Monday, September 29, 2014

ಅಮೃತವಚನ




ಪಂಡಿತ್ ಜಿ ಹೇಳಿದ ಅಮೃತವಚನ

ಜಗತ್ತು ಸಂಘರ್ಷಾತ್ಮಕವಲ್ಲ, ಸ್ರುಜನಾತ್ಮಕ. ಬೀಜವು ವೃಕ್ಷ ರೂಪದಲ್ಲಿ ಹೊರಬರುವುದು ಸಂಘರ್ಷದ ಉದ್ದೇಶದಿಂದಲ್ಲ, ತನ್ನ ಸ್ವಂತದ ವಿಕಾಸಕ್ಕಾಗಿ, ಸಾಕ್ಷಾತ್ಕಾರಕ್ಕಾಗಿ. ಅದರ ಜೀವನೋದ್ದೇಶವು ಇನ್ನಾವುದರ ವಿನಾಶವೂ ಅಲ್ಲ. ಆದರೆ, ಇನ್ನೊಂದಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುವುದೇ ಆಗಿದೆ. ಸಂಪೂರ್ಣ ಸೃಷ್ಟಿಯ ಪರಸ್ಪರ ಸಹಕಾರದಿಂದಲೇ ಮುಂದುವರಿಯುತ್ತದೆ. ಆದರ ಆಧಾರವು ಸಂಘರ್ಷವಲ್ಲ. ಸಹಯೋಗ. ಪಂಚ ಮಹಾಭೂತಗಳು ಜೊತೆಗೂಡುವುದು ಇನ್ನಾವುದರೊಂದಿಗೆ ಸಂಘರ್ಷ ಮಾಡಲೆಂದಲ್ಲ. ಆದರೆ ತಮ್ಮ ಪ್ರಕೃತಿಗೆ ತಕ್ಕಂತೆ ನಡೆದುಕೊಂಡು ಆ ಮೂಲಕ ಸೃಷ್ಟಿಯ ಸಾರ್ಥಕತೆಯ ಇಚ್ಚೇಯನ್ನು ಪೂರ್ಣ ಮಾಡಲೆಂದು!

Sunday, July 27, 2014

ಮುಖ ನೋಡಿ ಮಣೆ ಹಾಕು





ಇತ್ತೀಚೆಗೆ  ಮುದ್ರಣ ತಂತಜ್ಞಾನ ಪ್ರಗತಿ ಹೊಂದಿದಂತೆಲ್ಲಾ ಪುಸ್ತಕಗಳ ಮುಖಪುಟ ವಿನ್ಯಾಸ ಅದೆಷ್ಟು ಅಂದವಾಗಿರುತ್ತದೆಂದರೆ ಮುಖ ಪುಟ ನೋಡುತ್ತಲೇ ಪುಸ್ತಕ ಕೊಳ್ಳಬೇಕೆಂಬ ಮೋಹ ಹುಟ್ಟುತ್ತದೆ. ಕೊಂಡ ಪುಸ್ತಕ ಓದುತ್ತೇವೋ ಇಲ್ಲವೋ ಆ ಸುಂದರ ವಸ್ತುವನ್ನು ನಮ್ಮದಾಗಿಸಿ ಕೊಳ್ಳಬೇಕೆಂಬ ಮಹಾದಾಸೆ ಪುಸ್ತಕವನ್ನು ಕೊಳ್ಳುವಂತೆ ಮಾಡುತ್ತದೆ. ಇದು ಒಂದು ರೀತಿ ಸಾತ್ವಿಕ ಮೋಹ.

ಆಸ್ಟ್ರೇಲಿಯಾದ ಸಿಡ್ನಿ ಡೌನ್ ಟೌನ್ ನ (Downtown) ಪಿಟ್ಟ್ ಸ್ಟ್ರೀಟ್ ನಲ್ಲಿ (Pitt St.) ಎಲಿಜಬೆತ್ ಪುಸ್ತಕದ ಅಂಗಡಿ  ಇದೆ.  "ಪುಸ್ತಕವನ್ನು ಮುಖಪುಟದಿಂದ ಅಳಿಯಬೇಡಿ"  (Do not judge a book by its cover) - ಎಂಬ ಶೀರ್ಷಿಕೆಯ ಬೋರ್ಡ್ ನೊಂದಿಗೆ ಒಂದು ವಿನೂತನ ಪ್ರಯೋಗವನ್ನು ಅಲ್ಲಿ ಕಂಡೆ.  ಒಂದು ಪುಸ್ತಕವನ್ನು ಅಂದವಾಗಿ  wrap ಮಾಡಿ, cover ನ ಮೇಲೆ ಪುಸ್ತಕವನ್ನು ವಿವರಿಸುವ ಕೆಲವು ಪದಗಳನ್ನು ಬರೆಯಲಾಗಿತ್ತು. ಉದಾಹರಣೆಗೆ -- "ಇತಿಹಾಸ", " ಎರಡನೇ ವಿಶ್ವ ಯುದ್ಧ", "ತಂತ್ರಜ್ಞಾನ", "ಕಾಂಗರೂ" ಇತ್ಯಾದಿ. ಪುಸ್ತಕದ ಹೆಸರಾಗಲಿ, ಲೇಖಕನ ಹೆಸರಾಗಲೀ, ಮುಖಪುಟವಾಗಲಿ ತೋರಿಕೊಳ್ಳುವುದಿಲ್ಲ. ಪುಸ್ತಕದ ಒಳಗಿನ ವಿಷಯದ ಆಧಾರದ ಮೇಲೆ ಖರೀದಿ ನಡೆಯ ಬೇಕು. ಈ ರೀತಿ ಮಾಡುವುದರಿಂದ ಕೊಂಡ ಪುಸ್ತಕ ಯಾವುದಿರ ಬಹುದು ಎಂಬ ಕುತೂಹಲ ಮೂಡುತ್ತದೆ. ಪುಸ್ತಕ ಕೊಳ್ಳುವ ಪ್ರಕ್ರಿಯೆಯಲ್ಲಿ ಅತಿಶಯ ಸಂತೋಷವು ಆಗಿ ಬರುತ್ತದೆ. 

Thursday, June 26, 2014

ಏಕಾತ್ಮಮಾನವತೆ

ಸೃಷ್ಟಿಯಲ್ಲಿ ಸಂಘರ್ಷ  ಸ್ಪರ್ಧೆಗಳು ಇರುವಂತೆ ಸಹಕಾರ ಸಹಯೋಗಗಳೂ ಇವೆ. ಜಗತ್ತಿನ ವಿವಿಧ ಅಂಗಗಳ ಪರಸ್ಪರ ಪೂರಕತೆಯನ್ನು ಮನಗಂಡವರು ಭಾರತೀಯ ದಾರ್ಶನಿಕರು. ವ್ಯಕ್ತಿಯೂ ಸಮಾಜವೂ ವಿವಿಧ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಅನುಸರಿಸುವ ಕ್ರಮಗಳು ಘರ್ಷಣೆಗೆ ಎಡೆಗೊಡದಂತೆ ನೋಡಿಕೊಳ್ಳುವ ಸೂತ್ರವೇ ಧರ್ಮ. ವ್ಯಕ್ತಿ ಸ್ವಾರ್ಥಕ್ಕೆ ಪ್ರತಿಯಾದ ಸಮಷ್ಟಿ ದೃಷ್ಟಿಯೇ ಧರ್ಮ -- ಏಕಾತ್ಮಮಾನವತೆ

Wednesday, April 30, 2014

ಸಂಗೀತ ಜ್ಞಾನ

ತ್ರಿವರ್ಗ ಫಲದಾಃ ಸರ್ವೇ ದಾನಯಜ್ಞ ಜಪಾದಯಃ ।
ಏಕಂ ಸಂಗೀತ ವಿಜ್ಞಾನಂ ಚತುರ್ವರ್ಗ ಫಲಪ್ರದಂ ।।

ಶಿವಸರ್ವದಲ್ಲಿ ಹೀಗೆಂದಿದ್ದಾರೆ :
ದಾನ ಮಾಡುವುದು, ಯಜ್ಞ ಯಾಗಾದಿ ಕರ್ಮಾಚರಣೆ, ಜಪ ರೂಪದಲ್ಲಿ ಮಂತ್ರ ಪುರಸ್ಚರಣೆ -- ಇವುಗಳಿಂದ ಧರ್ಮ, ಅರ್ಥ , ಕಾಮ -- ಈ ಮೂರು ಫಲಗಳು ಲಭ್ಯವಾಗುವವು. ಸಂಗೀತ ಜ್ಞಾನವಾದರೋ ಈ ಮೂರರ ಜತೆಗೆ ಮೋಕ್ಷವನ್ನೂ ಕೊಡಬಲ್ಲದು 

Sunday, March 30, 2014

ಕಾಯೋ ಶ್ರೀ ಗೌರಿ ಕರುಣಾಲಹರಿ



ಕಾಯೋ ಶ್ರೀ ಗೌರಿ ಕರುಣಾಲಹರಿ
ತೊಯಜಾಕ್ಷಿ ಶಂಕರೀಶ್ವರಿ
ವೈಮಾನಿಕ ಭಾಮಾರ್ಚಿತ ಕೊಮಲಕರ ಪಾದೇ
ಶ್ರೀಮಾನ್ವಿತ ಭೂಮಾಸ್ಪದೆ ಕಾಮಿತ ಫಲದೇ .. ||||
ಶುಂಬಾದಿಮ ದಾಮ್ಬೋನಿಧಿ ಕುಮ್ಬಜ ನಿಭ ದೇವಿ
ಜಮ್ಭಾಹಿತ ಸಂಭಾವಿತೆ ಶಾಂಭವಿ ಶುಭವೀ ||||
ಶ್ರೀ ಜಯಚಾಮುಂಡಿಕೆ ಶ್ರೀ ಜಯಚಾಮೆಂದ್ರ
ನಾಮಾಂಕಿತ ಭೂಮೀಂದ್ರ ಲಲಾಮನ ಮುದದೆ ||||

Thursday, January 30, 2014

ಶ್ರೀ ಕೃಷ್ಣ ಸ್ತುತಿ



ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮಃ ದಶಾಶ್ವಮೇಧಾವ ಭ್ರುತೇನ ತುಲ್ಯಃ ।
ದಶಾಶ್ವಮೇಧೀ ಪುನರೇತಿ ಜನ್ಮ ಕೃಷ್ಣ  ಪ್ರಣಾಮಿ ನ ಪುನರ್ಭವಾಯ ।।

 ಶ್ರೀ ಕೃಷ್ಣನಿಗೆ ಮಾಡಿದಂತಹ ಒಂದು ಪ್ರನಾಮವು ಹತ್ತು ಅಶ್ವಮೇಧ ಯಾಗಗಳ ಅವಭೃತ ಸ್ನಾನಕ್ಕೆ ಸಮಾನವಾಗಿದೆ. ಆದರೆ  ಈ ಅಶ್ವಮೇಧ ಯಾಗದ ಪುಣ್ಯ ಭೊಗಿಸಿದ ನಂತರ ಮತ್ತೆ ಸಂಸಾರ ಬಂಧನಕ್ಕೆ  ಬರುತ್ತಾರೆ. ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿದವರು ಮತ್ತೆ ಸಂಸಾರ ಬಂಧನಕ್ಕೆ ಒಳಗಾಗುವುದಿಲ್ಲ.

Friday, November 29, 2013

ಸನಾತನ ಧರ್ಮ

 ಮಹಾಲಕ್ಷ್ಮೀ ಅಷ್ಟಕ, ಶ್ರೀ ಗುರು ಅಷ್ಟಕ, ಕಾಲಭೈರವಾಷ್ಟಕ ಇತ್ಯಾದಿ ಹಲವಾರು ಅಷ್ಟಕಗಳನ್ನು ಧಾರ್ಮಿಕ ಸಾಹಿತ್ಯದಲ್ಲಿ ಹೇರಳವಾಗಿವೆಯಷ್ಟೇ. ಅದೇ ರೀತಿ ಚಿರಂತನ, ಪ್ರಾಚೀನ ಹಾಗು ಅನಾದಿಯಾದ ಸನಾತನ ಧರ್ಮದ ಕುರಿತು ಒಂದು ಅಷ್ಟಕವನ್ನು ವೇದಾಂತ ಚಕ್ರವರ್ತಿ. ವಿದ್ವಾನ್ ಕೆ. ಜಿ .ಸುಬ್ರಾಯಶರ್ಮ ಅವರು ರಚಿಸಿರುವ  "ಧರ್ಮ- ವೇದ - ಬ್ರಹ್ಮ" ಎಂಬ ಪುಸ್ತಿಕೆಯಲ್ಲಿ ನೋಡಿದೆ. ಬಹಳ ಸ್ವಾರಸ್ಯಕರವಾದ, ಉಪಯುಕ್ತವಾದ ಈ ಅಷ್ಟಕವನ್ನು ಓದುಗರಲ್ಲಿ ಹಂಚಿ ಕೊಳ್ಳುತ್ತಿದ್ದೇನೆ.

