Wednesday, January 10, 2007

ಅಂತರ್ಜಾಲದ ಅಲೆಮಾರಿಗಳು

ಸಂಬಂಧಗಳು ಮತ್ತು ಸಹಸ್ಪಂದನ.

ಕಳೆದ ಸಂವತ್ಸರ ನಾನು ಅಂತರ್ಜಾಲದಲ್ಲಿ ಅಲೆದಾಡುತ್ತ ಹಲವು ಮಂದಿ ಹೊಸ ಸ್ನೇಹಿತರನ್ನು ಸಂಪಾದಿಸಿದೆ. ಈ ಸಂಬಂಧಗಳ ಸಂಕೋಲೆ ಬಹಳ ಸೋಜಿಗವೂ ಮತ್ತು ಸ್ವಾರಸ್ಯಕರವೂ ಆಗಿದೆ. ನನ್ನ ಒಡನಾಟಕ್ಕೆ ಸಿಕ್ಕ ಹಲವು ಮಂದಿಯ ಮುಖ ಪರಿಚಯ ಸಹ ನನಗೆ ಇಲ್ಲ. ಇಂತಿದ್ದರು, ಇವರುಗಳು ನನ್ನ ಜೀವನದಲ್ಲಿ ಈ ದಿನ ಹಾಸು ಹೊಕ್ಕು. ಇವರಲ್ಲಿ ಉಭಯಕುಶಲೋಪರಿ ವಿಚಾರಿಸದ ದಿನವೇ ಇಲ್ಲ. ಏತ್ತಣ ಮಾಮರ ; ಏತ್ತಣ ಕೋಗಿಲೆ -- ಆದರೂ ಅನುಬಂಧವಿರುವಂತೆ , ನಮ್ಮ ಮೈತ್ರಿ ಅಂಕುರಿಸಿ ಸಂಬಂಧಗಳು ಬೆಳೆಯುತ್ತಲೇ ಇವೆ. ಕಾರ್ಯ ನಿಮಿತ್ತ ನಾ ಹಿಂದೆಂದೂ ಕಾಣದ ಊರುಗಳಿಲ್ಲಿ ಸಂಚರಿಸುವ ಸಂದರ್ಭದಲ್ಲಿ ಇವರುಗಳ ಮನ - ಮನೆ - ಮಂದಿರದಲ್ಲೇ ಸಹ ಮೈತ್ರಿ ಭೋಜ್ಯ - ಸಹ ಮಿತ್ರ ವಾಸ. ಮಿತ್ರರು ಒಂದೆಡೆಯಾದರೆ , ಅಂತರ್ಜಾಲದಲ್ಲಿ ನಾ ಕಂಡ ಸಜ್ಜನರು ಈಗ ನನ್ನ ಒಲವಿನ ಭಾವನವರಾಗಿ ಮನೆಯ ಸದಸ್ಯರೇ ಆಗಿದ್ದಾರೆ.ಜೀವನವೀಡಿ ಪರಿಚಯವಿದ್ದರೂ ನಮ್ಮವರಲ್ಲದಂತೆ ವರ್ತಿಸುವ ಹಲವಾರು ಜನಗಳ ನಡುವೆ , ಕೆಲವೇ ದಿನಗಳ ಒಡನಾಟದಲ್ಲಿ ವಿಶ್ವಾಸದ ಮಾತುಗಳನ್ನು ಆಡಿ ನನ್ನ ದಿನಚರಿಯನ್ನು ಸುಗಮವೆನ್ನಿಸುವ ಇವರುಗಳಿಗೆ ನಾನು ಚಿರಋಣಿ.

ಈ ಸ್ನೇಹಸೇತುವನ್ನು ನಾನು ನೆನೆದಾಗ ಅಂತರಾಳದಲ್ಲಿ ಮೂಡಿಬಂದ ಸ್ವಗತ :

ಅಲೆಮಾರಿಗಳು , ನಾವು ಅಂತರ್ಜಾಲದ ಅಲೆಮಾರಿಗಳು
ಪುಟದಿಂದ ಪುಟಕ್ಕೆ ,ತಾಣದಿಂದ ತಾಣಕ್ಕೆ
ಜಿಗಿದು ,ನೆಗೆದು ,ಕುಣಿದು ,ಹೊಸ ಬೆಸುಗೆ ಬೆಸೆದು,
ಕಾಣದವರ ನಮ್ಮವರನಾಗಿಸುವ ಕಲೆಯ ನೆಲೆಯ
ಅರಿತು ನಡೆವ..ಅಲೆಮಾರಿಗಳು,
ನಾವು ಅಂತರ್ಜಾಲದ ಅಲೆಮಾರಿಗಳು

ಅಪರಿಚಿತರಾದರೂ ಚಿರಪರಿಚಿತರು
ಮುಖಪರಿಚಯವಿಲ್ಲದ ಅಶರೀರಭ್ರಾತೃಗಳು
ಸ್ನೇಹ ಸಂಬಂಧಗಳ ಸಹಸ್ಪಂದನವನು
ಅರಿತು ನಡೆವ..ಅಲೆಮಾರಿಗಳು,
ನಾವು ಅಂತರ್ಜಾಲದ ಅಲೆಮಾರಿಗಳು

As always - ಇದು ಪದ್ಯ, ಲಹರಿ ,ಕವನ , ಕಾವ್ಯ -- ಇದ್ಯಾವ್ದು ಅಲ್ಲ . ಇದು ಸುಮ್ನೆ ಹಾಗೆ , ಸ್ವಗತ!
.

1 comment:

bhadra said...

ಮೊದಲಿಗೆ ಸ್ವಗತವನ್ನು ಬಹಿರಂಗ ಪಡಿಸಿದುದಕ್ಕೆ ವಂದನೆಗಳು.

ನಿಮ್ಮಂತೆಯೇ ನನಗೂ ಅನುಭವ ಆಗಿದೆ. ಹಲವು ಸನ್ಮಿತ್ರರು ಲಭಿಸಿದರು. ಅವರ ಒಡನಾಟದಿಂದ ಜೀವವು ಮುದಕಾಣುತ್ತಿದೆ. ಜೀವಿತಕ್ಕೆ ಇಷ್ಟಲ್ಲದೇ ಇನ್ನೇನು ತಾನೆ ಬೇಕು. ಅಂತರ್ಜಾಲವಿಲ್ಲದಿದ್ದರೆ, ಅದರೊಳು ನಾವು ಸಿಲುಕದಿದ್ದರೆ, ಸನ್ಮಿತ್ರರು ದೊರೆಯದಿದ್ದರೆ, ಇನ್ನಾವುದೋ ಕೆಟ್ಟ ಕೆಲಸಗಳನ್ನು ಮಾಡಿಕೊಂಡು, ಮನ ಮುದುಡಿಸಿಕೊಂಡು, ಮೂಲೆಗುಂಪಾಗಿರಬೇಕಿತ್ತು. ಕಣ್ಣಿಗೆ ಕಾಣದ, ಮೂಗಿಗೆ ವಾಸನೆ ತೋರದ, ನಾಲಗೆಗೆ ರುಚಿತೋರದ, ಮನವನ್ನು ತಟ್ಟಿ ಮೇಲೆಬ್ಬಿಸಿ, ಆಹ್ಲಾದವನ್ನು ಉಂಟು ಮಾಡುತ್ತಿರುವ ಈ ಅಂತರ್ಜಾಲ ತಂತ್ರವನ್ನು ದೈವ ಸ್ವರೂಪವೆಂದು ನಾನು ತಿಳಿಯುತ್ತಿರುವೆ. ಹೇಗೆ ನಿಸರ್ಗವೋ ಹಾಗೆಯೇ ಅಂತರ್ಜಾಲ ತಂತು. ನಾನು ಸರಿಯೇ, ನೀವೇ ಹೇಳಿ?