Thursday, November 11, 2021

ಚಮಕ ಪ್ರಶ್ನೆ

ವಿದ್ವಾನ್ ಶೇಷಾಚಲ ಶರ್ಮಾರವರ ಗ್ರಂಥದಲ್ಲಿ ಕಂಡುಬಂದುದು:


(ಚಮಕಾಧ್ಯಾಯದ ಕೊನೆಯಲ್ಲಿ ಪಠಿಸಬೇಕಾದ ಮಂತ್ರದ ಅರ್ಥ) : 


ಇಡಾ ಎಂಬ ದೇವವಾಣೀ ರೂಪವಾದ ಧೇನುವು ದೇವತೆಗಳನ್ನು ಆಹ್ವಾನಮಾಡುವ ಹೋತಾ ಆಗಿದೆ. ಆ ವೇದವಾಣಿಯೇ ಯಜ್ಞದ ನೇತೃವಾದ ಮನು ಪ್ರಜಾಪತಿ, ಬೃಹಸ್ಪತಿಯು ಶಸ್ತ್ರ-ಪ್ರತಿಗರ ಮುಂತಾದವುಗಳನ್ನು ಶಂಸಿಸುತ್ತಾನೆ. ವಿಶ್ವೇದೇವರು ಸೂಕ್ತವಾಚಕರಾಗಿರುತ್ತಾರೆ. (ಇಡಾ ಮುಂತಾದವರು ಹೀಗೆ ಮಾಡುವುದರಿಂದ ನಾನು ಪ್ರಮಾದಗೊಂಡರೂ ನನ್ನ ಅಪರಾಧವಿರುವುದಿಲ್ಲ.) ಆದುದರಿಂದ ಓ ಪೃಥಿವಿಯೇ! ತಾಯಿಯೇ! ನನ್ನನ್ನು ಹಿಂಸಿಸಬೇಡ. ಮನಸ್ಸಿನಿಂದ ಮಧುರವಾದುದನ್ನೇ. ಚಿಂತಿಸುತ್ತೇನೆ. ಮಧುರವಾದುದನ್ನೇ ಉಂಟುಮಾಡುತ್ತೇನೆ. ಮಧುರವಾದುದನ್ನೇ (ದೇವತೆಗಳಿಗೆ) ಹೊಂದಿಸುತ್ತೇನೆ. ಮಧುರವಾದುದನ್ನೇ ವಾಣಿಯಿಂದ ನುಡಿಯುತ್ತೇನೆ. ಮಧುರವಾದ ಮಾತನ್ನೇ ದೇವತೆಗಳಿಗೆ ಹೇಳಲು ಸಮರ್ಥನಾಗುತ್ತೇನೆ. ಮನುಷ್ಯರಿಗೆ ಶ್ರವಣೀಯವಾದ (ಶ್ರುತಿ ಸುಖವಾದ) ಮಾತನ್ನು ಹೇಳಲು ಸಮರ್ಥನಾಗುತ್ತೇನೆ. ಇಂತಹ ಗುಣವಿಶಿಷ್ಟನಾದ ನನ್ನನ್ನು ದೇವತೆಗಳು ರಕ್ಷಿಸಲಿ. ನಾನು ಅನುಷ್ಠಾನ ಮಾಡಿದುದು ಶೋಭಾದಾಯಕವಾಗುವಂತೆ ದೇವತೆಗಳು ಅನುಮೋದಿಸಲಿ, ಪಿತೃದೇವತೆಗಳೂ ಕೂಡ ಇವನು ಉತ್ಕೃಷ್ಟವಾದುದನ್ನು ಅನುಷ್ಠಾನಮಾಡುತ್ತಾನೆಂದು ನನ್ನನ್ನು ಅನುಮೋದಿಸಲಿ.