ಅನಾದಿನಿಧನಂ  ಶಾಂತಂ ಸರ್ವಪ್ರಾಣಿ ಶುಭಂಕರಂ
ಋಷಿ ಸಂಪೂಜಿತಂ ದಿವ್ಯಂ ಭಜೇ ವೇದಂ ಸನಾತನಂ ॥೧॥

ಸರ್ವಜ್ಞಂ ಸರ್ವವರದಂ ಸರ್ವಶಾಂತಿಕರಂ ಪ್ರಭುಂ ।
ಸರ್ವಶಾಸ್ತ್ರಸದಾಧಾರಂ ಭಜೇ ವೇದಂ ಸನಾತನಂ ॥೨॥

ಪ್ರವೃತ್ತಿ ಧರ್ಮವಕ್ತಾರಂ ತಥಾ ಭ್ಯುದಯದಾಯಕಂ
ಸರ್ವಸಂತ್ಪ್ರದಂ ಕಾಂತಂ ಭಜೇ ವೇದಂ ಸನಾತನಂ ॥೩॥

ನಿವ್ರುತ್ತಿಮಾರ್ಗವಕ್ತಾರಂ ನಿತ್ಯಾನಂದಪ್ರದಾಯಕಂ ।
ಸರ್ವ ಸಂನ್ಯಾಸಿ ಸಂಪೂಜ್ಯಂ ಭಜೇ ವೇದಂ ಸನಾತನಂ ॥೪॥

ವಿಶ್ವಾಧಾರಾಂ ಧರ್ಮಧರಂ ಧರ್ಮಬ್ರಹ್ಮ ಪ್ರಭೊಧಕಂ
ಹಿರಣ್ಯಗರ್ಭ ಗರ್ಭಸ್ಥಂ ಭಜೇ ವೇದಂ ಸನಾತನಂ ॥೫ ॥

ನಿರ್ದೋಷಂ ಸಗುಣಂ ನಿತ್ಯಂ ಸರ್ವಪಾಪಹರಂ ಶುಭಂ
ಶ್ರುತ್ಯಾಮ್ನಾಯಾದಿನಾಮಾನಂ ಭಜೇ ವೇದಂ ಸನಾತನಂ ॥೬ ॥

ಪರಬ್ರಹ್ಮ ಸ್ವರೂಪಂ ತಂ ಸರ್ವವೇದಾಂತ ವಂದಿತಂ
ಅಪೌರುಷೇಯಂ ಸರ್ವಜ್ಞಂ ಭಜೇ ವೇದಂ ಸನಾತನಂ ॥೭॥

ನಿತ್ಯಶುದ್ಧಂ ನಿತ್ಯಬುದ್ಧಂ ನಿತ್ಯಸತ್ಯಸ್ವಾರೂಪಿಣಂ
ನಿತ್ಯಾನಂದ ಪ್ರದಾತಾರಂ ಭಜೇ ವೇದಂ ಸನಾತನಂ ॥೮॥





Tuesday, October 29, 2013

ಗೀತಾಂಜಲಿ

ರಾಜಕುಮಾರನ ಪೋಷಾಕು ಧರಿಸಿದ ಪುಟ್ಟ ಕಂದಮ್ಮನಿಗೆ ಕೊರಳ ಸುತ್ತಲೂ ರತ್ನಹಾರದ ಸರಪಳಿ. ಆಡಳದುವೆ ತೊಡರು.ಪ್ರತಿ ಹೆಜ್ಜೆಯನ್ನು ಅಂಕುಷದಲ್ಲಿಡುವ ಆಡಂಬರ .   ರಾಜ ಪೋಷಾಕು ಎಲ್ಲಿ ಕೊಳೆಯಾಗುವುದೋ , ಎಲ್ಲಿ ಸುಕ್ಕುಗಟ್ಟುವುದೋ ಎಂಬ ಅಳುಕಿನಲ್ಲಿ ಕದಲಿಕೆಗೆ ಕೂಡ ಭೀತಿ .. ಹೇ ಮಾತೆ, ಭೂಮಿಯ ಪವಿತ್ರ ಧೂಳೀ ಕಣಗಳಿಂದ ದೂರವಿಡುವ ಭವ್ಯ ಬಂಧನದಿಂದ ಏನು ಒಳಿತು. ಜೀವಿತದ ಮಹಾಮೇಳಕ್ಕೆ ಪ್ರವೇಶವನ್ನೇ ಕಸಿದುಕೊಳ್ಳುವ ಸಿರಿವಂತಿಕೆ ಭಾಗ್ಯವಾದೀತೇ? 

Sunday, September 29, 2013

ಧರ್ಯ ಮತ್ತು ನಿಯಮ

ವಾಲ್ಮೀಕಿ ರಾಮಾಯಣದ ಅರಣ್ಯ ಕಾಂಡ. ಅಯೋಧ್ಯೆಯಿಂದ ಅರಣ್ಯದೆಡೆಗೆ ಶ್ರೀ ರಾಮಚಂದ್ರ ತೆರಳುತ್ತಿರುವ ಸಂದರ್ಭ.
ಕೌಸಲ್ಯೆಯು ಶ್ರೀರಾಮನಿಗೆ ಮಂಗಳಾಶೀರ್ವಾದವನ್ನು ಮಾಡುತ್ತ -- "ಯಾವ ಧರ್ಮವನ್ನು ನೀನು ಧೈರ್ಯದಿಂದಲೂ, ನಿಯಮದಿಂದಲೂ ಕಾಪಾಡುತ್ತಿರುವೆಯೊ ಆ ಧರ್ಮವೇ ನಿನ್ನನ್ನು ಕಾಪಾಡಲಿ."  ಎಂಬ ಮಾತೃ ವಾಕ್ಯ ಗೋಚರಿಸುತ್ತದೆ.

ಯಂ ಪಾಲಯಸಿ  ಧರ್ಮಂ ತ್ವಂ ಧೃತ್ಯಾ ಚ ನಿಯಮೇನ ಚ।
ಸ ವೈ ರಾಘವಶಾರ್ದೂಲ ಧರ್ಮಸ್ತ್ವಾಮಭಿರಕ್ಷತು ॥

ಧರ್ಯ ನಿಯಮ ಇವುಗಳಿಗೆ ಬೆಲೆ ಬರುವುದು.

Saturday, August 31, 2013

ರಾಮಾಯಣ ಮಾಹಾತ್ಮ್ಯಂ



ಶ್ರೀರಾಮಾಯಣಹೇಮಾದ್ರಿರ್ನೃಸತ್ತ್ವಮಣಿಶೇಖರಃ ।
ಧರ್ಮ ಸ್ರವಂತೀಮಹಿತಃ ಶೋಭತೇ ಸರ್ವಶೋಭನಃ ॥ 

Saturday, June 29, 2013

ನ್ಯಾಯ ಸ್ವಾರಸ್ಯ



ಸಂಸ್ಕೃತ ಭಾಷಾ ಸಾಗರದಲ್ಲಿ ಮಾತನ್ನು ಮಾಣಿಕ್ಯ ಮಾಡುಲು  ಸಮರ್ಥವಾದ  ಹಲವಾರು "ನ್ಯಾಯ" ಗಳು ಇವೆ. ಉದಾಹರಣೆಗೆ ಹಂಸಕ್ಷೀರ ನ್ಯಾಯ, ಕಾಕತಾಳೀಯ ನ್ಯಾಯ, ಮಂಡೂಕ ತೋಲನ ನ್ಯಾಯ ಇತ್ಯಾದಿ. ನಮ್ಮ ಆಡು ಭಾಷೆಯಲ್ಲಿ ಪ್ರಯೋಗಿಸುವ  ಈ ನ್ಯಾಯಗಳಿಂದ ಭಾಷೆಗೆ ಒಂದು ರೀತಿ ಸ್ವಾರಸ್ಯ, ಮೆರುಗು ದೊರೆಯುವುದರಲ್ಲಿ ಸಂಶಯವೇ ಇಲ್ಲ. ಉಪಮೆಗಳ ಸಮ್ಯಗ್ಪ್ರಯೋಗದಿಂದ ಅರ್ಥ ಸ್ಪಷ್ಟತೆ ಕೂಡ ಉಂಟಾಗುತ್ತದೆ. ಕೆಲವು ನ್ಯಾಯಗಳು ಆಡುಭಾಷೆಯ ಹಾಸು ಹೊಕ್ಕಾಗಿವೆ.

ಈಗ ಒಂದೆರಡು ನ್ಯಾಯಗಳನ್ನು ಪರಿಶೀಲಿಸೋಣ:
ಪೀಲು ಪತ್ರ ಫಲ ನ್ಯಾಯ: ಪೀಲು ಎಂಬುದು ಭರತವರ್ಷದಲ್ಲಿ ಕಂಡು ಬರುವ ಒಂದು ಸಸ್ಯ ಜಾತಿಯ ಪ್ರಬೇಧ. ಪೀಲುವಿನಲ್ಲಿ ಎಲೆಗಳು ಬಹಳ ಕಹಿ. ಆದರೆ ಹಣ್ಣುಗಳು ಮಾತ್ರ ಅಷ್ಟೇ ಸಿಹಿ. ಹೀಗೆ ಒಂದೇ ತರುವಿನಲ್ಲಿ ಸಿಹಿ ಮತ್ತು ಕಹಿ ಅಡಕವಾಗಿರುವಾಗ ಪೀಲು ಪತ್ರ ಫಲ ನ್ಯಾಯ ವನ್ನು ಉಲ್ಲೇಖಿಸುತ್ತೆವೆ. ರಾವಣ ವಿಭೀಷಣರು ಒಂದೇ ತಾಯಿ ಮಕ್ಕಳಾಗಿಯೂ ವ್ಯತಿರಿಕ್ತ ಮನೋಭಾವದವರಾಗಿದ್ದ ಹಾಗೆ.


Tuesday, April 30, 2013

ಶಾಸ್ತ್ರ ಮತ್ತು ಕಲೆ

ಇರುವ ಪದಾರ್ಥಗಳ ಸ್ವರೂಪವನ್ನು ತಿಳಿಯುವುದು ಶಾಸ್ತ್ರ, ಹೊಸದನ್ನು ಸೃಷ್ಟಿ ಮಾಡುವುದು ಕಲೆ.

 - ರಾಳ್ಳಪಲ್ಲಿ  ಅನಂತ ಕೃಷ್ಣ ಶರ್ಮ

Sunday, March 31, 2013

ದಕ್ಷಿಣಾಮೂರ್ತಿ ಸ್ತೋತ್ರ

 ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಸ್ತೋತ್ರ ಸಾಹಿತ್ಯದಲ್ಲಿ ಭಕ್ತಿ ಪ್ರಧಾನ ಹಾಗು ವಿಚಾರಪ್ರಧಾನ ಎಂಬ ವಿಂಗಡನೆ ಸಾಧ್ಯ. ವಿಚಾರ ಸಾಹಿತ್ಯದಲ್ಲಿ ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಮುಖ್ಯ ಹಾಗು ಅತಿಶ್ರೇಷ್ಟ ಎಂದು ಪರಿಗಣಿಸಬಹುದು ಇದರಲ್ಲಿ ಕೇವಲ ಹತ್ತು ಶ್ಲೋಕಗಳು ಇದ್ದರೂ ಗಹನ ಅರ್ಥಗರ್ಭಿತವಾಗಿದ್ದು, ವಿದ್ವಾಂಸರು ಹಲವು ತಿಂಗಳುಗಳ ಕಾಲ ಈ ಸ್ತೋತ್ರದ ಪ್ರವಚನಗಳನ್ನು ನೀಡಿದ್ದಾರೆ.ಪ್ರಮುಖವಾದ ಹತ್ತು ಉಪನಿಷತ್ತುಗಳ ಸಾರವೇ ಇದರಲ್ಲಿ ಅಡಕವಾಗಿದ್ದು, ಇದು ವೇದಾಂತ ವಿಷಯದ ಆಗರವಾಗಿದೆ. ಮಾಂಡೂಕ್ಯೋಪನಿಷತ್ತಿನ ಅವಸ್ಥಾತ್ರಯ ಪಕ್ರಿಯೆ, ಬೃಹದಾರಣ್ಯಕದ ಸರ್ವಾತ್ಮ ಭಾವ, ಛಾಂದೋಗ್ಯದ ಕಾರ್ಯಕಾರಣ ಪಕ್ರಿಯೆ, ತತ್ವಮಸಿ ವಾಕ್ಯಾರ್ಥ ವಿಚಾರ  ಸಾಮಾನ್ಯ ವಿಶೇಷ ಪ್ರಕ್ರಿಯೆ -- ಈ ವಿಚಾರಗಳು ವರ್ಣಿತವಾಗಿವೆ.

ವಿ. ಸೂ : ಮಾರ್ಚ್ ೧೭ ರಿಂದ ಮಾರ್ಚ್ ೨೧ ರ ವರೆಗೆ  ಸಚ್ಚಿದಾನಂದ ಅದ್ವೈತಾಶ್ರಮದ  ಶ್ರೀ ಶ್ರೀ ಅದ್ವಯಾನಂದೇದ್ರ ಸರಸ್ವತೀ ಸ್ವಾಮಿಗಳು  ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಯಜ್ಞ ಪಂಚಾಹ ಕಾರ್ಯಕ್ರಮವನ್ನು ರಸಧ್ವನಿ ಕಲಾ ಕೇಂದ್ರದಲ್ಲಿ ನಡೆಯಿತು

Tuesday, February 26, 2013

ಜಯೋಸ್ತುತೇ ಜಯೋಸ್ತುತೇ


ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್ ದೇಹ ತ್ಯಾಗ ಮಾಡಿದ ದಿನ : ೨೬ - ಫೆಬ್ರವರಿ - ೧೯೬೬

ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ|
ಪಿತೃಭೂ ಪುಣ್ಯ ಭೂಶ್ಚೈವ ಸವೈ ಹಿಂದು ರಿತಿಸ್ಮೃತಃ ||

"ಯಾರು ಭಾರತವನ್ನು ತನ್ನ ಪಿತೃಭೂಮಿ, ಮಾತೃಸ್ವರೂಪ, ಪುಣ್ಯಭೂಮಿ ಅಂತ ಭಾವಿಸುತ್ತಾನೋ, ಅವನು ಎಲ್ಲೇ ಇರಲಿ ಆತ ಹಿಂದೂ, ಭಾರತೀಯ"

Wednesday, January 30, 2013

ತ್ಯಾಗರಾಜಂ ಭಜೆ

ವ್ಯಾಸೋ ನೈಗಮಚರ್ಚಯಾ ಮ್ರುದುಗಿರಾ ವಲ್ಮೀಕ ಜನ್ಮಾಮುನಿಃ ।
ವೈರಾಗ್ಯೇ ಶುಕಮಿವ ಭಕ್ತಿ ವಿಷಯೇ ಪ್ರಹ್ಲಾದ ಏವ ಸ್ವಯಂ ॥
ಬ್ರಹ್ಮಾನಾರದ ಏವ ಚಾSಪ್ರತಿಮಯೋಃ ಸಾಹಿತ್ಯ ಸಂಗೇತಯೋಃ ।
ಯೋ ರಾಮಾಮೃತಪಾನ ನಿರ್ಜಿತ ಶಿವಃ ತಂ ತ್ಯಾಗರಾಜಂ ಭಜೆ ॥



Thursday, December 27, 2012

ಎನಿತು ಧನ್ಯನೋ ಪಾರ್ಥ!

