸ ವರ್ಶವಾಗಿಯೂ ಆಚರಿಸುತ್ತಿದ್ದರು.ಗೇಲಿಕ್ ಜನಾಂಗದವರು ಈ ಪರ್ವದ ಸಮಯದಲ್ಲಿ ಪರ ಮತ್ತು ಅಪರ ಪ್ರಪಂಚದ ನಡುವಿನ ಅಂತರ ಮುರಿದುಬಿದ್ದು, ಭೂತ ಪ್ರೇತಗಳು ಧರೆಗೆ ಅವತರಿಸುತ್ತವೆ ಏನ್ನುವ ಪ್ರತೀತಿಯನ್ನು ಹೊಂದಿದ್ದರು.ಆದರಿಂದಲೆ ಉರುವಲ ಸಾಮಗ್ರಿಗಳನ್ನು ಸಂಗ್ರಹಿಸಿ ದಹಿಸುವುದು (bonfires), ಈ ಅತಿಮಾನುಷರನ್ನು ಪ್ರೇತಗಳನ್ನು ಸಂಹರಿಸಿ/ಶಾಂತಿಗೊಳಿಸುವ ಪ್ರತೀಕಗಳು ಈ ಪರ್ವದ ಆಚರಣಾ ವಿಧಾನಗಳಲ್ಲಿ ಒಳಹೊಕ್ಕವು. ಹ್ಯಾಲೋವೀನ್ ಸಂದರ್ಭದಲ್ಲಿ ಧಿಗಿಲೆಬ್ಬಿಸುವ ಮುಖವಾಡ ವಸ್ತ್ರ ವೇಶಭೂಷಣಗಳನ್ನು ಧರಿಸುವುದು ವಾಡಿಕೆಯಾಗಿದೆ.ಈ ದಿನ ಕುಂಬಳಕಾಯಿಯಿ ಒಳ ತಿರುಳನ್ನು ತೆರೆದು,ಒಂದು ಮಡಿಕೆಯೆ ಆಕೃತಿಯಲ್ಲಿ ಕಡಿದು,ಮುಖವಾಡ ಮಾಡಿ,ಮುಖವಾಡದ ಒಳಗೆ ಒಂದು ಮೋಂಭತ್ತಿಯನ್ನು ಹತ್ತಿಸುವುದನ್ನು ಕಾಣಬಹುದು.ಈ ಮುಖವಾಡಕ್ಕೆ ಜ್ಯಾಕ್-ಓ-ಲಾಂಟರ್ನ್ (Jack-O-Lantern)ಎಂದು ಹೆಸರು. ಈಡಿ ಆಚರಣೆಗೆ ಭಯದ ವಾತವರಣದ ಲೇಪವಿದ್ದರೂ,ಕೆಲ ಅಂಶಗಳನ್ನು ಗಮನಿಸಿದರೆ, ಈ ಹ್ಯಾಲೋವೀನ್ ಅನೇಕ ಭಾರತೀಯ ಪರ್ವಗಳ ಒಂದೊಂದು ಅಂಶಗಳನ್ನು ಒಳಗೊಂಡಿದೆ ಅನ್ನಿಸುತ್ತದೆ.

ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಇದನ್ನು ಸಂಕ್ರಾಂತಿ ಎನ್ನೋಣವೇ. ಇಲ್ಲ, ದುಷ್ಟ ದಹನ ಮಾಡುವುದರಿಂದ ಇದನ್ನು ಹೋಳಿಕಾ ದಹನಕ್ಕೆ ಹೋಲಿಸಿ, ಹೋಳಿ ಎನ್ನೋಣವೇ? ಮನೆಗಳ ಮುಂದೆ ಕ್ಯಾಂಡಲ್ಲು ಗಳು ಕಂಗೊಳಿಸುವುದರಿಂದ ದೀಪಾವಳಿಗೆ ಹತ್ತಿರವಾದರೆ, ಚಿಣ್ಣರು ವಿಧ ವಿಧ ವಸ್ತ್ರಗಳನ್ನೊಳಗೊಂಡ ಫಾನ್ಸಿ ಡ್ರೆಸ್ ಧರಿಸುವುದರಿಂದ, ಕೃಷ್ಣಾಷ್ಟಮಿಯಂದು ರಾಧೆ-ಕೃಷ್ಣೆಯರ ಅಲಂಕಾರ ತೊಟ್ಟ ಮಕ್ಕಳಿಗೆ ಹೋಲಿಸ ಬಹುದು. ಯುಗಾದಿಯಂದು ನಾವು ಮಾವು-ಬೇವು ತರುವ ಹಾಗೆ, ಫಾಲ್ Fall( ಶಿಶಿರ?) ಋತುವು ಮುಗಿದ ಈ ಸಮಯದಲ್ಲಿ ಓಕ್ ಎಲೆಗಳನ್ನು ( Oak Leaves) ತಂದು ಸಿಂಗರಿಸುವುದರಿಂದ ಇದನ್ನು ಯುಗಾದಿ ಎನ್ನೋಣವೆ? ಐರೋಪ್ಯ ಪ್ರಾಂತ್ಯ್ದಲ್ಲಿ ನವವರ್ಶವಾಗಿ ಆಚರಿಸುತ್ತಿದ್ದರಿಂದ ಇದನ್ನು ಯೂಗಾದಿ ಎಂದರೆ ತಪ್ಪೇನಿಲ್ಲ ಬಿಡಿ.ಹಬ್ಬಗಳಿಗೂ ಋತುಗಳಿಗೂ ಇರುವ ನಂಟನ್ನು ಗಮನಿಸಿ. 'ವಸಂತ ಬಂದ ಋತುಗಳ ರಾಜ' ಎಂದು, ವಸಂತನ ಆಗಮವನ್ನು ಯುಗಾದಿಯ ಸಮಯ ಮಾವು ತೋರನ ದಿಂದ ಸ್ವಾಗತಿಸಿದರೆ , ಇತ್ತ ಚಳಿಗಾಲದಲ್ಲಿ ವೃಕ್ಷ ತರುಗಳು ಬಟ್ಟೆ ಕಳಚಿ ಹೊರಬಿದ್ದ ಓಕ್ ಎಲೆಗಲಿಂದಲೇ ಅಲಂಕಾರ.

ಅವಿವಾಹಿತ ಕನ್ಯೆಯರು ಹ್ಯಾಲೋವೀನ ರಾತ್ರಿಯಂದು ಕತ್ತಲೆ ಕೊಣೆಯಲ್ಲಿ ಕುಳಿತು ಕನ್ನಡಿಯಲ್ಲಿ ದಿಟ್ಟಿಸಿ ನೋಡಿದರೆ ತಮ್ಮ ಭಾವಿಪತಿಯ ದರ್ಶನ ವಾಗುವುದು ಎಂಬ ನೊಂಬಿಕೆ ಇದ್ದಿತು. ಇದು ಭೀಮನಮಾವಾಸ್ಯೆಯ ನಮ್ಮ ಪತಿಸಂಜೀವನಿ ವ್ರತದಂತೆ ತೋರುವುದಲ್ಲವೆ?

ಅಂತು ಪ್ರಾಚ್ಯ ಪಾಶ್ಚಿಮಾತ್ಯಗಳೆನ್ನದೆ ಹಬ್ಬಗಳ ಆಚರಣೆಗಳಲ್ಲಿ ವೈವಿಧ್ಯತೆ - ಸಾಮ್ಯತೆಗಳು ಕಾಣಬಹುದು.



ಹಾಲೊವೀನ್ ಸಂದರ್ಭದಲ್ಲಿ 'ರೂಪ'ದರ್ಶಿ ಪುಟ್ಟಕುಂಬಳಕಾಯಿ ಕು ||'ಸಾಹಿತ್ಯ' ವೇಷಧರಿಸಿರುವ ಬಗೆ

Wednesday, September 24, 2008

ಪ್ರಸ್ತುತ ಪ್ರಪಂಚದಲ್ಲಿ ಪ್ರತಾಪಭಾನು....

