Wednesday, May 27, 2009

ಪುರುಷಪ್ರಗತಿಯಂತು ಮಂಕುತಿಮ್ಮ

ಅಸುರರು ಅಮ್ರುತತ್ವವನ್ನು ಅರಸಿ ಬ್ರಹ್ಮಾದಿ ದೇವತೆಗಳಿಂದ ನಾನಾ ವಿಧವಾದ ವರಗಳನ್ನು ಪಡೆದು ಸಾವನ್ನೇ ಗೆಲ್ಲುವ ವ್ಯರ್ಥ ಪ್ರಯತ್ನಕ್ಕಿಳಿದ ಪ್ರಸಂಗಗಳನ್ನು ನಾವು ಭಸ್ಮಾಸುರ,ತಾರಕಾಸುರ, ಹಿರಣ್ಯರ ವೃತ್ತಾಂತದಲ್ಲಿ ಕಂಡಿದ್ದೇವೆ. ಪ್ರಾಚೀನ ಗ್ರೀಕರಲ್ಲಿ ಸಿಸಿಫಸನೆಂಬುವವನು ಛಲ ಕಪಟ ಗಳಿಗೆ ಹೆಸರುವಾಸಿಯಾಗಿದ್ದನು. ನಮ್ಮಲ್ಲಿ ಯಮನಿರುವಂತೆ ಗ್ರೀಕರ ಮೃತ್ಯು ದೇವತೆಯನ್ನೇ ಸೆರೆಹಿಡಿದ್ದಿದ್ದ ಭೂಪ ಇವನು. ಇವನ ಕಪಟದ ಕುಚೇಷ್ಟೆಗಳನ್ನು ತಾಳಲಾರದ ದೇವತೆಗಳು ಇತನಿಗೊಂದು ಶಾಪವನ್ನಿತ್ತರು. ಗಿರಿಯೊಂದರ ಮೇಲೆ ಸಿಸಿಫಸನು ಗೋಲಾಕಾರದ ಬಂಡೆಯೊಂದನು ತಳ್ಳುತ್ತ ಸಾಗಿಸುವುದು. ಬಂಡೆ ಇನ್ನೇನು ಶಿಖರ ಮುಟ್ಟಿತು ಎನ್ನುವಷ್ಟರಲ್ಲಿ ಸರಕ್ಕನೆ ಜಾರಿ ಮತ್ತೆ ಪಾತಾಳ ಸೇರುವುದು. ಸರಿ ಮತ್ತೆ ಪ್ರಾರಂಭವಾಗುವುದು ಸಿಸಿಫಸನು ಬಂಡೆ ಹೊರುವ ಕಾಯಕ. ಹೀಗೆ ಆಚಂದ್ರಾರ್ಕವಾಗಿ ಬಂಡೆ ಹೊರುವ ಕಸ ಅವನ ಪಾಲಾಯಿತು. ಅಂತ್ಯವಿಲ್ಲದೆ,ನಿರರ್ತಕ ಮತ್ತು ವ್ಯರ್ಥವೆನಿಸುವ ಕಾಯಕಕ್ಕೆ ಸಿಸಿಫಸನ ಕಥೆಯು ರೂಪಕ ವಾಯಿತು.

ಕಗ್ಗದಲ್ಲಿ ಗುಂಡಪ್ಪನವರು ಇಂತೆಂದಿದ್ದಾರೆ.

ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು ।
ಉರುಳಿಸಿರಲೊಂದೆರಡು ಮಾರು ಘಾಸಿಯಲಿ ।।
ಸರಿದು ಕೆಳಕದದೆಂತೊ ಜಾರುವುದು ಮರಮರಳಿ ।
ಪುರುಷಪ್ರಗತಿಯಂತು ಮಂಕುತಿಮ್ಮ ।।

ಪ್ರಸ್ತುತ ಬಿಜಾಪುರದ ರವೀಂದ್ರ ಡಿ ನಂದೀಪನ್ನನವರ್ ಎಂಬುವವರು ದಿನಾಲು ಡಿ.ಸಿ. ಕಛೇರಿಯ ಮುಂದೆ ಎಂಟರಿಂದ ಒಂದು ಘಂಟೆ ಮಧ್ಯಾನ್ಹದ ವರೆಗೂ ಹದಿನೈದು ಕೆ.ಜಿ. ತೂಕದ ಕಲ್ಲು ಹೊತ್ತು ನಿಂತಿರುವರಂತೆ. ಇವರ ಅಳಲು ಏನೆಂದರೆ ಭಾರತದಲ್ಲಿ ರಾಷ್ಟ್ರಪತಿ ಮಾದರಿಯ ಪ್ರಜಾಪ್ರಭುತ್ವ ಜಾರಿಗೆ ಬರಬೇಕು. ಅದಕ್ಕಾಗಿ ಸಂವಿಧಾನಕ್ಕೆ ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಈ ಕ್ರಮವಂತೆ. ಅಯ್ಯಾ ! ಆರ್ಥಿಕ ಹಿಂಜರಿತ ಮತ್ತು ಭಯೋತ್ಪಾದನೆಯ ಅಟ್ಟಹಾಸದಲ್ಲಿ ಸರ್ಕಾರವನ್ನು ಮರುಚುನಾವಣೆ ಮಾಡಿ ಗದ್ದುಗೆಗೆ ಏರಿಸಿದ ದೇಶ ಇದು. ಇಂತಹುದರಲ್ಲಿ ನಿಮಗೆ ಯಾಕ ಸಿಸಿಫಸನ ಶೋಕಿ.