Sunday, March 25, 2012

ವಸಂತೋತ್ಸವ




ವಸಂತ ಬಂದ ಋತುಗಳ ರಾಜಾ ತಾ ಬಂದ! ವಸಂತನ ಆಗಮನ ಎಲ್ಲರಲ್ಲೂ ಸಂತಸ ಮೂಡಿಸಿದೆ. ಉತ್ಸವ ಪ್ರೀಯರಾದ ಭಾರತೀಯರು ವಸಂತ ಋತುವಿಗೆ ಸಂಬಂಧಿಸಿದಂತೆ ಆಚರಿಸುವ ಹತ್ತು ಹಲವು ಪರ್ವಗಳಲ್ಲಿ ಕೆಲವು ಸ್ವಾರಸ್ಯಕರ ಉತ್ಸವಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಕಾಮಸೂತ್ರ, ಶೃಂಗಾರ ಪ್ರಕಾಶ, ಸರಸ್ವತಿ ಕಂಠಾಭರಣ, ಸಾಹಿತ್ಯ ಮೀಮಾಂಸ, ಭಾವ ಪ್ರಕಾಶನ ಮತ್ತು ಚತುರ್ವರ್ಗ ಚಿಂತಾಮಣಿ ಮುಂತಾದ ಕೃತಿಗಳಲ್ಲಿ ಈ ಹಬ್ಬಗಳ ವಿವರಣೆ ಇದೆ. ಕೆಲ ವಸಂತೋತ್ಸವಗಳಲ್ಲಿ : ಮದನೋತ್ಸವ - ತಿಂಗಳ ಕಾಲ ಪ್ರೇಮ, ಕಲೆ ಮತ್ತು ಪ್ರಕೃತಿ ಉಪಾಸನೆಯು ಪ್ರಮುಖವಾದ ಉತ್ಸವ. ಅಷ್ಠಮಿ ಚಂದ್ರ - ಚಂದ್ರಕಾಂತಿಯಲ್ಲಿ ಸ್ನೇಹಕೂಟ ಏರ್ಪಡುವ ಹಬ್ಬ. ಬಕುಳಾಶೋಕವಿಹೃತಿ - ಬಕುಳ ಮತ್ತು ಅಶೋಕ ಪುಷ್ಪಗಳನ್ನು ಬಿಡಿಸಿ, ಮಾಲೆಗಳಾಗಿ ಹೆಣೆದು, ದೇವತೆಗಳು ಮತ್ತು ಇನಿಯರು ಸಿಂಗರಿಸಿ ಕೊಂಡು ಸಂಭ್ರಮಿಸುವ ಪರ್ವ. ಶಾಲ್ಮಲೀ ಮೂಲ ಖೇಲನಂ -- ವಶಾಲವಾದ ಶಾಲ್ಮಲೀ ವೃಕ್ಷದ ಕೆಳಗೆ ಆಟವಾಡುವ ಹಬ್ಬ, ಅಶೋಕಾಷ್ಠಮಿ - ಅಶೋಕ ವೃಕ್ಷಕ್ಕೆ ಪೂಜಿಸುವ ಪರ್ವ , ಆಂದೋಲನ ಚತುರ್ಥಿ - ಡೋಲೋತ್ಸವ, ಉಯ್ಯಾಲೆ ಹಬ್ಬ. ಭೂತ ಮಾತೃಕ - ವೇಷಭೂಷಣ ಉತ್ಸವ. ಸುವಸಂತಕ - ಇನಿಯರ ಮೇಲೆ ಪುಷ್ಪ ಮತ್ತು ಓಕುಳಿ ಎರಚಿ ಸಂತಸ ಪಡುವ ಹಬ್ಬ.

ಗ್ರಂಥಋಣ: ಶತಾವಧಾನಿ ಡಾ|| ರಾ.ಗಣೇಶ್