ಒಮ್ಮೆ ಇಂದ್ರನು ಶ್ರೀ ಕೃಷ್ಣನನ್ನು ಕುರಿತು ಒಂದು ವರವನ್ನು ಪ್ರದಾನ ಮಾಡುವುದಾಗಿ ಹೇಳಿದನು.ಏನು ವರವನ್ನೀಯಲಿ ಎಂದು ವಜ್ರಾಯುಧಧರನು ಮುರಾರಿಯನ್ನು ಕೇಳಲಾಗಿ, ಇಂದ್ರನ ಪುತ್ರನಾದ ಅರ್ಜುನನ ಶಾಶ್ವತ ಸಖ್ಯವನ್ನು ಬೇಡಿದನಂತೆ ಮುರವೈರಿ. ಸಕಲ ಚರಾಚರರ ಒಡೆಯ, ಮುನಿಸಂಕುಲವೆಲ್ಲ ಮೂರು ಕಾಲ ಭಜಿಸುವ ಸ್ವಾಮೀ ತಾನು ಅರ್ಜುನನ ಸ್ನೇಹಕ್ಕೆ ಹಾತೊರೆಯುವುದಾದರೆ, ಎನಿತು ಧನ್ಯನೋ ಪಾರ್ಥ!


Wednesday, November 28, 2012

ಬಿಟ್ಟು ಹೊರಟಿಹ ಠಕ್ಕ





ಬಿಟ್ಟು ಹೊರಟಿಹ ಠಕ್ಕ
ಕಿಟಕಿಯಿಂದಲಿ ಕಾಂಬ
ನಭದೆ ಹೊಳೆಯುವ ಶಶಿಯ

ಝೆನ್ ಕವಿಗಳು ಚಂದ್ರನನ್ನು ಜಾಗೃತ ಚಿತ್ತಕ್ಕೆ ಪ್ರತಿಮೆಯಾಗಿ ಬಹಳಷ್ಟು ಬಾರಿ ಬಳಸುವುದುಂಟು. ಝೆನ್ ಗುರು ರಯೋಕನ್ ಒಮ್ಮೆ ತನ್ನ ಗುಡಿಸಲಿಗೆ ಬಂದಾಗ ಕಳ್ಳನೊಬ್ಬ ಗುಡಿಸಲಿನಲ್ಲಿ ಇದ್ದ ಎಲ್ಲ ವಸ್ತುಗಳನ್ನು ದೋಚಿ ಓಡಿಹೋಗುತ್ತಿದ್ದ. ಅವಸರದಲ್ಲಿ ಒಂದು ಪೀಠವನ್ನು ಉಳಿಸಿ ಓಡಿದನಂತೆ. ಮನೆಯ ಒಳಗೆ ಬಂದ ಝೆನ್ ಗುರು ಆ ಪೀಠವನ್ನೂ ಹೊತ್ತು, ಕಳ್ಳನನ್ನು ಹಿಂಬಾಲಿಸಿ , ಅವನಿಗೆ ಕೊಟ್ಟು ಬಿಟ್ಟನಂತೆ. ಎಲ್ಲವನ್ನೂ ದೋಚಿದರು ಸಹ ಕಿಟಕಿಯಲ್ಲಿ ಬೋಧಿಯ ಸ್ವರೂಪವಾದ ಚಂದ್ರನನ್ನು ದೊಚಲಾದೀತೇ? ಈ ಸಂದರ್ಭದಲ್ಲಿ ಬರೆದ ಹೈಕು ಇದಾಗಿದೆ.

The thief left it behind:
the moon
at my window

Sunday, October 28, 2012

ವಿಜ್ಞಾನ ಮತ್ತು ಕಲೆ


ಭಾರತದ ಪರಮಾಣು ಪಿತಾಮಹ ರೆಂದು ಖ್ಯಾತರಾಗಿರುವ ಹೋಮಿ ಜೆಹಾಂಗೀರ್ ಭಾಭಾ ಅವರು ದೇಶ ಕಂಡ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರು. ವಿಜ್ಞಾನ-ತಂತ್ರಜ್ಞಾನವೇ ಅಲ್ಲದೆ, ಭಾಭಾ ಅವರು ಉತ್ತಮ ಆಡಳಿತಕಾರರಾಗಿ ಸಹ ಭಾರತಕ್ಕೆ ಕೊಡುಗೆ ನೀಡಿದರು.ಭಾಭಾ ಅಣು ಸಂಶೋಧನಾ ಕೇಂದ್ರ,ಟಾಟಾ ಮೂಲ ವಿಜ್ಞಾನ ಸಂಶೋಧನಾ ಕೇಂದ್ರ ಮುಂತಾದ ಉನ್ನತ ಮಟ್ಟದ ಸಂಸ್ಥೆಗಳನ್ನೂ ಹುಟ್ಟುಹಾಕಿದರು. ೧೯೬೬ ರಲ್ಲಿ ಭಾಭಾ ಅವರ ಅಕಾಲಿಕ ಮರಣ ಸಂಭವಿಸಿದಾಗ ಕಲಾ ಪೋಷಕರಾದ ವಾನ್ ಲೆಯ್ದೆನ್ ಅವರು -- "ಭಾರತದ ಕಲಾ ಪ್ರಪಂಚ ಅನಾಥ ವಾಯಿತು" ಎಂದು ಉದ್ಗರಿಸಿದರು. ಇದೇನು, ಮೇಲು ದರ್ಜೆಯ ವಿಜ್ಞಾನಿ ಇಲ್ಲವಾದರೆ ಕಲಾ ಸಾಮ್ರಾಜ್ಯ ಹೇಗೆ ಬಡವಾಯಿತು ಎಂದು ಪ್ರಶ್ನಿಸಬಹುದು. ಸ್ವಾರಸ್ಯದ ಸಂಗತಿಯೆಂದರೆ ಭಾಭಾ ಅವರ ಬುದ್ಧಿ - ಜ್ಞಾನಗಳು ವಿಜ್ನಾನಿಯದ್ದಾದರೆ, ಹೃದಯವು ಮಾತ್ರ ಅಪ್ಪಟ ಕಲಾವಿದನದ್ದು, ಸಹೃದಯನದ್ದು. ಸರ್. ಸಿ. ವಿ. ರಾಮನ್ ಅವರು ಭಾಭಾರನ್ನು ಲಿಯೋ ನಾರ್ಡೋ ಡಾ ವಿಂಚಿ ಗೆ ಹೋಲಿಸಿದರು. ಹೋಲಿಕೆ ಅತ್ಯಂತ ಸಮಜಸವಾಗಿದೆ. ಡಾ ವಿಂಚಿ ಯಂತೆ ಭಾಭಾ ಸಹ ಬಹುಮುಖ ಪ್ರತಿಭೆ. ಭಾಭಾ ಅವರು ಫಿಲ್ ಹಾರ್ಮಾನಿಕ್ ಆರ್ಕೆಸ್ತ್ರದಲ್ಲಿ ( ವಾದ್ಯ ಗೋಷ್ಠಿ ಯಲ್ಲಿ ) ವಯೋಲಾ ನುಡಿಸುತ್ತಿದ್ದರು. ಕೇಂಬ್ರಿಡ್ಜ್ ನ ನೌಕಾ ತಂಡದಲ್ಲಿ ( ರೆಗಟ್ಟ) ದಲ್ಲಿ ದೋಣಿ ನಡೆಸುವ ಅಂಬಿಕರಾಗಿದ್ದರು, ಇದಲ್ಲದೆ ಮೊಜಾರ್ಟ್ ನ ' ದಿ ಮ್ಯಾರೇಜ್ ಆಫ್ ಫಿಗಾರೊ' ರೂಪಕಕ್ಕೆ ರಂಗ ಸಜ್ಜಿಕೆ ಮತ್ತು ಕುಂಚ ಹಿಡಿದಿದ್ದರು . ವಿಜ್ಞಾನಿಯಾಗಿ ಪರಮಾಣುಗಳ ಒಳಹೊಕ್ಕು ಬೇಧಿಸಿದ ಭಾಭಾ, ಕಲಾವಿದನಾಗಿ ಆಂತರ್ಯದ
ಹೃದಯದಾಳವನ್ನು ಶೋಧಿಸಿದರು. ಕವಿಹೃದಯಿ ಭಾಭಾ ಒಮ್ಮೆ ಹೀಗೆಂದಿದ್ದರು
ನನ್ನ ಜೀವಿತದ ಅವಧಿಯನ್ನು ಕಾಲ ಪರಿಮಿತಿಯಿಂದ ಹೆಚ್ಚಿಸಿಕೊಳ್ಳಲಾದು, ಆದರೆ ತೀವ್ರತೆಯನ್ನು ವೃದ್ಧಿಸುವುದರಿಂದ ಅದನ್ನು (ಜೀವಿತವನ್ನು) ವೃದ್ದಿ ಸಿ ಕೊಳ್ಳುತ್ತೇನೆ. ಕಲೆ, ಸಂಗೀತ, ಕಾವ್ಯ - ಇವುಗಳ ವ್ಯವಸ್ಥಿತಿಗಳಿಂದ ನನ್ನ ಒಂದೇ ಧ್ಯೇಯವೆಂದರೆ - ಕಲಾವ್ಯವಸ್ಥಿತಿ ಯಿಂದ ಜೀವನ ತೀವ್ರತೆಯ ಅನುಸಂಧಾನ

Sunday, September 30, 2012

ಪುಟ್ಟಿ

ಶಿಶುವಿಹಾರದಲ್ಲಿ ಚಿಣ್ಣರೆಲ್ಲರೂ ಬಣ್ಣದ ಬಳಪಗಳನ್ನು ಹಿಡಿದು ಚಿತ್ರ ಬಿಡಿಸುವುದರಲ್ಲಿ ಮಗ್ನರಾಗಿದ್ದರು. ಸವಿತಾ ಟೀಚರ್ ತರಗತಿಯನ್ನು ಸುತ್ತು ಹಾಕುತ್ತ, ಯಾವ ಮಗುವಿನ ಕುಂಚ ಏನನ್ನು ಅವತರಿಸುತ್ತಿದೆ ಎಂದು ನೋಡುತ್ತಿದ್ದರು . ಪುಟ್ಟಿಯ ಪಕ್ಕ ನಿಂತು "ಇದೇನು ಪುಟ್ಟಿ, ಏನು ಬಿಡಿಸುತ್ತಿದೀಯ?" ಎಂದ ಕೇಳಿದರು. "ದೇವರನ್ನು ಬಿದುಸುತ್ತಿದೀನಿ" ಎಂದಳು ಪುಟ್ಟಿ. ಆದರೆ ಯಾರೂ ದೇವರನ್ನು ನೋಡಿಯೇ ಇಲ್ಲವಲ್ಲ ಎಂದರು ಸವಿತಾ ಟೀಚರ್ . "ಶ್ ! .. ಇನ್ನು ಕೆಲವೇ ನಿಮಿಷಗಳಲ್ಲಿ ಎಲ್ಲರು ನೋಡುವರು ಎಂದಳು ಮುಗ್ಧ ಪುಟ್ಟಿ.

Thursday, August 30, 2012

ಆನಂದಂ ಬ್ರಹ್ಮ




ಸಕಲ ಜೀವ ರಾಶಿಗಳು ಅನುಗಾಲ ಆರಿಸುವುದು ಆನಂದವನ್ನೇ. ನಮ್ಮ ಬಹುತೇಕ ಎಲ್ಲ ಚಟುವಟಿಕೆಗಳು ಸುಖ ಸಂಪಾದನೆಯ ಸುತ್ತ ಮುತ್ತಲೇ ಇರುತ್ತವೆ. ಎಲ್ಲವನ್ನು ಬಿಟ್ಟು ಸರ್ವಸಂಘ ಪರ್ತ್ಯಾಗಿ ಆಗಬಯಸುವ ಸನ್ಯಾಸಿಯೂ ಸಹ ಸರ್ವ ತ್ಯಾಗದಿಂದ ತನಗೆ ಸಂತೋಷ ನೆಮ್ಮದಿಗಳು ದೊರೆಯುವುದರಿಂದಲೇ ತ್ಯಾಗಾಸಕ್ತನಾಗುವುದು. ಸುಖ ಒಂದೇ ಜೀವನದ ಮೌಲಯ ಎಂದು ಪರಿಗಣಿಸಿ ಅತಿಯಾದ ವಿಷಯಾಸಕ್ತಿಯಲ್ಲಿ ತೊಡಗಿದರೆ ಅದನ್ನು 'ಹೆಡೋನಿಸಂ' (Hedonism) ಎಂದು ಕರೆಸಿಕೊಂಡರೆ, ಧರ್ಮ ವಿರುದ್ಧವಲ್ಲದ ಸರ್ವಭೂತ ಹಿತೋರಥದ ಸಂತೋಷ- ಸುಖದ ಅರಸಿವಿಕೆ ಹಂತ ಹಂತವಾಗಿ ಬ್ರಹ್ಮಾನಂದ ವನ್ನು ಸಹ ದೊರಕಿಸಿ ಕೊಡುತ್ತದೆ. ನಾ ನಾ ವಿಧವಾದ ಆನಂದ ಮೀಮಾಂಸೆ ಸನಾತನ ಧರ್ಮದಲ್ಲಿ ಇದ್ದು ಆನಂದವನ್ನು ಬ್ರಹ್ಮ ವಸ್ತುವಿಗೆ ಹೋಲಿಸಿದ್ದಾರೆ ನಮ್ಮ ಸನಾತನರು. ಪ್ರಚಲಿತ ಮನೋವಿಜ್ಞಾನಿ ಗಳಲ್ಲಿ ಮಾರ್ಟಿನ್ ಸಲಿಗ್ಮನ್ (Martin Seligman) ಅವರು ಆನಂದದ ಮೂಲವನ್ನು ಹುಡುಕಲು ಹೊರಟು 'PERMA' ಎಂಬ ಪಂಚಾಕ್ಷರ ಸೂತ್ರವನ್ನು ಪ್ರತಿಪಾದಿಸಿದರು. ಈ ಐದು ಬಗೆಯ ಸುಖಪ್ರದ ಸಾಧನಗಳಲ್ಲಿ "ವಸ್ತು ಜನ್ಯ ಸುಖ" - Pleasure ಮೊದಲನೆಯದು. ಈ ವಸ್ತು ಜನ್ಯ ಸುಖ, ಪಂಚೆದ್ರಿಯಗಳಿಗೆ ಮುದದಿಂದ ಉಂಟಾಗುತ್ತದೆ. ಇಂಪಾದ ಗಾನ ಲಾಲಿಸುವುದಾಗಲಿ, ಘಮ ಘಮಿಸುವ ಸುಗಂಧ ದ್ರವ್ಯದ ಸುವಾಸನೆಯಾಗಲಿ , ಸುಗ್ರಾಸ ಭೋಜನದಿಂದಾಗಲಿ , ಇವೆ ಮೊದಲಾದ ವಸ್ತುಜನ್ಯ ಸಂತೋಷವು ಇಲ್ಲಿ ಸೇರಿಕೊಳ್ಳುತ್ತವೆ. "ವ್ಯವಸ್ಥಿತಿ" - Enagagement ಇಂದ ದೊರೆಯುವ ಸಂತಸ ಎರಡನೆಯ ಸ್ತರದ್ದಾಗಿರುತ್ತದೆ. ನಾವು ಮಾಡುವ ಕೆಲಸದಲ್ಲಿ ಶ್ರದ್ದೆ, ಉತ್ಸಾಹವಿದ್ದು, ಕಾರ್ಯ ತತ್ಪರತೆ ಇಂದ ದೊರೆಯುವ ಸಂತಸ ಇದಾಗಿರುತ್ತದೆ. ಸಂಪೂರ್ಣವಾಗಿ ಮಗ್ನವಾಗಿ ತನು, ಮನ , ಆತ್ಮಗಳನ್ನು ಒಂದು ಮಾಡಿ ಸಂಪೂರ್ಣವಾಗಿ ತೊಡಗಿಸಿ ಕೊಂದ ಮಾಡಿದ ಕೆಲಸದ ಸಂತಸವೇ ಸಂತಸ. ಸರ್ ಎಂ. ವಿಶ್ವೇಶ್ವರಯ್ಯ ನವರು ಹೇಳುತ್ತಿದ್ದಂತೆ " ಕಸ ಗುಡಿಸುವುದು ನಮ್ಮ ಕೆಲಸವಾದರೆ, ನಾವು ಗುಡಿಸಿದ ರಸ್ತೆ ಜಗತ್ತಿನಲ್ಲೇ ಅತ್ಯಂತ ಸ್ವಚ್ಛ ವಾಗಿರುವ ರಸ್ತೆಯಾಗ ಬೇಕು -- ಹಾಗಿರಬೇಕು ನಮ್ಮ ಕಾರ್ಯ ಶ್ರದ್ದೆ. Relationship - "ಸಂಬಂಧ-ಬಾಂಧವ್ಯ" ಗಳಿಂದ ಪ್ರಾಪ್ತಿಯಾಗುವ ಸಂತೋಷ ಮೂರನೆಯದು. ಮಾನವ ಸಮಾಜ ಜೀವಿ. ಯಾರಿಗೆ ಒಳ್ಳೆಯ ಒಡನಾಟ ದೊರೆಯುವುದೋ ಅವರೇ ಪುಣ್ಯವಂತರು. ಸಲಿಗ್ಮನ್ ಗುರುತಿಸುವ ನಾಲ್ಕನೇ ಪಂಕ್ತಿಯ ಸಂತಸ ವೆಂದರೆ "ಅರ್ಥ ಗ್ರಹಣ" - Meaning . ಜೀವನದಲ್ಲಿ ಎಲ್ಲವೂ ಇದ್ದರೂ "ಏನೋ" ಹೇಳಿಕೊಳ್ಳಲಾರದ ತಾಕಲಾಟ. ಉತ್ತರಗಳಿಲ್ಲ ಪ್ರಶ್ನೆಗಳು ಎಲ್ಲರನ್ನು ಒಮ್ಮೆಯಾದರೂ ಕಾದಿರುವುದು ಸಹಜವೇ. ಈ ಮಾಯಮಯವಾದ ಪ್ರಪಂಚದ ಅರ್ಥ ಗ್ರಹಣವೆ ಒಂದು ಸಂತಸ. ಸಂತಸದ ಐದನೆಯ ಮೂಲವೆಂದರೆ Achievement - "ಸಾಧನೆಯ ಸಂತೃಪ್ತಿ". ಎಷ್ಟೇ ಉಟ್ಟರು ಉಂಡರೂ, ಸಂಸಾರದಲ್ಲಿ ಸಾಮರಸ್ಯ ಇದ್ದರೂ, ಸಾಧನೆಯ ಗಂಧ ವಿರದಿದ್ದರೆ ಜೀವನ ನೀರಸವೇ ಸರಿ.


Friday, July 27, 2012

ಕನಕಧಾರಾ ಸ್ತೋತ್ರಂ

ಅಂಗಂ ಹರೇಃ ಪುಲಕ-ಭೂಷಣಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಂ |
ಅಂಗೀಕೃತಾಖಿಲವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ ||1||

ಮುಗ್ಧಾಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |
ಮಾಲಾ-ದೃಶೋ-ರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ-ಸಂಭವಾಯಾಃ ||2||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ-
ಮಾನಂದಕಂದಮನಿಮೇಷಮನಂಗತಂತ್ರಂ |
ಆಕೇಕರ-ಸ್ಥಿತ-ಕನೀನಿಕ-ಪಕ್ಷ್ಮ ನೇತ್ರಂ
ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾಃ ||3||

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀವ ಹರಿನೀಲಮಯೀ ವಿಭಾತಿ |
ಕಾಮಪ್ರದಾ ಭಗವತೋsಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ ||4||

ಕಾಲಾಂಬುದಾಲಿ-ಲಲಿತೋರಸಿಕೈಟಭಾರೇಃ
ಧಾರಾಧರೇ ಸ್ಫುರತಿ ಯಾ ತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿ ಮೇ ದಿಶತು ಭಾರ್ಗವ-ನಂದನಾಯಾಃ ||5||

ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ ಪ್ರಭಾವಾತ್
ಮಾಂಗಲ್ಯಭಾಜಿ ಮಧು-ಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಧಂ
ಮಂದಾಲಸಂ ಚ ಮಕರಾಲಯಕನ್ಯಕಾಯಾಃ ||6||

ವಿಶ್ವಾಮರೇಂದ್ರ-ಪದವಿಭ್ರಮ-ದಾನದಕ್ಷಂ
ಆನಂದ-ಹೇತುರಧಿಕಂ ಮಧುವಿದ್ವಿಷೋsಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧಂ
ಇಂದೀವರೋದರ ಸಹೋದರಮಿಂದಿರಾಯಾಃ ||7||

ಇಷ್ಟಾವಿಶಿಷ್ಟಮತಯೋsಪಿ ಯಯಾ ದಯಾರ್ದ್ರ-
ದೃಷ್ಟ್ಯಾ ತ್ರಿವಿಷ್ಟಪ ಪದಂ ಸುಲಭಂ ಭಜಂತೇ |
ದೃಷ್ಟಿಃಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟಮಮ ಪುಷ್ಕರ-ವಿಷ್ಟರಾಯಾಃ ||8||

ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾಮ್
ಅಸ್ಮಿನ್ನಕಿಂಚನ-ವಿಹಂಗಶಿಶೌ ವಿಷಣ್ಣೇ |
ದುಷ್ಕರ್ಮ-ಘರ್ಮಮಪನೀಯ ಚಿರಾಯ ದೂರಾತ್
ನಾರಾಯಣ-ಪ್ರಣಯಿನೀ-ನಯನಾಂಬುವಾಹಃ ||9||

ಗೀರ್ದೇವತೇತಿ ಗರುಡಧ್ವಜ-ಸುಂದರೀತಿ
ಶಾಕಂಭರೀತಿ ಶಶಿಶೇಖರ-ವಲ್ಲಭೇತಿ |
ಸೃಷ್ಟಿ-ಸ್ಥಿತಿ-ಪ್ರಲಯಕೇಲಿಷು ಸಂಸ್ಥಿತಾಯೈ
ತಸ್ಯೈ ನಮಸ್ತ್ರಿಭುವನೈಕ-ಗುರೋಸ್ತರುಣ್ಯೈ ||10||

ಶ್ರುತೈ ನಮೋsಸ್ತು ಶುಭಕರ್ಮ-ಫಲಪ್ರಸೂತ್ಯೈ
ರತ್ಯೈ ನಮೋsಸ್ತು ರಮಣೀಯ-ಗುಣಾಶ್ರಯಾಯೈ |
ಶಕ್ಯೈ ನಮೋsಸ್ತು ಶತಪತ್ರ-ನಿಕೇತನಾಯೈ
ಪುಷ್ಟ್ಯೈ ನಮೋsಸ್ತು ಪುರುಷೋತ್ತಮ-ವಲ್ಲಭಾಯೈ ||11||

ನಮೋsಸ್ತು ನಾಲೀಕ-ನಿಭಾನನಾಯೈ
ನಮೋsಸ್ತು ದುಗ್ಧೋದಧಿ-ಜನ್ಮಭೂತ್ಯೈ |
ನಮೋsಸ್ತು ಸೋಮಾಮೃತ-ಸೋದರಾಯೈ
ನಮೋsಸ್ತು ನಾರಾಯಣ-ವಲ್ಲಭಾಯೈ ||12||

ನಮೋsಸ್ತು ಹೇಮಾಂಬುಜ-ಪೀಠಿಕಾಯೈ
ನಮೋsಸ್ತು ಭೂಮಂಡಲನಾಯಿಕಾಯೈ |
ನಮೋsಸ್ತು ದೇವಾದಿ-ದಯಾಪರಾಯೈ
ನಮೋsಸ್ತು ಶಾರ್ಙ್ಗಾಯುಧ-ವಲ್ಲಭಾಯೈ ||13||

ನಮೋsಸ್ತು ದೇವ್ಯೈ ಭೃಗುನಂದನಾಯೈ
ನಮೋsಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋsಸ್ತು ಲಕ್ಷ್ಮ್ಯೈ ಕಮಲಾಲಯಾಯೈ
ನಮೋsಸ್ತು ದಾಮೋದರ-ವಲ್ಲಭಾಯೈ ||14||

ನಮೋsಸ್ತು ಕಾಂತ್ಯೈ ಕಮಲೇಕ್ಷಣಾಯೈ
ನಮೋsಸ್ತು ಭೂತ್ಯೈ ಭುವನಪ್ರಸೂತ್ಯೈ |
ನಮೋsಸ್ತು ದೇವಾಧಿಭಿರರ್ಚಿತಾಯೈ
ನಮೋsಸ್ತು ನಂದಾತ್ಮಜ-ವಲ್ಲಭಾಯೈ ||15||

ಸಂಪತ್ಕರಾಣಿ ಸಕಲೇಂದ್ರಿಯನಂದನಾನಿ
ಸಾಮ್ರಾಜ್ಯದಾನವಿಭವಾನಿ ಸರೋರುಹಾಕ್ಷಿ |
ತ್ವದ್ವಂದನಾನಿ ದುರಿತಾಹರಣೋದ್ಯತಾನಿ
ಮಾಮೇವ ಮಾತರನಿಶಂ ಕಲಯಂತು ಮಾನ್ಯೇ ||16||

ಯತ್ಕಟಾಕ್ಷಸಮುಪಾಸನಾ ವಿಧಿಃ
ಸೇವಕಸ್ಯ ಸಕಲಾರ್ಥಸಂಪದಃ |
ಸಂತನೋತಿ ವಚನಾಂಗಮಾನಸ್ಯೈ-
ಸ್ತ್ವಾಂ ಮುರಾರಿಹೃದಯೇಶ್ವರೀಂ ಭಜೇ ||17||

ಸರಸಿಜನಿಲಯೇ ಸರೋಜಹಸ್ತೇಃ
ಧವಲತಮಾಂಶುಕಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೆ
ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ ||18||

ದಿಗ್ಘಸ್ತಿಭಿಃ ಕನಕಕುಂಭಮುಖಾವಸೃಷ್ಟ
ಸ್ವರ್ವಾಹಿನೀವಿಮಲಚಾರುಜಲಪ್ಲುತಾಂಗೀಮ್ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ
ಲೋಕಾಧಿನಾಥಗೃಹಿಣೀಮಮೃತಾಬ್ಧಿ ಪುತ್ರೀಮ್ ||19||

ಕಮಲೇ ಕಮಲಾಕ್ಷವಲ್ಲಭೇ ತ್ವಂ
ಕರುಣಾಪೂರತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ
ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ ||20||

ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ
ತ್ರಯೀಮಯೀಂ ತ್ರಿಭುವನ-ಮಾತರಂ ರಮಾಂ |
ಗುಣಾಧಿಕಾ ಗುರುತರ-ಭಾಗ್ಯ-ಭಾಗಿನಃ
ಭವಂತಿ ತೇ ಭುವಿ ಬುಧಭಾವಿತಾಶಯಾಃ ||21||

~*~*~*~

Credits: http://oppanna.com/


Saturday, June 30, 2012

ಸಂಪ್ರತಿ ವಾರ್ತಾಃ ಶೄಯಂತಾಂ.



ಆಕಾಶವಾಣಿ ಸುದ್ದಿ ವಿಭಾಗದಿಂದ ಪ್ರತಿ ಮುಂಜಾನೆ ೬:೫೫ ಗೆ ಬಿತ್ತರವಾಗುವ ಸಂಸ್ಕೃತ ವಾರ್ತಾ ಪ್ರಸಾರಕ್ಕಿಂದು ೩೮ ವರ್ಷದ ಸಂಭ್ರಮ. ೧೯೭೪ರಲ್ಲಿ ಇದೇ ಜೂನ್ ೩೦ ರಂದು ಬೆಳಗಿನ ಸಂಸ್ಕೃತ ವಾರ್ತಾ ಪ್ರಸಾರ ಮೊದಲುಗೊಂಡಿತು. "ಬಹುಜನಹಿತಾಯ, ಬಹುಜನಸುಖಾಯ" ಎಂಬ ಆಕಾಶವಾಣಿಯ ಘೋಶವಾಕ್ಯ ಈ ಸಂಸ್ಕೃತ ವಾರ್ತೆಗಳಿಗೆ ಅಕ್ಷರಶಃ ಸರಿಹೊಂದುತ್ತದೆ.

