Friday, August 19, 2011

ಹೇಮಕೂಟದ ಮೇಲೆ


ಹೇಮಕೂಟದ ಮೇಲೆ ಕನ್ನಡದ ಬಾವುಟ
ಹಾರುತಿದೆ ಮಣಿಯದಕೆ ನೆಟ್ಟಿರಲಿ ಶಾಶ್ವತ

ಶ್ರೀವಿಜಯ ನೃಪತುಂಗ ಕನ್ನಡದ ಶತಶೃಂಗ
ಶಿವಮಾರ ದುರ್ವಿನೀತಾದಿಗಂಗ
ಕಂಡು ಕಂಡರಿಸಿದೆ ಕಡಲ ತಡಿದನಕ
ಬಿತ್ತರಂಗೊಂಡಿತೋ ಸಿರಿ ನಾಡಗಡಿಯೆನುತ...೧

ಜೈನ ತೀರ್ಥಂಕರರು ಶೃಂಗಗಿರಿ ಶಂಕರರು
ಕಲ್ಯಾಣದಣ್ಣಗಳು ಶರಣ ಶರಣೆಯರು
ಹರಿದಾಸರೆಲ್ಲರು ಉಸಿರಿತ್ತು ಪೋಷಿಸಿದ
ಹಸಿರುಡೆಯ ಬೆಳೆನಾಡು ಹಸನಾಯಿತೆಂದು .....೨

ಕೆಳದಿ ದ್ವಾರಾವತಿಯು ಕಿತ್ತೂರು ಕೊಡಗು
ಸ್ವಾದಿ ಬೀಜ್ಜಾವರವು ಮಾಗಡಿಯು ಸೋದೆ
ಮಹಿಶ ಹಾಗಲವಾಡಿ ಸುರಪುರವು ಮತ್ತೆ
ವಿಜಯನಗರಕೆ ಶುಭವ ಕೋರುತಿಹುದೆನುವೆ......೩

ಜಯತು ಕನ್ನಡ ನಾಡು ಜಯತು ಮಂಗಲ ಬೀಡು
ಜಯ ಜಯತು ಜಯ ರಾಜರಾಜೇಶ್ವರಿ
ಜಯವು ಕನ್ನಡ ನುಡಿಗೆ ಜಯವು ಕನ್ನಡ ಜನಕೆ
ಜಯ ನಿನಗೆ ಕರುನಾಡ ಬನಶಂಕರಿ
ಜಯ ನಿನಗೆ ಕರುನಾಡ ಬನಶಂಕರಿ