Sunday, February 24, 2008

ಲೇಸು, ಕೊಳ್ಳದಿರುವುದೇ ಲೇಸು!

ಅಮೆರಿಕೆಯಲ್ಲಿ ಗ್ರಾಹಕರು ವಸ್ತುಗಳನ್ನು ಕೊಳ್ಳುವಾಗ ಅತ್ಯಂತ ಒತ್ತಡಕ್ಕೆ ಒಳಗಾಗಿ ಮನೋವೈದ್ಯರ ಮೊರೆ ಹೊಕ್ಕಿದ್ದಾರಂತೆ!

ಬಹಳ ಹಿಂದೆ ನಾನು ಭಾರತದ ಒಂದು ಪತ್ರಿಕೆಯಲ್ಲಿ ಈ ವಿಷಯ ಓದಿದ ನೆನಪು.ಆಗ ನಾನು,ಇದು ಅತಿಶಯೋಕ್ತಿಯ ಮಾತು ಎಂದು ತಿಳಿದು ಮನದಲ್ಲೆ ನಕ್ಕಿದ್ದುಂಟು.’ಶಾಪಿಂಗ್ ಸ್ಟ್ರೆಸ್ಸ್’ ಕಳೆದು ಕೊಳ್ಳಲು ವೈದ್ಯರ ಬಳಿ ಹೋಗುವುದೆಂದರೇನು? ’ಇಲ್ಲ,ಇಲ್ಲ,ಸಾಧ್ಯವೇ ಇಲ್ಲ!ಇರಲಿಕ್ಕಿಲ್ಲ!’ ಎಂದು ನನ್ನ ಅಂಬೋಣ.ಈ ವಿಷಯ ನನಗೆ ಮನವರಿಕೆಯಾಗಲು,ನಾನು ಸ್ವತಃ ಅಮೆರಿಕೆಗೆ ಬಂದು --ಅಬ್ಬಾ! ಬೇಡವೆನಿಸುವಷ್ಟು ಆಯ್ಕೆಗಳ ಪ್ರವಾಹದಲ್ಲಿ ಸಿಲುಕಿಯೇ ಅರಿಯಬೇಕಾಯಿತು.ಇಲ್ಲಿ ಏನು ಕೊಳ್ಳಬೇಕಾದರೂ ಗ್ರಾಹಕನಿಗೆ ಸಾವಿರಾರು ನಮೂನೆಗಳು ದೊರೆಯುತ್ತವೆ.ಒಂದೇ ಬಗೆಯ ಯಾವುದೇ ಸಾಮಗ್ರಿಯ ಇನ್ನೂರಕ್ಕೂ ಹೆಚ್ಚು ಬಗೆಗಳು ದೊರೆಯುವ ಸ್ಥಳವಿದು.ಒಂದು ವಸ್ತುವಿಗೆ ಐದು ಡಾಲರ್ ಇಂದ ಹಿಡಿದು ಐದು ಸಾವಿರ ಡಾಲರ್ ವರೆಗೂ, ಮನಸ್ಸಿಗೆ ಬಂದ ಯಾವುದಾದರು ಬೆಲೆ ಹಚ್ಚಿ, ದಾಸ್ತಾನು ಮಾಡುವ ಸಾಮರ್ಥ್ಯವಿರುವ ಮಹಾದೇಶವಿದು.ಊಟ-ತಿಂಡಿ,ಬಟ್ಟೆ- ಬರೆ,ಕಾರು-ವಾಹನ ಹೀಗೆ ಎಲ್ಲಾದ್ರಲ್ಲೂ ಗ್ರಾಹಕನ ಗ್ರಹಿಕೆಗೂ ಮೀರಿದಷ್ಟು ವೆರೈಟಿ. ನಾವು ಕೊಂಡದ್ದು ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ -- ’ವ್ಯಾಲ್ಯೂ ಫಾರ್ ಮನಿ’ ಯೇ ಎಂಬ ಗೊಂದಲ ಗ್ರಾಹಕನಿಗೆ ಇದ್ದೇ ಇರತ್ತೆ. ಇಷ್ಟೇ ದುಡ್ಡಿಗೆ ಇನ್ನೂ ಹೆಚ್ಚು ಕೊಳ್ಳಬಹುದಿತ್ತೇನೊ, ಇನ್ನೂ ಒಳ್ಳೆಯದು ಖರೀದಿಸ ಬಹುದಿತ್ತೇನೋ ಎಂಬ ಉತ್ತರವಿಲ್ಲದ ಅನಂತ ಆತಂಕ. ನಾವು ಕೊಂಡದ್ದೆಲ್ಲಾ ಅತ್ಯುನ್ನತ ಮಟ್ಟದ್ದೇ ಆಗಿ ತೀರಬೇಕು ಎಂಬ ಮಾನವನ ಹಂಬಲದ ಜೊತೆಗೆ ಆಯ್ದುಕೊಳ್ಳಲು ಬೇಡವೆನಿಸುವಷ್ಟು ವೈವಿಧ್ಯತೆ ಇದ್ದ ಪಕ್ಷದಲ್ಲಿ ಇಂತ ’ಶಾಪಿಂಗ್ ಸ್ತ್ರೆಸ್ಸ್’ ತಲೆದೋರುವುದು ಸಹಜ.

