Saturday, October 20, 2007

ನಾನೇ ನನ್ನ ಗಂಡ

ಯಾಕಾಗಬಾರದು? ಗುಂಡಾ ಜೋಯಿಸರು ಮೀನಾ-ಮೇಷ ಎಣಿಸಿ, ಒಂಟಿಕೊಪ್ಪಲ್ ಪಂಚಾಂಗ ಮುದುರಿಟ್ಟು, ಹಸಿರು ನಿಷಾನೆ ಕೊಟ್ಟೇಬಿಟ್ಟರು. ಈ ಮೊದಲೇ ವರವರಮೂರ್ತಿ ತನ್ನ ಜಾತಕವನ್ನು ಕಂಕುಳಲ್ಲಿ ಇಟ್ಟುಕೊಂಡು, ತನ್ನ ಮದುವೆ ತಾನೆ ಮಾಡ್ಕೊಳ್ಳೋದಕ್ಕೆ ಶಾಸ್ತ್ರಿಗಳ ಹತ್ತಿರ ಬಂದಿದ್ದ. ವಿಪರ್ಯಾಸ ಏನಪ್ಪ ಅಂದ್ರೆ, ಅವನು ಅವನನ್ನೇ ಮದುವೆ ಆಗಬೇಕಂತೆ. ಜೋಯಿಸರು ಪಾಪ ಕಕ್ಕಾಬಿಕ್ಕಿಯಾಗಿ, ತಾಮ್ರದ ಬಿಂದಿಗೆಯ ತಣ್ಣನೆ ನೀರು ಕುಡಿದು, ಸ್ವಲ್ಪ ಸುಧಾರಿಸಿಕೊಂಡ್ರು. ತಮ್ಮ ಜಾಯಮಾನದಲ್ಲೇ ಇಂಥ ವರ'ಸಾಮ್ಯ' ನೋಡೋ ಕ್ಯಾಮೆ, ಇದೇ ಮೊದಲ ಬಾರಿ ಅವರಿಗೆ ಬಂದದ್ದು. ಚೇತರಿಸಿಕೊಂಡಿದ್ದೆ, ಗುಂಡಾ ಜೋಯಿಸರು ತಮ್ಮ ಬಕ್ಕ ತಲೆ ಸವರಿಕೊಂಡು, 'ಮನುಸ್ಮ್ರುತಿ' ತಿರುವಿ ಹಾಕಿದರು. ದೇವ, ಅರ್ಶ, ಪ್ರಾಜಾಪತ್ಯ, ಗಂಧರ್ವ, ಪೈಶಾಚ್ಯ... ಊಂ ಹೂ .. ತನ್ನನ್ನು ತಾನೆ ಮದುವೆ ಆಗೋದು ಎಲ್ಲೂ ಇರ್ಲಿಲ್ಲ. ಆದರೆ, ಕೂಡದು ಅಂತ್ಲೂ ಎಲ್ಲೂ ಇರ್ಲಿಲ್ಲ ಬಿಡಿ. ಇನ್ನು ಅವನದ್ದೆ ಜಾತಕ ಆಗಿರೋದ್ರಿಂದ ಗುಣ-ಗಣ ಸರಿಹೋಗೋದ್ರಲ್ಲಿ ಸಂಶಯವೇ ಇಲ್ಲ. ಸ್ವಗೋತ್ರ ಅಂತು ನಿಜ. ಅದ್ರೆ ಅದಕ್ಕೆ ಏನೋ ಉಪಾಯ,ವ್ಯವಸ್ಥೆ, ಅವಸ್ಥೆ ಮಾಡ್ತಾರೆ ಜೋಯಿಸ್ರು. ಪೆಟ್ಟಿ ಕೆಳಗೆ ಚೆನ್ನಾಗಿಯೇ ತಿನ್ಸಿದಾನೆ ಮೂರ್ತಿ. ಎರ್ಡೂ ಕಡೆ ಅವನೇ ಅಂದ್ರೆ ಸುಮ್ನೇನಾ, ಹೇಳಿ ಮತ್ತೆ.

