Thursday, August 30, 2012

ಆನಂದಂ ಬ್ರಹ್ಮ




ಸಕಲ ಜೀವ ರಾಶಿಗಳು ಅನುಗಾಲ ಆರಿಸುವುದು ಆನಂದವನ್ನೇ. ನಮ್ಮ ಬಹುತೇಕ ಎಲ್ಲ ಚಟುವಟಿಕೆಗಳು ಸುಖ ಸಂಪಾದನೆಯ ಸುತ್ತ ಮುತ್ತಲೇ ಇರುತ್ತವೆ. ಎಲ್ಲವನ್ನು ಬಿಟ್ಟು ಸರ್ವಸಂಘ ಪರ್ತ್ಯಾಗಿ ಆಗಬಯಸುವ ಸನ್ಯಾಸಿಯೂ ಸಹ ಸರ್ವ ತ್ಯಾಗದಿಂದ ತನಗೆ ಸಂತೋಷ ನೆಮ್ಮದಿಗಳು ದೊರೆಯುವುದರಿಂದಲೇ ತ್ಯಾಗಾಸಕ್ತನಾಗುವುದು. ಸುಖ ಒಂದೇ ಜೀವನದ ಮೌಲಯ ಎಂದು ಪರಿಗಣಿಸಿ ಅತಿಯಾದ ವಿಷಯಾಸಕ್ತಿಯಲ್ಲಿ ತೊಡಗಿದರೆ ಅದನ್ನು 'ಹೆಡೋನಿಸಂ' (Hedonism) ಎಂದು ಕರೆಸಿಕೊಂಡರೆ, ಧರ್ಮ ವಿರುದ್ಧವಲ್ಲದ ಸರ್ವಭೂತ ಹಿತೋರಥದ ಸಂತೋಷ- ಸುಖದ ಅರಸಿವಿಕೆ ಹಂತ ಹಂತವಾಗಿ ಬ್ರಹ್ಮಾನಂದ ವನ್ನು ಸಹ ದೊರಕಿಸಿ ಕೊಡುತ್ತದೆ. ನಾ ನಾ ವಿಧವಾದ ಆನಂದ ಮೀಮಾಂಸೆ ಸನಾತನ ಧರ್ಮದಲ್ಲಿ ಇದ್ದು ಆನಂದವನ್ನು ಬ್ರಹ್ಮ ವಸ್ತುವಿಗೆ ಹೋಲಿಸಿದ್ದಾರೆ ನಮ್ಮ ಸನಾತನರು. ಪ್ರಚಲಿತ ಮನೋವಿಜ್ಞಾನಿ ಗಳಲ್ಲಿ ಮಾರ್ಟಿನ್ ಸಲಿಗ್ಮನ್ (Martin Seligman) ಅವರು ಆನಂದದ ಮೂಲವನ್ನು ಹುಡುಕಲು ಹೊರಟು 'PERMA' ಎಂಬ ಪಂಚಾಕ್ಷರ ಸೂತ್ರವನ್ನು ಪ್ರತಿಪಾದಿಸಿದರು. ಈ ಐದು ಬಗೆಯ ಸುಖಪ್ರದ ಸಾಧನಗಳಲ್ಲಿ "ವಸ್ತು ಜನ್ಯ ಸುಖ" - Pleasure ಮೊದಲನೆಯದು. ಈ ವಸ್ತು ಜನ್ಯ ಸುಖ, ಪಂಚೆದ್ರಿಯಗಳಿಗೆ ಮುದದಿಂದ ಉಂಟಾಗುತ್ತದೆ. ಇಂಪಾದ ಗಾನ ಲಾಲಿಸುವುದಾಗಲಿ, ಘಮ ಘಮಿಸುವ ಸುಗಂಧ ದ್ರವ್ಯದ ಸುವಾಸನೆಯಾಗಲಿ , ಸುಗ್ರಾಸ ಭೋಜನದಿಂದಾಗಲಿ , ಇವೆ ಮೊದಲಾದ ವಸ್ತುಜನ್ಯ ಸಂತೋಷವು ಇಲ್ಲಿ ಸೇರಿಕೊಳ್ಳುತ್ತವೆ. "ವ್ಯವಸ್ಥಿತಿ" - Enagagement ಇಂದ ದೊರೆಯುವ ಸಂತಸ ಎರಡನೆಯ ಸ್ತರದ್ದಾಗಿರುತ್ತದೆ. ನಾವು ಮಾಡುವ ಕೆಲಸದಲ್ಲಿ ಶ್ರದ್ದೆ, ಉತ್ಸಾಹವಿದ್ದು, ಕಾರ್ಯ ತತ್ಪರತೆ ಇಂದ ದೊರೆಯುವ ಸಂತಸ ಇದಾಗಿರುತ್ತದೆ. ಸಂಪೂರ್ಣವಾಗಿ ಮಗ್ನವಾಗಿ ತನು, ಮನ , ಆತ್ಮಗಳನ್ನು ಒಂದು ಮಾಡಿ ಸಂಪೂರ್ಣವಾಗಿ ತೊಡಗಿಸಿ ಕೊಂದ ಮಾಡಿದ ಕೆಲಸದ ಸಂತಸವೇ ಸಂತಸ. ಸರ್ ಎಂ. ವಿಶ್ವೇಶ್ವರಯ್ಯ ನವರು ಹೇಳುತ್ತಿದ್ದಂತೆ " ಕಸ ಗುಡಿಸುವುದು ನಮ್ಮ ಕೆಲಸವಾದರೆ, ನಾವು ಗುಡಿಸಿದ ರಸ್ತೆ ಜಗತ್ತಿನಲ್ಲೇ ಅತ್ಯಂತ ಸ್ವಚ್ಛ ವಾಗಿರುವ ರಸ್ತೆಯಾಗ ಬೇಕು -- ಹಾಗಿರಬೇಕು ನಮ್ಮ ಕಾರ್ಯ ಶ್ರದ್ದೆ. Relationship - "ಸಂಬಂಧ-ಬಾಂಧವ್ಯ" ಗಳಿಂದ ಪ್ರಾಪ್ತಿಯಾಗುವ ಸಂತೋಷ ಮೂರನೆಯದು. ಮಾನವ ಸಮಾಜ ಜೀವಿ. ಯಾರಿಗೆ ಒಳ್ಳೆಯ ಒಡನಾಟ ದೊರೆಯುವುದೋ ಅವರೇ ಪುಣ್ಯವಂತರು. ಸಲಿಗ್ಮನ್ ಗುರುತಿಸುವ ನಾಲ್ಕನೇ ಪಂಕ್ತಿಯ ಸಂತಸ ವೆಂದರೆ "ಅರ್ಥ ಗ್ರಹಣ" - Meaning . ಜೀವನದಲ್ಲಿ ಎಲ್ಲವೂ ಇದ್ದರೂ "ಏನೋ" ಹೇಳಿಕೊಳ್ಳಲಾರದ ತಾಕಲಾಟ. ಉತ್ತರಗಳಿಲ್ಲ ಪ್ರಶ್ನೆಗಳು ಎಲ್ಲರನ್ನು ಒಮ್ಮೆಯಾದರೂ ಕಾದಿರುವುದು ಸಹಜವೇ. ಈ ಮಾಯಮಯವಾದ ಪ್ರಪಂಚದ ಅರ್ಥ ಗ್ರಹಣವೆ ಒಂದು ಸಂತಸ. ಸಂತಸದ ಐದನೆಯ ಮೂಲವೆಂದರೆ Achievement - "ಸಾಧನೆಯ ಸಂತೃಪ್ತಿ". ಎಷ್ಟೇ ಉಟ್ಟರು ಉಂಡರೂ, ಸಂಸಾರದಲ್ಲಿ ಸಾಮರಸ್ಯ ಇದ್ದರೂ, ಸಾಧನೆಯ ಗಂಧ ವಿರದಿದ್ದರೆ ಜೀವನ ನೀರಸವೇ ಸರಿ.