Friday, April 10, 2009

ರಸಪ್ರವಾಹ

ಬಿರ್ಕಾಶಾ ದೇಶದ ರಾಜ ಸಭೆಗೆ ಲಾವಣ್ಯವತಿಯೂ ಬಹುಶೃತಳೂ ಆದ ಸ್ವರ್ಣಮಾಲಿನಿ ಎಂಬ ನರ್ತಕಿಯು ತನ್ನ ಚಾರಣ ವೃಂದದೊಂದಿಗೆ ಆಗಮಿಸಿದಳು. ರಾಜಕುಮಾರನ ಸಮಕ್ಷಮದಲ್ಲಿ ವೀಣಾಭೇರಿ ಮೃದಂಗಾದಿಗಳ ಗೋಷ್ಠಿಗಂಗೆಯಲ್ಲಿ ಲೀನವಾಗಿ, ಲಾಸ್ಯವೇ ತಾನೆಂಬಂತೆ ನರ್ತಿಸಿದಳು. ಸ್ವರ್ಣಮಾಲಿನಿ ಜ್ವಾಲಮಾಲೆಯಾಗಿ ಜ್ವಾಲೆಯ ನರ್ತನ, ನಕ್ಷತ್ರಾಕಾಶಗಳ ನರ್ತನ -- ಹೀಗೆ ಎಲ್ಲವನ್ನೂ ಚಿತ್ರಬಿಡಿಸಿದಂತೆ ಕಣ್ಣುಕಟ್ಟುವ ಹಾಗೆ ಚಿತ್ರಿಸಿದಳು.ತದನಂತರ ರಾಜಕುಮಾರನ ಬಳಿ ಬಂದು ತಲೆಬಾಗಿ ನಮಸ್ಕರಿಸಿದಳು. ರಾಜಕುಮಾರನು ಇಂತೆಂದನು " ನರ್ತನನಿಧಿಯೇ -- ಲಾಸ್ಯ ಲಾವಣ್ಯಗಳ ಪುತ್ರಿಯಂತಿರುವ ನಿನಗೆ ಈ ಕಲೆಯು ಹೇಗೆ ಒಲಿಯಿತು. ಎಲ್ಲಿಂದ ಅವತರಿಸಿತು? ಪಂಚಭೂತಗಳನ್ನೂ ನಿನ್ನ ಹಾವಭಾವಗಳಲ್ಲಿಯೇ ಹೇಗೆ ಅಡಕವಾಗಿಟ್ಟಿರುವೆ?" ಇದರ ಗುಟ್ಟೇನೆಂದು ಕೆಳಲಾಗಿ, ಸ್ವರ್ಣಮಾಲಿನಿಯು ಇಂತೆಂದಳು -- "ಮಹಾಸ್ವಾಮಿ, ನಿಮ್ಮ ಸವಾಲುಗಳಿಗೆ ನನ್ನ ಬಳಿ ಸಮಂಜಸ ಉತ್ತರಗಳು ಇಲ್ಲ. ಆದರೆ ನನಗೆ ತಿಳಿದಿರುವುದು ಇಷ್ಟೆ: ಒಬ್ಬ ದಾರ್ಶನಿಕನ ಆತ್ಮ ಹೇಗೆ ಶಿರೋಭಾಗದಲ್ಲಿ ಸ್ಥಿತವಾಗಿರುತ್ತದೆಯೋ, ಕಾವ್ಯಾತ್ಮನಾದ ಕವಿಯ ಆತ್ಮವು ಹ್ರುದ್ಭಾಗದಲ್ಲಿ ನೆಲೆಸಿರುತ್ತದೆಯೋ, ಗಾಯಕಮಾನ್ಯರ ಸರ್ವಸ್ವವೂ ಕಂಠದಲ್ಲಿ ಸ್ಥಾಪಿತವಾಗಿದೆಯೋ,ಹಾಗೆ ನರ್ತಕನ ಆತ್ಮವು ಅಣು ಅಣುವಿನಲ್ಲೂ ರಸಪ್ರವಾಹವಾಗಿ ಸಂಚರಿಸುತ್ತದೆ."

---
** ಭಾವಾನುವಾದ Adapted from Kahlil Gibran.

No comments: