Saturday, June 30, 2012

ಸಂಪ್ರತಿ ವಾರ್ತಾಃ ಶೄಯಂತಾಂ.



ಆಕಾಶವಾಣಿ ಸುದ್ದಿ ವಿಭಾಗದಿಂದ ಪ್ರತಿ ಮುಂಜಾನೆ ೬:೫೫ ಗೆ ಬಿತ್ತರವಾಗುವ ಸಂಸ್ಕೃತ ವಾರ್ತಾ ಪ್ರಸಾರಕ್ಕಿಂದು ೩೮ ವರ್ಷದ ಸಂಭ್ರಮ. ೧೯೭೪ರಲ್ಲಿ ಇದೇ ಜೂನ್ ೩೦ ರಂದು ಬೆಳಗಿನ ಸಂಸ್ಕೃತ ವಾರ್ತಾ ಪ್ರಸಾರ ಮೊದಲುಗೊಂಡಿತು. "ಬಹುಜನಹಿತಾಯ, ಬಹುಜನಸುಖಾಯ" ಎಂಬ ಆಕಾಶವಾಣಿಯ ಘೋಶವಾಕ್ಯ ಈ ಸಂಸ್ಕೃತ ವಾರ್ತೆಗಳಿಗೆ ಅಕ್ಷರಶಃ ಸರಿಹೊಂದುತ್ತದೆ.

ಮುಂಜಾನೆ ಎದ್ದು ಎಂ.ಎಸ್. ಕಂಠಸಿರಿಯಲ್ಲಿ "ಕೌಸಲ್ಯಾ ಸುಪ್ರಜಾ ರಾಮ" ಆಲಿಸಿ , ಬಿಸಿ ತಾಜಾ ಫಿಲ್ಟರ್ ಕಾಫಿ ಹೀರುತ್ತ , ಆಕಾಶವಾಣಿಯಲ್ಲಿ " ಇಯಂ ಆಕಾಶವಾಣಿ, ಸಂಪ್ರತಿ ವಾರ್ತಾಃ ಶೄಯಂತಾಂ , ಪ್ರವಾಚಕಃ ಬಲದೇವಾನಂದ ಸಾಗರಃ" -- ಈ ಉದ್ಘೋಶ ಕೇಳಿದರೆ ಸಾಕು ಆ ದಿನ ಮಂಗಳಮಯವಾಗಿ ಆರಂಭವಾಗುವ ಅನುಭೂತಿ.

ಸಂಸ್ಕೃತ ವಾರ್ತೆಗಳನ್ನು ಅಂತರ್ಜಾಲದಲ್ಲೂ ಕೇಳಬಹುದು. ಕೊಂಡಿ ಇಲ್ಲಿದೆ.

http://www.newsonair.com/NSD-Audio-Bulletins-News-Schedule.asp


ಕಳೆದ ೩೮ ವರ್ಷಗಳಿಂದ ಸಂಸ್ಕೃತ ಪ್ರವಾಚಕರಾಗಿರುವ ಡಾ|| ಬಲದೇವಾನಂದಸಾಗರ ಅವರು.

Monday, May 14, 2012

ಆನಂದಲಹರೀ



ಅಯಃ ಸ್ಪರ್ಶೇ ಲಗ್ನಂ ಸಪದಿ ಲಭತೇ ಹೇಮಪದವೀಂ
ಯಥಾ ರಥ್ಯಾಪಾಥಃ ಶುಚಿ ಭವತಿ ಗಂಗೌಘಮಿಲಿತಮ್ |
ತಥಾ ತತ್ತತ್ ಪಾಪೈಃ ಅತಿಮಲಿನಂ ಅಂತರ್ಮಮ ಯದಿ
ತ್ವಯಿ ಪ್ರೇಮ್ಣಾ ಸಕ್ತಂ ಕಥಮಿವ ನ ಜಾಯೇತ ವಿಮಲಂ ||

ತಾತ್ಪರ್ಯ :  ಸ್ಪರ್ಶಮಣಿಯಿಂದ ಸ್ಪರ್ಶಿಸಿದರೆ ಕಬ್ಬಿಣವು ಬಂಗಾರವಾಗುವುದು; ದಾರಿಯ ಮಗ್ಗಲಿನ ಕೊಳಚೆ ನೀರು ಗಂಗೆಯನ್ನು ಸೇರಿದರೆ ಶುದ್ಧವಾಗುವುದು. ಇದರಂತೆ, ಹೇ ಭವಾನಿ, ನನ್ನ ಹೃದಯವು ಅನೇಕ ಪಾಪಗಳಿಂದ ಅತಿ ಮಲಿನವಾಗಿದ್ದರೂ ಕೂಡ, ನಿನ್ನಲ್ಲಿ ಪ್ರೇಮಸ್ವರೂಪದ ಭಕ್ತಿಯನ್ನು ಪಡೆಯಿತೆಂದರೆ, ಹೇಗೆ ತಾನೇ ನಿರ್ಮಲವಾಗುವುದಿಲ್ಲ? 