ಅನಂತ ಸಾಧ್ಯತೆಗಳ ಅಮೆರಿಕೆಯಲ್ಲಿ
ಎಲ್ಲವೂ ಗ್ರಾಹಕ ಶಾಹಿ;
ಆಯ್ದುಕೊಳ್ಳಲು ಅರಿಯದೇ ಅಮಾಯಕನಾದರೆ,
ನೆಟ್ಟಕಣ್ಣು-ಬಿಟ್ಟಬಾಯಿ!


ಹಿರಣ್ಯಖಂಡದಲ್ಲಿ ನಾನು ಕಾಲಿಟ್ಟು,ಕಚೇರಿಗೆ ಬಂದಿಳಿದ ಮೊದಲ ದಿನಗಳು. ಬೆಳಗಿನ ನನ್ನ ಕಾಫಿ ಡೋಸ್ ಗಾಗಿ ಕ್ಯಾಫೆಟೀರಿಯಾ ಬಳಿ ಬಂದು ನಿಂತೆ. ಎರಡು ಡಜೆನ್ ಬಗೆಯ ಕಾಫಿ ಆಯ್ಕೆಗಳು: ಐರಿಶ್ ಕಾಫಿ, ಬ್ರೇಕ್ ಫಾಸ್ಟ್ ಸ್ಪೆಷಲ್, ಕೊಲಂಬಿಯಾ ಬ್ಲೆಂಡ್ -- ಹೀಗೆ ಬಗೆ ಬಗೆಯ ಸುಮಾರು ಎರಡು ಡಜನ್ ವೆರೈಟಿಗಳು. ಮೊದಲೇ ಅವಳಿ-ಜವಳಿ ಖ್ಯಾತಿಯ ಮಿಥುನ ರಾಶಿಯಲ್ಲಿ ಹುಟ್ಟಿದ ನನಗೆ, ಎರಡಕ್ಕಿಂತ ಹೆಚ್ಚು ಏನ್ನನ್ನೇ ತೋರಿಸಿ - ’ಆಯ್ದುಕೋ’ ಆಂದರೂ, ಅಲ್ಲೆ ಮಾನಸಿಕ ದ್ವಂದ್ವಗಳು ನಿರ್ಮಿತವಾಗಿ, ಗೊಂದಲ ಮೂಡಿ, ಯಾವುದನ್ನೂ ಆಯ್ದುಕೊಳ್ಳಲಾರದೆ ಬೇಸತ್ತು ಸುಸ್ತಾಗಿಬಿಡುವೆ. ಅಂತಹುದರಲ್ಲಿ ಹೀರಲು ಇಪ್ಪತ್ನಾಲ್ಕು ಬಗೆಯ ಕಾಫಿ ತಳಿಗಳನ್ನು ನನ್ನ ಮೇಲೆ ಹೇರುವುದೇ? ಯಾವುದನ್ನೂ ಕುಡಿಯದೆ,ಸೀದಾ ಡೆಸ್ಕ್ ಬಳಿ ಬಂದು ಕೀಲಿಮಣೆ ಕುಟ್ಟಲು ಆರಂಭಿಸಿದೆ.