ಅಂತೂ ವರವರಮೂರ್ತಿ ಲಗ್ನಪತ್ರಿಕೆ ಮುದ್ರಿಸಿಯೇ ಬಿಟ್ಟ. ಅದರ ಮೇಲೆ 'ಮದುವೆಯ ಮಮತೆಯ ಕರೆಯೋಲೆ' ಅಂತ ಬೇರೆ ಉತ್ಸಾಹದಲ್ಲಿ ಬರ್ಸಿದ್ದ. ಮೊದಲ ಸಾಲಿನಲ್ಲಿ 'ಶ್ರೀ ವೇಂಕಟೇಶ್ವರಸ್ವಾಮಿ ಪ್ರಸನ್ನ' ಅಂತ ಇತ್ತು. ಪ್ರಸನ್ನತೆ ವಿಷಯ ನನಗೆ ಗೊತ್ತಿಲ್ಲ, ಆದರೆ ದೇವರ ಮುಖ ಸ್ವಲ್ಪ ಸಣ್ಣ ಆಗಿದ್ದಂತೂ ನಿಜ. ಏಡುಕೊಂಡಲಪ್ಪನ ಫೇಸ್ಕಟ್, ಫಸ್ಟ್ ಟೈಂ ಗಾಬರಿ ಆಗಿರೊ ಹಾಗೆ ಫೀಲಿಂಗು. ಈ ರೀತಿ ಸ್ವವಿವಾಹ ಲಗ್ನಪತ್ರಿಕೆ ಮೇಲೆ ವೆಂಕಪ್ಪನ ಪಟ ಅವತರಿಸಿರೋದು ಇದೇ ಮೊದಲು. ಮೊದಲ ಬಾರಿ ಅಲ್ವಾ; ಹಾಗೆ, ಬೇಸ್ತು ಬಿದ್ದದ್ದ ಬಾಲಾಜಿ. ಮುದ್ರಣ ಮಾಡೋವ್ನು ಒಂದು ಸಣ್ಣ ತಪ್ಪು ಮಾಡಿದ್ದ ಪ್ರಿಂಟಿಂಗ್ನಲ್ಲಿ. 'ಚಿ.ಸೌ.ಹಾ.ಕುಂ.ಶೋ.' ಅಂತ ಒನ್ ಆಫ್ ದ (ಓನ್ಲಿ) ನೇಮ್ ಮುಂದೆ ಹಾಗೆಯೇ ಮರೆತು ಮುದ್ರಿಸಿದ .ಚಾಲಾಕಿ ವರವರ. ಗಮನಿಸಿದವನೇ, ಎರಡು ಹೆಸರು ಮುಂದೆಯೂ 'ಚಿ.ರಾ.' ಎಂದು ಹಾಕಿಸಿದ. ಮುದ್ರಕ ಎರಡು ಬಾರಿ 'ಚಿ.ರಾ' ಕಂಡು, ಕಿಟಾಆಆಆಆಆಆರ್! ಅಂತ ಚೀರುವುದೊಂದು ಬಾಕಿ.

ಆಶಾಡ ಅಮಾವಾಸ್ಯೆಯ ದಿನ ಸರಿಯಾಗಿ ರಾಹುಕಾಲಕ್ಕೆ ಸಲ್ಲುವ ಶುಭ ಕರ್ಕಾಟಕ ಲಗ್ನದಲ್ಲಿ ಮದುವೆ. ಮುಹೂರ್ತಕ್ಕೆ ಮುಂಚೆ ಅಲ್ಲಿ ಕೊಂಚ ಕೋಲಾಹಲ ಏರ್ಪಟ್ಟಿತ್ತು. 'ಕೋಲಾಹಲ' ಅಂದ್ರೆ, ಜನ ಕುಡಿಯುತ್ತಿದ್ದ, ಕೋಲಾ ಮತ್ತು ಹಾಲು ಅಲ್ಲ. ನಿಜವಾದ ಕೋಲಾಹಲ. ಇತ್ತ ವರವರಮೂರ್ತಿ ಗೌರಿ ಪೂಜೆಗೂ ಕೂರಬೇಕು. ಅತ್ತ ಕಾಶಿಯಾತ್ರೆಗೂ ಹೊಗಬೇಕು. ವೇಳೆ ಮೀರ್ತ ಇದೆ ಅಂತ ಶಾಸ್ತ್ರಿಗಳು ಒಂದೇ ಸಮ ಗಲಾಟೆ. ರಾಹುಕಾಲದಲ್ಲಿ ಹುಡುಕಿ ಹುಡುಕಿ ಇಟ್ಟಿರೋ ಸ್ವವಿವಾಹ ವಿಚಿತ್ರ ಲಗ್ನ ಅಂದ್ರೇ ಏನು ಸಾಮಾನ್ಯಾನೇ? ಹೇಗೊ ಮದುವೆ ಆಗೋ ಗೀಳಿನಲ್ಲಿ ವರವರ,ಅಟ್ -ಏ-ಟೈಂ ಗೌರಿ ಪೂಜೆ - ಕಾಶಿಯಾತ್ರೆ ಒಟ್ಟೊಟ್ಟಿಗೆ ಮ್ಯಾನೇಜ್ ಮಾಡಿ, ಹಸೆಮಣೆ ಮೇಲೆ ಬಂದು, ಹಲ್ಲುಗಿಂಜುತ್ತ ಕೂತೇ ಬಿಟ್ಟ. ಕೊಂಡಂಭಟ್ಟ ಶಾಸ್ತ್ರಿಗಳು 'ಮಾಂಗಲ್ಯಂ ತಂತುನಾನೇನಾ' ಅನ್ನೋ ಮಂತ್ರಾನ ತುಸು ತೀಡಿ -- 'ಮಾಂಗಲ್ಯಂ ತನಗೆ ತಾನೇನಾ??' ,ಅಂತ ಪ್ರಶ್ನಾರ್ಥಕ ಚಿನ್ಹೆ ಹಾಕಿ, ವಾಲಗ ಊದಿಸಿಯೇ ಬಿಟ್ಟರು. ಹದಿನಾಲ್ಕು ಸುತ್ತು ಹಾಕಿ ವರವರ 'ಸಪ್ತಪದಿ' ಮುಗಿಸಿದ. ತನ್ನ ತಲೆ ಮೇಲೆ ತಾನೆ ಜೀರಿಗೆ ಬೆಲ್ಲ ಕೂಡಾ ಎರಚಿಕೊಂಡ. ಅವನು ಎರಚಿಕೊಂಡ್ಡಿದ್ದೇ, ಜನ ಮೈ ಪರಚಿ ಕೊಂಡ್ರು. ಅಂತರಪಟದ ಶಾಸ್ತ್ರಕ್ಕೆ ಏನು ಮಾಡೊದು ಅಂತ ತೋಚದೆ 'ಕೊಕ್ಕ್' ಕೊಟ್ರು ಶಾಸ್ತ್ರಿಗಳು.ಮದುವೆಯ ಸುದಿನದಂದು ಅವನ ಸ್ನೇಹಿತರು ಹೊಟ್ಟೆ ಬಿರಿದು ತಿನ್ನುವುದಿರಲಿ, ಹೊಟ್ಟೆ ಬಿರಿಯುವ ಹಾಗೆ ನಕ್ಕರು.