Thursday, April 26, 2012

ವಿಶ್ವ ಬೌದ್ಧಿಕ ಸಂಪದ ದಿನಾಚರಣೆ

ವಿಶ್ವದೆಲ್ಲೆಡೆ ಏಪ್ರಿಲ್ ೨೬ ೨೦೧೨ ರಂದು ಬೌದ್ಧಿಕ ಸಂಪದ ದಿನಾಚರಣೆ ಆಚರಿಸಲಾಯಿತು. ವಿಶ್ವ ಬೌದ್ಧಿಕ ಸಂಪದ ಸಂಸ್ಥೆ (World Intellectual Property Organisation: WIPO) ಏಪ್ರಿಲ್ ೨೬ ಅನ್ನು ಜಾಗತಿಕ ಮಟ್ಟದಲ್ಲಿ ಬೌದ್ಧಿಕ ಸಂಪದ ದಿನವನ್ನಾಗಿ ಆಚರಿಸುವ ಕರೆ ನೀಡಿದೆ. ೧೫೦ಕ್ಕೂ ಹೆಚ್ಚು ರಾಷ್ಟ್ರಗಳು ಈ WIPO ಸಂಸ್ಥೆಯ ಸದಸ್ಯರಾಗಿದ್ದು, ಈ ಎಲ್ಲಾ ಸದಸ್ಯ ದೇಶಗಳಲ್ಲೂ ಹೊಸ ಚಿಂತನೆಗಳನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಏಪ್ರಿಲ್ ೨೬ ರಂದು ಕಾರ್ಯಕ್ರಮಗಳು ನಡೆದಿವೆ. ಪ್ರತಿವರ್ಷವೂ ಒಂದು ಮೂಲ ವಿಷಯವನ್ನು ಚರ್ಚೆಗೆ ಆಯ್ದು ಕೊಳ್ಳಲಾಗಿ ಈ ಸಾಲಿನಲ್ಲಿ 'ದ್ರಷ್ಟಾರ ಚಿಂತಕರು' (Visionary Innovators) ಎಂಬ ವಿಷಯವನ್ನು ನಿಗದಿ ಪಡಿಸಲಾಗಿದೆ.

Sunday, March 25, 2012

ವಸಂತೋತ್ಸವ




ವಸಂತ ಬಂದ ಋತುಗಳ ರಾಜಾ ತಾ ಬಂದ! ವಸಂತನ ಆಗಮನ ಎಲ್ಲರಲ್ಲೂ ಸಂತಸ ಮೂಡಿಸಿದೆ. ಉತ್ಸವ ಪ್ರೀಯರಾದ ಭಾರತೀಯರು ವಸಂತ ಋತುವಿಗೆ ಸಂಬಂಧಿಸಿದಂತೆ ಆಚರಿಸುವ ಹತ್ತು ಹಲವು ಪರ್ವಗಳಲ್ಲಿ ಕೆಲವು ಸ್ವಾರಸ್ಯಕರ ಉತ್ಸವಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಕಾಮಸೂತ್ರ, ಶೃಂಗಾರ ಪ್ರಕಾಶ, ಸರಸ್ವತಿ ಕಂಠಾಭರಣ, ಸಾಹಿತ್ಯ ಮೀಮಾಂಸ, ಭಾವ ಪ್ರಕಾಶನ ಮತ್ತು ಚತುರ್ವರ್ಗ ಚಿಂತಾಮಣಿ ಮುಂತಾದ ಕೃತಿಗಳಲ್ಲಿ ಈ ಹಬ್ಬಗಳ ವಿವರಣೆ ಇದೆ. ಕೆಲ ವಸಂತೋತ್ಸವಗಳಲ್ಲಿ : ಮದನೋತ್ಸವ - ತಿಂಗಳ ಕಾಲ ಪ್ರೇಮ, ಕಲೆ ಮತ್ತು ಪ್ರಕೃತಿ ಉಪಾಸನೆಯು ಪ್ರಮುಖವಾದ ಉತ್ಸವ. ಅಷ್ಠಮಿ ಚಂದ್ರ - ಚಂದ್ರಕಾಂತಿಯಲ್ಲಿ ಸ್ನೇಹಕೂಟ ಏರ್ಪಡುವ ಹಬ್ಬ. ಬಕುಳಾಶೋಕವಿಹೃತಿ - ಬಕುಳ ಮತ್ತು ಅಶೋಕ ಪುಷ್ಪಗಳನ್ನು ಬಿಡಿಸಿ, ಮಾಲೆಗಳಾಗಿ ಹೆಣೆದು, ದೇವತೆಗಳು ಮತ್ತು ಇನಿಯರು ಸಿಂಗರಿಸಿ ಕೊಂಡು ಸಂಭ್ರಮಿಸುವ ಪರ್ವ. ಶಾಲ್ಮಲೀ ಮೂಲ ಖೇಲನಂ -- ವಶಾಲವಾದ ಶಾಲ್ಮಲೀ ವೃಕ್ಷದ ಕೆಳಗೆ ಆಟವಾಡುವ ಹಬ್ಬ, ಅಶೋಕಾಷ್ಠಮಿ - ಅಶೋಕ ವೃಕ್ಷಕ್ಕೆ ಪೂಜಿಸುವ ಪರ್ವ , ಆಂದೋಲನ ಚತುರ್ಥಿ - ಡೋಲೋತ್ಸವ, ಉಯ್ಯಾಲೆ ಹಬ್ಬ. ಭೂತ ಮಾತೃಕ - ವೇಷಭೂಷಣ ಉತ್ಸವ. ಸುವಸಂತಕ - ಇನಿಯರ ಮೇಲೆ ಪುಷ್ಪ ಮತ್ತು ಓಕುಳಿ ಎರಚಿ ಸಂತಸ ಪಡುವ ಹಬ್ಬ.

ಗ್ರಂಥಋಣ: ಶತಾವಧಾನಿ ಡಾ|| ರಾ.ಗಣೇಶ್

Wednesday, February 15, 2012

ಸಂಕ್ಷಿಪ್ತ ರಾಮಾಯಣಂ



ಪೂರ್ವಂ ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ|
ವಾಲೀ ನಿರ್ದಲನಂ ಸಮುದ್ರ ತರಣಂ ಲಂಕಾಪುರೇ ದಾಹನಂ
ಪಶ್ಚಾದ್ರಾವಣ ಕುಂಭಕರ್ಣ ಮಥನಂ ಏತದ್ಧಿ ರಾಮಾಯಣಂ||

ಏಕಶ್ಲೋಕೀ ಮಹಾಭಾರತ

ಆದೌ ಪಾಂಡವ ಧಾರ್ತರಾಷ್ಟ್ರಜನನಂ ಲಾಕ್ಷಾಗೃಹೇ ದಾಹನಮ್
ದ್ಯೂತಂ ಶ್ರೀಹರಣಂ ವನೇವಿಹರಣಂ ಮತ್ಸ್ಯಾಲಯೇ ವರ್ತನಮ್ |
ಲೀಲಾ ಗೋಗ್ರಹಣಂ ರಣೇವಿತರಣಂ ಸಂಧಿಕ್ರಿಯಾಜೃಂಭಣಂ
ಪಶ್ಚಾದ್ಭೀಷ್ಮ ಸುಯೋಧನಾದಿ ನಿಧನಂ ಏತನ್ಮಹಾಭಾರತಮ್ ||

ಏಕಶ್ಲೋಕೀ ಭಾಗವತ

ಆದೌ ದೇವಕಿದೇವಿ ಗರ್ಭ ಜನನಂ ಗೋಪಿ ಗೃಹೇ ವರ್ಧನಂ
ಮಾಯಾಪೂತನೀ ಜೀವಿತಾಪಹಾರಣಂ ಗೋವರ್ಧನೋದ್ಧಾರಣಂ|
ಕಂಸಕ್ಷೇಧನ ಕೌರವಾದಿ ಹನನಂ ಕುಂತೀಸುತ ಪಾಲನಂ
ಏತದ್ಧಿ ಮಹಾಭಾಗವತ ಪುರಾಣ ಪುಣ್ಯ ಖಚಿತಂ ಶ್ರೀಕೃಷ್ಣ ಲೀಲಾಮೃತಂ||

Sunday, January 22, 2012

ಭರತವರ್ಷ


ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ|
ವರ್ಷಂ ತದ್ಭಾರತಂ ನಾಮ ಭಾರತೀ ಯತ್ರ ಸಂತತಿಃ ||


ಸಮುದ್ರಕ್ಕೆ ಉತ್ತರದಲ್ಲೂ, ಹಿಮಾಲಯಕ್ಕೆ ದಕ್ಷಿಣದಲ್ಲೂ ಇರುವ ಪ್ರದೇಶವನ್ನು ಭಾರತವೆನ್ನುತ್ತಾರೆ. ಅಲ್ಲಿ ವಾಸಿಸುವವರೇ ಭಾರತೀಯರು.

ಛಪ್ಪನ್ನೈವತ್ತಾರು ದೇಶಗಳು : ಅಂಗ, ವಂಗ, ಕಳಿಂಗ, ಕರ್ಣಾಟ, ಕೇರಳ,ಕಾಮರೂಪ, ಗೌಡ, ವನವಾಸ (ಬನವಾಸಿ),ಕುಂತಲ,ಕೊಂಕಣ,ಮಗಧ,ಸೌರಾಷ್ಟ್ರ,ಮಾಳವ,ಲಾಟ,ಭೋಜ,ವಿರಾಟ,ಶಬರ,ಕಕುರ,ಕುರು,ಅವಂತಿ,ಪಾಂಡ್ಯ,ಮದ್ರ,ಸಿಂಹಲ,ಗುರ್ಜರ,ಪಾರಸಿಕ,ಮಿಥಿಲ,ಪಾಂಚಾಲ,ಕ್ರೂರಸೇನಿ,ಗಾಂಧಾರ,ಬಾಹ್ಲಿಕ,ಹೈಹಯ,ತೌಳವ,ಸಾಲ್ವ,ಪುಂಡ್ರಕ,ಪ್ರಾಗ್ಜೋತಿಷ್ಯ,ಮತ್ಸ್ಯ,ಚೇದಿ,ಬರ್ಬರ,ನೇಪಾಳ,ಗೌಳ,ಕಾಶ್ಮೀರ,ಕನ್ಯಾಕುಬ್ಜ,ವಿದರ್ಭ,ಖುರಸಾಣ,ಮಹಾರಾಷ್ಟ್ರ,ಕೋಸಲ,ಕೇಕಯ,ಅಹಿಚ್ಛತ್ರ,ತ್ರಿಲಿಂಗ,ಪ್ರಯಾಗ,ಕರಹಂಟಕ,ಕಾಂಭೋಜ,ಭೋಟ,ಚೋಳ,ಹೂಣ,ಕಾಶಿ.

