Saturday, October 20, 2007

ಕೊಡೆಸೇವೆ

ಇಲ್ಲಿ ಒಬ್ಬ ಐನಾತಿಗೆ ನನ್ನ ತಲೆ ಮೇಲೆ ಕೊಡೆನಲ್ಲಿ 'ಟುಪುಕ್! ಟುಪುಕ್!' ಅಂತ ಮೊಟುಕೊ ವಿಚಿತ್ರ ಹವ್ಯಾಸ ಇದೆ. ಇಂದಿಗೆ ಸರಿಯಾಗಿ ಐದು ವರ್ಷ ಆಯಿತು ಅವನು ನನಗೆ ಕೊಡೆಸೇವೆ ಮಾಡೊಕ್ಕೆ ಶುರುಮಾಡಿ. ಮೊದಮೊದಲು ನನಗೆ ಇದನ್ನು ಸಹಿಸೋ ಸಹನೆ ಇರ್ಲಿಲ್ಲ, ಈಗ ಒಗ್ಗಿ ಹೋಗಿದ್ದೇನೆ.ಇವನ ಹೆಸರು ಗೊತ್ತಿಲ್ಲ ನನಗೆ. ಸಾಧಾರಣ ಮೈ ಕಟ್ಟು. ಗೋಧಿ ಮೈ ಬಣ್ಣ. ಬೂದು ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟು ಧರಿಸಿರುತ್ತಾನೆ ('ಮಾನಸಿಕವಾಗಿ ಅಸ್ವಸ್ತರು', ಎಂತ ಸೇರ್ಸಿದ್ದಿದ್ರೆ, ಆಕಾಶವಾಣಿ 'ಕಾಣೆಯಾದವರ ಬಗ್ಗೆ ಪ್ರಕಟಣೆ' ಪೂರ್ಣವಾಗುತಿತ್ತು). ಆ ದಿನ ನಾನು ಕಬ್ಬನ್ ಪಾರ್ಕ್ನಲ್ಲಿ, ಕಲ್ಲು ಬೆಂಚ್ ಮೇಲೆ ಕೂತು ಪೇಪರ್ ಓದುತಾ ಇದ್ದೆ. ಏನೋ ಮೆಲ್ಲಗೆ ನೆತ್ತಿಯನ್ನು ತಾಕಿದ ಹಾಗೆ ಆಯಿತು. ಕಣ್ಣನ್ನು ಮೇಲಕ್ಕೆತ್ತಿ ನೋಡಿದರೆ, ಈ ಮನುಷ್ಯ ಯಾಂತ್ರಿಕವಾಗಿ, ಅಸಂಗತವಾಗಿ ನನ್ನ ತಲೆಗೆ ತನ್ನ ಕಪ್ಪು ಕೊಡೆಯನ್ನು ತಾಕಿಸುತ್ತಿದ್ದಾನೆ.ನನಗೆ ಹೇಗೆ ವರ್ತಿಸಬೇಕು ಅನ್ನೋದು ತಿಳಿಯಲಿಲ್ಲ. ನೊಡಿದವರು ಏನೆಂದು ಕೊಂಡಾರು ಅನ್ನುವ ಅವಮಾನದಲ್ಲಿ ಹಿಂದೆ ತಿರುಗಿ ಒಮ್ಮೆ ನೆಟ್ಟ ನೋಟದಲ್ಲಿ ಅವನನ್ನು ನೋಡಿದೆ. 