ಮುಂಜಾನೆ ಎದ್ದು ಎಂ.ಎಸ್. ಕಂಠಸಿರಿಯಲ್ಲಿ "ಕೌಸಲ್ಯಾ ಸುಪ್ರಜಾ ರಾಮ" ಆಲಿಸಿ , ಬಿಸಿ ತಾಜಾ ಫಿಲ್ಟರ್ ಕಾಫಿ ಹೀರುತ್ತ , ಆಕಾಶವಾಣಿಯಲ್ಲಿ " ಇಯಂ ಆಕಾಶವಾಣಿ, ಸಂಪ್ರತಿ ವಾರ್ತಾಃ ಶೄಯಂತಾಂ , ಪ್ರವಾಚಕಃ ಬಲದೇವಾನಂದ ಸಾಗರಃ" -- ಈ ಉದ್ಘೋಶ ಕೇಳಿದರೆ ಸಾಕು ಆ ದಿನ ಮಂಗಳಮಯವಾಗಿ ಆರಂಭವಾಗುವ ಅನುಭೂತಿ.

ಸಂಸ್ಕೃತ ವಾರ್ತೆಗಳನ್ನು ಅಂತರ್ಜಾಲದಲ್ಲೂ ಕೇಳಬಹುದು. ಕೊಂಡಿ ಇಲ್ಲಿದೆ.

http://www.newsonair.com/NSD-Audio-Bulletins-News-Schedule.asp


ಕಳೆದ ೩೮ ವರ್ಷಗಳಿಂದ ಸಂಸ್ಕೃತ ಪ್ರವಾಚಕರಾಗಿರುವ ಡಾ|| ಬಲದೇವಾನಂದಸಾಗರ ಅವರು.

Monday, May 14, 2012

ಆನಂದಲಹರೀ



ಅಯಃ ಸ್ಪರ್ಶೇ ಲಗ್ನಂ ಸಪದಿ ಲಭತೇ ಹೇಮಪದವೀಂ
ಯಥಾ ರಥ್ಯಾಪಾಥಃ ಶುಚಿ ಭವತಿ ಗಂಗೌಘಮಿಲಿತಮ್ |
ತಥಾ ತತ್ತತ್ ಪಾಪೈಃ ಅತಿಮಲಿನಂ ಅಂತರ್ಮಮ ಯದಿ
ತ್ವಯಿ ಪ್ರೇಮ್ಣಾ ಸಕ್ತಂ ಕಥಮಿವ ನ ಜಾಯೇತ ವಿಮಲಂ ||

ತಾತ್ಪರ್ಯ :  ಸ್ಪರ್ಶಮಣಿಯಿಂದ ಸ್ಪರ್ಶಿಸಿದರೆ ಕಬ್ಬಿಣವು ಬಂಗಾರವಾಗುವುದು; ದಾರಿಯ ಮಗ್ಗಲಿನ ಕೊಳಚೆ ನೀರು ಗಂಗೆಯನ್ನು ಸೇರಿದರೆ ಶುದ್ಧವಾಗುವುದು. ಇದರಂತೆ, ಹೇ ಭವಾನಿ, ನನ್ನ ಹೃದಯವು ಅನೇಕ ಪಾಪಗಳಿಂದ ಅತಿ ಮಲಿನವಾಗಿದ್ದರೂ ಕೂಡ, ನಿನ್ನಲ್ಲಿ ಪ್ರೇಮಸ್ವರೂಪದ ಭಕ್ತಿಯನ್ನು ಪಡೆಯಿತೆಂದರೆ, ಹೇಗೆ ತಾನೇ ನಿರ್ಮಲವಾಗುವುದಿಲ್ಲ? 

Thursday, April 26, 2012

ವಿಶ್ವ ಬೌದ್ಧಿಕ ಸಂಪದ ದಿನಾಚರಣೆ

ವಿಶ್ವದೆಲ್ಲೆಡೆ ಏಪ್ರಿಲ್ ೨೬ ೨೦೧೨ ರಂದು ಬೌದ್ಧಿಕ ಸಂಪದ ದಿನಾಚರಣೆ ಆಚರಿಸಲಾಯಿತು. ವಿಶ್ವ ಬೌದ್ಧಿಕ ಸಂಪದ ಸಂಸ್ಥೆ (World Intellectual Property Organisation: WIPO) ಏಪ್ರಿಲ್ ೨೬ ಅನ್ನು ಜಾಗತಿಕ ಮಟ್ಟದಲ್ಲಿ ಬೌದ್ಧಿಕ ಸಂಪದ ದಿನವನ್ನಾಗಿ ಆಚರಿಸುವ ಕರೆ ನೀಡಿದೆ. ೧೫೦ಕ್ಕೂ ಹೆಚ್ಚು ರಾಷ್ಟ್ರಗಳು ಈ WIPO ಸಂಸ್ಥೆಯ ಸದಸ್ಯರಾಗಿದ್ದು, ಈ ಎಲ್ಲಾ ಸದಸ್ಯ ದೇಶಗಳಲ್ಲೂ ಹೊಸ ಚಿಂತನೆಗಳನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಏಪ್ರಿಲ್ ೨೬ ರಂದು ಕಾರ್ಯಕ್ರಮಗಳು ನಡೆದಿವೆ. ಪ್ರತಿವರ್ಷವೂ ಒಂದು ಮೂಲ ವಿಷಯವನ್ನು ಚರ್ಚೆಗೆ ಆಯ್ದು ಕೊಳ್ಳಲಾಗಿ ಈ ಸಾಲಿನಲ್ಲಿ 'ದ್ರಷ್ಟಾರ ಚಿಂತಕರು' (Visionary Innovators) ಎಂಬ ವಿಷಯವನ್ನು ನಿಗದಿ ಪಡಿಸಲಾಗಿದೆ.

Sunday, March 25, 2012

ವಸಂತೋತ್ಸವ




ವಸಂತ ಬಂದ ಋತುಗಳ ರಾಜಾ ತಾ ಬಂದ! ವಸಂತನ ಆಗಮನ ಎಲ್ಲರಲ್ಲೂ ಸಂತಸ ಮೂಡಿಸಿದೆ. ಉತ್ಸವ ಪ್ರೀಯರಾದ ಭಾರತೀಯರು ವಸಂತ ಋತುವಿಗೆ ಸಂಬಂಧಿಸಿದಂತೆ ಆಚರಿಸುವ ಹತ್ತು ಹಲವು ಪರ್ವಗಳಲ್ಲಿ ಕೆಲವು ಸ್ವಾರಸ್ಯಕರ ಉತ್ಸವಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಕಾಮಸೂತ್ರ, ಶೃಂಗಾರ ಪ್ರಕಾಶ, ಸರಸ್ವತಿ ಕಂಠಾಭರಣ, ಸಾಹಿತ್ಯ ಮೀಮಾಂಸ, ಭಾವ ಪ್ರಕಾಶನ ಮತ್ತು ಚತುರ್ವರ್ಗ ಚಿಂತಾಮಣಿ ಮುಂತಾದ ಕೃತಿಗಳಲ್ಲಿ ಈ ಹಬ್ಬಗಳ ವಿವರಣೆ ಇದೆ. ಕೆಲ ವಸಂತೋತ್ಸವಗಳಲ್ಲಿ : ಮದನೋತ್ಸವ - ತಿಂಗಳ ಕಾಲ ಪ್ರೇಮ, ಕಲೆ ಮತ್ತು ಪ್ರಕೃತಿ ಉಪಾಸನೆಯು ಪ್ರಮುಖವಾದ ಉತ್ಸವ. ಅಷ್ಠಮಿ ಚಂದ್ರ - ಚಂದ್ರಕಾಂತಿಯಲ್ಲಿ ಸ್ನೇಹಕೂಟ ಏರ್ಪಡುವ ಹಬ್ಬ. ಬಕುಳಾಶೋಕವಿಹೃತಿ - ಬಕುಳ ಮತ್ತು ಅಶೋಕ ಪುಷ್ಪಗಳನ್ನು ಬಿಡಿಸಿ, ಮಾಲೆಗಳಾಗಿ ಹೆಣೆದು, ದೇವತೆಗಳು ಮತ್ತು ಇನಿಯರು ಸಿಂಗರಿಸಿ ಕೊಂಡು ಸಂಭ್ರಮಿಸುವ ಪರ್ವ. ಶಾಲ್ಮಲೀ ಮೂಲ ಖೇಲನಂ -- ವಶಾಲವಾದ ಶಾಲ್ಮಲೀ ವೃಕ್ಷದ ಕೆಳಗೆ ಆಟವಾಡುವ ಹಬ್ಬ, ಅಶೋಕಾಷ್ಠಮಿ - ಅಶೋಕ ವೃಕ್ಷಕ್ಕೆ ಪೂಜಿಸುವ ಪರ್ವ , ಆಂದೋಲನ ಚತುರ್ಥಿ - ಡೋಲೋತ್ಸವ, ಉಯ್ಯಾಲೆ ಹಬ್ಬ. ಭೂತ ಮಾತೃಕ - ವೇಷಭೂಷಣ ಉತ್ಸವ. ಸುವಸಂತಕ - ಇನಿಯರ ಮೇಲೆ ಪುಷ್ಪ ಮತ್ತು ಓಕುಳಿ ಎರಚಿ ಸಂತಸ ಪಡುವ ಹಬ್ಬ.

ಗ್ರಂಥಋಣ: ಶತಾವಧಾನಿ ಡಾ|| ರಾ.ಗಣೇಶ್

Wednesday, February 15, 2012

ಸಂಕ್ಷಿಪ್ತ ರಾಮಾಯಣಂ



ಪೂರ್ವಂ ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ|
ವಾಲೀ ನಿರ್ದಲನಂ ಸಮುದ್ರ ತರಣಂ ಲಂಕಾಪುರೇ ದಾಹನಂ
ಪಶ್ಚಾದ್ರಾವಣ ಕುಂಭಕರ್ಣ ಮಥನಂ ಏತದ್ಧಿ ರಾಮಾಯಣಂ||

ಏಕಶ್ಲೋಕೀ ಮಹಾಭಾರತ

ಆದೌ ಪಾಂಡವ ಧಾರ್ತರಾಷ್ಟ್ರಜನನಂ ಲಾಕ್ಷಾಗೃಹೇ ದಾಹನಮ್
ದ್ಯೂತಂ ಶ್ರೀಹರಣಂ ವನೇವಿಹರಣಂ ಮತ್ಸ್ಯಾಲಯೇ ವರ್ತನಮ್ |
ಲೀಲಾ ಗೋಗ್ರಹಣಂ ರಣೇವಿತರಣಂ ಸಂಧಿಕ್ರಿಯಾಜೃಂಭಣಂ
ಪಶ್ಚಾದ್ಭೀಷ್ಮ ಸುಯೋಧನಾದಿ ನಿಧನಂ ಏತನ್ಮಹಾಭಾರತಮ್ ||

ಏಕಶ್ಲೋಕೀ ಭಾಗವತ

ಆದೌ ದೇವಕಿದೇವಿ ಗರ್ಭ ಜನನಂ ಗೋಪಿ ಗೃಹೇ ವರ್ಧನಂ
ಮಾಯಾಪೂತನೀ ಜೀವಿತಾಪಹಾರಣಂ ಗೋವರ್ಧನೋದ್ಧಾರಣಂ|
ಕಂಸಕ್ಷೇಧನ ಕೌರವಾದಿ ಹನನಂ ಕುಂತೀಸುತ ಪಾಲನಂ
ಏತದ್ಧಿ ಮಹಾಭಾಗವತ ಪುರಾಣ ಪುಣ್ಯ ಖಚಿತಂ ಶ್ರೀಕೃಷ್ಣ ಲೀಲಾಮೃತಂ||

Sunday, January 22, 2012

ಭರತವರ್ಷ


ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ|
ವರ್ಷಂ ತದ್ಭಾರತಂ ನಾಮ ಭಾರತೀ ಯತ್ರ ಸಂತತಿಃ ||


ಸಮುದ್ರಕ್ಕೆ ಉತ್ತರದಲ್ಲೂ, ಹಿಮಾಲಯಕ್ಕೆ ದಕ್ಷಿಣದಲ್ಲೂ ಇರುವ ಪ್ರದೇಶವನ್ನು ಭಾರತವೆನ್ನುತ್ತಾರೆ. ಅಲ್ಲಿ ವಾಸಿಸುವವರೇ ಭಾರತೀಯರು.

ಛಪ್ಪನ್ನೈವತ್ತಾರು ದೇಶಗಳು : ಅಂಗ, ವಂಗ, ಕಳಿಂಗ, ಕರ್ಣಾಟ, ಕೇರಳ,ಕಾಮರೂಪ, ಗೌಡ, ವನವಾಸ (ಬನವಾಸಿ),ಕುಂತಲ,ಕೊಂಕಣ,ಮಗಧ,ಸೌರಾಷ್ಟ್ರ,ಮಾಳವ,ಲಾಟ,ಭೋಜ,ವಿರಾಟ,ಶಬರ,ಕಕುರ,ಕುರು,ಅವಂತಿ,ಪಾಂಡ್ಯ,ಮದ್ರ,ಸಿಂಹಲ,ಗುರ್ಜರ,ಪಾರಸಿಕ,ಮಿಥಿಲ,ಪಾಂಚಾಲ,ಕ್ರೂರಸೇನಿ,ಗಾಂಧಾರ,ಬಾಹ್ಲಿಕ,ಹೈಹಯ,ತೌಳವ,ಸಾಲ್ವ,ಪುಂಡ್ರಕ,ಪ್ರಾಗ್ಜೋತಿಷ್ಯ,ಮತ್ಸ್ಯ,ಚೇದಿ,ಬರ್ಬರ,ನೇಪಾಳ,ಗೌಳ,ಕಾಶ್ಮೀರ,ಕನ್ಯಾಕುಬ್ಜ,ವಿದರ್ಭ,ಖುರಸಾಣ,ಮಹಾರಾಷ್ಟ್ರ,ಕೋಸಲ,ಕೇಕಯ,ಅಹಿಚ್ಛತ್ರ,ತ್ರಿಲಿಂಗ,ಪ್ರಯಾಗ,ಕರಹಂಟಕ,ಕಾಂಭೋಜ,ಭೋಟ,ಚೋಳ,ಹೂಣ,ಕಾಶಿ.