Friday, December 30, 2011

ಮಧ್ಯಮ ಮಾರ್ಗ

ನ ಚಾತಿಪ್ರಣಯಃ ಕಾರ್ಯಃ ಕರ್ತ್ವ್ಯೋ ಅಪ್ರಣಯಸ್ಚ ತೆ
ಉಭಯಂ ಹಿ ಮಹಾನ್ ದೋಶಃ ತಸ್ಮಾದಂತರದ್ರುಗ್ಭವ

Tuesday, November 29, 2011

ಇಂದಿನ ದಿನವೇ ಶುಭ ದಿನವು

ಯಾವತ್ ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರತಃ |
ತಾವದಾತ್ಮಹಿತಂ ಕುರ್ಯಾತ್ ಪ್ರಾಣಾಂತೇ ಕಿಂ ಕರಿಷ್ಯಸಿ ||
-- ಸುಭಾಷಿತರತ್ನಭಂಡಾರಗಾರ

ಒಳ್ಳೆಯ ಕೆಲಸ ಮಾಡಲು ಮೀನ-ಮೇಷ ಎಣಿಸುವುದೇಕೆ? ಶಕ್ತಿ ಇರುವಾಗಲೇ ಸದ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳ ಬೇಕು. ಸಂಸಾರ ತಾಪತ್ರಯಗಳು ಯಾರೊಬ್ಬರನ್ನು ಬಿಟ್ಟಿಲ್ಲ; ಹೀಗಿರುವಾಗ ಸರ್ವರಿಗೂ ಹಿತವನ್ನುಂಟು ಮಾಡುವ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಒಳಿತಲ್ಲವೆ. ನಾಳೆ, ನಾಳೆಯೆಂದು ಬಾರದ ನಾಳೆಗೆ ಮಹೋನ್ನತ ಕಾರ್ಯಗಳಾನ್ನು ಬದಿಗೊತ್ತಿ, ನಗಣ್ಯವಾದ ದೈನಂದಿನ ಚಟುವಟಿಕೆಯಲ್ಲಿ ತಳ್ಳಣಿಸುವುದು ಯಾವ ನ್ಯಾಯ ಹೇಳಿ?

Friday, October 28, 2011

ನೀರವ



ಒಕ್ಕಣ್ಣ ಝೇನ್ ಗುರು ಶೋಇಚಿ ದಿವ್ಯಪ್ರಭೆಯಿಂದ ತೇಜೋಮಯವಾಗಿ ಶೋಭಿಸುತ್ತಿದ್ದ. ತೋಫ಼ುಕು ದೇವಳದಲ್ಲಿ ತನ್ನ ಶಿಷ್ಯರಿಗೆ ದೀಕ್ಷೆಯನ್ನೀಯುತ್ತಿದ್ದನು. ದಿನ-ರಾತ್ರಿಯೆನ್ನದೆ ದೇವಳದಲ್ಲಿ ಮೌನವಾವರಿಸಿತ್ತು. ಸುತ್ತಲೂ ಪ್ರಶಾಂತ ಮೌನ. ಮಂತ್ರ ಪಠನವನ್ನೂ ಸಹ ಗುರುಗಳು ನಿಷೇಧಿಸಿದ್ದರು. ಧ್ಯಾನವಲ್ಲದೆ ಶಿಷ್ಯರಿಗೆ ಅನ್ಯ ಶ್ರಮವಿಲ್ಲ. ಹೀಗಿರಲು, ಒಂದಾನೊಂದು ದಿನ, ಬಹುಕಾಲದ ಗುರುಗಳ ನೆರೆಯವನೆನಿಸಿದ ವೃದ್ಧನಿಗೆ ದೇವಾಲಯದಿಂದ ಘಂಟಾನಾದ ಮತ್ತು ಸೂತ್ರಪಠನದ ಧ್ವನಿ ಕೇಳಿ ಬಂತು. ಗುರುಗಳು ಹೊರಟರೆಂದು ಆತನರಿತನಷ್ಟೆ!

Wednesday, September 14, 2011

ಪರೋಪಕಾರಾರ್ಥಮಿದಂ ಶರೀರಂ




ಮೊನ್ನೆ ಬೆಂಗಳೂರು- ಮೈಸೂರು ಮಾರ್ಗದಲ್ಲಿರುವ ಜಾನಪದ ಲೋಕದಲ್ಲಿ ’ಬಿದಿರಮ್ಮ ದೇವಿ’ಯ ಕುರಿತಾದ ಜಾನಪದ ಗೀತೆಯೊಂದನ್ನು ನೋಡಿ, ’ಹರಿ ಹರಿ ಗೋವಿನ’ ಹಾಡು ನೆನಪಿಗೆ ಬಂತು. ದಿಟವೆ, ಬಿದಿರಾಗಲಿ, ಗೋವಾಗಲಿ, ನದಿ-ತರುಗಳಾಗಲಿ ತಮ್ಮ ಒಂದೊಂದು ಭಾಗವೂ ಅನ್ಯರಿಗೆ ಉಪಯೋಗುವಾಗುವಂತೆ ಜೀವಿಸುತ್ತವೆ. ನರ ಮಾನವನಾದರೋ ಯಾರಿಗೂ ಬಾರದವನಾಗಿ, ಭೂಮಿಗೆ ಭಾರವಾಗಿ ಜೀವಿಸಿ ತೆರಳುತ್ತಾರೆ.

ಪರೋಪಕಾರಾಯ ಫಲಂತಿ ವೃಕ್ಷಾ: ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವ: ಪರೋಪಕಾರಾರ್ಥಮಿದಂ ಶರೀರಂ ||

ಪರೋಪಕಾರಕ್ಕಗಿಯೇ ವೃಕ್ಷಗಳು ಫಲವೀಯುತ್ತವೆ, ನದಿಗಳು ಹರಿಯುತ್ತವೆ, ಹಸುವು ಹಾಲೀಯುತ್ತದೆ. ಪರೋಪಕಾರಕ್ಕಾಗಿ ತಾನೆ ಈ ನಮ್ಮ ಶರೀರ. ಗೋವಿನ ಹಾಡನ್ನು ಒಮ್ಮೆ ನೆನೆದು ಸ್ವಲ್ಪವಾದರೂ ಅನ್ಯರಿಗೆ ನೆರವಾಗಿ ಬದುಕೋಣ.