'ಏನಯ್ಯ, ನಿನಗೆ ಹುಚ್ಚೆ?' ಎಂದು ದಬಾಯಿಸಿದೆ. ಆತ ನನ್ನ ಮಾತಿಗೆ ಕಿವಿಗೊಡಲೇ ಇಲ್ಲ. ತನ್ನಪಾಡಿಗೆ ತಾನು ಕೆಲಸವನ್ನು ಮಾಡ್ತಾ ಇದ್ದ. ಶಾಂತಚಿತ್ತನಾಗಿ, ಮೌನವಾಗಿ ನನ್ನ ತಲೆ ಮೇಲೆ ಅವನ ಶ್ರೀರಕ್ಷೆ ಕೊಡುತ್ತಲೇ ಹೋದ. ರೇಗಿದವನೇ ನಾನು ದಪೇದಾರನ್ನನ್ನು ಕರೆಯುತ್ತೇನೆ ಎಂದು ಧಮಕಾಯಿಸಿದೆ. ಊಂ .. ಹೂಂ.... ಪ್ರಜೆ ಜಗ್ಗಲಿಲ್ಲ. ಎರಡು ನಿಮಿಷ ಅವ್ಯವಸ್ತೆ ತಾಳಲಾರದೆ ಸಹಿಸಿಕೊಂಡು, ಬಲವೆಲ್ಲ ಹಾಕಿ ಅವನ ಕಪ್ಪಾಳಮೋಕ್ಷ ಮಾಡಿದೆ. ಪಾಪ, ಅಲ್ಲೆ ನೆಲಕ್ಕೆ ಉರುಳಿ, ಮೂಗಿನಲ್ಲಿ ರಕ್ತ ಸೋರಿಸಿಕೊಂಡು ನರಳಾಡುತ್ತಿದ್ದ. ಅಯ್ಯೊ ಪಾಪ ಅನಿಸಿತು ನನಗೆ. ಸ್ವಲ್ಪ ಚೇತರಿಸಿಕೊಂಡು - ತಡವರಿಸಿಕೊಂಡು, ಮೇಲೆ ಎದ್ದು ಒಂದು ಮಾತೂ ಆಡದೆ, ಮತ್ತೆ ತನ್ನ ಕೈಂಕರ್ಯ ಆರಂಭಿಸಿದ. ಅವನು ನನಗೆ ಪೆಟ್ಟು ಆಗುವ ರೀತಿ ಹಲ್ಲೆ ನಡೆಸುತ್ತಿರಲಿಲ್ಲ, ಆದರೆ ಅತೀವ ಅಸಹನೀಯವಾಗಿ, ಏಕತಾನದಲ್ಲಿ ಮತ್ತೆ ಮತ್ತೆ ಮೆಲ್ಲ ಮೆಲ್ಲಗೆ ಸೋಕಿಸುತ್ತಿದ್ದ. ನೋಣ ಒಂದೇ ಜಾಗದಲ್ಲಿ ಬಂದು ಬಂದು ಕೂತು ಚೇಡಿಸೊ ಹಾಗೆ.ಯಾಕೋ ಬೆಳಗ್ಗೆ ಏಡಮಗ್ಗಲಲ್ಲಿ ಏದ್ದಿರ್ಬೇಕು, ಅದಕ್ಕೆ ಹುಚ್ಚನ ಸಹವಾಸ ಆಯಿತು ಅಂತ ತಿಳಿದು, ಅಲ್ಲಿಂದ ಪರಾರಿ ಆಗಲು ಕಾಲಿಗೆ ಬುದ್ಧಿ ಹೇಳಿದೆ. ಕಷ್ಟಪಟ್ಟು ಒಡೋದಕ್ಕೆ ಪ್ರಯತ್ನಿಸಿ, ಮೇಲುಸಿರು ಬಿಡುತ್ತಿದ್ದ.ಅವನ ಮುಖದಲ್ಲಿ ಯಾವುದೂ ಭಾವನಯೇ ಇಲ್ಲದೆ, ನನ್ನನ್ನು ಹಿಂಬಾಲಿಸಿ ಮತ್ತೆ ಕಾರ್ಯನಿರತನಾದ.

