Monday, November 26, 2007

ಕಾಲಗರ್ಭ

ಕಾಲಗರ್ಭದಲ್ಲಿ ಬಿತ್ತಿದ ಭವಿಷ್ಯತ್ತಿನ ಸಸಿಗಳು ವರ್ತಮಾನದ ವ್ಯಾಪ್ತಿಯಲ್ಲಿ ಮೊಳೆತು ಸೂರ್ಯರಶ್ಮಿಯಾಗಿ ವ್ಯಕ್ತವಾಗುತ್ತವೆ. ವೈಷ್ವಾನರವಾಗಿ ಸಸ್ಯಧಮನಿಯಲಿ ಹರಿದು,ಜೀವಗಳ ಒಳಹೊಕ್ಕು ,ಅಂತ್ಯದಲ್ಲಿ ಮೂರ್ತರೂಪಾತೀತವಾಗಿ, ಮತ್ತೆ ಅದೇ ಅಮೂರ್ತತೆಯ ಮಡಿಲಿನಲಿ ಕಾಲ್ಮುದುರಿ ಮಲಗುತ್ತವೆ. ಕಾಲಾಂತರದಲ್ಲಿ ಅದೇ ಸೂರ್ಯರಶ್ಮಿಯು ಸ್ಫ್ಹುರಿಸಿ ಭುವನಾಂಕುರವಾಗುವುದು ಯಾವ ಮನ್ವಂತರದಲ್ಲೋ! ಆ ಘಳಿಗೆಯ ಆಧಿಪತ್ಯಕ್ಕೆ ಕಾಯುತ್ತ ಅನಂತತೆಯ ಕಾಲಶರಧಿಯಲಿ ಸ್ಥೂಲತೆಯ ಪೊರೆಕಳಚಿ, ಸೂಕ್ಷ್ಮದಲೇಪ ಮೆರೆದು ಸುಪ್ತಾವಸ್ತೆಯಲ್ಲಿ ಅವಿತು ಆಕಳಿಸುತಿದೆ ನೋಡಿ ಆ ಮರಿಕಿರಣ......

Saturday, November 17, 2007

ಮುಕುತಿ

ಙ್ನಾನ ಭಕುತಿ ಕರ್ಮ ಮಾರ್ಗ
ನಡೆದು ಪಡೆವೆ ಮುಕುತಿ
ನನ್ನ ದಾರಿ ನನಗೆ ಎನಲು
ಕಡೆಗೆ ಮಣ್ಣು ಮುಕುತಿ !

4:15 AM Saturday 17 November 2007. Milpitas CA.

ರಂಗೋಲಿ

ನನ್ನೆದೆಯ ಅಂಗಳದೆ
ನೀ ಬರೆದ ರಂಗೋಲಿ
ವಿಧಿ ಕದಡಿ ಬಿರುಗಾಳಿ
ಮುಗಿಲಿಗೇರಿದೆ ಧೂಳಿ
ಭುಗಿಲೆದ್ದ ಬಣ್ಣದೋಕುಳಿ
ಕಂಗಳಾ ಒಳನುಸುಳಿ
ಅವಿತ ಹಳೆಯಾಸೆಯ ಹುಳಿ
ನಿಂದು ಕಾಯುತಿದೆ ಕಣ್ಣಂಚಿನ ಬಳಿ


ನನ್ನ ಪ್ರಿಯೆ ಇಟ್ಟ heartshape ರಂಗೋಲಿ, ವಿಧಿಯ ಬಿರುಗಾಳಿಯಿಂದ washout ಆಗಿ, ಕಣ್ಣೊಳಗೆ ಹೋಗಿ ಕುಚ್ಚ್ ಕೊಂಡು, ಕಣ್ಣೀರು generate ಆಗಿ, ಕಣ್ಣು caorner ನಲ್ಲಿ parking ಮಾಡ್ಕೊಂಡಿದೆ ಅನ್ನೋ ಅರ್ಥ.

Between 12:00 midnight to 12:45 AM Saturday 17 November 2007. Milpitas CA.

Friday, November 16, 2007

ಪೂರ್ವಾಗ್ರಹ




--
ಶಾಂತಿ ಮಾಡಿಸಲು
ತಣ್ಣಗಾಗುವವು,
ರಾಹು ಕೇತು ಮಿಕ್ಕೆಲ್ಲಾ ನವಗ್ರಹ.

ಬ್ರಾಂತಿ ಮೂಡಿಸಿ
ಬಿಡದೆ ಕಾಡುವುದೊಂದೆ,
ಪೂರ್ವಾಗ್ರಹ!