ನೀನಾರಿಗಾದೆಯೋ ಎಲೆ ಮಾನವಾ
-- ಕವಿ ಎಸ್‌.ಜಿ.ನರಸಿಂಹಾಚಾರ್ಯ

ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು || ಪಲ್ಲವಿ ||

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲ್ಗೆನೆಯ ಕಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು
ಬಂದು ಮನೆಗೆ ನಾನು ಅಮೃತವನೀವೆ
ಅದನುಂಡು ನನಗೆರಡು ಬಗೆವ ಮಾನವ ನೀನು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಯೆ ಹರಿಗೋಲಾದೆ ರಾಯ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ದೇಹ ಶುದ್ಧಿಗೆ ನಾನು ಪಂಚ ಗವ್ಯವನೀವೆ
ವಾಹನಕ್ಕೆ ಆಗುವನು ಎನ್ನ ಮಗನು
ಊಹೆಗಸದಳವಹುದು ನನ್ನ ಉಪಕಾರಗಳು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||




Friday, August 19, 2011

ಹೇಮಕೂಟದ ಮೇಲೆ


ಹೇಮಕೂಟದ ಮೇಲೆ ಕನ್ನಡದ ಬಾವುಟ
ಹಾರುತಿದೆ ಮಣಿಯದಕೆ ನೆಟ್ಟಿರಲಿ ಶಾಶ್ವತ

ಶ್ರೀವಿಜಯ ನೃಪತುಂಗ ಕನ್ನಡದ ಶತಶೃಂಗ
ಶಿವಮಾರ ದುರ್ವಿನೀತಾದಿಗಂಗ
ಕಂಡು ಕಂಡರಿಸಿದೆ ಕಡಲ ತಡಿದನಕ
ಬಿತ್ತರಂಗೊಂಡಿತೋ ಸಿರಿ ನಾಡಗಡಿಯೆನುತ...೧

ಜೈನ ತೀರ್ಥಂಕರರು ಶೃಂಗಗಿರಿ ಶಂಕರರು
ಕಲ್ಯಾಣದಣ್ಣಗಳು ಶರಣ ಶರಣೆಯರು
ಹರಿದಾಸರೆಲ್ಲರು ಉಸಿರಿತ್ತು ಪೋಷಿಸಿದ
ಹಸಿರುಡೆಯ ಬೆಳೆನಾಡು ಹಸನಾಯಿತೆಂದು .....೨

ಕೆಳದಿ ದ್ವಾರಾವತಿಯು ಕಿತ್ತೂರು ಕೊಡಗು
ಸ್ವಾದಿ ಬೀಜ್ಜಾವರವು ಮಾಗಡಿಯು ಸೋದೆ
ಮಹಿಶ ಹಾಗಲವಾಡಿ ಸುರಪುರವು ಮತ್ತೆ
ವಿಜಯನಗರಕೆ ಶುಭವ ಕೋರುತಿಹುದೆನುವೆ......೩

ಜಯತು ಕನ್ನಡ ನಾಡು ಜಯತು ಮಂಗಲ ಬೀಡು
ಜಯ ಜಯತು ಜಯ ರಾಜರಾಜೇಶ್ವರಿ
ಜಯವು ಕನ್ನಡ ನುಡಿಗೆ ಜಯವು ಕನ್ನಡ ಜನಕೆ
ಜಯ ನಿನಗೆ ಕರುನಾಡ ಬನಶಂಕರಿ
ಜಯ ನಿನಗೆ ಕರುನಾಡ ಬನಶಂಕರಿ

Sunday, July 17, 2011

ಸಂಖ್ಯಾ ಸ್ವಾರಸ್ಯ

ಷಡ್ರಸಗಳು: ಮಧುರ, ಆಮ್ಲ, ತಿಕ್ತ, ಕಟು, ಕಷಾಯ, ಲವಣ
(ಸಿಹಿ, ಹುಳಿ, ಕಹಿ, ಖಾರ, ಒಗರು, ಉಪ್ಪು)
ಷಡೃತುಗಳು: ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ
ಷಡ್ದರ್ಶನಗಳು: ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸಾ, ಉತ್ತರಮೀಮಾಂಸಾ.
ಪ್ರವರ್ತಕರು: ಕಪಿಲ, ಪತಂಜಲ, ಗೌತಮ, ಕಣಾದ, ಜೈಮಿನಿ, ವ್ಯಾಸ
ಷಟ್ಕರ್ಮಗಳು: ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ


ಸಪ್ತಚಿರಂಜೀವಿಗಳು: ಅಶ್ವತ್ತಾಮ, ಬಲಿ , ವ್ಯಾಸ, ಹನುಮಂತ, ವಿಭೀಷಣ, ಕೃಪ, ಪರಶುರಾಮ
ಸಪ್ತಸಮುದ್ರ: ಲವಣ,ಇಕ್ಷು, ಸುರಾ, ಸರ್ಪಿಃ,ದಧಿ, ಕ್ಷೀರ , ಶುದ್ಧೋದಕ
ಸಪ್ತಧಾತುಗಳು: ರಸ, ರಕ್ತ,ಮಾಂಸ, ಮೇದಸ್ಸು, ಅಸ್ಥಿ, ವೀರ್ಯ, ಶುಕ್ರ
ಸಪ್ತಲೋಕಃ: ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಳ
ಸಪ್ತಮಾತೃಕೆಯರು: ಬ್ರಾಹ್ಮೀ, ಮಾಹೇಶ್ವರೀ, ಕೌಮಾರಿ, ವೈಷ್ಣವೀ,ವಾರಾಹೀ,ಇಂದ್ರಾಣೀ, ಚಾಮುಂಡ
ಸಪ್ತಕುದುರೆಗಳು: ಗಾಯತ್ರೀ, ತ್ರಿಷ್ಟುಪ್, ಜಗತೀ, ಅನುಷ್ಟುಪ್, ಪಂಕ್ತಿಃ, ಬೃಹತೀ, ಉಷ್ಣಿಕ್

