Wednesday, March 05, 2008

ಶ್ರೀರುದ್ರಂ - ಚಮಕಂ ಮತ್ತು ಆನಂದ ಮೀಮಾಂಸೆ

ನಮಸ್ತೇ ಅಸ್ತು ಭಗವನ್ವಿಶ್ವೇಶ್ವರಾಯ ಮಹಾದೇವಾಯ ತ್ರ್ಯಂಬಕಾಯ ತ್ರಿಪುರಾಂತಕಾಯ ತ್ರಿಕಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ ಶ್ರೀ ಮನ್ಮಹಾದೇವಾಯ ನಮಃ ||

ಮಹಾಶಿವರಾತ್ರಿಯ ಪಾವನಪರ್ವವಾದ ಈ ದಿನ ದೇಶದೆಲ್ಲೆಡೆ ಮಹಾದೇವನಿಗೆ ರುದ್ರಾಭಿಷೇಕದ ಆರಾಧನೆ ನಡೆಯುತ್ತಿದೆ. ತುಂಬು ಕೊರಳಿನಲ್ಲಿ ಘಂಟಾಘೋಷವಾಗಿ ಉದಾತ್ತ ಅನುದ್ಧಾತ್ತ ಗಳ ಏರಿಳಿತಗಳ ಮೆರುಗಿನಲ್ಲಿ ಸ್ವರಬದ್ಧವಾಗಿ ವಿಪ್ರೋತ್ತಮರು ವೇದಘೋಶ ಮಾಡುವುದನ್ನು ಕೇಳಲು ಎರಡು ಕಿವಿಗಳು ಸಾಲದು. ಕೃಷ್ಣಯಜುರ್ವೇದದ ತೈತ್ತರೀಯ ಸಂಹಿತೆಯಲ್ಲಿ, ’ನಮಃ ಶಿವಾಯ’ ಎಂಬ ಶಿವಪಂಚಾಕ್ಷರೀ ಮಂತ್ರವನ್ನು ಸಾರುವ ರುದ್ರಾಧ್ಯಾಯವನ್ನು ’ರೂದ್ರೋಪನಿಷದ್’ ಎಂದೂ ಕರೆಯಲಾಗಿದೆ. ಶ್ರೀ ರುದ್ರವು ಸಾಲಿಗ್ರಾಮಗಳ ಅಭಿಷೇಕ, ವಿಷೇಶ ಪೂಜೆಯೇ ಅಲ್ಲದೆ, ನಿತ್ಯಪಾರಾಯಣಕ್ಕೂ ಹೇಳಿಮಾಡಿಸಿದ ವೇದ ಮಂತ್ರ.
ಸ್ವಶಾಖೋಪನಿಷದ್ ಗೀತಾ ವಿಷ್ಣೋರ್ನಾಮ ಸಹಸ್ರಕಂ|
ರುದ್ರಂ ಚ ಪೌರುಷಂ ಸೂಕ್ತಂ ನಿತ್ಯಮಾವರ್ತಯೇತ್ ಬುಧಃ ||

