Friday, February 08, 2008

ನಕ್ಷೆ - ನಿಲುವು



ಬಹಳ ದೂರ ಬಂದಿದ್ದೇವೆ ಗೆಳೆಯ.....ಬಹಳ ದೂರ.
ಹುಡುಕಿ ಹೊರಟ ತಾಣಕ್ಕೂ
ನಮ್ಮ ಈಗಿನ ಸ್ಥಾನಕ್ಕೂ
ಒಂದೇ ರೇಖೆ ಅಂತರ:
ಎಂಭತ್ತು ಮತ್ತು ನೂರರ ವ್ಯತ್ಯಯ!

ಮೂಲೆಗೆ ಸರಿದ ಮುಂಜಾವಿನ ಮೂಲಗುರಿ
ಮಾಯಾಜಿಂಕೆಯ ಮಾರಿ-
ಚ ಲನಶೀಲ ನಕ್ಷೆ-ನಿಲುವು;

ಅಳಿವ ಸ್ಥಾವರದ ಇಳಿ
-ಜಾರಿನ ಹಳಿಯ ಬಳಿ
ದಿಕ್ಕು - ದೆಸೆ ಬದಲಿಸಿ,
ಜಂಗಮದ ಜಾರೆಬಂಡೆಯ ಮೇಲೆ
ಜುರ್ !!! ...ರ್ !!!...ರ್ !!!.... ಎಂದು ಜಾರಿ ಬಂದ
ಬಿರಾಗಿ,
ಸಿಕ್ಕ ತಾಣವೇ ಸ್ವರ್ಗದಂತಿರಲು
ಸಿಗದ ಸೋಜಿಗದ ಪರಿವೆ ಇನ್ನೇಕೆ ?

ನಡೆಯುತಲೆ ನಾವು ಸಿಗಿದ ದಾರಿಯಲ್ಲಿನ ಸೀಳು,
ಹಿಡಿದ ಹಾದಿ, ಇಟ್ಟ ಹೆಜ್ಜೆ
ದೂರ ಸರಿದೂ ಸರಿದೂ
ಈಗ ಇಲ್ಲೆಲ್ಲೋ ತಂದಿರಿಸಿದೆ.

ಈಗ, ’ಇದು’ "ಇಲ್ಲೆಲ್ಲೋ" ಎಂದೆನಿಸಿದರೂ - ಆಪ್ತ,
ಮಾರ್ಗ ಮಧ್ಯೆ (ನಾವು) ಗೆದ್ದ ಅಧ್ಯಾಸದ ದಾಸ್ಯ
ಪಡೆದ ಸತ್ಯ ಸಾಕ್ಷಾತ್ಕಾರ, ನೂತನ ದೃಷ್ಟಿ
ಕೋನ
ಜೀವಿತದಷ್ಟೆ ಸಹಜ,
ಭಾವದಷ್ಟೆ ನೈಜ,
ಸಾಕ್ಷಿಯಷ್ಟೆ ಸತ್ಯ !

ಇಂತಿರಲು ನಾವು ನಿಜಕ್ಕೂ
ಬಹಳ ದೂರ ಬಂದೆವಾ ಗೆಳೆಯ.....ಬಹಳ ದೂರ?

==

Miami Lakes, FL 01Feb2008 2:49 PM

1 comment:

jomon varghese said...

ನಮಸ್ತೆ.

ನಿಮ್ಮ ಕವಿತೆಗಳು ಸೊಗಸಾಗಿವೆ. ರೇಖಾಚಿತ್ರ ಸೂಪರ್!ಹೀಗೆಯೇ ಮುಂದುವರೆಸಿ.

ಧನ್ಯವಾದಗಳು.
ಜೋಮನ್