Monday, November 29, 2010

ರಾಮಾಯಣದಲ್ಲಿ ರಾಜನೀತಿ

ಶ್ರೀ ರಾಮಚಂದ್ರನು ರಾಮಾಯಣದ ಅಯೋಧ್ಯಾಕಾಂಡದಲ್ಲಿ ಭರತನಿಗೆ ಉಪದೇಶಿಸುತ್ತಾ ಹದಿನಾಲ್ಕು ರಾಜದೋಶಗಳ ಬಗ್ಗೆ ಹೀಗೆಂದಿದ್ದಾನೆ:

ನಾಸ್ತಿಕ್ಯಮನೃತಂ ಕ್ರೋಧಂ ಪ್ರಮಾದಂ ದೀರ್ಘಸೂತ್ರತಾಂ|
ಅದರ್ಶನಂ ಙ್ನಾನವತಾಮಾಲಸ್ಯಂ ಪಂಚವೃತ್ತಿತಾಂ||
ಏಕಚಿತನಮಥಾರ್ನಾಮನರ್ಥಙ್ನೈಶ್ಚ ಮಂತ್ರಣಂ|
ನಿಸ್ಚಿತಾನಾಮನಾರಂಭಂ ಮಂತ್ರಸ್ಯಾಪರಿರಕ್ಷಣಂ||
ಮಂಗಲಸ್ಯಾಪ್ರಯೋಗಂ ಚ ಪ್ರತ್ಯುತ್ಥಾನಂ ಚ ಸರ್ವತ:|
ಕಚ್ಚಿತ್ತ್ವಂ ವರ್ಜಯಸ್ಯೇತಾನ್ ರಾಜದೋಷಾಂಶ್ಚತುರ್ದಶ ||
ರಾಮಾಯಣ, ಅಯೋಧ್ಯಾ ೧೦೦ - ೬೫,೬೬,೬೭

ನಾಸ್ತಿಕತೆ, ಸುಳ್ಳು, ಸಿಟ್ಟು, ಅನವಧಾನ, ನಿಧಾನವಾಗಿ ತಡೆದು ಕೆಲಸ ಮಾಡುವುದು, ಪ್ರಾಙ್ನರಾದ ಸಜ್ಜನರೊಡನೆ ಸೇರದಿರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯಚಾಪಲ್ಯದಲ್ಲಿ ಮುಳುಗುವುದು, ಯಾರೊಡನೆಯೂ ಸಮಾಲೋಚನೆ ನಡೆಸದೆ ಏಕಪಕ್ಷೀಯವಾದ ನಿರ್ಧಾರ, ಅನುಭವವಿಲ್ಲದವರೊಡನೆ ಮಂತ್ರಾಲೋಚನೆ, ನಿಶ್ಚಯಿಸಿದ ಕಾರ್ಯವನ್ನು ಆರಂಭಿಸದಿರುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿ ಉಳಿಸಿಕೊಳ್ಳದಿರುವುದು, ಮಂಗಳಕರ ಶುಭಕಾರ್ಯವನ್ನು ಮಾಡದಿರುವುದು, ಎಲ್ಲ ಶತೃಗಳ ಮೇಲೂ ಏಕಕಾಲಕ್ಕೆ ಯುದ್ಧಾರಂಭ -- ಈ ಹದಿನಾಲ್ಕು ದೋಷಗಳಿಗೆ ಅವಕಾಶ ಕೊಡಬೇಡವೆಂದು ಭರತನಿಗೆ ಉಪದೇಶಿಸಿದನು.