ವಾಮದೇವನು ಪಾರ್ವತೀದೇವಿಯನ್ನುದ್ದೇಷಿಸಿ ಹೇಳಿದಂತ ಪ್ರಾಚಿನಗಾಥೆಯೊಂದನ್ನು ಕೇಳಿ.ಪೂರ್ವಕಾಲದಲ್ಲಿ ಧರ್ಮಾತ್ಮನೂ, ಬಲಶಾಲಿಯೂ, ಸುಶೀಲನೂ ಆದ ಸತ್ಯಕೇತನೆಂಬ ರಾಜನಿದ್ದನು. ಆತನಿಗೆ ಪ್ರತಾಪಭಾನು ಮತ್ತು ಅರಿಮರ್ಧನರೆಂಬ ಸುಪುತ್ರರಿದ್ದರು. ಸದ್ಗುಣ ಸಂಪನ್ನರೂ ಧರ್ಮನಿಷ್ಠರೂ ಆದ ಅವರಿಬ್ಬರಲ್ಲಿ ಅಪೂರ್ವವಾದ ಐಕ್ಯಮತವಿದ್ದಿತು. ಅವರಲ್ಲಿ ಎಂದೆಂದಿಗೂ ಕಲಹಾದಿ ಅಹಿತಕರ ಕಲಾಪಗಳು ನಡೆಯುತ್ತಿರಲಿಲ್ಲ. ಇಂತಿರಲು ಸತ್ಯಕೇತನು ಪ್ರತಾಪಭಾನುವಿಗೆ ರಾಜ್ಯವನ್ನೆರೆದು, ವಾನಪ್ರಸ್ತಾಶ್ರಮವನ್ನು ಸ್ವೀಕರಿಸಿ ಘೋರಾರಣ್ಯಗಳನ್ನು ಸೇರಿದನು. ಇತ್ತ ಪ್ರತಾಪಭಾನುವಿಗಾದರೋ ರಾಜನೀತಿಯಲ್ಲಿ ಶುಕ್ರಾಚಾರ್ಯರ ಸರಿ ತೂಗಬಲ್ಲ ಧರ್ಮರುಚಿಯೆಂಬ ಅಮಾತ್ಯನ ಶ್ರೀರಕ್ಷೆಯಿದ್ದಿತು. ಚದುರಂಗಬಲ ಸೇನೆ ಮತ್ತು ಎಡಬಲಗಳಂತೆ, ಅರಿಮರ್ಧನ ಮತ್ತು ಧರ್ಮರುಚಿಯ ಸಹಾಯದಿಂದ ಪ್ರತಾಪಭಾನುವು ಸಪ್ತದ್ವೀಪಗಳನ್ನೂ, ನಭೂತೋ ನಭವಿಷ್ಯತಿಯೆಂಬ ಹಾಗೆ ರಾಜ್ಯಭಾರ ನಿರ್ವಹಿಸಿಕೊಂಡು ಹೋಗುತ್ತಿದ್ದನು. ಪ್ರಜೆಗಳೆಲ್ಲರು ಸತ್ಯಸಂಧರಾಗಿ ಸಂತೃಪ್ತಿಯಿಂದ ಬಾಳ್ವೆ ನಡೆಸಿಕೊಂಡು ಹೋಗುತ್ತಿದ್ದರು.