ಪೋಲಿಸ್ ಠಾಣೆಗೆ ಕರೆದೊಯ್ಯೊಣ ಅಂದರೆ, ಅಲ್ಲಿ ಇಂತಹ ಹಾಸ್ಯಾಸ್ಪದ ದೂರು ಸಲ್ಲಿಸಿದರೆ ನಕ್ಕುಬಿಟ್ಟಾರು ಎಂದು ಮನೆಯ ಕಡೆ ಹೋಗಲು ಧಾವಿಸಿದೆ. ಕಣ್ಣಿಗೆ ಕಂಡ ಪುಷ್ಪಕ್ ಬಸ್ ಹಿಡಿದು ಸುಭಾಷನಗರ ಕಡೆ ದಾರಿಹಿಡಿದೆ.ನಕ್ಷತ್ರಿಕನ ಹಾಗೆ ಈ ಆಸಾಮಿ ಅದೆ ಬಸ್ಸು ಹಿಡಿದು, ನಾನು ಕುಳಿತ ಸೀಟಿನ ಪಕ್ಕದಲ್ಲೆ ನಿಂತು ತನ್ನ ಕೆಲಸ ಮುಂದುವರಿಸಿದ. 'ಟುಪುಕ್! ಟುಪುಕ್!' ಪ್ರಯಾಣಿಕರು ಮುಖ ಮುಖ ನೊಡಿಕೊಂಡು ನಕ್ಕರು. ಸ್ವಲ್ಪ ಸಮಯದಲ್ಲಿ ನಗುವಿನ ಅಲೆಗಲು ಭುಗಿಲೆದ್ದವು.ನಾನು ನಾಚಿಕೆ, ಹೇಳಿಕೊಳ್ಳಲಾರದ ಅವಮಾನದಲ್ಲಿ ಬೆಂದುಹೋದೆ.ನಾನು ಬಸ್ಸಿನಿಂದ ಇಳಿದೆ (ಅರ್ಥಾತ್.. ನಾವು ಇಳಿದೆವು). ರಸ್ತೆನಲ್ಲಿ ಜನ ನಮ್ಮನ್ನು ನೊಡಿ ಕೇಕೆ ಹಾಕತೊಡಗಿದರು. ನಾನು ಅವರನ್ನು ಕಂಡು 'ಯಾಕ್ರಯ್ಯ, ಇಲ್ಲಿ ಕೋತಿ ಕುಣಿತಾ ಇದ್ಯಾ? ನೀವುಗಳು ಯಾರೂ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಕೊಡೆ ಸೇವೆ ಮಾಡೊದನ್ನ ನೋಡಿಲ್ವ?' ಅಂತ ಅರಚಿದೆ.ಹಾಳು ನಕ್ಷತ್ರಿಕ ನಮ್ಮ ಮನೆಗೆ ಸಹ ಬಂದು ನಿಂತ. ನಾನು ಎಲ್ಲಿ ಹೋದ್ರೆ ಅಲ್ಲಿಗೆ ಬರ್ತಾನೆ ಈ ಛತ್ರಿಪತಿ.ನನ್ನ ನೆರಳಿನ ಹಾಗೆ ಹಿಂಬಾಲಿಸೊ ಛಾಯಾಪತಿ. ನಾನು ಎಲ್ಲಿ ಬಂದ್ರೆ ಅಲ್ಲಿ ಬರ್ತಾನೆ. ಕಡೇ ಪಕ್ಷ ಕನಕದಾಸರ ಸಹಪಾಠಿ ಕದಳೀಫಲ ತಿಂದ ಕಡೆಗೆ ನಾನು ಹೋದ್ರೆ ಅಲ್ಲಿ ಆದ್ರೂ ನಿರಾಳ್ವಾಗಿ ಕೆಲಸ ಮಾಡೋಕ್ಕೆ ಬಿಡ್ತಾನ ಈತ? ಊಂ ಹೂಂ..ಇಲ್ಲವೇ ಇಲ್ಲ... ಅ'ಲ್ಲೂ' ಬಂದು ವಕ್ರಸ್ತಾನೆ, ಕುಕ್ರಸ್ತಾನೆ. ಮೊದಲಿಗೆ ಸ್ವಲ್ಪ ದಿನ ನಿದ್ದೆ ಕೆಡ್ತ ಇದ್ದೆ, ಈ ಟಚ್-ಟಚ್ ಸೇವೆ ಇಂದ. ಈ ನಡುವೆ, ಇದು ಒಳ್ಳೆ ತಟ್ಟಿ-ತಟ್ಟಿ ಆಗ್ಬಿಟ್ಟಿದೆ. ನನ್ನ ತಾಯಿ ಜೊಗುಳ ಹಾಡಿ ನನ್ನನ್ನು ಮಲಗಿಸುವ ಹಾಗೆ ಅನ್ನಿ. ಅವನನ್ನ ರೇಗಿಸಿ, ಮುದ್ದು ಮಾಡಿ, ಅಂಗಲಾಚಿ ಬೇಡಿ ಕೊಂಡು, ಅಯ್ಯೋ - ದಮ್ಮಯ್ಯ ಅಂದು, ಸಾಮ - ದಾನ - ದಂಡ - ಬೇಧ -- ಹೀಗೆ ಎಲ್ಲ ಉಪಾಯ ಹಾಕಿಕೊಂಡು ಕೇಳಿದ್ರು ಸುತರಾಂ ಹೀಗೆ ಯಾಕೆ ಮಾಡ್ಥಾನೆ ಅಂತ ಹೇಳೊಲ್ಲ. ಬೊಧಿವೃಕ್ಷದ ಕೆಳಗೆ ಕೂತ ಬುದ್ಧನ ಹಾಗೆ ಮುಖ ಮಾಡ್ತಾನೆ ಮೂರ್ಖ. ಸ್ಥಿತಪ್ರಗ್ನನ ಹಾಗೆ. ಎಷ್ಟೋ ಸಾರಿ ಪಿತ್ತ ನೆತ್ತಿಗೇರಿ ಕೈಗೆ ಸಿಕ್ಕಿದ್ರಲ್ಲಿ -- ಬೇಳ್ಟು , ಚೈನು, ಚಾವ್ಟಿ , ಕೊಡೆ (ಅವನ ಕೊಡೆ ಅಲ್ಲ, ನನ್ನ ಹೆಂಡತಿದು; ಫ್ಲೋರಲ್ ಪ್ಯಾಟ್ರನ್ನು ಇರೋದು) ಏಟು ಹಾಕಿದೀನಿ. ಆದ್ರು ಇವೆಲ್ಲ ಆಕ್ಯುಪೇಶನಲ್ ಹಾಜರ್ಡ್ ಅನ್ನೊ ಹಾಗೆ ಲೇಬರ್ ಮಾಡ್ತಾನೆ ಪುನ್ಯಾತ್ಮ ! ಒಂದು ದಿನ ತುಪಾಕಿ ತೆಗೆದು ಹರಹರ ಅನ್ಸೋಣ ಅನ್ಕೊಂಡೆ.ಆದ್ರೆ ಇವನು ಬೇತಾಳವಾಗಿ ಬಂದು ನನ್ನ ಕಾಡೋದ್ರಲ್ಲಿ ಸಂಶಯ ಇಲ್ಲ.