ಶ್ರೀರಾಮನ ಹೆಸರು ಹೇಳಿಕೊಂಡು ಅಧಿಕಾರಗಿಟ್ಟಿಸಿದ ಇಂದಿನ ಕಿಶ್ಕಿಂದಾ ಪ್ರದೇಶದ ಸರ್ಕಾರ, ರಾಮ ಭರತನಿಗೆ ಮಾಡಬೇಡ ಎಂದು ಆದೇಶಿದ ಎಲ್ಲ ೧೪ ರಾಜದೋಷಗಳನ್ನೂ ಚಾಚೂ ತಪ್ಪದೆ ಮಾಡಿತೋರಿಸಿದೆ. ರಾಮನೇ ನಾಚುವ ರೀತಿ ಸೃಜನಾತ್ಮಕವಾಗಿ, ರಾಮನೂ ಯೋಚಿಸಿರದ ಹತ್ತು ಹಲವು ಹೊಸ ದೋಷಗಳನ್ನು ಹೊದ್ದು ಮೆರೆದಿದೆ. ಸ್ವಯಂ ಸೇವಕ ಸಂಘ ಅಂದರೆ ನಮ್ಮ "ಸೇವೆ" ಸ್ವಯಂ ನಾವೇ ಮಾಡಿಕೊಳ್ಳುವುದು ಎಂಬಷ್ಟು ಹೀನಾಯ ಸ್ಥಿತಿ ತಲುಪಿರುವುದು ನಿಜಕ್ಕೂ ವಿಶಾದನೀಯ. ಇನ್ನು ಮಂತ್ರಿಮಂಡಲದಲ್ಲಂತೂ ಅರಿಷ್ಡ್ವರ್ಗಂಗಳನು ಗೆದ್ದ ಅತಿರಥ ಮಹಾರಥರೆ ಇದ್ದಾರೆ. ನಾವು ಆರಿಸಿ ಕಳುಹಿಸಿದ ಈ ಜನಪ್ರತಿನಿಧಿಗಳಿಗೆ ಕಾಮ, ಕ್ರೋಧ, ಮದ, ಲೋಭ, ಮೋಹ, ಮತ್ಸರಗಳು ಯಾವವೂ ತಿಳಿಯದು. ಕಾಮವನ್ನು ಗೆದ್ದ ರೇಣುಕಾಚಾರ್ಯ - ಹಾಲಪ್ಪನಂತವರು, ಕ್ರೋಧವನ್ನು ಗೆದ್ದ ಬಚ್ಚೆಗೌಡರು, ಮದವನ್ನು ಗೆದ್ದು - ರಾಜ್ಯಪಾಲರು, ಲೋಕಾಯುಕ್ತರನ್ನು ಒಮ್ಮೆಲೆ ಅತಿಯಾಗಿ ಗೌರವಿಸುವ ಮುಖ್ಯಮಂತ್ರಿಗಳು, ಲೋಭ ಗೆದ್ದ ಶೋಭ, ಮೋಹವೇ ಅರಿಯದ, ಪುತ್ರ ವ್ಯಾಮೋಹ ಅರಿಯದ ಕಟ್ಟಾ ಮತ್ತು ಮುಖ್ಯಮಂತ್ರಿಗಳು, ಮತ್ಸರದ ಕಿಡಿಯೂ ಸುಳಿಯದ ರೆಡ್ಡಿ ಸೋದರರು -- ಇನ್ನೂ ಹೀಗೆ ಹತ್ತು ಹಲವು ತೋಜೋ ಮಣಿಗಳಿಂದ ಕಂಗೊಳಿಸುವ ಕಮಲ ಸಾಂರಾಜ್ಯವನ್ನು ಚುನಾಯಿಸಿ ಕಳುಹಿಸಿದ ನಾವು ಗಳು ಎಷ್ಟು ಧನ್ಯರು ಎಂದು ನೆನೆದರೆ ಹೇಳಿಕೊಳ್ಳಲಾರದ ಹೆಮ್ಮೆ ಎನಿಸುತ್ತದೆ. ಒಂದು ವ್ಯವಸ್ಥೆಯಲ್ಲೇ ವಿಶ್ವಾಸ ಕಳೆದುಕೊಳ್ಳುವಷ್ಟು ಪ್ರಮಾಣದಲ್ಲಿ ಹಗರಣಗಳು ನಡೆದಿವೆ. ರಾಮನ ಪಕ್ಷಕ್ಕೆ ಮತ ಹಾಕಿದ ಮತದಾರನ ಮುಖಭಂಗವಾಗಿದೆ.ಸುತ್ತಲೂ ನಡೆಯುತ್ತಿರುವ ಭ್ರಷ್ಟಾಚಾರದ ಚಕ್ರವ್ಯೂಹದಲ್ಲಿ ಸಿಲುಕಿ ದನಿಗಾಣದೆ ಏಳು ಸುತ್ತಿನ ಕೋಟೆಯಲ್ಲಿ ಅಸಹಾಯಕನಾಗಿ ಶ್ರೀಸಾಮಾನ್ಯ ಅವಿತು ಕುಳಿತಿದ್ದಾನೆ. ಎಂದು ಈ ಸುಪ್ತ ಜ್ವಾಲಾಮುಖಿ ಸಿಡಿದು ನಿಲ್ಲುವುದೂ ಆ ದಿನ ನಾನು - ತಾನು , ರಾಮ - ರಹೀಮ ಯಾರೊಬ್ಬರನೂ ನೋಡದೆ ಎಲ್ಲರನ್ನೂ ಆಹುತಿ ತೆಗೆದು ಕೊಳ್ಳುತ್ತದೆ.

ಸೂ: ನಾನು ಈ ಬ್ಲಾಗ್ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆದಿರುವುದು ಅತ್ಯಂತ ಕಡಿಮೆ. ಆದರೆ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯ"ಮಾನ"ಗಳ ಬಗ್ಗೆ ಬಹುವಾಗಿ ನೊಂದು ರಾಮನ ಹೆಸರು ಹೇಳಿ ಇನ್ನಾದರೂ ಧರ್ಮವನ್ನು ರಕ್ಷಿಸು ಎಂದು ಪ್ರಾಥಿಸಿ ಈ ಸಾಲುಗಳನ್ನು ಇಲ್ಲಿ ಪೋಸ್ಟಿಸಿದೆ.