Monday, March 03, 2008

ಶತಪಥ ಬ್ರಾಹ್ಮಣನಮ್ಮ ಕಛೇರಿಯಲ್ಲಿನ ಶ್ರೀಪಾದರಾಯರು ಸಾಗರೋಲ್ಲಂಘನ ಮಾಡಿ ಫ್ಲಾರಿಡಾ ತಲುಪಿದರೂ ಮುಖದ ತುಂಬ ಲಕ್ಷಣವಾಗಿ ಸಾಧುವನ್ನಿಟ್ಟುಕೊಂಡು ಬರುತ್ತಿದ್ದ ಮಡಿ ಮಾಧ್ವರು. ಇಲ್ಲಿನ ಕೆಲವು ಲ್ಯಾಟೀನಾ ಲಲನಾಮಣಿಗಳು ಅದನ್ನು ಕಂಡು ಟ್ರೆಂಡೀ ಟಾಟೂ (Trendy Tatoo) ಅಂತಲೂ ಅಂದುಕೊಂಡು, ರಾಯರನ್ನು ಮೆಚ್ಚಿಕೊಂಡದ್ದೂ ಉಂಟು. ಆಚಾರ ವಿಚಾರಗಳಲ್ಲಿ ಶ್ರೀಪಾದರು ದೂರದೂರಿನಲ್ಲಿ ಇದ್ದರೂ ಚಾಚೂ ತಪ್ಪದಂತೆ ಪರಿಪಾಲಿಸುವ ಸಂಪ್ರದಾಯಸ್ಥರು. ನಡೆದಾಡುತ್ತಿರುವಾಗ ಅವರ ಬೆಲ್ಟ್ ಗೆ(belt) ವಾಚ್(watch) ಹಾಗೆ ಒಂದು ಯಂತ್ರವನ್ನು ಕಟ್ಟಿರ್ತಾರೆ. ಗಾಂಧಿ ವಾಚ್ ರೀತಿ ಸೊಂಟಕ್ಕೆ ಕಟ್ಟಿದ ಒಂದು ಸಾಧನ ಅದು. ನಡೆಯುವಾಗ ಆಗಾಗ್ಗೆ ಅದನ್ನು ನೋಡುತ್ತಿದ್ದುದನು ನಾವೆಲ್ಲರು ಸಹೋದ್ಯೋಗಿಗಳು ಗಮನಿಸಿದ್ದೆವು. ಒಂದು ದಿನ ಅವರು ಆ ಸಾಧನದೆಡೆಗೆ ಕಣ್ಣು ಹಾಯಿಸಿ ಮೆಲ್ಲಗೆ ಮುಗುಳ್ನಕ್ಕರು. ಕುತೂಹಲ ತಡೆಯದಾಗದೆ ಏನೆಂದು ಕೇಳಿದೆವು. ಇದು 'ವಾಕ್ ಮಾನಿಟರ್' (Walk monitor) ಅಂತ ವಿವರಿಸಿದರು. ಸೊಂಟಕ್ಕೆ ಕಟ್ಟಿಕೊಂಡು ಬೆಳಗಿನಿಂದ ಸಂಜೆವರೆಗೂ ಅಡ್ಡಾಡುತ್ತಿದ್ದರೆ, ಅದು ನಾವು ಅಷ್ಟು ಹೆಜ್ಜೆ ಹಾಕಿದ್ದೇವೆ ಅಂತ ಗಣನೆ ಮಾಡಿ ತೋರಿಸುವುದಂತೆ. ಒಳ್ಳೆ ಹರಕೆ ತೀರಿಸಕ್ಕೆ ಹೆಜ್ಜೆ ನಮಸ್ಕಾರ ಹಾಕೋ ಹಾಗೆ ಇದೇನಪ್ಪ ಹೆಜ್ಜೆ ಮಾಪಕ ಅಂದ್ರೆ, ಅದ್ರಲ್ಲೂ ಒಂದು ಲಾಜಿಕ್ ಕಂಡಿದ್ದರು ನಮ್ಮ ರಾಯರು. ನಾನು ಕೆಲ್ಸ ಮಾಡುತಿರುವುದು ಫ್ಲಾರಿಡಾದಲ್ಲಿನ ಮಯಾಮಿಯ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯಲ್ಲಿ. ಸುಮಾರು ನೂರುವರ್ಷಕ್ಕಿಂತ ಹೆಚ್ಚು ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಈ ಕಂಪನಿ ಮನೆ ಮಾತಾಗಿದೆ. ಇಲ್ಲಿನ ಮಾನವ ಸಂಪನ್ಮೂಲ ಅಧಿಕಾರಿಗಳು