ಅಷ್ಟದಿಕ್ಪಾಲಕರು: ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ, ಈಶಾನ
ಅವರ ಪತ್ನಿಯರು: ಶಚೀ, ಸ್ವಾಹಾ, ಶ್ಯಾಮಲಾ, ದೀರ್ಘಾ, ಗಂಗಾ, ಅಂಜನಾ, ಚಿತ್ರಲೇಖಾ, ಪಾರ್ವತೀ ದೇವಿಯರು.
ಅಷ್ಟಸಿದ್ಧಿಗಳು: ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ
ಅಷ್ಟಾಂಗಗಳು: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ
ಅಷ್ಟಾವರಣಗಳು: ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ,ರುದ್ರಾಕ್ಷ, ಮಂತ್ರ.

ನವರಸ: ಶೃಂಗಾರ, ವೀರ, ಕರುಣ, ಅದ್ಬುತ, ಹಾಸ್ಯ, ಭಯಾನಕ, ಬೀಭತ್ಸ, ರೌದ್ರ, ಶಾಂತ
ನವರತ್ನ: ವಜ್ರ, ವೈರೂಢ್ಯ,ಗೋಮೇಧಿಕ, ಪುಷ್ಯರಾಗ, ನೀಲ, ಮರಕತ, ಮಾಣಿಕ್ಯ, ಹವಳ, ಮುತ್ತು.
ನವವಿಧ ಭಕ್ತಿ: ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ,ವಂದನ, ದಾಸ್ಯ, ಸಖ್ಯ, ಆತ್ಮಸಮರ್ಪಣ

Monday, June 27, 2011

ಭಾಷೆ ಮತ್ತು ಕ್ರಾಂತಿ




ಈಗೊಮ್ಮೆ ತತ್ತಕ್ಷಣ ಈ ಭಾಷೆಯನು
ಅರ್ಥೈಸಿಕೊಳ್ಳವ ಪ್ರಯತ್ನ ಬಿಟ್ಟು --
ಸುತ್ತ ಆವರಿಸಿದ ರಕ್ತ ಸ್ನಿಗ್ದ
ಗಾಳಿಗೆ ಮಾತನಾಡಲು ಅನುವು ಮಾಡಿಕೊಟ್ಟು,
ಮತ್ತಷ್ಟೂ ಕಿವಿಗಳು ದಂಗೆದ್ದು
ನಮ್ಮ ನಿನ್ನೆಯ ಬುಡ-ಬೇರುಗಳನ್ನು
ಗಟ್ಟಿಯಾಗಿಸುವ ತನಕ.

ಮೂಕ ಜಡ ವಾಸ್ತವಕ್ಕೆ
ಜಂಗಮ ವಾಗ್ಝರಿಯನೇಕೆ ಆರೋಪಿಸಲಿ?
ಬಳಸದ ಬಾಯ್ಗಳ ತುಕ್ಕುಗಟ್ಟಿದ ತುಟಿಗಳಿಗೇಕೆ
ಸಂಧಾನದ ಪಾರುಪತ್ಯವನ್ನೀಯಲಿ?
ಒಳಿತನೆಲ್ಲವ ಹೊರದೂಡಿ ನಡೆವ
ಕಿವುಡು ಕಿವಿಗಳಿಗಾವ ಮಹತ್ವವನೀಯಲಿ?

ಸಾಕು.
ಇನ್ನರ್ಥೈಸುವ ಗೀಳಿಗಿತ್ತಾಯ್ತು ತರ್ಪಣ.
ಗಂಟುಹಾಕಿದ ಹುಬ್ಬು ಮೋರೆಯ
ದಂಗೆದ್ದ ಕಿವಿಳಿಂತಿರಲಿ.
ಬರಡು ಬರಡಾದ ಹೃದಯಗಳಿಗೆನೆನ್ನುವಿರಿ?

Tuesday, May 31, 2011

ಸುಧರ್ಮ - ಸಂಸ್ಕೃತ ದಿನ ಪತ್ರಿಕೆ


ಮೈಸೂರಿನಿಂದ ಪ್ರಕಟವಾಗುವ ಸುಧರ್ಮ ಸಂಸ್ಕೃತ ದಿನ ಪತ್ರಿಕೆ ನಿಜಕ್ಕೂ ಅದ್ವಿತೀಯ . ಕಳೆದ ೪೭ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಪತ್ರಿಕೆಗೆ ವಾರ್ಷಿಕ ಚಂದ ಕೇವಲ ೩೦೦ ರೂಪಾಯಿಗಳು. ಪ್ರಸಕ್ತ ವಿದ್ಯಮಾನಗಳಲ್ಲದೆ ಸುಭಾಷಿತ ಇತ್ಯಾದಿ ಸ್ವಾರಸ್ಯ ಪೂರ್ಣ ಲೇಖನಗಳನ್ನು ಒಳಗೊಂಡ ಸುಧರ್ಮ ಸುಸಂಸ್ಕೃತ ಕುಟುಂಬಗಳ ಒಡನಾಡಿ.

http://sudharma.epapertoday.com



_______

Thursday, April 28, 2011

ಪ್ರಧಾನಿಗೊಂದು ಕಿವಿಮಾತು.