ಹಿನ್ನೆಲೆ: ಅತೀ ಬುದ್ಧಿವಂತರು, ಪ್ರಙ್ನಾವಂತರು, ವಿದ್ವದ್ಪೂರ್ಣರು ಎಂದು ನಾನು ಪರಿಗಣಿಸಿದ್ದ (ಈಗಲೂ ಗೌವರವಿಸುವ) ಕೆಲವು ಮಿತ್ರರು ಪೂರ್ವಾಗ್ರಹ ಪೀಡಿತರಾಗಿ, ವಸ್ತುನಿಷ್ಟವಲ್ಲದ ವಾದದಲ್ಲಿ ತೊಡಗಿದ ಸಂದರ್ಭದಲ್ಲಿ ಮನಸ್ಸಿಗೆ ಬಂದ ಸಾಲುಗಳು.

Pre-concieved notion bagge. Nov 16 12:20AM Milpitas,CA
--

Monday, November 12, 2007

ಸವ್ಯಸಾಚಿ

--
ಸವ್ಯಸಾಚಿ,
ಎರಡೂ ಕೈ ಚಾಚಿ,
ನಾಚದೆ
ಬಾಚಿ ಬಾಚಿ,
ಕಾಳು ಗೀಳು ಹಾಳು ಮೂಳು ತಿಂದು,
ಆವರಿಸಿದೆ ಕಫ ವಾತ ಪಿತ್ತ;

ಅವನೇನು ಮಾಡಲಾದೀತು
ಮೂಡಿದರೆ ವಾತ ಪಿತ್ತ.
ಕಿಟ್ಟಪ್ಪ ನುಡಿದಿರಲು:
"ಮಗನೇ, ನೀ ಮಾತ್ರ ನಿಮಿತ್ತ"
---

ಹಿನ್ನೆಲೆ:

'ಸವ್ಯಸಾಚಿ' ಅಂದರೆ ಎರಡೂ ಕೈಗಳನ್ನು ಸಮಶಕ್ತಿಯಿಂದ ಬಳಸಲು ಶಕ್ತಿವುಳ್ಳವ.ಮಹಾಭಾರತದ ಅರ್ಜುನ. ಏಡಬಲಗಳೆನ್ನದೆ ಬಾಣಪ್ರಯೋಗ ಮಾಡಬಲ್ಲ ಸಾಹಸಿ. ಶ್ರೀ ಕೃಷ್ಣ, ಅರ್ಜುನನ್ನನ್ನು ಕುರಿತು: 'ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್" ಎಂದು ಗೀತೆಯಲ್ಲಿ ಉಪದೇಶಿಸುತ್ತಾನೆ. ನಮ್ಮ ಚುಟುಕದ ಸವ್ಯಸಾಚಿ, ಏಡಗೈ, ಬಲಗೈ ಭೇದ ತೋರದೆ, ಸಿಕ್ಕಿದ್ದೆಲ್ಲ ನುಂಗಿ, ನೀರು ಕುಡಿದು, ವಾತ-ಪಿತ್ತ ಬರಿಸಿಕೊಳ್ತಾನೆ. ಪಿತ್ತವಾದ್ರು, ಅವನು ನಿಮಿತ್ತ ಮಾತ್ರ ಅನ್ನೊ ಭಾವ ಹಿಡಿದು ಗೀಚಿದ ಅಣಕ ಚುಟುಕ.

--

ಚಿತ್ಸುಖ

---
ಕೊಳಕು ಚಿಂತೆಯ
ತೊಳೆದು ಮನದೆ
ಮೂಡಿಹುದು: ಚಿತ್ಸುಖ
ಹುಳುಕು ಹಲ್ಕಿತ್ತು
ದಂತ ವೈದ್ಯರು
ನೀಡಿದ್ದು: ಕಿತ್ಸುಖ
---

ಚಿತ್ + ಸುಖ = ಚಿತ್ಸುಖ
ಕಿತ್ + ಸುಖ = ಕಿತ್ಸುಖ
ಚುಟುಕ ಅಸಹ್ಯವೆನಿಸುವಷ್ಟು ಕೆಟ್ಟದಾಗಿದ್ರೆ, ಓದುಗರ ಕ್ಷಮೆ ಇರಲಿ.
--

Friday, November 09, 2007

ಗುಂಡನ ದೀಪಾವಳಿ

ಇಂದು ದೀಪಾವಳಿ.ಎಲ್ಲರಿಗೂ ಡಂ ಡಂ ಹಬ್ಬದ ಡುಂ ಡುಂ ಶುಭಾಶಯಗಳು.

