Friday, July 29, 2016

ಸುಭಾಷಿತ ಸಂಗ್ರಹ

ತೃಣಪರ್ಣೋದಕಾಹಾರಾಃ ಸತತಂ ವನವಾಸಿನಃ |
ಜಂಬೂಕಾಖುಮೃಗಾದ್ಯಾಶ್ಚ ತಾಪಸಾಸ್ತೇ ಭವಂತಿ ಕಿಮ್ ||
ಯಾವಾಗಲೂ ಕಾಡಿನಲ್ಲಿರುತ್ತಾ ಹುಲ್ಲು, ಎಲೆ, ನೀರನ್ನು ಸೇವಿಸುತ್ತಾ ಇದ್ದ ಮಾತ್ರಕ್ಕೆ ತಪಸ್ವಿ ಎನ್ನಿಸುವುದಾದರೆ ನರಿ, ಇಲಿ, ಮೃಗ ಮೊದಲಾದುವುಗಳೂ ಸಹ ತಪಸ್ವಿಗಳೆನಿಸಬಹುದಲ್ಲ ?

ಅಪ್ರಾಪ್ತಕಾಲಂ ವಚನಂ ಬೃಹಸ್ಪತಿರಪಿ ಬ್ರುವನ್ |
ಲಭತೇ ಬಹ್ವವಜ್ಞಾನಮಪಮಾನಂ ಚ ಪುಷ್ಕಲಮ್ ||
ಪಂಚತಂತ್ರ, ಮಿತ್ರಭೇದ ೬೭
ಸಮಯಕ್ಕೆ ಸರಿಹೊಂದದ ಮಾತನ್ನು ಬೃಹಸ್ಪತಿ ಬಂದು ಹೇಳಿದರೂ ಸಹ ಅವನ ಮಾತು ಸಹ ತಿರಸ್ಕಾರ ಮತ್ತು ಅಪಮಾನಕ್ಕೊಳಗಾಗುವುದು.

ಅಕ್ಷರಾಣಿ ಪರೀಕ್ಷ್ಯಂತಾಮ್ ಅಂಬರಾಡಂಬರೇಣ ಕಿಂ |
ಶಂಭುರಂಬರ ಹೀನೋಪಿ ಸರ್ವಜ್ಞಃ ಕಿಂ ನ ಕಥ್ಯತೇ ||
ಅಪ್ಪಯ್ಯ ದೀಕ್ಷಿತರು.
ಅಕ್ಷರಗಳನ್ನು(ವಿದ್ಯೆಯನ್ನು) ಪರೀಕ್ಷಿಸಿ ನೋಡಬೇಕು, ವಸ್ತ್ರಗಳ ಆಡಂಬರದಿಂದ ಏನು ಪ್ರಯೋಜನ ? ಶಿವನು ಬಟ್ಟೆ ಇಲ್ಲದ ದಿಗಂಬರ ಎನಿಸಿದ್ದರೂ ಸಹ ಅವನು ಸರ್ವಜ್ಞನಲ್ಲವೆ.

ಯದಧ್ರುವಸ್ಯ ದೇಹಸ್ಯ ಸಾನುಬಂಧಸ್ಯ ದುರ್ಮತಿಃ |
ಧ್ರುವಾಣಿ ಮನ್ಯತೇ ಮೋಹಾದ್ ಗೃಹಕ್ಷೇತ್ರವಸೂನಿ ಚ ||
ಭಾಗವತ, ೩ : ೩೦ : ೩
ವಿವೇಕವಿಲ್ಲದ ಮನುಷ್ಯನು ಶಾಶ್ವತವಲ್ಲದ ಮತ್ತು ಅನೇಕ ಕಷ್ಟಗಳಿಂದ ಕೂಡಿದ ಈ ಶರೀರಕ್ಕೆ ಸಂಬಂಧಿಸಿದ ಮನೆ, ಭೂಮಿ, ಹಣ ಮುಂತಾದ ಸಂಪತ್ತುಗಳನ್ನು ಮೋಹದಿಂದ ಶಾಶ್ವತವೆಂದು ತಿಳಿಯುತ್ತಾನೆ.