ಮಾಸಗಳು ಕಳೆದಂತೆ ತಾಯ್ನಾಡಿನ ನೆನಪುಗಳ ಜೊತೆಗೆ, ನನ್ನ ಲೇಸು ಸಹಾ ತುಸು ಮಾಸ ತೊಡಗಿತು. ಜಯನಗರದ ಬಾಟಾನಲ್ಲಿ ರೂ.೯೯.೯೯ ಬೆಲೆಯ ಸಾದಾ ಚಪ್ಪಲಿಯ ಜೊತೆ ಕೊಂಡ ಕಪ್ಪು ಬಣ್ಣದ ಆಫೀಸ್ ಷೂ ನಂದು.ಪಾದುಕೆ ಸರಿಯಾಗಿ ಬಾಳಿಕೆ ಬಂದರೂ,ಆರು ತಿಂಗಳಲ್ಲಿ ಪಾಪ ಲೇಸು ’ಡಂ’ ಅಂದಿತು.ಲೇಸಿಗೆ ಕನ್ನಡದ ಪಾರಿಭಾಷಿಕ ಶಬ್ದ ತಿಳಿದಿಲ್ಲ.ಸರಿ,’ಪಾದುಕಾ ಬಂಧಕ’ಅನ್ನೋಣ.ಚಿಕ್ಕದಾಗಿ ಮತ್ತು ಚೊಕ್ಕವಾಗಿ ’ಪಾ.ಬ’ -- ಶಾರ್ಟ್ ಅಂಡ್ ಸ್ವೀಟ್! ಕಥೆ ಮುಂದುವರಿಸುತ್ತಾ...ಪಾಪ ನನ್ನ ಪಾ.ಬ. ಕೈ ಕೊಡ್ತಾ....ಆಮೇಲೆ, ಹತ್ತಿರದ ವಾಲ್ ಮಾರ್ಟ್ ಗೆ ಲೇಸಿಲ್ಲದ ದಾಪುಗಾಲಿಟ್ಟು ಕೊಂಡು ನಡೆದೆ. ಕಣ್ಣಿಗೆ ಬಿದ್ದ ಕಪ್ಪು ಪಾ.ಬ. ಕೊಂಡು ಮನೆಗೆ ಹಿಂದಿರುಗಿದೆ.ಮರುದಿನ ಕಚೇರಿಗೆ ತೆರಳುವ ಮುನ್ನ ಪ್ಯಾಕೆಟ್ಟನ್ನು ಬಿಚ್ಚಿ ನೋಡಿದರೆ: ಹನುಮಂತನ ಬಾಲದಂತೆ, ದ್ರೌಪದಿಯ ಸೀರೆಯಂತೆ, ಗೋಲ್ಡನ್ ಸ್ಟಾರ್ ಗಾಳಿಪಟದ ಬಾಲಂಗೋಚಿಯಂತೆ, ಪಾ.ಬ ಮುಗಿಯುತ್ತಲೇ ಇಲ್ಲ. ಸುಮಾರು ಆರೇಳು ಗಜದ ಬೃಹತ್ ಪಾದುಕಾ ಬಂಧಕ ಅದು. ಅಮೆರಿಕೆಯಲ್ಲಿ ಓಡುವುದಕ್ಕೆ ಬೇರೆ ಷೂ; ನಡೆಯುದುದಕ್ಕೆ ಬೇರೆ ಷೂ; ಜಾಗಿಂಗ್ ಗೆ ಬೇರೆ ರೀತಿ ಷೂ, ಬುಟ್ಟಿ ಚಂಡು ( ಬಾಸ್ಕೆಟ್ ಬಾಲ್) ಆಡುವುದಕ್ಕೆ ಬೇರೆ ಷೂ;ಮಾತಾಡಿದವರಿಗೆ ಬೂಟ್ನಲ್ಲಿ ಹೊಡಯಕ್ಕೆ ಬೇರೆ ಷೂ -- ಹೀಗೆ ವಿಧ ವಿಧ ವಾದ ಷೂಗಳ ಮಹಾಪೂರವೇ ಇದೆ. ಷೂಗಳಿಗೆ ತಕ್ಕಂತೆ ಪಾ.ಬ. ಗಳು ಸಹ. ನಾನು ಯಾವುದೊ ಪರ್ವತಾರೋಹಿಗಳಿಗೆ ಮಾಡಿಟ್ಟ ಪಾ.