ಉದ್ಯೋಗಿಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಬರಲೆಂದು ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆಫೀಸಿಗೆ ಸೈಕಲ್ ನಲ್ಲಿ ಬರುವುದಕ್ಕೆ ಪ್ರೋತ್ಸಾಹಿಸುವುದು, ರಕ್ತದಾನ ಶಿಬಿರಗಳು, ಕಚೇರಿಯಲ್ಲಿ ಸಂಪೂರ್ಣ ಧೂಮಪಾನ ನಿಶೇಧ, ಹೀಗೆ ಹಲವಾರು ಕಾರ್ಯಕ್ರಮಗಳು. ಇಂತಹುದರಲ್ಲಿ ಒಂದು ಈ ’ವಾಕ್ ಮಾನಿಟರ್’. ಉದ್ಯೋಗಿಗಳು ಹೆಸರು ನೊಂದಾಯಿಸಿ ಕೊಂಡರೆ ಇದನ್ನು ಉಚಿತವಾಗಿ ನೀಡುತ್ತಾರೆ. ನಮ್ಮ ಕಚೇರಿಯಲ್ಲಿ ಕೆಲಸಮಾಡುವ ಬಹುತೇಕ ಜನ ದಿನವಿಡೀ ಮೇಜು ಕುರ್ಚಿಗಳನ್ನು ಬಿಟ್ಟು ಕದಲುವುದೇ ಇಲ್ಲ. ಕೆಲಸದ ಓತ್ತಡ ಹೆಚ್ಚಿದ್ದರಂತು ಶಿಲೆಗಳ ಹಾಗೆ ತಟಸ್ಥರಾಗಿ ಕುಳಿತು ಕೆಲಸ ಮಾಡುವ ವಾಡಿಕೆ(sedentary lifestyle). ಹೀಗಿರಲು ಈ ವಾಕ್ ಮಾನಿಟರ್ , ಜನರನ್ನು ನಡೆದಾಡಲು ಪ್ರೇರೇಪಿಸುತ್ತದೆ. ನಾವು ಮೀಟಿಂಗ್ ಗಳಿಗೆ ಹೋಗುವಾಗ, ಇತರೆ ಕಛೇರಿಗಳಿಗೆ ಹೋಗುವಾಗ, ಲಿಫ್ಟ್ ಗಳಲ್ಲಿ ಸಂಚರಿಸುವಾಗ -- ಹೀಗೆ ಆಗಾಗ್ಗೆ ನಡೆದಾಡಿದರೆ, ಅದೇ ವ್ಯಾಯಾಮದ ಹಾಗೆ. ದಿನಕ್ಕೆ ಸರಾಸರಿ ೧೦೦೦೦ ಹೆಜ್ಜೆಗಳನ್ನು ಒಬ್ಬ ಚಟುವಟಿಕೆ ಇಂದ ಕೂಡಿದ ಮನುಷ್ಯ ನಡೆಯಬೇಕಂತೆ. ಈ ಸಾಧನ ನಮ್ಮ ಸೊಂಟಕ್ಕೆ ಕಟ್ಟಿದ್ದರೆ, ನಾವು ಅದನ್ನು ನೋಡಿದಾಗಲೆಲ್ಲ ಈ ದಿನದ ಕೋಟಾ(quota) ಮುಗಿಸಬೇಕೆಂದು ಕರೆಘಂಟೆಯ ರೀತಿ ಹೇಳುತ್ತದೆ. ಊಟದ ನಂತರ ಕಿರು ನಡುಗೆ ಯಾದರೂ ಆದೀತು, ಸಂಜೆ ಕಾಫಿ ಹೀರುವ ನೆಪದಲ್ಲಿ ಕೆಲ ಹೆಜ್ಜೆ ಹಾಕಿದರೂ ಆದೀತು. ಅಂತು ಪ್ರತಿದಿನವೂ ೧೦೦೦೦ ಹೆಜ್ಜೆಗಳ ಮೈಲಿಗಲ್ಲನ್ನು ಇರಿಸಲು ಈ ಸಾಧನ ಸಹಕಾರಿಯಾಗಿದೆ. ಐ-ಪಾಡ್ ಮತ್ತಿತರ ಸಾಧನಗಳಲ್ಲಿಯೂ ಇದನ್ನು ಅಳವಡಿಸಿ , ಒಂದೆ ಕಲ್ಲಿನಲ್ಲಿ ಏರಡು ಹಕ್ಕಿಗಳನ್ನು ಹೊಡೆಯ ಬಹುದಂತೆ.ಆ ದಿನ ವಾಕ್ ಮೀಟರ್ ನೋಡಿ ಮುಗುಳ್ನಕ್ಕ ರಾಯರು, ಆಗತಾನೆ ೧೦೦೦೦ ಹೆಜ್ಜೆ ಹಾಕಿ ’ಶತಪಥ’ ಬ್ರಾಹ್ಮಣರಾಗಿದ್ದರಂತೆ!