Friday, December 30, 2011

ಮಧ್ಯಮ ಮಾರ್ಗ

ನ ಚಾತಿಪ್ರಣಯಃ ಕಾರ್ಯಃ ಕರ್ತ್ವ್ಯೋ ಅಪ್ರಣಯಸ್ಚ ತೆ
ಉಭಯಂ ಹಿ ಮಹಾನ್ ದೋಶಃ ತಸ್ಮಾದಂತರದ್ರುಗ್ಭವ

Tuesday, November 29, 2011

ಇಂದಿನ ದಿನವೇ ಶುಭ ದಿನವು

ಯಾವತ್ ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರತಃ |
ತಾವದಾತ್ಮಹಿತಂ ಕುರ್ಯಾತ್ ಪ್ರಾಣಾಂತೇ ಕಿಂ ಕರಿಷ್ಯಸಿ ||
-- ಸುಭಾಷಿತರತ್ನಭಂಡಾರಗಾರ

ಒಳ್ಳೆಯ ಕೆಲಸ ಮಾಡಲು ಮೀನ-ಮೇಷ ಎಣಿಸುವುದೇಕೆ? ಶಕ್ತಿ ಇರುವಾಗಲೇ ಸದ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳ ಬೇಕು. ಸಂಸಾರ ತಾಪತ್ರಯಗಳು ಯಾರೊಬ್ಬರನ್ನು ಬಿಟ್ಟಿಲ್ಲ; ಹೀಗಿರುವಾಗ ಸರ್ವರಿಗೂ ಹಿತವನ್ನುಂಟು ಮಾಡುವ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಒಳಿತಲ್ಲವೆ. ನಾಳೆ, ನಾಳೆಯೆಂದು ಬಾರದ ನಾಳೆಗೆ ಮಹೋನ್ನತ ಕಾರ್ಯಗಳಾನ್ನು ಬದಿಗೊತ್ತಿ, ನಗಣ್ಯವಾದ ದೈನಂದಿನ ಚಟುವಟಿಕೆಯಲ್ಲಿ ತಳ್ಳಣಿಸುವುದು ಯಾವ ನ್ಯಾಯ ಹೇಳಿ?

Friday, October 28, 2011

ನೀರವ



ಒಕ್ಕಣ್ಣ ಝೇನ್ ಗುರು ಶೋಇಚಿ ದಿವ್ಯಪ್ರಭೆಯಿಂದ ತೇಜೋಮಯವಾಗಿ ಶೋಭಿಸುತ್ತಿದ್ದ. ತೋಫ಼ುಕು ದೇವಳದಲ್ಲಿ ತನ್ನ ಶಿಷ್ಯರಿಗೆ ದೀಕ್ಷೆಯನ್ನೀಯುತ್ತಿದ್ದನು. ದಿನ-ರಾತ್ರಿಯೆನ್ನದೆ ದೇವಳದಲ್ಲಿ ಮೌನವಾವರಿಸಿತ್ತು. ಸುತ್ತಲೂ ಪ್ರಶಾಂತ ಮೌನ. ಮಂತ್ರ ಪಠನವನ್ನೂ ಸಹ ಗುರುಗಳು ನಿಷೇಧಿಸಿದ್ದರು. ಧ್ಯಾನವಲ್ಲದೆ ಶಿಷ್ಯರಿಗೆ ಅನ್ಯ ಶ್ರಮವಿಲ್ಲ. ಹೀಗಿರಲು, ಒಂದಾನೊಂದು ದಿನ, ಬಹುಕಾಲದ ಗುರುಗಳ ನೆರೆಯವನೆನಿಸಿದ ವೃದ್ಧನಿಗೆ ದೇವಾಲಯದಿಂದ ಘಂಟಾನಾದ ಮತ್ತು ಸೂತ್ರಪಠನದ ಧ್ವನಿ ಕೇಳಿ ಬಂತು. ಗುರುಗಳು ಹೊರಟರೆಂದು ಆತನರಿತನಷ್ಟೆ!

Wednesday, September 14, 2011

ಪರೋಪಕಾರಾರ್ಥಮಿದಂ ಶರೀರಂ




ಮೊನ್ನೆ ಬೆಂಗಳೂರು- ಮೈಸೂರು ಮಾರ್ಗದಲ್ಲಿರುವ ಜಾನಪದ ಲೋಕದಲ್ಲಿ ’ಬಿದಿರಮ್ಮ ದೇವಿ’ಯ ಕುರಿತಾದ ಜಾನಪದ ಗೀತೆಯೊಂದನ್ನು ನೋಡಿ, ’ಹರಿ ಹರಿ ಗೋವಿನ’ ಹಾಡು ನೆನಪಿಗೆ ಬಂತು. ದಿಟವೆ, ಬಿದಿರಾಗಲಿ, ಗೋವಾಗಲಿ, ನದಿ-ತರುಗಳಾಗಲಿ ತಮ್ಮ ಒಂದೊಂದು ಭಾಗವೂ ಅನ್ಯರಿಗೆ ಉಪಯೋಗುವಾಗುವಂತೆ ಜೀವಿಸುತ್ತವೆ. ನರ ಮಾನವನಾದರೋ ಯಾರಿಗೂ ಬಾರದವನಾಗಿ, ಭೂಮಿಗೆ ಭಾರವಾಗಿ ಜೀವಿಸಿ ತೆರಳುತ್ತಾರೆ.

ಪರೋಪಕಾರಾಯ ಫಲಂತಿ ವೃಕ್ಷಾ: ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವ: ಪರೋಪಕಾರಾರ್ಥಮಿದಂ ಶರೀರಂ ||

ಪರೋಪಕಾರಕ್ಕಗಿಯೇ ವೃಕ್ಷಗಳು ಫಲವೀಯುತ್ತವೆ, ನದಿಗಳು ಹರಿಯುತ್ತವೆ, ಹಸುವು ಹಾಲೀಯುತ್ತದೆ. ಪರೋಪಕಾರಕ್ಕಾಗಿ ತಾನೆ ಈ ನಮ್ಮ ಶರೀರ. ಗೋವಿನ ಹಾಡನ್ನು ಒಮ್ಮೆ ನೆನೆದು ಸ್ವಲ್ಪವಾದರೂ ಅನ್ಯರಿಗೆ ನೆರವಾಗಿ ಬದುಕೋಣ.

ನೀನಾರಿಗಾದೆಯೋ ಎಲೆ ಮಾನವಾ
-- ಕವಿ ಎಸ್‌.ಜಿ.ನರಸಿಂಹಾಚಾರ್ಯ

ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು || ಪಲ್ಲವಿ ||

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲ್ಗೆನೆಯ ಕಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು
ಬಂದು ಮನೆಗೆ ನಾನು ಅಮೃತವನೀವೆ
ಅದನುಂಡು ನನಗೆರಡು ಬಗೆವ ಮಾನವ ನೀನು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಯೆ ಹರಿಗೋಲಾದೆ ರಾಯ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ದೇಹ ಶುದ್ಧಿಗೆ ನಾನು ಪಂಚ ಗವ್ಯವನೀವೆ
ವಾಹನಕ್ಕೆ ಆಗುವನು ಎನ್ನ ಮಗನು
ಊಹೆಗಸದಳವಹುದು ನನ್ನ ಉಪಕಾರಗಳು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||




Friday, August 19, 2011

ಹೇಮಕೂಟದ ಮೇಲೆ


ಹೇಮಕೂಟದ ಮೇಲೆ ಕನ್ನಡದ ಬಾವುಟ
ಹಾರುತಿದೆ ಮಣಿಯದಕೆ ನೆಟ್ಟಿರಲಿ ಶಾಶ್ವತ

ಶ್ರೀವಿಜಯ ನೃಪತುಂಗ ಕನ್ನಡದ ಶತಶೃಂಗ
ಶಿವಮಾರ ದುರ್ವಿನೀತಾದಿಗಂಗ
ಕಂಡು ಕಂಡರಿಸಿದೆ ಕಡಲ ತಡಿದನಕ
ಬಿತ್ತರಂಗೊಂಡಿತೋ ಸಿರಿ ನಾಡಗಡಿಯೆನುತ...೧

ಜೈನ ತೀರ್ಥಂಕರರು ಶೃಂಗಗಿರಿ ಶಂಕರರು
ಕಲ್ಯಾಣದಣ್ಣಗಳು ಶರಣ ಶರಣೆಯರು
ಹರಿದಾಸರೆಲ್ಲರು ಉಸಿರಿತ್ತು ಪೋಷಿಸಿದ
ಹಸಿರುಡೆಯ ಬೆಳೆನಾಡು ಹಸನಾಯಿತೆಂದು .....೨

ಕೆಳದಿ ದ್ವಾರಾವತಿಯು ಕಿತ್ತೂರು ಕೊಡಗು
ಸ್ವಾದಿ ಬೀಜ್ಜಾವರವು ಮಾಗಡಿಯು ಸೋದೆ
ಮಹಿಶ ಹಾಗಲವಾಡಿ ಸುರಪುರವು ಮತ್ತೆ
ವಿಜಯನಗರಕೆ ಶುಭವ ಕೋರುತಿಹುದೆನುವೆ......೩

ಜಯತು ಕನ್ನಡ ನಾಡು ಜಯತು ಮಂಗಲ ಬೀಡು
ಜಯ ಜಯತು ಜಯ ರಾಜರಾಜೇಶ್ವರಿ
ಜಯವು ಕನ್ನಡ ನುಡಿಗೆ ಜಯವು ಕನ್ನಡ ಜನಕೆ
ಜಯ ನಿನಗೆ ಕರುನಾಡ ಬನಶಂಕರಿ
ಜಯ ನಿನಗೆ ಕರುನಾಡ ಬನಶಂಕರಿ

Sunday, July 17, 2011

ಸಂಖ್ಯಾ ಸ್ವಾರಸ್ಯ

ಷಡ್ರಸಗಳು: ಮಧುರ, ಆಮ್ಲ, ತಿಕ್ತ, ಕಟು, ಕಷಾಯ, ಲವಣ
(ಸಿಹಿ, ಹುಳಿ, ಕಹಿ, ಖಾರ, ಒಗರು, ಉಪ್ಪು)
ಷಡೃತುಗಳು: ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ
ಷಡ್ದರ್ಶನಗಳು: ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸಾ, ಉತ್ತರಮೀಮಾಂಸಾ.
ಪ್ರವರ್ತಕರು: ಕಪಿಲ, ಪತಂಜಲ, ಗೌತಮ, ಕಣಾದ, ಜೈಮಿನಿ, ವ್ಯಾಸ
ಷಟ್ಕರ್ಮಗಳು: ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ


ಸಪ್ತಚಿರಂಜೀವಿಗಳು: ಅಶ್ವತ್ತಾಮ, ಬಲಿ , ವ್ಯಾಸ, ಹನುಮಂತ, ವಿಭೀಷಣ, ಕೃಪ, ಪರಶುರಾಮ
ಸಪ್ತಸಮುದ್ರ: ಲವಣ,ಇಕ್ಷು, ಸುರಾ, ಸರ್ಪಿಃ,ದಧಿ, ಕ್ಷೀರ , ಶುದ್ಧೋದಕ
ಸಪ್ತಧಾತುಗಳು: ರಸ, ರಕ್ತ,ಮಾಂಸ, ಮೇದಸ್ಸು, ಅಸ್ಥಿ, ವೀರ್ಯ, ಶುಕ್ರ
ಸಪ್ತಲೋಕಃ: ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಳ
ಸಪ್ತಮಾತೃಕೆಯರು: ಬ್ರಾಹ್ಮೀ, ಮಾಹೇಶ್ವರೀ, ಕೌಮಾರಿ, ವೈಷ್ಣವೀ,ವಾರಾಹೀ,ಇಂದ್ರಾಣೀ, ಚಾಮುಂಡ
ಸಪ್ತಕುದುರೆಗಳು: ಗಾಯತ್ರೀ, ತ್ರಿಷ್ಟುಪ್, ಜಗತೀ, ಅನುಷ್ಟುಪ್, ಪಂಕ್ತಿಃ, ಬೃಹತೀ, ಉಷ್ಣಿಕ್

ಅಷ್ಟದಿಕ್ಪಾಲಕರು: ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ, ಈಶಾನ
ಅವರ ಪತ್ನಿಯರು: ಶಚೀ, ಸ್ವಾಹಾ, ಶ್ಯಾಮಲಾ, ದೀರ್ಘಾ, ಗಂಗಾ, ಅಂಜನಾ, ಚಿತ್ರಲೇಖಾ, ಪಾರ್ವತೀ ದೇವಿಯರು.
ಅಷ್ಟಸಿದ್ಧಿಗಳು: ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ
ಅಷ್ಟಾಂಗಗಳು: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ
ಅಷ್ಟಾವರಣಗಳು: ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ,ರುದ್ರಾಕ್ಷ, ಮಂತ್ರ.

ನವರಸ: ಶೃಂಗಾರ, ವೀರ, ಕರುಣ, ಅದ್ಬುತ, ಹಾಸ್ಯ, ಭಯಾನಕ, ಬೀಭತ್ಸ, ರೌದ್ರ, ಶಾಂತ
ನವರತ್ನ: ವಜ್ರ, ವೈರೂಢ್ಯ,ಗೋಮೇಧಿಕ, ಪುಷ್ಯರಾಗ, ನೀಲ, ಮರಕತ, ಮಾಣಿಕ್ಯ, ಹವಳ, ಮುತ್ತು.
ನವವಿಧ ಭಕ್ತಿ: ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ,ವಂದನ, ದಾಸ್ಯ, ಸಖ್ಯ, ಆತ್ಮಸಮರ್ಪಣ

Monday, June 27, 2011

ಭಾಷೆ ಮತ್ತು ಕ್ರಾಂತಿ




ಈಗೊಮ್ಮೆ ತತ್ತಕ್ಷಣ ಈ ಭಾಷೆಯನು
ಅರ್ಥೈಸಿಕೊಳ್ಳವ ಪ್ರಯತ್ನ ಬಿಟ್ಟು --
ಸುತ್ತ ಆವರಿಸಿದ ರಕ್ತ ಸ್ನಿಗ್ದ
ಗಾಳಿಗೆ ಮಾತನಾಡಲು ಅನುವು ಮಾಡಿಕೊಟ್ಟು,
ಮತ್ತಷ್ಟೂ ಕಿವಿಗಳು ದಂಗೆದ್ದು
ನಮ್ಮ ನಿನ್ನೆಯ ಬುಡ-ಬೇರುಗಳನ್ನು
ಗಟ್ಟಿಯಾಗಿಸುವ ತನಕ.

