Wednesday, September 24, 2008

ಪ್ರಸ್ತುತ ಪ್ರಪಂಚದಲ್ಲಿ ಪ್ರತಾಪಭಾನು....

ವಾಮದೇವನು ಪಾರ್ವತೀದೇವಿಯನ್ನುದ್ದೇಷಿಸಿ ಹೇಳಿದಂತ ಪ್ರಾಚಿನಗಾಥೆಯೊಂದನ್ನು ಕೇಳಿ.ಪೂರ್ವಕಾಲದಲ್ಲಿ ಧರ್ಮಾತ್ಮನೂ, ಬಲಶಾಲಿಯೂ, ಸುಶೀಲನೂ ಆದ ಸತ್ಯಕೇತನೆಂಬ ರಾಜನಿದ್ದನು. ಆತನಿಗೆ ಪ್ರತಾಪಭಾನು ಮತ್ತು ಅರಿಮರ್ಧನರೆಂಬ ಸುಪುತ್ರರಿದ್ದರು. ಸದ್ಗುಣ ಸಂಪನ್ನರೂ ಧರ್ಮನಿಷ್ಠರೂ ಆದ ಅವರಿಬ್ಬರಲ್ಲಿ ಅಪೂರ್ವವಾದ ಐಕ್ಯಮತವಿದ್ದಿತು. ಅವರಲ್ಲಿ ಎಂದೆಂದಿಗೂ ಕಲಹಾದಿ ಅಹಿತಕರ ಕಲಾಪಗಳು ನಡೆಯುತ್ತಿರಲಿಲ್ಲ. ಇಂತಿರಲು ಸತ್ಯಕೇತನು ಪ್ರತಾಪಭಾನುವಿಗೆ ರಾಜ್ಯವನ್ನೆರೆದು, ವಾನಪ್ರಸ್ತಾಶ್ರಮವನ್ನು ಸ್ವೀಕರಿಸಿ ಘೋರಾರಣ್ಯಗಳನ್ನು ಸೇರಿದನು. ಇತ್ತ ಪ್ರತಾಪಭಾನುವಿಗಾದರೋ ರಾಜನೀತಿಯಲ್ಲಿ ಶುಕ್ರಾಚಾರ್ಯರ ಸರಿ ತೂಗಬಲ್ಲ ಧರ್ಮರುಚಿಯೆಂಬ ಅಮಾತ್ಯನ ಶ್ರೀರಕ್ಷೆಯಿದ್ದಿತು. ಚದುರಂಗಬಲ ಸೇನೆ ಮತ್ತು ಎಡಬಲಗಳಂತೆ, ಅರಿಮರ್ಧನ ಮತ್ತು ಧರ್ಮರುಚಿಯ ಸಹಾಯದಿಂದ ಪ್ರತಾಪಭಾನುವು ಸಪ್ತದ್ವೀಪಗಳನ್ನೂ, ನಭೂತೋ ನಭವಿಷ್ಯತಿಯೆಂಬ ಹಾಗೆ ರಾಜ್ಯಭಾರ ನಿರ್ವಹಿಸಿಕೊಂಡು ಹೋಗುತ್ತಿದ್ದನು. ಪ್ರಜೆಗಳೆಲ್ಲರು ಸತ್ಯಸಂಧರಾಗಿ ಸಂತೃಪ್ತಿಯಿಂದ ಬಾಳ್ವೆ ನಡೆಸಿಕೊಂಡು ಹೋಗುತ್ತಿದ್ದರು.

