Tuesday, February 26, 2008

ಹಿಂದೋಳ ವಸಂತ, ಶೃಂಗಾರ ಸಂಕೀರ್ತನೆ ಮತ್ತು ಪುರುಷಾರ್ಥ ಕುರಿತು


ಸಂಜೆ ಕಳೆದು ಮೂರ್ತಾಸಾಗಿತ್ತು. ಬಾಂದಳದಲ್ಲಿ ನಿಶಾದೇವಿ ಆವರಿಸಿದ್ದರೂ, ’ಆಧಾ ಹೈ ಚಂದ್ರಮಾ, ರಾತ್ ಆಧಿ...’ ಅನ್ನುವಷ್ಟು ಹೊತ್ತು ಕಳೆದಿರಲಿಲ್ಲ. ಇನ್ನೂ ಎಳಸೆನಿಸುವ ರಾತ್ರಿ ವೇಳೆಯಲ್ಲಿ ವಸಂತಮಾಸದ ಸುವಾಸನೆಯುತ ಅಲರೆಲರ ರೀತಿ ಅಲೆ ಅಲೆಯಾಗಿ ಕೇಳಿಸಿದುದು ಹಿಂದೋಳವಸಂತ ರಾಗದ ಅನ್ನಮಾಚಾರ್ಯರ ’ಜಗಡಪು ಚನವುಲ ಜಾಜರ’ ಸಂಕೀರ್ತನೆ. ಶೃಂಗಾರ ರಸದಲ್ಲಿ ಮಿಂದಿರುವ ಈ ಸಂಕೀರ್ತನೆ ಹಿಂದೋಳವಸಂತ ರಾಗದಲ್ಲಿದೆ. ಹಿಂದೋಳವೆಂದರೆ ಉಯ್ಯಾಲೆ. ಹಿಂದೋಳವಸಂತಕ್ಕೆ ಎಂಥ ಅರ್ಥವತ್ತಾದ ಹೆಸರು ನೋಡಿ. ರಾಗ ಬೆಳೆಯುವ ಪರಿ ಅನುಭವಿಸಲು, ಕೇಳುಗನು ತೂಗುಯ್ಯಾಲೆಯ ಮೇಲೆಯೇ ಕುಳಿತು ಡೋಲಾಯಮಾನವಾಗಿ ಹಿಂದು ಮುಂದು ತೂಗುವ ಭಾಸವಾಗುವಂತಿದೆ ಇದರ ಸ್ವರ ಸಂಚಾರ. ಗಮಕಗಳ ಮೆರುಗು ಸೇರಿ, ಸ್ವರಪುಂಜಗಳು ಮತ್ತು ಪದಪುಂಜಗಳು ಉಯ್ಯಾಲೆಯಾಡುವ ಸದೃಶ ಸೌಕ್ಯ ಮೂಡುತ್ತದೆ. ವಸಂತ ಮಾಸ ಮತ್ತು ತೂಗುಯಾಲೆ, ಶೃಂಗಾರಕಾಗಿಯೇ ಹೇಳಿಮಾಡಿಸಿದಂತಿದೆ. ಅದರ ಜೊತೆಗೆ ’ಪದಕವಿತ ಪಿತಾಮಹ’ ಅನ್ನಮಾಚಾರ್ಯರ ಪದಲಾಲಿತ್ಯದ ಸರಸ ಸಲ್ಲಾಪ. ’ಭಾವಯಾಮಿ ಗೋಪಾಲಬಾಲಂ’ಯೆಂದು ಭಕ್ತಿ ಸಂಕೀರ್ತನೆ ಸಾರಿದ ಅನ್ನಮಯ್ಯ; ’ಅದಿವೋ ಅಲ್ಲದಿವೋ ಶ್ರೀಹರಿವಾಸಮು’ ಎಂಬ ಕೃತಿಯಲ್ಲಿ ಏಳುಬೆಟ್ಟಗಳನ್ನು ಸಹಸ್ರಾರ, ಮಣಿಪೂರ ಮುಂತಾದ ಏಳುಚಕ್ರಗಳಿಗೆ ಹೋಲಿಸಿ, ಕುಂಡಲೀನಿಯೋಗದ ಮರ್ಮ ತಿಳಿ ಹೇಳಿದ ಆಚಾರ್ಯರು ಕೂಡ. ಹೀಗೆ ಭಕ್ತಿ, ಯೋಗ, ವೈರಾಗ್ಯ ತಿಳಿ ಹೇಳಿದ ಸಂತನು ’ಹೂವು- ಹಾಸಿಗೆ, ಚಂದ್ರ - ಚಂದನ, ಬಾಹುಬಂಧನ-ಚುಂಬನ’ ಗಳ ಬಗ್ಗೆ ವ್ಯಾಖ್ಯಾನ ಮಾಡುವುದೆಂದರೆ ಮೊದಲಿಗೆ ತುಸು ವಿರೋದಾಭಾಸವೆನಿಸುತ್ತದೆ. ’ಜಗಡಪು ಚನವುಲ ಜಾಜರ’ ಸಂಕೀರ್ತನೆಯಲ್ಲಿ ಸಖಿ ಸಖರು ಸರಸದಿಂದ ಸೆಣಸಾಡುವ ಹಬ್ಬದ ವರ್ಣನೆ ನೀಡಿದ್ದಾರೆ. ’ಜಾಜರ’ ಅಂದರೆ ಹೋಲಿಯ ರೀತಿ ಒಂದು ಹಬ್ಬ, ಪರ್ವ. ಸರಸ ಸಲ್ಲಾಪ, ವಿರಹ ವೇದನೆಯ ಭಾವನೆ ಇನ್ನಿತರ ಶೃಂಗಾರ ಪ್ರಧಾನ ಕೃತಿಗಳನ್ನು ರಚಿಸಿ, ಭಕ್ತಿಪ್ರದಾನವಾದ ಕರ್ನಾಟಕ ಸಂಗೀತದ ಚೌಕಟ್ಟಿನಲ್ಲಿ ಶೃಂಗಾರ ಸಂಕೀರ್ತನಗಳನ್ನು ಅನ್ನಮಯ್ಯನವರು ಸುಲಲಿತವಾಗಿ ಅಳವಡಿಸಿಕೊಂಡಿದ್ದಾರೆ.ತಾಳ್ಳಪಾಕಂ ಅಣ್ಣಮಾಚಾರ್ಯವಿರಚಿತ ನಾಲ್ಕು ಸಂಕಲನಗಳು ಲಭ್ಯವಿದೆ: ೧.ಅಧ್ಯಾತ್ಮ ಸಂಕೀರ್ತನಲು ೨. ಶೃಂಗಾರ ಸಂಕೀರ್ತನಲು, ೩ ಶೃಂಗಾರಮಂಜರಿ, ೪.ವೆಂಕಟಾಚಲ ಮಹಾತ್ಮೆ.ಈ ಸಂಕೀರ್ತನೆಯನ್ನು ಅವರ ಶೃಂಗಾರಮಂಜರಿ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.ವೆಂಕಟೇಶಸ್ವಾಮಿಯಲ್ಲಿ ಒಬ್ಬ ತರುಣಿಯ ಅಪರಿಮಿತ ಸತ್ವಪ್ರೇಮ ಮತ್ತು ಆಕೆಯ ಸಖಿಯರ ಮಧ್ಯಸ್ಥಿಕೆ ಇಂದ ಪ್ರೇಮ ಸಫಲವಾಗುವ ಕಥಾವಸ್ಥುವಿನ ಸುತ್ತಾ ಹೊಮ್ಮಿರುವ ಈ ಕೃತಿಯಲ್ಲಿ ವಿಪುಲವಾಗಿ ಶೃಂಗಾರ ಭರಿತ ಕೃತಿಗಳಿವೆ. ಹದಿನಾಲ್ಕನೆ ಶತಮಾನದ ತೆಲುಗಿನ ಅನ್ನಮಯ್ಯನವರು ಇಂತಾದರೆ, ತಮಿಳಿನ ಮಹಾಸಂತರೆನಿಸಿದ ತಿರುವಳ್ಳುವರ್‍ ಅವರೂ ಸಹ ತಮ್ಮ ಮೇರುಕೃತಿಯಾದ ತಿರುಕ್ಕುರಳ್ ನಲ್ಲಿ ಸಖೀ-ಸಖರ ಮಧುರ ಪ್ರೇಮಕ್ಕೆ ಉನ್ನತ ಸ್ಥಾನ ಕೊಟ್ಟಿದ್ದಾರೆ. ೧೩೦೦ ಪಂಕ್ತಿಗಳಿರುವ ಕುರಳ್ ನಲ್ಲಿ ಮೂರುವಿಭಾಗಗಳು: ನೀತಿಬೋದೆಯನ್ನು ಹೇಳುವ ’ಅರಂ’ , ಜೀವನ ಸತ್ಯಗಳನ್ನು ತಿಳಿಸುವ ’ಪೊರುಳ್’, ಸಾಮರಸ್ಯ ಮತ್ತು ಶೃಂಗಾರ ಪ್ರಧಾನ ಭಾಗ - ’ ಇನ್ಬಂ’. ಇತ್ತ ನಮ್ಮ ಕರುನಾಡಿನ ಹಿತ್ತಲಲ್ಲಿನ ಸೂಫಿ ಸಂತ ಶರೀಫರು , ’ಕೋಡಗಾನ ಕೋಳಿ ನುಂಗಿತ್ತಾ?’ ಎಂದು ಮೊದಲುಗೊಂಡು, ’ಗೋವಿಂದಾ ಗುರುವಿನ ಪಾದ ನನ್ನನೆ ನುಂಗಿತ್ತಾ! ಎಂಬ ವೈರಾಗ್ಯದ ನುಡಿಯನ್ನು ಒಂದು ಕಡೆ ಹಾಡಿದರೆ, ಅಷ್ಟೆ ಸಹಜವಾಗಿ, ’ಮೋಹದ ಹೆಂಡತಿ’ ಬಗ್ಗೆಯೂ ಪ್ರೀತಿ-ಅಕ್ಕರೆಯಿಂದ ಸುರತ ಸಂಗೀತ ಪಾಡಿದ್ದಾರೆ. ಇನ್ನು ಸಂಸ್ಕ್ರುತದಲ್ಲಿ ಭರ್ತೃಹರಿಯ ಸುಭಾಶಿತತ್ರಿಶತಿಯಲ್ಲಿಯೂ ನೀತಿ ಶತಕ, ಶೃಂಗಾರ ಶತಕ, ಮತ್ತು ವೈರಾಗ್ಯ ಶತಕಗಳೆಂಬ ಮೂರು ವಿಭಾಗಗಳೇ. ಇಲ್ಲಿ ನಾವು ಗಮನಿಸಬಹುದಾದ ವಿಷಯವೆನೆಂದರೆ -- ಸಂಸ್ಕೃತದಲ್ಲಿ ರಚಿಸಿದ ಭರ್ತೃಹರಿ ಮುನಿಯಾಗಲೀ, ತಮಿಳಿನ ವಳ್ಳುವರ್ ಆಗಲಿ, ತೆಲುಗಿನ ಅನ್ನಮಾಚಾರ್ಯರಾಗಲಿ, ಕನ್ನಡದ ಶಿಶುನಾಳರಾಗಲಿ ಬೇರೆ ಬೇರೆ ದೇಶ-ಕಾಲ-ಭಾಷೆಗಳಲ್ಲಿ ಇದ್ದರಾದರೂ ಎಲ್ಲ ಸಂತರೂ ನೀತಿ, ಶೃಂಗಾರ ಮತ್ತು ವೈರಾಗ್ಯಗಳ್ಳನ್ನೇ ಆಯ್ದುಕೊಂಡು ಬದುಕಿನ ಸಂಪೂರ್ಣತೆಯನ್ನು ಮೆರೆದಿದ್ದಾರೆ. ಚತುರ್ವಿಧ ಪುರುಷಾರ್ಥಗಳಲ್ಲಿ ಧರ್ಮವೇ ಆಗಲಿ, ಅರ್ಥವೇ ಆಗಿಲಿ, ಕಾಮವೇ ಆಗಲಿ, ಯಾವುದೇ ಒಂದು ಸಂಪೂರ್ಣ ಪುರುಷಾರ್ಥವಲ್ಲ. ಹಂತ ಹಂತವಾಗಿ ನೀತಿಯಿಂದ ಧರ್ಮಾರ್ಥಗಳು, ಶೃಂಗಾರದಿಂದ ಧರ್ಮಾವರೋಧವೆನಿಸದ ಕಾಮವು, ಕಾಲಾಂತರದಲ್ಲಿ ವೈರಾಗ್ಯದಿಂದ ಮೋಕ್ಷವೂ ಪ್ರಾಪ್ತಿಯಾಗುವುದಲ್ಲಿಯೇ ಜೀವಿತದ ಸಾರ್ಥಕತೆ!



జగడపు చనువుల జాజర, సగినల మంచపు జాజర

మొల్లలు తురుముల ముడిచిన బరువున, మొల్లపు సరసపు మురిపెమున
జల్లన పుప్పొడి జారగ పతిపై చల్లే పతిపై, చల్లే రతివలు జాజర

భారపు కుచముల పైపై కడు సింగారము నెరపేటి గంధవొడి
చేరువ పతిపై చిందగ పడతులు, సారెకు చల్లేరు జాజర

బింకపు కూటమి పెనగేటి చెమటల, పంకపు పూతల పరిమళము
వేంకటపతిపై వెలదులు నించేరు, సంకుమ దంబుల జాజర



ಬಾಲಕೃಷ್ಣಪ್ರಸಾದ್ ಮತ್ತು ಸಂಗಡಿಗರು | Track details |


*** ಬಾಲಕೃಷ್ಣಪ್ರಸಾದ್ ಮತ್ತು ಸಂಗಡಿಗರು

3 comments:

Sumana said...

tummba chennagide....bere bere desha-kaalagaLalli idda santara kritigaLalli iruva saamyateyanna chennagi juxtapose maaDiddira! Heege bareeta iri !

Sree said...

ಪುರುಷಾರ್ಥಗಳ ಬಗ್ಗೆ ನಿಮ್ಮ ವಿಚಾರ ಇಷ್ಟ ಆಯ್ತು. eroticism ಪಕ್ಕಕ್ಕೆ ಸರಿದಿದ್ದಕ್ಕೆ ವಿಕ್ಟೋರಿಯನ್ ಬ್ರಿಟಿಶ್ ಸಂಸ್ಕೃತಿಯೊಂದಿಗಿನ ಮುಖಾಮುಖಿಯೇ ಮುಖ್ಯ ಕಾರಣ ಅಂತ ಅನ್ನಿಸುತ್ತೆ. ಸಂಗೀತದಲ್ಲಷ್ಟೇ ಅಲ್ಲ, ಒಟ್ಟು ಭಾರತೀಯ ಸಂಸ್ಕೃತಿಯಲ್ಲೇ ಇದ್ದ balanced approach ಅನ್ನು ಏರುಪೇರಾಗಿಸಿ ಭಕ್ತಿಯನ್ನ prioritise ಮಾಡುವಂತಾದದ್ದು ಇದರ ಪರಿಣಾಮ. ಕರ್ನಾಟಕ ಸಂಗೀತದ ಕಚೇರಿ ಪದ್ಧತಿ ರೂಪುಗೊಳ್ಳೋ ಸಮಯದಲ್ಲಿ ಈ defensive ideology ಮತ್ತು national identityಯ ರೂಪುಗೊಳ್ಳುವಿಕೆ dominate ಮಾಡಿದ್ದು ಇವತ್ತಿನ ’ಕರ್ನಾಟಕ ಸಂಗೀತ ಭಕ್ತಿ ಪ್ರಧಾನ’ ಅನ್ನೋ ನಂಬಿಕೆ ಕಾರಣವಾಯಿತೇನೋ ಅನ್ನಿಸುತ್ತೆ. ಅಣ್ಣಮಾಚಾರ್ಯರ ಶೃಂಗಾರ ಸಂಕೀರ್ತನೆಯಂತೆ ಕ್ಷೇತ್ರಜ್ಞನ ಪದಗಳು, ಜಾವಳಿಗಳು, ಅಷ್ಟಪದಿಗಳು...ಇವಕ್ಕೆ ಮನೋಧರ್ಮ ಸಂಗೀತಪ್ರಕಾರಕ್ಕೆ ಒಡ್ದಿಕೊಳ್ಳುವ ಸಾಧ್ಯತೆಗಳಿದ್ದೂ ಅದು unexplored ಆಗಿ ಉಳಿದು ಕಚೇರಿಯ ಕೊನೆಗೆ ತಳ್ಳಲ್ಪಟ್ಟಿದ್ದು ಒಂದು ರೀತಿಯ identity politics ಕಾರಣವೇನೋ...ನೀವು ಇಲ್ಲಿ ಕೊಟ್ಟಿರೋ ನಿದರ್ಶನಗಳು ಇದಕ್ಕೆ ಪೂರಕ...

ಸಾರಿ, ಏನೇನೋ ಕೊರಿಯೋದಕ್ಕೆ ಷುರು ಮಾಡಿಬಿಟ್ಟೆಇದು ನನ್ನ ಫೇವರಿಟ್ ಸಬ್ಜೆಕ್ಟು:p
coming to the song in question, ಸಾಹಿತ್ಯ ಅಲ್ಲೊಂದು ಇಲ್ಲೊಂದು ಪದ ಬಿಟ್ಟು ಅರ್ಥವಾಗದ ಕಾರಣ ನಿಮ್ಮ ಮಾತುಗಳ ಮೇಲೇ depend ಆಗಬೇಕು! ಅಣ್ಣಮಾಚಾರ್ಯರ ಸಂಕೀರ್ತನೆಗಳಿಗೆ ನೇದುನೂರಿ ಕೃಷ್ಣಮೂರ್ತಿಯವರ ರಾಗ ಸಂಯೋಜನೆ, rendition ನನಗೆ ಇನ್ನೂ ಹೆಚ್ಚು ಹಿಡಿಸುತ್ತದೆ, ಅಲ್ಲಿನ classicism ನನಗೆ ಇಷ್ಟ:)

Manjunatha Kollegala said...

A good piece... made a nice reading.