ಮಹಾಭಾರತದಲ್ಲಿ ಗುರು ಶುಕ್ರಾಚಾರ್ಯರು ವೃಷಪರ್ವನಿಗೆ ಉಪದೇಶಿಸುವ ಸಂದರ್ಭ. ಗುರುಗಳು ಹೀಗೆನ್ನುತ್ತಾರೆ -- " ರಾಜನ್! ಅಧರ್ಮವನಾಚರಿಸಿದರೆ ಅದು ಹಸುವಿನಂತೆ ಕೂಡಲೆ ಫಲವನ್ನೆಯುವುದಿಲ್ಲ. ಅದು ಮೆಲ್ಲನೆ ತಿರುಗಿ, ಅಧರ್ಮಿಯ ಬುಡವನ್ನೇ ಕದಿದುಹಾಕುತ್ತದೆ.

ನಾಧರ್ಮಶ್ಚರಿತೋ ರಾಜನ್ ಸದ್ಯಃ ಫಲತಿ ಗೌರಿವ |
ಶನೈರಾವರ್ತ್ಯಮಾನೋ ಹಿ ಕರ್ತುರ್ಮೂಲಾನಿ ಕೃತಂತಿ ||
-- ಮಹಾಭಾರತ, ಆದಿ, ೮೦-೨

ಪ್ರಸ್ತುತ ರಾಷ್ಟ್ರೀಯ ರಾಜಕಾರಣದಲ್ಲಿ ಹಗರಣಗಳದ್ದೆ ಕಾರುಬಾರು. ಲಕ್ಷಕೋಟಿ ಹಗರಣಗಳು ಸರ್ವೇಸಾಮಾನ್ಯವಾಗಿವೆ. ೨ಜಿ ಹಗರಣ, ಕಾಮನ್ ವೆಲ್ಥ್ ಹಗರಣ (ಸಮೂಹ ಐಶ್ವರ್ಯ!), "ಆದರ್ಶ" ಹಗರಣ, ಹೀಗೆ ಒಂದೇ, ಎರಡೇ... ರಾಜನಾದವನು ಸ್ವತಃ ಸದ್ಚಾರಿತ್ರನು, ಆದರೆ ಮಂತ್ರಿ ವರ್ಗದಲ್ಲಿ ಭ್ರಷ್ಟರು ಎಂದು ಸಮಜಾಯಿಶಿ ಹೇಳಿ , ಭ್ರಷ್ಟ್ರಾಚಾರದ ವಿರುದ್ದ ಭುಗಿಲೆದ್ದ ಬೆಂಕಿಯನ್ನು ತಣ್ಣಗಾಗಿಸಳು ಸಾಧ್ಯವಿಲ್ಲ. ಅದು ನಾಯಕ ಲಕ್ಷಣವಲ್ಲ. ರಾಜನೀತಿಯ ಬಗ್ಗೆ ರಾಮಾಯಣ ಹೀಗೆನ್ನುತ್ತದೆ --

ರಾಜಾ ಧರ್ಮಶ್ಚ ಕಾಮಶ್ಚ ದ್ರವ್ಯಾಣಾಂ ಚೋತ್ತಮೋ ನಿಧಿಃ|
ಧರ್ಮ ಶುಭಂ ವಾ ಪಾಪಂ ವಾ ರಾಜಮೂಲಂ ಪ್ರವರ್ತತೇ ||
- ರಾಮಾಯಣ, ಅರಣ್ಯ, ೫೦-೧೦

ರಾಜನೇ ಧರ್ಮಕಾಮಗಳಿಗೆ ಪ್ರವರ್ತಕ, ಅವನೇ ಅರ್ಥಕ್ಕೆ ನಿಧಿ. ಧರ್ಮವಾಗಲಿ, ಒಳ್ಳೆಯದಾಗಲಿ, ಕೆಟ್ಟದಾಗಲಿ - ರಾಜನ ಪ್ರೇರಣೆಯಿಂದ ನಡೆಯುತ್ತದೆ.

ರಾಜಮೂಲವು ಇಂತಿರುವಾಗ ಸುತ್ತ ಹರಡಿರುವ ಭ್ರಷ್ಟ ಸಂತತಿಯನ್ನು ತಮ್ಮದೆಂದು ಸ್ವೀಕರಿಸಿ, ಅದನ್ನು ಬುಡಸಮೇತ ಕಿತ್ತೊಗೆಯುವ ನಿಟ್ಟಿನಲ್ಲಿ ರಾಜಸಂಕಲ್ಪವಾಗಲಿ.

Wednesday, March 23, 2011

ನಮನ



ಇಂದು ೨೩ನೇ ಮಾರ್ಚ್ ೨೦೧೧, ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರ ಬಲಿದಾನ ದಿನ. ಎಲ್ಲೆಡೆ ಬ್ರಷ್ಟಾಚಾರ, ಅರಾಜಕತೆ, ನೈತಿಕತೆಯ ಅಭಾವ ಕಾಡುತ್ತಿರುವ ಪ್ರಸ್ತುತ ಸಂಧರ್ಭದಲ್ಲಿ, ಈ ಮಹನೀಯರ ಬಲಿದಾನದ ಕಥೆ ನಮ್ಮ ದೇಶದ ಯುವಕರನ್ನು ಒಳ್ಳೆಯ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಲಿ. ನಮ್ಮ ನೇತಾರರಿಗೆ ’ತ್ಯಾಗ’ ಎಂದರೆ ಏನು ಎಂಬುದರ ಬಗ್ಗೆ ನೆನಪಿಸಲಿ.