ಹೀಗಿರಲು ಒಂದಾನೊಂದು ದಿನ ಪ್ರತಾಪಭಾನುವು ಮೃಗಯಾ ನಿಮಿತ್ತ ಅರಣ್ಯಕ್ಕೆ ತೆರೆಳಿದನು. ಅಲ್ಲಿ ಶಾಸ್ತ್ರರೀತ್ಯ ವಧ್ಯಾರ್ಹ ಪ್ರಾಣಿಗಳನ್ನು ಬೇಟೆಯಾಡಿ ಬರುವಷ್ಟರಲ್ಲಿ ಅವನ ಕಣ್ಣಿಗೆ ಒಂದು ಕಾಡುಹಂದಿ ಕಾಣಿಸಿತು. ಧನುರ್ಬಾಣಗಳಿಂದ ಅದನ್ನು ಬೇಟೆಯಾಡಲು ಮುಂದಾದನು. ಅಪ್ರತಿಮ ಯೋಧನಾದ ಅವನಿಗೆ ಯಃಕಶ್ಚಿತ್ ಒಂದು ಕಾಡುಹಂದಿ ವಶವಾಗದೆ ಉಳಿಯಿತು. 'ಎಲಾ, ಕ್ಷುಲ್ಲಕ ಪ್ರಾಣಿಯೇ' ಎಂದು ಪ್ರತಾಪಭಾನುವು ಅದರ ಬೆನ್ನಟ್ಟಿ ಗೊಂಡಾರಣ್ಯದ ಒಳಹೊಕ್ಕನು. ಆ ಜಂತುವಾದರೂ ಬಿಡದೆ ನಿಗೂಢವೂ ಗಾಡಾಂಧಕಾರವೂ ಆದ ಗುಹಾಂತರದಲ್ಲಿ ಹೋಗಿ ಅವಿತು ಕುಳಿತು ಕೊಂಡಿತು. ರಾಜಭಟ್ಟರಿಂದ ದೂರನಾಗಿದ್ದ ರಾಜನಾದರೋ ದಣಿವು ಬಾಯಾರಿಕೆಗಳಿಂದ ಬಳಲಿ ಅಲ್ಲಿಯೇ ಕಾನನದ ಪುಷ್ಪತರುಗಳ ಮಧ್ಯೆ ಪ್ರಜ್ಞಾಹೀನನಾಗಿ ಕುಸಿದು ಬಿದ್ದ.

ಅದೃಷ್ಟವಶಾತ್ ಅಲ್ಲಿಯೇ ಮಾರ್ಗಮಧ್ಯದಲ್ಲಿ ಓರ್ವ ಕುಹನ ಸಂನ್ಯಾಸಿಯ ಆಶ್ರಮವಿದ್ದಿತು. ಈ ಕಪಟ ಸಂನ್ಯಾಸಿಯಾದರೋ ಪೂರ್ವಾಶ್ರಮದಲ್ಲಿ ಪ್ರತಾಪಭಾನುವಿನಿಂದಲೆ ಪರಾಜಿತನಾದ ಓರ್ವ ರಾಜನಾಗಿರುತ್ತಾನೆ. ಪ್ರತಾಪಭಾನುವಿಗೆ ಕುಹನ ಸಂನ್ಯಾಸಿಯ ಪರಿಚಯ ಸಿಗದಿದ್ದರೂ, ಅಂತಃ ಶತೃತ್ವದಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಆ ದುಷ್ಟನಿಗೆ ಪ್ರತಾಪಭಾನುವಿನ ಪೂರ್ಣಪರಿಚಯವಿದ್ದಿತು. ಅತಿವಿನಯದಿಂದ (ಧೂರ್ತಲಕ್ಷಣವೇ ಸರಿ) ಮಧುಸಮಾನ ಹಿತವಚನಗಳನ್ನು ನುಡಿದು, ವೇದಘೋಷಗಳನ್ನು ಮೊಳಗಿಸಿ ತನ್ನ ಬಾಹ್ಯಚರ್ಯೆಯಿಂದ ನಿಷ್ಕಪಟಿಯಾದ ಪ್ರತಾಪಭಾನುವನ್ನು ಸಂಪೂರ್ಣ ಮರುಳು ಮಾಡುತ್ತಾನೆ. ಈ ಕುಹನ ಸಂನ್ಯಾಸಿಯೇ ಅಪ್ರತಿಮ ಪಂಡಿತನು, ಮಹಾಮಹಿಮನು ಎಂದು ಪ್ರತಾಪಭಾನುವು ಭಾವಿಸುತ್ತಾನೆ. ಇಂತಿರಲು ಕಪಟ ಸಂನ್ಯಾಸಿಯು ತಾನು ಏಕತನುವೆಂದು ನುಡಿಯುತ್ತಾನೆ. ಪ್ರತಾಪಭಾನುವು 'ಏಕತನು ಎಂದರೇನು?' ಎಂದು ಕೇಳಲಾಗಿ, ಸಂನ್ಯಾಸಿಯು ಇಂತೆಂದು ಉತ್ತರಿಸಿದನು -- "ನಾನು ಸೃಷ್ಟಿಕಾಲದಿಂದಲೂ ಇದೇ ಶರೀರದಲ್ಲಿ ಇದ್ದೇನೆ. ಶರೀರ ತ್ಯ್ಗಾಗವನ್ನು ಮಾಡಿಯೇ ಇಲ್ಲ. ಆದರಿಂದ ನಾನು ಏಕತನುವೆಂದು ಗುರುತಿಸಲ್ಪಡುತ್ತೇನೆ" -- ಎಂಬುದಾಗಿ ವಿವರಿಸುತ್ತಾ ತಪಃ ಶಕ್ತಿಯಿಂದ ಏನನ್ನು ಬೇಕಾದರು ಸಾಧಿಸಬಹುದು ಎಂದು ಹೇಳುತ್ತಾನೆ. ಧರ್ಮದುರಂಧರನೂ ಅಪ್ರತಿಮ ರಾಜನೂ ಆದ ಪ್ರತಾಪಭಾನುವಿನ ಮನಸ್ಸಿನಲ್ಲಿ ಈ ಮಾತನ್ನು ಕೇಳುತ್ತಿದ್ದ ಹಾಗೆ ಪ್ರಲೋಭನೆ ಉಂಟಾಗುತ್ತದೆ. "ಗುರುಗಳೇ ತಪಃ ಶಕ್ತಿಯಿಂದ ನನ್ನ ಶರೀರವು ಜರಾಮರಣ ರಹಿತವಾಗುವಂತೆ ಅನುಗ್ರಹಿಸಿ. ಶತಕಲ್ಪ ಪರ್ಯಂತ ಭೂಮಂಡಲದ ಏಕಚಕ್ರಾಧಿಪತ್ಯ ದೊರೆಯುವಂತೆ ಆಶೀರ್ವದಿಸಿ" -- ಎಂಬ ಪ್ರಲೋಭನೆಯ ಮಾತನ್ನು ಆಡುತ್ತಾನೆ. ಭೂಪಾಲನನ್ನು ದಾರಿತಪ್ಪಿಸುವಲ್ಲಿ ಗೆದ್ದೆನೆಂದು ಮನದಲ್ಲೇ ತುಸು ನಕ್ಕು, ಸಂನ್ಯಾಸಿಯು -- 'ತಥಾಸ್ತು!' ಎಂದು ಅನುಗ್ರಹಿಸುತ್ತಲೇ ಒಂದು ಚೇತಾವನಿಯನ್ನು ನೀಡುತ್ತಾನೆ. ನಿನ್ನ ಯಮರಾಜನೂ ಸಹ ಜರಾಮರಣಗಳಿಂದ ಪೀಡಿಸಲಾರನು, ಆದರೆ ವಿಪ್ರೋತ್ತಮರ ಶಾಪ ತಗುಲದಂತೆ ನೋಡಿಕೋ ಎಂದು ಎಚ್ಚರಿಸುತ್ತಾನೆ. ವಿಪ್ರರ ತಪಃಶಕ್ತಿಗೆ ಅತೀವ ಬಲವಿರುತ್ತದೆ. ಆದ್ದರಿಂದ ವಿಪ್ರರಿಂದ ಶಾಪಗ್ರಸ್ತನಾಗದಿದ್ದರೆ ಶತಕಲ್ಪಗಳವರೆಗೂ ನೀನು ಭೂಮಂಡಲದ ಏಕಚಕ್ರಾಧಿಪತ್ಯ ಹೊಂದುತ್ತೀಯೆ ಎಂದು ಹೇಳಿದನು. ಇದಕ್ಕೆ ಮಹಾರಾಜನು -- "ಮುನಿವರ್ಯ, ಸದಾಕಾಲ ವಿಪ್ರೋತ್ತಮರ ಮನ ಒಲಿಸಿಕೊಳ್ಳಲು ಸೂಕ್ತ ಮಾರ್ಗೋಪಾಯವನ್ನು ನೀವೇ ಸೂಚಿಸಿ" ಎಂದು ಅಂಗಲಾಚುತ್ತಾನೆ. ಅದಕ್ಕೆ ಆ ಸಂನ್ಯಾಸಿಯು ಶತಸಹಸ್ರ ಯೋಗ್ಯ ವಿಪ್ರರಿಗೆ ಒಂದು ಸಂವತ್ಸರ ಪರ್ಯಂತ ದಿನಾಲೂ ಅನ್ನದಾನ ಮಾಡಬೇಕೆಂದು ಸೂಚಿಸುತ್ತಾನೆ. ಎಂಥಾ ರಾಜಾಧಿರಾಜನಿಗೇ ಆಗಲಿ ಕಷ್ಟಸದೃಶವಾದ ಈ ವ್ರತವನ್ನು, ಪ್ರತಾಪಭಾನುವಿಗೆ ತನ್ನ ಮಾಯಶಕ್ತಿಯ ಸಹಕಾರದಿಂದ ಮಾಡಿಸುವುದಾಗಿ ಕಪಟಿಯು ಅಶ್ವಾಸನೆಯನ್ನು ನೀಡುತ್ತಾನೆ.

