Thursday, March 13, 2008

ಮುಯ್ಯಿಗೆ ಮುಯ್ಯಿ

ಶನಿವಾರ ಬೆಳಗ್ಗೆ ಸುಮಾರು ಹತ್ತು ಘಂಟೆ ಸಮಯ ಇದ್ದಿರ ಬಹುದು. ನನ್ನ ಪುಟಾಣಿ ಕಿಟ್ಟ ಓಡ್ಕೊಂಡು ಬಂದು, ನನ್ನ ಕೈ ಹಿಡಿದು, ಹೊರಗೆ ಎಳ್ಕೊಂಡು ಹೋದ. ಪಾಂಡವರ ಮನೇಲಿ ಘಟೋದ್ಗಜ ಹುಟ್ಟ್ಕೊಂಡ ಹಾಗೆ ಹುಟ್ಟಿದಾನೆ ನಮ್ಮ ಮನೇಲಿ ಇವನು. ಕೈಗೆ ಸಿಕ್ಕಿದನ್ನ ಕ್ಷಣಾರ್ಧದಲ್ಲಿ ಧ್ವಂಸ ಮಾಡೋ ಕಿರಾತಕ ನನ್ನ ಕಿಟ್ಟ. ರಜಾ ದಿನ ಆಟಾಡ್ಕೊಳೊ ಅಂತ ಹೊರಗೆ ಬಿಟ್ರೆ, ಹೋಗಿ ಆ ಪಕ್ಕದ್ಮನೆ ಖನ್ನಾ ಮನೆ ಬಾಗಿಲನ್ನ ಬ್ಲೇಡ್ ತೊಗೊಂಡು ಗೀಚಿ ಹಾಕಿದಾನೆ ಈ ಮುಂಡೆಮಗ. ಏನ್ ಅಂತಾ ತಲೆ ಹೋಗೊ ಅಷ್ಟು ಘನಂಧಾರೀ ಡ್ಯಾಮೇಜ್ ಆಗದೆ ಇದ್ರೂನೂವೇ , ಬಾಗಿಲ ಮೇಲೆ ವಿಚಿತ್ರ ವಿಚಿತ್ರವಾಗಿ ಕೆತ್ತ್ ಹಾಕಿದಾನೆ . ಲಕ್ಷಣವಾಗಿ ಅಲ್ಲಾದ್ರೂ 'ಅ ಆ ಇ ಈ..' ಗೀಚಿದಾನೇನೋ ಅಂದ್ರೆ, ಒಳ್ಳೆ ಆದಿಮಾನವ ಗುಹಾಂತರ ದೇವಾಲಯದಲ್ಲಿ, ಬೇಕಾಬಿಟ್ಟಿ ರೇಖಾಚಿತ್ರ ಗೀಚಿದ ಥರ ಗೀಚಿದಾನೆ. ಯಾರಿಗೂ ಕಾಣ್ಸೋ ಅಷ್ಟು - ಗೊತ್ತಾಗೋ ಅಷ್ಟು ಆಳವಾಗಿ ಕೆತ್ತಿರ್ಲಿಲ್ಲ ಬಿಡಿ. ಸುತ್ತಾ ಮುತ್ತಾ ಬೇರೆ ಯಾರೂ ಇರ್ಲಿಲ್ಲ ನೋಡಿ, ಚುಪ್ ಚಾಪ್ ಅಲ್ಲಿಂದ ಮಗನ ಜೊತೆ ಕಳ್ಚ್ಕೊಲೋಣ ಅಂತ ಅನ್ಕೊಂಡೆ ಮೊದಲು. ಅಲ್ಲ ಮಾತಿಗೆ ಹೇಳ್ತೀನಿ, ಯಾರಿಗಿರಲ್ಲ ಇಂತ ವೀಕ್ ಮೊಮೆಂಟು ಹೇಳಿ ನೋಡೋಣ; ನಾನು ಈ ವಿಷಯವನ್ನು ನಿಸ್ಸಂಕೋಚವಾಗಿ ಹೇಳ್ಕೋತಾ ಇದೀನಿ ಅಷ್ಟೆ, ಎಲ್ಲರಿಗೂ ಪರಾರಿ ಆಗೋಣಾ ಅಂತ್ಲೇ ಅನ್ಸೋದು ಮೊದಲು. ಆದರೆ ಪಕ್ಕದಮನೆಗೆ ಬಾಗಿಲಿಗೆ ನನ್ನ ಜೇಬಿನಿಂದ ಖರ್ಚು ವೆಚ್ಚ ಆಗಿ, ಹಾಕಿಸ ಬೇಕಾದ ಬಣ್ಣ ಅಷ್ಟೇನೂ ದುಬಾರಿ ಆಗಲ್ಲ ಅಂತ ಊಹೆ ಮಾಡಿದ ಮೇಲೆ, ಸತ್ಯಕ್ಕೂ ಒಂದು 'ಸ್ಮಾಲ್ ಚಾನ್ಚೆ' ಕೊಡೋಣ ಅಂತ ಧೈರ್ಯಮಾಡಿ ಬಾಗಿಲು ತಟ್ಟೇ ಬಿಟ್ಟೆ. ಒಳಗಡೆ ಇಂದ ಸುಮಾರು ಆರೂವರೆ ಅಡಿ ದೇಹ ಬಾಗಿಲು ತೆಗೀತು. ಭೀಮಕಾಯನಾದ್ರೂ ನಗ್ನಗ್ತಾ ಬರಮಾಡಿಕೊಂಡ್ರು ಖನ್ನ ಅಂಕಲ್ಲು . ನಮ್ಮ ವಠಾರಕ್ಕೆ ಹೊಸದಾಗಿ ಬಂದಿದ್ದ ಅವರು, ತಮ್ಮನ್ನ ತಾವೇ ಪರಿಚಯ ಮಾಡ್ಕೊಂಡ್ರು. ನಾನು ಮುಜ್ಮುಜುಗರವಾಗಿ: 'ನೋಡಿ ಸ್ವಾಮಿ, ನಮ್ಮ ತುಂಟ ಕಿಟ್ಟ, ಹೀಗೆ ನಿಮ್ಮ ಮನೆ ಬಾಗಿಲಿಗೆ ಗಾಯಮಾಡಿದಾನೆ' ಅಂತ ಹೇಳ್ತಾ, ಹ್ಯಾಪ್ಮುಖ ಹಾಕೊಂಡು, ರೇಖಾಚಿತ್ರಕ್ಕೆ ಬೆರಳು ಮಾಡಿ ತೋರಿಸಿದೆ. ಅದಕ್ಕೆ ಅವರು "ಎಲ್ಲಿ ಎಲ್ಲಿ, ಯಾವುದರ ಬಗ್ಗೆ ನೀವು ಹೇಳ್ಥಾ ಇರೋದು ತೋರ್ಸಿ?" ಅಂತ ಕಣ್ಣ್ಣಿಗೆ ಕಾಣ್ಸೋದೆ ಇಲ್ವೇನೋ ಅನ್ನೋಷ್ತು; ಗೀಚಿರೋದು ಲೆಕ್ಕವೇ ಇಲ್ಲವೇನೋ ಅನ್ಸೋಷ್ಟು, ತಾತ್ಸಾರವಾಗಿ ಅದರ ಕಡೆ ನೋಡಿದರು. ಜೋರಾಗಿ ನಗುತ್ತಾ ನನ್ನ ಬೆನ್ನ ಮೇಲೆ ಒಂದು ಏಟುಹಾಕಿ " ಹಾ! ಹ್ಹಾ! ಹ್ಹಾ!!!, ಏನು ಸ್ವಾಮಿ ನೀವು, ಇಷ್ಟಕೆಲ್ಲ ಹೀಗೆ ಪ್ಫಾರ್ಮಲ್ಲಗಿ ಬಿಟ್ರೆ ಹೇಗೆ ಹೇಳಿ. ಮಕ್ಕಳು ತೀಟೆ ಮಾಡದೆ ನಾವು - ನೀವು ತೀಟೆ ಮಾಡಕ್ಕೆ ಆಗುತ್ಯೇ?" ಅಂತ ಹೇಳೋದೆ?! ಮತ್ತೊಂದು ಧರ್ಮದೇಟು ಬೆನ್ನ ಮೇಲೆ ಹಾಕಿ, ಕೈ ಕುಲುಕುತ್ತಾ ಜೋರ್ ಜೋರಾಗಿ ನಾಗಡ್ಕೊಂಡು ಬೀಳ್ಕೊಟ್ಟರು. ಈ ದಿನಗಳಲ್ಲಿ ಸಹಾ ಇಂತಾ ಕೂಲ್ ಜನಾನೂ ಸಿಗ್ತಾರಾ ಅಂತ ನಾನು ಮನದಲ್ಲೆ ಅನ್ಕೊಂಡು ವಾಪಸ್ ಮನೆಗೆ ಬಂದೆ. ಅಲ್ಲಿ ವರೆಗು ಕಿಟಕಿನಲ್ಲೇ ಎಗರಿ ಎಗರಿ ಹೊರ ಜಗತ್ತಿನೆಲ್ಲಾ ನೋಡುತ್ತಿದ ನಮ್ಮನೆಯಾಕೆ, "ಏಷ್ಟು ಕೇಳಿದ್ರು ರೊಕ್ಕ?" ಅಂತ ಮುದ್ದು ಮಗನ ತಲೆ ಸವರುತ್ತ ನನ್ನ ಕಡೆ ಮುಖ ಮಾಡಿ ಕೇಳಿದಳು. ತಾರಮಯ್ಯ ಅಂತ ಹೀಗೇ-ಹೀಗೇ ಕೈ ಅಲ್ಲಾಡಿಸಿ "ಏನೂ ಕೇಳಲಿಲ್ಲ ಕಣೆ" ಅನ್ಕೊಂಡು ನೀರು ಕುಡಿಯಕ್ಕೆ ಅಂತ ಅಡುಗೆಮನೆ ಒಳಗಡೆ ನಡೆದೆ. ದುಡ್ಡು ಕೇಳಲಿಲ್ಲ ಅಂತ ನಂಬೋದಕ್ಕೆ ಆಗದೆ ನಿಂತ ಅವನ ತಾಯಿಯ ಕೈಗೆ ಕಿಟ್ಟಿ ಒಂದು ಸಣ್ಣ ಪ್ಯಾಕೇಟ್ ಕೊಟ್ಟು, ಮತ್ತೆ ಹೊರಗೆ ಆಟಾ ಆಡೋಕೆ ಅನ್ನೋ ನೆಪದಲ್ಲಿ ಇನ್ನೇನೋ ಮನೆಹಾಳು ಕೆಲಸ ಮಾಡೊದಕ್ಕೆ ಓಡಿ ಹೋದ. ಪ್ಯಾಕೇಟ್ ನಲ್ಲಿ ಏನಪ್ಪ ಇದೆ ಅಂತ ನೋಡಿದ್ರೆ, ಒಂದು ಉದ್ದದ ಚಾಕ್ಲೇಟ್ ಕವರ್. ಮೇಲೆ ಒಂದು ಕಾಗದದ ಮೇಲೆ ಈ ಸಾಲುಗಳು ಇದ್ವು : " ಮುದ್ದು ಕಿಟ್ಟನ ತಂದೆ ಶ್ರೀ ನಂದಗೋಪಾಲ ಸ್ವಾಮಿ ಮತ್ತು ಯಶೋದಮ್ಮನವರಿಗೆ, ವಿನಾ ಕಾರಣ ನಮ್ಮ ಮನೆ ಬಾಗಿಲ ಬಗ್ಗೆ ನಿಮಗಾಗಿರ ಬಹುದಾದ ಮಾನಸಿಕ ತುಮುಲ ಶಮಿಸಲೆಂದು ಹಾರೈಸಿ, ಶುಭ ಕೋರುವ , ನಿಮ್ಮವರೇ ಆದ, ವಿಂಗ್ ಕಮಾಂಡರ್. ಖನ್ನಾ". ಕೆಟ್ಟ ಮಾತು ಆಡಿ ದುಡ್ಡು ವಸೂಲಿ ಮಾಡೋದಿರ್ಲಿ ಇಷ್ಟು ಸೌಜನ್ಯವಾಗಿ ಮಾತ್ನಾಡಿ ಉಡುಗೊರೆ ಬೇರೆ ಕಳ್ಸಿಯಾರೆ..ಅಬ್ಬಾ! ಇಂತ ನೆರೆ ಹೊರೆ ಪಡೆದ ನಾವೇ ಧನ್ಯರು ಅಂತ ಅನ್ಕೊಂಡ್ವಿ.
***
೨***
ಯಶೋದಮ್ಮ
ಇದ್ದ್ಕೊಂಡು " ರೀ, ಎಂಥಾ ಒಳ್ಳೆ ಜನ ಇವರು. ನಮ್ಮ ಮನೆಗೆ ಹೇಳ್ದೆ- ಕೇಳ್ದೆ ಚಾಕ್ಲೇಟ್ ಪಾಕೆಟ್ ಕಳ್ಸಿದ್ದಾರೆ, ನಾವು ಅವರಿಗೆ ಏನೂ ಕಳ್ಸ್ದೆ ಹೋದ್ರೆ ಚೆನ್ನಾಗಿರಲ್ಲ ಅಲ್ವೇ?" ಅಂತ ಹೇಳಿ, ಕಿಟ್ಟನಿಗೆ ಅಂತ ತೆಗ್ದಿಟ್ಟಿದ್ದ ಮಗ್ಗಿ ಪುಸ್ತಕಕ್ಕೆ ಬಣ್ಣದ ಕವರ್ ಹಾಕಿ, ಅವರ ಧಾಟಿಯಲ್ಲಿಯೇ ಒಂದು ಗೀಚುವಿಕೆ ಗೀಚಿದಳು: " ಮುದ್ದಿನ ಖನ್ನಾ ಗುಂಡನಿಗೆ , ಕಿಟ್ಟುವಿನಿಂದ ಮಗ್ಗಿ ಪುಸ್ತಕ! " ಅಂತ ಬರೆದು, ಜೂನಿಯರ್ ಖನ್ನಾಗೆ ಉಡುಗೊರೆಯಾಗಿ ಕಳ್ಸಿದ್ಲು. ಹೇಳಿದ ಕೆಲಸಾನ, ಒಂದೇ ಬಾರಿ ಹೇಳ್ಸ್ಕೊಂಡು ಯಾವತ್ತೂ ಮಾಡದೆ ಇದ್ದ ಕಿಟ್ಟ, ಅದೇನೋ ಇವತ್ತು ಮಹದಾಶ್ಚರ್ಯ, ಸರಕ್ಕಂತ ಓಡಿ ಹೋಗಿ, ಬ್ಲೇಡ್ ನಲ್ಲಿ ಬಾಗಿಲು ಕೆರೆದ ಮನೆಗೆ ಮಗ್ಗಿಪುಸ್ಥಕದ ಗಿಫ್ಟು ಕೊಟ್ಟು ಬಂದ. ಮುಯ್ಯಿಗೆ ಮುಯ್ಯಿ ಕೊಟ್ಟಿದೂ ಆಯಿತು, ಎರಡು ಮನೆಯವರಿಗೂ ಸಂತೋಷವೂ ಆಯಿತು ಅನ್ಕೊಂಡು, ಇನ್ನು ಶನಿವಾರದ ಮಿಕ್ಕ ಕೆಲ್ಸ ನೋಡೋಣ ಅಂತ, ನ್ಯೂಸ್ ಪೇಪರ್ ಹಿಡಿದು ಕುಳಿತೆ. ಇನ್ನೂ ಒಂದು ಪುಟ ಸಹಾ ಓದಿಲ್ಲ ನೆಮ್ಮದಿಯಾಗಿ, ಅಷ್ಟು ಹೊತ್ತಿಗೆ ಯಾರೋ ನಕ್ಷತ್ರಿಕ ಬಂದು "ಟ್ರಿನ್! ಟ್ರಿನ್!" ಅಂತ ಕರೆಘಂಟೆ ಬಾರಿಸಿದ. ಯಾರಪ್ಪ ಇದು... ಥೂ! ಅಂತ ಬೈಕೊಂಡು, ಬಾಗಿಲ ಬಳಿ ಹೋಗಿ ಕದ ತೆಗೆದ್ರೇ : ಒಂದು ಮನುಷ್ಯನಿಗಿಂತ ದೊಡ್ಡ ಹೂಕುಂಡ ಹಿಡ್ಕೊಂದು, ಕುಂಡದಲ್ಲಿ ಇರೋ ರೋಜಾ ಹೂಗಳ ಹಿಂದೆ ಅವಿತಿದ್ದ ಮನುಷ್ಯ ದನಿ "ಶುಭದಿನ ! ವಿಂಗ್ ಕಮಾಂಡರ್ ಖನ್ನ ಅವರ ಕಡೆ ಇಂದ ನಿಮ್ಮ ವಿಳಾಸಕ್ಕೆ ಗುಲ್ದಸ್ತಾ ತಂದೀವ್ನಿ ಸಾಬ್ ಅಂದ. ಹೂಗಳನ್ನ ಒಳಗಿರಿಸಿ ಕೊಂಡು, ಹೂತಂದವನಿಗೆ ಬಕ್ಷೀಸು ಕೊಟ್ಟು ಕಳಿಸಿದೆ. ಏರಡೂ ಕೈಗಳಲ್ಲಿ ವಾರಗಟ್ಲೆ ಸಾಮನುಗಳನ್ನ ಖರೀದಿ ಮಾಡ್ಕೊಂಡು, ಹೊರಲಾರದೆ ಹೊತ್ತು ಕೊಂಡು ಬಂದ ಯಶೋದಮ್ಮ, ಬಂದವಳೆ ಹೂಗುಚ್ಛ ನೋಡಿ ತುಂಬಾ ಮೆಚ್ಕೊಂಡ್ರು. ಖನ್ನಾ ಕಳ್ಸಿದ್ದು ಅಂತ ತಿಳೀತಿದ್ದ ಹಾಗೆ "ಇವತ್ತು ಅವರನ್ನ ಚಹಾಗೆ ನಮ್ಮ ಮನೆಗೆ ಕರ್ಯೋಣ!" ಅಂತ ಘೋಷಣೆ ಮಾಡಿ ಬಿಟ್ಲು. "ಇವ್ವತ್ತೇನಾಆಅ!!! " ಅಂತ ನಾನು ಬಾಯಿ ಬಿಡೋಷ್ಟರಲ್ಲಿ ಅಡುಗೆ ಮನೆನಲ್ಲಿ ಪಕೋಡ ಕರಿಯೋಕೆ ಹೋಗೆ ಬಿಟ್ಲು. ಇಲ್ಲಿ ಕಿಟ್ಟ ಗುಂಡನನ್ನ ಕರಿಯೋಕೆ ಹೋಗೆ ಬಿಟ್ಟ. ಮಧ್ಯದಲ್ಲಿ ನಾನು ಅರೆ ಬರೆ ಓದಿ ಮಧ್ಯದಲ್ಲೇ ಬಿಟ್ಟ ನ್ಯೂಸ್ ಪೇಪರ್ ಹಿಡಿದು ನಿಂತಿದ್ದೆ.
***