ಆದ್ರೆ ಇತ್ತೀಚೆಗೆ ನನ್ನ ಯೋಚನಾ ಲಹರಿ ಹೀಗೆ ಹರಿಯುತ್ತಿದೆ -- ನಾನು ಕೊಡೆ ಕೈಂಕರ್ಯಕ್ಕೆ ಒಗ್ಗಿ ಹೋಗಿದೀನಿ. ಬಹುಶಃ ಇವನು ಹೀಗೆ ಕೊಡೆ ಸೇವೆ ಮಾಡದೆ ಹೋದ್ರೆ, ನನಗೆ ಹುಚ್ಚೆ ಹಿಡಿಯುವುದೇನೋ. ಏಕತಾನದಲ್ಲಿ ನನ್ನ ತಲೆ ಮೇಲೆ ಏನೂ ಸ್ಪರ್ಶಿಸದಿದ್ದರೆ ನನ್ನ ತಲೆ ಒಳಗಿನಿಂದ ಸೀಳುವುದೋ ಏನೂ? ಒಂದು ವೇಳೆ ಈತ ಸತ್ತು ಹೋದರೆ ಏನು ಗತಿ? ಸುಮ್ಸುಮ್ನೆ ಆರಂಭಗೊಂಡಿದ್ದು ಈಗ ನನಗೆ ಅನಿವಾರ್ಯತೆ ಆಗಿದೆ.ಇವನು 'ಗೊಟಕ್' ಅಂದ ಮೇಲೆ ನನಗೆ 'ಟುಪುಕ್' ಆನೋವ್ರು ಯಾರದ್ರು ಬೇಕೆ ಬೇಕು. ಶಿಫ್ಟ್ ಸಿಸ್ಟಂನಲ್ಲಿ ಯಾರದ್ರು ಪಾರ್ಟ್ ಟೈಂ ಕೊಡೆಸೇವೆ ಮಾಡೋವ್ರು ಸಿಕ್ಕಿದ್ರೆ ನನಗೆ ತಿಳಿಸಿ, ಪ್ಲೀಸ್.

'''''

ಮತ್ತೊಂದು ರೂಪಾಂತರದ ಪ್ರಯತ್ನ.

Credits and Courtesy:

Based on a short story,

'There's a Man in the Habit of Hitting Me on the Head with an Umbrella'

by Argentine author, Fernando Sorrentino.

Translated to English by: Clark M. Zlotchew.
Translated and adapted to Kannada by : yours truly, Srikanth Venkatesh.

The characters and certain scenarios have been Indianised to induce contextual humour. The Plot and theme, however are based on the original work.

'''''''''''''''''''''''''''''''''''''''''

No comments: