Friday, January 12, 2007

ಕನಸು .. ಕಾರ್ಮುಗಿಲು ...

ಬಾಂದಳದ ಆಯದಲಿ ಕಾರಿರುಳ ಗವಸು
ಪರಿವೆ ಪರಧಿಯ ಮೀರಿ ಮರುಗಿಹುದು ಮನಸು

ತರಣಿಗೊದಗಿದ ಗ್ರಹಣ ಪಟಲವಂಬರದಿ
ಪದುಳ ಕ್ಷೀಣಿಸುತಿಹುದು ವರವಿಲ್ಲ ಮನದಿ

ಬಾಳಿನೊಗಟೆಯ ಘಾತಿಸಲಾಗದಾ ಧುರೆಯೋ
ಕ್ಷಿತಿಕಂಪದೆಲರಲ್ಲಿ ಸಿಲುಕಿರುವ ಧರೆಯೋ

ಮನದ ಎಳಸಿಕೆ ವಿಲಯ ವಿಧಿಯ ನಿರ್ಘಾತ
ಮಿಸುಕು ಜೀವಿತಕಿನ್ನು ಹೊಂಗನಸು ಶೋಣಿತ

ಭವರೋಗ ಭೇಷಜವೆ ಗರಲವಾರಿಧಿಯಾಗೆ
ಮುಕುರ ಮೂರ್ಚೂರಾಯ್ತು ಬರಡಾಯ್ತು ಒಳಿತೆಸಗೆ
--

ಟಿಪ್ಪಣಿ :

ಸನ್ಮಾರ್ಗದರ್ಶಿಗಳು ,ಹಿರಿಯರು ಆದ ತ.ವಿ.ಶ್ರೀ ಅವರು 'ಕನಸು.. ಕಾರ್ಮುಗಿಲು..' ಪ್ರಯತ್ನಕ್ಕೆ ನನ್ನ ಟಿಪ್ಪಣಿ ಜೋಡಿಸಿ , ಬ್ಲಾಗಿಸಬೇಕೆಂದು ಆಗ್ನಾಪಿಸಿದರು. ಇಂತಿದೆ ನನ್ನ ಮಾತು - ಕಥೆ , ಈ ನನ್ನ ಕಿರು ಪ್ರಯತ್ನದ ಬಗ್ಗೆ :

'ಕನಸು..ಕಾರ್ಮುಗಿಲು..' - - ಈ ಪದ್ಯದಲ್ಲಿ ನೊಂದ ಮನವನ್ನು ಪ್ರಳಯಕಾಲದ ಆಗಸಕ್ಕೆ ಹೋಲಿಸಲಾಗಿದೆ. ಆಕಾಶದ ಉದ್ದಗಲಕ್ಕೂ ಕಾರುತ್ತಿರುವ ಇರುಳು ಪ್ರಳಯ ಕಾಲದಲ್ಲಿ ವ್ಯಾಪಿಸಿದ ಹಾಗೆ , ನೊಂದ ಮನವನ್ನು ನೊವು ವ್ಯಾಪಿಸಿದೆ. ಗವಸು ಎಂದರೆ ಹೋದಿಕೆ. ಮುಖ ಮತ್ತು ಶಿರೋಭಾಗವನ್ನು ಹೊದ್ದು ಮಲಗಿದ ರೀತಿ , ಮನವನ್ನು ನೊವು ಮುಚ್ಚಿದೆ.ಗ್ರಹಣಗ್ರಸ್ತ ಸೂರ್ಯನನ್ನು ರಾಹು-ಕೇತುಗಳು ಕ್ರಮೇಣ ಆವರಿಸುವಂತೆ,ಮನದಲ್ಲಿನ್ನ ನೆಮ್ಮದಿಯನ್ನು ವಿಧಿಯು ಕಬಳಿಸುತ್ತಿದೆ ಎಂಬ ಅರ್ಥ.ಭೂಕಂಪದ ಸಮದಲ್ಲಿ ಧರಣಿದೇವಿಯು ನಡುಗುವಂತೆ , ಬಾಳಿನ ಒಗಟನ್ನು ಬಿಡಿಸಲಾಗದ ಮಾನವನ ಮನವು ಕಂಪಿಸುತ್ತಿದೆ.ಭೂಕಂಪನಕ್ಕೆ ಮುಂಚಿತವಾಗಿ ಬೀಸುವ ಕೆಟ್ಟ ಗಾಳಿಯನ್ನು ಮನದಲ್ಲಿ ಸುಳಿಯುತ್ತಿರುವ ಕೆಟ್ಟ ಲಹರಿಗಳಿಗೆ ಹೋಲಿಸಲಾಗಿದೆ.ಮುಂದಿನ ಸಾಲುಗಳಲ್ಲಿ,ಮನದಾಸೆಗಳು ವಿಲಯವಾಗಿ ಹೊಂಗನಸು ರಕ್ತ ಸ್ನಿಘ್ದವಾಗಿರುವುದನು ಸೂಚಿಸುತ್ತದೆ. ಭವರೋಗಕ್ಕೆ ಯಾವುದು ಮದ್ದು ಎಂಬ ಗಣನೆ ಇದ್ದಿತೊ , ಆ ದ್ರವ್ಯವೇ ವಿಷ ಸಮಾನವಾಗಿದೆ. ನಾವು ಏನನ್ನು ಒಲಿತೆಸಗೆ ಎಂದು ಭಾವಿಸಿದೆವೋ ಅದುವೇ ನಮ್ಮನ್ನು ಕಾಡಿತಿನ್ನುತ್ತಿದೆ. ಹೀಗಿರಲು ಕನಸಿನ ಕನ್ನಡಿ ಮುರಿದು ಮೂರುಚೂರಾಗಿದೆ ಎಂಬ ಅರ್ಥ.