ಮದುವೆ ನಮೂದಿಸಲು ಲಾಯರ್ ಅಯ್ಯಂಗಾರಿ ಬಳಿ ಬಂದರು. ಅಣ್ಣನಾದ ಯಮನನ್ನು ಸೋದರಿ ಯಮಿ ಪರಿಣಯವಾಗುವಂತೆ ಕೇಳಿದ್ದುಂಟು. ಪುರಾಣದಲ್ಲಿ ಪುರಾವೆ ಇದೆ.ಸಾರಂಗ ತನ್ನ ಮಾತ್ರುಸ್ವರೂಪಿಣಿಯನ್ನು ವಿವಾಹವಾಗಲು ಇಚ್ಚಿಸಿದ್ದುಂಟು.ಇತಿಹಾಸದಲ್ಲಿ ದಾಖಲೆ ಇದ್ದಿರಬಹುದು. ಆದರೆ, ಲಾಯರ್ ಅಯ್ಯಂಗಾರಿಗೆ ಒಬ್ಬ ಮನುಷ್ಯ ಪ್ರಾಣಿ, ತನ್ನನ್ನು ತಾನೆ ಮದುವೆ ಆಗಬಹುದು ಅನ್ನೋ ಸಂಗತಿ, ವಿಷಯ, ಆಪ್ಷನ್ನು ಈಗ್ಲೇ ಗೋಚರವಾಗಿದ್ದು. ವೃಥಾ 'ಲಾ ಪಾಯಿಂಟ್' ಹಾಕದೆ ವಿವಾಹ ನಮೂದಿಸಿದರು. ಅಂತು ಮದುವೆ ಮುಗೀತು. ಮಧುಚಂದ್ರಕ್ಕೆ ಅಂತ ಮುನ್ನಾರ್ ಕಡೆ ಪಾದ ಬೆಳೆಸಿದ್ದಾಯ್ತು. ಒಳ್ಳೆ ದೊಡ್ಡ ಹೋಟೆಲ್ ನಲ್ಲಿ, ಡಬ್ಬಲ್ ಬೆಡ್ರೂಂ ಬುಕ್ ಕೂಡಾ ಮಾಡಿದ್ದಾಯ್ತು. ( ಶ್!!! ಯಾವ ಸೌಭಾಗ್ಯಕ್ಕೆ ಅಂತ ಮಾತ್ರ ಕೇಳ ಬೇಡಿ ಪ್ಲೀಸ್.)