ಇದೀಗ ಬಂದ ಸುದ್ದಿ: ಹೆಜ್ಜೆಗಣನೆ ಮಾಡುವ ಈ ಪೆಡೋಮೀಟರುಗಳು ದೇವತೆಗಳಿಗೆ ಉಪಯೋಗ ವಾಗುತಿಲ್ಲವಂತೆ! ಈ ಮಾಹಿತಿ ದೊರೆತ ಮಹತೀ ಹಿಡಿದ ನಾರದರು ಮುಂಜಾನೆ ಕಟಿಬದ್ಧರಾಗಿ ಹೊರಟರಂತೆ. ತ್ರಿಲೋಕಸಂಚಾರಿಗಳಿಗೆ ರೇಂಜ್ ದಾಟಿದಕ್ಕೆ ತಪ್ಪು ರೀಡಿಂಗ್ ಬಂದರೆ, ಇತ್ತ ದಿನವೆಲ್ಲ ಲೋಕರಕ್ಷಣೆಯ ಸಲುವಾಗಿ ಅಲೆದಾಡಿದ ಪಾಲ್ಗಡಲ ಶ್ರೀಹರಿಯ ಪದಕಮಲ ಹಿಸುಕುತ್ತಿದ್ದ ಶ್ರೀಲಕ್ಷ್ಮಿಗೂ ಸಹ ತಪ್ಪು ರೀಡಿಂಗ್ ಬಂದಿದೆ. 'ಹೆಜ್ಜೆಯ ಮೇಲೊಂದ್ ಹೆಜ್ಜಯನಿಟ್ಟು' ಬಂದ್ರೆ ಪಾಪ ವಾಕ್ ಮೀಟರ್ ಏನು ತಾನೆ ಮಾಡತ್ತೆ?

***


* -- http://en.wikipedia.org/wiki/Pedometer

* -- ಶತಪಥ ಬ್ರಾಹ್ಮಣ : ಶುಕ್ಲ ಯಜುರ್ವೇದದ ಕಾಣ್ವ ಶಾಖೆಯ ಬ್ರಾಹ್ಮಣ - ಇದಕ್ಕೆ ಶ್ಲೇಷಾಲಂಕಾರ ಪ್ರಯೋಗ - ಶತಪಥ ಬ್ರಾಹ್ಮಣ.

4 comments:

ಕಿರಣ್ ಜಯಂತ್ said...

Brilliant agide nim blog! Hosa vishyava aarisi svalpa haasyalepavannu hachhiddira..

bareetha iri sir.
-Kiran

L'Étranger said...

ಹಹ್ಹಹ್ಹ!

ಅಮೆರಿಕದಲ್ಲಿ ಈಗ ತುಂಬಾ ಕಂಪನಿಗಳು ಉದ್ಯೋಗಿಗಳ ಬಾಟಮ್‍ಗಳ ಬಗ್ಗೆ ಗಮನ ಕೊಡ್ತಿರೋದು ಕೇವಲ ಆ ಕಂಪನಿಗಳ ಬಾಟಮ್‍ಲೈನ್ ಬಗೆಗಿನ ಕಾಳಜಿಯಿಂದ ಮಾತ್ರ. ಉದ್ಯೋಗಿಗಳ sedentary lifestyle-ನಿಂದಾಗಿ ಅವರ ಆರೋಗ್ಯ ಕೆಡ್ತಾ ಇದೆ. ಸಿಕ್ ಲೀವ್‍ಗಳ ಉಪಯೋಗ ತುಂಬಾ ಹೆಚ್ಚಾಗ್ತಾ ಇದೆ. ಡಾಕ್ಟರ್ ವಿಸಿಟ್ಸ್, ಮೆಡಿಸಿನ್ಸ್, ಹಾಸ್ಪಿಟಲೈಜೇಷನ್ ಇವೆಲ್ಲಾ ಹೆಚ್ಚಾಗ್ತಾ ಇರೋದ್ರಿಂದ ಅವರ productivity ಕಡಿಮೆ ಆಗೋದಷ್ಟೇ ಅಲ್ಲ, ಕಂಪನಿಯ insurance costs ಕೂಡಾ ಹೆಚ್ಚಾಗ್ತಾ ಇದೆ. ಈ ರೀತಿಯ ವ್ಯಯಕ್ಕಿಂತ ಉದ್ಯೋಗಿಗಳಿಗೆ ಈ ಥರ ಆಟಿಕೆಗಳನ್ನು ಕೊಡಿಸಿ, ಅವರಿಗೆ ಕಡಿಮೆ ದರದಲ್ಲಿ ಜಿಮ್ ಮೆಂಬರ್‍ಶಿಪ್ ಕೊಡಿಸಿ ಆಗುವ ಖರ್ಚು ಕಡಿಮೆ. ಅಷ್ಟೇ ಅಲ್ಲ, ಈ ರೀತಿಯ ಕೆಲಸಗಳು ಅವರನ್ನು ಚನ್ನಾಗಿ ಕಾಣುವಂತೆ ಮಾಡತ್ವೆ! ಉದ್ಯೋಗಿಗಳಿಗೇನು, ಇವೆಲ್ಲಾ ಸಿಕ್ತಲ್ಲಾ ಅಂತ ಖುಶಿ!

I guess it is a win-win situation that has its source in pure business logic.

BTW, ಆಲ್ಲಿ ರಾಯರು ಆಗಿದ್ದು ಶತಪಥ ಬ್ರಾಹ್ಮಣರಲ್ಲ, ಶತ-ಶತಪಥ ಬ್ರಾಹ್ಮಣರು. :)

Manjunatha Kollegala said...

ಸಾಗರೋಲ್ಲಂಘನೆ ಮಾಡಿದರೂ ಸಂಪ್ರದಾಯ ಮರೆಯದ ಮಡಿ ಮಾಧ್ವ ಶ್ರೀಪಾದರಾಯರು ನೂರು ಹೆಜ್ಜೆ ಹಾಕಿ ಶತಪಥಬ್ರಾಹ್ಮಣರಾದ ಪನ್ ಖುಶಿ ಕೊಟ್ಟಿತು. ಉತ್ತಮ ಅಭಿರುಚಿಯ ಹಾಸ್ಯ.

ದಿನೇದಿನೇ ನಿಮ್ಮ ಬರಹಗಳ ಒಲವು ಲಲಿತ ಪ್ರಬಂಧದ ಪ್ರಕಾರದಲ್ಲಿ ತನ್ನ ಉತ್ಕೃಷ್ಟತೆ ಕಾಣುತ್ತಿದೆ. It is not less than any "class" writings in this type. Very nice, keep it up.

ತುಂಬಾ ಹಿಡಿಸಿದ್ದು:

ಬರಹದ ತಲೆಬರಹ ಮತ್ತು ಅದರ depiction.

"ಶ್ರೀಲಕ್ಷ್ಮಿಗೂ ಸಹ ತಪ್ಪು ರೀಡಿಂಗ್ ಬಂದಿದೆ. 'ಹೆಜ್ಜೆಯ ಮೇಲೊಂದ್ ಹೆಜ್ಜಯನಿಟ್ಟು' ಬಂದ್ರೆ ಪಾಪ ವಾಕ್ ಮೀಟರ್ ಏನು ತಾನೆ ಮಾಡತ್ತೆ?"

ಸ್ವಲ್ಪ ಹಿಡಿಸದ್ದು - "ಆಗತಾನೆ ೧೦೦೦೦ ಹೆಜ್ಜೆ ಹಾಕಿ ’ಶತಪಥ’ ಬ್ರಾಹ್ಮಣರಾಗಿದ್ದರಂತೆ!" ಇದು ಹೀಗೆ ವಾಚ್ಯವಾಗಿ ಬರುವುದಕ್ಕಿಂತ ಸ್ವಲ್ಪ ಸೂಚ್ಯವಾಗಿ ಬಂದಿದ್ದರೆ ಬರಹದ ರುಚಿ ಇನ್ನೂ ಹೆಚ್ಚುತ್ತೇನೋ. same applies to the foot note explanation on "ಶತಪಥ ಬ್ರಾಹ್ಮಣ"

Good going... keep it up

ಜಯಂತ ಬಾಬು said...

ತುಂಬಾ ಚೆನ್ನಾಗಿದೆ ಶ್ರೀಕಾಂತ್...