ಬ ತಂದಿದ್ದೆ. ಹೇಳಿ ಕೇಳಿ, ಸುಮಾರು ಐದು ಡಾಲರ್ ಕೊಟ್ಟು ಆ ಲೇಸ್ ಕೊಂಡಿದ್ದೆ. ಲಾಡಿ - ಲೇಸ್ ಗೆಲ್ಲಾ ಇನ್ನೂರು ರೂಪಾಯಿಗಿಂತ ಹೆಚ್ಚು ಕೊಟ್ರೆ ಆ ಭಗವಂತ ಮೆಚ್ತಾನಾ? ಭಗವಂತ ಮೆಚ್ಚಿದರೂ ದುಂದು ವೆಚ್ಚ ಮಾಡಿದೆ ಅಂತ ನಮ್ಮ ಭಾರತದ ಸಮಾಜ ಮೆಚ್ಚುತಾ ಅಂತ,ಇದ್ದ ಲೇಸಲ್ಲಿ ಒಂದನ್ನು ಎರಡು ತುಂಡು ಮಾಡಿ, ಬೇಗ ಬೇಗ ಷೂಗಳಿಗೆ ತೂರಿಸಕ್ಕೆ ಹೋದೆ. ನೈಲಾನ್ ಲೇಸು, ತುದಿಯಲ್ಲಿ ಹರ್ಕೊಂಡು ಎರಡು ತಲೆ ನಾಗರ ಹಾವಿನ ಹಾಗೆ ಬಾಯಿ ಬಿಟ್ಕೊಳ್ತು. ಅಂಗಡೀಗೆ ವಾಪಸ್ ಕೊಡೋಣ ಅಂತ ನೋಡಿದ್ರೆ, ಆಗ್ಲೇ ಸೆನ್ಸಾರ್ ಬೋರ್ಡ್ ಅವರ ಹಾಗೆ ಕತ್ತರಿ ಪ್ರಯೋಗ ನಡೆದಿತ್ತು. ಅಂಗಡಿ ಅವರು ವಾಪಸ್ ತೊಗೊಳೊ ಅವಕಾಶ ಕೊಟ್ರೂ ಸಹಾ, ನನ್ನ ತಪ್ಪಿಗಾಗಿ ಹಿಂದಿರುಗಿಸಿ ಹಣ ಮರಳಿ ಪಡೆಯುವ ಮನಸ್ಸು ಬರಲಿಲ್ಲ.ವಿನಾ ಕಾರಣ ಐದು ಡಾಲರ್ ಕಳೆದು ಕೊಂಡ ಗ್ರಾಹಕನ "ಶಾಪಿಂಗ್ ಸ್ತ್ರೆಸ್ಸ್' ತಲೆದೋರಿತು.ಸಂಜೆ ಮತ್ತೆ ಹೋದೆ ವಾಲ್ ಮಾರ್ಟ್ ಗೆ. ಈ ಬಾರಿ ನಾನು ಪಾಠ ಕಲಿತ ನೊಂದ ಅನುಭವಸ್ತ. ಲೇಸ್ ಕೊಳ್ಳುವ ಮೊದಲು ನಮ್ಮ ಪಾದುಕೆಯಲ್ಲಿ ಎಷ್ಟು ತೂತುಗಳು ಇವೆ ಎಂದು ನೋಡಿ, ಕೂಲಂಕಶವಾಗಿ ವಿಚಾರಿಸಿ ವಿಷ್ಲೇಶಿಸಿ, ಅದಕ್ಕೆ ಅನುಗುಣವಾಗಿ ಪಾ.ಬ. ಕೊಳ್ಳಬೇಕಂತೆ. "ಅಯ್ಯೋ ರಾಮ! ಏನಪ್ಪ ಇದು? ಲೇಸ್ ಕೊಳ್ಳದಕ್ಕೆ ಇಷ್ಟು ಸಾಮಾನ್ಯ ಙ್ನಾನ ಇರಬೇಕೆ?" ಅಂದು ದೇವರನ್ನು ಕೇಳಿದರೆ; ರಾಮನಿಗೇನು ಗೊತ್ತು ಪಾದುಕಾ ಬಂಧಕದ ವಿಚಾರ? ಭರತ ಅದನ್ನೂ ಹೊಡ್ಕೊಂಡು ಹೋಗಿಬಿಟ್ಟಿದ್ನಂತೆ ಆಶ್ರಮಕ್ಕೆ ಬಂದಾಗ!

