Sunday, July 22, 2007

ಬಣ್ಣಿಸಲೇನಿಹುದು

--
ಬಣ್ಣಿಸಲೇನಿಹುದು
ಬಣ್ಣ ಬಣ್ಣದ ಚಿತ್ತಾರವ
ತಣ್ಣಗೆ ಕಣ್ಣ ಹಾಯಿಸಿ
ಸಾವಿರ ವರ ವರ್ಣವ
ಸವಿದು ಇರುವಿಕೆಯ
ಮರು ಘಳಿಗೆಯ
ಸ್ವಾನಂದದೆ ಕಳೆವುದಲ್ಲದೆ
ಬಣ್ಣಿಸಲೇನಿಹುದು
ಬಣ್ಣ ಬಣ್ಣದ ಚಿತ್ತಾರವ.
--

ಸಂದರ್ಭ:
ನಾನು ನಯಾಗರಾಗೆ ಹೋಗಿದ್ದ ಸಂದರ್ಭ. ರುದ್ರ ರಮಣೀಯವಾದ ಜಲಪಾತದ ತೊಪ್ಪಲಲ್ಲಿ ತೆಪ್ಪದ ಯಾನ. 'ಮೈಡ್ ಆಫ್ ದ ಮಿಸ್ಟ್' ಅಂತ ಯಾನದ ಹೆಸರು. ಕನ್ನಡದಲ್ಲಿ 'ಮಲೆಗಳಲ್ಲಿ ಮಧುಮಗಳು' ಅಂತ ಕರೆಯೋಣವೇ? ಸರಿ, ಅಲ್ಲಿ ಬಂದಿದ್ದ ಯಾತ್ರಾರ್ತಿಗಳು ಫಾಲ್ಸ್ ನೋಡೊದಕ್ಕಿಂತ ಫೋಟೊ ತೆಗೆಯೋದ್ರಲ್ಲೇ ಇನ್ವಾಲ್ವ್ ಆಗಿದಾರೆ. ಬಹಳಷ್ಟು ಜನ ನವ ವಧೂವರರು ಬಂದಿದ್ದರು. ಅವರೂ ಸಹ ಪೋಸ್ ಕೊಡೋದ್ರಲ್ಲಿ ವ್ಯಸ್ತವಾಗಿದ್ದರು. ಅಲ್ಲಾ, ಅಷ್ಟು ಚೆನ್ನಾಗಿ ಭೋರ್ಗರೆದು ಉಕ್ಕಿ ಹರಿಯುತಾ ಇದೆ ನಯಾಗರಾ ತಾಯಿ, ಅದನ್ನು ಕಂಡು ಸಂತಸಗೊಂಡು, ಆ 'ಘಳಿಗೆ'ಯನ್ನು ಆಸ್ವಾದಿಸಬೇಕಲ್ಲವೆ? ಇನ್ನು ಒಬ್ಬ ಕವಿ ಮಹಾಶಯ, ಏನೋ ಕವನನೋ ಏನೋ ಗೀಚ್ಕೋತಾ ಇದ್ದ. ಅವನಿಗೆ ಕವಿಸಮಯ ಆಗ ಕೂಡಿ ಬಂದಿದೆ. ಅದನೆಲ್ಲ ನೋಡಿ, ನನ್ನ ಮನಸ್ಸಿಗೆ ಹೀಗೆನಿಸಿತು: 'ಇರುವಿಕೆಯ ಅರೆ ಘಳಿಗೆಯನ್ನು ಆಸ್ವಾದಿಸಿದರೆ ಆಯಿತು ಅಲ್ಲವೆ? ಬಣ್ಣಿಸಲೇನಿಹುದು? ಅಂತ'. ಮನೆಗೆ ಬಂದು ನನ್ನ ಈ ಸ್ವಗತ ಗೀಚಿದೆ.

Sidenotes:
ಅಲ್ಲಾ, ಜನ ಏನೋ ಫೋಟೊ ತೊಗೊತಾ ಇದ್ರು; ಕವನ ಬರ್ಕೋತ ಇದ್ರೂ, ಇನ್ನು ಏನೆನೋ ಅವರಿಗೆ ಇಷ್ಟ ಆದದ್ದು ಮಾಡ್ಕೋತಾ ಇದ್ರು. ಆದ್ರೆ ನಾನು ಏನು ಮಾಡ್ತಾ ಇದ್ದೆ ಅಲ್ಲಿ. ಮಂಗನ ಹಾಗೆ ಅವರಿವರ ಮುಖ ನೋಡ್ತಾ ಇದ್ನಾ? ಅದೇನೋ ಹೇಳ್ತಾರೆ ನೋಡಿ, 'Physcologist is a person, who, when a beautiful girl walks into a room, looks at all others in the room, rather than the pretty girl' ಅಂತ. ಹಾಗಾಯ್ತು.
--