ಮದುವೆ ಆಗಿದ್ದೇ ತಡ, ಮರುದಿನದಿಂದ ಪ್ರಜಾವಾಣಿ,ಕನ್ನಡಪ್ರಭ,ವಿಜಯ ಕರ್ನಾಟಕ ಎಲ್ಲ ಪತ್ರಿಕೆಗಳವರು ವರವರನನ್ನು ಸಂದರ್ಶಿಸಿದರು.ಹಾಯ್ ಬೆಂಗಳೂರ್ನಲ್ಲಿ ಸಹಾ 'ನಾನೇ ನನ್ನ ಗಂಡ' ಅಣಕ(ಣ);ಅಲ್ಲ ಅಂಕಣ, ಭುಗಿಲೆಬ್ಬಿಸಿತು. ಒಮ್ಮೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ವರವರ ಇಂತೆಂದನಂತೆ. ಅವನಿಗೆ ತನ್ನ ಅಭಿರುಚಿಗೆ ತಕ್ಕ ಸಂಗಾತಿಯೇ ಬೇಕಿತ್ತು. ಇಚ್ಚೆಯನರಿತು, ವಿಶ್ವಾಸವ ಸಂಪಾದಿಸಿ, ಸಹಸ್ಪಂದಿಸುವ ಒಡನಾಟಕ್ಕೆ ಹಾತೊರೆಯುತ್ತಿದ್ದ. ತನ್ನಲ್ಲಿರುವ ತನ್ನತನ, ತನ್ನನು ಬಿಟ್ಟು ಬೇರೆಲ್ಲೂ ದೊರೆಯದು ಎಂದು ತನ್ನನ್ನು ತಾನೆ ಮದುವೆಯಾದನಂತೆ. ಆದರೆ ಮದುವೆ ಯಾಕೆ ಆಗಬೇಕು? ಹಾಗೆ ತನ್ನ ಒಡನಾಟದಲ್ಲಿ ತಾನೆ ಇದ್ದುಬಿಡಬಹುದಲ್ಲ? ಎಂದು ಪ್ರಶ್ನಿಸಿದರೆ; ವರ್ಣಾಶ್ರಮ ಧರ್ಮ - ಗೃಹಸ್ಥಾ, ವಾನಪ್ರಸ್ಥ ಇನ್ನೂ ಏನೇನೋ ಹೇಳಿ ಸಮಜಾಯಿಷಿ ನೀಡುತ್ತಿದ್ದ. ವಿವಾಹದ ತರುವಾಯ,ಅಂತು ಇಂತು ಆರು ತಿಂಗಳು ಕಳೆಯಿತು. ಕಾಲಕ್ರಮೇಣ ವರವರನಿಗೆ ಪ್ರಕೃತಿದತ್ತವಾಗಿ ಸಂತತಿ ಬೆಳೆಸೋಣವೆನಿಸಿತು.ತನ್ನ ಸಮವಯಸ್ಕರ ಜೀವನ ನೋಡಿದಾಗ ಈ ಹಾತುರಿತ ಇಮ್ಮಡಿಯಾಯಿತು. ಆದರೆ ಸ್ವವಿವಾಹ ಪದ್ದತಿಯಲ್ಲಿ ಹೆರುವುದು ದುಸ್ಸಾಧ್ಯವಾದ ಸಂಗತಿ ಅಲ್ಲವೆ? ಇರಬಹುದೆನೋ. ಅದು ನಮಗೆ ನಿಮಗೆ ಹೇಗೆ ತಿಳಿಯಬೇಕು ಹೇಳಿ. ಈಗ ಉಳಿದದ್ದು ವಿಚ್ಚೀದನ ಮಾತ್ರವೇ. ಅದೊಂದೇ ಉಪಾಯ.