ಮೂಕ ಜಡ ವಾಸ್ತವಕ್ಕೆ
ಜಂಗಮ ವಾಗ್ಝರಿಯನೇಕೆ ಆರೋಪಿಸಲಿ?
ಬಳಸದ ಬಾಯ್ಗಳ ತುಕ್ಕುಗಟ್ಟಿದ ತುಟಿಗಳಿಗೇಕೆ
ಸಂಧಾನದ ಪಾರುಪತ್ಯವನ್ನೀಯಲಿ?
ಒಳಿತನೆಲ್ಲವ ಹೊರದೂಡಿ ನಡೆವ
ಕಿವುಡು ಕಿವಿಗಳಿಗಾವ ಮಹತ್ವವನೀಯಲಿ?

ಸಾಕು.
ಇನ್ನರ್ಥೈಸುವ ಗೀಳಿಗಿತ್ತಾಯ್ತು ತರ್ಪಣ.
ಗಂಟುಹಾಕಿದ ಹುಬ್ಬು ಮೋರೆಯ
ದಂಗೆದ್ದ ಕಿವಿಳಿಂತಿರಲಿ.
ಬರಡು ಬರಡಾದ ಹೃದಯಗಳಿಗೆನೆನ್ನುವಿರಿ?

Tuesday, May 31, 2011

ಸುಧರ್ಮ - ಸಂಸ್ಕೃತ ದಿನ ಪತ್ರಿಕೆ


ಮೈಸೂರಿನಿಂದ ಪ್ರಕಟವಾಗುವ ಸುಧರ್ಮ ಸಂಸ್ಕೃತ ದಿನ ಪತ್ರಿಕೆ ನಿಜಕ್ಕೂ ಅದ್ವಿತೀಯ . ಕಳೆದ ೪೭ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಪತ್ರಿಕೆಗೆ ವಾರ್ಷಿಕ ಚಂದ ಕೇವಲ ೩೦೦ ರೂಪಾಯಿಗಳು. ಪ್ರಸಕ್ತ ವಿದ್ಯಮಾನಗಳಲ್ಲದೆ ಸುಭಾಷಿತ ಇತ್ಯಾದಿ ಸ್ವಾರಸ್ಯ ಪೂರ್ಣ ಲೇಖನಗಳನ್ನು ಒಳಗೊಂಡ ಸುಧರ್ಮ ಸುಸಂಸ್ಕೃತ ಕುಟುಂಬಗಳ ಒಡನಾಡಿ.

http://sudharma.epapertoday.com



_______

Thursday, April 28, 2011

ಪ್ರಧಾನಿಗೊಂದು ಕಿವಿಮಾತು.


ಮಹಾಭಾರತದಲ್ಲಿ ಗುರು ಶುಕ್ರಾಚಾರ್ಯರು ವೃಷಪರ್ವನಿಗೆ ಉಪದೇಶಿಸುವ ಸಂದರ್ಭ. ಗುರುಗಳು ಹೀಗೆನ್ನುತ್ತಾರೆ -- " ರಾಜನ್! ಅಧರ್ಮವನಾಚರಿಸಿದರೆ ಅದು ಹಸುವಿನಂತೆ ಕೂಡಲೆ ಫಲವನ್ನೆಯುವುದಿಲ್ಲ. ಅದು ಮೆಲ್ಲನೆ ತಿರುಗಿ, ಅಧರ್ಮಿಯ ಬುಡವನ್ನೇ ಕದಿದುಹಾಕುತ್ತದೆ.

ನಾಧರ್ಮಶ್ಚರಿತೋ ರಾಜನ್ ಸದ್ಯಃ ಫಲತಿ ಗೌರಿವ |
ಶನೈರಾವರ್ತ್ಯಮಾನೋ ಹಿ ಕರ್ತುರ್ಮೂಲಾನಿ ಕೃತಂತಿ ||
-- ಮಹಾಭಾರತ, ಆದಿ, ೮೦-೨

ಪ್ರಸ್ತುತ ರಾಷ್ಟ್ರೀಯ ರಾಜಕಾರಣದಲ್ಲಿ ಹಗರಣಗಳದ್ದೆ ಕಾರುಬಾರು. ಲಕ್ಷಕೋಟಿ ಹಗರಣಗಳು ಸರ್ವೇಸಾಮಾನ್ಯವಾಗಿವೆ. ೨ಜಿ ಹಗರಣ, ಕಾಮನ್ ವೆಲ್ಥ್ ಹಗರಣ (ಸಮೂಹ ಐಶ್ವರ್ಯ!), "ಆದರ್ಶ" ಹಗರಣ, ಹೀಗೆ ಒಂದೇ, ಎರಡೇ... ರಾಜನಾದವನು ಸ್ವತಃ ಸದ್ಚಾರಿತ್ರನು, ಆದರೆ ಮಂತ್ರಿ ವರ್ಗದಲ್ಲಿ ಭ್ರಷ್ಟರು ಎಂದು ಸಮಜಾಯಿಶಿ ಹೇಳಿ , ಭ್ರಷ್ಟ್ರಾಚಾರದ ವಿರುದ್ದ ಭುಗಿಲೆದ್ದ ಬೆಂಕಿಯನ್ನು ತಣ್ಣಗಾಗಿಸಳು ಸಾಧ್ಯವಿಲ್ಲ. ಅದು ನಾಯಕ ಲಕ್ಷಣವಲ್ಲ. ರಾಜನೀತಿಯ ಬಗ್ಗೆ ರಾಮಾಯಣ ಹೀಗೆನ್ನುತ್ತದೆ --

ರಾಜಾ ಧರ್ಮಶ್ಚ ಕಾಮಶ್ಚ ದ್ರವ್ಯಾಣಾಂ ಚೋತ್ತಮೋ ನಿಧಿಃ|
ಧರ್ಮ ಶುಭಂ ವಾ ಪಾಪಂ ವಾ ರಾಜಮೂಲಂ ಪ್ರವರ್ತತೇ ||
- ರಾಮಾಯಣ, ಅರಣ್ಯ, ೫೦-೧೦

ರಾಜನೇ ಧರ್ಮಕಾಮಗಳಿಗೆ ಪ್ರವರ್ತಕ, ಅವನೇ ಅರ್ಥಕ್ಕೆ ನಿಧಿ. ಧರ್ಮವಾಗಲಿ, ಒಳ್ಳೆಯದಾಗಲಿ, ಕೆಟ್ಟದಾಗಲಿ - ರಾಜನ ಪ್ರೇರಣೆಯಿಂದ ನಡೆಯುತ್ತದೆ.

ರಾಜಮೂಲವು ಇಂತಿರುವಾಗ ಸುತ್ತ ಹರಡಿರುವ ಭ್ರಷ್ಟ ಸಂತತಿಯನ್ನು ತಮ್ಮದೆಂದು ಸ್ವೀಕರಿಸಿ, ಅದನ್ನು ಬುಡಸಮೇತ ಕಿತ್ತೊಗೆಯುವ ನಿಟ್ಟಿನಲ್ಲಿ ರಾಜಸಂಕಲ್ಪವಾಗಲಿ.

Wednesday, March 23, 2011

ನಮನ



ಇಂದು ೨೩ನೇ ಮಾರ್ಚ್ ೨೦೧೧, ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರ ಬಲಿದಾನ ದಿನ. ಎಲ್ಲೆಡೆ ಬ್ರಷ್ಟಾಚಾರ, ಅರಾಜಕತೆ, ನೈತಿಕತೆಯ ಅಭಾವ ಕಾಡುತ್ತಿರುವ ಪ್ರಸ್ತುತ ಸಂಧರ್ಭದಲ್ಲಿ, ಈ ಮಹನೀಯರ ಬಲಿದಾನದ ಕಥೆ ನಮ್ಮ ದೇಶದ ಯುವಕರನ್ನು ಒಳ್ಳೆಯ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಲಿ. ನಮ್ಮ ನೇತಾರರಿಗೆ ’ತ್ಯಾಗ’ ಎಂದರೆ ಏನು ಎಂಬುದರ ಬಗ್ಗೆ ನೆನಪಿಸಲಿ.

Wednesday, March 02, 2011

ಲವ ಲೇಶ

ದಮ್ಮಯ್ಯ ! ನನ್ನ ಬಳಿಗೆ ಸಂಪೂರ್ಣ ಸತ್ಯವನು ತರಲು ಬೇಡಿರಯ್ಯ
ದಾಹವೆಂದೆನಷ್ಟೇ, ಇಡೀ ಸಮುದ್ರವನ್ನೇ ಕೇಳಲಿಲ್ಲ.
ಬೆಳಕನರಿಸಿದೆ, ಸಮಸ್ತ ತೇಜೋ ಮಂಡಲವಲ್ಲ.
ಆದರೆ ಸುಳುಹು ತರಲಾರದಿರಿ. ಒಂದು ಚುಕ್ಕಿ .... ಎಳ್ಳಷ್ಟು ...ಕಿಂಚಿತ್ತು....
ಬೆಳ್ಳಕ್ಕಿ ನೀರ್ದಾನಿಯಿಂದೆರೆಡು ಗುಟುಕು ಹೆಕ್ಕಿ ಹಾರುವ ಹಾಗೆ
ತೇವದೊಡಗೂಡಿ ಲವ ಲೇಶ ಹೀರಿ ಗಾಳಿ ಸಾಗಿಸುವ ಹಾಗೆ

Saturday, February 12, 2011

ಶ್ರೀಕರ ಆಮೋದಿನಿ




ನಂಜನಗೂಡಿನ ಸದ್ವೈದ್ಯಶಾಲಾ ಕರುನಾಡಿನಲ್ಲಿ ಮನೆಮಾತು. ಆಯುರ್ವೇದ-ಪ್ರಕೃತಿಚಿಕಿತ್ಸೆಗಳನ್ನು ಮನೆಮನೆಗೆ ತಲಪಿಸುವಲ್ಲಿ ಶ್ರೀಯುತರಾದ ಬಿ.ವಿ.ಪಂಡಿತರ ಸೇವೆ ಮಹತ್ತರವಾದುದು. ಸದ್ವೈದ್ಯಶಾಲೆಯಿಂದ ಗಾಯಕ-ವಾಚಕ ವರ್ಗಕ್ಕೆ ವರದಾನದಂತಿರುವುದು ಶ್ರೀ ಕರ ಆಮೋದಿನಿ . ಆಮೋದಿನಿಯ ಗುಳಿಗೆ ಸೇವಿಸುವುದರಿಂದ ಧ್ವನಿ ತೆರೆದು ಕೊಳ್ಳುತ್ತದೆ. ಕಚೇರಿಯ ಅಥವಾ ಪ್ರವಚನದ ಮುಂಚೆ ಒಂದು ಗುಳಿಗೆ ಬಾಯಿನಲ್ಲಿ ಹಾಕಿಕೊಂದರೆ ಸುಮಾರು ಹೊತ್ತು ಹಾಡಿ-ಮಾತನಾಡಿದರು ಗಂಟಲಿನಲ್ಲಿ ಆಯಾಸ ಅಥವಾ ನೋವು ತಿಳಿಯುವುದಿಲ್ಲ. ಅದಲ್ಲದೆ ಸ್ವರವು ಸರಿಯಾಗಿ ಹೊರಹೊಮ್ಮುವಂತೆ ಸಹಕಾರವನ್ನೀಯುತ್ತದೆ. ಆದ್ದರಿಂದಲೆ ಬಹಳಷ್ಟು ಗಾಯಕರ ಕೈಚೀಲಗಳಲ್ಲಿ ಆಮೋದಿನಿ ಶೋಭಿಸುತ್ತಿರುತ್ತದೆ. ಮಧುಕ, ಕುಂಕುಮಕೇಸರ ಗಳನ್ನೊಳಗೊಂಡ ಶ್ರೀಕರ ಆಮೋದಿನಿ ಸ್ವರಬೇಧ, ಸ್ವರಭಂಗ, ನಾಸಗಥ ರೋಗ, ಗಲರೋಗಗಳಿಗೆ ರಾಮಬಾಣ.
ಶ್ರೀಕರ ಆಮೋದಿನಿ - ಗಾಯಕ ವಾಚಕರ ಪಾಲಿನ ಸಂಜೀವಿನಿ.

Friday, February 11, 2011

ಒಂದು ಹಂತದ ನಂತರ

ತೃಪ್ತಿ ತರಿಸದ
ಸಾವಿರಾರು ಸಾಧನೆಗಳನು
ಹೇರಿ, ಗುಡ್ಡೆ ಹಾಕಿಕೊಂಡ ನಂತರ...

ತಿದ್ದಿಕೊಳಲು ಸಾಲ್ಗಟ್ಟಿ ನಿಂದ ಹಿಂದಿನ
ಸೋಲುಗಳ ಸರಪಳಿಯ ನಡುವಿರುವ ಅಂತರ ....

ಮುಂಬರುವ ಸೋಲುಗಳನು
ಮುತುವರ್ಜಿಯಿಂದ ಆಯ್ದು, ಹೆಕ್ಕಿ
ಸೋಲನಪ್ಪಿಕೊಳಲು ಸಜ್ಜಾಗುತಿರುವೆವೆ ನಿರಂತರ ? ..
ಒಂದು ಹಂತದ ನಂತರ... ಒಂದು ಹಂತದ ನಂತರ

Sunday, January 16, 2011

ಧನ್ವಂತ್ರಿ ವನ




ಙ್ನಾನಭಾರತಿಯ ಆವರಣದಲ್ಲಿ ೩೭ ಎಕರೆ ಧನ್ವಂತ್ರಿವನವಿದೆ. ಇದೊಂದು ನೈಸರ್ಗಿಕ ದವಾಖಾನೆ. ಸಾರ್ವಜನಿಕರಿಗೆ ಔಷಧೀಯ ಸಸ್ಯಗಳನ್ನು ವಿತರಿಸಲು ಈ ವನ ಸಿದ್ದವಾಗಿದೆ. ಕರ್ನಾಟಕ ಅರಣ್ಯ ಇಲಾಖೆ, ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ಇಲಾಖೆ ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ೧೯೮೭ರಲ್ಲಿ ಔಷಧೀಯ ಸಸ್ಯಗಳ ವನವನ್ನು ಬೆಳಸಲಾಯಿತು. ಇಲ್ಲಿ ಇರುವ ಪ್ರತಿಯೊಂದು ಗಿಡ, ಮರ, ಬೇರು, ಎಲೆ ಔಷಧೀಯ ಗುಣ ಹೊಂದಿದೆ. ಇಲ್ಲಿ ಸಸಿಗಳು ಗರಿಷ್ಟ ೩ ರೂಪಾಯಿಗೆ ದೊರೆಯುತ್ತವೆ. ಈ ಸಸಿಗಳನ್ನು ತಂದು ಸಣ್ಣಪುಟ್ಟ ಪಾಟುಗಳಲ್ಲಿ, ಹೂದಾನಿಗಳಲ್ಲಿ ಬೆಳೆಸಿ ಆರೋಗ್ಯ ಕಾಪಾಡಿಕೊಳ್ಳಬಹುದು.

