Wednesday, March 30, 2016

ತ್ರಿಫಲಾ ಎಂಬ ಅಮೃತಬಿಂದು

ತ್ರಿಫಲಾ : ನೆಲ್ಲಿ ಕಾಯಿ ( ಆಮ್ಲಕ - Embilica Officinalis) , ಅಳಲೇಕಾಯಿ (  ಹರೀತಕ - Terminalia chebula )  ಮತ್ತು ತಾರೇಕಾಯಿ ( ವಿಭೀಡಕ - Terminalia Bellirica)- ಇವುಗಳ ಮಿಶ್ರಣವನ್ನು ತ್ರಿಫಲಾ ಎಂದು ಕರೆಯಲಾಗುತ್ತದೆ. ಚರಕ ಸಂಹಿತೆ ಮತ್ತು ಸುಶ್ರುತ  ಸಂಹಿತೆಯಲ್ಲಿ ಇದರ ಉಲ್ಲೇಖವಿದೆ . ತ್ರಿಫಲಾ ಚೂರ್ಣವನ್ನು  'ಜೀವನದ ಅಮೃತ' ಎಂದೇ ಬಣ್ಣಿಸಲಾಗುತ್ತದೆ. ಇದು ನಿಜಕ್ಕೂ ಜೀವ ಚೈತನ್ಯ ತಂದುಕೊಡುವ ಅಮೃತ ವರ್ಷಿಣಿಯೇ. ನೆಲ್ಲಿಕಾಯಿಯನ್ನು ವೈದ್ಯ ಗ್ರಂಥಗಳಲ್ಲಿ "ಜಗದ್ದಾತ್ರೀ, ತ್ರಿದೋಷ ಶಮನೀ, ವೃಷ್ಯಾ ವಯಃ ಸ್ಥಾಪಿನಿ" ಎಂದು ಕೊಂಡಾಡಿದ್ದಾರೆ . ಅಳಲೇ ಕಾಯನ್ನು "ಅಭಯಾ" ಎಂದು ಕರೆದಿದ್ದಾರೆ. ಇದೊಂದು ಸರ್ವೋತ್ತಮ ರಸಾಯನವಾಗಿದೆ.

ಅದೃಷ್ಟ ವಶಾತ್  ಈಗ ನಮ್ಮ ಧರ್ಮಗುರುಗಳ ಕೃಪೆಯಿಂದ ಆಯುರ್ವೇದದ ಪುನರುತ್ಥಾನವಾಗಿ ಜನಸಾಮಾನ್ಯರಿಗೆ ಇಂತಹ ಅಮೃತೋಪಮವಾದ ಗಿಡಮೂಲಿಕೆಗಳು ಸುಲಭವಾಗಿ ಜನಸಾಮಾನ್ಯರಿಗೆ ದೊರೆಯುವಂತೆ ಆಗಿವೆ. ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಆಗಲಿ, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ "ಶ್ರೀ ಶ್ರೀ ಆಯುರ್ವೇದ"ದಿಂದಾಗಲಿ ಇಂತಹ ಅಮೃತ ಸಮಾನ ಆಯುರ್ವೇದ ಉತ್ಪನ್ನಗಳು ಜನಮಾನಸದಲ್ಲಿ ಉಳಿಯುವ ಹಾಗೆ ಆಗಿದೆ.