Wednesday, March 02, 2011

ಲವ ಲೇಶ

ದಮ್ಮಯ್ಯ ! ನನ್ನ ಬಳಿಗೆ ಸಂಪೂರ್ಣ ಸತ್ಯವನು ತರಲು ಬೇಡಿರಯ್ಯ
ದಾಹವೆಂದೆನಷ್ಟೇ, ಇಡೀ ಸಮುದ್ರವನ್ನೇ ಕೇಳಲಿಲ್ಲ.
ಬೆಳಕನರಿಸಿದೆ, ಸಮಸ್ತ ತೇಜೋ ಮಂಡಲವಲ್ಲ.
ಆದರೆ ಸುಳುಹು ತರಲಾರದಿರಿ. ಒಂದು ಚುಕ್ಕಿ .... ಎಳ್ಳಷ್ಟು ...ಕಿಂಚಿತ್ತು....
ಬೆಳ್ಳಕ್ಕಿ ನೀರ್ದಾನಿಯಿಂದೆರೆಡು ಗುಟುಕು ಹೆಕ್ಕಿ ಹಾರುವ ಹಾಗೆ
ತೇವದೊಡಗೂಡಿ ಲವ ಲೇಶ ಹೀರಿ ಗಾಳಿ ಸಾಗಿಸುವ ಹಾಗೆ

Saturday, February 12, 2011

ಶ್ರೀಕರ ಆಮೋದಿನಿ




ನಂಜನಗೂಡಿನ ಸದ್ವೈದ್ಯಶಾಲಾ ಕರುನಾಡಿನಲ್ಲಿ ಮನೆಮಾತು. ಆಯುರ್ವೇದ-ಪ್ರಕೃತಿಚಿಕಿತ್ಸೆಗಳನ್ನು ಮನೆಮನೆಗೆ ತಲಪಿಸುವಲ್ಲಿ ಶ್ರೀಯುತರಾದ ಬಿ.ವಿ.ಪಂಡಿತರ ಸೇವೆ ಮಹತ್ತರವಾದುದು. ಸದ್ವೈದ್ಯಶಾಲೆಯಿಂದ ಗಾಯಕ-ವಾಚಕ ವರ್ಗಕ್ಕೆ ವರದಾನದಂತಿರುವುದು ಶ್ರೀ ಕರ ಆಮೋದಿನಿ . ಆಮೋದಿನಿಯ ಗುಳಿಗೆ ಸೇವಿಸುವುದರಿಂದ ಧ್ವನಿ ತೆರೆದು ಕೊಳ್ಳುತ್ತದೆ. ಕಚೇರಿಯ ಅಥವಾ ಪ್ರವಚನದ ಮುಂಚೆ ಒಂದು ಗುಳಿಗೆ ಬಾಯಿನಲ್ಲಿ ಹಾಕಿಕೊಂದರೆ ಸುಮಾರು ಹೊತ್ತು ಹಾಡಿ-ಮಾತನಾಡಿದರು ಗಂಟಲಿನಲ್ಲಿ ಆಯಾಸ ಅಥವಾ ನೋವು ತಿಳಿಯುವುದಿಲ್ಲ. ಅದಲ್ಲದೆ ಸ್ವರವು ಸರಿಯಾಗಿ ಹೊರಹೊಮ್ಮುವಂತೆ ಸಹಕಾರವನ್ನೀಯುತ್ತದೆ. ಆದ್ದರಿಂದಲೆ ಬಹಳಷ್ಟು ಗಾಯಕರ ಕೈಚೀಲಗಳಲ್ಲಿ ಆಮೋದಿನಿ ಶೋಭಿಸುತ್ತಿರುತ್ತದೆ. ಮಧುಕ, ಕುಂಕುಮಕೇಸರ ಗಳನ್ನೊಳಗೊಂಡ ಶ್ರೀಕರ ಆಮೋದಿನಿ ಸ್ವರಬೇಧ, ಸ್ವರಭಂಗ, ನಾಸಗಥ ರೋಗ, ಗಲರೋಗಗಳಿಗೆ ರಾಮಬಾಣ.
ಶ್ರೀಕರ ಆಮೋದಿನಿ - ಗಾಯಕ ವಾಚಕರ ಪಾಲಿನ ಸಂಜೀವಿನಿ.

Friday, February 11, 2011

ಒಂದು ಹಂತದ ನಂತರ

ತೃಪ್ತಿ ತರಿಸದ
ಸಾವಿರಾರು ಸಾಧನೆಗಳನು
ಹೇರಿ, ಗುಡ್ಡೆ ಹಾಕಿಕೊಂಡ ನಂತರ...

ತಿದ್ದಿಕೊಳಲು ಸಾಲ್ಗಟ್ಟಿ ನಿಂದ ಹಿಂದಿನ
ಸೋಲುಗಳ ಸರಪಳಿಯ ನಡುವಿರುವ ಅಂತರ ....

ಮುಂಬರುವ ಸೋಲುಗಳನು
ಮುತುವರ್ಜಿಯಿಂದ ಆಯ್ದು, ಹೆಕ್ಕಿ
ಸೋಲನಪ್ಪಿಕೊಳಲು ಸಜ್ಜಾಗುತಿರುವೆವೆ ನಿರಂತರ ? ..
ಒಂದು ಹಂತದ ನಂತರ... ಒಂದು ಹಂತದ ನಂತರ