ಸಸ್ಯಗಳ ಔಷಧೀಯ ಗುಣ: ಬಿಳಿಹಿಂಡಿ ಗಿಡದ ಬೇರನ್ನು ೩೦ ದಿನ ಬಳಸುವುದರಿಂದ ಕಿಡ್ನಿ ಸ್ಟೋನ್ ಕರಗಿಸಬಹುದು, ಮಧುನಾಶಿನಿ ಎಲೆಯಿಂದ ಸಕ್ಕರೆ ಖಾಯಿಲೆ ಹತೋಟಿಗೆ ತರಬಹುದು, ಬಾಯಿಹುಣ್ಣಿಗೆ ಬಸಲೆ ಎಲೆ, ರೋಗನಿರೋಧಕ ಶಕ್ತಿಗೆ ಶ್ರೀತುಳಸಿ, ಎಲ್ಲ ವಿಧವಾದ ಅಲರ್ಜಿಗೆ ದೊಡ್ಡಪತ್ರೆ ಸೊಪ್ಪು, ಸುಸ್ತು- ಜ್ವರ ಇತ್ಯಾದಿಗೆ ಅಮೃತಬಳ್ಳಿ, ಙ್ನಾಪಕಶಕ್ತಿಗೆ ಒಂದೆಲಗ. ಉಷ್ಣನಿವಾರಿಸಲು ಸೊಗದೆ ಬೇರು, ರಕ್ತಹೀನತೆ ನಿವಾರಣಗೆ ಚಕ್ರಮುನಿ ಸೊಪ್ಪು, ಕೆಮ್ಮು ನಿವಾರಣೆಗೆ ಆಡುಸೋಗೆ ಸೊಪ್ಪು...ಹೀಗೆ ಪಟ್ಟಿ ಬೆಳೆಯುತ್ತಲೆ ಇರುತ್ತದೆ.

ಇನ್ನೇಕೆ ತಡ ? ನಿಮ್ಮ ನೈಸರ್ಗಿಕ ತೋಟವನ್ನು ಪ್ರಾರಂಭಿಸಿ. ಸಂಪರ್ಕ: ಚಂದ್ರಕಾಂತ್, ವಲಯ ಅರಣ್ಯಾಧಿಕಾರಿ - ೯೪೪೮೫೧೯೩೪೭

ಕೃಪೆ: ವಿಜಯಕರ್ನಾಟಕ. ೪ ಜನವರಿ ೨೦೧೧

Tuesday, December 28, 2010

ರಾಗರಸಧಾರ


ಗಾನವಾರಿಧಿ ವಿದ್ವಾನ್ ಎಸ್.ಶಂಕರ್ ಅವರು ಅರವತ್ತು ವಸಂತಗಳು ಪೂರೈಸಿದ ಸಂದರ್ಭ, ಅರವತ್ತು ರಾಗಗಳನ್ನು ಒಳಗೊಂಡ ದೇವಿ ಕೃತಿಗಳ ರಾಗಮಾಲಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಪರಿಕಲ್ಪನೆ, ಸಂಗೀತ, ನಿರ್ದೇಶನ ಮತ್ತು ಗಾಯನ ವಿದ್ವಾನ್.ಎಸ್.ಶಂಕರ್ ಅವರದಾದರೆ, ವಾಗ್ಗೇಯಕಾರರಾಗಿ ಅಷ್ಟಾವಧಾನಿ ಆರ್. ಶಂಕರ್ ಉತ್ತಮ ಕೃತರತ್ನವನ್ನು ಸಹೃದಯರಿಗೆ ದಯಪಾಲಿಸಿದ್ದಾರೆ.

Monday, November 29, 2010

ರಾಮಾಯಣದಲ್ಲಿ ರಾಜನೀತಿ

ಶ್ರೀ ರಾಮಚಂದ್ರನು ರಾಮಾಯಣದ ಅಯೋಧ್ಯಾಕಾಂಡದಲ್ಲಿ ಭರತನಿಗೆ ಉಪದೇಶಿಸುತ್ತಾ ಹದಿನಾಲ್ಕು ರಾಜದೋಶಗಳ ಬಗ್ಗೆ ಹೀಗೆಂದಿದ್ದಾನೆ:

ನಾಸ್ತಿಕ್ಯಮನೃತಂ ಕ್ರೋಧಂ ಪ್ರಮಾದಂ ದೀರ್ಘಸೂತ್ರತಾಂ|
ಅದರ್ಶನಂ ಙ್ನಾನವತಾಮಾಲಸ್ಯಂ ಪಂಚವೃತ್ತಿತಾಂ||
ಏಕಚಿತನಮಥಾರ್ನಾಮನರ್ಥಙ್ನೈಶ್ಚ ಮಂತ್ರಣಂ|
ನಿಸ್ಚಿತಾನಾಮನಾರಂಭಂ ಮಂತ್ರಸ್ಯಾಪರಿರಕ್ಷಣಂ||
ಮಂಗಲಸ್ಯಾಪ್ರಯೋಗಂ ಚ ಪ್ರತ್ಯುತ್ಥಾನಂ ಚ ಸರ್ವತ:|
ಕಚ್ಚಿತ್ತ್ವಂ ವರ್ಜಯಸ್ಯೇತಾನ್ ರಾಜದೋಷಾಂಶ್ಚತುರ್ದಶ ||
ರಾಮಾಯಣ, ಅಯೋಧ್ಯಾ ೧೦೦ - ೬೫,೬೬,೬೭

ನಾಸ್ತಿಕತೆ, ಸುಳ್ಳು, ಸಿಟ್ಟು, ಅನವಧಾನ, ನಿಧಾನವಾಗಿ ತಡೆದು ಕೆಲಸ ಮಾಡುವುದು, ಪ್ರಾಙ್ನರಾದ ಸಜ್ಜನರೊಡನೆ ಸೇರದಿರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯಚಾಪಲ್ಯದಲ್ಲಿ ಮುಳುಗುವುದು, ಯಾರೊಡನೆಯೂ ಸಮಾಲೋಚನೆ ನಡೆಸದೆ ಏಕಪಕ್ಷೀಯವಾದ ನಿರ್ಧಾರ, ಅನುಭವವಿಲ್ಲದವರೊಡನೆ ಮಂತ್ರಾಲೋಚನೆ, ನಿಶ್ಚಯಿಸಿದ ಕಾರ್ಯವನ್ನು ಆರಂಭಿಸದಿರುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿ ಉಳಿಸಿಕೊಳ್ಳದಿರುವುದು, ಮಂಗಳಕರ ಶುಭಕಾರ್ಯವನ್ನು ಮಾಡದಿರುವುದು, ಎಲ್ಲ ಶತೃಗಳ ಮೇಲೂ ಏಕಕಾಲಕ್ಕೆ ಯುದ್ಧಾರಂಭ -- ಈ ಹದಿನಾಲ್ಕು ದೋಷಗಳಿಗೆ ಅವಕಾಶ ಕೊಡಬೇಡವೆಂದು ಭರತನಿಗೆ ಉಪದೇಶಿಸಿದನು.

ಶ್ರೀರಾಮನ ಹೆಸರು ಹೇಳಿಕೊಂಡು ಅಧಿಕಾರಗಿಟ್ಟಿಸಿದ ಇಂದಿನ ಕಿಶ್ಕಿಂದಾ ಪ್ರದೇಶದ ಸರ್ಕಾರ, ರಾಮ ಭರತನಿಗೆ ಮಾಡಬೇಡ ಎಂದು ಆದೇಶಿದ ಎಲ್ಲ ೧೪ ರಾಜದೋಷಗಳನ್ನೂ ಚಾಚೂ ತಪ್ಪದೆ ಮಾಡಿತೋರಿಸಿದೆ. ರಾಮನೇ ನಾಚುವ ರೀತಿ ಸೃಜನಾತ್ಮಕವಾಗಿ, ರಾಮನೂ ಯೋಚಿಸಿರದ ಹತ್ತು ಹಲವು ಹೊಸ ದೋಷಗಳನ್ನು ಹೊದ್ದು ಮೆರೆದಿದೆ. ಸ್ವಯಂ ಸೇವಕ ಸಂಘ ಅಂದರೆ ನಮ್ಮ "ಸೇವೆ" ಸ್ವಯಂ ನಾವೇ ಮಾಡಿಕೊಳ್ಳುವುದು ಎಂಬಷ್ಟು ಹೀನಾಯ ಸ್ಥಿತಿ ತಲುಪಿರುವುದು ನಿಜಕ್ಕೂ ವಿಶಾದನೀಯ. ಇನ್ನು ಮಂತ್ರಿಮಂಡಲದಲ್ಲಂತೂ ಅರಿಷ್ಡ್ವರ್ಗಂಗಳನು ಗೆದ್ದ ಅತಿರಥ ಮಹಾರಥರೆ ಇದ್ದಾರೆ. ನಾವು ಆರಿಸಿ ಕಳುಹಿಸಿದ ಈ ಜನಪ್ರತಿನಿಧಿಗಳಿಗೆ ಕಾಮ, ಕ್ರೋಧ, ಮದ, ಲೋಭ, ಮೋಹ, ಮತ್ಸರಗಳು ಯಾವವೂ ತಿಳಿಯದು. ಕಾಮವನ್ನು ಗೆದ್ದ ರೇಣುಕಾಚಾರ್ಯ - ಹಾಲಪ್ಪನಂತವರು, ಕ್ರೋಧವನ್ನು ಗೆದ್ದ ಬಚ್ಚೆಗೌಡರು, ಮದವನ್ನು ಗೆದ್ದು - ರಾಜ್ಯಪಾಲರು, ಲೋಕಾಯುಕ್ತರನ್ನು ಒಮ್ಮೆಲೆ ಅತಿಯಾಗಿ ಗೌರವಿಸುವ ಮುಖ್ಯಮಂತ್ರಿಗಳು, ಲೋಭ ಗೆದ್ದ ಶೋಭ, ಮೋಹವೇ ಅರಿಯದ, ಪುತ್ರ ವ್ಯಾಮೋಹ ಅರಿಯದ ಕಟ್ಟಾ ಮತ್ತು ಮುಖ್ಯಮಂತ್ರಿಗಳು, ಮತ್ಸರದ ಕಿಡಿಯೂ ಸುಳಿಯದ ರೆಡ್ಡಿ ಸೋದರರು -- ಇನ್ನೂ ಹೀಗೆ ಹತ್ತು ಹಲವು ತೋಜೋ ಮಣಿಗಳಿಂದ ಕಂಗೊಳಿಸುವ ಕಮಲ ಸಾಂರಾಜ್ಯವನ್ನು ಚುನಾಯಿಸಿ ಕಳುಹಿಸಿದ ನಾವು ಗಳು ಎಷ್ಟು ಧನ್ಯರು ಎಂದು ನೆನೆದರೆ ಹೇಳಿಕೊಳ್ಳಲಾರದ ಹೆಮ್ಮೆ ಎನಿಸುತ್ತದೆ. ಒಂದು ವ್ಯವಸ್ಥೆಯಲ್ಲೇ ವಿಶ್ವಾಸ ಕಳೆದುಕೊಳ್ಳುವಷ್ಟು ಪ್ರಮಾಣದಲ್ಲಿ ಹಗರಣಗಳು ನಡೆದಿವೆ. ರಾಮನ ಪಕ್ಷಕ್ಕೆ ಮತ ಹಾಕಿದ ಮತದಾರನ ಮುಖಭಂಗವಾಗಿದೆ.ಸುತ್ತಲೂ ನಡೆಯುತ್ತಿರುವ ಭ್ರಷ್ಟಾಚಾರದ ಚಕ್ರವ್ಯೂಹದಲ್ಲಿ ಸಿಲುಕಿ ದನಿಗಾಣದೆ ಏಳು ಸುತ್ತಿನ ಕೋಟೆಯಲ್ಲಿ ಅಸಹಾಯಕನಾಗಿ ಶ್ರೀಸಾಮಾನ್ಯ ಅವಿತು ಕುಳಿತಿದ್ದಾನೆ. ಎಂದು ಈ ಸುಪ್ತ ಜ್ವಾಲಾಮುಖಿ ಸಿಡಿದು ನಿಲ್ಲುವುದೂ ಆ ದಿನ ನಾನು - ತಾನು , ರಾಮ - ರಹೀಮ ಯಾರೊಬ್ಬರನೂ ನೋಡದೆ ಎಲ್ಲರನ್ನೂ ಆಹುತಿ ತೆಗೆದು ಕೊಳ್ಳುತ್ತದೆ.

ಸೂ: ನಾನು ಈ ಬ್ಲಾಗ್ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆದಿರುವುದು ಅತ್ಯಂತ ಕಡಿಮೆ. ಆದರೆ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯ"ಮಾನ"ಗಳ ಬಗ್ಗೆ ಬಹುವಾಗಿ ನೊಂದು ರಾಮನ ಹೆಸರು ಹೇಳಿ ಇನ್ನಾದರೂ ಧರ್ಮವನ್ನು ರಕ್ಷಿಸು ಎಂದು ಪ್ರಾಥಿಸಿ ಈ ಸಾಲುಗಳನ್ನು ಇಲ್ಲಿ ಪೋಸ್ಟಿಸಿದೆ.