ಮತ್ತೆ ಲಾಯರ್ ಅಯ್ಯಂಗಾರಿ ಮೊರೆ ಹೊಕ್ಕ ವರವರ. 'ಲಾ ಪಾಯಿಂಟ್' ನರಸಿಂಹ ಅಯ್ಯಂಗಾರಿ ವಿಚ್ಛೇದನಕ್ಕೆ ೩ ವಿಧಾನ ಸೂಚಿಸಿದರು. ಒಂದು: ಗಂಡ - ಹೆಂಡಿರು ವರ್ಷ ಪರ್ಯಂತ ದೂರವಿರಬೇಕು. ಇಲ್ಲ, ಇಬ್ಬರ ನಡುವೆ ಹಿಂಸೆ ದೌರ್ಜನ್ಯ ನಡೆಯಬೇಕು. ಮೂರನೆಯದು ವ್ಯಭಿಚಾರ. ತನ್ನಿಂದ ತಾನೆ ದೂರವಿರಲಾರದು. ವಿಚ್ಚೀದನದ ಸಲುವಾಗಿ ಅವನಿಗೆ ಅವನೇ ಹಿಂಸಿಸಿ ಕೊಳ್ಳಲು ಮನಸ್ಸು ಒಪ್ಪಲಿಲ್ಲ. ಉಳಿದಿದ್ದು ವ್ಯಭಿಚಾರ ಒಂದೇ. ಆದ್ರೆ ಸಭ್ಯಸ್ಥ ಮೂರ್ತಿ, ಬಡಪಾಯಿಗೆ ಇವೆಲ್ಲ ತಿಳಿಯೋಲ್ಲ. ಅನುಭವ ಅಂತು ಕೇಳಲೇ ಬೇಡಿ, ಮೊದಲೇ ಇಲ್ಲ. ಈಗೇನು ಮಾಡೋದು? ಹುಣ್ಣಿಮೆ ದಿನ, ಪೋಲಿ ಪಾಪಣ್ಣನ ಜೊತೆ, ವರವರ ಪೇಟೆ ಆಚೆ ಮಂದಾರವತಿ ಮನೆ ಸೇರೊ ಸಂದರ್ಭಾನೂ ಬಂತು. ಅಲ್ಲಿ ನಡೆದ ಘಟನಾವಳಿಗಳ ಆಧಾರದ ಮೇಲೆ, ವಿಚ್ಚೀದನ ಕೂಡ ಭರ್ಜರಿಯಾಗಿ ಸಿಕ್ತು. ಈ ಸ್ವ-ವಿಚ್ಚೇದನದಿಂದ ಹಾಲು ಕುಡಿದಷ್ಟು ತೃಪ್ತಿ ಆಗಿದ್ದು ವರವರನ ತಾಯಿಗೆ ಮತ್ತು ಮಂದಾರವತಿಗೆ. ವರವರನನ್ನು ಗೌರವದಿಂದ ಕಂಡು, ಸಹಸ್ಪಂದಿಸಿ ವೇಶ್ಯೆಯಾದರೂ ವಿಶ್ವಾಸ ಗಳಿಸಿದ ಮಂದಾರವತಿ ಅವನನ್ನು (ಮರು)ವಿವಾಹವಾದಳು.

ಹರಕೆ ತೀರಿಸಲು, ಮುದ್ದಾದ ಅವಳಿ-ಜವಳಿ ಮೊಮ್ಮಕ್ಕಳನ್ನು ಹೊತ್ತು, ಮಂದಾರವತಿಯ ಅತ್ತೆ ತಿರುಪತಿಗೆ ಹೊರಟು ನಿಂತಿದ್ದರು. ಅಂದು, ಲಗ್ನಪತ್ರಿಕೆಯ ಮೇಲೆ ಗಂಟು ಮುಖ ಹಾಕಿಕೊಂಡಿದ್ದ ವೆಂಕಣ್ಣನ ಚಹರೆ ಈಗ ಸ್ವಲ್ಪ ಚೇತರಿಸಿದೆ. ತಿರುಮಲೆಯೆಡೆಗೆ ಮುಖಮಾಡಿ ನಿಂತಿದ್ದ ಬಸ್ಸಿನ ಮುಂಭಾಗದಲ್ಲಿದ್ದ ಪಟದಲ್ಲಿ, ಮಂದಸ್ಮಿತನಾಗಿ ಮಂದಾರವತಿಯ ಮಕ್ಕಳನ್ನು ಶ್ರೀನಿವಾಸ ಸ್ವಾಮಿ ಹರಸುತ್ತಿದ್ದರು. ಏಡುಕೊಂಡಲವಾಡ ವೆಂಕಟರಮಣ ಗೋವಿಂದ, ಗೋವಿಂದ!!!

Credits and Courtesy:

Based on a short story, 'The Man Who Married Himself' by Charlie Fish. The characters and certain scenarios have been indianised to induce contextual humour. The Plot and theme, however are based on the original work.

Translated on June 14 2007.

1 comment:

ಸುನಿಲ್ ಜಯಪ್ರಕಾಶ್ said...

ನಕ್ಕೂ ನಕ್ಕೂ ಸುಸ್ತಾಯಿತು. ನೀವು ಆಯ್ಕೆ ಮಾಡಿಕೊಂಡು ಹೆಸರುಗಳೂ ತಕ್ಕುದಾಗಿದೆ. ಮಂದಾರವತಿ(?) ಇದನ್ನು ಎಲ್ಲಿಂದ ಆರಿಸಿದಿರಿ.