***
ಸಂಜೆ ನಾಲ್ಕು ಘಂಟೆ ಆಯಿತು. ಟೀ ಪಾರ್ಟೀಗೆ ಬರೋದು ಬಂದ್ರು , ಬರಿಗೈ ನಲ್ಲಿ ಬರಬಾರ್ದಾ ನಮ್ಮ ಅಥಿತಿಗಳು? ಕೈನಲ್ಲಿ ಐದು ವಿಧವಾದ ಹಣ್ಣಿನ ಬುಟ್ಟಿಗಳು; ಬೋಂಡಾ-ಬಜ್ಜಿ ಮಾಡಕ್ಕೆ ಹಾಗಲ್ಕಾಯಿ, ಹೀರೆಕಾಯಿ, ಪಡವಲ್ಕಾಯಿ, ಗೆಡ್ಡೆ ಗೆಣೆಸು ಇನ್ನೂ ಏನೇನೋ ಹೊತ್ತ್ಕೊಂಡು ಅರ್ಧ ಸಿಟಿ ಮಾರ್ಕೆಟ್ನೆ ನಮ್ಮ ಮನೆಗೆ ತರೋಹಾಗೆ ತಂದಿದ್ದ ಆ ವಿಂಗ್ ಕಮಾಂಡರ್. ಮದುವೆ ಮನೆಗೆ ಕಾಂಟ್ರಾಕ್ಟ್ ತೊಗೊಂಡವ್ರು ಸಹ ಹೀಗೆ ಸಾಮಾನು ತರಲ್ಲ ಬಿಡಿ. ವರ್ಷಕ್ಕೆ ಆಗೋ ಅಷ್ಟು ಸರಕು ತಂದು ನಮ್ಮ ಮನೆ ತುಂಬ್ಸಿದ್ರು, ಅವನ ಈ ಅತಿರೇಕ ನೋಡಿ ನನಗೆ ಮೈ ಎಲ್ಲಾ ಉರಿದು ಹೋಯ್ತು. ಇತ್ತ ಖನ್ನಾ ಹೆಂಡತಿ ಚಿನ್ನಾದೇವಿ, ಯಶೋದಮ್ಮ ಇಬ್ಬರೂ ಹರಟೆ ಹೊಡೆದೂ ಹೊಡೆದೂ ನನ್ನ ಕಿವಿ ತೂತು ಮಾಡಿದ್ರೆ, ಈವಯ್ಯ ಚಾವಣಿ ಕಿತ್ತು ಹೋಗೋ ಹಾಗೆ ಸುಮ್ಸುಮ್ನೆ ಸಡನ್ನಾಗಿ ನಗೋದು. ಕಿಟ್ಟಾ, ಗುಂಡಾ ಒಡ್ಕೊಂಡು, ಚೀರ್ಕೊಂಡು, "ಆಡ್ಕೊಂಡು" ಎಂದಿನಂತೆ ರಂಪ ರಾಮಾಯಣ ಮಾಡ್ತಾ ಇದ್ರು. ನೆಮ್ಮದಿಯಾಗಿ ಇರೋಣ ಅನ್ಕೊಂಡಿದ್ದ ಒಂದು ಶನಿವಾರವೂ ವ್ಯರ್ಥವಾಯಿತು ಅಂತ ನಾನಿದ್ರೆ, " ರೀ, ಎಂಥಾ ಒಳ್ಳೆ ಜನ ಇವರು. ನಮ್ಮ ಮನೆಗೆ ಹೇಳ್ದೆ- ಕೇಳ್ದೆ ಇಷ್ಟೆಲ್ಲ ತಂದಿದ್ದಾರೆ, ಇವರನ್ನ ಊಟಕ್ಕೆ ಕರೀದೆ ಇದ್ರೆ ಚೆನ್ನಾಗಿರಲ್ಲ" ಅಂತ ಯಶೋದಮ್ಮ ರಾತ್ರಿ ಊಟಮಾಡ್ಕೊಂಡು ಹೋಗಿ ಅಂದೇ ಬಿಟ್ಲು, ಅವರೂ ಸಹಾ ಕೇಕೆ ಹಾಕ್ಕೊಂಡು ನಗ್ತಾ 'ಹೂಂ! ಸರಿ' ಅಂದೇ ಬಿಟ್ರು. ಮತ್ತೆ ಸೆಕೆಂಡ್ ಇನ್ನಿಂಗ್ಸ್ ಹರಟೆ, ಪುರಾಣ ಶುರುವಾಯ್ತು. ಮಧ್ಯರಾತ್ರಿ ಕಳೆದು ಏರಡು ಘಂಟೆ ಕಳೆದರೂ ಇನ್ನೂ
***

***
ಭಾನುವಾರ
ಬೆಳ್ಳಂಬೆಳಗ್ಗೆ, ಇನ್ನೂ ಸರಿಯಾಗಿ ಬೆಳಕು ಹರಿದು ಆರು ಘಂಟೆ ಸಹಾ ಆಗಿಲ್ಲ, ಅಷ್ಟು ಬೇಗ ಅವನ ದುಬಾರಿ ಕಾರಿನಲ್ಲಿ, ಖನ್ನಾ ಅವನ ರಿಸಾರ್ಟ್ ರೀತಿ ಇರೋ ತೋಟದ ಮನೆಗೆ ಕರೆದುಕೊಂಡು ಹೋಗಲು ಬಂದ. ಇನ್ನೂ ಗುರುತು ಪರಿಚಯ ಆಗಿ ಎರಡು ದಿನಾ ಸಹಾ ಆಗಿಲ್ಲ, ಅತಿ ಸಲಿಗೆ, ಸಾಮಾನ್ಯಕ್ಕಿಂತ ಹೆಚ್ಚು ಅನ್ನಿಸುವಷ್ಟು ಸ್ನೇಹ ತೋರಿಸ್ತಿದ್ದ ಅನ್ನೋ ಮುಜುಗರ ಒಂದು ಕಡೆ ಆದ್ರೆ, ಇವನು ಆಡೋ ಆಟಕ್ಕೆ ಸರಿ ತೂಗೋ ಹಾಗೆ ನಾವೂ ಸೂಕ್ತ ರೀತಿ ಅವನಿಗೆ ಶಾಂತಿ ಮಾಡಿಸಬೇಕಲ್ಲ ಅಂತ ಪೀಕಲಾಟ ಇನ್ನೊಂದು ಕಡೆ. ಕಡೆಯೇ ಇಲ್ಲವೇನೋ ಅನ್ನಿಸುವಷ್ಟು ಬೆಳಕೊಂಡ ಅವನ ಹೊಲ-ಗದ್ದೆ ಹತ್ರ, ಬಂಗಲೇ ಅಂತಲೇ ಅನ್ನ ಬಹುದಾದಂತ ತೋಟದ ಮನೆ ಬೇರೆ. ಯಾರ ಮನೆ ಕನ್ನ ಹಾಕಿ ಕೋಟ್ಯಾಧೀಶ್ವರ ಆದ್ನೋ ಈ ಖನ್ನಾ. ನಮ್ಮನ್ನ ಒಳಗೆ ಬರಮಾಡಿಕೊಂಡು ರಜೋಪಚರಾನೋ ರಾಜೋಪಚಾರ. ಏನ್ ಅಥಿತಿ ಸತ್ಕಾರ! ಏನ್ ಅತಿಥಿ ಸತ್ ಕಾರ! ಒಂದು ಬಾಯಿ ನಲ್ಲಿ ಹೇಳೋದಕ್ಕೆ ಆಗೋದಿಲ್ಲ. ನಿನ್ನೆ ರಾತ್ರಿ ಕಂಠಪೂರ್ತಿ ಮೆಕ್ಕಿದ್ದೇ ಅರಗದೆ ಇನ್ನೂ ಹಳೇ ತೇಗು ಬರ್ತಾ ಇದೇ ಅಂದ್ರೆ, ಬೇಡ ಬೇಡ ಅಂದ್ರೂ ಕೇಳದೆ, ಹತ್ತು ರೀತಿ ಸಿಹಿ ತಿನಿಸುಗಳ್ಳೆಲ್ಲಾ ಮಾಡಿಸಿ ಸಿಹಿ ಊಟದಲ್ಲೇ ಸಾಯಿಸ್ಬಿಟ್ಟ. ಅದೂ ಸಾಲ್ದು ಅಂತ ನಮ್ಮಿಬರಿಗೂ ವೀಳ್ಯಕ್ಕೆ ಅಂತ ಭಾರಿ ಆಗಿರೋ ಕಾಂಚೀಪುರಂ ಝರತಾರಿ ಸೀರೆ ಮತ್ತೆ ರೇಶ್ಮೆ ಶಲ್ಯ ಬೇರೆ ಉಡುಗೋರೆ ತಾಂಬೂಲ ಕೊಟ್ಟ. ಇವರ ಅಬ್ಬರಕ್ಕೆ ಸರಿ ತೂಗುವಷ್ಟು ಅಲ್ಲದೆ ಆದ್ರೂ ನನ್ನ ಆದಾಯಕ್ಕೆ ಸರಿ ಹೊಂದೋ ಹಾಗೆ, ತಕ್ಕ ಮಟ್ಟಿಗೆ ಮುಯ್ಯಿಮಾಡ್ಲೇ ಬೇಕಲ್ಲ ಅನ್ನೋ ಭಾವನೇ ಇಂದ ಬೆವೆತು ಕೊಟ್ಟ ರೇಶ್ಮೇ ಶಲ್ಯಾನಲ್ಲೆ ಬೆವರು ಒರ್ಸ್ಕೋತಾ ಓರೆಗಣ್ಣಿನಲ್ಲಿ ಇವಳ ಮುಖ ನೋಡಿದ್ರೆ, ನೀ ಯಾರಿಗಾದೆಯೋ ಎಲೆಮಾನವ' ಅನ್ನೋ ದೃಶ್ಟಿನಲ್ಲಿ ನನ್ನ ಕೆಕ್ಕರಿಸಿಕೊಂಡು ನೋಡ್ತಾ ಇದಾಳೆ ನಮ್ಮಾಕೆ. ಮೊಣಕೈ ನಲ್ಲಿ ನನ್ನ ಹೊಟ್ಟೆ ತಿವಿದು, 'ದಂಪತಿಗಳಿಗಾದರೂ ಏನೂ ತರ್ಲಿಲ್ಲ, ಮಗುವಿಗಾದ್ರೂ ಏನಾದ್ರು ಕೋಡ್ಸಿ ಬನ್ನಿ' ಅಂತ ಸನ್ನೆ ಮಾಡಿದ್ಲು. ಕಿಟ್ಟ ಗುಂಡಾ ಇಬ್ಬರ್ನೂ ಪೇಟೆ ಬೀದಿಗೆ ಕರ್ಕೊಂಡು ಹೋದೆ, ಬೆಂಡು ಬತ್ತಾಸು ಕೋಡ್ಸೋಣ ಅಂತ. ಗುಂಡ ಖನ್ನ ಕುದುರೆ ಕೊಡಿಸಿ ಅಂಕಲ್ ಅಂದ. ಆಟದ ಕುದುರೆ ಕೇಳ್ತಾನೇನೊ ಅನ್ಕೊಂಡ್ರೆ ಜೀವಂತವಾಗಿರೋ ರೇಸ್ ಕುದುರೆ ಕೇಳ್ತಾ ಇದ್ದ ಆ ಮಗು. ಅಪ್ಪನ ಹಾಗೆ ಮಗನಿಗೂ ಅಬ್ಬರ ಆರ್ಭಟ ಜಾಸ್ತಿ. ನನಗೆಲ್ಲಿ ಬರಬೇಕು ನಿಜವಾದ ಕುದುರೆ ಕೊಡಿಸೋ ಅಷ್ಟು ಹಣ ಅಂತ ಸುಮ್ಮನಾದೆ. ಅಷ್ಟರಲ್ಲಿ ಅವನಪ್ಪ ಬಂದು ಆ ಕುದುರೆನ ಹಣ ಕೊಟ್ಟು ಖರೀದಿಸಿಯೇ ಬಿಟ್ಟ.
***To be con......