ಎಂಬುವಲ್ಲಿ, ಸ್ವ ಶಾಖೆಯ ಉಪನಿಷತ್ತಾಗಲೀ, ಗೀತೆಯಾಗಲೀ , ವಿಷ್ಣು ಸಹಸ್ರನಾಮವಾಗಲೀ, ರುದ್ರಾಧ್ಯಾಯವಾಗಲೀ, ಪುರುಷಸೂಕ್ತವಾಗಲೀ ನಿತ್ಯಪಾರಾಯಣಕ್ಕೆ ಸೂಕ್ತ ಮಂತ್ರಗಳು ಎಂಬ ಪ್ರತೀತಿ ಇದೆ.ದಕ್ಷಿಣಭಾರತದ ಗೇಯಪಾಠ ವಿಧಾನದಲ್ಲಿ, ತಮಿಳುನಾಡಿನ ಶಿವ ದೇಗುಲಗಳಲ್ಲಿ ಲಿಂಗಾಭಿಷೇಕ ಮಾಡುವಾಗ ಒಕ್ಕೊರಳಿನಲ್ಲಿ ಪಠಿಸುವುದು ಕೇಳುವುದೆಂದರೆ ಮಹಾತ್ಮಾ ಗಾಂಧಿಯವರಿಗೆ ಅತ್ಯಂತ ಪ್ರೀತಿಯಿತ್ತೆಂದು ಶ್ರೀ ಟಿ.ಆರ್.ರಾಜಗೋಪಾಲರು ತಮ್ಮ ’ರುದ್ರ-ಚಮಕ ಭಾಷ್ಯದಲ್ಲಿ’ ಒಂದೆಡೆ ಹೇಳಿದ್ದಾರೆ.ಶ್ರೀರುದ್ರದ ಜೊತೆಗೆ ಕೇಳಿ ಬರುವುದು ಚಮಕ ಪ್ರಶ್ನಾ. ’ವಾಜಸ್ ಚ ಮೆ (ವಾಜಃ + ಚ), ಪ್ರಸವಸ್ ಚ ಮೆ, ಪ್ರಯತಿಸ್ ಚ ಮೆ...’ ಹೀಗೆ ಮಂತ್ರಭಾಗದಲ್ಲಿ ’ಚ ಮೇ, ಚ ಮೇ’ ಎಂದು ಬಹಳಬಾರಿ (೩೪೭ ಬಾರಿ) ಹೇಳುವುದರಿಂದ ಇದು ’ಚಮಕ’ ಎಂದು ಪ್ರಸಿದ್ದವಾಗಿದೆ.ಯಾವ ಪ್ರಿಯ - ಅನುಕಾಮಗಳಿಂದ ಜೀವಿಯು ಇಹ-ಪರಗಳಲ್ಲಿ ಆನಂದದಿಂದ ಇರುವನೂ ಅಂತಹ ವಸ್ತುಗಳ ಕುರಿತು ಪ್ರಾರ್ಥನೆ ಚಮಕದಲ್ಲಿ ಇದೆ. "ಎಲೈ ದೇವತೆಗಳೇ ! ನಮಗೆ ಆಹಾರವನ್ನು ಕಲ್ಪಿಸಿ (ವಾಜಸ್ ಚ ಮೇ ಕಲ್ಪಂತಾಂ), ಆಧಿಪತ್ಯವನ್ನು ಕರುಣಿಸಿ, ಸುಮತಿಯನ್ನು ನೀಡಿ" -- ಇತ್ಯಾದಿಯಾಗಿ ಮೊದಲನೇ ಅನುವಾಕದಲ್ಲಿನ ಆಹಾರದಿಂದ ಹಿಡಿದು ಕೊನೆಯ ಅನುವಾಕದ ಯಙ್ನ ಸಿದ್ಧಿ - ಯಙ್ನ ಕ್ಲಿಪ್ತಿಗಳವರೆಗೂ ಇಲ್ಲಿ ಮಂತ್ರ ಪುಂಜಗಳಿವೆ. ಆನಂದವೆಂದರೆ ಏನು? ಅತ್ಯುನ್ನತ ಆನಂದ ಯಾವುದರಿಂದ ದೊರೆಯುತ್ತದೆ? ಈ ಆನಂದದ ಸ್ವರೂಪವೇನು -- ಹೀಗೆ ಪ್ರಶ್ನಿಸಿ, ಆಳವಾದ ವಿಶ್ಲೇಷಣೆಗಳಿಂದ ಕೂಡಿದ ಪರೀಕ್ಷೆ, ಕೂಲಂಕಷವಾದ ಶಾಸ್ತ್ರಾಧ್ಯಯನ, ಎಲ್ಲ ಮಗ್ಗಲುಗಳಿಂದಲೂ ಒಂದು ವಿಷಯವನ್ನು ನೋಡಿ ಸಮನ್ವಯಿಸಿ ವಿಶ್ಲೇಷಿಸುವದು ಆನಂದ ಮೀಮಾಂಸವೆನಿಸುತ್ತದೆ. ಜಗತ್ತಿನ ಎಲ್ಲ ದರ್ಶನಗಳಲ್ಲಿಯೂ ಈ ಪ್ರಶ್ನೆಗೆ ಉತ್ತರವನ್ನು ಹುಡುಕಿ ಹೊರಟಿದ್ದಾರೆ. ವೇದ ವಾಂಙ್ಮೆಯಲ್ಲಿ ತೈತ್ತರೀಯ ಉಪನಿಷತ್ತಿನ ಬ್ರಹ್ಮಾನಂದ ವಲ್ಲಿಯ ೮ನೇ ಅನುವಾಕ ಮತ್ತು ಬೃಹದಾರಣ್ಯಕ ೩ನೇ ಬ್ರಾಹ್ಮಣ, ೪ನೇ ಅಧ್ಯಾಯಗಳು ಈ ವಸ್ಥುವನ್ನು ಚರ್ಚಿಸುತ್ತವೆ. ಪ್ರಸ್ತುತ ಚಮಕದಲ್ಲಿ ಹನ್ನೊಂದು ಅನುವಾಕಗಳಲ್ಲಿ ಜೀವಿಯನ್ನು ಸಂತೋಷವಾಗಿರಿಸುವ ಸಾಧನಗಳ ಕುರಿತು ಪ್ರಾರ್ಥನೆ ಇರುವುದರಿಂದ ಇದನ್ನು ಆನಂದಾಭೀಷ್ಟದಾಯಿನೀ ಎನ್ನಲಾಗಿದೆ.

1 comment:

Narendra P. Sastry said...

excellent article Srikanth...and very nicely narrated...