ನಾಡಿಗೆ ಹಿಂದಿರುಗಿದ ಮಹಾರಾಜನು ಸುತ್ತೋಲೆಗಳನ್ನೂ, ಡಂಗೂರಗಳನ್ನು ಸೂಕ್ತ ರೀತಿಯಲ್ಲಿ ಪ್ರಚಾರಗೈದು ಶತ ಸಹಸ್ರ ವಿಪ್ರೋತ್ತಮರನ್ನು ಒಂದೆಡೆ ಅನ್ನದಾನಕ್ಕಾಗಿ ಸೇರಿಸುತ್ತಾನೆ. ಕಾಡುಹಂದಿಯ ರೂಪ ತಾಳಿ ರಾಜನನ್ನು ಆ ದಿನ ದಾರಿತಪ್ಪಿಸಿದ ಕಪಟ ಸಂನ್ಯಾಸಿಯ ಮಿತ್ರನಾದ ಕಾಲಕೇಟ ರಾಕ್ಷಸನು ತನ್ನ ಮಾಯೆಯಿಂದ ನೆರೆದ ವಿಪ್ರೋತ್ತಮರಿಗೆಲ್ಲ ಮೃಷ್ಠಾನ್ನ ಭೋಜನ ತಯಾರು ಮಾಡುತ್ತಾನೆ. ಆದರೆ ದುಷ್ಟನಾದ ಅವನು ಕಪಟ ಸಂನ್ಯಾಸಿಯ ಒಡಗೂಡಿ ಭೋಜ್ಯಗಳಲ್ಲಿ ನರಮಾಂಸವನ್ನು ವಿಪ್ರರಿಗೆ ಉಣಬಡಿಸಿ ಘೋರಪಾಪವೆಸುಗುತ್ತಾರೆ. ದ್ವಿಜರು ಒಂದು ತುತ್ತು ತಿನ್ನುವಷ್ಟರಲ್ಲಿ ಆಕಾಶದಲ್ಲಿ ಒಂದು ಅಶರೀರವಾಣಿಯು ಖಾದ್ಯಗಳು ಅಪವಿತ್ರವಾಗಿರುವುದರ ಬಗ್ಗೆ ಘೋಷಿಸುತ್ತದೆ. ಕಪಟದಿಂದ ನರಮಾಂಸಭಕ್ಷಣೆ ಮಾಡಿಸಿದುದಕೆ ಕುಪಿತಗೊಂಡ ವಿಪ್ರೋತ್ತಮರು ಪ್ರತಾಪಭಾನುವನ್ನು ಬಹಳವಾಗಿ ಶಪಿಸುತ್ತಾರೆ. ಇನ್ನು ಒಂದು ಸಂವತ್ಸರದಲ್ಲಿ ನಿನ್ನ ಪರಿವಾರ ಸಮೇತ ಧ್ವಂಸವಾಗಿ ನಿನ್ನ ತರ್ಪಣಕ್ರಿಯೆಗೂ ಉತ್ತರಾಧಿಕಾರಿಗಳು ಇರದಂತೆ ಆಗಲಿ ಎಂದು ಘೋರವಾಗಿ ಶಪಿಸುತ್ತಾರೆ. ಆಕಾಶವಾಣಿಯು ಈ ವೃತ್ತಾಂತದಲ್ಲಿ ಮಹಾರಾಜನ ಕೈವಾಡವಿಲ್ಲವೆಂದು ಹೇಳಿದರೂ, ಒಮ್ಮೆ ಶಾಪಗ್ರಸ್ಥನಾದರೆಂದರೆ ಕಾಲವಿಧಿನಿಯಮದಂತೆ ಅನುಭವಿಸಿಯೇ ತೀರಬೇಕು ಎಂದು ಹೇಳಿ ವಿಪ್ರರೆಲ್ಲರು ಸಭೆಯನ್ನು ತ್ಯಜಿಸಿ ಹೊರನಡೆಯುತ್ತಾರೆ. ಅದೇ ಶಾಪದಂತೆ ಪ್ರಲೋಭನೆ ಮತ್ತು ದುರ್ವ್ಯಾಪ್ತಿಗೆ ಒಳಗಾದ ಪ್ರತಾಪಭಾನುವು ವರ್ಷಾಂತ್ಯದಲ್ಲಿ ಕಾಲಕೇಟ ರಾಕ್ಷಸ ಮತ್ತು ವೇಷ ಕಳಚಿದ ಕಪಟ ಸಂನ್ಯಾಸಿಯ ಉಭಯ ಸೈನ್ಯಗಳಿಂದ ಹತನಾಗುತ್ತಾನೆ. ಧರ್ಮನಿರತನೂ ಸದ್ಗುಣಸಂಪನ್ನನೂ ಆದರೂ ಮಹಾರಾಜನು ವ್ಯಾಪ್ತಿಗಿಂತ ಮೇಲೆ ಹೋಗಲು ಇಚ್ಚ್ಚಿಸಿದ. ಸಾಕಷ್ಟು ಪ್ರಭಾವಿಯಾಗಿದ್ದು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದರೂ ಪ್ರಕೃತಿಸಹಜವಾಗಿಲ್ಲದಿದ್ದ ಸಂಪತ್ತು - ಸ್ಥಿತಿ - ಬೆಳವಣಿಗೆಯನ್ನು ಅಪೇಕ್ಷಿಸಿ ಅಸ್ತಂಗತನಾದ. ಕಾಲಂತರದಲ್ಲಿ ಇದೇ ಪ್ರತಾಪಭಾನುವು ತ್ರೇತಾಯುಗದಲ್ಲಿ ರಾವಣನಾಗಿ, ಅರಿಮರ್ಧನನು ಕುಂಭಕರ್ಣನಾಗಿ ಮತ್ತು ಮಂತ್ರಿ ಧರ್ಮರುಚಿಯು ವಿಭೀಷಣನಾಗಿ ಜನಿಸಿದರು ಎಂಬಲ್ಲಿಗೆ ಪಾರ್ವತಿ ಪರಮೇಶ್ವರರ ಸಂವಾದದಲ್ಲಿಿ ದುರ್ವ್ಯಾಪ್ತಿಯ ಕೆಡುಕುಗಳನ್ನು ಸಾರಿಹೇಳುವ ಪ್ರತಾಪಭಾನು-ಅರಿಮರ್ಧನರ ಕಥೆಯು ಸಮಾಪ್ತವಾಗಲಿಲ್ಲ.