ರಾಮಾಯಣದ ವಿಷಯ ಹಾಗಿರ್ಲಿ, ಲೇಸು ಕೊಳ್ಳುವ ಬಗ್ಗೆ ನಮ್ಮ ಸಮಗ್ರ ಅರಿವು ಹೆಚ್ಚಿಸಿ ಕೊಳ್ಳೋಣ ಈಗ:

ಷೂವಿನಲ್ಲಿ ಮೂರರಿಂದ ನಾಲ್ಕು ಕಣ್ಣುಗಳಿದ್ದರೆ (ಐಲೆಟ್ಸ್) ೬೯ ಸೆ.ಮೀ. ಲೇಸು ಕೊಳ್ಳಬೇಕು; ಐದರಿಂದ ಆರು ಕಣ್ಣುಗಳ್ಳಿದರೆ ೯೧ ಸೆ.ಮೀ. ಲೇಸು, ಏಳರಿಂದ ಎಂಟು ಕಣ್ಣುಗಳಿದ್ದರೆ ೧೧೪ ಸೆ.ಮೀ. ಲೇಸು. ಲೇಸು ಕೊಳ್ಳುವ ಮೊದಲು ಕನಿಷ್ಠ ಇಷ್ಟು ಮಾಹಿತಿ ನಮಲ್ಲಿರಬೇಕು. ಪಾ.ಬ. ಕೊಳ್ಳುವಲ್ಲಿಯೂ ಪಾದುಕೆಯ ಮೇಲಿರುವ ಕಣ್ಣುಗಳ ಮೇಲೆ ಕಣ್ಣಿಟ್ಟು, ಗಮನಕೊಟ್ಟು ಕೊಳ್ಳಬೇಕೆಂಬ ದೃಷ್ಟಾಂತ ಕಂಡುಕೊಂಡ ಕರಾಳ ದಿನ ಅದು. ನಿರಾಳವಾಗಿ ಯಃಕಶ್ಚಿತ್ ಒಂದು ಲೇಸ್ ಕೊಳ್ಳೋದಕ್ಕೂ ಇಷ್ಟು ತಿಳ್ಕೋ ಬೇಕಾದ್ರೆ;ಅಪ್ಪಾ ದೇವ್ರೇ,’ಲೇಸು, ಕೊಳ್ಳದಿರುವುದೇ ಲೇಸು!’

7 comments:

Sree said...

ha ha! majavaagi bardideera hiraNyakhanDada vichitraanubhUtigaLu namm bengLUrigU ashTEnU doora alla anniso kaal aeega!

Roopa said...

Had a nice laugh and enjoyed reading it :)

Susheel Sandeep said...

ಸೂಪರ್ ಗುರುವೆ!

ಲೇಸು ಲೇಸಾಗಿರದೆ
ನಿನ್ನ ಕೈಯೊಳು ಸಿಲುಕಿ
ಪೀಸು-ಪೀಸಾಗಿರಲು
ನೈಸಾಗಿ ಗಂಟು ಕಟ್ಟೆಂದ ಕರ್ಮಜ್ಞ!

:)

bhadra said...

ನಗ್ನ ಸತ್ಯದ ಅನುಭವವನ್ನು ಹಾಸ್ಯದ ಲೇಪನದೊಂದಿಗೆ ಬಹಳ ಚೆನ್ನಾಗಿ ನಿರೂಪಿಸಿದ್ದೀರಿ.

ಹಿರಣ್ಯಖಂಡದಲ್ಲಿ
ಘಳಿಗೆಗೊಂದು ಶೂಸು
ತಕ್ಕಂತೆ ಬದಲಿಸಬೇಕು ದಿನಕೊಂದು ಜೋಡಿ ಲೇಸು
ಇಲ್ಲದಿರೆ
ಸಮಾಜದಲಿ ಆಗಿ ಹೋಗುವೆನೇ ನಾ ಬುರ್ನಾಸು

ನಮ್ಮೂರೇ ಚಂದ ನಮ್ಮವರೇ ಅಂದ
ಇಲ್ಲಿ
ಪಾದುಕೆಗೆ ಬೇಕಿಲ್ಲ ಲೇಸು
ಪಿನ್ನಾದರೂ ಆದೀತು
ರಬ್ಬರ್ ಬ್ಯಾಂಡಾದರೂ ಆದೀತು
ಏನೂ ಇಲ್ಲದಿರೆ ಚಲ್ಲಣದ ಲಾಡಿಯಾಗುವುದು ಲೇಸು
ಅಲ್ವೇ ನಮ್ಮೂರೇ ಲೇಸು

Anu said...

sumne blog samudradalli eejthiddaga kannige bidda lekhana idu. Super agide kanri. Nimma bavane nodi paapa ansidru, nagu thadkollokke aglilla.

Baritha iri

Harisha said...

lesu purana super guru

Harisha said...

lesu purana super guru