ಹೀಗಿರಲು ಒಂದಾನೊಂದು ದಿನ ಪ್ರತಾಪಭಾನುವು ಮೃಗಯಾ ನಿಮಿತ್ತ ಅರಣ್ಯಕ್ಕೆ ತೆರೆಳಿದನು. ಅಲ್ಲಿ ಶಾಸ್ತ್ರರೀತ್ಯ ವಧ್ಯಾರ್ಹ ಪ್ರಾಣಿಗಳನ್ನು ಬೇಟೆಯಾಡಿ ಬರುವಷ್ಟರಲ್ಲಿ ಅವನ ಕಣ್ಣಿಗೆ ಒಂದು ಕಾಡುಹಂದಿ ಕಾಣಿಸಿತು. ಧನುರ್ಬಾಣಗಳಿಂದ ಅದನ್ನು ಬೇಟೆಯಾಡಲು ಮುಂದಾದನು. ಅಪ್ರತಿಮ ಯೋಧನಾದ ಅವನಿಗೆ ಯಃಕಶ್ಚಿತ್ ಒಂದು ಕಾಡುಹಂದಿ ವಶವಾಗದೆ ಉಳಿಯಿತು. 'ಎಲಾ, ಕ್ಷುಲ್ಲಕ ಪ್ರಾಣಿಯೇ' ಎಂದು ಪ್ರತಾಪಭಾನುವು ಅದರ ಬೆನ್ನಟ್ಟಿ ಗೊಂಡಾರಣ್ಯದ ಒಳಹೊಕ್ಕನು. ಆ ಜಂತುವಾದರೂ ಬಿಡದೆ ನಿಗೂಢವೂ ಗಾಡಾಂಧಕಾರವೂ ಆದ ಗುಹಾಂತರದಲ್ಲಿ ಹೋಗಿ ಅವಿತು ಕುಳಿತು ಕೊಂಡಿತು. ರಾಜಭಟ್ಟರಿಂದ ದೂರನಾಗಿದ್ದ ರಾಜನಾದರೋ ದಣಿವು ಬಾಯಾರಿಕೆಗಳಿಂದ ಬಳಲಿ ಅಲ್ಲಿಯೇ ಕಾನನದ ಪುಷ್ಪತರುಗಳ ಮಧ್ಯೆ ಪ್ರಜ್ಞಾಹೀನನಾಗಿ ಕುಸಿದು ಬಿದ್ದ.