ಆನಾದಿಕಾಲದಿಂದಲೂ ಇಂತಹ ಕಥೆಗಳು ನಡೆದಿವೆ, ಇಂದಿಗೂ ನಡೆಯುತ್ತಲೇ ಇವೆ. ಕೃತಯುಗದ ಪ್ರತಾಪಭಾನು-ಅರಿಮರ್ಧನರ ಕಥೆ ಹಾಗಿರಲಿ, ಪ್ರಸ್ತುತ ವಾರ್ತೆಗಳಲ್ಲಿ ಕೇಳಿಬರುತ್ತಿರುವ ಲೀಮನ್ ಭ್ರಾತೃಗಳ ಕಥೆ ಕೇಳಿ. ಪ್ರಕೃತಿ ಸಹಜವಲ್ಲದ ವಾರ್ಷಿಕ ಆದಾಯ-ಅಭಿವೃದ್ಧಿ ಪ್ರತಿವರ್ಷವೂ ಆಗಲೇಬೇಕು (year-on-year growth). ಅದು ಯಾವ ಪಣತೆತ್ತಾದರೂ ಸರಿ ಅಭಿವೃದ್ಧಿಯ ಮೆಟ್ಟಲು ಏರಲೇಬೇಕು ಎಂಬ ಧೋರಣೆ. ಇಡೀ ಉದ್ಯಮ ಐದು ಪ್ರತಿಶತ ಬೆಳೆದರೆ ನನ್ನ ಕಂಪನಿ ಇಪ್ಪತ್ತೈದರಷ್ಟು ಬೆಳೆಯ ಬೇಕೆಂಬ ದುರುತ್ಸಾಹ. ಎಲ್ಲರಿಗಿಂತ ನಾನು ಮುಂದು ಇರಬೇಕೆಂಬ ಹಂಬಲ ತಪ್ಪಲ್ಲ. ಅದೇ ಪ್ರಗತಿಗೆ ಪ್ರೇರಕ -- ಆದರೆ ಸಹಜವೆನಿಸದಷ್ಟು ಬೆಳವಣಿಗೆ ಕಾಣ ಬೇಕೆಂಬುದು ದುರ್ವ್ಯಾಪ್ತಿಯ ಪರಮಾವಧಿ. ಜಗತ್ತಿನ ಮೇಧಾವಿಗಳೆಲ್ಲ (ಇನ್ವೆಸ್ಟ್ಮೆಂಟ್ ಬ್ಯಾಂಕರ್ ಗಳು) ಒಂದೆಡೆ ಸೇರಿ ಬೆಳೆಸಿದ ಕಂಪನಿ. ಸೋಲು ಕಂಡಿಲ್ಲದ ಸರದಾರರು ಗೆಲ್ಲಲ್ಲು ಏನು ಬೇಕಾದರೂ ರಿಸ್ಕ್ (risk) ತೆಗೆದು ಕೊಳ್ಳಲು ಶಕ್ತರು. ಹೀಗೆ ನಾಗಲೋಟದ ಬೆಳವಣಿಗೆಗೆ ಉರುವಲು ನೀಡಲು ಅದೆಷ್ಟು ಅಸಹಜ ನಡೆಗಳನ್ನು ಬೇಕಾದರೂ ಹಾಕುವರು. ಇಂದಿನ ಲೀಮನ್ ಬ್ರದರ್ಸ್ ಮುಂತಾದ ಕಂಪನಿಗಳಾಗಲಿ, ಅಂದಿನ ಪ್ರತಾಪಭಾನುವಾಗಲಿ ಮೂಲತಃ ಒಳ್ಳೆಯವರೇ, ಶಕ್ತಿ ಶಾಲಿಗಳೇ, ಮೇಧಾವಿಗಳೇ -- ಆದರೆ ವ್ಯಾಪ್ತಿಯನ್ನು ಮೀರಿ ಅಪೇಕ್ಷಿಸಿದ್ದರಿಂದ ಅವನತಿ ಕಂಡವರು!

****

Related News Item:

The High Cost of Growth:

The collapse of these financial giants has been stunning in both its speed and severity.These fallen companies were overlevered, overconfident, and too slow to either realize or admit that they were in serious jeopardy. But these companies all shared one additional trait that foreshadowed their downfall. They pursued a strategy of growth at any cost -- and it ultimately cost them dearly.Year after year, these companies targeted double-digit growth, despite much slower growth in their core markets.What wasn't being asked strenuously enough was what risks the companies were taking to maintain this supranormal growth rate. This problem isn't unique to financial companies; they're just the most recent high-profile examples.Unless a company has a sustainable competitive advantage, growth rates that outpace the rest of its industry can be a signal of accounting shenanigans or aggressive business practices.

***