ಕಬ್ಬಿನ ಜಲ್ಲೆ ಹಿಡಿದು ನಡೆದ ಗುಂಡನ್ನನ್ನು ನೋಡಿ ಗುರುಗಳು ವಿಚಾರಿಸಿದರಂತೆ, "ಏನೋ ಗುಂಡ, ಹಬ್ಬ ಜೋರಾ? ಹೇಗೆ ಆಚರಿಸಿದೆ?".
ಇರುವ ಮೂವತ್ತೆರೆಡೂ ಗಿಂಜಿ," ಆಗ್ತಾ ಇದೆ, ಗುರುಗಳೇ", ಗುಂಡ ನುಡಿದ.

"ಏಳ್ಳು - ಬೆಲ್ಲ, ಸಕ್ಕರೆ ಅಚ್ಚು, ಕಬ್ಬು ಇವೆಲ್ಲ ಸ್ನೇಹಿತರಿಗೆ ಬೀರಿ, ಮನೆಯಲ್ಲಿ ಬೊಂಬೆ ಕುಂಡ್ರಿಸಿ, ಬೇವು ಬೆಲ್ಲ ತಿಂದು, ಶ್ಯಮಂತಕೋಪಾಖ್ಯಾನ ಓದಿ, ದೀಪಾವಳಿ ಆಚರಿಸಿದೆ."

ಬೇಸ್ತು ಬಿದ್ದ ಗುರುಗಳು," ಅಲ್ಲಯ್ಯ, ದೀಪಾವಳಿಗೆ ದೀಪಾ ಬೆಳಗುವುದಾಗಲಿ, ಪಟಾಕಿ ಸಿಡಿಸೊದಾಗ್ಲಿ ಏನೂ ಮಾಡ್ಲಿಲ್ವೇ?" ಅಂತ ಕೇಳಿದ್ರು.

"ಇಲ್ಲ ಸಾ, ನಾನೇ ಬೇರೆ, ನನ್ನ ಸ್ಟೈಲೇ ಬೇರೆ. ಎಲ್ಲರಂತಲ್ಲ ನಾನು. ಎಲ್ಲರೂ ಮಾಡೊದನ್ನ ಮಾಡೊಕ್ಕೆ ನನಗೆ ಬೋರು" ಎಂದು ಕಾಲರ್ ಪಟ್ಟಿಯನ್ನು ಒಮ್ಮೆ ಹಾಗಂದು, ಗುಂಡ ಮನೆ ಕಡೆ ನಡೆದ.

"ಎಲ್ಲಾರಿಗೂ ಒಂದು ದಾರಿ ಆದ್ರೆ, ಏಡವಟ್ಟನಿಗೇ..." ಅಂತ ಎನೋ ಗುರುಗಳು ಗೊಣಗಿ ನಡೆದ ಹಾಗೆ ಇತ್ತು.

ನಮ್ಮಲ್ಲಿ ಕೆಲವರಿಗೆ ವಿಭಿನ್ನವಾಗಿರುವ ಹುಚ್ಚು. ಎಲ್ಲರೂ ಮಾಡುವುದನ್ನು ತಾವು ಮಾಡಿದರೆ ಅವರ ಘನತೆಗೆ ಅದು ಸರಿಬರುವುದಿಲ್ಲ. ಎಲ್ಲದರಲ್ಲೂ ಅವರ ಅಧಿಕಪ್ರಸಂಗ ಕಾಣಲೇಬೇಕು.ಐದು ಜನರ ಗುಂಪಿನಲ್ಲಿ ಈ ವಿಭಿನ್ನತೆಯಿಂದ ಇವರು ಎದ್ದು ಕಾಣ ಬೇಕ್ಂಬ ಉತ್ಕಟ ಇಚ್ಚೆ.ಅಸಾಧ್ಯರು ಇಂತ ಜನ. ನಮ್ಮ ಗುಂಡನ ಹಾಗೆ. ಆದರೆ ಅವರಿಗೆ ತಿಳಿಯದಿದ್ದ ವಿಷಯವೆನೆಂದರೆ, ವಿಭಿನ್ನವಾಗಿರಲು ವಿಶಿಶ್ಟವಾಗ ಬೇಕೆ ವಿನಃ ವಿಚಿತ್ರವೆನಿಸಬಾರದು ಎಂದು! ಈ ಗುಟ್ಟನ್ನು ನಮ್ಮ ಗುಂಡನಿಗೆ ಯಾರದರು ಪಿಸುಗುಟ್ಟಿ ಬರುವಿರಾ?