ಅದೃಷ್ಟವಶಾತ್ ಅಲ್ಲಿಯೇ ಮಾರ್ಗಮಧ್ಯದಲ್ಲಿ ಓರ್ವ ಕುಹನ ಸಂನ್ಯಾಸಿಯ ಆಶ್ರಮವಿದ್ದಿತು. ಈ ಕಪಟ ಸಂನ್ಯಾಸಿಯಾದರೋ ಪೂರ್ವಾಶ್ರಮದಲ್ಲಿ ಪ್ರತಾಪಭಾನುವಿನಿಂದಲೆ ಪರಾಜಿತನಾದ ಓರ್ವ ರಾಜನಾಗಿರುತ್ತಾನೆ. ಪ್ರತಾಪಭಾನುವಿಗೆ ಕುಹನ ಸಂನ್ಯಾಸಿಯ ಪರಿಚಯ ಸಿಗದಿದ್ದರೂ, ಅಂತಃ ಶತೃತ್ವದಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಆ ದುಷ್ಟನಿಗೆ ಪ್ರತಾಪಭಾನುವಿನ ಪೂರ್ಣಪರಿಚಯವಿದ್ದಿತು. ಅತಿವಿನಯದಿಂದ (ಧೂರ್ತಲಕ್ಷಣವೇ ಸರಿ) ಮಧುಸಮಾನ ಹಿತವಚನಗಳನ್ನು ನುಡಿದು, ವೇದಘೋಷಗಳನ್ನು ಮೊಳಗಿಸಿ ತನ್ನ ಬಾಹ್ಯಚರ್ಯೆಯಿಂದ ನಿಷ್ಕಪಟಿಯಾದ ಪ್ರತಾಪಭಾನುವನ್ನು ಸಂಪೂರ್ಣ ಮರುಳು ಮಾಡುತ್ತಾನೆ. ಈ ಕುಹನ ಸಂನ್ಯಾಸಿಯೇ ಅಪ್ರತಿಮ ಪಂಡಿತನು, ಮಹಾಮಹಿಮನು ಎಂದು ಪ್ರತಾಪಭಾನುವು ಭಾವಿಸುತ್ತಾನೆ. ಇಂತಿರಲು ಕಪಟ ಸಂನ್ಯಾಸಿಯು ತಾನು ಏಕತನುವೆಂದು ನುಡಿಯುತ್ತಾನೆ. ಪ್ರತಾಪಭಾನುವು 'ಏಕತನು ಎಂದರೇನು?' ಎಂದು ಕೇಳಲಾಗಿ, ಸಂನ್ಯಾಸಿಯು ಇಂತೆಂದು ಉತ್ತರಿಸಿದನು -- "ನಾನು ಸೃಷ್ಟಿಕಾಲದಿಂದಲೂ ಇದೇ ಶರೀರದಲ್ಲಿ ಇದ್ದೇನೆ. ಶರೀರ ತ್ಯ್ಗಾಗವನ್ನು ಮಾಡಿಯೇ ಇಲ್ಲ. ಆದರಿಂದ ನಾನು ಏಕತನುವೆಂದು ಗುರುತಿಸಲ್ಪಡುತ್ತೇನೆ" -- ಎಂಬುದಾಗಿ ವಿವರಿಸುತ್ತಾ ತಪಃ ಶಕ್ತಿಯಿಂದ ಏನನ್ನು ಬೇಕಾದರು ಸಾಧಿಸಬಹುದು ಎಂದು ಹೇಳುತ್ತಾನೆ. ಧರ್ಮದುರಂಧರನೂ ಅಪ್ರತಿಮ ರಾಜನೂ ಆದ ಪ್ರತಾಪಭಾನುವಿನ ಮನಸ್ಸಿನಲ್ಲಿ ಈ ಮಾತನ್ನು ಕೇಳುತ್ತಿದ್ದ ಹಾಗೆ ಪ್ರಲೋಭನೆ ಉಂಟಾಗುತ್ತದೆ. "ಗುರುಗಳೇ ತಪಃ ಶಕ್ತಿಯಿಂದ ನನ್ನ ಶರೀರವು ಜರಾಮರಣ ರಹಿತವಾಗುವಂತೆ ಅನುಗ್ರಹಿಸಿ. ಶತಕಲ್ಪ ಪರ್ಯಂತ ಭೂಮಂಡಲದ ಏಕಚಕ್ರಾಧಿಪತ್ಯ ದೊರೆಯುವಂತೆ ಆಶೀರ್ವದಿಸಿ" -- ಎಂಬ ಪ್ರಲೋಭನೆಯ ಮಾತನ್ನು ಆಡುತ್ತಾನೆ. ಭೂಪಾಲನನ್ನು ದಾರಿತಪ್ಪಿಸುವಲ್ಲಿ ಗೆದ್ದೆನೆಂದು ಮನದಲ್ಲೇ ತುಸು ನಕ್ಕು, ಸಂನ್ಯಾಸಿಯು -- 'ತಥಾಸ್ತು!' ಎಂದು ಅನುಗ್ರಹಿಸುತ್ತಲೇ ಒಂದು ಚೇತಾವನಿಯನ್ನು ನೀಡುತ್ತಾನೆ. ನಿನ್ನ ಯಮರಾಜನೂ ಸಹ ಜರಾಮರಣಗಳಿಂದ ಪೀಡಿಸಲಾರನು, ಆದರೆ ವಿಪ್ರೋತ್ತಮರ ಶಾಪ ತಗುಲದಂತೆ ನೋಡಿಕೋ ಎಂದು ಎಚ್ಚರಿಸುತ್ತಾನೆ. ವಿಪ್ರರ ತಪಃಶಕ್ತಿಗೆ ಅತೀವ ಬಲವಿರುತ್ತದೆ. ಆದ್ದರಿಂದ ವಿಪ್ರರಿಂದ ಶಾಪಗ್ರಸ್ತನಾಗದಿದ್ದರೆ ಶತಕಲ್ಪಗಳವರೆಗೂ ನೀನು ಭೂಮಂಡಲದ ಏಕಚಕ್ರಾಧಿಪತ್ಯ ಹೊಂದುತ್ತೀಯೆ ಎಂದು ಹೇಳಿದನು. ಇದಕ್ಕೆ ಮಹಾರಾಜನು -- "ಮುನಿವರ್ಯ, ಸದಾಕಾಲ ವಿಪ್ರೋತ್ತಮರ ಮನ ಒಲಿಸಿಕೊಳ್ಳಲು ಸೂಕ್ತ ಮಾರ್ಗೋಪಾಯವನ್ನು ನೀವೇ ಸೂಚಿಸಿ" ಎಂದು ಅಂಗಲಾಚುತ್ತಾನೆ. ಅದಕ್ಕೆ ಆ ಸಂನ್ಯಾಸಿಯು ಶತಸಹಸ್ರ ಯೋಗ್ಯ ವಿಪ್ರರಿಗೆ ಒಂದು ಸಂವತ್ಸರ ಪರ್ಯಂತ ದಿನಾಲೂ ಅನ್ನದಾನ ಮಾಡಬೇಕೆಂದು ಸೂಚಿಸುತ್ತಾನೆ. ಎಂಥಾ ರಾಜಾಧಿರಾಜನಿಗೇ ಆಗಲಿ ಕಷ್ಟಸದೃಶವಾದ ಈ ವ್ರತವನ್ನು, ಪ್ರತಾಪಭಾನುವಿಗೆ ತನ್ನ ಮಾಯಶಕ್ತಿಯ ಸಹಕಾರದಿಂದ ಮಾಡಿಸುವುದಾಗಿ ಕಪಟಿಯು ಅಶ್ವಾಸನೆಯನ್ನು ನೀಡುತ್ತಾನೆ.