ಇಲ್ಲಿ ಕೆಲವು poetic devices ಅಳವಡಿಸಲು ಸಣ್ಣ ಪ್ರಯತ್ನ ಮಾಡಿರುತ್ತೇನೆ:

೧. ಪದ್ಯದಲ್ಲಿ ಘೋರವಾದ ಭಾವ-ಭಾವನೆಗಳು ಮೂಡಿ ಬರಲಿ ಎಂದು - ಮಹಾಪ್ರ್ರಾಣ ಮತ್ತು ಕರ್ಕಶ ವರ್ಣಗಳ ಪ್ರಯೋಗವಾಗಿದೆ. - to create a phonetic background

೨. ಇಲ್ಲಿ ಗ್ರಹಣ,ಭೂಕಂಪನ,ವಿಷಸಮುದ್ರ,ರಕ್ತಸ್ನಿಗ್ಧ ಕನಸು ಇತ್ಯಾದಿಗಳನ್ನು ಸೂಚಿಸಲು ಅಳವಡಿಸಲಾಗಿದೆ. - Visual imagery

೩. ಮನವನ್ನು ಇರುಳು ಕವಿದ ಆಗಸ, ಕಂಪಿಸುತ್ತಿರುವ ಭೂಮಿ, ಗ್ರಹಣಗಗ್ರಸ್ತ ಸೂರ್ಯ - ಹೀಗೆ ಕರಾಳ ಉಪಮೆಗಳ ಸಾಂಗತ್ಯ ನೀಡಲಾಗಿದೆ. - Simile , Metaphor , Symbolism


ಕಠಿಣ ಪದಗಳ ಅರ್ಥ :)

ಬಾಂದಳ - ಬಾನಿನ ಅಂಗಳ.
ಆಯ - ವಿಸ್ತಾರ.
ಗವಸು - ಹೊದಿಕೆ.
ಪರಿಧಿ - ಎಲ್ಲೆ. ; limit.
ತರಣಿ - ಸೂರ್ಯ.
ಪದುಳ - ನೆಮ್ಮದಿ.
ಕ್ಷಿತಿಕಂಪ- ಭೂಕಂಪ.
ಎಲರು - ಗಾಳಿ
ಕ್ಷಿತಿಕಂಪದೆಲರಲ್ಲಿ : in the baleful winds preceeding the catastrophic earthquake.
ಭೀಷಜ - ಔಷದಿ
ಗರಲ - ವಿಷ.
ವಾರಿಧಿ - ಸಮುದ್ರ.
ಮುಕುರ - ಕನ್ನಡಿ. vision

.

3 comments:

bhadra said...

ಜೀವನದ ಪರಿಯನ್ನು ಉತ್ತಮ ಪದಗಳಲ್ಲಿ ಚೆನ್ನಾಗಿ ಸೆರೆ ಹಿಡಿದಿರುವಿರಿ

ಮತ್ತೆ ಮತ್ತೆ ಓದಿದಷ್ಟೂ, ಹೊಸ ಹೊಸ ಆಯಾಮಗಳಲ್ಲಿ ಅರ್ಥ ಹೊರಬರುವುದು.

ನಾಲ್ಕು ಪದಗಳಿಗೆ (ಈಗಾಗಲೇ ಸುಮಾರು ಸಲ ಕೇಳಿದ್ದೀನಿ, ನೀವೂ ಹೇಳಿದ್ದೀರಿ) ಅರ್ಥವನ್ನು ಕೆಳಗೆ ಒಕ್ಕಣಿಸಿದರೆ, ಓದುಗರು ಕವನವನ್ನು ಸವಿಯಾಗಿ ರುಚಿಸುವರು.

ಮತ್ತೊಂದು ಉತ್ತಮ ಕವನ.

Shiv said...

ಶ್ರೀಕಾಂತ್,

ಪ್ರಕ್ಷುಬ್ದ ಮನಸಿನ ತಲ್ಲಣವನ್ನು ಸೆರೆಹಿಡಿದ ರೀತಿ ಚೆನ್ನಾಗಿದೆ.
ಕೆಲವು ಪದಗಳು ಆರ್ಥವಾಗದೆ ಇದ್ದಾಗ ನಿಮ್ಮ ಟಿಪ್ಪಣಿ ನೆರವಿಗೆ ಬಂತು.ಟಿಪ್ಪಣಿಗೆ ಧನ್ಯವಾದಗಳು!

Srikanth said...

ತವಿಶ್ರೀ , ಶಿವು ಅವರೆ,

ಬಹಳ ಧನ್ಯವಾದಗಳು.