(ಬ್ರಹ್ಮವಿದ್ಯೋಪಾಸನಾ ದೃಷ್ಟಿಯಿಂದ ಈ ಮಂತ್ರದ ಅರ್ಥ) :

ಧೇನುರೂಪವಾದ ಇಡಾ ದೇವಿಯು ಅಂದರೆ ಬ್ರಹ್ಮವಿದ್ಯೆಯು ದೇವತೆಗಳನ್ನು ಆಹ್ವಾನಿಸುವ ವಿದ್ಯೆಯು. ಮಂತ್ರರೂಪವಾದ ಈ ವಾಗ್ದೇವಿಯು ಯಜ್ಞವನ್ನು ನಯನಮಾಡುವವಳು. ಬೃಹಸ್ಪತಿಯು ಕರ್ಮಸಾಕ್ಷಿಯಾದ ಈಶ್ವರನು. ಕರ್ಮಜನ್ಯವಾದ ಸುಖಗಳನ್ನು ಪ್ರತಿಪಾದಿಸುತ್ತಾನೆ. ಶೋಭನವಾದ ವಾಣಿಯುಳ್ಳ ಹಿಂದೆ ತಿಳಿಸಿದ ದೇವತೆಗಳೊಡಗೂಡಿದ ವಿಶ್ವೇದೇವತೆಗಳು ನನಗೆ ಶ್ರೇಯಸ್ಸನ್ನು ಉಂಟುಮಾಡಲಿ, ತಾಯಿಯೇ! ಪೃಥ್ವಿದೇವಿಯೇ! ನನ್ನನ್ನು ಹಿಂಸಿಸಬೇಡ. ನಾನು (ನಿಮ್ಮ) ಮಧುರವಾದ ಸ್ವರೂಪವನ್ನೇ ಚಿಂತಿಸುತ್ತೇನೆ. ಮಧುರವಾದ (ನಿಮ್ಮ) ಸ್ತೋತ್ರವನ್ನೇ ಮಾಡುತ್ತೇನೆ. ನಾನು ಮಧುರವಾದದ್ದನ್ನೇ ಧರಿಸುತ್ತೇನೆ. ಮಧುರವಾದ ವಾಣಿಯನ್ನೇ ನುಡಿಯುತ್ತೇನೆ. ನನ್ನ ಆತ್ಮೀಯರಾದ ಜನರನ್ನು ಕುರಿತು ಮಧುರವಾದ ಮಾತನ್ನೇ ಆಡುತ್ತೇನೆ. ಕರ್ಮಾಭಿಮಾನಿಗಳಾದ ದೇವತೆಗಳಿಗೆ ಹವಿಸ್ಸಿನ ಸಹಿತವಾದ ಮಧುರವಾಣಿಯನ್ನೇ ಅರ್ಪಿಸುತ್ತೇನೆ. ಮನುಷ್ಯರಿಗೆ ಶ್ರವಣರಮಣೀಯವಾದ ಯಥಾರ್ಥವಚನವನ್ನೇ ಆಡುತ್ತೇನೆ. ಈ ರೀತಿ ಆಚರಿಸುವ ನನ್ನನ್ನು ದೇವತೆಗಳು ರಕ್ಷಿಸಲಿ, ಜಗತ್ತಿನಲ್ಲಿ ನನಗೆ ಶೋಭಾತಿಶಯವು ಉಂಟಾಗಲು ಪಿತೃಗಳು ಅನುಮತಿಯನ್ನು ನೀಡಲಿ, ತ್ರಿವಿಧಶಾಂತಿಯು ಉಂಟಾಗಲಿ.


ವಾಜ, ಪ್ರಸವ, ಅಪಿಜ, ಕ್ರತು, ಸುವ, ಮೂರ್ಧಾ, ವ್ಯಕ್ತಿಯ, ಆಂತ್ಯಾಯನ, ಅಂತ್ಯ, ಭೌವನ, ಭುವನ, ಅಧಿಪತಿ ಎಂಬಿವು ಚೈತ್ರಾದಿ ಮಾಸಗಳ ನಾಮ ವಿಶೇಷಗಳು.

No comments: