Wednesday, September 14, 2011

ಪರೋಪಕಾರಾರ್ಥಮಿದಂ ಶರೀರಂ




ಮೊನ್ನೆ ಬೆಂಗಳೂರು- ಮೈಸೂರು ಮಾರ್ಗದಲ್ಲಿರುವ ಜಾನಪದ ಲೋಕದಲ್ಲಿ ’ಬಿದಿರಮ್ಮ ದೇವಿ’ಯ ಕುರಿತಾದ ಜಾನಪದ ಗೀತೆಯೊಂದನ್ನು ನೋಡಿ, ’ಹರಿ ಹರಿ ಗೋವಿನ’ ಹಾಡು ನೆನಪಿಗೆ ಬಂತು. ದಿಟವೆ, ಬಿದಿರಾಗಲಿ, ಗೋವಾಗಲಿ, ನದಿ-ತರುಗಳಾಗಲಿ ತಮ್ಮ ಒಂದೊಂದು ಭಾಗವೂ ಅನ್ಯರಿಗೆ ಉಪಯೋಗುವಾಗುವಂತೆ ಜೀವಿಸುತ್ತವೆ. ನರ ಮಾನವನಾದರೋ ಯಾರಿಗೂ ಬಾರದವನಾಗಿ, ಭೂಮಿಗೆ ಭಾರವಾಗಿ ಜೀವಿಸಿ ತೆರಳುತ್ತಾರೆ.

ಪರೋಪಕಾರಾಯ ಫಲಂತಿ ವೃಕ್ಷಾ: ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವ: ಪರೋಪಕಾರಾರ್ಥಮಿದಂ ಶರೀರಂ ||

ಪರೋಪಕಾರಕ್ಕಗಿಯೇ ವೃಕ್ಷಗಳು ಫಲವೀಯುತ್ತವೆ, ನದಿಗಳು ಹರಿಯುತ್ತವೆ, ಹಸುವು ಹಾಲೀಯುತ್ತದೆ. ಪರೋಪಕಾರಕ್ಕಾಗಿ ತಾನೆ ಈ ನಮ್ಮ ಶರೀರ. ಗೋವಿನ ಹಾಡನ್ನು ಒಮ್ಮೆ ನೆನೆದು ಸ್ವಲ್ಪವಾದರೂ ಅನ್ಯರಿಗೆ ನೆರವಾಗಿ ಬದುಕೋಣ.

ನೀನಾರಿಗಾದೆಯೋ ಎಲೆ ಮಾನವಾ
-- ಕವಿ ಎಸ್‌.ಜಿ.ನರಸಿಂಹಾಚಾರ್ಯ

ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು || ಪಲ್ಲವಿ ||

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲ್ಗೆನೆಯ ಕಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು
ಬಂದು ಮನೆಗೆ ನಾನು ಅಮೃತವನೀವೆ
ಅದನುಂಡು ನನಗೆರಡು ಬಗೆವ ಮಾನವ ನೀನು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಯೆ ಹರಿಗೋಲಾದೆ ರಾಯ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ದೇಹ ಶುದ್ಧಿಗೆ ನಾನು ಪಂಚ ಗವ್ಯವನೀವೆ
ವಾಹನಕ್ಕೆ ಆಗುವನು ಎನ್ನ ಮಗನು
ಊಹೆಗಸದಳವಹುದು ನನ್ನ ಉಪಕಾರಗಳು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||