ನಾಡಿಗೆ ಹಿಂದಿರುಗಿದ ಮಹಾರಾಜನು ಸುತ್ತೋಲೆಗಳನ್ನೂ, ಡಂಗೂರಗಳನ್ನು ಸೂಕ್ತ ರೀತಿಯಲ್ಲಿ ಪ್ರಚಾರಗೈದು ಶತ ಸಹಸ್ರ ವಿಪ್ರೋತ್ತಮರನ್ನು ಒಂದೆಡೆ ಅನ್ನದಾನಕ್ಕಾಗಿ ಸೇರಿಸುತ್ತಾನೆ. ಕಾಡುಹಂದಿಯ ರೂಪ ತಾಳಿ ರಾಜನನ್ನು ಆ ದಿನ ದಾರಿತಪ್ಪಿಸಿದ ಕಪಟ ಸಂನ್ಯಾಸಿಯ ಮಿತ್ರನಾದ ಕಾಲಕೇಟ ರಾಕ್ಷಸನು ತನ್ನ ಮಾಯೆಯಿಂದ ನೆರೆದ ವಿಪ್ರೋತ್ತಮರಿಗೆಲ್ಲ ಮೃಷ್ಠಾನ್ನ ಭೋಜನ ತಯಾರು ಮಾಡುತ್ತಾನೆ. ಆದರೆ ದುಷ್ಟನಾದ ಅವನು ಕಪಟ ಸಂನ್ಯಾಸಿಯ ಒಡಗೂಡಿ ಭೋಜ್ಯಗಳಲ್ಲಿ ನರಮಾಂಸವನ್ನು ವಿಪ್ರರಿಗೆ ಉಣಬಡಿಸಿ ಘೋರಪಾಪವೆಸುಗುತ್ತಾರೆ. ದ್ವಿಜರು ಒಂದು ತುತ್ತು ತಿನ್ನುವಷ್ಟರಲ್ಲಿ ಆಕಾಶದಲ್ಲಿ ಒಂದು ಅಶರೀರವಾಣಿಯು ಖಾದ್ಯಗಳು ಅಪವಿತ್ರವಾಗಿರುವುದರ ಬಗ್ಗೆ ಘೋಷಿಸುತ್ತದೆ. ಕಪಟದಿಂದ ನರಮಾಂಸಭಕ್ಷಣೆ ಮಾಡಿಸಿದುದಕೆ ಕುಪಿತಗೊಂಡ ವಿಪ್ರೋತ್ತಮರು ಪ್ರತಾಪಭಾನುವನ್ನು ಬಹಳವಾಗಿ ಶಪಿಸುತ್ತಾರೆ. ಇನ್ನು ಒಂದು ಸಂವತ್ಸರದಲ್ಲಿ ನಿನ್ನ ಪರಿವಾರ ಸಮೇತ ಧ್ವಂಸವಾಗಿ ನಿನ್ನ ತರ್ಪಣಕ್ರಿಯೆಗೂ ಉತ್ತರಾಧಿಕಾರಿಗಳು ಇರದಂತೆ ಆಗಲಿ ಎಂದು ಘೋರವಾಗಿ ಶಪಿಸುತ್ತಾರೆ. ಆಕಾಶವಾಣಿಯು ಈ ವೃತ್ತಾಂತದಲ್ಲಿ ಮಹಾರಾಜನ ಕೈವಾಡವಿಲ್ಲವೆಂದು ಹೇಳಿದರೂ, ಒಮ್ಮೆ ಶಾಪಗ್ರಸ್ಥನಾದರೆಂದರೆ ಕಾಲವಿಧಿನಿಯಮದಂತೆ ಅನುಭವಿಸಿಯೇ ತೀರಬೇಕು ಎಂದು ಹೇಳಿ ವಿಪ್ರರೆಲ್ಲರು ಸಭೆಯನ್ನು ತ್ಯಜಿಸಿ ಹೊರನಡೆಯುತ್ತಾರೆ. ಅದೇ ಶಾಪದಂತೆ ಪ್ರಲೋಭನೆ ಮತ್ತು ದುರ್ವ್ಯಾಪ್ತಿಗೆ ಒಳಗಾದ ಪ್ರತಾಪಭಾನುವು ವರ್ಷಾಂತ್ಯದಲ್ಲಿ ಕಾಲಕೇಟ ರಾಕ್ಷಸ ಮತ್ತು ವೇಷ ಕಳಚಿದ ಕಪಟ ಸಂನ್ಯಾಸಿಯ ಉಭಯ ಸೈನ್ಯಗಳಿಂದ ಹತನಾಗುತ್ತಾನೆ. ಧರ್ಮನಿರತನೂ ಸದ್ಗುಣಸಂಪನ್ನನೂ ಆದರೂ ಮಹಾರಾಜನು ವ್ಯಾಪ್ತಿಗಿಂತ ಮೇಲೆ ಹೋಗಲು ಇಚ್ಚ್ಚಿಸಿದ. ಸಾಕಷ್ಟು ಪ್ರಭಾವಿಯಾಗಿದ್ದು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದರೂ ಪ್ರಕೃತಿಸಹಜವಾಗಿಲ್ಲದಿದ್ದ ಸಂಪತ್ತು - ಸ್ಥಿತಿ - ಬೆಳವಣಿಗೆಯನ್ನು ಅಪೇಕ್ಷಿಸಿ ಅಸ್ತಂಗತನಾದ. ಕಾಲಂತರದಲ್ಲಿ ಇದೇ ಪ್ರತಾಪಭಾನುವು ತ್ರೇತಾಯುಗದಲ್ಲಿ ರಾವಣನಾಗಿ, ಅರಿಮರ್ಧನನು ಕುಂಭಕರ್ಣನಾಗಿ ಮತ್ತು ಮಂತ್ರಿ ಧರ್ಮರುಚಿಯು ವಿಭೀಷಣನಾಗಿ ಜನಿಸಿದರು ಎಂಬಲ್ಲಿಗೆ ಪಾರ್ವತಿ ಪರಮೇಶ್ವರರ ಸಂವಾದದಲ್ಲಿಿ ದುರ್ವ್ಯಾಪ್ತಿಯ ಕೆಡುಕುಗಳನ್ನು ಸಾರಿಹೇಳುವ ಪ್ರತಾಪಭಾನು-ಅರಿಮರ್ಧನರ ಕಥೆಯು ಸಮಾಪ್ತವಾಗಲಿಲ್ಲ.

ಆನಾದಿಕಾಲದಿಂದಲೂ ಇಂತಹ ಕಥೆಗಳು ನಡೆದಿವೆ, ಇಂದಿಗೂ ನಡೆಯುತ್ತಲೇ ಇವೆ. ಕೃತಯುಗದ ಪ್ರತಾಪಭಾನು-ಅರಿಮರ್ಧನರ ಕಥೆ ಹಾಗಿರಲಿ, ಪ್ರಸ್ತುತ ವಾರ್ತೆಗಳಲ್ಲಿ ಕೇಳಿಬರುತ್ತಿರುವ ಲೀಮನ್ ಭ್ರಾತೃಗಳ ಕಥೆ ಕೇಳಿ. ಪ್ರಕೃತಿ ಸಹಜವಲ್ಲದ ವಾರ್ಷಿಕ ಆದಾಯ-ಅಭಿವೃದ್ಧಿ ಪ್ರತಿವರ್ಷವೂ ಆಗಲೇಬೇಕು (year-on-year growth). ಅದು ಯಾವ ಪಣತೆತ್ತಾದರೂ ಸರಿ ಅಭಿವೃದ್ಧಿಯ ಮೆಟ್ಟಲು ಏರಲೇಬೇಕು ಎಂಬ ಧೋರಣೆ. ಇಡೀ ಉದ್ಯಮ ಐದು ಪ್ರತಿಶತ ಬೆಳೆದರೆ ನನ್ನ ಕಂಪನಿ ಇಪ್ಪತ್ತೈದರಷ್ಟು ಬೆಳೆಯ ಬೇಕೆಂಬ ದುರುತ್ಸಾಹ. ಎಲ್ಲರಿಗಿಂತ ನಾನು ಮುಂದು ಇರಬೇಕೆಂಬ ಹಂಬಲ ತಪ್ಪಲ್ಲ. ಅದೇ ಪ್ರಗತಿಗೆ ಪ್ರೇರಕ -- ಆದರೆ ಸಹಜವೆನಿಸದಷ್ಟು ಬೆಳವಣಿಗೆ ಕಾಣ ಬೇಕೆಂಬುದು ದುರ್ವ್ಯಾಪ್ತಿಯ ಪರಮಾವಧಿ. ಜಗತ್ತಿನ ಮೇಧಾವಿಗಳೆಲ್ಲ (ಇನ್ವೆಸ್ಟ್ಮೆಂಟ್ ಬ್ಯಾಂಕರ್ ಗಳು) ಒಂದೆಡೆ ಸೇರಿ ಬೆಳೆಸಿದ ಕಂಪನಿ. ಸೋಲು ಕಂಡಿಲ್ಲದ ಸರದಾರರು ಗೆಲ್ಲಲ್ಲು ಏನು ಬೇಕಾದರೂ ರಿಸ್ಕ್ (risk) ತೆಗೆದು ಕೊಳ್ಳಲು ಶಕ್ತರು. ಹೀಗೆ ನಾಗಲೋಟದ ಬೆಳವಣಿಗೆಗೆ ಉರುವಲು ನೀಡಲು ಅದೆಷ್ಟು ಅಸಹಜ ನಡೆಗಳನ್ನು ಬೇಕಾದರೂ ಹಾಕುವರು. ಇಂದಿನ ಲೀಮನ್ ಬ್ರದರ್ಸ್ ಮುಂತಾದ ಕಂಪನಿಗಳಾಗಲಿ, ಅಂದಿನ ಪ್ರತಾಪಭಾನುವಾಗಲಿ ಮೂಲತಃ ಒಳ್ಳೆಯವರೇ, ಶಕ್ತಿ ಶಾಲಿಗಳೇ, ಮೇಧಾವಿಗಳೇ -- ಆದರೆ ವ್ಯಾಪ್ತಿಯನ್ನು ಮೀರಿ ಅಪೇಕ್ಷಿಸಿದ್ದರಿಂದ ಅವನತಿ ಕಂಡವರು!

****

Related News Item:

The High Cost of Growth:

The collapse of these financial giants has been stunning in both its speed and severity.These fallen companies were overlevered, overconfident, and too slow to either realize or admit that they were in serious jeopardy. But these companies all shared one additional trait that foreshadowed their downfall. They pursued a strategy of growth at any cost -- and it ultimately cost them dearly.Year after year, these companies targeted double-digit growth, despite much slower growth in their core markets.What wasn't being asked strenuously enough was what risks the companies were taking to maintain this supranormal growth rate. This problem isn't unique to financial companies; they're just the most recent high-profile examples.Unless a company has a sustainable competitive advantage, growth rates that outpace the rest of its industry can be a signal of accounting shenanigans or aggressive business practices.

***