Monday, February 16, 2009

ಹೀಗೊಂದು ವೀರಗಲ್ಲು


ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು.ಗಂಡನೊಂದಿಗೆ ಚಿತೆಯೇರಿದ ಹೆಣ್ಣಿನ ಸ್ಮರಣೆಗೆ ನಿಲ್ಲಿಸಿದ ಮಾಸ್ತಿ (ಮಹಾಸತಿ) ಕಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ೩ ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯದಲ್ಲಿ ವಿರಾಜಮಾನನಾದ ದೃಶ್ಯ ಕಂಡುಬರುತ್ತದೆ. ಈ ಸಂಗತಿ ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆಲ ವೀರಗಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಮತ್ತೂ ಕೆಲವದರಲ್ಲಿ ಯಾವ ಕೆತ್ತನೆಯೂ ಇರದೆ ಬರಿದೇ ಕಲ್ಲೊಂದನ್ನು ಸ್ಮಾರಕವಾಗಿ ನೆಟ್ಟು ಅದರ ಮೇಲೊಂದು ಶಿವಲಿಂಗವಿಟ್ಟು ಹೋದ ಪ್ರಸಂಗಗಳು ಇವೆ. ವೀರನ ಸ್ಮರಣೆಯಲ್ಲಿ ಲಿಂಗಕ್ಕೆ ನಿತ್ಯುಪೂಜೆ ಮಾಡಿ ವರುಷಕ್ಕೊಮ್ಮೆ ಸಂತರ್ಪಣೆ ಮಾಡಿ ಕಾಲಕ್ರಮೇಣ ಕಲ್ಲು ಮರೆತುಹೋಗಿ ಲಿಂಗವೊಂದೇ ಉಳಿದು ಅದೇ ಪ್ರಧಾನವಾಗಿ ಅದಕ್ಕೊಂದು ಮಂದಿರವಾಗಿ ಮುನ್ನಡೆದ ಪ್ರಸಂಗಗಳೂ ಇವೆ.


೨೬/೧೧ ಮುಂಬೈ ಯುದ್ಧದಲ್ಲಿ ಹೋರಾಡಿ ವೀರಮರಣ ಹೊಂದಿದ ವೀರ ಸೇನಾನಿ ಮೇಜರ್.ಸಂದೀಪ ಉನ್ನಿಕೃಷ್ಣನ್ ಸ್ಮರಣಾರ್ತವಾಗಿ ನಮ್ಮ ಮನೆಯ(ಇಸ್ರೋ ಬಡಾವಣೆಯಲ್ಲಿ)ಬಳಿ ಕರ್ನಾಟಕ ರಕ್ಷಣಾ ವೇದಿಕೆಯವರ ಸಹಕಾರದಲ್ಲಿ ಕೇವಲ ಒಂದೇ ತಿಂಗಳಿನಲ್ಲಿ ಸ್ಥಾಪಿಸಿರುವ ವೀರಗಲ್ಲು. ವೀರ ಸೇನಾನಿ ಸಂದೀಪನಿಗೆ ಸಂದಂತಹ ಸನ್ಮಾನ, ಅವರ ಪರ್ವ್ರಿವಾರ ವರ್ಗದವರಿಗೆ ಜನಸಮೂಹ ನೀಡಿದಂತ ಭರವಸೆ -- ಸಂದೀಪನ ಹಾಗೆ ಹೋರಾಡಿ ಮಡಿದ ಅದೇಷ್ಟೋ ದಪೇದಾರರು, ಹೆಸರುಳಿಯದೆ ಅಳಿದ ಗಣ್ಯವಾಗಬೇಕಿದ್ದ ನಗಣ್ಯರೀಗೂ ದೊರಕಲಿ.

****