5 comments:

Sushrutha Dodderi said...

ಪ್ರಿಯರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ಕಿರಣ್ ಜಯಂತ್ said...

ಹ ಹ ಹಾ!! ಬಹಳ ಚೂಟಿ ನಿಮ್ ಕಿಟ್ಟ. ಖನ್ನಾ ಅಂಕಲ್ ಹ್ರುದಯ-ವೈಶಾಲ್ಯತೆಗೆ ಸಲಾಂ...

Keshav.Kulkarni said...

ಶ್ರೀಕಾಂತ್,

ನಿಮ್ಮ ಬರವಣಿಗೆಯಲ್ಲಿ ಮ್ಯಾಜಿಕ್ ಇದೆ. ಮುಂದಿನ ಕಂತಿಗೆ ಕಾಯುತ್ತಿದ್ದೇನೆ.

-ಕೇಶವ (www.kannada-nudi.blogspot.com)

Manjunatha Kollegala said...

Typical Srikanth here. Good going, keep it up

Shankar Prasad ಶಂಕರ ಪ್ರಸಾದ said...

ಶ್ರೀಕಾಂತ್,
ನಿಮ್ಮ ಬರವಣಿಗೆ ಚೆನ್ನಾಗಿದೆ.
ಮುಂದುವರಿಸಿ, ಬ್ಲಾಗಾಯಣ - ಹೆಸರು ಕೂಡಾ ಚೆನ್ನಾಗಿದೆ. ಅದಕ್ಕೆ ನಿಮ್ಮನ್ನು ನಮ್ಮ ಸೋಮಾರಿ ಕಟ್ಟೆಯ ಸದಸ್ಯನನ್ನಾಗಿ ಮಾಡಿಕೊಂಡಿರುವೆ. ಒಮ್ಮೆ ಬಂದು ನೋಡಿ.

ಶಂಕ್ರ
http://somari-katte.blogspot.com